ಪದ್ಯ ೨೫: ಧರ್ಮಜನೇಕೆ ದುಃಖಪಟ್ಟನು?

ಅನುಜ ತನುಜರು ಸಹಿತ ಕುಂತೀ
ತನಯ ದೂರಕೆ ಕಳುಹಿ ಮರಳಿದು
ಮನೆಗೆ ಬಂದನು ಕೃಷ್ಣವಿರಹ ವಿಶಾಲ ಖೇದದಲಿ
ಮುನಿಪ ವೇದವ್ಯಾಸ ಧೌಮ್ಯರ
ನನುಸರಿಸಿ ದಾಹಿಸುವ ದುಗುಡವ
ನನಿತುವನು ಬಿನ್ನವಿಸಿದನು ಮಿಡಿಮಿಡಿದು ಕಂಬನಿಯ (ಸಭಾ ಪರ್ವ, ೧೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ತನ್ನ ತಮ್ಮಂದಿರು, ಮಕ್ಕಳೊಡನೆ ಧರ್ಮಜನು ಶ್ರೀಕೃಷ್ನನನ್ನು ಬಹುದೂರದವರೆಗೆ ಕಳುಹಿಸಿ ಮನಗೆ ಬಂದನು. ಕೃಷ್ಣನ ಅಗಲಿಕೆಯ ಮಹಾದುಃಖವು ಅವನನ್ನು ಆವರಿಸಿತು. ವೇದವ್ಯಾಸ ಧೌಮ್ಯರೆದುರಿನಲ್ಲಿ ಮತ್ತೆ ಮತ್ತೆ ಕಣ್ಣಿರುಗರೆದು ತನ್ನ ದುಃಖವನ್ನು ಹೇಳಿಕೊಂಡನು.

ಅರ್ಥ:
ಅನುಜ: ತಮ್ಮ; ತನುಜ: ಮಗ; ಸಹಿತ: ಜೊತೆ; ತನಯ: ಮಗ; ದೂರ: ಬಹಳ ಅಂತರ; ಕಳುಹಿ: ಬೀಳ್ಕೊಟ್ಟು; ಮರಳು: ಹಿಂದಿರುಗು; ಮನೆ: ಆಲಯ; ಬಂದು: ಆಗಮಿಸು; ವಿರಹ: ವಿಯೋಗ; ವಿಶಾಲ: ತುಂಬ; ಖೇದ: ದುಃಖ; ಮುನಿ: ಋಷಿ; ಅನುಸರಿಸು: ಹಿಂಬಾಲಿಸು, ಕೂಡಿಸು; ದಾಹಿಸು: ಸುಡು; ದುಗುಡ: ದುಃಖ; ಅನಿತು: ಅಷ್ಟು; ಬಿನ್ನವಿಸು: ವಿಜ್ಞಾಪಿಸು; ಮಿಡಿಮಿಡಿ: ಕಣ್ಣೀರನ್ನು ಹೊಮ್ಮಿಸು; ಕಂಬನಿ: ಕಣ್ಣೀರು;

ಪದವಿಂಗಡಣೆ:
ಅನುಜ +ತನುಜರು +ಸಹಿತ +ಕುಂತೀ
ತನಯ+ ದೂರಕೆ+ ಕಳುಹಿ +ಮರಳಿದು
ಮನೆಗೆ +ಬಂದನು +ಕೃಷ್ಣ+ವಿರಹ+ ವಿಶಾಲ+ ಖೇದದಲಿ
ಮುನಿಪ +ವೇದವ್ಯಾಸ +ಧೌಮ್ಯರನ್
ಅನುಸರಿಸಿ+ ದಾಹಿಸುವ +ದುಗುಡವನ್
ಅನಿತುವನು+ ಬಿನ್ನವಿಸಿದನು +ಮಿಡಿಮಿಡಿದು +ಕಂಬನಿಯ

ಅಚ್ಚರಿ:
(೧) ಅನುಜ, ತನುಜ – ಪ್ರಾಸ ಪದ
(೨) ತನುಜ, ತನಯ – ಸಮನಾರ್ಥಕ ಪದ
(೩) ಅತೀವ ದುಃಖವನ್ನು ತಿಳಿಸುವ ಪರಿ – ವಿಶಾಲ ಖೇದ, ಮಿಡಿಮಿಡಿದು ಕಂಬನಿಯ

ಪದ್ಯ ೨೪: ಶ್ರೀಕೃಷ್ಣನ ಸುತ್ತಲೂ ಯಾರಿದ್ದರು?

