ಪದ್ಯ ೩೨: ಯಾರಿಗೆ ಯಾರು ಶತ್ರುಗಳೆಂದು ವ್ಯಾಸರು ತಿಳಿಸಿದರು?

ಅಜ್ಞರವದಿರು ನೀವು ನೆರೆ ಸ
ರ್ವಜ್ಞರವದಿರಧರ್ಮನಿಷ್ಠರು
ಯಜ್ಞ ದೀಕ್ಷಿತರಿಂದು ನೀವು ಸಮಸ್ತ ಜಗವರಿಯೆ
ಅಜ್ಞರರಿಗಳು ನಿಪುಣರಿಗೆ ವರ
ಯಾಜ್ಞಿಕರಿಗಾಚಾರಹೀನರ
ಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ (ಸಭಾ ಪರ್ವ, ೧೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ವೇದವ್ಯಾಸರು ತಮ್ಮ ಮಾತನ್ನು ಮುಂದುವರಿಸುತ್ತಾ, ಕೌರವರು ತಿಳಿಯದವರು, ಅಜ್ಞಾನಿಗಳು, ನೀವು ಎಲ್ಲವನ್ನು ತಿಳಿದ ಸರ್ವಜ್ಞರು, ಅಧರ್ಮದಲ್ಲೇ ನಿಪುಣರಾದವರು ಅವರು, ನೀವು ಲೋಕವೇ ತಿಳಿದಮ್ತೆ ಯಜ್ಞದೀಕ್ಷಿತರಾದವರು. ತಿಳಿದವರಿಗೆ ತಿಳಿಯದವರು ಶತ್ರುಗಳು, ಆಚಾರಹೀನರಿಗೆ ಯಜ್ಞನಿರತರು ಶತ್ರುಗಳು. ತಿಳಿದವರು ಹೇಳುವ ಮಾತಿದು, ಇದು ಎಂದು ತಪ್ಪುವುದಿಲ್ಲ ಎಂದು ವ್ಯಾಸರು ತಿಳಿಸಿದರು.

ಅರ್ಥ:
ಅಜ್ಞ: ತಿಳಿವಳಿಕೆ ಇಲ್ಲದವನು, ದಡ್ಡ; ನೆರೆ: ಗುಂಪು; ಸರ್ವಜ್ಞ: ಎಲ್ಲಾ ತಿಳಿದವ; ಅಧರ್ಮ: ಕೆಟ್ಟ ಹಾದಿ; ನ್ಯಾಯವಲ್ಲದುದು; ನಿಷ್ಠ:ಶ್ರದ್ಧೆಯುಳ್ಳವನು; ಯಜ್ಞ: ಕ್ರತು, ಅಧ್ವರ; ದೀಕ್ಷೆ: ಸಂಸ್ಕಾರ, ವ್ರತ, ನಿಯಮ; ಸಮಸ್ತ: ಎಲ್ಲಾ; ಜಗ: ಜಗತ್ತು; ಅರಿ: ತಿಳಿ; ಅರಿ: ವೈರಿ; ನಿಪುಣ: ಪಾರಂಗತ, ಪ್ರವೀಣ; ವರ: ಶ್ರೇಷ್ಠ; ಯಾಜ್ಞಿಕ: ಯಜ್ಞ ಸಂಬಂಧಿತ ಕಾರ್ಯವನ್ನು ಮಾಡುವವ; ಆಚಾರ: ಕಟ್ಟುಪಾಡು, ಸಂಪ್ರದಾಯ; ಹೀನ:ಕೆಟ್ಟದು, ಕೀಳಾದುದು; ಅಭಿಜ್ಞ: ಚೆನ್ನಾಗಿ ತಿಳಿದವನು; ಮತ: ವಿಚಾರ; ತಪ್ಪದು: ಆದಮೇಲೆ; ಮುನಿ: ಋಷಿ; ನೃಪಾಲ: ರಾಜ; ಅವದಿರು: ಅವರು;

ಪದವಿಂಗಡಣೆ:
ಅಜ್ಞರ್+ಅವದಿರು +ನೀವು +ನೆರೆ+ ಸ
ರ್ವಜ್ಞರ್+ ಅವದಿರ್+ಅಧರ್ಮ+ನಿಷ್ಠರು
ಯಜ್ಞ +ದೀಕ್ಷಿತರಿಂದು+ ನೀವು+ ಸಮಸ್ತ+ ಜಗವರಿಯೆ
ಅಜ್ಞರ್+ಅರಿಗಳು +ನಿಪುಣರಿಗೆ +ವರ
ಯಾಜ್ಞಿಕರಿಗ್+ಆಚಾರ+ಹೀನರ್
ಅಭಿಜ್ಞ+ಮತವಿದು+ ತಪ್ಪದೆಂದನು+ ಮುನಿ +ನೃಪಾಲಂಗೆ

ಅಚ್ಚರಿ:
(೧) ಅಜ್ಞರು, ಸರ್ವಜ್ಞ, ಯಜ್ಞ, ಅಭಿಜ್ಞ – ಜ್ಞ ಅಕ್ಷರದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