ಪದ್ಯ ೧೯: ಹೇಗೆ ಬಾಳಬೇಕೆಂದು ಕೃಷ್ಣನು ಉಪದೇಶಿಸಿದನು?

ಸೋತು ನಡೆವುದು ಹಿರಿಯರಲಿ ಸಂ
ಪ್ರೀತಿಯನು ಸುಜನರಲಿ ನಿರ್ಮಳ
ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ
ಖ್ಯಾತಿಯನು ಧರ್ಮದಲಿ ವೈರಿ
ವ್ರಾತದಲಿ ಪೌರುಷವನಖಿಳ
ಜ್ಞಾತಿಗಳಲೆಚ್ಚರಿಕೆಯೊಳಗಿಹುದೆಂದನಸುರಾರಿ (ಸಭಾ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಹಿರಿಯರಲ್ಲಿ ವಿನಯ, ಸಜ್ಜನರಲ್ಲಿ ಪ್ರೀತಿ, ಪರಿವಾರ, ಊರಿನವರು, ರಾಜ್ಯದ ಎಲ್ಲಾ ಪ್ರದೇಶದವರಲ್ಲೂ ನಿರ್ಮಲವಾದ ನೀತಿಯನ್ನು ಅನುಸರಿಸಬೇಕು. ಧರ್ಮದ ಆಚರಣೆ ಮಾಡುವವನೆಂಬ ಕೀರ್ತಿಯನ್ನು ಪಡೆಯಬೇಕು. ವೈರಿಗಳೊಡನೆ ಪೌರುಷವನ್ನು ತೋರಿಸಬೇಕು. ದಾಯಾದಿಗಳೊಡನೆ ಎಚ್ಚರದಿಂದಿರಬೇಕು ಎಂದು ಶ್ರೀಕೃಷ್ಣನು ಉಪದೇಶಿಸಿದನು.

ಅರ್ಥ:
ಸೋತು: ಪರಾಭವ; ನಡೆ: ಮುಂದೆ ಹೋಗು; ಹಿರಿಯರು: ದೊಡ್ಡವರು; ಸಂಪ್ರೀತಿ: ಒಲವು, ಪ್ರೀತಿ; ಸುಜನ: ಒಳ್ಳೆಯ ಜನ; ನಿರ್ಮಳ: ಶುಭ್ರ, ಸ್ವಚ್ಛತೆ; ನೀತಿ: ಮಾರ್ಗ ದರ್ಶನ, ಮುನ್ನಡೆಸುವಿಕೆ; ಪರಿವಾರ: ಬಂಧುಜನ; ಪುರಜನ: ಊರಿನ ಜನರು; ನಾಡು: ಊರು, ರಾಷ್ಟ್ರ; ಬೀಡು: ಗುಂಪು; ಖ್ಯಾತಿ: ಪ್ರಸಿದ್ಧ; ಧರ್ಮ: ಧಾರಣೆ ಮಾಡಿದುದು, ಆಚಾರ; ವೈರಿ: ಹಗೆ, ಶತ್ರು; ವ್ರಾತ: ಗುಂಪು; ಪೌರುಷ: ಶೌರ್ಯ, ಪರಾಕ್ರಮ; ಅಖಿಳ: ಎಲ್ಲಾ; ಜ್ಞಾತಿ: ದಾಯಾದಿ; ಎಚ್ಚರ: ಜೋಪಾನ, ಹುಷಾರು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಸೋತು +ನಡೆವುದು +ಹಿರಿಯರಲಿ +ಸಂ
ಪ್ರೀತಿಯನು +ಸುಜನರಲಿ +ನಿರ್ಮಳ
ನೀತಿಯನು +ಪರಿವಾರ +ಪುರಜನ+ ನಾಡು +ಬೀಡಿನಲಿ
ಖ್ಯಾತಿಯನು+ ಧರ್ಮದಲಿ +ವೈರಿ
ವ್ರಾತದಲಿ+ ಪೌರುಷವನ್+ಅಖಿಳ
ಜ್ಞಾತಿಗಳಲ್+ಎಚ್ಚರಿಕೆಯೊಳಗ್+ಇಹುದೆಂದನ್+ಅಸುರಾರಿ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಸಂಪ್ರೀತಿಯನು ಸುಜನರಲಿ; ನಿರ್ಮಳ ನೀತಿಯನು; ಪರಿವಾರ ಪುರಜನ
(೨) ಪ್ರೀತಿ, ಜ್ಞಾತಿ, ನೀತಿ, ಖ್ಯಾತಿ – ಪ್ರಾಸ ಪದಗಳು

