ಪದ್ಯ ೭: ಜನರ ಊಹೆ ಯಾವ ಬಗೆಯಾಗಿ ಹೊರಹೊಮ್ಮಿದವು?

ಸ್ತ್ರೈಣ ಚೀಷ್ಟಿತನೆಂದು ಕೆಲಬರು
ಕಾಣೆವರಸನನೆಂದು ಕೆಲರ
ಕ್ಷೀಣರೋಗಿತನೆಂದು ಕೆಲರು ವಿಷ ಪ್ರಯೋಗದಲಿ
ಪ್ರಾಣಶೋಷಿತನೆಂದು ಕೆಲಬರು
ಜಾಣಿನೊಹೆಯ ಜನದ ನೆನಹಿನ
ಸಾಣೆಯಲಿ ಸವೆಯಿತ್ತು ಕೌರವ ನೃಪನ ನಿರ್ದೇಶ (ಸಭಾ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ಕೌರವನ ಸ್ಥಿತಿಯು ಜನರ ಮನಸ್ಸಿನಲ್ಲಿ ಹಲವಾರು ಊಹೆಗಳನ್ನು ಹೊಮ್ಮಿಸಿತು. ಕೆಲವರು ಇದಾವುದೋ ಸ್ತ್ರೀ ಸಂಬಂಧವಾದ ವ್ಯವಹಾರದಲ್ಲಿ ರಾಜನು ಹೀಗಾದನೆಂದು ಅಂದುಕೊಂಡರೆ, ಇನ್ನೂ ಕೆಲವರು ಏಕೋ ದೊರೆಯು ಕಾಣುತ್ತಿಲ್ಲವೆಂದು ಹೇಳತೊಡಗಿದರು, ಗುಣವಾಗದ ಯಾಉದೋ ರೋಗಪೀಡಿತನಾಗಿದ್ದಾನೆಂದು ಕೆಲವರು, ವಿಷಪ್ರಯೋಗದಿಂದ ಪ್ರಾಣವೇ ಉಳಿಯುವಂತಿಲ್ಲವೆಂದು ಕೆಲವಉ, ಊಹಿಸಲಾರಂಭಿಸಿದರು. ಕೌರವನ ವರ್ತನೆ, ಆದೇಶಗಳು ಜನರ ಊಹೆಯಲ್ಲಿ ಬಗೆ ಬಗೆಯಾಗಿ ಹೊರಹೊಮ್ಮಿದವು.

ಅರ್ಥ:
ಸ್ತ್ರೈಣ: ಸ್ತ್ರೀ ಲಂಪಟ, ಸ್ತ್ರೀವಶನಾದವನು; ಚೇಷ್ಟಿ: ಚೆಲ್ಲಾಟ, ಸರಸ; ಕೆಲಬರು: ಕೆಲವರು, ಸ್ವಲ್ಪ ಜನ; ಕಾಣೆ: ತೋರದಂತಾಗು; ಅರಸ: ರಾಜ; ಕ್ಷೀಣ: ಕುಗ್ಗಿದ, ಸೊರಗಿದ; ರೋಗ: ಬೇನೆ, ಕಾಯಿಲೆ; ವಿಷ: ನಂಜು, ಗರಲ; ಪ್ರಯೋಗ:ನಿದರ್ಶನ, ದೃಷ್ಟಾಂತ; ಪ್ರಾಣ: ಜೀವ; ಶೋಷಿತ: ಬಾಡಿದ, ಸೊರಗಿದ; ಜಾಣ: ಬುದ್ಧಿವಂತ; ಊಹೆ: ಎಣಿಕೆ, ಅಂದಾಜು; ನೆನಹು: ಜ್ಞಾಪಕ, ನೆನಪು; ಸಾಣೆ: ಓರೆಗಲ್ಲು; ಸವೆ: ಕಡಿಮೆಯಾಗು, ಕೊರಗು; ನೃಪ: ರಾಜ; ನಿರ್ದೇಶ: ತೋರಿಸುವುದು, ಸೂಚಿಸುವುದು;

