ಪದ್ಯ ೧: ದುರ್ಯೋಧನನು ಯಾವ ಹೊತ್ತಿನಲ್ಲಿ ತನ್ನ ಅರಮನೆಯನ್ನು ಸೇರಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆಮೊಗದ
ತಾಳಿಗೆಯ ನಿರ್ದ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜಮಂದಿರವ (ಸಭಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದುಃಖಭರಿತನಾಗಿ ಮುಸುಕು ಹಾಕಿಕೊಂಡು ದುರ್ಯೋಧನನು ಸಿಡಿಮಿಡಿಯ ಹೊಗೆಯನ್ನು ತನ್ನ ಮುಖದಲ್ಲಿ ಹೊತ್ತು ಮುಖಕ್ಕೆ ಮುಸುಕು ಹಾಕಿಕೊಂಡು ನಡುರಾತ್ರಿಯಲ್ಲಿ ತನ್ನ ಅರಮನೆಯನ್ನು ಸೇರಿದನು. ಕೋಪದ ತಾಪದಿಂದ ಅವನ ನಾಲಿಗೆ ಗಂಟಲುಗಳು ಒಣಗಿ ಹೋಗಿದ್ದವು. ಮತ್ಸರವು ಹೆಚ್ಚಾಗಿ ಏನು ಮಾಡಬೇಕೆಂಬುದು ತಿಳಿಯದೆ ಮನಸ್ಸು ಕವಲೊಡೆದಿತ್ತು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ರಾಯ: ರಾಜ; ಮೇಲು: ಹೊರಗಡೆ; ಮುಸುಕು: ಆವರಿಸು, ಹೊದಿಕೆ; ಹೊತ್ತು: ಉದ್ವೇಗಗೊಳ್ಳು; ದುಗುಡ: ದುಃಖ; ಹೊಗರ: ಹೊಗೆ: ಧೂಮ; ಮೊಗ: ಮುಖ; ತಾಳಿಗೆ: ಗಂಟಲು; ದ್ರವ: ನೀರು, ರಸ; ನಿರ್ದ್ರವ: ಒಣಗಿದ ಸ್ಥಿತಿ; ಮತ್ಸರ: ಹೊಟ್ಟೆಕಿಚ್ಚು; ಏಳಿಗೆ: ಅಭ್ಯುದಯ; ಇಕ್ಕಡಿ: ಎರಡು ಕಡೆ; ಮನ: ಮನಸ್ಸು; ನೃಪಾಲ: ರಾಜ; ಹೊಕ್ಕು: ಸೇರು; ಇರುಳು: ರಾತ್ರಿ; ನಡು: ಮಧ್ಯ; ನಿಜ: ತನ್ನ; ರಾಜಮಂದಿರ: ಅರಮನೆ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೌರವರಾಯನ್+ಇತ್ತಲು
ಮೇಲು+ ಮುಸುಕಿನ+ ಹೊತ್ತ +ದುಗುಡದ +ಹೊಗರ+ ಹೊಗೆಮೊಗದ
ತಾಳಿಗೆಯ+ ನಿರ್ದ್ರವದ +ಮತ್ಸರದ್
ಏಳಿಗೆಯಲ್+ಇಕ್ಕಡಿಯ +ಮನದ +ನೃ
ಪಾಲ +ಹೊಕ್ಕನು +ನಡುವ್+ಇರುಳು +ನಿಜ +ರಾಜಮಂದಿರವ

ಅಚ್ಚರಿ:
(೧) ಧರಿತ್ರೀಪಾಲ, ನೃಪಾಲ – ಸಮನಾರ್ಥಕ ಪದ
(೨) ಅವಮಾನ/ಕೋಪದ ಚಿತ್ರಣ – ತಾಳಿಗೆಯ ನಿರ್ದ್ರವದ ಮತ್ಸರ ದೇಳಿಗೆಯಲಿಕ್ಕಡಿಯ ಮನದ ನೃಪಾಲ