ಪದ್ಯ ೧೮: ಯಾವ ರಾಜರು ದ್ಯೂತದಿಂದ ಕೆಟ್ಟರು?

ವಿಷವ ಗೆಲಿದಿರಿ ಹಿಂದೆ ಕಿಚ್ಚಿನ
ದೆಸೆಯಲುಳಿದಿರಿ ದಾಯಿಗರು ದು
ರ್ವ್ಯಸನಿಗಳು ದುಸ್ಸಹವು ನಿಮ್ಮಭ್ಯುದಯವಹಿತರಿಗೆ
ವಿಷಮವಿವಲೇ ದ್ಯೂತ ಮೃಗಯಾ
ವ್ಯಸನ ಪಾರ್ಥಿವ ಜಾತಿಗವು ದು
ರ್ವಿಷಯವಿದರಲಿ ನೆಗ್ಗಿದರು ನಳದಶರಥಾದಿಗಳು (ಸಭಾ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಈ ಹಿಂದೆ ನಿಮ್ಮ ದಾಯಾದಿಗಳಾದ ಕೌರವರು ನಿಮಗೆ ವಿಷ ನೀಡಿದ್ದರು ಅದರಿಂದ ನೀವು ಪಾರಾದಿರಿ, ಅರಗಿನ ಮನೆಯ ಬೆಂಕಿಯಿಂದ ಪಾರಾದಿರಿ, ನಿಮ್ಮ ದಾಯಾದಿಗಳು ದುರ್ವ್ಯಸನಿಗಳು, ನಿಮ್ಮ ಏಳಿಗೆಯನ್ನು ಅವರು ಸಹಿಸರು, ರಾಜರಿಗೆ ಅಪದೆಸೆ ಬಂದೊದಗಳು ಎರಡು ದುರ್ವಿಷಯಗಳಿವೆ, ಒಂದು ಜೂಜು, ಇದರಿಂದ ನಳರಾಜನು ಕೆಟ್ಟರು. ಇನ್ನೊಂದು ಬೇಟೆ ಇದರಿಂದ ದಶರಥನು ಕೆಟ್ಟನು ಎಂದು ಕೃಷ್ಣನು ದ್ರೌಪದಿಯನ್ನು ಎಚ್ಚರಿಸಿದನು.

ಅರ್ಥ:
ವಿಷ: ನಂಜು, ಗರಲ; ಗೆಲಿದು: ಜಯ, ಹೊರಬಂದಿರಿ; ಹಿಂದೆ: ಪೂರ್ವದಲ್ಲಿ; ಕಿಚ್ಚು: ಎದೆಗುದಿ, ಅಗ್ನಿ; ದೆಸೆ: ಕಾರಣ; ಉಳಿ: ಪಾರಾಗು; ದಾಯಿದಿ: ಚಿಕ್ಕಪ್ಪ ದೊಡ್ಡಪ್ಪ ಮಕ್ಕಳು; ದುರ್ವ್ಯಸನಿ: ಕೆಟ್ಟ ಅಭ್ಯಾಸವಿರುವವ; ದುಸ್ಸಹ: ಸಹಿಸದಿರು; ಅಭ್ಯುದಯ: ಏಳಿಗೆ; ಅಹಿತರು: ವೈರಿ; ದ್ಯೂತ: ಜೂಜು; ಮೃಗ: ಪ್ರಾಣಿ; ಪಾರ್ಥಿವ; ರಾಜ; ಜಾತಿ: ವಂಶ; ನೆಗ್ಗು: ಕುಗ್ಗು, ಕುಸಿ; ಆದಿ: ಮುಂತಾದ;

