ಪದ್ಯ ೧೬: ಸಹದೇವನ ನಂತರ ಧರ್ಮರಾಯನು ಯಾರನ್ನು ಪಣಕ್ಕೆ ಒಡ್ಡಿದನು?

ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನವೊಡ್ಡಿದನು ಮಾದ್ರೀ ಕುಮಾರಕನ
ಅರಸು ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರದ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಸಹದೇವನನ್ನು ಸೋತ ಮೇಲೆ ಶಕುನಿಯು ದಾಳಗಳನ್ನು ಹೊಸೆದು, ಈ ಹಲಗೆಯಲ್ಲಿ ಯುಧಿಷ್ಠಿರನು ಸೋತ ಎಲ್ಲವನ್ನೂ ಗೆಲ್ಲಲು ಕಿರಿಯ ತಮ್ಮನನ್ನು ಒಡ್ಡಿದ್ದಾನೆ, ನನ್ನ ರಾಜಾ, ಗರವೆ ಬಾ, ಜಯಲಕ್ಷ್ಮಿಯೇ ಬಾ, ಕೌರವನ ಉನ್ನತಿಯ ಸಿದ್ಧಿಯೇ ಬಾ ಎಂದು ಶಕುನಿಯು ಗರ್ಜಿಸಿದನು.

ಅರ್ಥ:
ಹರಿಬ: ಕೆಲಸ, ಕಾರ್ಯ, ಯುದ್ಧ; ಅಖಿಳ: ಎಲ್ಲಾ; ವಸ್ತು: ಸಾಮಗ್ರಿ; ಉತ್ಕರ: ಸಮೂಹ; ಮರಳಿ: ಮತ್ತೆ, ಪುನಃ; ಮಹೀಪತಿ: ರಾಜ; ಕಿರಿಯ: ಚಿಕ್ಕ; ತಮ್ಮ: ಸಹೋದರ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಕುಮಾರ: ಪುತ್ರ; ಅರಸ: ರಾಜ; ದಾಯ: ಪಗಡೆಯ ಗರ; ಜಯ: ಗೆಲುವು; ಜಯಾಂಗದಸಿರಿ: ಜಯಲಕ್ಷ್ಮಿ; ಉತ್ಕರ: ಉನ್ನತಿ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಬಾ: ಆಗಮಿಸು; ಗರ್ಜಿಸು: ಜೋರಾಗಿ ಕೂಗು;

ಪದವಿಂಗಡಣೆ:
ಹರಿಬದಲಿ+ ತನ್+ಅಖಿಳ +ವಸ್ತು
ಉತ್ಕರವ +ಮರಳಿಚುವನು+ ಮಹೀಪತಿ
ಕಿರಿಯ +ತಮ್ಮನವ್+ಒಡ್ಡಿದನು +ಮಾದ್ರೀ +ಕುಮಾರಕನ
ಅರಸು +ದಾಯವೆ +ಬಾ +ಜಯಾಂಗದ
ಸಿರಿಯೆ +ಬಾ +ಕುರುರಾಯ +ರಾಜ
ಉತ್ಕರದ+ ಸಿದ್ಧಿಯೆ+ ಬಾ+ಎನುತ +ಗರ್ಜಿಸಿದನಾ +ಶಕುನಿ

ಅಚ್ಚರಿ:
(೧) ಶಕುನಿಯು ದಾಳವನ್ನು ಹಾಕುವ ಪರಿ – ಅರಸು ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋತ್ಕರದ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ

ಪದ್ಯ ೧೫: ಧರ್ಮಜನು ಯಾರನ್ನು ಒಡ್ಡಿ ಸೋತುದನ್ನು ಪಡೆಯುತ್ತೇನೆಂದನು?

