ಪದ್ಯ ೧: ಯಜ್ಞವು ಮತ್ತೆ ಹೇಗೆ ಪ್ರಾರಂಭವಾಯಿತು?

ಕೇಳು ಜನಮೇಜಯ ಧರಿತ್ರೀ
ಪಾಲ ರಣ ಗಜಬಜದ ಗೋಳಾ
ಗೋಳಿ ತಣಿತುದು ಹಂತಿಗಟ್ಟಿತು ಮತ್ತೆ ನೃಪನಿಕರ
ಮೇಲಣಂತರ್ವೇದಿಗಳ ಮುನಿ
ಪಾಳಿ ಮಂತ್ರಾಹುತಿಗೆ ಕವಿವುರಿ
ನಾಲಗೆಯ ಲಾವಣಿಗೆ ತಳಿತುದು ಯಜ್ಞಕುಂಡದಲಿ (ಸಭಾ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುದ್ಧದ ಆರ್ಭಟವು ಶಿಶುಪಾಲನ ವಧೆಯಿಂದ ತಣ್ಣಗಾಯಿತು. ರಾಜರೆಲ್ಲರೂ ಮತ್ತೆ ಸಾಲಾಗಿ ಯಜ್ಞಭವನದಲ್ಲಿ ಕುಳಿತರು. ಅಂತರ್ವೇದಿಗಳಲ್ಲಿದ್ದ ಋಷಿಗಳು ಮಂತ್ರಪೂರ್ವಕವಾಗಿ ಕೊಟ್ಟ ಆಹುತಿಗಳಿಂದ ಯಜ್ಞಕುಂಡದಲ್ಲಿ ಅಗ್ನಿಜ್ವಾಲೆಗಳು ಮೇಲೆದ್ದವು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ, ಒಡೆಯ; ಧರಿತ್ರಿ: ಭೂಮಿ; ರಣ: ಯುದ್ಧ; ಗಜಬಜ: ಗೊಂದಲ; ಗೋಳು: ದುಃಖ; ಗೋಳಾಗೋಳಿ: ಆರ್ಭಟ; ತಣಿ: ತಣ್ಣಗಾಗು; ಹಂತಿ: ಸಾಲು; ಕಟ್ಟು: ನಿರ್ಮಿಸು; ನೃಪ: ರಾಜ; ನಿಕರ: ಗುಂಪು; ಅಂತರ್ವೇದಿ: ಯಜ್ಞಶಾಲೆಯ ಒಳಜಗುಲಿ; ಮುನಿ: ಋಷಿ; ಪಾಳಿ: ಗುಂಪು, ಸಾಲು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಕವಿ: ಆವರಿಸು; ಉರಿ: ಬೆಂಕಿ; ನಾಲಗೆ: ಜಿಹ್ವೆ; ಲಾವಣಿಗೆ: ಮುತ್ತಿಗೆ; ತಳಿತ: ಚಿಗುರಿದ; ಯಜ್ಞ: ಕ್ರತು; ಕುಂಡ: ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ+ ರಣ+ ಗಜಬಜದ +ಗೋಳಾ
ಗೋಳಿ +ತಣಿತುದು +ಹಂತಿ+ಕಟ್ಟಿತು +ಮತ್ತೆ +ನೃಪನಿಕರ
ಮೇಲಣ್+ಅಂತರ್ವೇದಿಗಳ+ ಮುನಿ
ಪಾಳಿ+ ಮಂತ್ರಾಹುತಿಗೆ+ ಕವಿ+ಉರಿ
ನಾಲಗೆಯ+ ಲಾವಣಿಗೆ+ ತಳಿತುದು +ಯಜ್ಞಕುಂಡದಲಿ

ಅಚ್ಚರಿ:
(೧) ಗೋಳಾಗೋಳಿ, ಮುನಿಪಾಳಿ – ಪ್ರಾಸ ಪದ

ಪದ್ಯ ೮೧: ಕೃಷ್ಣನು ಯಾರಿಗೆ ಪಟ್ಟವನ್ನು ಕಟ್ಟಿದನು?

