ಪದ್ಯ ೨೮: ಧೃತರಾಷ್ಟ್ರನು ದುರ್ಯೋಧನನನ್ನು ಹೇಗೆ ವಿಚಾರಿಸಿದನು?

ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸ ಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ಪೈಸರವದೇನೆಂದು ಬೆಸಗೊಂಡನು ಸುಯೋಧನನ (ಸಭಾ ಪರ್ವ, ೧೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ಮಗನೇ ನಿನಗೇಕೆ ಇಂತಹ ಗೊಂದಲ, ಹೇಳು. ನೀನು ನಿನ್ನ ಮನಸ್ಥಿತಿಯನ್ನು ಏಕೆ ಕದಡಿಕೊಂಡಿದ್ದೀಯ? ನಿನ್ನ ಸಂತೋಷಕ್ಕೆ ಏನು ಕೊರತೆ? ನೀನು ಏನನ್ನು ಬಯಸುವೆ ಹೇಳು ನಿನ್ನ ಹಿರಿಮೆಯು ಛಲವು ಪಂಥವು ಏಕೆ ಜಾರಿಹೋಗಿವೆ? ಅದನ್ನು ನನಗೆ ಹೇಳಬಾರದೆ ನಿನ್ನ ಸಂತೋಷವು ಜಾರಿಹೋಗಲು ಕಾರಣವಾದರು ಏನು ಎಂದು ತನ್ನ ಮಗನನ್ನು ಕೇಳಿದನು.

ಅರ್ಥ:
ಕಳವಳ: ಗೊಂದಲ, ತೊಂದರೆ; ಚಿತ್ತ: ಮನಸ್ಸು; ಬೈಸಿಕೆ: ಅಚಲತೆ, ದೃಢತೆ; ಡೊಳ್ಳಾಸ: ಮೋಸ, ಕಪಟ; ವಿಳಾಸ: ವಿಹಾರ, ಚೆಲುವು; ಕೂಣೆ: ಕೊರತೆ; ಹೇಳು: ತಿಳಿಸು; ನೆನಹು: ನೆನಪು; ಅಭಿರುಚಿ: ಆಸಕ್ತಿ, ಒಲವು, ಪ್ರೀತಿ; ವಾಸಿ:ಕೀರ್ತಿ; ಪೈಸರ: ವಿಸ್ತಾರ, ವ್ಯಾಪ್ತಿ, ಹರಹು; ಸೂಸು: ಎರಚುವಿಕೆ, ಚಲ್ಲುವಿಕೆ; ಹರುಷ: ಸಂತೋಷ; ಪೈಸರ: ಹಿಂದಕ್ಕೆ ಸರಿಯುವುದು, ಸೋಲು, ಭಂಗ; ಬೆಸ: ಕೇಳುವುದು;

ಪದವಿಂಗಡಣೆ:
ಈಸು +ಕಳವಳವೇನು +ಚಿತ್ತದ
ಬೈಸಿಕೆಗೆ+ ಡೊಳ್ಳಾಸವೇಕೆ+ ವಿ
ಳಾಸ+ ಕೂಣೆಯವೇನು+ ಹೇಳಾ+ ನೆನಹಿನ್+ಅಭಿರುಚಿಯ
ವಾಸಿಗಳ+ ಪೈಸರವನ್+ಎನ್ನಲಿ
ಸೂಸಬಾರದೆ+ ನಿನ್ನ +ಹರುಷಕೆ
ಪೈಸರವದೇನೆಂದು+ ಬೆಸಗೊಂಡನು+ ಸುಯೋಧನನ

ಅಚ್ಚರಿ:
(೧) ಹೇಳು ಎನ್ನಲು ಬಳಸಿದ ಪದಗಳು – ಸೂಸಬಾರದೆ, ಬೆಸಗೊಂಡು, ಹೇಳಾ

ಪದ್ಯ ೨೭: ದುರ್ಯೋಧನನು ತನ್ನನ್ನು ತಾನೆ ಹೇಗೆ ನಿಂದಿಸಿಕೊಂಡನು?