ಕಲಿವಿಡೂರಥ ಸಾಂಬ ಸಾತ್ಯಕಿ
ದಳಪತಿ ಪ್ರದ್ಯುಮ್ನ ಯಾದವ
ಕುಲಸಚಿವನಕ್ರೂರನುದ್ಧವ ಚಾರು ಕೃತವರ್ಮ
ಬಲು ಪದಾತಿಯ ರಥ ನಿಕರದ
ಗ್ಗಳೆಯ ಗಜ ವಾಜಿಗಳ ಸಂದಣಿ
ಯೊಳಗೆ ನಿಂದರು ಕೃಷ್ಣರಾಯನ ರಥದ ಬಳಸಿನಲಿ (ಸಭಾ ಪರ್ವ, ೧೨ ಸಂಧಿ, ಪದ್ಯ)

ತಾತ್ಪರ್ಯ:
ಶೂರನಾದ ವಿಡೂರಥ, ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಯಾದವಕುಲಕ್ಕೆ ಸಚಿವನಾದ ಅಕ್ರೂರ, ಉದ್ಧವ, ಕೃತವರ್ಮ ಇವರೆಲ್ಲರೂ ಅಪಾರವಾಗಿದ್ದ ಚತುರಂಗ ಸೈನ್ಯದೊಡನೆ ಶ್ರೀಕೃಷ್ಣನ ಸುತ್ತಲೂ ನಿಂತಿದ್ದರು.

ಅರ್ಥ:
ಕಲಿ: ಶೂರ; ದಳಪತಿ: ಸೇನಾಧಿಪತಿ; ಕುಲ: ವಂಶ; ಸಚಿವ: ಮಂತ್ರಿ; ಚಾರು: ಸುಂದರ; ಬಲು: ಬಹಳ; ಪದಾತಿ: ಸೈನ್ಯ; ರಥ: ಬಂಡಿ; ನಿಕರ: ಗುಂಪು, ಸಮೂಹ; ಅಗ್ಗಳೆ: ಶ್ರೇಷ್ಠ; ಗಜ: ಆನೆ; ವಾಜಿ: ಕುದುರೆ; ಸಂದಣಿ: ಗುಂಪು; ನಿಂದರು: ನಿಲ್ಲು; ಬಳಸು:ಸುತ್ತುವರಿ, ಸುತ್ತುಗಟ್ಟು;

ಪದವಿಂಗಡಣೆ:
ಕಲಿ+ವಿಡೂರಥ +ಸಾಂಬ +ಸಾತ್ಯಕಿ
ದಳಪತಿ +ಪ್ರದ್ಯುಮ್ನ +ಯಾದವ
ಕುಲ+ಸಚಿವನ್+ಅಕ್ರೂರನ್+ಉದ್ಧವ +ಚಾರು +ಕೃತವರ್ಮ
ಬಲು +ಪದಾತಿಯ +ರಥ +ನಿಕರದ್
ಅಗ್ಗಳೆಯ +ಗಜ+ ವಾಜಿಗಳ +ಸಂದಣಿ
ಯೊಳಗೆ +ನಿಂದರು +ಕೃಷ್ಣರಾಯನ +ರಥದ +ಬಳಸಿನಲಿ

ಅಚ್ಚರಿ:
(೧) ಕೃಷ್ಣನ ಸುತ್ತವಿದ್ದ ಪರಾಕ್ರಮಿಗಳು – ವಿಡೂರಥ, ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಅಕ್ರೂರ, ಉದ್ಧವ, ಕೃತವರ್ಮ

ಪದ್ಯ ೨೩: ಶ್ರೀಕೃಷ್ಣನು ಯಾವ ರೀತಿ ನಟಿಸಿದನು?