ಪದವಿಂಗಡಣೆ:
ವಿಷವ +ಗೆಲಿದಿರಿ+ ಹಿಂದೆ +ಕಿಚ್ಚಿನ
ದೆಸೆಯಲ್+ಉಳಿದಿರಿ +ದಾಯಿಗರು +ದು
ರ್ವ್ಯಸನಿಗಳು +ದುಸ್ಸಹವು+ ನಿಮ್ಮ್+ಅಭ್ಯುದಯವ್+ಅಹಿತರಿಗೆ
ವಿಷಮವಿವಲೇ+ ದ್ಯೂತ +ಮೃಗಯಾ
ವ್ಯಸನ+ ಪಾರ್ಥಿವ +ಜಾತಿಗವು+ ದು
ರ್ವಿಷಯವ್+ಇದರಲಿ +ನೆಗ್ಗಿದರು +ನಳ+ದಶರಥಾದಿಗಳು

ಅಚ್ಚರಿ:
(೧) ಕ್ಷತ್ರಿಯರಿಗೆ ವಿಷಮ – ವಿಷಮವಿವಲೇ ದ್ಯೂತ ಮೃಗಯಾವ್ಯಸನ ಪಾರ್ಥಿವ ಜಾತಿಗವು
(೩) ದ ಕಾರದ ಸಾಲು ಪದ – ದೆಸೆಯಲುಳಿದಿರಿ ದಾಯಿಗರು ದುರ್ವ್ಯಸನಿಗಳು ದುಸ್ಸಹವು

ಪದ್ಯ ೧೭: ಕೃಷ್ಣನು ದ್ರೌಪದಿಗೆ ಯಾವ ಸೂಚನೆಯನ್ನು ನೀಡಿದನು?

ನಂಬದಿರು ಸಿರಿಯನು ಪತಿವ್ರತೆ
ಯೆಂಬರಿಗೆ ಗುರುನೀ ವಿಷಾದ ವಿ
ಡಂಬ ಹರುಷಂಗಳಲಿ ನೀನಿಹುದೇಕ ಚಿತ್ತದಲಿ
ತುಂಬುವುದು ಬತ್ತುವುದು ರಾಜ್ಯದ
ಡೊಂಬು ಹರಿಮೇಖಲೆಯ ವಿದ್ಯಾ
ಡಂಬರವಿದೆಂದಸುರ ರಿಪು ಸೂಚಿಸಿದನಂಗನೆಗೆ (ಸಭಾ ಪರ್ವ, ೧೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಪ್ರೀತಿಯಿಂದ ಬರೆಮಾಡಿ, ಎಲೈ ಪಾಂಚಾಲಿಯೆ ನೀನು ಪತಿವ್ರತಾ ಶಿರೋಮಣಿ, ನೀನು ಐಶ್ವರ್ಯವನ್ನು ನಂಬಬೇಡ, ವಿಷಾದ, ಸಂತೋಷ, ತೊಂದರೆಗಳುಂಟಾದಾಗ ನೀನು ಸಮಚಿತ್ತದಲ್ಲಿ ಅವೆಲ್ಲವನ್ನೂ ಸ್ವೀಕರಿಸು. ರಾಜ್ಯದ ಆನಂದವು ಒಮ್ಮೆ ತುಂಬುತ್ತದೆ, ಒಮ್ಮೆ ಬತ್ತುತ್ತದೆ, ಇದು ಇಂದ್ರಜಾಲವಿದ್ಯೆಯ ಆಡಂಬರದ ರೀತಿ ಎಂದು ಶ್ರೀಕೃಷ್ಣನು ದ್ರೌಪದಿಗೆ ಸೂಚಿಸಿದನು.