ಗೋಳಿಡುತ ಬಂದೆರಗಿದರು ಶಿಶು
ಪಾಲ ತನುಜರು ಕೃಷ್ಣನಂಘ್ರಿಗೆ
ಲಾಲಿಸಿದನನಿಬರನು ಸಂತೈಸಿದನು ಕರುಣದಲಿ
ಮೇಲು ಪೋಗಿನ ವಿಧಿವಿಹಿತ ಕ
ರ್ಮಾಳಿಗಳ ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ (ಸಭಾ ಪರ್ವ, ೧೧ ಸಂಧಿ, ೮೧ ಪದ್ಯ)

ತಾತ್ಪರ್ಯ:
ಶಿಶುಪಾಲನ ಸಾವಿನ ಬಳಿಕ ಅವನ ಮಕ್ಕಳು ಅಳುತ್ತಾ ಕೃಷ್ಣನ ಬಳಿಗೆ ಬಂದು ಅವನ ಪಾದಗಳಿಗೆ ನಮಸ್ಕರಿಸಿದರು. ಕೃಷ್ಣನು ಅವರನ್ನು ಪ್ರೀತಿಯಿಂದ ಪೋಷಿಸಿ ಅವರ ಮೊರೆಯನ್ನು ಕೇಳಿ ಸಮಾಧಾನ ಪಡಿಸಿ, ಶಿಶುಪಾಲನ ಅಂತ್ಯಕ್ರಿಯೆಗಳನ್ನು ಮಾಡಿಸಿ ಅವನ ಮಗನಿಗೆ ಪಟ್ಟಾಭಿಷೇಕವನ್ನು ಮಾಡಿಸಿದನು.

ಅರ್ಥ:
ಗೋಳು: ಅಳು, ದುಃಖ; ಬಂದು: ಆಗಮಿಸು; ಎರಗು: ಬಾಗು, ನಮಸ್ಕರಿಸು; ತನುಜ: ಮಕ್ಕಳು; ಅಂಘ್ರಿ: ಪಾದ; ಲಾಲಿಸು: ಅಕ್ಕರೆಯನ್ನು ತೋರಿಸು; ಅನಿಬರು: ಅಷ್ಟುಜನ; ಸಂತೈಸು: ಸಮಾಧಾನ ಪಡಿಸು; ಕರುಣ: ದಯೆ; ಪೋಗು: ಹೋಗು, ಗಮಿಸು; ವಿಧಿ: ಆಜ್ಞೆ, ಆದೇಶ, ನಿಯಮ; ವಿಹಿತ: ಯೋಗ್ಯ, ಹೊಂದಿಸಿದ; ಕರ್ಮ: ಕಾರ್ಯದ ಫಲ; ಧರ್ಮ; ಆಳಿ: ಗುಂಪು, ಸಾಲು; ಮಾಳ್ದು: ಮಾಡಿ, ಆಚರಿಸಿ; ಮಗ: ಸುತ; ಕೃಪಾಳು: ಕರುಣಿ; ಪಟ್ಟ: ಸ್ಥಾನ; ಸೇಸೆ: ಮಂಗಳಾಕ್ಷತೆ; ನಾರಯಣ: ಕೃಷ್ಣ;

ಪದವಿಂಗಡಣೆ:
ಗೋಳಿಡುತ+ ಬಂದ್+ಎರಗಿದರು +ಶಿಶು
ಪಾಲ +ತನುಜರು +ಕೃಷ್ಣನ್+ಅಂಘ್ರಿಗೆ
ಲಾಲಿಸಿದನ್+ಅನಿಬರನು +ಸಂತೈಸಿದನು +ಕರುಣದಲಿ
ಮೇಲು +ಪೋಗಿನ +ವಿಧಿವಿಹಿತ +ಕ
ರ್ಮಾಳಿಗಳ +ಮಾಳ್ದವನ +ಮಗಗೆ +ಕೃ
ಪಾಳು +ಪಟ್ಟದ +ಸೇಸೆದಳಿದನು +ವೀರನಾರಯಣ