ದೇಶದಲಿ ಕಾಲದಲಿ ದೆಸೆಯಲಿ
ರಾಶಿಯಲಿ ತಾರಾಗ್ರಹಾದಿಗ
ಳೈಸರಲಿ ತಾ ತನ್ನ ಚೇಷ್ಟೆಗಳಿವರ ವರ್ತನಕೆ
ಈಸು ಮಹಿಮೆಯ ಮರೆಸಿ ಲೋಕವಿ
ಳಾಸ ಚೇಷ್ಟೆಯನನುಸರಿಸಿ ನರ
ವೇಷವನು ನಟಿಸಿದನು ಹೂಳಿದು ನಿಜೋನ್ನತಿಯ (ಸಭಾ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದೇಶ, ಕಾಲ ದಿಕ್ಕು, ರಾಶಿ, ನಕ್ಷತ್ರ, ಗ್ರಹ ಇವೆಲ್ಲವುಗಳ ಚೇಷ್ಟೆಗೂ ತಾನೇ ಕಾರಣನಾದರೂ ಮನುಷ್ಯನಾಗಿ ಹುಟ್ಟಿ ಲೋಕದ ವರ್ತನೆಗನುಸಾರವಾಗಿ ನಡೆಯುತ್ತಾ ತನ್ನ ವೇಷಕ್ಕನುಗುಣವಾಗಿ ನಟಿಸಿದನು. ತನ್ನ ಹಿರಿಮೆಯನ್ನು ಹುದುಗಿಸಿಟ್ಟನು.

ಅರ್ಥ:
ದೇಶ: ರಾಷ್ಟ್ರ; ಕಾಲ: ಸಮಯ; ದೆಸೆ: ದಿಕ್ಕು; ರಾಶಿ: ನಕ್ಷತ್ರಗಳ ೧೨ ಗುಂಪುಗಳು; ತಾರ: ನಕ್ಷತ್ರ; ಗ್ರಹ: ಆಕಾಶಚರಗಳು; ಐಸು: ಅಷ್ಟು; ಚೇಷ್ಟೆ: ಚೆಲ್ಲಾಟ, ಸರಸ; ವರ್ತನ: ನಡವಳಿಕೆ, ನಡತೆ; ಈಸು: ಇಷ್ಟು; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಮರೆಸು: ಮರೆಯುವಂತೆ ಮಾಡು; ಲೋಕ: ಜಗತ್ತು; ವಿಲಾಸ: ಅಂದ, ಸೊಬಗು; ಅನುಸರಿಸು: ಕೂಡಿಸು; ಹಿಂಬಾಲಿಸು; ನರ: ಮನುಷ್ಯ; ವೇಷ: ಉಡುಗೆ ತೊಡುಗೆ; ನಟಿಸು: ಅಭಿನಯಿಸು; ಹೂಳು: ಹೂತು ಹಾಕು; ನಿಜ: ದಿಟ; ಉನ್ನತಿ: ಅಭ್ಯುದಯ, ಏಳಿಗೆ;

ಪದವಿಂಗಡಣೆ:
ದೇಶದಲಿ +ಕಾಲದಲಿ +ದೆಸೆಯಲಿ
ರಾಶಿಯಲಿ +ತಾರಾಗ್ರಹಾದಿಗಳ್
ಐಸರಲಿ +ತಾ +ತನ್ನ +ಚೇಷ್ಟೆಗಳ್+ಇವರ+ ವರ್ತನಕೆ
ಈಸು+ ಮಹಿಮೆಯ +ಮರೆಸಿ +ಲೋಕ+ವಿ
ಳಾಸ+ ಚೇಷ್ಟೆಯನ್+ಅನುಸರಿಸಿ+ ನರ
ವೇಷವನು+ ನಟಿಸಿದನು +ಹೂಳಿದು +ನಿಜೋನ್ನತಿಯ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ತಿಳಿಸುವ ವಾಕ್ಯ – ಈಸು ಮಹಿಮೆಯ ಮರೆಸಿ ಲೋಕವಿಳಾಸ ಚೇಷ್ಟೆಯನನುಸರಿಸಿ ನರವೇಷವನು ನಟಿಸಿದನು ಹೂಳಿದು ನಿಜೋನ್ನತಿಯ

ಪದ್ಯ ೨೨: ಕೃಷ್ಣನ ಬೀಳ್ಕೊಡುಗೆ ಹೇಗೆ ನಡೆಯಿತು?