ಪದವಿಂಗಡಣೆ:
ಸ್ತ್ರೈಣ +ಚೀಷ್ಟಿತನೆಂದು +ಕೆಲಬರು
ಕಾಣೆವ್+ಅರಸನನ್+ಎಂದು+ ಕೆಲರ
ಕ್ಷೀಣ+ರೋಗಿತನೆಂದು+ ಕೆಲರು+ ವಿಷ+ ಪ್ರಯೋಗದಲಿ
ಪ್ರಾಣ+ಶೋಷಿತನೆಂದು +ಕೆಲಬರು
ಜಾಣಿನ್+ಊಹೆಯ+ ಜನದ+ ನೆನಹಿನ
ಸಾಣೆಯಲಿ +ಸವೆಯಿತ್ತು +ಕೌರವ+ ನೃಪನ+ ನಿರ್ದೇಶ

ಅಚ್ಚರಿ:
(೧) ಕೌರವನ ಸ್ಥಿತಿಯ ಊಹೆಯ ಉಪಮಾನ: ಜಾಣಿನೊಹೆಯ ಜನದ ನೆನಹಿನ ಸಾಣೆಯಲಿ ಸವೆಯಿತ್ತು ಕೌರವ ನೃಪನ ನಿರ್ದೇಶ

ಪದ್ಯ ೬: ಕೇರಿಗಳಲ್ಲಿ ಯಾವ ಸ್ಥಿತಿಯಿತ್ತು?

ಸಮಯವಿಲ್ಲೋರಂತೆ ಮೌನ
ಭ್ರಮೆಯ ಬಿಗುಹಿನ ಕೇರಿಕೇರಿಯ
ಕುಮತಿಗಳ ಗುಜುಗುಜಿನ ಗುಪ್ತದ ಮುಸುಕುಗೈದುಗಳ
ತಮತಮಗೆ ಬಿರುದುಗಳ ಗಣಿಕಾ
ರಮಣ ವೈರದ ಹೆಚ್ಚು ಕುಂದಿನ
ಸಮರಭಟರಿರಿದಾಡಿದರು ನಿರ್ನಾಮ ಭಾವದಲಿ (ಸಭಾ ಪರ್ವ, ೧೩ ಸಂಧಿ, ೬ ಪದ್ಯ)

ತಾತ್ಪರ್ಯ:
ರಾಜನೇ ಏಕಾಂಗಿಯಾಗಿ ದುರ್ಮನದ ಯೋಚನೆಯಲ್ಲಿ ತೊಡಗಿದಾಗ ಕೇರಿಕೇರಿಗಳಲ್ಲೂ ದುಷ್ಟರು ಗುಜುಗುಜು ಮಾಡುತ್ತಾ ಮುಸುಕಿನೊಳಗೇ ಆಯುಧಗಳನ್ನು ಇಟ್ಟು ಹೊಂಚುಹಾಕಿದರು. ತಮಗೆ ಬಂದ ಬಿರುದುಗಳ ಮೇಲೇ ಪರಸ್ಪರ ಮತ್ಸರವನ್ನೂ ಗಣಿಕೆಯರನ್ನೂ ಪಡೆಯಲು ವೈರವನ್ನೂ ಬೆಳಸಿಕೊಂಡು, ನಿರ್ನಾಮರಾಗುವಂತೆ ಕಾದಾಡಿದರು.

ಅರ್ಥ:
ಸಮಯ: ಕಾಲ; ಓರಂದ: ಒಂದೇ ರೀತಿ, ಸಮಾನ; ಮೌನ: ಮಾತನಾಡದಿರುವಿಕೆ, ನೀರವತೆ; ಭ್ರಮೆ: ಭ್ರಾಂತಿ; ಬಿಗುಹು: ಬಿಗಿ; ಕೇರಿ: ವಟಾರ; ಬೀದಿ; ಕುಮತಿ: ದುಷ್ಟಬುದ್ಧಿ; ಗುಜುಗುಜು: ಬಿಸುಗುನುಡಿ; ಗುಪ್ತ: ರಹಸ್ಯ; ಮುಸುಕು: ಹೊದಿಕೆ; ಕೈದು: ಆಯುಧ, ಶಸ್ತ್ರ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಗಣಿ: ಆಶ್ರಯಸ್ಥಾನ, ಮೂಲ ಸ್ಥಾನ; ರಮಣ: ನಲ್ಲ, ಪ್ರಿಯಕರ; ವೈರ: ಹಗೆ; ಹೆಚ್ಚು: ಅಧಿಕ; ಕುಂದು: ಕೊರತೆ, ನೂನ್ಯತೆ; ಸಮರ: ಯುದ್ಧ; ಭಟ: ಸೈನಿಕ; ಇರಿದು: ಚುಚ್ಚು; ನಿರ್ನಾಮ: ನಾಶ, ಅಳಿವು; ಭಾವ: ಅಂತರ್ಗತ ಅರ್ಥ;

