ಪದ್ಯ ೨೩: ಧರ್ಮಜನು ಭೀಮನ ನಂತರ ಯಾರನ್ನು ಪಣಕ್ಕೆ ಒಡ್ಡಿದನು?

ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹು ಹಾಯ್ದ ಹಿಮಾಂಶುಮಂಡಲದುಳಿದ ಕಳೆಯಂತೆ
ತೋಹಿನಲಿ ತುಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರ ಸೂತ್ರದ
ಹೂಹೆಯಂತಿರೆ ಹಗೆಗೆ ತೆತ್ತನು ನೃಪತಿ ತನುಧನವ (ಸಭಾ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧರ್ಮಜನು ಆ ಆಟವನ್ನು ಸೋತನು. ಅವನ ಲೆಕ್ಕಾಚಾರ ತಪ್ಪಿತು, ಮುಂದೆ ತೋರದಂತಾಯಿತು, ರಾಹುವಿನಿಂದ ಕಳೆಗುಂದಿದ ಚಂದ್ರಮಂಡಲದಂತೆ, ಸಂಕೇತ ಸ್ಥಾನದಲ್ಲಿ ಬೇಟೆಗಾರರಿಗೆ ಸಿಕ್ಕಿಬಿದ್ದ ಮೃಗದಂತೆ, ಯಂತ್ರದ ಸೂತ್ರಕ್ಕೆ ಸಿಕ್ಕ ಗೊಂಬೆಯಂತೆ, ನಿಸ್ತೇಜನಾದ ಧರ್ಮರಾಯನು ವಿರೋಧಿಗೆ ತನ್ನ ದೇಹವನ್ನೇ ಪಣವಾಗಿ ಒಡ್ಡಿದನು.

ಅರ್ಥ:
ಹಲಗೆ: ಪಗಡೆಯ ಹಾಸು; ಸೋತು: ಪರಾಭವ; ಉಹೆ: ಅಂದಾಜು; ಮುರಿ: ಸೀಳು; ಮುಂದುಗೆಡು: ಮುಂದೆ ತೋರು; ಹಾಯಿ: ಚಾಚು, ಮೇಲೆ ಬೀಳು; ಹಿಮಾಂಶು: ಚಂದ್ರ; ಮಂಡಲ: ವರ್ತುಲಾಕಾರ; ಉಳಿದ: ಮಿಕ್ಕ; ಕಳೆ:ಕಾಂತಿ, ತೇಜ; ತೋಹು: ಬೇಟೆಯಾಡಲು ವನ್ಯಮೃಗಗಳನ್ನು ಆಕರ್ಷಿಸುವ ಸ್ಥಳ; ತುಟ್ಟಿಸು: ಶಕ್ತಿಗುಂದು, ಬಲಹೀನವಾಗು; ಮೃಗ: ಪ್ರಾಣಿ; ಅಳಿ: ನಾಶ; ಯಂತ್ರ: ಉಪಕರಣ; ಸೂತ್ರ: ನಿಯಮ; ಹಗೆ: ವೈರ; ತೆತ್ತು: ನೀಡು; ತನು: ದೇಹ; ಧನ: ಐಶ್ವರ್ಯ;

ಪದವಿಂಗಡಣೆ:
ಆ +ಹಲಗೆ +ಸೋತುದು +ಯುಧಿಷ್ಠಿರನ್
ಊಹೆ +ಮುರಿದುದು +ಮುಂದುಗೆಟ್ಟನು
ರಾಹು+ ಹಾಯ್ದ +ಹಿಮಾಂಶು+ಮಂಡಲದ್+ಉಳಿದ +ಕಳೆಯಂತೆ
ತೋಹಿನಲಿ+ ತುಟ್ಟಿಸಿದ +ಮೃಗದವೊಲ್
ಊಹೆ+ಅಳಿದುದು +ಯಂತ್ರ +ಸೂತ್ರದ
ಹೂಹೆಯಂತಿರೆ+ ಹಗೆಗೆ+ ತೆತ್ತನು +ನೃಪತಿ +ತನು+ಧನವ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಾಹು ಹಾಯ್ದ ಹಿಮಾಂಶುಮಂಡಲದುಳಿದ ಕಳೆಯಂತೆ; ತೋಹಿನಲಿ ತುಟ್ಟಿಸಿದ ಮೃಗದವೊಲೂಹೆಯಳಿದುದು ಯಂತ್ರ ಸೂತ್ರದ ಹೂಹೆಯಂತಿರೆ

ಪದ್ಯ ೨೨: ಧರ್ಮಜನು ಮುಂದೆ ಯಾರನ್ನು ಪಣಕ್ಕಿಟ್ಟನು?