ನುಡಿಮುತ್ತುಗಳು: ಸಭಾ ಪರ್ವ, ೧೩ ಸಂಧಿ

  • ತಾಳಿಗೆಯ ನಿರ್ದ್ರವದ ಮತ್ಸರ ದೇಳಿಗೆಯಲಿಕ್ಕಡಿಯ ಮನದ ನೃಪಾಲ – ಪದ್ಯ ೧
  • ಚಿತ್ತದೊಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ – ಪದ್ಯ ೩
  • ಅಸೂಯದಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ – ಪದ್ಯ ೪
  • ದುರ್ಮನದ ಬೆಳಸಿನ ಕೇಣಿಯನು ಕೈಕೊಂಡನೊಬ್ಬನೆ ಕೌರವರ ರಾಯ – ಪದ್ಯ ೫
  • ಜಾಣಿನೊಹೆಯ ಜನದ ನೆನಹಿನ ಸಾಣೆಯಲಿ ಸವೆಯಿತ್ತು ಕೌರವ ನೃಪನ ನಿರ್ದೇಶ – ಪದ್ಯ ೭
  • ಸಕಲದಳ ನಾಯಕರು ಮಂತ್ರಿ ಪ್ರಕರ ಚಿಂತಾಂಬುಧಿಯೊಳದ್ದಿರೆ – ಪದ್ಯ ೮
  • ಅಂತರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ – ಪದ್ಯ ೧೧
  • ಬೆಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ – ಪದ್ಯ ೧೩
  • ಮಹೀಶ ಕಂಬನಿದುಂಬ ನೆನಹಿನ ಬೀಸರಕೆ ಬಿಸುಸುಯ್ದು ಧೊಪ್ಪನೆ ಕೆಡೆದನವನಿಯಲಿ – ಪದ್ಯ ೧೫
  • ಕಣ್ಣೆವೆಯ ಕಿರುವನಿ ಮುತ್ತುಗಳ ಕೇವಣಿಯ – ಪದ್ಯ ೧೬
  • ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ – ಪದ್ಯ ೧೭
  • ಜೂಜುಗಾರರ ಕುಲಶಿರೋಮಣಿ ತಾನೆಯೆಂದನು ಶಕುನಿ – ಪದ್ಯ ೧೮
  • ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ – ಪದ್ಯ ೧೯
  • ನೀ ಸಂಪನ್ನ ಕೃತ್ರಿಮವಿದ್ಯನಾದರೆ ತೊಡಚು ಸಾಕದನು – ಪದ್ಯ ೨೦
  • ಕಟ್ಟೇಕಾಂತದಲಿ ಮುವ್ವರು ವಿಚಾರಿಸಿದರು ನಿಜಾನ್ವಯ ಮೂಲನಾಶನವ – ಪದ್ಯ ೨೪
  • ನಿನ್ನರಮನೆಯ ನೀ ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧನೃಪ – ಪದ್ಯ ೨೫
  • ಸಾಲ ಭಂಜಿಕೆಯಾಯ್ತು ತನ್ನಯಬಾಳಿಕೆಯ ಬೇಳಂಬವೇತಕೆ ಕೇಳುವಿರಿ – ಪದ್ಯ ೨೬
  • ಲಜ್ಜಾ ಮಾನಿನಿಗೆ ತನ್ನೊಕ್ಕತನ ವಿಂದಿಳಿದು ಹೋಯ್ತೆಂದ – ಪದ್ಯ ೨೯
  • ಓಲಗದ ಸೂಳೆಯರವರ ಸೂಳಿನ ನಗೆಯ ನೆನೆನೆನೆದೆನ್ನ ಮನ ಜರ್ಝರಿತವಾಯ್ತೆಂದ – ಪದ್ಯ ೩೦
  • ದೇವ ನಿರ್ಮಿತ ರಾಮಣೀಯಕ ವಿವಿಧ ರತ್ನ ಸ್ತೋಮ ತೇಜಃ ಪುಂಜಭಂಜಿತ ನಯನ ವೀಧಿಯಲಿ – ಪದ್ಯ ೩೨
  • ಮಣಿ ಬಂಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ – ಪದ್ಯ ೩೩
  • ಉಕ್ಕುವಮಲಚ್ಛವಿಗಳಲಿ ಮನಸಿಕ್ಕಿ ಹೊಲಬಳಿದುದು ವಿವೇಕವ ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು – ಪದ್ಯ ೩೪
  • ಭಿತ್ತಿಯ ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ – ಪದ್ಯ ೩೫
  • ಕೈಗಳ ಹೊಯ್ದು ಮಿಗೆ ಗೊಳ್ಳೆಂದು ನಕ್ಕುದು – ಪದ್ಯ ೩೭
  • ಬತ್ತಿತೆನ್ನಭಿಮಾನ ಜಲನಿಧಿ ಮತ್ತೆ ಮಾರಿಯ ಮಸಕವನು – ಪದ್ಯ ೩೯
  • ಸುಪ್ರೌಢಿಯಲಿ ಬಾಗಿಲನೊಂದು ಠಾವಿನೊಳರಸಿ ತಡವರಿಸಿದೆನು – ಪದ್ಯ ೪೧
  • ವಿವೇಕದ ಹೊಗೆಗೆ ಹೊಗೆ ಸಖಿಯಾದುದಲ್ಲಿಯ ಹಗರಣಿಗೆ ನಾನಾದೆನದು ನೋಟಕದ ಜನವಾಯ್ತು – ಪದ್ಯ ೪೨
  • ಖಡ್ಡಿ ಗರುವೆನ್ನಿಂದ ರೋಷದ ಗೊಡ್ಡು ನಾನಾದೆನು ವಿಘಾತಿಯ ಬಡ್ಡಿಗಿನ್ನಕ ಬದುಕಿದೆನು – ಪದ್ಯ ೪೩
  • ಭಂಗಿಸುವೆನಾ ಫಲದೊಳೆನ್ನನು ನುಂಗಬೇಹುದು ವಹ್ನಿ ಮೇಣೀ ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ – ಪದ್ಯ ೪೪