ಪದವಿಂಗಡಣೆ:
ಸಮಯವಿಲ್+ಓರಂತೆ +ಮೌನ
ಭ್ರಮೆಯ +ಬಿಗುಹಿನ+ ಕೇರಿಕೇರಿಯ
ಕುಮತಿಗಳ+ ಗುಜುಗುಜಿನ+ ಗುಪ್ತದ+ ಮುಸುಕು+ಕೈದುಗಳ
ತಮತಮಗೆ +ಬಿರುದುಗಳ+ ಗಣಿಕಾ
ರಮಣ+ ವೈರದ+ ಹೆಚ್ಚು +ಕುಂದಿನ
ಸಮರ+ಭಟರ್+ಇರಿದಾಡಿದರು +ನಿರ್ನಾಮ +ಭಾವದಲಿ

ಅಚ್ಚರಿ:
(೧) ತಮತಮಗೆ, ಗುಜುಗುಜು, ಕೇರಿಕೇರಿ – ಜೋಡಿ ಪದಗಳು

ಪದ್ಯ ೫: ಕೌರವನ ಸ್ಥಿತಿ ಹೇಗಿತ್ತು?

ದ್ರೋಣ ಭೀಷ್ಮಾದಿಗಳು ಸಮಯವ
ಕಾಣರುಳಿದ ಪಸಾಯ್ತ ಸಚಿವ
ಶ್ರೇಣಿ ಬಾಗಿಲ ಹೊರಗೆ ನಿಂದುದು ಮತ್ತೆ ಮನೆಗಗಳಲಿ
ಕಾಣೆನೊಳಪೈಕದ ಸುವೇಣಿಯ
ರಾಣಿಯರ ದುರ್ಮನದ ಬೆಳಸಿನ
ಕೇಣಿಯನು ಕೈಕೊಂಡನೊಬ್ಬನೆ ಕೌರವರ ರಾಯ (ಸಭಾ ಪರ್ವ, ೧೩ ಸಂಧಿ, ೫ ಪದ್ಯ)

ತಾತ್ಪರ್ಯ:
ಭೀಷ್ಮ ದ್ರೋಣರಿಗೆ ದುರ್ಯೋಧನನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ. ಉಳಿದ ಮಂತ್ರಿಗಳು, ಸಚಿವರು, ಆಪ್ತರು ಅರಮನೆಯ ಬಾಗಿಲ ಹೊರಗೇ ನಿಂತರು. ಕೌರವನ ಭವನದಲ್ಲಿ ರಾಣಿಯರೇ ಬರುವಂತಿರಲಿಲ್ಲ. ಮನಸ್ಸಿನ ದುಷ್ಟ ಸಂಕಲ್ಪವನ್ನು ಬೆಳೆಸುವ ಗುತ್ತಿಗೆಯನ್ನು ತಾನೇ ಹೊತ್ತುಕೊಂಡು ಕೌರವನು ಏಕಾಂಗಿಯಾಗಿದ್ದನು.

