ಪದ್ಯ ೪೪: ನರಸಿಂಹನು ಹಿರಣ್ಯಕಶಿಪುವನ್ನು ಹೇಗೆ ಸಂಹರಿಸಿದನು?

ಉಗುರೊಳಸುರನ ಕರುಳ ದಂಡೆಯ
ನುಗಿದು ಕೊರಳಲಿ ಹಾಯ್ಕಿ ದೈತ್ಯನ
ಮಗನ ಪತಿಕರಿಸಿದನು ತತ್ರೋಧಾಗ್ನಿ ಪಲ್ಲವಿಸಿ
ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ
ನೆಗೆಯಲುರಿ ಹೊಡೆದಬುಜಜಾಂಡದ
ಬಗರಗೆಯ ಭೇದಿಸಿತು ಈತನ ಕೆಣಕಬೇಡೆಂದ (ಸಭಾ ಪರ್ವ, ೧೦ ಸಂಧಿ, ೪೪ ಪದ್ಯ)

ತಾತ್ಪರ್ಯ:
ನರಸಿಂಹನು ತನ್ನ ಉಗುರುಗಳಿಂದ ಹಿರಣ್ಯಕಶಿಪುವಿನ ಕರುಳ ದಂಡೆಯನ್ನು ಕಿತ್ತು ಕೊರಳಲ್ಲಿ ಹಾಕಿಕೊಂಡನು. ಅವನ ಮಗನಾದ ಪ್ರಹ್ಲಾದನನ್ನು ಕೃಪೆದೋರಿ ಸಲಹಿದನು. ಅವನ ಕೋಪಾಗ್ನಿಯು ಭುಗಿಲೆಂದು ಕಪ್ಪು ಹೊಗೆಯೂ ಉರಿಯೂ ಎದ್ದು ಬ್ರಹ್ಮಾಂಡವನ್ನೇ ಒಂದು ಕಿಕ್ಕಕುಳಿಯಾಗಿಸಿ ಭೇದಿಸಿತು, ಎಲೆ ಶಿಶುಪಾಲ ಶ್ರೀಕೃಷ್ಣನನ್ನು ಕೆಣಕಬೇಡ ಎಂದು ಭೀಷ್ಮರು ಹೇಳಿದರು.

ಅರ್ಥ:
ಉಗುರು: ನಖ; ಅಸುರ: ರಾಕ್ಷಸ; ಕರುಳು: ಪಚನಾಂಗ; ದಂಡೆ: ಹಾರ, ಸರ; ಉಗಿ: ಹೊರಹಾಕು; ಕೊರಳು: ಕುತ್ತಿಗೆ; ಹಾಯ್ಕಿ: ಹಾಕು, ತೊಡು; ದೈತ್ಯ: ರಾಕ್ಷಸ; ಮಗ: ಸುತ; ಪತಿಕರಿಸು: ದಯೆತೋರು, ಅನುಗ್ರಹಿಸು; ಅಗ್ನಿ: ಬೆಂಕಿ; ಪಲ್ಲವಿಸು: ವಿಕಸಿಸು; ಭುಗಿ: ಬೆಂಕಿಯು ಉರಿಯುವ ಬಗೆ; ಕಬ್ಬೊಗೆ: ಕರಿಯಾದ ಹೊಗೆ; ನೆಗೆ: ಚಿಮ್ಮು; ಉರಿ: ಬೆಂಕಿ; ಹೊಡೆ: ಏಟು, ಹೊಡೆತ; ಅಬುಜ: ಕಮಲ; ಅಬುಜಜಾಂಡ: ಬ್ರಹ್ಮಾಂಡ; ಬಗರು: ಕೆರೆ, ಗೆಬರು; ಭೇದಿಸು: ಸೀಳು; ಕೆಣಕು: ರೇಗಿಸು, ಪ್ರಚೋದಿಸು;

ಪದವಿಂಗಡಣೆ:
ಉಗುರೊಳ್+ಅಸುರನ +ಕರುಳ +ದಂಡೆಯನ್
ಉಗಿದು +ಕೊರಳಲಿ +ಹಾಯ್ಕಿ +ದೈತ್ಯನ
ಮಗನ+ ಪತಿಕರಿಸಿದನು+ ತತ್ರೋಧಾಗ್ನಿ+ ಪಲ್ಲವಿಸಿ
ಭುಗಿ +ಭುಗಿಲ್+ ಭುಗಿಲೆಂದು+ ಕಬ್ಬೊಗೆ
ನೆಗೆಯಲ್+ಉರಿ +ಹೊಡೆದ್+ಅಬುಜಜಾಂಡದ
ಬಗರಗೆಯ+ ಭೇದಿಸಿತು+ ಈತನ +ಕೆಣಕಬೇಡೆಂದ

ಅಚ್ಚರಿ:
(೧) ಬೆಂಕಿಯ ವರ್ಣನೆ – ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ ನೆಗೆಯಲುರಿಹೊ ಡೆದಬುಜಜಾಂಡದ ಬಗರಗೆಯ ಭೇದಿಸಿತು
(೨) ದೈತ್ಯ, ಅಸುರ – ಸಮನಾರ್ಥಕ ಪದ

ಪದ್ಯ ೪೩: ವಿಷ್ಣುವು ಯಾವ ರೂಪದಲ್ಲಿ ಹಿರಣ್ಯಕಶಿಪುವಿನ ಮುಂದೆ ಬಂದನು?