ಅರಸ ಸೋತೈ ನಕುಲನನು ಹೇ
ವರಿಸದಿರು ಹೇಳೊಡ್ಡವನು ವಿ
ಸ್ತರಿಸಲೊಂದೇ ಹಲಗೆ ಸೋಲ್ವುದು ಹೇಳು ಹೇಳೆನಲು
ವರಿಸಿದೆನು ಸಹದೇವನನು ನೆರೆ
ಮರಳಿಚುವೆನೆನ್ನಖಿಳ ವಸ್ತೂ
ತ್ಕರವನೆಂದನು ಧರ್ಮನಂದನನರಸ ಕೇಳೆಂದ (ಸಭಾ ಪರ್ವ, ೧೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ರಾಜ ನೀನು ನಕುಲನನ್ನು ಸೋತೆ, ಅಸಹ್ಯಪಟ್ಟುಕೊಳ್ಳದೆ ಮತ್ತೇನನ್ನು ಪಣಕ್ಕೆ ಹೂಡುವೆ? ಹಲಗೆ ಗೆಲ್ಲುತ್ತದೆ ಅಥವ ಸೋಲುತ್ತದೆ, ಶಕುನಿಯ ಮಾತನ್ನು ಕೇಳಿದ ಯುಧಿಷ್ಠಿರನು ನೀವು ನನ್ನಿಂದ ಗೆದ್ದಿರುವ ಎಲ್ಲವನ್ನು ನೀವೊಡ್ಡಿರಿ, ಅದಕ್ಕೆ ಪ್ರತಿಯಾಗಿ ನಾನು ಸಹದೇವನನ್ನು ಒಡ್ಡಿ ಸೋತಿರುವುದೆಲ್ಲವನ್ನೂ ಮರಳಿ ಪಡೆಯುತ್ತೇನೆ ಎಂದು ಯುಧಿಷ್ಠಿರನು ನುಡಿದನು.

ಅರ್ಥ:
ಅರಸ: ರಾಜ; ಸೋತು: ಸೋಲು, ಪರಾಭವ; ಹೇವರಿಸು: ಹೇಸಿಗೆಪಟ್ಟುಕೋ; ಹೇಳು: ತಿಳಿಸು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ವಿಸ್ತರಿಸು: ಹರಡು; ಹಲಗೆ: ಪಗಡೆಯ ಹಾಸು; ಸೋಲು: ಪರಾಭವ; ವರಿಸು: ಆರಿಸು, ಆಯ್ಕೆ; ನೆರೆ: ಸೇರು, ಜೊತೆಗೂಡು; ಮರಳಿ: ಮತ್ತೆ, ಪುನಃ; ಅಖಿಳ: ಎಲ್ಲಾ; ವಸ್ತು: ಸಾಮಗ್ರಿ; ಉತ್ಕರ: ಸಮೂಹ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸ +ಸೋತೈ +ನಕುಲನನು+ ಹೇ
ವರಿಸದಿರು +ಹೇಳ್+ಒಡ್ಡವನು +ವಿ
ಸ್ತರಿಸಲ್+ಒಂದೇ +ಹಲಗೆ +ಸೋಲ್ವುದು +ಹೇಳು +ಹೇಳೆನಲು
ವರಿಸಿದೆನು +ಸಹದೇವನನು +ನೆರೆ
ಮರಳಿಚುವೆನ್+ಎನ್+ಅಖಿಳ+ ವಸು
ಉತ್ಕರವನ್+ಎಂದನು +ಧರ್ಮನಂದನನ್+ಅರಸ+ ಕೇಳೆಂದ

ಅಚ್ಚರಿ:
(೧) ಹ ಕಾರದ ಜೋಡಿ ಪದಗಳು – ಹೇವರಿಸದಿರು ಹೇಳೊಡ್ಡವನು; ಹೇಳು ಹೇಳೆನಲು

ಪದ್ಯ ೧೪: ಶಕುನಿ ನಕುಲನನ್ನು ಗೆದ್ದನೆ?

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮ ವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದವನಿಪಗೆ ನುಡಿದ (ಸಭಾ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ಹಠದಿಂದ ತಮ್ಮನನ್ನು ಒಡ್ಡಿದರೆ ನಮಗೇನು ಭಯವಿಲ್ಲ, ಒಂದು ಕೈಯಿ ನೋಡೋಣ, ದಾಳವನ್ನು ಹಾಕು ಎಂದನು. ಪೂರ್ವಜನ್ಮದಲ್ಲಿ ಗಳಿಸಿದ ಮೋಸದಿಂದ ಧರ್ಮವಿನಾಶಮಾಡುವ ರಭಸದಿಂದ ನಕುಲನನ್ನು ಗೆದ್ದು ಆರ್ಭಟಿಸುತ್ತಾ ಹೀಗೆ ಹೇಳಿದನು.