ಅರ್ಥ:
ಸಮಯ: ಕಾಲ, ಗಳಿಗೆ; ಕಾಣರು: ತೋರು; ಉಳಿದ: ಮಿಕ್ಕ; ಪಸಾಯ್ತ: ತಣಿವೆ, ತೃಪ್ತಿಗೊಂಡ; ಸಚಿವ: ಮಂತ್ರಿ; ಶ್ರೇಣಿ: ಗುಂಪು; ಬಾಗಿಲು: ಕದ, ಕವಾಟ; ಹೊರಗೆ: ಆಚೆ; ನಿಂದು: ನಿಲ್ಲು; ಮತ್ತೆ: ಪುನಃ; ಮನೆ: ಆಲಯ; ಕಾಣೆ: ತೋರದು; ವೇಣಿ: ಜಡೆ, ತರುಬು; ರಾಣಿ: ಅರಸಿ; ದುರ್ಮನ: ಕೆಟ್ಟ ಮನಸ್ಸು; ಬೆಳಸು: ಏಳಿಗೆ; ಕೇಣಿ: ಗುತ್ತಿಗೆ, ಗೇಣಿ; ಒಬ್ಬ: ಏಕಾಂಗಿ; ರಾಯ: ರಾಜ; ಕೈಕೊಂಡು: ಪ್ರಾರಂಭಿಸು;

ಪದವಿಂಗಡಣೆ:
ದ್ರೋಣ +ಭೀಷ್ಮಾದಿಗಳು +ಸಮಯವ
ಕಾಣರ್+ಉಳಿದ+ ಪಸಾಯ್ತ +ಸಚಿವ
ಶ್ರೇಣಿ +ಬಾಗಿಲ +ಹೊರಗೆ +ನಿಂದುದು +ಮತ್ತೆ +ಮನೆಗಳಲಿ
ಕಾಣೆನ್+ಒಳಪೈಕದ +ಸುವೇಣಿಯ
ರಾಣಿಯರ +ದುರ್ಮನದ +ಬೆಳಸಿನ
ಕೇಣಿಯನು +ಕೈಕೊಂಡನ್+ಒಬ್ಬನೆ +ಕೌರವರ+ ರಾಯ

ಅಚ್ಚರಿ:
(೧) ದುರ್ಯೋಧನನ ಮನಃ ಸ್ಥಿತಿ – ದುರ್ಮನದ ಬೆಳಸಿನ ಕೇಣಿಯನು ಕೈಕೊಂಡನೊಬ್ಬನೆ ಕೌರವರ ರಾಯ

ಪದ್ಯ ೪: ದುರ್ಯೋಧನನ ತನು ಮನಸ್ಸನ್ನು ಯಾವುದು ಆವರಿಸಿತು?

ಬೇಟೆ ನಿಂದುದು ಗಜ ತುರಗದೇ
ರಾಟಮಾದುದು ಖೇಳ ಮೇಳದ
ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತ ಮೊದಲಾದ
ನಾಟಕದ ಮೊಗರಂಬವೆನಿಪ ಕ
ವಾಟ ತೆರೆಯದು ಹೊಕ್ಕಸೂಯದ
ಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ (ಸಭಾ ಪರ್ವ, ೧೩ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನ ವಿಲಾಸ ಕ್ರೀಡೆಗಳೆಲ್ಲವೂ ನಿಂತವು, ಬೇಟೆ, ಆನೆಕುದುರೆಗಳ ಏರಾಟ, ಜೊತೆಗಾರರೊಡನೆ ವಿನೋದ ಕಲಹ ಮೊದಲಾದವನ್ನೆಲ್ಲವನ್ನೂ ದುರ್ಯೋಧನನು ತ್ಯಜಿಸಿದನು. ಕವಡೆ, ಪಗಡೆ ಆಟಗಳು, ನಾಟಕ ಆಡಂಬರವು ಆರಂಭವೇ ಆಗಲಿಲ್ಲ. ಅಸೂಯೆಯು ಮನಸ್ಸಿನಲ್ಲಿ ಹೊಕ್ಕು ಅವನ ದೇಹ ಮನಸ್ಸುಗಳೆರಡನ್ನೂ ಆವರಿಸಿತು.