ಕಾದುದೀತನ ನಾಮವಾ ಪ್ರ
ಹ್ಲಾದನಾಸರು ಬೇಸರನು ಬಳಿ
ಕೀ ದಯಾಂಬುಧಿ ದನುಜಪತಿ ದಿಟ್ಟಿಸಿದ ಕಂಬದಲಿ
ಆದುದಾವಿರ್ಭಾವ ಸಿಡಿಲಿನ
ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ (ಸಭಾ ಪರ್ವ, ೧೦ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪ್ರಹ್ಲಾದನಿಗೆ ತಂದೆಯಿಂದಾದ ಹಿಂಸೆ ಬೇಸರಗಳನ್ನು ಶ್ರೀಹರಿಯ ನಾಮಸ್ಮರಣೆಯು ಕಳೆದವು. ಬಳಿಕ ಹಿರಣ್ಯಕಶಿಪುವು ಈ ಕಂಬದಲಿ ನಿನ್ನ ಶ್ರೀಹರಿಯನ್ನು ತೋರಿಸು ಎನ್ನುತ್ತಾ ದೃಷ್ಟಿಸಿದ ಕಂಬದಲ್ಲಿ ರೌದ್ರನಾದ ಶ್ರೀನರಸಿಂಹನ ಆವಿರ್ಭಾವವಾಯಿತು. ಆ ನರಸಿಂಹಸ್ವಾಮಿಯ ಕಣ್ನುಗಳು ಸಿಡಿಲಿನ ಸಹೋದರರಂತಿದ್ದವು, ಅವನ ಹಣೆಯ ಬೆಂಕಿಯು ಬೀದಿಯನ್ನೇ ಉರಿಸಿದವು.

ಅರ್ಥ:
ಕಾದು: ಹೋರಾದು; ನಾಮ: ಹೆಸರು; ಅಸುರ: ರಾಕ್ಷಸ; ಬೇಸರ: ಬೇಜಾರು, ದುಃಖ; ಬಳಿಕ: ನಂತರ; ದಯ: ಕರುಣೆ; ಅಂಬುಧಿ: ಸಾಗರ; ದನುಜ: ರಾಕ್ಷಸ; ಪತಿ: ಒಡೆಯ; ದಿಟ್ಟಿಸು: ನೋಡು; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಆವಿರ್ಭಾವ: ಪ್ರಕಟವಾಗುವುದು; ಸಿಡಿಲು: ಚಿಮ್ಮು; ಸಹೋದರ: ತಮ್ಮ/ಅಣ್ಣ; ಕಣ್ಣು: ನಯನ; ಭಾಳ: ಹಣೆ; ಬೀದಿ: ರಸ್ತೆ; ಕಿಚ್ಚು: ಬೆಂಕಿ; ರೌದ್ರ: ಭಯಂಕರ; ರೂಪ: ಆಕಾರ;

ಪದವಿಂಗಡಣೆ:
ಕಾದುದ್+ಈತನ +ನಾಮವ್+ಆ+ ಪ್ರ
ಹ್ಲಾದನ್+ಅಸರು +ಬೇಸರನು +ಬಳಿಕ್
ಈ+ ದಯಾಂಬುಧಿ +ದನುಜಪತಿ +ದಿಟ್ಟಿಸಿದ +ಕಂಬದಲಿ
ಆದುದ್+ಆವಿರ್ಭಾವ +ಸಿಡಿಲಿನ
ಸೋದರದ+ ಕಣ್ಣುಗಳ +ಭಾಳದ
ಬೀದಿ+ಕಿಚ್ಚಿನ +ರೌದ್ರದಲಿ +ನರಸಿಂಹ+ ರೂಪಾಗಿ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಯಾಂಬುಧಿ ದನುಜಪತಿ ದಿಟ್ಟಿಸಿದ
(೨) ನರಸಿಂಹನ ವರ್ಣನೆ: ಆದುದಾವಿರ್ಭಾವ ಸಿಡಿಲಿನ ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ

ಪದ್ಯ ೪೨: ಪ್ರಹ್ಲಾದನು ಯಾರನ್ನು ಸ್ತುತಿಮಾಡಿದನು?