ಅಚ್ಚರಿ:
(೧) ತನುಜ, ಮಗ – ಸಮನಾರ್ಥಕ ಪದ
(೨) ಕೃಷ್ಣನ ಪ್ರೇಮ – ಲಾಲಿಸಿದನನಿಬರನು ಸಂತೈಸಿದನು ಕರುಣದಲಿ; ಮಾಳ್ದವನ ಮಗಗೆ ಕೃ
ಪಾಳು ಪಟ್ಟದ ಸೇಸೆದಳಿದನು ವೀರನಾರಯಣ

ಪದ್ಯ ೮೦: ರಾಜರ ಗುಂಪು ಶಿಶುಪಾಲನ ಸಾವಿಗೆ ಹೇಗೆ ಪ್ರತಿಕ್ರಯಿಸಿತು?

ಈಸು ಹಿರಿದೆಲ್ಲೆಂದು ಕೆಲಬರು
ಲೇಸ ಮಾಡಿದನಸುರ ರಿಪುವಿನ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸು ದಿನ ಬದುಕುವರು ಲೇಸಾ
ಯ್ತೀ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ (ಸಭಾ ಪರ್ವ, ೧೧ ಸಂಧಿ, ೮೦ ಪದ್ಯ)

ತಾತ್ಪರ್ಯ:
ಅಲ್ಲಿದ್ದ ರಾಜರಲ್ಲಿ ಕೆಲವರು ಇದೇನೂ ಹೆಚ್ಚಲ್ಲ ಎಂದು ನುಡಿದರೆ, ಇನ್ನೂ ಕೆಲವರು ಶಿಶುಪಾಲನಿಗೆ ಶ್ರೀಕೃಷ್ಣನು ತಕ್ಕ ಶಾಸ್ತಿಯನ್ನೇ ಮಾಡಿದನು ಎಂದು ಅಭಿಪ್ರಾಯಪಟ್ಟರು. ಶಿಶುಪಾಲನು ಇಷ್ಟು ಸನ್ಮಾರ್ಗಬಾಹಿರನೆಂದು ನಮಗೆ ತಿಳಿದಿರಲಿಲ್ಲ ಎಂದು ಕೆಲವರು ಮಾತಾಡಿದರು, ಇನ್ನೂ ಕೆಲವರು ಕೃಷ್ಣನ ಮೇಲೆ ದ್ವೇಷ ಕಟ್ಟಿಕೊಂಡವರು ಎಷ್ಟು ದಿನ ಬದುಕಲು ಸಾಧ್ಯ, ಶಿಶುಪಾಲನಿಗೆ ಸರಿಯಾದುದಾಯಿತು ಎಂದು ನಗುತ್ತಿದ್ದರು.

ಅರ್ಥ:
ಈಸು: ಇಷ್ಟು; ಹಿರಿ: ಹೆಚ್ಚು, ದೊಡ್ಡದು; ಕೆಲಬರು: ಸ್ವಲ್ಪ ಮಂದಿ; ಲೇಸು: ಒಳಿತು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಬಾಹಿರ: ಹೊರಗಿನವ, ಹೀನಮನುಷ್ಯ; ಅರಿ: ತಿಳಿ; ಐಸಲೇ: ಅಲ್ಲವೇ; ಮುನಿ: ಕೋಪ; ಏಸು: ಎಷ್ಟು; ದಿನ: ದಿವಸ, ವಾರ; ಬದುಕು: ಜೀವಿಸು; ಸುನೀತ: ಶಿಶುಪಾಲ; ನಗು: ಸಂತಸ; ನೃಪ: ರಾಜ; ಸ್ತೋಮ: ಗುಂಪು;

ಪದವಿಂಗಡಣೆ:
ಈಸು +ಹಿರಿದೆಲ್ಲೆಂದು +ಕೆಲಬರು
ಲೇಸ +ಮಾಡಿದನ್+ಅಸುರರಿಪುವ್+ಇನನ್
ಈಸು +ಬಾಹಿರನೆಂದ್+ಅರಿಯೆವಾವೆಂದು+ ಕೆಲಕೆಲರು
ಐಸಲೇ +ಕೃಷ್ಣಂಗೆ +ಮುನಿದವರ್
ಏಸು +ದಿನ +ಬದುಕುವರು +ಲೇಸಾ
ಯ್ತೀ +ಸುನೀತಂಗೆಂದು +ನಗುತಿರ್ದುದು +ನೃಪಸ್ತೋಮ