ಆ ಶುಭಗ್ರಹದುದಯದಲಿ ತಿಥಿ
ರಾಶಿ ನಕ್ಷತ್ರಾದಿ ಪುಣ್ಯೋ
ದ್ಭಾಸಮಾನ ಮುಹೂರ್ತದಲಿ ಸುಸ್ವರ ವಿಳಾಸದಲಿ
ಭೂಸುರಾಶೀರ್ವಾದದಲಿ ಲ
ಕ್ಷ್ಮೀಶ ಪಯಣವ ಮಾಡಿದನು ಕ
ಟ್ಟಾಸುರದಲೊದರಿದವು ಘನಗಂಭೀರ ಭೇರಿಗಳು (ಸಭಾ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಒಂದು ಶುಭದಿನದಂದು, ಶುಭ ನಕ್ಷತ್ರ, ತಿಥಿ, ವಾರ, ರಾಶಿ, ಮುಹೂರ್ತದಲ್ಲಿ ಶ್ರೀಕೃಷ್ಣನು ದ್ವಾರಕೆಗೆ ಇಂದ್ರಪ್ರಸ್ಥನಗರದಿಂದ ಪ್ರಯಾಣಕ್ಕೆ ಸಿದ್ಧನಾದನು. ಬ್ರಾಹ್ಮಣರು ಆಶೀರ್ವಾದ ಮಾಡಿದರು, ಆಗ ಭಯಂಕರವಾದ ಭೇರಿಯ ನಿನಾದವು ಎಲ್ಲಡೆ ಗರ್ಜಿಸಿತು.

ಅರ್ಥ:
ಶುಭ: ಮಂಗಳ; ಗ್ರಹ: ಆಕಾಶಚರಗಳು; ಉದಯ: ಹುಟ್ಟು; ತಿಥಿ: ದಿನ; ರಾಶಿ: ಮೇಶ ಇತ್ಯಾದಿ ನಕ್ಷತ್ರಗಳ ಗುಂಪು; ನಕ್ಷತ್ರ: ತಾರ; ಪುಣ್ಯ: ಒಳ್ಳೆಯ; ಭಾಸ: ಹೊಳಪು, ಕಾಂತಿ, ತೋರು; ಮುಹೂರ್ತ: ಸಮಯ; ಸುಸ್ವರ: ನಿನಾದ, ನಾದ; ವಿಳಾಸ: ಉಲ್ಲಾಸ, ಅಂದ, ಸೊಬಗು; ಭೂಸುರ: ಬ್ರಾಹ್ಮಣ; ಆಶೀರ್ವಾದ: ಅನುಗ್ರಹ; ಪಯಣ: ಪ್ರಯಾಣ; ಕಟ್ಟಾಸುರ: ಅತ್ಯಂತ ಭಯಂಕರ; ಒದರು: ಕಿರುಚು, ಗರ್ಜಿಸು; ಘನ: ಶ್ರೇಷ್ಠ; ಗಂಭೀರ: ಆಳವಾದ, ಗಹನವಾದ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ;