  • ರಾಯತನವೆಮಗಿಂದ್ರ ಲೋಕದಲಾಯದಲಿ ದಿಟವೆಂದು ನುಡಿವರು ಜೋಯಿಸರು – ಪದ್ಯ ೪೫
  • ಉಂಡು ಬದುಕುವ ಬಹಳ ಭಾಗ್ಯರ ಕಂಡಸೂಯಂಬಡುವ ಖಡ್ಡರ ಭಂಡರೆನ್ನದೆ ಲೋಕ ನಿನಗಿದು ಸಾಮ್ಯವಲ್ಲೆಂದ – ಪದ್ಯ ೪೯
  • ನೃಪಾಲರ ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ; ಕಾಯವಧ್ರುವವೆಂಬಡಿದಕೆ ಸಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ – ಪದ್ಯ ೫೩
  • ಸುರಿವ ನಯನಾಂಬುಗಳ ಮೂಗಿನ ಬೆರಳ ತೂಗುವ ಮಕುಟದವನೀಶ್ವರನು ಮೌನದೊಳಿದ್ದನೊಂದು ವಿಗಳಿಗೆ ಮಾತ್ರದಲಿ – ಪದ್ಯ ೫೫
  • ಅಳಲುದೊರೆಯಲಿ ಮೂಡಿ ಮುಳುಗಿದನಂದು ಧೃತರಾಷ್ಟ್ರ – ಪದ್ಯ ೫೭
  • ತಿಂದ ವಿಷವಳ್ಕಿದವು ಮಡುವಿನೊಳಂದು ಬಿಸುಟರೆ ಮುಳುಗಿ ಸುಖದಲಿ ಮಿಂದು ಹೊರವಂಟರು – ಪದ್ಯ ೫೯
  • ಖೂಳರಲಿ ಸತ್ಕಳೆಗಳನು ನೆರೆ ಕೇಳದವರಲಿ ಮಂತ್ರಬೀಜವ ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ – ಪದ್ಯ ೬೨
  • ಹರುಕುಗಳು ನಾವ್ ನೂರು ಮಕ್ಕಳು ಹೊರಗೆ ಬದುಕುವೆವ್ – ಪದ್ಯ ೬೩
  • ಪಾಂಚಾಲನಂದನೆಯ ನೂಕಿ ಮುಂದಲೆವಿಡಿದು ತೊತ್ತಿರೊಳಾಕೆಯನು ಕುಳ್ಳಿರಿಸಿದಂದು ವಿಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ – ಪದ್ಯ ೬೬
  • ಮನದೊಳಗಧಿಕ ಚಿಂತಾ ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ – ಪದ್ಯ ೬೭
  • ಅವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ – ಪದ್ಯ ೬೮
  • ಅಸುವಿನಲಿ ಹೃದಯದ ಸೆರೆ ಬಿಡದು – ಪದ್ಯ ೬೯
  • ಕೂಡಿಕೊಂಡು ಕುಲಪಘಾತದ ಕೇಡಿಗರ ಕಲ್ಪನೆಯ ಕಲುಪದ ಜೋಡಿಯನೆ ನಿಶ್ಚೈಸಿ – ಪದ್ಯ ೭೩
  • ಮಾತು ಹೊಲಸಿನ ಗಂಧವಾಗಿದೆ, ಭೀತಿ ರಸದಲಿ ಮನ ಮುಳುಗಿತೀ ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು – ಪದ್ಯ ೭೬
  • ಕೈತವದ ಕಣಿ ನಿನ್ನ ಮಗ – ಪದ್ಯ ೭೬
  • ನಿರ್ನಾಮರಾರೋ ಬಿತ್ತಿದರು ಕುರುಭೂಮಿಯಲಿ ವಿಷಬೀಜವನು ಹಾಯೆನುತ ಬಿಸುಸುಯ್ದ – ಪದ್ಯ ೭೭
  • ನಿವಾರಣವುಂಟೆ ಮರ್ಮವನಿರಿದ ಸಬಳದಲಿ – ಪದ್ಯ ೭೯
  • ಅಪಮೃತ್ಯವೇನೆಂದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ – ಪದ್ಯ ೮೧
  • ಹರಿದುದೇ ಕುರುವಂಶ ಲತೆ ಹೊಕ್ಕಿರಿದನೇ ಧೃತರಾಷ್ಟ್ರ – ಪದ್ಯ ೮೧
  • ನೋಡುವುದು ಬಾಂಧವರ ನಿಮ್ಮಡಿ ಮಾಡುವುದು ಸೌಖ್ಯವನು ಭಯದಲಿ ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ – ಪದ್ಯ ೮೬
  • ಉಳಿದವರಂಬಿನೋಪಾದಿಯಲಿ ನಿಲುವರು – ಪದ್ಯ ೮೭
  • ಸಪ್ತವ್ಯಸನವಿವು ಸಂಪ್ರೀತಿಕರ ಮೊದಲಲಿ ವಿಷಾಕದೊಳಾತು ಕೆಡಿಸುವ ಹದ – ಪದ್ಯ ೮೯
  • ಅಕ್ಷಧೂರ್ತರ ತಿಲಕ ಶಕುನಿ, ದೌರ್ಜನ್ಯ ಮಖದೀಕ್ಷಿತನು ಕಲಿಕರ್ಣ, ಭೀಷ್ಮದ್ರೋಣರೇ ನಿಷ್ಫಲ ವಿಧಾನರು – ಪದ್ಯ ೯೦
  • ಭವದ್ವಚೋವಿಸ್ತರಕೆ ಪಡಿಸಣವುಂಟೆ ಶಿವ ಶಿವಯೆಂದನಾ ಭೂಪ – ಪದ್ಯ ೯೨
  • ದೇಹಚ್ಛಾಯೆಗುಂಟೇ ಬೇರೆ ಚೇಷ್ಟೆ – ಪದ್ಯ ೯೪
  • ತಳಿತವಿನನುದಯದಲಿ ತಾರಾವಳಿಗಳದ್ಭುತವೆನಲು ಮುಕ್ತಾವಳಿಯ ಧವಳಚ್ಛತ್ರದೆಡಬಲಕೊಲೆವ ಚೌರಿಗಳ – ಪದ್ಯ ೯೮
  • ಭೂರಿ ಭೇರೀ ವಾದ್ಯರವ ಕೈವಾರಿಗಳ ಕಳಕಳದೊಳಡಗಿತು ನಾರಿಯರ ನೇವುರದ ಮೊಳಗಿನೊಳದ್ದುದಾ ರಭಸ – ಪದ್ಯ ೧೦೧