ಅರ್ಥ:
ವಾಸಿ: ಪ್ರತಿಜ್ಞೆ, ಶಪಥ; ಅನುಜ: ತಮ್ಮ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಸರ: ರೀತಿ; ಭಯ: ಅಂಜಿಕೆ; ಐಸಲೇ: ಅಲ್ಲವೇ; ನೃಪ: ರಾಜ; ಹಾಯ್ಕು: ಇಡು, ಇರಿಸು, ಧರಿಸು; ಹಾಸಂಗಿ: ಜೂಜಿನ ದಾಳ; ಪೂರ್ವಾರ್ಜಿತ: ಹಿಂದೆಯೇ ಗಳಿಸಿದ; ಡೊಳ್ಳಾಸ: ಮೋಸ, ಕಪಟ; ಡಾವರಿಸು: ಸುತ್ತು, ತಿರುಗಾಡು; ಧರ್ಮ: ಧಾರಣ ಮಾಡಿದುದು, ನಿಯಮ; ವಿನಾಶ: ಹಾಳು, ಸರ್ವನಾಶ; ಗೆಲಿ: ಗೆಲ್ಲು, ಜಯ; ಬೊಬ್ಬಿರಿ: ಗರ್ಜಿಸು, ಆರ್ಭಟ; ನುಡಿ: ಮಾತಾಡು; ಅವನಿಪ: ರಾಜ;

ಪದವಿಂಗಡಣೆ:
ವಾಸಿಗ್+ಅನುಜನನ್+ಒಡ್ಡಿದರೆ+ ನಮಗ್
ಈಸರಲಿ +ಭಯವೇನು +ನೋಡುವೆವ್
ಐಸಲೇ +ನೃಪ +ಹಾಯ್ಕು +ಹಾಸಂಗಿಗಳ +ಹಾಯ್ಕೆನುತ
ಆ +ಶಕುನಿ +ಪೂರ್ವಾರ್ಜಿತದ +ಡೊ
ಳ್ಳಾಸದಲಿ +ಡಾವರಿಸಿ+ ಧರ್ಮ +ವಿ
ನಾಶಿ +ನಕುಲನ +ಗೆಲಿದು +ಬೊಬ್ಬಿರಿದ್+ಅವನಿಪಗೆ+ ನುಡಿದ

ಅಚ್ಚರಿ:
(೧) ಶಕುನಿಯ ವರ್ಣನೆ – ಪೂರ್ವಾರ್ಜಿತದ ಡೊಳ್ಳಾಸದಲಿ ಡಾವರಿಸಿ ಧರ್ಮ ವಿನಾಶಿ
(೨) ಹ ಕಾರದ ತ್ರಿವಳಿ ಪದ – ಹಾಯ್ಕು ಹಾಸಂಗಿಗಳ ಹಾಯ್ಕೆನುತ

ಪದ್ಯ ೧೩: ಧರ್ಮಜನು ಯಾರನ್ನು ಪಣಕ್ಕೆ ಇಟ್ಟನು?