ಮುನಿಚರಿತ್ರರು ನೀವು ರಾಜಸ
ತನದ ಮದದಲಿ ಲೋಕಯಾತ್ರೆಯ
ನನುಸರಿಸುವವರಾವು ನೀವೇ ಭೋಗನಿಸ್ಪೃಹರು
ಅನುದಿವಸ ರಾಗಿಗಳು ನಾವೆ
ಮ್ಮನುಮತವ ಪಾಲಿಸುವರಾರೆಂ
ದೆನುತ ಸುಯ್ದನು ಮರುಗಿ ಬೈದನು ತನ್ನ ದುಷ್ಕೃತವ (ಸಭಾ ಪರ್ವ, ೧೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ನೀವು ಋಷಿಗಳಂತೆ ನಡೆಯುವವರು, ನನ್ನ ಮನಸ್ಸಿನಲ್ಲೋ ರಾಜಸ ತುಂಬಿದೆ. ನನ್ನ ನಡತೆಯೂ ರಾಜಸ. ಲೋಕದಂತೆ ನಡೆಯುವ ಸಾಮಾನ್ಯನು ನಾನು, ನಿಮಗಾದರೋ ಭೋಗವೇ ಬೇಕಾಗಿಲ್ಲ. ನಾನಾದರೋ ಅನುದಿನವೂ ಹಲವು ರಾಗಗಳಿಗೆ ಒಳಗಾಗುವವನು. ಇದೆಲ್ಲಾ ನನ್ನ ದುಷ್ಕರ್ಮದ ಫಲ. ನನ್ನ ಮಾತನ್ನು ಕೇಳುವವರಾದರೂ ಯಾರು ಎನ್ನುತ್ತಾ ದುರ್ಯೋಧನನು ನಿಟ್ಟುಸಿರು ಬಿಟ್ಟನು.

ಅರ್ಥ:
ಮುನಿ: ಋಷಿ; ಚರಿತ್ರ: ಇತಿಹಾಸ; ರಾಜಸ: ಕಾಮ ಕ್ರೋಧಗಳಿಂದ ಕೂಡಿದ ಗುಣ, ರಜೋಗುಣ; ಮದ: ಅಹಂಕಾರ; ಲೋಕ: ಜಗತ್ತು; ಯಾತ್ರೆ: ಪ್ರಯಾಣ; ಅನುಸರಿಸು: ಕೂಡಿಸು; ಹಿಂಬಾಲಿಸು; ಭೋಗ: ಸುಖವನ್ನು ಅನುಭವಿಸುವುದು; ನಿಸ್ಪೃಹ: ಆಸೆ ಇಲ್ಲದವ; ಅನುದಿವಸ: ಪ್ರತಿನಿತ್ಯ; ರಾಗಿ: ಭೋಗಭಾಗ್ಯಗಳಲ್ಲಿ ಅನುರಾಗವುಳ್ಳ; ಅನುಮತ: ಒಪ್ಪಿಗೆ; ಪಾಲಿಸು: ರಕ್ಷಿಸು, ಕಾಪಾಡು; ಸುಯ್ದನು: ನಿಟ್ಟುಸಿರು; ಮರುಗು: ತಳಮಳ, ಸಂಕಟ; ಬೈದನು: ಜರಿದನು; ದುಷ್ಕೃತ: ಕೆಟ್ಟ ಕೆಲಸ;

ಪದವಿಂಗಡಣೆ:
ಮುನಿಚರಿತ್ರರು+ ನೀವು +ರಾಜಸ
ತನದ +ಮದದಲಿ+ ಲೋಕ+ಯಾತ್ರೆಯನ್
ಅನುಸರಿಸುವವರ್+ಆವು +ನೀವೇ +ಭೋಗ+ನಿಸ್ಪೃಹರು
ಅನುದಿವಸ+ ರಾಗಿಗಳು +ನಾವ್+ಎಮ್ಮ್
ಅನುಮತವ+ ಪಾಲಿಸುವರಾರ್
ಎಂದೆನುತ+ ಸುಯ್ದನು +ಮರುಗಿ +ಬೈದನು +ತನ್ನ +ದುಷ್ಕೃತವ

ಅಚ್ಚರಿ:
(೧) ತಂದೆಯನ್ನು ಸಜ್ಜನ ಎನ್ನುವ ಪರಿ – ಮುನಿಚರಿತ್ರರು ನೀವು
(೨) ಅನುಸರಿಸು, ಅನುದಿವಸ, ಅನುಮತ – ಪದಗಳ ಬಳಕೆ

ಪದ್ಯ ೨೬: ದುರ್ಯೋಧನನು ತನ್ನ ಸ್ಥಿತಿಯನ್ನು ಹೇಗೆ ವಿವರಿಸಿದನು?