ಪದ್ಯ ೩೬: ದುರ್ಯೋಧನನು ಹಸ್ತಿನಾವತಿಯನ್ನು ಯಾವ ಹೊತ್ತಿನಲ್ಲಿ ಸೇರಿದನು?

ಭೂಮಿಲಂಬದ ನಿಖಿಳ ಭೂಪ
ಸ್ತೋಮ ಸಹಿತ ಸುಯೋಧನನು ಹೃ
ತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ
ಧೂಮಮುಖನೈತಂದು ಗಜಪುರ
ಸೀಮೆಯಲಿ ಪಾಳಯವ ಬಿಡಿಸಿದ
ವೈಮಸನ್ಯದಲಿರುಳು ಹೊಕ್ಕನು ಹಸ್ತಿನಾಪುರವ (ಸಭಾ ಪರ್ವ, ೧೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಭೂಮಿಯ ಉದ್ದಗಲದ ಎಲ್ಲಾ ರಾಜರೊಡನೆ ದುರ್ಯೋಧನನು ಇಂದ್ರಪ್ರಸ್ಥ ನಗರದಿಂದ ಹಿಂದಿರುಗಿದನು. ಇಂದ್ರಪ್ರಸ್ಥದಲ್ಲಾದ ನಗೆಗೀಡಿನ ಪ್ರಸಂಗ ಅವನ ಹೃದಯದಲ್ಲಿ ತಾಮಸಾಗ್ನಿಯನ್ನು ಹೊತ್ತಿಸಿತ್ತು. ಆ ಪ್ರಸಂಗದಿಂದ ಕೋಪಗೊಂಡಿದ್ದರಿಂದ ರೋಷಾಗ್ನಿಯ ಹೊಗೆಯು ಅವನ ಮುಖವನ್ನು ಕಪ್ಪಾಗಿಸಿತ್ತು. ಹಸ್ತಿನಾಪುರದ ಊರ ಹೊರಗೇ ಬೀಡುನ್ನು ರಚಿಸಿ ಅಲ್ಲೇ ಕಾಲಕಳೆದನು. ಪಾಂಡವರ ಮೇಲಿನ ದ್ವೇಷದಿಂದ ಕುದಿಯುತ್ತಿದ್ದ ದುರ್ಯೋಧನನು ರಾತ್ರಿಯಾದ ಮೇಲೆ ಹಸ್ತಿನಾವತಿಯನ್ನು ಪ್ರವೇಶಿಸಿದನು.

ಅರ್ಥ:
ಭೂಮಿ: ಧರಿತ್ರಿ; ಲಂಬ: ಅಗಲ; ನಿಖಿಳ: ಎಲ್ಲಾ; ಭೂಪ: ರಾಜ; ಸ್ತೋಮ: ಗುಂಪು; ಸಹಿತ: ಜೊತೆ; ಹೃತ್: ಎದೆ, ಹೃದಯ; ತಾಮಸ: ಕತ್ತಲೆ, ಅಂಧಕಾರ; ಚಾವಡಿ: ಓಲಗಶಾಲೆ, ಸಭಾಸ್ಥಾನ; ಝಾಡಿ: ಕಾಂತಿ; ರೋಷ: ಕೋಪ; ಪಾವಕ: ಅಗ್ನಿ, ಬೆಂಕಿ; ಧೂಮ: ಹೊಗೆ; ಮುಖ: ಆನನ; ಐತರು: ಬಂದು ಸೇರು; ಗಜಪುರ: ಹಸ್ತಿನಾಪುರ; ಸೀಮೆ: ಗಡಿ; ಪಾಳಯ: ಬೀಡು, ಶಿಬಿರ; ಬಿಡಿಸು: ರಚಿಸು; ವೈಮನಸ್ಯ: ಹಗೆತನ; ಇರುಳು: ರಾತ್ರಿ; ಹೊಕ್ಕು: ಸೇರು; ಪುರ: ಊರು;