ಅರ್ಥ:
ನಂಬು: ವಿಶ್ವಾಸವಿಡು; ಸಿರಿ: ಐಶ್ವರ್ಯ; ಪತಿವ್ರತೆ: ಸಾಧ್ವಿ, ಗರತಿ; ಗುರು: ಶ್ರೇಷ್ಠ, ಶಿರೋಮಣಿ; ವಿಷಾದ: ದುಃಖ; ವಿಡಂಬ: ಅನುಸರಣೆ, ಆಡಂಬರ; ಹರುಷ: ಸಂತೋಷ; ಚಿತ್ತ: ಮನಸ್ಸು; ತುಂಬು: ಪೂರ್ಣ; ಬತ್ತು: ಬರಡು; ಡೊಂಬ: ವಂಚಕ; ಹರಿಮೇಖಲೆ: ಇಂದ್ರಜಾಲ; ವಿದ್ಯ: ಜ್ಞಾನ; ಆಡಂಬರ: ತೋರಿಕೆ, ಢಂಭ; ಸೂಚಿಸು: ತೋರಿಸಿಕೊಡು, ತೋರಿಸು; ಅಂಗನೆ: ಹೆಣ್ಣು;

ಪದವಿಂಗಡಣೆ:
ನಂಬದಿರು +ಸಿರಿಯನು +ಪತಿವ್ರತೆ
ಯೆಂಬರಿಗೆ +ಗುರುನೀ+ ವಿಷಾದ+ ವಿ
ಡಂಬ +ಹರುಷಂಗಳಲಿ +ನೀನ್+ಇಹುದ್+ಏಕ +ಚಿತ್ತದಲಿ
ತುಂಬುವುದು +ಬತ್ತುವುದು +ರಾಜ್ಯದ
ಡೊಂಬು +ಹರಿಮೇಖಲೆಯ+ ವಿದ್ಯ
ಆಡಂಬರವಿದೆಂದ್+ಅಸುರರಿಪು+ ಸೂಚಿಸಿದನ್+ಅಂಗನೆಗೆ

ಅಚ್ಚರಿ:
(೧) ಕೃಷ್ಣನ ಸೂಚನೆ: ವಿಡಂಬ, ವಿಷಾದ
(೨) ದ್ರೌಪದಿಯನ್ನು ಹೊಗಳುವ ಪರಿ – ಪತಿವ್ರತೆ ಯೆಂಬರಿಗೆ ಗುರುನೀ

ಪದ್ಯ ೧೬: ಕೃಷ್ಣನು ಪ್ರೀತಿಯಿಂದ ದ್ರೌಪದಿಯನ್ನು ಹೇಗೆ ಕರೆದನು?

ಏಳೆನುತ ತೆಗೆದಪ್ಪಿದನು ಕರು
ಣಾಳು ಪರಿತೋಷಾಶ್ರುಪೂರ್ಣವಿ
ಶಾಲ ಲೋಚನ ನೋಡಿದನು ತನ್ನವರನೊಲವಿನಲಿ
ಬಾಲಕಿಯೆ ಬಾ ತಂಗಿ ಬಾ ನೀ
ಲಾಳಕಿಯೆ ಬಾಯೆನುತ ಮಿಗೆ ಪಾಂ
ಚಾಲೆಯನು ಕರೆದಸುರರಿಪು ಸೂಚಿಸಿದನಂಗನೆಗೆ (ಸಭಾ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೃಷ್ಣನ ಪಾದಗಳಿಗೆ ನಮಸ್ಕರಿಸಲು ಆಕೆಯನ್ನು ಮೇಲಕ್ಕೆತ್ತಿ ಸಂತೋಷದ ಕಣ್ಣೀರಿನಿಂದ ತುಂಬಿದ ವಿಶಾಲ ಕಣ್ಣುಗಳಿಂದ ಪಾಂಡವರನ್ನು ನೋಡಿದನು. ದ್ರೌಪದಿಯನ್ನು ಪ್ರೀತಿಯಿಂದ ಬಾಲಕಿ, ತಂಗಿ, ನೀಲಾಳಕಿ ಎಂದು ಮೇಲೆತ್ತಿ ತಬ್ಬಿಕೊಂಡು ಆಕೆಗೆ ಕೆಲವು ಸೂಚನೆಗಳನ್ನು ನೀಡಿದನು.