ಹೇಳಲಮ್ಮೆನು ನೀವು ಧರ್ಮದ
ಕೂಳಿಯಲಿ ಸಿಲುಕಿದವರೆನ್ನನು
ಖೂಳನೆಂಬಿರಿ ಕಷ್ಟನೆಂಬಿರಸೂಯನೆಂಬಿರಲೆ
ಸಾಲ ಭಂಜಿಕೆಯಾಯ್ತು ತನ್ನಯ
ಬಾಳಿಕೆಯ ಬೇಳಂಬವೇತಕೆ
ಕೇಳುವಿರಿ ನೀವೆಂದು ಸುಯ್ದನು ತುಂಬಿ ಕಂಬನಿಯ (ಸಭಾ ಪರ್ವ, ೧೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತಂದೆಗೆ ಮರುಕು ಹುಟ್ಟುವಂತೆ ತನ್ನ ಸ್ಥಿತಿಯನ್ನು ವಿವರಿಸುತ್ತಾ, ಅಪ್ಪಾ ನಿಮಗೆ ನಾನು ಏನೆಂದು ಹೇಳಲಿ, ನೀವು ಧರ್ಮವೆಂಬ ಮೀನು ಹಿಡಿಯುವ ಬುಟ್ಟಿಯಲ್ಲಿ ಸಿಲುಕಿಕೊಂಡಿದ್ದೀರಿ, ನನ್ನನ್ನು ದುಷ್ಟ, ನೀಚ, ಹೊಟ್ಟೆಕಿಚ್ಚಿನವನೆಂದು ಹೇಳುತ್ತೀರಿ, ನನ್ನ ಬಾಳ್ವೆಯು ಅಣಕವಾಯಿತು, ನಾನು ಮನುಷ್ಯನಲ್ಲ, ಸಾಲುಗೊಂಬೆ ನನ್ನನ್ನು ಏಕೆ ಕೇಳುತ್ತೀರಿ ಎಂದು ಕಣ್ಣೀರಿಡುತ್ತಾ ನಿಟ್ಟುಸಿರನ್ನು ಬಿಟ್ಟನು.

ಅರ್ಥ:
ಹೇಳು: ತಿಳಿಸು; ಧರ್ಮ: ಧಾರಣೆ ಮಾಡಿದುದು; ಕೂಳಿ: ಗುಣಿ, ತಗ್ಗು; ಸಿಲುಕು: ಸಿಕ್ಕುಹಾಕಿಕೋ, ಸೆರೆಯಾದ ವಸ್ತು; ಖೂಳ: ದುಷ್ಟ; ಕಷ್ಟ: ನೀಚ; ಅಸೂಯ: ಹೊಟ್ಟೆಕಿಚ್ಚು; ಸಾಲ:ಎರವು; ಭಂಜಿಕೆ: ಮೂರ್ತಿ, ವಿಗ್ರಹ; ಬಾಳಿಕೆ: ಬಾಳು; ಬೇಳಂಬ: ವಿಡಂಬನೆ; ಕೇಳು: ಆಲಿಸು; ಸುಯ್ದನು: ನಿಟ್ಟುಸಿರು; ಕಂಬನಿ: ಕಣ್ಣೀರು;