ಪದವಿಂಗಡಣೆ:
ಭೂಮಿಲಂಬದ+ ನಿಖಿಳ +ಭೂಪ
ಸ್ತೋಮ +ಸಹಿತ +ಸುಯೋಧನನು +ಹೃ
ತ್ತಾಮಸದ+ ಚಾವಡಿಯ+ ಝಾಡಿಯ +ರೋಷ +ಪಾವಕದ
ಧೂಮಮುಖನೈತಂದು +ಗಜಪುರ
ಸೀಮೆಯಲಿ +ಪಾಳಯವ +ಬಿಡಿಸಿದ
ವೈಮಸನ್ಯದಲ್+ಇರುಳು +ಹೊಕ್ಕನು +ಹಸ್ತಿನಾಪುರವ

ಅಚ್ಚರಿ:
(೧) ದುರ್ಯೋಧನನ ಕೋಪದ ಛಾಯೆ – ಸುಯೋಧನನು ಹೃತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ ಧೂಮಮುಖನೈತಂದು
(೨) ಗಜಪುರ, ಹಸ್ತಿನಾಪುರ – ಸಮಾನಾರ್ಥಕ ಪದ

ಪದ್ಯ ೩೫: ಕೌರವನು ಹಸ್ತಿನಾಪುರಕ್ಕೆ ಹೇಗೆ ಹಿಂದಿರುಗಿದನು?

ಅರಸ ಕೇಳೈ ಕೌರವೇಂದ್ರನ
ಕರೆಸಿದನು ದುಶ್ಯಾಸನಾದಿಕ
ದುರುಳ ಕೌರವ ಶತಕ ಸಹಿತಲೆ ಸಭೆಗೆ ನಡೆತಂದು
ಪರಿಭವಕೆ ಗುರಿಯಾಗಿ ಹಾಸ್ಯದ
ಹರಹಿನಲಿ ಹಳುವಾಗಿ ಪಾಂಡವ
ರರಸನನು ಬೀಳ್ಕೊಂಡು ಹಸ್ತಿನಪುರಕೆ ನಡೆತಂದ (ಸಭಾ ಪರ್ವ, ೧೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಇತ್ತ ಎಲ್ಲಾ ರಾಜರನ್ನು ಕಳುಹಿಸಿ ದುರ್ಯೋಧನ, ದುಶ್ಯಾಸನಾದಿಯಾಗಿ ಅವರ ನೂರು ಸಹೋದರರನ್ನು ಧರ್ಮರಾಯನು ಆಸ್ಥಾನಕ್ಕೆ ಕರೆಸಿದನು. ಹಾಗೆ ಬಂದ ಕೌರವನು ಕಷ್ಟಕ್ಕೊಳಗಾಗಿ, ಹಾಸ್ಯಕ್ಕೀಡಾಗಿ ಧರ್ಮಜನನ್ನು ಬೀಳ್ಕೊಂಡು ಹಸ್ತಿನಾಪುರಕ್ಕೆ ಹಿಂದಿರುಗಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕರೆಸು: ಬರೆಮಾದು; ಆದಿ: ಮುಂತಾದ; ದುರುಳ: ದುಷ್ಟ; ಶತ: ನೂರು; ಸಹಿತ: ಜೊತೆ; ಸಭೆ: ಓಲಗ; ಪರಿಭವ: ಅನಾದರ, ತಿರಸ್ಕಾರ, ಅಪಮಾನ; ಗುರಿ: ಲಕ್ಷ್ಯ, ಉದ್ದೇಶ; ಹಾಸ್ಯ:ಸಂತೋಷ; ಹರಹು: ವಿಸ್ತಾರ, ವೈಶಾಲ್ಯ, ಹರಡು; ಹಳು: ತಗ್ಗಿದುದು, ಕುಗ್ಗಿದುದು; ಬೀಳ್ಕೊಂಡು: ಹೊರಡು;

ಪದವಿಂಗಡಣೆ:
ಅರಸ +ಕೇಳೈ +ಕೌರವೇಂದ್ರನ
ಕರೆಸಿದನು +ದುಶ್ಯಾಸನಾದಿಕ
ದುರುಳ +ಕೌರವ+ ಶತಕ+ ಸಹಿತಲೆ+ ಸಭೆಗೆ+ ನಡೆತಂದು
ಪರಿಭವಕೆ +ಗುರಿಯಾಗಿ +ಹಾಸ್ಯದ
ಹರಹಿನಲಿ+ ಹಳುವಾಗಿ+ ಪಾಂಡವರ್
ಅರಸನನು +ಬೀಳ್ಕೊಂಡು +ಹಸ್ತಿನಪುರಕೆ+ ನಡೆತಂದ

ಅಚ್ಚರಿ:
(೧) ನಡೆತಂದು – ೩, ೬ ಸಾಲಿನ ಕೊನೆ ಪದ
(೨) ದುರ್ಯೋಧನನ ಸ್ಥಿತಿ – ಪರಿಭವಕೆ ಗುರಿಯಾಗಿ ಹಾಸ್ಯದ ಹರಹಿನಲಿ ಹಳುವಾಗಿ
(೩) ಹ ಕಾರದ ತ್ರಿವಳಿ ಪದ – ಹಾಸ್ಯದ ಹರಹಿನಲಿ ಹಳುವಾಗಿ
(೪) ಅರಸ – ೧, ೬ ಸಾಲಿನ ಮೊದಲ ಪದ

ಪದ್ಯ ೩೪: ಧರ್ಮಜನು ಉಳಿದ ರಾಜರನ್ನು ಹೇಗೆ ಬೀಳ್ಕೊಟ್ಟನು?