ಅರ್ಥ:
ಏಳು: ಮೇಲಕ್ಕೆ ಬಾ; ಅಪ್ಪು: ತಬ್ಬಿಕೊ; ಕರುಣ: ದಯೆ; ಪರಿತೋಷ: ಸಂತುಷ್ಟಿ; ಆಶ್ರು: ಕಣ್ಣೀರು; ಪೂರ್ಣ: ತುಂಬಿದ; ವಿಶಾಲ: ಅಗಲ; ಲೋಚನ: ಕಣ್ಣು; ನೋಡು: ವೀಕ್ಷಿಸು; ಒಲವು: ಪ್ರೀತಿ; ಬಾಲಕಿ: ಹುಡುಗಿ; ತಂಗಿ: ಅನುಜೆ; ನೀಲಾಳಕಿ: ಉದ್ದವಾದ ಕೂದಲು; ಆಳಕ: ಕೇಶ; ಬಾ: ಆಗಮಿಸು; ಕರೆದು: ಬರಮಾಡಿ; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಸೂಚಿಸು: ತೋರಿಸು, ಹೇಳು; ಅಂಗನೆ: ಬಾಲೆ;

ಪದವಿಂಗಡಣೆ:
ಏಳ್+ಎನುತ +ತೆಗೆದಪ್ಪಿದನು+ ಕರು
ಣಾಳು +ಪರಿತೋಷ+ಆಶ್ರುಪೂರ್ಣ+ವಿ
ಶಾಲ +ಲೋಚನ +ನೋಡಿದನು +ತನ್ನವರನ್+ಒಲವಿನಲಿ
ಬಾಲಕಿಯೆ+ಬಾ +ತಂಗಿ +ಬಾ +ನೀ
ಲಾಳಕಿಯೆ +ಬಾ+ಎನುತ +ಮಿಗೆ +ಪಾಂ
ಚಾಲೆಯನು +ಕರೆದ್+ಅಸುರರಿಪು+ ಸೂಚಿಸಿದನ್+ಅಂಗನೆಗೆ

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಬಗೆ – ಬಾಲಕಿ, ತಂಗಿ, ನೀಲಾಳಕಿ, ಪಾಂಚಾಲಿ, ಅಂಗನೆ
(೨) ಪ್ರೀತಿಯಿಂದ ನೋಡುವ ಪರಿ – ಪರಿತೋಷಾಶ್ರುಪೂರ್ಣ ವಿಶಾಲ ಲೋಚನ ನೋಡಿದನು ತನ್ನವರನೊಲವಿನಲಿ

ಪದ್ಯ ೧೫: ದ್ರೌಪದಿಯು ಕೃಷ್ಣನನ್ನು ಹೇಗೆ ಸ್ಮರಿಸಿದಳು?

