ಪದ್ಯ ೮: ಧರ್ಮಜನು ಯಾರಂತೆ ಮೆರೆದನು?

ಮನ್ನಿಸಿದನವರುಗಳನುಡುಗೊರೆ
ಹೊನ್ನು ವಿವಿಧಾಭರಣ ಪಶುಗಳ
ಲುನ್ನತಾಶೀರ್ವಾದ ವಚನದೊಳವನಿಪನ ಹರಸಿ
ಸನ್ನುತರು ತಮ್ಮಾಶ್ರಮಕೆ ಸಂ
ಪನ್ನ ಸತ್ಯರು ಮರಳಿದರು ಪ್ರತಿ
ಪನ್ನ ಯಜ್ಞವಿಳಾಸನೊಪ್ಪಿದನಿಂದ್ರ ವಿಭವದಲಿ (ಸಭಾ ಪರ್ವ, ೧೨ ಸಂಧಿ, ೮ ಪದ್ಯ)

ತಾತ್ಪರ್ಯ:
ರಾಜಸೂಯ ಯಾಗಕ್ಕೆ ಆಗಮಿಸಿ ನಡೆಸಿಕೊಟ್ಟ ಮುನಿಗಳಿಗೆ ಉಡುಗೊರೆ, ಬಂಗಾರ, ಆಭರಣ, ಗೋವುಗಳನ್ನು ನೀಡಿ ಧರ್ಮರಾಯನು ಗೌರವಿಸಿದನು. ಋಷಿ ಮುನಿಗಳು ಧರ್ಮರಾಜನನ್ನು ಹೆತ್ತೇಚ್ಚವಾಗಿ ಆಶೀರ್ವದಿಸಿ ತಮ್ಮ ಆಶ್ರಮಗಳಿಗೆ ಹಿಂದಿರುಗಿದರು. ರಾಜಸೂಯ ಯಾಗವನ್ನು ಸಂಪನ್ನಗೊಳಿಸಿದ ಧರ್ಮಜನು ಇಂದ್ರನಂತೆ ವೈಭವದಿಂದಿದ್ದನು.

ಅರ್ಥ:
ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಉಡುಗೊರೆ: ಕಾಣಿಕೆ, ಬಳುವಳಿ; ಹೊನ್ನು: ಚಿನ್ನ; ವಿವಿಧ: ಹಲವಾರು; ಆಭರಣ: ಒಡವೆ; ಪಶು: ಪ್ರಾಣಿ; ಉನ್ನತ: ಶ್ರೇಷ್ಠ; ಆಶೀರ್ವಾದ: ಹರಕೆ; ವಚನ: ಮಾತು, ನುಡಿ; ಅವನಿಪ: ರಾಜ; ಹರಸು: ಆಶೀರ್ವದಿಸು; ಸನ್ನುತ: ಚೆನ್ನಾಗಿ ಹೊಗಳಲ್ಪಟ್ಟವನು, ಸ್ತುತಿಸಲ್ಪಟ್ಟವನು; ಆಶ್ರಮ: ಋಷಿಗಳು ವಾಸಿಸುವ ಸ್ಥಳ; ಸಂಪನ್ನ: ಮುಗಿದ; ಸತ್ಯರು: ಋಷಿಮುನಿಗಳು, ಧರ್ಮದಲ್ಲಿ ನಡೆಯುವವರು; ಮರಳು: ಹಿಂದಿರುಗು; ಪ್ರತಿಪನ್ನ: ಒಪ್ಪಿಗೆಯಾದುದು, ಸ್ವೀಕೃತವಾದುದು; ಯಜ್ಞ: ಕ್ರತು; ವಿಲಾಸ: ಅಂದ, ಸೊಬಗು; ಒಪ್ಪು: ಸಮ್ಮತಿ; ಇಂದ್ರ: ದೇವತೆಗಳ ಒಡೆಯ, ಸುರಪತಿ; ವಿಭವ: ಸಿರಿ, ಸಂಪತ್ತು, ವೈಭವ;

ಪದವಿಂಗಡಣೆ:
ಮನ್ನಿಸಿದನ್+ಅವರುಗಳನ್+ಉಡುಗೊರೆ
ಹೊನ್ನು +ವಿವಿಧ+ಆಭರಣ+ ಪಶುಗಳಲ್
ಉನ್ನತ+ಆಶೀರ್ವಾದ+ ವಚನದೊಳ್+ಅವನಿಪನ +ಹರಸಿ
ಸನ್ನುತರು+ ತಮ್ಮಾಶ್ರಮಕೆ+ ಸಂ
ಪನ್ನ +ಸತ್ಯರು +ಮರಳಿದರು+ ಪ್ರತಿ
ಪನ್ನ +ಯಜ್ಞವಿಳಾಸನ್+ಒಪ್ಪಿದನ್+ಇಂದ್ರ +ವಿಭವದಲಿ

ಅಚ್ಚರಿ:
(೧) ಸನ್ನುತ, ಸಂಪನ್ನ, ಸತ್ಯರು – ಪದಗಳ ಬಳಕೆ
(೨) ಧರ್ಮಜನು ಮೆರೆದ ಬಗೆ – ಪ್ರತಿಪನ್ನ ಯಜ್ಞವಿಳಾಸನೊಪ್ಪಿದನಿಂದ್ರ ವಿಭವದಲಿ

ನಿಮ್ಮ ಟಿಪ್ಪಣಿ ಬರೆಯಿರಿ