ಮುನಿಪ ಕಳುಹಿಸಿಕೊಂಡು ಬದರೀ
ವನಕೆ ತಿರುಗಿದನತ್ತಲಿತ್ತಲು
ಜನಪ ಬಂದನು ಬಳಿಕ ಮಯನಿರ್ಮಿತ ಮಹಾಸಭೆಗೆ
ಮುನಿಗಳುಳಿದವರನು ಮಹೀಸುರ
ಜನಸಹಿತ ಭೂಪಾಲಶೇಷವ
ನನುನಯದಿ ಮಿಗೆ ಸತ್ಕರಿಸಿ ಬೀಳ್ಕೊಟನುಚಿತದಲಿ (ಸಭಾ ಪರ್ವ, ೧೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ವೇದವ್ಯಾಸರು ಪಾಂಡವರೆಲ್ಲರಿಗೂ ಬುದ್ಧಿಮಾತನ್ನು ಹೇಳಿ ತಮ್ಮ ಬದರೀಕಾಶ್ರಮಕ್ಕೆ ತೆರಳಿದರು. ಧರ್ಮರಾಯನು ಮಯನು ನಿರ್ಮಿಸಿದ ಮಹಾ ಸಭಾಮಂಟಪಕ್ಕೆ ಬಂದು ಅಲ್ಲಿ ನೆರೆದಿದ್ದ ಉಳಿದ ರಾಜರನ್ನು ಬ್ರಾಹ್ಮಣರನ್ನು ಸರಿಯಾದ ರೀತಿಯಲ್ಲಿ ಸತ್ಕರಿಸಿ ಅವರೆಲ್ಲರನ್ನೂ ಕಳುಹಿಸಿಕೊಟ್ಟನು.

ಅರ್ಥ:
ಮುನಿಪ: ಋಷಿ; ಕಳುಹಿಸು: ಬೀಳ್ಕೊಡು; ವನ: ಬನ, ಕಾಡು; ತಿರುಗು: ಮರಳು; ಇತ್ತಲು: ಈ ಕಡೆ; ಜನಪ: ರಾಜ;ಬಂದು: ಆಗಮಿಸು; ಬಳಿಕ: ನಂತರ; ನಿರ್ಮಿತ: ರಚಿಸಿದ, ನಿರ್ಮಿಸಿದ; ಮಹಾ: ದೊಡ್ಡ; ಸಭೆ: ಓಲಗ; ಮುನಿ: ಋಷಿ; ಉಳಿದ: ಮಿಕ್ಕ; ಮಹೀಸುರ: ರಾಜ; ಜನ: ಮಾನವರ ಗುಂಪು; ಸಹಿತ: ಜೊತೆ; ಭೂಪಾಲ: ರಾಜ; ಶೇಷ: ಉಳಿದ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ಮಿಗೆ: ಅಧಿಕವಾಗಿ; ಸತ್ಕರಿಸು: ಗೌರವಿಸು; ಬೀಳ್ಕೊಡು: ಕಳುಹಿಸು; ಉಚಿತ: ಸರಿಯಾದ ರೀತಿ;

ಪದವಿಂಗಡಣೆ:
ಮುನಿಪ +ಕಳುಹಿಸಿಕೊಂಡು +ಬದರೀ
ವನಕೆ+ ತಿರುಗಿದನ್+ಅತ್ತಲ್+ಇತ್ತಲು
ಜನಪ+ ಬಂದನು +ಬಳಿಕ +ಮಯನಿರ್ಮಿತ +ಮಹಾಸಭೆಗೆ
ಮುನಿಗಳ್+ಉಳಿದವರನು+ ಮಹೀಸುರ
ಜನಸಹಿತ+ ಭೂಪಾಲ+ಶೇಷವನ್
ಅನುನಯದಿ +ಮಿಗೆ +ಸತ್ಕರಿಸಿ+ ಬೀಳ್ಕೊಟನ್+ಉಚಿತದಲಿ

ಅಚ್ಚರಿ:
(೧) ಜನಪ, ಭೂಪಾಲ – ಸಮನಾರ್ಥಕ ಪದ
(೨) ಮುನಿಪ, ಜನಪ – ಪ್ರಾಸ ಪದ
(೩) ಮ ಕಾರದ ಸಾಲು ಪದಗಳು – ಮಯನಿರ್ಮಿತ ಮಹಾಸಭೆಗೆ ಮುನಿಗಳುಳಿದವರನು ಮಹೀಸುರ

ಪದ್ಯ ೩೩: ವೇದವ್ಯಾಸರು ಏನು ಹೇಳಿ ತಮ್ಮ ಆಶ್ರಮಕ್ಕೆ ತೆರಳಿದರು?