ಸೋತಿರರಸರೆ ಮತ್ತೆ ಹೇಳೀ
ದ್ಯೂತಶಿಖಿಗಾಹುತಿಯನೆನೆ ಕುಂ
ತೀತನುಜನೊಡ್ಡಿದನು ವಿಗಡ ಬಕಾಸುರಾಂತಕನ
ಆತುದೊಂದರೆಘಳಿಗೆ ಸೌಬಲ
ಸೋತ ಧರ್ಮಜ ಗೆಲಿದ ಧರ್ಮಜ
ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನರಭಸ (ಸಭಾ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶಕುನಿಯು ಧರ್ಮಜನನ್ನು ಹಂಗಿಸುವ ರೀತಿಯಲ್ಲಿ, ಅರಸರೇ ನೀವು ಸೋತಿದ್ದೀರಿ, ಜೂಜೆಂಬ ಅಗ್ನಿಗೆ ಮುಂದಿನ ಆಹುತಿಯೇನೆಂದು ಹೇಳಿರಿ ಎಂದು ಕೇಳಲು, ಧರ್ಮಜನು ಬಕಾಸುರಾಂತಕನಾದ ಭೀಮನನ್ನು ಒಡ್ಡಿದನು. ಒಂದರ್ಧ ಘಂಟೆಗಳ ಕಾಲ ಧರ್ಮರಾಯ ಗೆದ್ದ, ಶಕುನಿ ಸೋತ, ಶಕುನಿ ಗೆದ್ದ, ಧರ್ಮರಾಯ ಸೋತ ಎನ್ನುವ ಹಾಗೆ ಆಟದ ರಭಸ ಸಾಗಿತು.

ಅರ್ಥ:
ಸೋತಿರಿ: ಪರಾಭವಗೊಂಡಿರಿ; ಅರಸ: ರಾಜ; ಹೇಳು: ತಿಳಿಸು; ದ್ಯೂತ: ಜೂಜು; ಶಿಖಿ: ಬೆಂಕಿ; ಆಹುತಿ: ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು, ಬಲಿ; ತನುಜ: ಮಗ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ವಿಗಡ: ಅತಿಶಯ, ಆಧಿಕ್ಯ, ಪರಾಕ್ರಮ; ಅಂತಕ: ನಾಶ; ಬಕಾಸುರಾಂತಕ: ಭೀಮ; ಘಳಿಗೆ: ಸಮಯ; ಗೆಲಿದ: ಜಯಗಳಿಸು; ಘನ: ಭಾರವಾದ, ಮಹತ್ವವುಳ್ಳ; ರಭಸ: ವೇಗ;

ಪದವಿಂಗಡಣೆ:
ಸೋತಿರ್+ಅರಸರೆ +ಮತ್ತೆ +ಹೇಳಿ
ಈ+ದ್ಯೂತ+ಶಿಖಿಗ್+ಆಹುತಿಯನ್+ಎನೆ +ಕುಂತೀ
ತನುಜನ್+ಒಡ್ಡಿದನು +ವಿಗಡ+ ಬಕಾಸುರ+ಅಂತಕನ
ಆತುದ್+ಒಂದ್+ಅರೆ+ಘಳಿಗೆ+ ಸೌಬಲ
ಸೋತ +ಧರ್ಮಜ +ಗೆಲಿದ +ಧರ್ಮಜ
ಸೋತ +ಸೌಬಲ +ಗೆಲಿದನ್+ಎಂಬವೊಲ್+ಆಯ್ತು +ಘನರಭಸ

ಅಚ್ಚರಿ:
(೧) ಆಟವನ್ನು ವಿವರಿಸುವ ಪರಿ – ಆತುದೊಂದರೆಘಳಿಗೆ ಸೌಬಲ ಸೋತ ಧರ್ಮಜ ಗೆಲಿದ ಧರ್ಮಜ ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನರಭಸ

ಪದ್ಯ ೨೧: ಪಣಕಿಟ್ಟ ಅರ್ಜುನನ ಸ್ಥಿತಿ ಏನಾಯಿತು?

ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಂ ಮುನ್ನ ಶಕುನಿಗೆ
ಬೀಳುವುವು ಬೇಕಾದ ದಾಯವು
ಕೌಳಿಕದ ವಿಧಿಪಾಶ ತೊಡಕಿತು ಕೆಡಹಿತರ್ಜುನನ (ಸಭಾ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಜನಮೇಜಯ ಇನ್ನು ಹೇಳುವುದೇನಿದೆ, ಪಗಡೆಯಾಟದಲ್ಲಿ ಧರ್ಮಜನು ಇಟ್ಟ ಕಾಯಿಯು ಮುರಿಯಿತು. ಮೋಸದಲ್ಲಿ ಪ್ರವೀಣರಾದವರ ಕೈಚಳಕವನ್ನು ಯಾರು ತಾನೇ ತಿಳಿಯಬಲ್ಲರು. ಶಕುನಿಯು ಇಂತಹ ಗರವು ತನಗೆ ಬೇಕೆಂದು ದಾಳಕ್ಕೆ ಹೇಳುವ ಮೊದಲೇ ಆ ಗರವು ಬೀಳುತ್ತಿತ್ತು. ಕ್ರೂರವಾದ ವಂಚನೆಯ ವಿಧಿ ಪಾಶವು, ಕಾಲಿಗೆ ತೊಡಕಿಕೊಂಡು ಅರ್ಜುನನನ್ನು ಕೆಡವಿತು.

ಅರ್ಥ:
ಮೇಲೆ: ಮುಂದಿನ, ನಂತರ; ಹೇಳು: ತಿಳಿಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಸಾಲು: ಪಂಕ್ತಿ; ಮುರಿ: ಸೀಳು; ಸೆರೆ: ಬಂಧನ; ಕಳವು:ಅಪಹರಣ ; ಕಾಲುಕೀಲ್ಗಳು: ಅಡಿ, ಬುಡ, ರೀತಿ; ಬಲ್ಲರು: ತಿಳಿದವರು; ಕುಟಿಲ: ಮೋಸ; ಕೋವಿದ: ಪಂಡಿತ; ಮುನ್ನ: ಮೊದಲೇ; ಬೇಕಾದ: ಇಚ್ಛಿಸಿದ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ಕೌಳಿಕ: ಕಟುಕ, ಮೋಸ, ವಂಚನೆ; ವಿಧಿ: ಹಣೆಬರಹ, ಅದೃಷ್ಟ; ತೊಡಕು: ಸಿಕ್ಕು, ಅಡ್ಡಿ, ಗೊಂದಲ; ಕೆಡಹು: ಬೀಳಿಸು, ಸಂಹರಿಸು;

ಪದವಿಂಗಡಣೆ:
ಮೇಲೆ +ಹೇಳುವುದೇನು+ ಸಾರಿಯ
ಸಾಲು +ಮುರಿದುದು +ಸೆರೆಯ +ಕಳವಿನ
ಕಾಲು +ಕೀಲ್ಗಳನಾರು+ ಬಲ್ಲರು +ಕುಟಿಲ +ಕೋವಿದರ
ಹೇಳುವದರಿಂ +ಮುನ್ನ +ಶಕುನಿಗೆ
ಬೀಳುವುವು +ಬೇಕಾದ+ ದಾಯವು
ಕೌಳಿಕದ +ವಿಧಿಪಾಶ+ ತೊಡಕಿತು +ಕೆಡಹಿತ್+ಅರ್ಜುನನ

ಅಚ್ಚರಿ:
(೧) ಅರ್ಜುನನ ಪಣವು ಸೋತಿತೆನ್ನಲು – ಕೌಳಿಕದ ವಿಧಿಪಾಸಶ ತೊಡಕಿತು ಕೆಡಹಿತರ್ಜುನನ
(೨) ದುಷ್ಟರನ್ನು ವಿವರಿಸುವ ಪರಿ – ಕಳವಿನ ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ

ಪದ್ಯ ೨೦: ಭೀಮಾರ್ಜುನರು ಶಕುನಿಗೆ ಹೇಗೆ ಉತ್ತರಿಸಿದರು?