ಅಚ್ಚರಿ:
(೧) ಈಸು, ಏಸು – ಪ್ರಾಸ ಪದಗಳು
(೨) ಕೆಲಕೆಲರು, ಕೆಲಬರು – ಪದಗಳ ಬಳಕೆ

ಪದ್ಯ ೭೯: ಶಿಶುಪಾಲನ ಅಂತ್ಯದ ನಂತರ ಪರಿಸ್ಥಿತಿ ಹೇಗಾಯಿತು?

ತಗ್ಗಿತುರು ಕಳಕಳ ವಿಷಾದದ
ಸುಗ್ಗಿ ಬೀತುದು ರಾಯರೀಚೆಯ
ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ ಬಾಂಧವರು
ನೆಗ್ಗಿದವು ನೆನಹವನ ಸಖಿಗಳು
ಮುಗ್ಗಿದರು ಹುರುಡಿನ ವಿಘಾತಿಯ
ಲಗ್ಗಿಗರು ಹಣುಗಿದರು ಶಿಶುಪಾಲಾವಸಾನದಲಿ (ಸಭಾ ಪರ್ವ, ೧೧ ಸಂಧಿ, ೭೯ ಪದ್ಯ)

ತಾತ್ಪರ್ಯ:
ಶಿಶುಪಾಲನ ಅಂತ್ಯದ ನಂತರ ಎಲ್ಲೆಲ್ಲಿಯೂ ಗೊಂದಲ ಆಂತಕದ ವಾತಾವರಣ ಕಡಿಮೆಯಾಯಿತು, ದುಃಖದಿಂದ ತುಂಬಿದ್ದ ಪರಿಸರ ಮಾಯವಾಯಿತು. ತೆರಳಿದ್ದ ರಾಜರೆಲ್ಲರೂ ಈ ಕಡೆಗೆ ಬಂದು ತಮ್ಮ ಬಾಂಧವರ ಜೊತೆ ಸೇರಿದರು. ಹಿಂದಿನ ನೆನಪುಗಳನ್ನು ಮರೆತು ಶಿಶುಪಾಲನ ಮಿತ್ರರೆಲ್ಲರೂ ಸುಮ್ಮನಾದರು. ಶಿಶುಪಾಲನ ಮರಣದನಂತರವೂ ಹೋರಾಡಬೇಕೆಂಬ ಕುತೂಹಲಿಗಳು ಸುಮ್ಮನಾದರು.

ಅರ್ಥ:
ತಗ್ಗು: ಕಡಿಮೆಯಾಗು; ಉರು: ಹೆಚ್ಚಾದ; ಕಳಕಳ: ಗೊಂದಲ; ವಿಷಾದ: ದುಃಖ; ಸುಗ್ಗಿ: ಪರ್ವ, ಹಬ್ಬ; ಬೀತುದು: ಕಳೆದುಹೋಗು, ಮಾಯವಾಗು; ರಾಯ: ರಾಜ; ಮಗ್ಗುಲು: ಪಕ್ಕ, ಪಾರ್ಶ್ವ; ಮೇಳೈಸು: ಒಟ್ಟಿಗೆ ಸೇರು; ಮೆರೆ: ಹೊಳೆ, ಶೋಭಿಸು; ಮತ್ತೆ: ಪುನಃ; ಬಾಂಧವರು: ಪರಿಜನರು; ನೆಗ್ಗು: ತಗ್ಗು, ಬೀಳು; ನೆನೆಹು: ನೆನೆಪು; ಸಖಿ: ಸ್ನೇಹಿತ, ಮಿತ್ರ; ಮುಗ್ಗು:ಬಾಗು, ಮಣಿ; ಹುರುಡು: ಸಾಮರ್ಥ್ಯ, ಪೈಪೋಟಿ; ವಿಘಾತಿ: ಹೊಡೆತ, ವಿರೋಧ; ಲಗ್ಗಿಗ: ಲಗ್ಗೆ ಮಾಡುವವ, ಮೌಹೂರ್ತಿಕ; ಹಣುಗು: ಹಿಂಜರಿ; ಅವಸಾನ: ಮರಣ, ಅಂತ್ಯ;