ಪದವಿಂಗಡಣೆ:
ಆ +ಶುಭ+ಗ್ರಹದ್+ಉದಯದಲಿ +ತಿಥಿ
ರಾಶಿ +ನಕ್ಷತ್ರಾದಿ +ಪುಣ್ಯೋದ್
ಭಾಸಮಾನ +ಮುಹೂರ್ತದಲಿ+ ಸುಸ್ವರ +ವಿಳಾಸದಲಿ
ಭೂಸುರ+ಆಶೀರ್ವಾದದಲಿ +ಲ
ಕ್ಷ್ಮೀಶ +ಪಯಣವ +ಮಾಡಿದನು +ಕ
ಟ್ಟಾಸುರದಲ್+ಒದರಿದವು +ಘನಗಂಭೀರ+ ಭೇರಿಗಳು

ಪದ್ಯ ೨೧: ಕೃಷ್ಣನ ಬಗ್ಗೆ ವೈಶಂಪಾಯನರು ಏನೆಂದು ಹೇಳಿದರು?

ಯಾದವರು ಪಾಂಡವರು ತನ್ನವ
ರಾದುದದುವೆ ಕುಟುಂಬವದು ಮಹ
ದಾದಿ ಸೃಷ್ಟಿಗದಾರ ರಕ್ಷೆ ಕುಟುಂಬವಾವನದು
ಆದರಿಸಿದನು ಕೆಲಬರನು ಹೊರ
ಗಾದವರು ಕೆಲರಾಯ್ತು ಹರಿ ಮಾ
ಯಾ ದುರಾಗ್ರಹ ವೃತ್ತಿಯೀ ಹದನೆಂದನಾ ಮುನಿಪ (ಸಭಾ ಪರ್ವ, ೧೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಯಾದವರು ಪಾಂಡವರಿಬ್ಬರೂ ಕೃಷ್ಣನ ಕುಟುಂಬದವರೇ, ಹಾಗೆ ನೋಡಿದರೆ ಆದಿಯಾದ ಈ ಜಗತ್ತು ಸೃಷ್ಟಿಗೆ ಕೃಷ್ಣನೇ ರಕ್ಷಕ, ಅವನ ಮಾಯಾವೃತ್ತಿಯಿಂದಲೇ ಅವನಿಗೆ ಬೇಕಾದವರು ವಿರೋಧಿಗಳು ಎಂದು ತೋರುತ್ತಾರೆ ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ತಿಳಿಸಿದರು.

ಅರ್ಥ:
ಕುಟುಂಬ: ಮನೆತನ, ವಂಶ; ಮಹದ್: ಹಿರಿಯ, ಶ್ರೇಷ್ಠ; ಆದಿ: ಮೊದಲು; ಸೃಷ್ಟಿ: ಹುಟ್ಟು; ರಕ್ಷೆ: ಕಾಪು, ಕಾಯುವಿಕೆ; ಆದರಿಸು: ಗೌರವಿಸು; ಕೆಲಬ: ಕೆಲವು; ಹೊರಗೆ: ಆಚೆ; ಹರಿ: ವಿಷ್ಣು; ಮಾಯ: ಇಂದ್ರಜಾಲ, ಭ್ರಾಂತಿ; ದುರಾಗ್ರಹ: ಹಟಮಾರಿತನ, ಮೊಂಡ; ವೃತ್ತಿ: ಕೆಲಸ; ಹದ: ಸ್ಥಿತಿ; ಮುನಿ: ಋಷಿ;

ಪದವಿಂಗಡಣೆ:
ಯಾದವರು +ಪಾಂಡವರು +ತನ್ನವರ್
ಆದುದ್+ಅದುವೆ +ಕುಟುಂಬವದು +ಮಹದ್
ಆದಿ +ಸೃಷ್ಟಿಗದ್+ಆರ +ರಕ್ಷೆ +ಕುಟುಂಬವ್+ಅವನದು
ಆದರಿಸಿದನು+ ಕೆಲಬರನು +ಹೊರ
ಗಾದವರು +ಕೆಲರಾಯ್ತು +ಹರಿ+ ಮಾ
ಯಾ +ದುರಾಗ್ರಹ +ವೃತ್ತಿ+ಈ +ಹದನ್+ಎಂದನಾ +ಮುನಿಪ

ಪದ್ಯ ೨೦: ಶ್ರೀಕೃಷ್ಣನು ಉಳಿದವರ ಬಳಿ ಹೇಗೆ ಮಾತಾಡಿದನು?