ದೇಹಿಗೆರವೇ ದೇಹವೆಲವೋ
ದೇಹಿಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರಭಾಷಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ (ಸಭಾ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲವೋ ಶಕುನಿ, ದೇಹವು ದೇಹವನ್ನು ಧರಿಸಿರುವ ಜೀವವನ್ನು ಬಿಟ್ಟಿರುವುದೇ? ನಮ್ಮ ಅಣ್ಣನೇ ನಮಗೆ ಜೀವು ಅವನ ದೇಹಗಳು ನಾವು. ನಿನ್ನ ದುರ್ಮಂತ್ರದ ಮಾತು ಈ ನಮ್ಮ ನಿಲುವನ್ನು ತಿಳಿದೀತೇ? ನೀನು ಎಲ್ಲವನ್ನೂ ಕಪಟ ದೃಷ್ಟಿಯಿಂದ ನೋಡುವೆ. ಇನ್ನು ನಿನ್ನ ಭ್ರಮೆಯನ್ನು ಬಿಡು. ನಮ್ಮ ಮೇಲೆ ನಿನ್ನ ಪ್ರಯೋಗವೇನೂ ನಡೆಯುವುದಿಲ್ಲ ಎಂದು ಭೀಮಾರ್ಜುನರು ಶಕುನಿಯನ್ನು ಜರೆದರು.

ಅರ್ಥ:
ದೇಹ: ತನು, ಒಡಲು; ಎರವು: ಸಾಲು; ದೇಹಿ: ಶರೀರವನ್ನುಳ್ಳದ್ದು; ಭೂಪತಿ: ರಾಜ; ಪುತ್ರ: ಮಗ; ಒಳಗೆ: ಅಂತರ್ಯ; ಕುಮಂತ್ರ: ಕೆಟ್ಟ ವಿಚಾರ; ಭಾಷಿತ: ಹೇಳಿದ, ಪ್ರತಿಜ್ಞಮಾಡಿದ; ಊಹೆ: ಎಣಿಕೆ, ಅಂದಾಜು; ಕಪಟ: ಮೋಸ; ಅವಗಾಹ: ಮಗ್ನ, ಮುಳುಗು; ಸಾಕು: ತಡೆ; ಮೇಲಣ: ಮೇಲೆ ಹೇಳಿದ; ಗಾಹುಗತಕ: ಮೋಸ, ಭ್ರಾಂತಿ; ಜರೆ: ಬಯ್ಯು; ಸೌಬಲ: ಶಕುನಿ;

ಪದವಿಂಗಡಣೆ:
ದೇಹಿಗ್+ಎರವೇ+ ದೇಹವ್+ಎಲವೋ
ದೇಹಿಭೂಪತಿ +ಧರ್ಮಪುತ್ರನ
ದೇಹವಾವ್+ಇದರೊಳಗೆ +ನಿನ್ನ +ಕುಮಂತ್ರ+ಭಾಷಿತದ
ಊಹೆಗೊಂಬುದೆ +ಕಪಟದಿಂದ್+ಅವ
ಗಾಹಿಸುವೆ +ಸಾಕಿನ್ನು +ಮೇಲಣ+
ಗಾಹುಗತಕಗಳ್+ಎಮ್ಮೊಳ್+ಎಂದರು +ಜರೆದು +ಸೌಬಲನ

ಅಚ್ಚರಿ:
(೧) ದೇಹಿ, ದೇಹ – ೧-೩ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ದೇಹಿಗೆರವೇ ದೇಹ
(೩) ಶಕುನಿಯನ್ನು ಬಯ್ಯುವ ಪರಿ – ನಿನ್ನ ಕುಮಂತ್ರಭಾಷಿತದ ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ

ಪದ್ಯ ೧೯: ಶಕುನಿಯು ಭೀಮಾರ್ಜುನರಿಗೆ ಏನು ಹೇಳಿದ?