ಪದವಿಂಗಡಣೆ:
ತಗ್ಗಿತುರು+ ಕಳಕಳ +ವಿಷಾದದ
ಸುಗ್ಗಿ +ಬೀತುದು +ರಾಯರ್+ಈಚೆಯ
ಮಗ್ಗುಲಲಿ +ಮೇಳೈಸಿ +ಮೆರೆದರು+ ಮತ್ತೆ +ಬಾಂಧವರು
ನೆಗ್ಗಿದವು+ ನೆನಹವನ +ಸಖಿಗಳು
ಮುಗ್ಗಿದರು +ಹುರುಡಿನ+ ವಿಘಾತಿಯ
ಲಗ್ಗಿಗರು +ಹಣುಗಿದರು +ಶಿಶುಪಾಲ+ಅವಸಾನದಲಿ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ
(೨) ಸುಗ್ಗಿ ಪದದ ಬಳಕೆ ವಿಷಾದದೊಂದಿಗೆ ಜೋಡಿಸಿರುವ ಪರಿ – ವಿಷಾದದ ಸುಗ್ಗಿ ಬೀತುದು

ಪದ್ಯ ೭೮: ಶಿಶುಪಾಲನ ಅಂತ್ಯದ ಬಳಿಕ ಯಾರು ತನ್ನ ನಿಜಸ್ಥಾನವನ್ನು ಸೇರಿದರು?

ಹರಿಗೊರಳ ಚೌಧಾರೆಯಲಿ ಧ್ರು
ಧುರಿಸಿ ನೂಕಿತು ರಕುತವದರೊಳು
ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ
ತುರುಗುವೆಳಗಿನ ಜೋಕೆಯಲಿ ಜಗ
ವರಿಯೆ ಬಂದು ಮುರಾರಿಯಂಘ್ರಿಯೊ
ಳೆರಗಿ ನಿಂದುದು ನಿಜನೆಲೆಗೆ ವಿಜಯಾಭಿಧಾನದಲಿ (ಸಭಾ ಪರ್ವ, ೧೧ ಸಂಧಿ, ೭೮ ಪದ್ಯ)

ತಾತ್ಪರ್ಯ:
ಸುದರ್ಶನ ಚಕ್ರವು ಶಿಶುಪಾಲನ ಕಂಠವನ್ನು ಸೀಳಿತು, ಅವನ ಕಂಠದಿಂದ ಹೊರಹೊಮ್ಮಿದ ರಕ್ತವು ನಾಲ್ಕೂ ದಿಕ್ಕುಗಳಿಗೆ ಚೆಲ್ಲಿ ಉಕ್ಕಿ ಹರಿಯಿತು. ಅದರೊಳಗಿನಿಂದ ಮಹಾಪ್ರಕಾಶಮಾನವಾದ ಒಂದು ಬೆಳಕಿನ ಮೊತ್ತವು ಉಕ್ಕಿ ಬಂದು, ಎಲ್ಲರೂ ನೋಡುವಂತೆ ಶ್ರೀಕೃಷ್ಣನ ಪಾದಕ್ಕೆ ನಮಸ್ಕರಿಸಿತು, ವಿಷ್ಣುವಿನ ದ್ವಾರಪಾಲಕನಾದ ವಿಜಯನು ತನ್ನ ನೆಲೆಗೇ ಬಂದು ಸೇರಿದನು.