ಇದುವೆ ರೇಖಾಮಾತ್ರ ಸರ್ವಾಂ
ಗದಲಿ ನಿನ್ನಯ ಮರೆಯದಿರು ಕೊಂ
ಕೊದರೆ ಕರುಣಾಜಲಧಿ ಜೈಸಲುವುಂಟು ಹರಿ ನಿನಗೆ
ಬೆದರದಿರು ವಿಗಡಿಸುವ ವಿಷಯಾ
ಸ್ಪದದೊಳೆಂದು ಮುನೀಂದ್ರನೈವರು
ಸುದತಿ ಸಹಿತನಿಬರಿಗೆ ಬುದ್ಧಿಯ ಹೇಳಿ ಹೊರವಂಟ (ಸಭಾ ಪರ್ವ, ೧೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಾನು ನಿಮಗೆ ತಿಳಿಸಿರುವುದು ಒಂದು ಗೆರೆಯಷ್ಟು ಮಾತ್ರ, ನಿನ್ನನ್ನು ಸರ್ವಾಂಗದಲ್ಲೂ ಮರೆಯದೆ ಎಚ್ಚರವಾಗಿಟ್ಟುಕೊಳ್ಳಬೇಕು. ಅಲ್ಪ ಮಾತ್ರವಾದರೂ ತಪ್ಪಿತೆಂದು ಹೆದರಬೇಡ, ನಿನ್ನ ಒಳ್ಳೆಯ ನಡತೆಯಿಂದ ನೀನು ಶ್ರೀಕೃಷ್ಣನ ಕೃಪಾಪಾತ್ರನಾಗಿ ಕಷ್ಟವನ್ನು ಜಯಿಸುವೆ. ನಿನಗೆ ವಿರುದ್ಧವಾಗಿ ಬರುವ ವಿಷಯಗಳಿಗೆ ಹೆದರಬೇಡ ಎಂದು ಹೇಳಿ ವ್ಯಾಸರು ಪಾಂಡವರಿಗೂ ದ್ರೌಪದಿಗೂ ಬುದ್ಧಿಯನ್ನು ಹೇಳಿ ತೆರಳಿದರು.

ಅರ್ಥ:
ರೇಖ: ಗೆರೆ; ಸರ್ವಾಂಗ: ಎಲ್ಲಾ ಅಂಗ/ದೇಹದ ಭಾಗ; ಮರೆ: ನೆನಪಿನಿಂದ ದೂರಮಾದು; ಕೊಂಕು: ವಕ್ರೋಕ್ತಿ, ವ್ಯಂಗ್ಯ; ಕರುಣ: ದಯೆ; ಜಲಧಿ: ಸಾಗರ; ಜೈಸಲು: ಗೆಲ್ಲಲು; ಹರಿ: ಕೃಷ್ಣ; ಬೆದರು: ಹೆದರು; ವಿಗಡ: ಶೌರ್ಯ, ಪರಾಕ್ರಮ; ವಿಷಯ: ಇಂದ್ರಿಯ ಗೋಚರವಾಗುವ; ಆಸ್ಪದ: ನೆಲೆ, ಅಶ್ರಯ; ಮುನಿ: ಋಷಿ; ಸುದತಿ: ಸುಂದರಿ, ಹೆಣ್ಣು; ಸಹಿತ: ಜೊತೆ;ಆನಿಬರಿಗೆ: ಅಷ್ಟು ಮಂದಿಗೆ; ಬುದ್ಧಿ: ತಿಳಿವು, ಅರಿವು; ಹೊರವಂಟ: ಹೊರಡು;

ಪದವಿಂಗಡಣೆ:
ಇದುವೆ +ರೇಖಾಮಾತ್ರ+ ಸರ್ವಾಂ
ಗದಲಿ+ ನಿನ್ನಯ +ಮರೆಯದಿರು +ಕೊಂ
ಕಿದರೆ+ ಕರುಣಾಜಲಧಿ+ ಜೈಸಲುವುಂಟು +ಹರಿ +ನಿನಗೆ
ಬೆದರದಿರು +ವಿಗಡಿಸುವ +ವಿಷಯ
ಆಸ್ಪದದೊಳ್+ಎಂದು +ಮುನೀಂದ್ರನ್+ಐವರು
ಸುದತಿ+ ಸಹಿತ್+ಅನಿಬರಿಗೆ+ ಬುದ್ಧಿಯ +ಹೇಳಿ+ ಹೊರವಂಟ

ಅಚ್ಚರಿ:
(೧) ದ್ರೌಪದಿಯನ್ನು ಸುದತಿ ಎಂದು ಕರೆದಿರುವುದು
(೨) ವ್ಯಾಸರ ಬುದ್ಧಿ ಮಾತು: ಬೆದರದಿರು ವಿಗಡಿಸುವ ವಿಷಯಾಸ್ಪದದೊಳೆಂದು; ಸರ್ವಾಂ
ಗದಲಿ ನಿನ್ನಯ ಮರೆಯದಿರು

ಪದ್ಯ ೩೨: ಯಾರಿಗೆ ಯಾರು ಶತ್ರುಗಳೆಂದು ವ್ಯಾಸರು ತಿಳಿಸಿದರು?