ಎಲೆ ಧನಂಜಯ ನಿನ್ನನೊಡ್ಡಿದ
ಛಲಿ ಯುಧಿಷ್ಠಿರನಿಲ್ಲಿ ಸೋತರೆ
ಬಳಿಕ ನಿನ್ನನೆ ಮಾರಿದನಲಾ ಕೌರವೇಂದ್ರನಿಗೆ
ತಿಳಿದು ಭೀಮಾರ್ಜುನರು ನೀವ್ ನಿ
ಮ್ಮೊಳಗೆ ಬಲಿದಿಹುದೆನಲು ಖತಿಯಲಿ
ಮುಳಿದು ಬೈದರು ಭೀಮ ಪಾರ್ಥರು ಜರಿದು ಸೌಬಲನ (ಸಭಾ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಧನಂಜಯನನ್ನು ಒಡ್ಡಿದ ಮೇಲೆ ಶಕುನಿಯು ಅರ್ಜುನನಿಗೆ, ಎಲೈ ಅರ್ಜುನ ನಿಮ್ಮ ಅಣ್ಣನು ನಿನ್ನನ್ನು ಪಣವಾಗಿ ಒಡ್ಡಿದ್ದಾನೆ. ಅವನು ಸೋತರೆ ನಿನ್ನನ್ನು ಕೌರವನಿಗೆ ಮಾರಿದ ಹಾಗೆ, ಇದನ್ನು ತಿಳಿದು ನೀವು ಭೀಮಾರ್ಜುನರು ಜೀವವನ್ನು ಗಟ್ಟಿಮಾಡಿಕೊಳ್ಳಿ ಎನ್ನಲು, ಅವರಿಬ್ಬರು ಶಕುನಿಯನ್ನು ಬೈದರು.

ಅರ್ಥ:
ಒಡ್ಡು: ನೀಡು,ಜೂಜಿನಲ್ಲಿ ಒಡ್ಡುವ ಹಣ; ಛಲಿ: ಹಟವುಳ್ಳವನು; ಸೋಲು: ಪರಾಭವ; ಬಳಿಕ: ನಂತರ; ಮಾರು: ಹರಾಜು; ತಿಳಿ: ಅರಿ; ಬಲಿ: ಗಟ್ಟಿ; ಖತಿ: ಕೋಪ; ಮುಳಿ: ಸಿಟ್ಟು, ಕೋಪ; ಬೈದರು: ಜರಿದರು; ಜರಿ:ನಿಂದಿಸು; ಸೌಬಲ: ಶಕುನಿ;

ಪದವಿಂಗಡಣೆ:
ಎಲೆ +ಧನಂಜಯ+ ನಿನ್ನನ್+ಒಡ್ಡಿದ
ಛಲಿ+ ಯುಧಿಷ್ಠಿರನ್+ಇಲ್ಲಿ +ಸೋತರೆ
ಬಳಿಕ+ ನಿನ್ನನೆ+ ಮಾರಿದನಲಾ+ ಕೌರವೇಂದ್ರನಿಗೆ
ತಿಳಿದು +ಭೀಮಾರ್ಜುನರು +ನೀವ್ +ನಿ
ಮ್ಮೊಳಗೆ+ ಬಲಿದಿಹುದ್+ಎನಲು +ಖತಿಯಲಿ
ಮುಳಿದು +ಬೈದರು +ಭೀಮ +ಪಾರ್ಥರು +ಜರಿದು +ಸೌಬಲನ

ಅಚ್ಚರಿ:
(೧) ಧನಂಜಯ, ಪಾರ್ಥ, ಅರ್ಜುನ – ಸಮನಾರ್ಥಕ ಪದ

ಪದ್ಯ ೧೮: ಧರ್ಮಜನು ಯಾರನ್ನು ಪಣಕ್ಕೆ ಇಟ್ಟನು?