ಅರ್ಥ:
ಹರಿ: ಸೀಳು; ಕೊರಳು: ಕಂಠ; ಚೌಧಾರೆ: ನಾಲ್ಕು ಕಡೆಯ ಪ್ರವಾಹ; ಧುರುಧುರಿಸು: ಉಕ್ಕಿ ಹರಿ; ನೂಕು: ತಳ್ಳು; ರಕುತ: ರುಧಿರ, ನೆತ್ತರು; ಮಿರುಪು: ಹೊಳಪು; ತೇಜ: ಕಾಂತಿ; ಪುಂಜ: ಸಮೂಹ, ಗುಂಪು; ಉಕ್ಕು: ಹೆಚ್ಚಾಗು; ಹೊದರ: ಪೊದೆ, ಹಿಂಡಲು; ಹೊಳಹು: ಕಾಂತಿ, ಪ್ರಕಾಶ; ತುರುಗು: ಸಂದಣಿಸು, ಒತ್ತಿಬಂದು; ಬೆಳಗು: ಪ್ರಕಾಶ; ಜೋಕೆ: ಎಚ್ಚರಿಕೆ, ಜಾಗರೂಕತೆ; ಜಗ: ಪ್ರಪಂಚ; ಅರಿ: ತಿಳಿ; ಬಂದು: ಆಗಮಿಸು; ಮುರಾರಿ: ಕೃಷ್ಣ; ಅಂಘ್ರಿ: ಪಾದ; ಎರಗು: ಬಾಗು, ನಮಸ್ಕರಿಸು; ನಿಂದು: ನಿಲ್ಲು; ನಿಜನೆಲೆ: ಸ್ವಂತ ಜಾಗ; ಅಭಿಧಾನ: ಹೆಸರು;

ಪದವಿಂಗಡಣೆ:
ಹರಿ+ಕೊರಳ+ ಚೌಧಾರೆಯಲಿ +ಧುರು
ಧುರಿಸಿ+ ನೂಕಿತು +ರಕುತವ್+ಅದರೊಳು
ಮಿರುಪ+ ತೇಜಃಪುಂಜವ್+ಉಕ್ಕಿತು+ ಹೊದರ+ ಹೊಳಹಿನಲಿ
ತುರುಗು+ಬೆಳಗಿನ+ ಜೋಕೆಯಲಿ +ಜಗವ್
ಅರಿಯೆ +ಬಂದು +ಮುರಾರಿ+ಅಂಘ್ರಿಯೊಳ್
ಎರಗಿ+ ನಿಂದುದು +ನಿಜನೆಲೆಗೆ+ ವಿಜಯ+ಅಭಿಧಾನದಲಿ

ಅಚ್ಚರಿ:
(೧) ಚೌಧಾರೆ: ನಾಲ್ಕು ದಿಕ್ಕುಗಳಲ್ಲಿ ಎಂಬ ಪದದ ಬಳಕೆ
(೨) ಕಾಂತಿಯನ್ನು ವರ್ಣಿಸುವ ಬಗೆ – ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ ತುರುಗುವೆಳಗಿನ ಜೋಕೆಯಲಿ

ಪದ್ಯ ೭೭: ಶಿಶುಪಾಲನ ಅಂತ್ಯ ಹೇಗಾಯಿತು?

ಬೆಸಸಿದನು ಚಕ್ರವನು ಧಾರಾ
ವಿಸರ ಧುತ ಪರಿಸ್ಫುಲಿಂಗ
ಪ್ರಸರ ತೇಜಃಕಣ ಪರಿಷ್ಕೃತ ನವ್ಯ ಶತಭಾನು
ದೆಸೆ ದೆಸೆಗೆ ದುವ್ವಾಳಿಸುವ ಬೆಳ
ಗೆಸೆಯೆ ಬಂದು ಸುನೀತ ಕಂಠದ
ಬೆಸುಗೆ ಬಿಡಲೆರಗಿದುದು ಹಾಯ್ದುದು ತಲೆನಭಸ್ಥಳಕೆ (ಸಭಾ ಪರ್ವ, ೧೧ ಸಂಧಿ, ೭೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರವನ್ನು ಹಿಡಿದು ಅದಕ್ಕೆ ಅಜ್ಞಾಪಿಸಿದನು, ಚಕ್ರವು ಅಲಗಿನ ಧಾರೆಗಳಿಂದ ಹೊಳೆ ಹೊಳೆದು ಬೆಂಕಿಯ ಕಿಡಿಗಳಿಂದ ಸುತ್ತಲ್ಪಟ್ಟು, ನೂರು ಉದಯಿಸುವ ಸೂರ್ಯರ ತೇಜಸ್ಸಿನಿಂದ ದಿಕ್ಕು ದಿಕ್ಕಿಗೆ ಹಬ್ಬುವ ಬೆಳಕಿನಿಂದೊಡಗೂಡಿ ಬಂದ ಸುದರ್ಶನ ಚಕ್ರವು ಶಿಶುಪಾಲನ ಕಂಠವನ್ನು ಅವನ ಶರೀರದಿಂದ ಬೇರ್ಪಡಿಸಲು, ತಲೆಯು ಛಂಗನೆ ಆಗಸದತ್ತ ಹಾರಿತು.