ಪದವಿಂಗಡಣೆ:
ಹೇಳಲಮ್ಮೆನು +ನೀವು+ ಧರ್ಮದ
ಕೂಳಿಯಲಿ+ ಸಿಲುಕಿದವರ್+ಎನ್ನನು
ಖೂಳನ್+ಎಂಬಿರಿ+ ಕಷ್ಟನ್+ಎಂಬಿರ್+ಅಸೂಯನ್+ಎಂಬಿರಲೆ
ಸಾಲ+ ಭಂಜಿಕೆಯಾಯ್ತು +ತನ್ನಯ
ಬಾಳಿಕೆಯ +ಬೇಳಂಬವ್+ಏತಕೆ
ಕೇಳುವಿರಿ+ ನೀವೆಂದು +ಸುಯ್ದನು +ತುಂಬಿ +ಕಂಬನಿಯ

ಅಚ್ಚರಿ:
(೧) ಖೂಳ, ಕಷ್ಟ, ಅಸೂಯ – ದುರ್ಯೋಧನ ತನ್ನನ್ನು ಹೆಸರಿಸಿದ ಪರಿ

ಪದ್ಯ ೨೫: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯ ನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧನೃಪ (ಸಭಾ ಪರ್ವ, ೧೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಗನನ್ನು ಅಪ್ಪಿ ಮನಗೇ ನಿನಗಾವ ದುಃಖ ಬಂದೊದಗಿದೆ? ಆಸ್ಥಾನಕ್ಕೇಕೆ ಹೋಗುತ್ತಿಲ್ಲ? ಆನೆ ಕುದುರೆಗಳ ಸವಾರಿ, ಬೇಟೆ ಮತ್ತಿತರ ರಾಜಯೋಗ್ಯ ವಿನೋದಗಳನ್ನೇಕೆ ಲೆಕ್ಕಕ್ಕೆ ತಂದುಕೊಳ್ಳುತ್ತಿಲ್ಲ? ಮಂತ್ರಿಗಳನ್ನೂ ಬಾಂಧವರನ್ನೂ ನಿನ್ನ ಅರಮನೆಗೇಕೆ ಹೊಗಿಸುತ್ತಿಲ್ಲ. ಹಗಲು ನಿನಗೇಕೆ ರಾತ್ರಿಯ ಕತ್ತಲಾಯಿತು ಎಂದು ದುರ್ಯೋಧನನನ್ನು ಧೃತರಾಷ್ಟ್ರನು ಕೇಳಿದನು.

ಅರ್ಥ:
ದುಗುಡ: ದುಃಖ; ಮಗ: ಪುತ್ರ, ಸುತ; ಹಿರಿ: ದೊಡ್ಡ; ಓಲಗ: ದರ್ಬಾರು; ಗಡ: ಬೇಗನೆ, ಅಲ್ಲವೆ; ವೈಹಾಳಿ: ಕುದುರೆ ಸವಾರಿ, ಸಂಚಾರ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಅವನಿಪಾಲ: ರಾಜ; ವಿನೋದ: ಹಾಸ್ಯ, ತಮಾಷೆ; ಕೇಳಿ: ಕ್ರೀಡೆ, ವಿನೋದ; ಬಗೆ: ಜಾತಿ, ಲಕ್ಷಿಸು; ಬಾಂಧವರು: ಸಂಬಂಧಿಕರು; ಸಚಿವ: ಮಂತ್ರಿ; ಹೊಗಿಸು: ಹೊಗುವಂತೆ ಮಾಡು; ಅರಮನೆ: ಆಲಯ; ಹಗಲು: ದಿನ, ದಿವಸ; ಕತ್ತಲೆ: ಅಂಧಕಾರ; ಅಂಧನೃಪ: ಕಣ್ಣಿಲ್ಲದ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ದುಗುಡವ್+ಏಕೈ+ ಮಗನೆ+ ಹಿರಿ+
ಓಲಗವನೀಯೆಗಡ್+ಏಕೆ+ ವೈಹಾ
ಳಿಗಳ +ಬೇಟೆಗಳ್+ಅವನಿಪಾಲ+ ವಿನೋದ +ಕೇಳಿಗಳ
ಬಗೆಯೆ+ ಗಡ +ಬಾಂಧವರ +ಸಚಿವರ
ಹೊಗಿಸೆ +ಗಡ+ ನಿನ್ನ್+ಅರಮನೆಯ +ನೀ
ಹಗಲು+ ನಿನಗೇಕಾಯ್ತು +ಕತ್ತಲೆ+ಎಂದನ್+ಅಂಧನೃಪ

ಅಚ್ಚರಿ:
(೧) ಕತ್ತಲೆ ಅಂಧನೃಪ – ಕತ್ತಲೆ ಅಂಧ ಪದದ ಬಳಕೆ

ಪದ್ಯ ೨೪:ದುರ್ಯೋಧನನು ಮಗನನ್ನು ಹೇಗೆ ಕರೆದನು?