ಭೇದ ಮಂತ್ರವ ಮಾಡಿ ನಮ್ಮನು
ಭೇದಿಸುವ ಗಡ ಸುಬಲ ಸುತನಕ
ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ
ಆ ದುರಾಗ್ರಹಿ ಲೋಕಜನಪರಿ
ವಾದ ಪದ ನಿರ್ಭೀತನಕ್ಷ ವಿ
ನೋದ ಕರ್ದಮಮಗ್ನ ನೊಡ್ಡಿದನಾ ಧನಂಜಯನ (ಸಭಾ ಪರ್ವ, ೧೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಎಲೈ ಸಭೆಯಲ್ಲಿರುವ ಸಭ್ಯರೇ, ಈ ಸುಬಲನ ಪುತ್ರನಾದ ಶಕುನಿಯ ಭೇದ ನೀತಿಯನ್ನು ನೀವು ನೋಡಿದಿರಾ? ಭೇದೋಪಾಯದಿಂದ ನಮ್ಮನ್ನು ಛಿದ್ರಿಸಬೇಕೆಂದು ಈ ಶಕುನಿಯು ಬಗೆದಿರುವನಲ್ಲವೇ ಶಿವ ಶಿವಾ ಎಂದು ಹೇಳುತ್ತಾ, ದ್ಯೂತದ ದುರಾಗ್ರಹವಡಿಸಿದವನೂ, ಲೋಕವು ಏನೆಂದೀತೆಂಬ ವಿಷಯಕ್ಕೆ ಭಯವಿಲ್ಲದವನೂ, ದಾಳಗಳ ಆಟದ ವಿನೋದವೆಂಬ ಕಪ್ಪುಕೆಸರಿನಲ್ಲಿ ಮುಳುಗಿದವನೂ ಆದ ಧರ್ಮಜನು ಅರ್ಜುನನನ್ನು ಮುಂದಿನ ಆಟಕ್ಕೆ ಪಣವಾಗಿಟ್ಟನು.

ಅರ್ಥ:
ಭೇದ: ಬಿರುಕು, ಛಿದ್ರ, ಒಡಕು; ಮಂತ್ರ: ವಿಚಾರ; ಗಡ: ಅಲ್ಲವೆ; ಸುತ: ಮಗ; ಅಕಟ: ಅಯ್ಯೋ; ದುರಾತ್ಮ: ದುಷ್ಟ; ನೋಡಿ: ವೀಕ್ಷಿಸಿ; ಸಭ್ಯ: ಒಳ್ಳೆಯ ವ್ಯಕ್ತಿ; ದುರಾಗ್ರಹಿ: ಕೆಟ್ಟ ಹಟವುಳ್ಳವನು; ಲೋಕ: ಜಗತ್ತು; ಪರಿವಾದ: ನಿಂದೆ, ತೆಗೆಳಿಕೆ, ದೂರು; ಪದ: ಮಾತು; ನಿರ್ಭೀತ: ಭಯವಿಲ್ಲದ; ಅಕ್ಷ: ಪಗಡೆ ಆಟದ ದಾಳ; ವಿನೋದ: ಕ್ರೀಡೆ; ಕರ್ದಮ: ಕೆಸರು, ಪಂಕ; ಮಗ್ನ; ಮುಳುಗು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಧನಂಜಯ: ಅರ್ಜುನ;

ಪದವಿಂಗಡಣೆ:
ಭೇದ +ಮಂತ್ರವ +ಮಾಡಿ +ನಮ್ಮನು
ಭೇದಿಸುವ +ಗಡ +ಸುಬಲ ಸುತನ್+ಅಕ
ಟೀ+ ದುರಾತ್ಮನ +ನೋಡಿರೈ+ ಸಭ್ಯರು +ಶಿವಾಯೆನುತ
ಆ +ದುರಾಗ್ರಹಿ +ಲೋಕಜನ+ಪರಿ
ವಾದ +ಪದ +ನಿರ್ಭೀತನ್+ಅಕ್ಷ+ ವಿ
ನೋದ +ಕರ್ದಮ+ಮಗ್ನನ್ +ಒಡ್ಡಿದನ್+ಆ+ ಧನಂಜಯನ

ಅಚ್ಚರಿ:
(೧) ದುರಾತ್ಮ, ದುರಾಗ್ರಾಹಿ – ದುಷ್ಟರನ್ನು ವಿವರಿಸುವ ಪದ
(೨) ಯುಧಿಷ್ಥರನನ್ನು ವಿವರಿಸುವ ಪರಿ – ಆ ದುರಾಗ್ರಹಿ ಲೋಕಜನಪರಿವಾದ ಪದ ನಿರ್ಭೀತನಕ್ಷ ವಿನೋದ ಕರ್ದಮಮಗ್ನ

ಪದ್ಯ ೧೭: ಶಕುನಿ ಭೀಮಾರ್ಜುನರನ್ನು ನೋಡಿ ಏನೆಂದನು?