ಅರ್ಥ:
ಬೆಸಸು: ಹೇಳು, ಆಜ್ಞಾಪಿಸು; ಚಕ್ರ: ವೃತ್ತಾಕಾರದಲ್ಲಿ ಚಲಿಸುವ ಯಂತ್ರ; ಧಾರಾ: ಹರಿತವಾದ ಅಂಚು; ವಿಸರ: ವಿಸ್ತಾರ, ವ್ಯಾಪ್ತಿ; ಧೂತ: ನಿರ್ಧೂತ, ನಿವಾರಣೆ; ಪರಿಸ್ಫುಲಿಂಗ: ಕಿಡಿಗಳು; ಪ್ರಸರ: ಹರಡುವುದು; ತೇಜ: ಕಾಂತಿ; ಕಣ: ಸಣ್ಣ ಪದಾರ್ಥ; ಪರಿಷ್ಕೃತ: ಶೋಧಿಸಿದ; ನವ್ಯ: ನೂತನ; ಶತ: ನೂರು; ಭಾನು: ಸೂರ್ಯ; ದೆಸೆ: ದಿಕ್ಕು; ದುವ್ವಾಳಿ: ತೀವ್ರಗತಿ; ಬೆಳಕು: ಪ್ರಕಾಶ; ಎಸೆ: ಹೊರಹಾಕು; ಬಂದು: ಆಗಮಿಸಿ; ಸುನೀತ: ಶಿಶುಪಾಲ; ಕಂಠ: ಕುತ್ತಿಗೆ, ಗಂಟಲು; ಬೆಸುಗೆ: ಒಂದಾಗುವುದು; ಬಿಡಲು: ತೊರೆಯಲು; ಎರಗು: ಬೀಳು; ಹಾಯು: ಹಾರು, ಹೊರಸೂಸು, ಹೊಮ್ಮು; ತಲೆ: ಶಿರ; ನಭ: ಆಗಸ; ಸ್ಥಳ: ಪ್ರದೇಶ;

ಪದವಿಂಗಡಣೆ:
ಬೆಸಸಿದನು+ ಚಕ್ರವನು +ಧಾರಾ
ವಿಸರ +ಧೂತ +ಪರಿಸ್ಫುಲಿಂಗ
ಪ್ರಸರ+ ತೇಜಃಕಣ+ ಪರಿಷ್ಕೃತ +ನವ್ಯ +ಶತಭಾನು
ದೆಸೆ+ ದೆಸೆಗೆ+ ದುವ್ವಾಳಿಸುವ +ಬೆಳ
ಗೆಸೆಯೆ +ಬಂದು +ಸುನೀತ +ಕಂಠದ
ಬೆಸುಗೆ +ಬಿಡಲ್+ಎರಗಿದುದು +ಹಾಯ್ದುದು +ತಲೆನಭಸ್ಥಳಕೆ

ಅಚ್ಚರಿ:
(೧) ಸುದರ್ಶನ ಚಕ್ರದ ಪ್ರಕಾಶದ ವಿವರ – ಧಾರಾ ವಿಸರ ಧುತ ಪರಿಸ್ಫುಲಿಂಗ ಪ್ರಸರ ತೇಜಃಕಣ ಪರಿಷ್ಕೃತ ನವ್ಯ ಶತಭಾನು
(೨) ಕತ್ತರಿಸಿತು ಎಂದು ಹೇಳಲು – ಕಂಠದ ಬೆಸುಗೆ ಬಿಡಲು, ಬೆಸುಗೆ ಪದದ ಪ್ರಯೋಗ