ಎಲವೋ ಫಡ ಫಡ ಶಕುನಿ ಗರ್ವದ
ತಳಿ ಮುರಿವುದೇ ನಿನ್ನ ದುರ್ಮತಿ
ಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ
ಉಳಿದ ಧನವೇಗುವುದು ಜೀವ
ಸ್ಥಳಲವಿದೇ ಮೇಲೋಡ್ಡವೊಂದೇ
ಹಲಗೆಗೊಡ್ಡಿದನೆನ್ನ ನಕುಲನನೆಂದನಾ ಭೂಪ (ಸಭಾ ಪರ್ವ, ೧೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ತನ್ನನ್ನೇ ತಾನು ಪಣಕ್ಕೆ ಇಡುವ ಯೋಚನೆಗೆ ಬಂದ ಧರ್ಮರಾಯನು, ಎಲವೋ ಶಕುನಿ ನನ್ನ ಅಭಿಮಾನವು ಮುರಿಯುವುದೇ? ನಿನ್ನ ದುರ್ಬುದ್ಧಿಯ ದಾಳಿಗೆ ಜಗ್ಗದ ಕೋಟೆಯೊಂದು ನನ್ನ ಮನಸ್ಸಿನಲ್ಲಿದೆ. ದುಡ್ಡಿನಿಂದೇನಾಗುವುದು? ಜೀವವಿರುವ ಸ್ಥಳವಿರುವಾಗ, ಈ ಹಲಗೆಗೆ ನಾನು ನಕುಲನನ್ನೇ ಪಣವಾಗಿ ಒಡ್ಡಿದ್ದೇನೆ ಎಂದು ಧರ್ಮರಾಯನು ಶಕುನಿಗೆ ಹೇಳಿದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಗರ್ವ: ಅಹಂಕಾರ; ತಳಿ: ಚೆಲ್ಲು, ಚಿಮುಕಿಸು; ಮುರಿ: ಸೀಳು; ದುರ್ಮತಿ: ಕೆಟ್ಟ ಬುದ್ಧಿ; ಹೂಡು: ಜೋಡಿಸು, ಸೇರಿಸು; ದುರ್ಗ: ಕೋಟೆ; ಅಂತರಂಗ: ಮನಸ್ಸು; ಉಳಿದ: ಮಿಕ್ಕ; ಧನ: ಐಶ್ವರ್ಯ; ಸ್ಥಳ: ಜಾಗ; ಜೀವ: ಉಸಿರು; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಹಲಗೆ: ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು; ಭೂಪ: ರಾಜ; ಜೀವಸ್ಥಳ: ಜೀವವಿರುವ ಪ್ರದೇಶ, ಆಸ್ತಿ;

ಪದವಿಂಗಡಣೆ:
ಎಲವೋ+ ಫಡ +ಫಡ +ಶಕುನಿ +ಗರ್ವದ
ತಳಿ+ ಮುರಿವುದೇ +ನಿನ್ನ +ದುರ್ಮತಿ
ಗಳಿಗೆ +ಹೂಡಿದ +ದುರ್ಗವಿದೆ+ ತನ್ನಂತರಂಗದಲಿ
ಉಳಿದ +ಧನವೇಗುವುದು +ಜೀವ
ಸ್ಥಳಲವಿದೇ +ಮೇಲ್+ಒಡ್ಡವೊಂದೇ
ಹಲಗೆಗ್+ಒಡ್ಡಿದನ್+ಎನ್ನ +ನಕುಲನನ್+ಎಂದನಾ +ಭೂಪ

ಅಚ್ಚರಿ:
(೧) ಶಕುನಿಯನ್ನು ಬಯ್ಯುವ ಪರಿ – ಎಲವೋ ಫಡ ಫಡ ಶಕುನಿ
(೨) ಧರ್ಮಜನು ಶಕುನಿಗೆ ಉತ್ತರ ನೀಡುವ ಪರಿ – ನಿನ್ನ ದುರ್ಮತಿಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ

ಪದ್ಯ ೧೨: ಧರ್ಮಜನು ಯಾರನ್ನು ಪಣಕ್ಕಿಟ್ಟನು?