ಏನ ಬಣ್ಣಿಸುವೆನು ವಿಕಾರಿಗ
ಳೇನ ನೆನೆಯರು ಕಪಟ ವಿಧದಲಿ
ಮಾನನಿಧಿ ತಾ ಸೋತನನುಜದ್ವಯ ಮಹಾಧನವ
ಗ್ಲಾನಿ ಚಿತ್ತದೊಳಿಲ್ಲಲೇ ಸುಮ
ನೋನುರಾಗವೆ ಭೀಮ ಪಾರ್ಥರು
ತಾನಿದೊಮ್ಮಿಗೆ ಬದುಕಿದರು ಬಳಿಕೆಂದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ನಾನೇನೆಂದು ಬಣ್ಣಿಸಲಿ, ದುಷ್ಟರು ಮೋಸಮಾಡುವ ಎಂತೆಂತಹ ವಿಧಾನಗಳನ್ನು ನೆನೆಯುವುದಿಲ್ಲ? ಯುಧಿಷ್ಠಿರನು ತನ್ನ ಇಬ್ಬರ ತಮ್ಮಂದಿರೆಂಬ ಮಹಾಧನವನ್ನು ಜೂಜಿನಲ್ಲಿ ಸೋತನು, ಇದಕ್ಕೆ ಶಕುನಿಯು, ಧರ್ಮಜ ಚಿಂತಿಸುತ್ತಿಲ್ಲ ತಾನೆ? ಸಂತೋಷವಾಗಿರುವೆಯಾ? ಸದ್ಯ ಭೀಮಾರ್ಜುನರು ಬದುಕಿ ಉಳಿದುಕೊಂಡರು ಎಂದು ಹಂಗಿಸಿದನು.

ಅರ್ಥ:
ಬಣ್ಣಿಸು: ವಿವರಿಸು; ವಿಕಾರಿ: ದುಷ್ಟ; ನೆನೆ: ಜ್ಞಾಪಿಸು; ಕಪಟ: ಮೋಸ; ವಿಧ: ರೀತಿ; ಮಾನ: ಗೌರವ; ನಿಧಿ: ಐಶ್ವರ್ಯ; ಸೋಲು: ಪರಾಭವ; ಅನುಜ: ತಮ್ಮ; ದ್ವಯ: ಎರಡು; ಮಹಾಧನ: ದೊಡ್ಡಮೊತ್ತದ ಸಿರಿ; ಗ್ಲಾನಿ: ಬಳಲಿಕೆ, ದಣಿವು; ಚಿತ್ತ: ಮನಸ್ಸು; ಸುಮನ: ಒಳ್ಳೆಯ ಮನಸ್ಸುಳ್ಳುವ; ಅನುರಾಗ: ಪ್ರೀತಿ; ಬದುಕು: ಜೀವಿಸು; ಬಳಿಕ: ನಂತರ;

ಪದವಿಂಗಡಣೆ:
ಏನ +ಬಣ್ಣಿಸುವೆನು +ವಿಕಾರಿಗಳ್
ಏನ +ನೆನೆಯರು +ಕಪಟ +ವಿಧದಲಿ
ಮಾನನಿಧಿ +ತಾ+ ಸೋತನ್+ಅನುಜ+ ದ್ವಯ +ಮಹಾಧನವ
ಗ್ಲಾನಿ+ ಚಿತ್ತದೊಳ್+ಇಲ್ಲಲೇ+ ಸುಮನ
ಅನುರಾಗವೆ +ಭೀಮ +ಪಾರ್ಥರು
ತಾನಿದ್+ಒಮ್ಮಿಗೆ +ಬದುಕಿದರು +ಬಳಿಕೆಂದನಾ +ಶಕುನಿ

ಅಚ್ಚರಿ:
(೧) ಯುಧಿಷ್ಠಿರನನ್ನು ಮಾನನಿಧಿ, ನಕುಲ ಸಹದೇವರನ್ನು ಮಹಾಧನವ ಎಂದು ಕರೆದಿರುವುದು
(೨) ದುಷ್ಟರ ವರ್ಣನೆ – ವಿಕಾರಿಗಳೇನ ನೆನೆಯರು ಕಪಟ ವಿಧದಲಿ