ಕರೆಸಿದನು ದುರಿಯೋಧನನನಾ
ದರಿಸಿ ಕಟ್ಟೇಕಾಂತದಲಿ ಮು
ವ್ವರು ವಿಚಾರಿಸಿದರು ನಿಜಾನ್ವಯ ಮೂಲನಾಶನವ
ಭರತಕುಲ ನಿರ್ವಾಹಕನೆ ಬಾ
ಕುರುಕುಲಾನ್ವಯದೀಪ ಬಾ ಎ
ನ್ನರಸ ಬಾ ಎನ್ನಾಣೆ ಬಾಯೆಂದಪ್ಪಿದನು ಮಗನ (ಸಭಾ ಪರ್ವ, ೧೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಕುನಿಯ ಮಾತಿಗೆ ಓಗೊಟ್ಟು ದುರ್ಯೋಧನನನ್ನು ತನ್ನ ಅರಮನೆಗೆ ಕರೆಸಿದನು. ಏಕಾಂತದಲ್ಲಿ ಆ ಮೂವರೇ ಇದ್ದ ಸಮಯದಲ್ಲಿ ಅವರು ತಮ್ಮ ವಂಶದ ಬೇರನ್ನು ಕೀಳುವ ವಿಧಾನವನ್ನು ಆಲೋಚಿಸಿದರು. ಧೃತರಾಷ್ಟ್ರನು ದುರ್ಯೋಧನನನ್ನು ಭರತಕುಲವನ್ನು ನಡೆಸುವವನೇ, ಕುರುಕುಲದ ಬೆಳಕನ್ನು ಬೆಳಗಿಸುವ ದೀಪವೇ, ನನ್ನ ರಾಜ, ನನ್ನಾನೆ ಬಾ ಎಂದು ದುರ್ಯೋಧನನನ್ನು ಅಪ್ಪಿಕೊಂಡನು.

ಅರ್ಥ:
ಕರೆಸು: ಬರೆಮಾಡು; ಆದರ: ಗೌರವ, ಪ್ರೀತಿ; ಏಕಾಂತ: ಒಂಟಿ; ಮುವ್ವರು: ಮೂರು ಮಂದಿ; ವಿಚಾರಿಸು: ಪರಾಮರ್ಶಿಸು;ಆನ್ವಯ: ಸಂಬಂಧ; ಮೂಲ: ಕಾರಣ, ಹೇತು; ನಾಶ: ಹಾಳು; ಕುಲ: ವಂಶ; ನಿರ್ವಾಹಕ: ನಿರ್ವಹಿಸುವವನು; ದೀಪ: ಬೆಳಗು; ಅರಸ: ರಾಜ; ಆಣೆ: ಪ್ರಮಾಣ; ಅಪ್ಪು: ತಬ್ಬಿಕೊ; ಮಗ: ಪುತ್ರ;

ಪದವಿಂಗಡಣೆ:
ಕರೆಸಿದನು+ ದುರಿಯೋಧನನನ್
ಆದರಿಸಿ+ ಕಟ್+ಏಕಾಂತದಲಿ+ ಮು
ವ್ವರು+ ವಿಚಾರಿಸಿದರು +ನಿಜಾನ್ವಯ +ಮೂಲನಾಶನವ
ಭರತಕುಲ+ ನಿರ್ವಾಹಕನೆ+ ಬಾ
ಕುರುಕುಲಾನ್ವಯದೀಪ +ಬಾ +ಎ
ನ್ನರಸ+ ಬಾ + ಎನ್ನಾಣೆ +ಬಾ+ಎಂದ್+ಅಪ್ಪಿದನು +ಮಗನ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಬಗೆ – ಭರತಕುಲ ನಿರ್ವಾಹಕ, ಕುರುಕುಲಾನ್ವಯದೀಪ, ಅರಸ

ಪದ್ಯ ೨೩: ಧೃತರಾಷ್ಟ್ರನು ಯಾವ ಪ್ರಶ್ನೆಗಳನ್ನು ಕೇಳಿದನು?