ಖಿನ್ನನಾದನು ರಾಜ್ಯಲಕ್ಷ್ಮಿಯ
ಬೆನ್ನ ಕಂಡನು ಕಳಚಿ ಹೋದ ನಿ
ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ
ಇನ್ನು ಪಣವೇನೋ ವಿರೋಧಿಗ
ಳೆನ್ನ ಭಂಗಿಸಿ ನುಡಿದರಿದಕಿ
ನ್ನೆನ್ನನಿಕ್ಕಿಯೆ ದ್ಯೂತವಿಜಯವ ಸಾಧಿಸುವೆನೆಂದ (ಸಭಾ ಪರ್ವ, ೧೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ದುಃಖಭರಿತನಾದನು. ಅವನು ತನ್ನ ರಾಜ್ಯಲಕ್ಷ್ಮಿಯು ಬೆನ್ನನ್ನು ನೋಡಿ, ಆಕೆ ತನ್ನಿಂದ ದೂರ ಹೋಗುತ್ತಿರುವುದನ್ನು ಕಂಡನು. ಅವನ ಉನ್ನತಿಯು ಕಳಚಿಹೋಯಿತು. ವೈಭವವು ಇಲ್ಲವಾಗಲು ಅವನು ಏನು ತಾನೆ ಮಾಡಿಯಾನು? ಆದರೂ ಅವನು ನನ್ನ ವಿರೋಧಿಗಳು ನನ್ನನ್ನು ಕಡೆಗಣಿಸಿ ಅವಹೇಳನೆಯ ಮಾತನ್ನಾಡಿದನು. ಇನ್ನು ನನ್ನನ್ನೇ ಪಣವಾಗಿಟ್ಟು ಜೂಜನ್ನು ಗೆಲ್ಲುತ್ತೇನೆ ಎಂದು ನಿಶ್ಚಯಿಸಿದನು.

ಅರ್ಥ:
ಖಿನ್ನ: ಖೇದ, ವಿಷಾದ, ನೊಂದ; ರಾಜ್ಯ: ರಾಷ್ಟ್ರ; ಲಕ್ಷ್ಮಿ: ಐಶ್ವರ್ಯ; ಬೆನ್ನ: ಹಿಂಭಾಗ; ಕಂಡು: ನೋಡು; ಕಳಚು: ಬೇರ್ಪಡಿಸು, ಬೇರೆಮಾಡು; ಹೋದ: ತೆರಳು; ನಿಜ: ದಿಟ; ಉನ್ನತಿ: ಹೆಚ್ಚಳ; ಅವನೀಶ್ವರ: ರಾಜ; ಮುರಿ: ಸೀಳು; ಮಹಿಮೆ: ಷ್ಠತೆ, ಔನ್ನತ್ಯ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ವಿರೋಧಿ: ಶತ್ರು, ವೈರಿ; ಭಂಗಿಸು: ನಾಶಮಾಡು, ಸೋಲಿಸು; ನುಡಿ: ಮಾತಾಡು; ಇಕ್ಕಿ: ಇಡು; ದ್ಯೂತ: ಜೂಜು; ವಿಜಯ: ಗೆಲುವು; ಸಾಧಿಸು: ಪಡೆ, ದೊರ ಕಿಸಿಕೊಳ್ಳು;

ಪದವಿಂಗಡಣೆ:
ಖಿನ್ನನಾದನು +ರಾಜ್ಯಲಕ್ಷ್ಮಿಯ
ಬೆನ್ನ +ಕಂಡನು +ಕಳಚಿ +ಹೋದ +ನಿಜ
ಉನ್ನತಿಯಲ್+ಅವನೀಶನಿದ್ದನು +ಮುರಿದ +ಮಹಿಮೆಯಲಿ
ಇನ್ನು+ ಪಣವೇನೋ+ ವಿರೋಧಿಗಳ್
ಎನ್ನ +ಭಂಗಿಸಿ +ನುಡಿದರ್+ಇದಕಿನ್
ಎನ್ನನ್+ಇಕ್ಕಿಯೆ +ದ್ಯೂತ+ವಿಜಯವ +ಸಾಧಿಸುವೆನೆಂದ

ಅಚ್ಚರಿ:
(೧) ಸೋಲುತ್ತಿರುವುದನ್ನು ವಿವರಿಸುವ ಪರಿ – ರಾಜ್ಯಲಕ್ಷ್ಮಿಯ ಬೆನ್ನ ಕಂಡನು
(೨) ಧರ್ಮರಾಯನ ನೋವು – ಹೋದ ನಿಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ

ಪದ್ಯ ೧೧: ಸೋತ ಧರ್ಮರಾಯನನ್ನು ಶಕುನಿ ಏನೆಂದು ಕೇಳಿದನು?

