ಪದ್ಯ ೧೩: ಧರ್ಮಜನು ಯಾರನ್ನು ಪಣಕ್ಕೆ ಇಟ್ಟನು?

ಎಲವೋ ಫಡ ಫಡ ಶಕುನಿ ಗರ್ವದ
ತಳಿ ಮುರಿವುದೇ ನಿನ್ನ ದುರ್ಮತಿ
ಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ
ಉಳಿದ ಧನವೇಗುವುದು ಜೀವ
ಸ್ಥಳಲವಿದೇ ಮೇಲೋಡ್ಡವೊಂದೇ
ಹಲಗೆಗೊಡ್ಡಿದನೆನ್ನ ನಕುಲನನೆಂದನಾ ಭೂಪ (ಸಭಾ ಪರ್ವ, ೧೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ತನ್ನನ್ನೇ ತಾನು ಪಣಕ್ಕೆ ಇಡುವ ಯೋಚನೆಗೆ ಬಂದ ಧರ್ಮರಾಯನು, ಎಲವೋ ಶಕುನಿ ನನ್ನ ಅಭಿಮಾನವು ಮುರಿಯುವುದೇ? ನಿನ್ನ ದುರ್ಬುದ್ಧಿಯ ದಾಳಿಗೆ ಜಗ್ಗದ ಕೋಟೆಯೊಂದು ನನ್ನ ಮನಸ್ಸಿನಲ್ಲಿದೆ. ದುಡ್ಡಿನಿಂದೇನಾಗುವುದು? ಜೀವವಿರುವ ಸ್ಥಳವಿರುವಾಗ, ಈ ಹಲಗೆಗೆ ನಾನು ನಕುಲನನ್ನೇ ಪಣವಾಗಿ ಒಡ್ಡಿದ್ದೇನೆ ಎಂದು ಧರ್ಮರಾಯನು ಶಕುನಿಗೆ ಹೇಳಿದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಗರ್ವ: ಅಹಂಕಾರ; ತಳಿ: ಚೆಲ್ಲು, ಚಿಮುಕಿಸು; ಮುರಿ: ಸೀಳು; ದುರ್ಮತಿ: ಕೆಟ್ಟ ಬುದ್ಧಿ; ಹೂಡು: ಜೋಡಿಸು, ಸೇರಿಸು; ದುರ್ಗ: ಕೋಟೆ; ಅಂತರಂಗ: ಮನಸ್ಸು; ಉಳಿದ: ಮಿಕ್ಕ; ಧನ: ಐಶ್ವರ್ಯ; ಸ್ಥಳ: ಜಾಗ; ಜೀವ: ಉಸಿರು; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಹಲಗೆ: ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು; ಭೂಪ: ರಾಜ; ಜೀವಸ್ಥಳ: ಜೀವವಿರುವ ಪ್ರದೇಶ, ಆಸ್ತಿ;

ಪದವಿಂಗಡಣೆ:
ಎಲವೋ+ ಫಡ +ಫಡ +ಶಕುನಿ +ಗರ್ವದ
ತಳಿ+ ಮುರಿವುದೇ +ನಿನ್ನ +ದುರ್ಮತಿ
ಗಳಿಗೆ +ಹೂಡಿದ +ದುರ್ಗವಿದೆ+ ತನ್ನಂತರಂಗದಲಿ
ಉಳಿದ +ಧನವೇಗುವುದು +ಜೀವ
ಸ್ಥಳಲವಿದೇ +ಮೇಲ್+ಒಡ್ಡವೊಂದೇ
ಹಲಗೆಗ್+ಒಡ್ಡಿದನ್+ಎನ್ನ +ನಕುಲನನ್+ಎಂದನಾ +ಭೂಪ

ಅಚ್ಚರಿ:
(೧) ಶಕುನಿಯನ್ನು ಬಯ್ಯುವ ಪರಿ – ಎಲವೋ ಫಡ ಫಡ ಶಕುನಿ
(೨) ಧರ್ಮಜನು ಶಕುನಿಗೆ ಉತ್ತರ ನೀಡುವ ಪರಿ – ನಿನ್ನ ದುರ್ಮತಿಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ

ನಿಮ್ಮ ಟಿಪ್ಪಣಿ ಬರೆಯಿರಿ