ಅಜ್ಞರವದಿರು ನೀವು ನೆರೆ ಸ
ರ್ವಜ್ಞರವದಿರಧರ್ಮನಿಷ್ಠರು
ಯಜ್ಞ ದೀಕ್ಷಿತರಿಂದು ನೀವು ಸಮಸ್ತ ಜಗವರಿಯೆ
ಅಜ್ಞರರಿಗಳು ನಿಪುಣರಿಗೆ ವರ
ಯಾಜ್ಞಿಕರಿಗಾಚಾರಹೀನರ
ಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ (ಸಭಾ ಪರ್ವ, ೧೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ವೇದವ್ಯಾಸರು ತಮ್ಮ ಮಾತನ್ನು ಮುಂದುವರಿಸುತ್ತಾ, ಕೌರವರು ತಿಳಿಯದವರು, ಅಜ್ಞಾನಿಗಳು, ನೀವು ಎಲ್ಲವನ್ನು ತಿಳಿದ ಸರ್ವಜ್ಞರು, ಅಧರ್ಮದಲ್ಲೇ ನಿಪುಣರಾದವರು ಅವರು, ನೀವು ಲೋಕವೇ ತಿಳಿದಮ್ತೆ ಯಜ್ಞದೀಕ್ಷಿತರಾದವರು. ತಿಳಿದವರಿಗೆ ತಿಳಿಯದವರು ಶತ್ರುಗಳು, ಆಚಾರಹೀನರಿಗೆ ಯಜ್ಞನಿರತರು ಶತ್ರುಗಳು. ತಿಳಿದವರು ಹೇಳುವ ಮಾತಿದು, ಇದು ಎಂದು ತಪ್ಪುವುದಿಲ್ಲ ಎಂದು ವ್ಯಾಸರು ತಿಳಿಸಿದರು.

ಅರ್ಥ:
ಅಜ್ಞ: ತಿಳಿವಳಿಕೆ ಇಲ್ಲದವನು, ದಡ್ಡ; ನೆರೆ: ಗುಂಪು; ಸರ್ವಜ್ಞ: ಎಲ್ಲಾ ತಿಳಿದವ; ಅಧರ್ಮ: ಕೆಟ್ಟ ಹಾದಿ; ನ್ಯಾಯವಲ್ಲದುದು; ನಿಷ್ಠ:ಶ್ರದ್ಧೆಯುಳ್ಳವನು; ಯಜ್ಞ: ಕ್ರತು, ಅಧ್ವರ; ದೀಕ್ಷೆ: ಸಂಸ್ಕಾರ, ವ್ರತ, ನಿಯಮ; ಸಮಸ್ತ: ಎಲ್ಲಾ; ಜಗ: ಜಗತ್ತು; ಅರಿ: ತಿಳಿ; ಅರಿ: ವೈರಿ; ನಿಪುಣ: ಪಾರಂಗತ, ಪ್ರವೀಣ; ವರ: ಶ್ರೇಷ್ಠ; ಯಾಜ್ಞಿಕ: ಯಜ್ಞ ಸಂಬಂಧಿತ ಕಾರ್ಯವನ್ನು ಮಾಡುವವ; ಆಚಾರ: ಕಟ್ಟುಪಾಡು, ಸಂಪ್ರದಾಯ; ಹೀನ:ಕೆಟ್ಟದು, ಕೀಳಾದುದು; ಅಭಿಜ್ಞ: ಚೆನ್ನಾಗಿ ತಿಳಿದವನು; ಮತ: ವಿಚಾರ; ತಪ್ಪದು: ಆದಮೇಲೆ; ಮುನಿ: ಋಷಿ; ನೃಪಾಲ: ರಾಜ; ಅವದಿರು: ಅವರು;

ಪದವಿಂಗಡಣೆ:
ಅಜ್ಞರ್+ಅವದಿರು +ನೀವು +ನೆರೆ+ ಸ
ರ್ವಜ್ಞರ್+ ಅವದಿರ್+ಅಧರ್ಮ+ನಿಷ್ಠರು
ಯಜ್ಞ +ದೀಕ್ಷಿತರಿಂದು+ ನೀವು+ ಸಮಸ್ತ+ ಜಗವರಿಯೆ
ಅಜ್ಞರ್+ಅರಿಗಳು +ನಿಪುಣರಿಗೆ +ವರ
ಯಾಜ್ಞಿಕರಿಗ್+ಆಚಾರ+ಹೀನರ್
ಅಭಿಜ್ಞ+ಮತವಿದು+ ತಪ್ಪದೆಂದನು+ ಮುನಿ +ನೃಪಾಲಂಗೆ

ಅಚ್ಚರಿ:
(೧) ಅಜ್ಞರು, ಸರ್ವಜ್ಞ, ಯಜ್ಞ, ಅಭಿಜ್ಞ – ಜ್ಞ ಅಕ್ಷರದ ಬಳಕೆ