ಅರ್ಥ:
ಬೇಟೆ: ಮೃಗಗಳನ್ನು ಕೊಲ್ಲುವುದು; ನಿಂದುದು: ನಿಲ್ಲು; ಗಜ: ಆನೆ; ತುರಗ: ಕುದುರೆ; ಏರಾಟ: ಸ್ಪರ್ಧೆ, ಪೈಪೋಟಿ; ಖೇಳ: ಆಟ; ಮೇಳ: ಗುಂಪು; ತೋಟಿ: ಕಲಹ, ಜಗಳ; ಕವಡಿ: ಮೋಸಗಾರ; ನೆತ್ತ: ಪಂದ್ಯ; ಮೊದಲಾದ: ಆದಿ, ಮುಂತಾದ; ನಾಟಕ: ನಟನೆ; ಮೊಗ: ಮುಖ; ಕವಾಟ: ಬಾಗಿಲು; ತೆರೆ: ಬಿಚ್ಚು; ಹೊಕ್ಕು: ಸೇರು; ಅಸೂಯೆ: ಹೊಟ್ಟೆಕಿಚ್ಚು; ಕೋಟಲೆ: ತೊಂದರೆ; ಕಡು: ಹೆಚ್ಚು: ಯೋಜನೆ, ಉಪಾಯ; ಕವರು: ಆವರಿಸು; ನೃಪ: ರಾಜ; ತನು: ದೇಹ; ಮನ: ಮನಸ್ಸು;ಮೊಗರಂಬ: ಮೊಗಮುಟ್ಟು, ಮುಖಕ್ಕೆ ತೊಡಿಸುವ ಅಲಂಕಾರಸಾಧನ;

ಪದವಿಂಗಡಣೆ:
ಬೇಟೆ +ನಿಂದುದು +ಗಜ +ತುರಗದ್
ಏರಾಟ+ಮಾದುದು +ಖೇಳ +ಮೇಳದ
ತೋಟಿಯಲ್ಲಿಯದಲ್ಲಿ+ ಕವಡಿಕೆ+ ನೆತ್ತ+ ಮೊದಲಾದ
ನಾಟಕದ +ಮೊಗರಂಬವೆನಿಪ+ ಕ
ವಾಟ +ತೆರೆಯದು +ಹೊಕ್+ಅಸೂಯದ
ಕೋಟಲೆಯ +ಕಡುಹೂಟ +ಕವರಿತು +ನೃಪನ +ತನು+ಮನವ

ಅಚ್ಚರಿ:
(೧) ಏರಾಟ, ಕವಾಟ – ಪ್ರಾಸ ಪದ
(೨) ದುರ್ಯೋಧನನ ಸ್ಥಿತಿ – ಅಸೂಯದಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ
(೩) ಕ ಕಾರದ ತ್ರಿವಳಿ ಪದ – ಕೋಟಲೆಯ ಕಡುಹೂಟ ಕವರಿತು

ಪದ್ಯ ೩: ದುರ್ಯೋಧನನು ಉಷಾಕಾಲದ ಮಂಗಳವಾದ್ಯಗಳನ್ನೇಕೆ ನಿಲ್ಲಿಸಿದನು?

ಭಾನುಮತಿ ಬರೆ ಮುರಿದ ಮುಸುಕಿನ
ಮೌನಿ ನೂಕಿದನಿರುಳನುದಯದ
ನೂನ ಮಂಗಳಪಟದ ಶಂಖಧ್ವನಿಯ ಮಾಣಿಸಿದ
ಭಾನುವಿಂಗರ್ಘ್ಯಾದಿ ಕೃತ್ಯವ
ನೇನುವನು ಮನ್ನಿಸದೆ ಚಿತ್ತದೊ
ಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ (ಸಭಾ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಭಾನುಮತಿ ಬರಲು ಮುಸುಕನ್ನು ತೆರದನೇ ಹೊರತು ಆಕೆಯ ಜೊತೆ ಮಾತಾಡಲಿಲ್ಲ. ರಾತ್ರಿಯೆಲ್ಲಾ ಮೌನದಲ್ಲೇ ಕಳೆದನು. ಬೆಳಗಿನ ಉಷಾಕಾಲದಲ್ಲಿ ಶಂಖ ಪಟಹ ಮೊದಲಾದ ಮಂಗಳವಾದ್ಯಗಳ ಧ್ವನಿಯನ್ನು ಮಾಡಕೂಡದೆಂದು ಆದೇಶಿಸಿದನು. ಸೂರ್ಯನಿಗೆ ಬೆಳಗಿನ ಅರ್ಘ್ಯವೇ ಮೊದಲಾದ ಏನನ್ನೂ ಕೊಡದೆ ಅತಿಶಯದ ಕೋಪದ ಭಾರದಲ್ಲಿದ್ದನು.