ಆ ಹಿರಣ್ಯಾಕ್ಷನ ಸಹೋದರ
ನೀ ಹರಿಯನವಗಡಿಸಿ ದೈವ
ದ್ರೋಹಿ ಬಹುವಿಧ ವ್ಯಥೆಗಳಲಿ ಬೇಸರಿಸಿದನು ಮಗನ
ಆಹವದಲಚ್ಯುತ ಮುಕುಂದ ಮ
ಹಾಹಿತಲ್ಪ ಮಹೇಂದ್ರವಂದ್ಯ
ತ್ರಾಹಿಯೆಂದನವರತ ತುತಿಸಿದನಂದು ಪ್ರಹ್ಲಾದ (ಸಭಾ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ಆ ಹಿರಣ್ಯಾಕ್ಷನ ಸಹೋದರನಾದ ಹಿರಣ್ಯಕಶಿಪುವು ದೈವದ್ರೋಹಿಯಾಗಿ ಶ್ರೀಹರಿಯನ್ನು ವಿರೋಧಿಸಿದನು. ಅವನ ಮಗ ಪ್ರಹ್ಲಾದನು ಹರಿಭಕ್ತ ಇವನ ಹರಿಭಕ್ತಿಯನ್ನು ತಡೆಯಲು ಹಿರಣ್ಯಕಶಿಪುವು ತನ್ನ ಮಗನನ್ನು ಅನೇಕ ಹಿಂಸೆಗಳಿಗೊಳಪಡಿಸಿ ಬೇಸರ ತರಿಸಿದನು. ಆಗ ತಂದೆಯೊಡನೆ ವಿರೋಧದಲ್ಲಿ ಪ್ರಹ್ಲಾದನು ಅಚ್ಯುತ, ಮುಕುಂದ, ಶೇಷಶಯ್ಯ, ದೇವೇಂದ್ರವಂದ್ಯನೆ ನನ್ನನ್ನು ಕಾಪಾಡು ಎಂದು ಶ್ರೀಹರಿಯನ್ನು ಸ್ತುತಿಸಿದನು.

ಅರ್ಥ:
ಸಹೋದರ: ಅಣ್ಣ/ತಮ್ಮ; ಹರಿ: ವಿಷ್ಣು; ಅವಗಡಿಸು: ಕಡೆಗಣಿಸು, ಸೋಲಿಸು; ದ್ರೋಹ: ವಿಶ್ವಾಸಘಾತ, ವಂಚನೆ; ದೈವ: ಭಗವಂತ; ಬಹು: ಬಹಳ; ವಿಧ: ರೀತಿ; ವ್ಯಥೆ: ನೋವು; ಬೇಸರ: ದುಃಖ; ಮಗ: ಪುತ್ರ; ಆಹವ: ಯುದ್ಧ, ವಿರುದ್ಧ; ಅಚ್ಯುತ: ಚ್ಯುತಿಯಿಲ್ಲದವ (ವಿಷ್ಣು); ಅಹಿ: ಹಾವು; ತಲ್ಪ: ಹಾಸಿಗೆ; ಮಹೇಂದ್ರ: ಇಂದ್ರ; ವಂದ್ಯ: ನಮಸ್ಕರಿಸಲ್ಪಟ್ಟ; ತ್ರಾಹಿ:ರಕ್ಷಿಸು, ಕಾಪಾಡು; ಅನವರತ: ಯಾವಾಗಲು, ನಿತ್ಯ; ತುತಿ: ಹೊಗಳಿಕೆ, ಸ್ತುತಿ, ಪ್ರಶಂಸೆ;

ಪದವಿಂಗಡಣೆ:
ಆ +ಹಿರಣ್ಯಾಕ್ಷನ +ಸಹೋದರನ್
ಈ+ ಹರಿಯನ್+ಅವಗಡಿಸಿ+ ದೈವ
ದ್ರೋಹಿ +ಬಹುವಿಧ +ವ್ಯಥೆಗಳಲಿ +ಬೇಸರಿಸಿದನು +ಮಗನ
ಆಹವದಲ್+ಅಚ್ಯುತ +ಮುಕುಂದ +ಮಹ
ಅಹಿತಲ್ಪ +ಮಹೇಂದ್ರವಂದ್ಯ
ತ್ರಾಹಿ+ಎಂದ್+ಅನವರತ+ ತುತಿಸಿದನ್+ಅಂದು +ಪ್ರಹ್ಲಾದ

ಅಚ್ಚರಿ:
(೧) ಪ್ರಹ್ಲಾದ ಸ್ತುತಿಸಿದ ಬಗೆ – ಅಚ್ಯುತ, ಮುಕುಂದ, ಮಹಾಹಿತಲ್ಪ , ಮಹೇಂದ್ರವಂದ್ಯ
(೨) ದ್ರೋಹಿ, ಅಹಿ, ತ್ರಾಹಿ – ಪ್ರಾಸ ಪದಗಳು