ಎಂದು ಬುದ್ಧಿಯ ಹೇಳಿ ಪಾರ್ಥನ
ನಂದನನ ಕರೆಸಿದನು ತಾಯ್ಸಹಿ
ತೆಂದನವರಿಗೆ ನಯದಲುಚಿತ ಪ್ರೀತಿ ವಚನದಲಿ
ಬಂದು ಕುಂತಿಗೆ ಸಾರನಗೆ ನುಡಿ
ಯಿಂದ ವಿನಯವ ಮಾಡಿ ಪಾಂಡವ
ನಂದನರ ಮನ್ನಿಸಿದನತಿ ಕಾರುಣ್ಯಭಾವದಲಿ (ಸಭಾ ಪರ್ವ, ೧೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದ್ರೌಪದಿಗೆ ಬುದ್ಧಿಯ ಮಾತುಗಳನ್ನು ಹೇಳಿ, ಸುಭದ್ರೆ ಮತ್ತು ಅಭಿಮನ್ಯುರನ್ನು ಕರೆಸಿ ಪ್ರೀತಿಯ ಮಾತುಗಳನ್ನಾಡಿದನು. ನಂತರ ಕುಂತಿಯ ಬಳಿಗೆ ಹೋಗಿ ಸಂತೋಷದಿಂದ ವಿನಯ, ಪ್ರೀತಿ ಭರಿತವಾದ ಮಾತುಗಳನ್ನಾಡಿ, ಪಾಂಡವರನ್ನು ಕರುಣೆಯಿಂದ ಅನುಗ್ರಹಿಸಿದನು.

ಅರ್ಥ:
ಬುದ್ಧಿ: ತಿಳಿವು, ಅರಿವು; ಹೇಳು: ತಿಳಿಸು; ನಂದನ: ಮಗ; ಕರೆಸು: ಬರೆಮಾಡು; ತಾಯಿ: ಮಾತೆ; ಸಹಿತ; ಜೊತೆ; ನಯ: ನುಣುಪು, ಮೃದುತ್ವ; ಉಚಿತ: ಸರಿಯಾದ; ಪ್ರೀತಿ: ಒಲವು; ವಚನ: ನುಡಿ; ಬಂದು: ಆಗಮಿಸು; ಸಾರ: ಶ್ರೇಷ್ಠವಾದ, ಉತ್ಕೃಷ್ಟವಾದ; ನಗೆ: ಸಂತಸ; ನುಡಿ: ಮಾತು; ವಿನಯ: ಸೌಜನ್ಯ; ಮನ್ನಿಸು: ಗೌರವಿಸು, ಅನುಗ್ರಹಿಸು; ಅತಿ: ಬಹಳ; ಕಾರುಣ್ಯ: ದಯೆ; ಭಾವ: ಭಾವನೆ, ಸಂವೇದನೆ;

ಪದವಿಂಗಡಣೆ:
ಎಂದು+ ಬುದ್ಧಿಯ +ಹೇಳಿ +ಪಾರ್ಥನ
ನಂದನನ+ ಕರೆಸಿದನು+ ತಾಯ್+ಸಹಿತ್
ಎಂದನ್+ಅವರಿಗೆ +ನಯದಲ್+ಉಚಿತ +ಪ್ರೀತಿ +ವಚನದಲಿ
ಬಂದು +ಕುಂತಿಗೆ +ಸಾರ+ನಗೆ +ನುಡಿ
ಯಿಂದ +ವಿನಯವ+ ಮಾಡಿ +ಪಾಂಡವ
ನಂದನರ+ ಮನ್ನಿಸಿದನ್+ಅತಿ+ ಕಾರುಣ್ಯ+ಭಾವದಲಿ

ಅಚ್ಚರಿ:
(೧) ನಂದನ – ೨, ೬ ಸಾಲಿನ ಮೊದಲ ಪದ
(೨) ವಚನ, ನುಡಿ – ಸಮನಾರ್ಥಕ ಪದ