ಮಸಗಿದರೆ ಮಾಗಧನು ಯಜ್ಞವ
ಮಿಸುಕಲೀವನೆ ಚೈದ್ಯನಿಂದು
ಬ್ಬಸವ ಮಾಡಿದೊಡೆಮ್ಮ ಕೈಯಲಿ ಹರಿವ ಹೆಕ್ಕಳವೆ
ಶಿಶುವೊರಲಿದರೆ ಕಂಬದಲಿ ತೋ
ರಿಸಿದ ಕರುಣಾ ಜಲಧಿಯೇ ಪಾ
ಲಿಸಿದೆಲಾ ಪಾಂಡವರನೆಂದಳು ಹೊರಳಿ ಚರಣದಲಿ (ಸಭಾ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಜರಾಸಂಧನು ಕೆರಳಿದ್ದರೆ ಯಜ್ಞವಾಗಲು ಬಿಡುತ್ತಿದ್ದನೇ? ಶಿಶುಪಾಲನ ವಿರೋಧವನ್ನು ನಾವು ಪರಿಹರಿಸಲಾಗುತ್ತಿತ್ತೇ, ಯಾವ ರೀತಿ ಬಾಲಕ ಪ್ರಹ್ಲಾದನು ಮೊರೆಯಿಟ್ಟಾಗ ಕಂಬದಿಂದ ಹೊರಬಂದು ಪ್ರಹ್ಲಾದನನ್ನು ರಕ್ಷಿಸಿದನೋ ಅದೇ ರೀತಿ ದಯಾಸಾಗರನಾದ ಕೃಷ್ಣನು ಪಾಂಡವರನ್ನು ಕಾಪಾಡಿದನು ಎನ್ನುತ್ತಾ ದ್ರೌಪದಿಯು ಕೃಷ್ಣನ ಪಾದಗಳಿಗೆ ನಮಸ್ಕರಿಸಿದಳು.

ಅರ್ಥ:
ಮಸಗು: ಹರಡು; ಕೆರಳು; ತಿಕ್ಕು; ಮಾಗಧ: ಜರಾಸಂಧ; ಯಜ್ಞ: ಕ್ರತು, ಅಧ್ವರ; ಮಿಸುಕು: ಅಲುಗಾಡು, ಅಲ್ಲಾಟ; ಚೈದ್ಯ: ಶಿಶುಪಾಲ; ಉಬ್ಬಸ: ಸಂಕಟ, ಮೇಲುಸಿರು; ಕೈ: ಹಸ್ತ; ಹರಿವ: ಚಲಿಸು, ಸಾಗು; ಹೆಕ್ಕಳ: ಹೆಚ್ಚಳ, ಅತಿಶಯ; ಶಿಶು: ಮಕ್ಕಳು; ಒರಲು: ಅರಚು, ಕೂಗಿಕೊಳ್ಳು; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ತೋರು: ಗೋಚರಿಸು; ಕರುಣ: ದಯೆ; ಜಲಧಿ: ಸಾಗರ; ಪಾಲಿಸು: ರಕ್ಷಿಸು; ಹೊರಳು: ತಿರುವು, ಬಾಗು; ಚರಣ: ಪಾದ;

ಪದವಿಂಗಡಣೆ:
ಮಸಗಿದರೆ+ ಮಾಗಧನು +ಯಜ್ಞವ
ಮಿಸುಕಲ್+ಈವನೆ +ಚೈದ್ಯನಿಂದ್
ಉಬ್ಬಸವ +ಮಾಡಿದೊಡ್+ಎಮ್ಮ +ಕೈಯಲಿ +ಹರಿವ +ಹೆಕ್ಕಳವೆ
ಶಿಶುವ್+ಒರಲಿದರೆ +ಕಂಬದಲಿ +ತೋ
ರಿಸಿದ+ ಕರುಣಾ +ಜಲಧಿಯೇ +ಪಾ
ಲಿಸಿದೆಲಾ +ಪಾಂಡವರನ್+ಎಂದಳು +ಹೊರಳಿ +ಚರಣದಲಿ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಮಸಗಿದರೆ ಮಾಗಧನು; ಹರಿವ ಹೆಕ್ಕಳವೆ;ಪಾಲಿಸಿದೆಲಾ ಪಾಂಡವರ
(೨) ಉಪಮಾನದ ಪ್ರಯೋಗ – ಶಿಶುವೊರಲಿದರೆ ಕಂಬದಲಿ ತೋರಿಸಿದ ಕರುಣಾ ಜಲಧಿಯೇ ಪಾ
ಲಿಸಿದೆಲಾ ಪಾಂಡವರನ್
(೩) ನಮಸ್ಕರಿಸು ಎಂದು ಹೇಳಲು – ಹೊರಳಿ ಚರಣದಲಿ