ಅರ್ಥ:
ಬರೆ: ಆಗಮಿಸಲು; ಮುರಿ: ಸೀಳು; ಮುಸುಕು: ಹೊದಿಕೆ; ಮೌನ: ಮಾತಿಲ್ಲದ ಸ್ಥಿತಿ, ಸುಮ್ಮನಿರುವಿಕೆ; ನೂಕು: ತಳ್ಳು; ಇರುಳು: ರಾತ್ರಿ; ಉದಯ: ಹುಟ್ಟು; ನೂನ: ನ್ಯೂನತೆ, ಭಂಗ; ಮಂಗಳ: ಶುಭ; ಪಟ: ಧ್ವಜ, ಬಾವುಟ; ಶಂಖ: ಕಂಬು; ಧ್ವನಿ: ರವ, ಶಬ್ದ; ಮಾಣಿಸು: ನಿಲ್ಲುವಂತೆ ಮಾಡು, ನಿಲ್ಲಿಸು; ಭಾನು: ಸೂರ್ಯ; ಅರ್ಘ್ಯ: ನೀರು; ಕೃತ್ಯ: ಕೆಲಸ; ಆದಿ: ಮುಂತಾದ; ಮನ್ನಿಸು: ಒಪ್ಪು, ಅಂಗೀಕರಿಸು; ಚಿತ್ತ: ಮನಸ್ಸು; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಭೂಪ: ರಾಜ; ಖತಿ: ರೇಗುವಿಕೆ, ಕೋಪ; ಭಾರ: ಹೊರೆ;

ಪದವಿಂಗಡಣೆ:
ಭಾನುಮತಿ +ಬರೆ +ಮುರಿದ +ಮುಸುಕಿನ
ಮೌನಿ +ನೂಕಿದನ್+ಇರುಳನ್+ಉದಯದ
ನೂನ+ ಮಂಗಳಪಟದ +ಶಂಖ+ಧ್ವನಿಯ +ಮಾಣಿಸಿದ
ಭಾನುವಿಂಗ್+ಅರ್ಘ್ಯಾದಿ +ಕೃತ್ಯವನ್
ಏನುವನು+ ಮನ್ನಿಸದೆ+ ಚಿತ್ತದೊಳ್
ಏನ+ ನೆನೆದನೊ +ಭೂಪನಿದ್ದನು+ ಖತಿಯ+ ಭಾರದಲಿ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮುರಿದ ಮುಸುಕಿನ ಮೌನಿ
(೨) ಭಾನುಮತಿ, ಭಾನು, ಭೂಪ – ಭ ಕಾರದ ಪದಗಳ ಬಳಕೆ
(೩) ದುರ್ಯೋಧನನ ಸ್ಥಿತಿ – ಚಿತ್ತದೊಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ

ಪದ್ಯ ೨: ದುರ್ಯೋಧನನು ದಾಸಿಯರನ್ನು ಯಾಕೆ ದೂರವಿಟ್ಟನು

ಆರತಿಯ ಗಣಿಕೆಯರ ಸುಳಿವು
ಪ್ಪಾರತಿಯ ದಾದಿಯರ ಪಾಯವ
ಧಾರು ಸೂಳಾಯತರ ಮಂಗಳ ವಚನದೈದೆಯರ
ದೂರದಲಿ ನಿಲಿಸಿದನು ಭಂಗದ
ಭಾರಣೆಯ ಬಿಸುಸುಯ್ಲ ಸೂರೆಯ
ಸೈರಣೆಯ ಸೀವಟದ ಸಿರಿಮಂಚದಲಿ ಪವಡಿಸಿದ (ಸಭಾ ಪರ್ವ, ೧೩ ಸಂಧಿ, ೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಅರಮನೆಯನ್ನು ಪ್ರವೇಶಿಸುತ್ತಿರುವುದನ್ನು ತಿಳಿದ ದಾಸಿಯರು ಆರತಿ, ಉಪ್ಪಾರತಿ ಯನ್ನು ತಂದರು, ಹೊಗಳುಭಟ್ಟರು ಮಂಗಳವಚನವನ್ನು ಹೇಳಲು ಮುಂದಾದರು, ಅಲ್ಲಿಗೆ ಬಂದಿದ್ದ ದಾಸಿಯರು, ಗಣಿಕೆಯರು, ಸೇವಕಿಯರು, ವಂದಿ ಮಾಗಧರನ್ನು ದೂರದಲ್ಲೇ ನಿಲ್ಲಿಸಿ, ಅತಿಶಯ ಅಪಮಾನದ ದೆಸೆಯಿಂದ ಬಂದ ಬಿಸಿಯ ನಿಟ್ಟುಸಿರಿಡುತ್ತಾ ತನ್ನ ತಾಳ್ಮೆಯ ಎಲ್ಲೆ ಮೀರಿ ತನ್ನ ಮಂಚದ ಮೇಲೆ ಮಲಗಿದನು.

ಅರ್ಥ:
ಗಣಿಕೆ: ವೇಶ್ಯೆ; ಆರತಿ:ನೀರಾಜನ; ಸುಳಿವು: ಗುರುತು, ಕುರುಹು; ಉಪ್ಪಾರತಿ: ಉಪ್ಪಿನ ಆರತಿ; ದಾದಿ: ದಾಸಿ; ಪಾಯವಧಾರು: ಎಚ್ಚರಿಕೆ, ಪಾದಕ್ಕೆ ಎಚ್ಚರಿಕೆ; ಸೂಳಾಯತ: ಮಂಗಳ ಪಾಠಕ, ವಂದಿ; ಮಂಗಳ: ಶುಭ; ವಚನ: ಮಾತು, ವಾಣಿ; ಐದು: ಹೋಗಿ ಸೇರು; ಐದೆ: ವಿಶೇಷವಾಗಿ; ದೂರ: ಅಂತರ; ನಿಲಿಸು: ತಡೆ; ಭಂಗ: ಸೀಳು; ಭಾರಣೆ: ಮಹಿಮೆ, ಗೌರವ; ಬಿಸುಸುಯ್ಲ: ಬಿಸಿಯುಸಿರು; ಸೂರೆ: ಕೊಳ್ಳೆ, ಲೂಟಿ; ಸೈರಣೆ: ತಾಳ್ಮೆ, ಸಹನೆ; ಸೀವಟ: ಅಲಂಕಾರ; ಸಿರಿ: ಐಶ್ವರ್ಯ; ಮಂಚ: ಶಯನಕ್ಕೆ ಉಪಯೋಗಿಸುವ ಸಾಧನ, ಪರ್ಯಂಕ; ಪವಡಿಸು: ಮಲಗು;

ಪದವಿಂಗಡಣೆ:
ಆರತಿಯ +ಗಣಿಕೆಯರ +ಸುಳಿವ್
ಉಪ್ಪಾರತಿಯ +ದಾದಿಯರ +ಪಾಯವ
ಧಾರು +ಸೂಳಾಯತರ+ ಮಂಗಳ+ ವಚನದ್+ಐದೆಯರ
ದೂರದಲಿ +ನಿಲಿಸಿದನು +ಭಂಗದ
ಭಾರಣೆಯ+ ಬಿಸುಸುಯ್ಲ+ ಸೂರೆಯ
ಸೈರಣೆಯ +ಸೀವಟದ +ಸಿರಿಮಂಚದಲಿ+ ಪವಡಿಸಿದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭಂಗದ ಭಾರಣೆಯ ಬಿಸುಸುಯ್ಲ
(೨) ಸ ಕಾರದ ಸಾಲು ಪದ – ಸೂರೆಯ ಸೈರಣೆಯ ಸೀವಟದ ಸಿರಿಮಂಚದಲಿ
(೩) ಗಣಿಕೆ, ದಾದಿ, ಸೂಳಾಯತ – ವಿವಿಧ ಸಹಾಯಕರ ಹೆಸರು