ಏನು ಶಕುನಿ ಮಗಂಗೆ ದುಗುಡವ
ದೇನು ಕಾರಣವಾರ ದೆಸೆಯಿಂ
ದೇನಸಾಧ್ಯವದೇನು ಭಯ ಮೇಣಾವುದಭಿಲಾಷೆ
ಏನುವನು ವಂಚಿಸದೆ ಹೇಳೆ
ನ್ನಾನೆಗೇಕೈ ಮರುಕವೆನೆ ನಿಜ
ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮಗನು ದುಃಖದಲ್ಲಿರುವನೆಂದು ತಿಳಿದು ಧೃತರಾಷ್ಟ್ರನು, ಶಕುನಿ ನನ್ನ ಮಗನಿಗೆ ಏನು ದುಃಖ, ಅದಕ್ಕೇನು ಕಾರಣ? ಯಾರ ದೆಸೆಯಿಂದ ಹೀಗಾಯಿತು? ಅವನು ಏನನ್ನು ಬಯಸುತ್ತಾನೆ, ಅದಾಗದಿರಲು ಏನು ಕಾರಣ? ಅವನಿಗೊದಗಿರುವ ಭಯವೇನು? ಇದೆಲ್ಲವನ್ನೂ ಬಿಚ್ಚಿ ಹೇಳು. ನನ್ನಾನೆಗೆ ಯಾವ ಅಳಲು ಬಂದಿದೆ? ಎನ್ನಲು ಶಕುನಿಯು ನೀನೇ ಕರೆಸಿಕೇಳು ಎಂದನು.

ಅರ್ಥ:
ಮಗ: ಪುತ್ರ; ದುಗುಡ: ದುಃಖ; ಕಾರಣ: ಉದ್ದೇಶ, ಆದುದರಿಂದ; ದೆಸೆ: ದಿಕ್ಕು, ಅವಸ್ಥೆ, ಸ್ಥಿತಿ; ಅಸಾಧ್ಯ: ಶಕ್ಯವಲ್ಲದುದು; ಭಯ: ಅಂಜಿಕೆ; ಮೇಣ್: ಮತ್ತು, ಹಾಗೂ; ಅಭಿಲಾಷೆ: ಆಸೆ, ಬಯಕೆ; ವಂಚಿಸು: ಮೋಸ; ಆನೆ: ಮಗನನ್ನು ಕರೆಯುವ ಪರಿ; ಮರುಕ: ಬೇಗುದಿ, ಅಳಲು; ಸೂನು: ಪುತ್ರ; ಕರೆಸು: ಬರೆಮಾಡು; ಬೆಸಸು: ಆಜ್ಞಾಪಿಸು, ಹೇಳು;

ಪದವಿಂಗಡಣೆ:
ಏನು+ ಶಕುನಿ+ ಮಗಂಗೆ +ದುಗುಡವದ್
ಏನು +ಕಾರಣವ್+ಆರ+ ದೆಸೆಯಿಂದ್
ಏನ್+ಅಸಾಧ್ಯವ್+ಅದೇನು +ಭಯ+ ಮೇಣ್+ ಅವುದ್+ಅಭಿಲಾಷೆ
ಏನುವನು +ವಂಚಿಸದೆ +ಹೇಳ್
ಎನ್ನಾನೆಗ್+ಏಕೈ +ಮರುಕವ್+ಎನೆ+ ನಿಜ
ಸೂನುವನು +ನೀ +ಕರೆಸಿ+ ಬೆಸಗೊಳ್ಳೆಂದನಾ+ ಶಕುನಿ

ಅಚ್ಚರಿ:
(೧) ಏನು – ೧-೫ ಸಾಲಿನ ಮೊದಲ ಪದ
(೨) ಮಗ, ಎನ್ನಾನೆ – ದುರ್ಯೋಧನನ್ನು ಕರೆಯುವ ಪರಿ