ಸೋತೆಲಾ ಕೌಂತೇಯ ನಿಮಿಷಕೆ
ಬೀತುದೇ ನಿನ್ನಖಿಳಸಿರಿ ವಿ
ಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ
ಪ್ರೀತಿಯುಂಟೇ ನಿಮಗೆ ಮತ್ತೀ
ದ್ಯೂತದಲಿ ಧನವಿಲ್ಲಲಾ ಗ
ರ್ವಾತಿರೇಕವ ಬೀಳುಗೊಂಡಿರೆಯೆಂದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೌಂತೇಯ, ಒಂದೇ ನಿಮಿಷದಲ್ಲಿ ನಿನ್ನ ಐಶ್ವರ್ಯವೆಲ್ಲವನ್ನೂ ಸೋತೆಯಲ್ಲವೇ? ನಿನ್ನ ಐಶ್ವರ್ಯದ ಖ್ಯಾತಿ ಬತ್ತಿತೆ? ಮನಸ್ಸಿನ ಛಲವನ್ನೆಲ್ಲಾ ಕಿತ್ತೆಸೆಯಿತೇ? ನಿನಗೆ ಜೂಜಿನಲ್ಲಿ ಇನ್ನೂ ಆಸೆಯಿದೆಯೇ? ಆದರೆ ನಿನ್ನಲ್ಲಿ ಹಣವಿಲ್ಲವಲ್ಲಾ? ನಿನ್ನ ಗರ್ವವನ್ನು ಕಳಿಸಿಕೊಟ್ಟೆಯಾ? ಎಂದು ಶಕುನಿ ಕೇಳಿದನು.

ಅರ್ಥ:
ಸೋತು: ಪರಾಭವ; ಕೌಂತೇಯ: ಕುಂತಿಯ ಮಗ; ನಿಮಿಷ: ಅತ್ಯಲ್ಪ ಕಾಲ; ಬೀತುದು: ಕ್ಷಯವಾಯಿತು, ಮುಗಿಯಿತು; ಅಖಿಳ: ಎಲ್ಲಾ, ಸರ್ವ; ಸಿರಿ: ಐಶ್ವರ್ಯ; ವಿಖ್ಯಾತಿ: ಪ್ರಸಿದ್ಧಿ, ಕೀರ್ತಿ; ಬರತು: ಬತ್ತು, ಒಣಗು; ವೇಡೆ: ಆಕ್ರಮಣ, ಆವರಣ; ಮನ: ಮನಸ್ಸು; ವಾಸಿ: ಪ್ರತಿಜ್ಞೆ, ಶಪಥ; ಪ್ರೀತಿ: ಒಲವು; ದ್ಯೂತ: ಜೂಜು; ಧನ: ಐಶ್ವರ್ಯ; ಗರ್ವ: ಅಹಂಕಾರ; ಅತಿರೇಕ: ಅತಿಶಯ; ಬೀಳುಗೊಂಡಿರೆ: ಕಳಿಸಿಕೊಡು;

ಪದವಿಂಗಡಣೆ:
ಸೋತೆಲಾ+ ಕೌಂತೇಯ +ನಿಮಿಷಕೆ
ಬೀತುದೇ +ನಿನ್+ಅಖಿಳ+ಸಿರಿ+ ವಿ
ಖ್ಯಾತಿ +ಬರತುದೆ+ ವೇಡೆಗೆದ್+ಅರಿತೆ+ ಮನದ+ ವಾಸಿಗಳ
ಪ್ರೀತಿಯುಂಟೇ +ನಿಮಗೆ +ಮತ್ತೀ
ದ್ಯೂತದಲಿ+ ಧನವಿಲ್ಲಲಾ+ ಗರ್ವ
ಅತಿರೇಕವ+ ಬೀಳುಗೊಂಡಿರೆ+ಎಂದನಾ +ಶಕುನಿ

ಅಚ್ಚರಿ:
(೧) ಧರ್ಮಜನನ್ನು ಹಂಗಿಸುವ ಪರಿ – ಸೋತೆಲಾ ಕೌಂತೇಯ; ನಿಮಿಷಕೆ ಬೀತುದೇ ನಿನ್ನಖಿಳಸಿರಿ; ವಿಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ; ಧನವಿಲ್ಲಲಾ ಗರ್ವಾತಿರೇಕವ ಬೀಳುಗೊಂಡಿರೆಯೆಂದನಾ