ಪದ್ಯ ೪೯: ವಂದಿ ಮಾಗಧರು ಕರ್ಣನನ್ನು ಹೇಗೆ ಹೊಗಳಿದರು?

ಅಳುಕಿದನೆ ರಥ ಮುಗ್ಗಿದರೆ ಕಳ
ವಳಿಸಿದನೆ ಶಲ್ಯಾಪಸರಣಕೆ
ಕೆಲಬಲನ ಹಾರಿದನೆ ನರನವಗಡಿಸಿ ಕಾದಿದಡೆ
ಬಲಿಮಥನ ಮಝ ಭಾಪು ಪಾಂಡವ
ಬಲದಿಶಾಪಟ ರಾಯಮದನ
ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೊಹ (ಕರ್ಣ ಪರ್ವ, ೨೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ವಂದಿ ಮಾಗಧರು ಕರ್ಣನ ಪರಾಕ್ರಮವನ್ನು ಹೊಗಳಿದರು, ರಥವು ನೆಲದಲ್ಲಿ ಹೂತರೆ ಹೆದರಿದನೇ? ಸಾರಥಿ ಶಲ್ಯನು ಬಿಟ್ಟು ಹೋದರೆ ಕಳವಳಿಸಿದನೇ? ಅರ್ಜುನನೇ ಯುದ್ಧಕ್ಕೆ ಬಂದರೂ ಅಕ್ಕಪಕ್ಕದವರ ಸಹಾಯವನ್ನು ಬೇಡಿದನೇ? ವಿಷ್ಣುವಿನಂತೆ ಅಜೇಯನು ಪಾಂಡವ ಮನ್ಮಥರಿಗೆ ಇವನೇ ಶಿವನಿದ್ದಂತೆ, ಭಲೇ ಎಂದು ಕರ್ಣನನ್ನು ಹೊಗಳಿದರು.

ಅರ್ಥ:
ಅಳುಕು: ಹೆದರು; ರಥ: ಬಂಡಿ; ಮುಗ್ಗು: ಬಾಗು, ಮಣಿ; ಕಳವಳ: ಗೊಂದಲ; ಅಪಸರಣ: ಹಿಮ್ಮೆಟ್ಟುವುದು; ಕೆಲ: ಸ್ವಲ್ಪ; ಬಲ: ಸೈನ್ಯ; ಹಾರು: ಲಂಘಿಸು, ಎದುರುನೋಡು; ನರ: ಅರ್ಜುನ; ಅವಗಡಿಸು: ಕಡೆಗಣಿಸು, ಸೋಲಿಸು; ಕಾದು: ಯುದ್ಧಮಾಡು; ಬಲಿಮಥನ: ಬಲಿಯನ್ನು ಕೊಂದವ (ವಿಷ್ಣು); ಮಝ ಭಾಪು: ಭಲೇ; ದಿಶಾಪಟ: ಶತ್ರುಗಳನ್ನು ದಿಕ್ಕುದಿಕ್ಕಿಗೆ ಓಡಿಸುವವ; ರಾಯ: ರಾಜ; ಮದನ: ಮನ್ಮಥ; ಪ್ರಳಯ:ನಾಶ, ಹಾಳು; ಹರ: ಶಿವ; ಭಾಪು: ಭಲೇ; ಹೊಗಳು: ಸ್ತುತಿ, ಕೊಂಡಾಟ; ವಂದಿ: ಹೊಗಳುಭಟ್ಟ; ಸಂದೋಹ: ಗುಂಪು;

ಪದವಿಂಗಡಣೆ:
ಅಳುಕಿದನೆ +ರಥ +ಮುಗ್ಗಿದರೆ +ಕಳ
ವಳಿಸಿದನೆ +ಶಲ್ಯ+ಅಪಸರಣಕೆ
ಕೆಲಬಲನ +ಹಾರಿದನೆ +ನರನ್+ಅವಗಡಿಸಿ+ ಕಾದಿದಡೆ
ಬಲಿಮಥನ +ಮಝ +ಭಾಪು +ಪಾಂಡವ
ಬಲ+ದಿಶಾಪಟ+ ರಾಯ+ಮದನ
ಪ್ರಳಯ+ಹರ +ಭಾಪೆಂದು +ಹೊಗಳಿತು +ವಂದಿಸಂದೊಹ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲಿಮಥನ ಮಝ ಭಾಪು ಪಾಂಡವ ಬಲದಿಶಾಪಟ ರಾಯಮದನ ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೊಹ

ಪದ್ಯ ೪೮: ಕರ್ಣಾರ್ಜುನರ ಯುದ್ಧ ಮತ್ತೆ ಹೇಗೆ ಸಿದ್ಧಗೊಂಡಿತು?

ಧನುವ ಕೊಂಡನು ಹಯವ ಜರೆದ
ರ್ಜುನನ ತರುಬಿದನಖಿಳ ಕುರುಬಲ
ವನಧಿಗಭಯವನಿತ್ತು ಮುಸುಕಿದನಂಬಿನಲಿ ನರನ
ಕನಲಿದವು ನಿಸ್ಸಾಳ ರಿಪುನೃಪ
ಜನವ ಬಯ್ದವು ಕಹಳೆ ಬಹುವಿಧ
ನಿನದದಲಿ ಗರ್ಜಿಸಿದವೆರಡೊಡ್ಡಿನಲಿ ಘನವಾದ್ಯ (ಕರ್ಣ ಪರ್ವ, ೨೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕರ್ಣನು ಧನಸ್ಸನ್ನು ಹಿಡಿದುಕೊಂಡನು, ಕುದುರೆಗಳ ಹಗ್ಗವನ್ನು ಜಗ್ಗಿ ಅರ್ಜುನನನ್ನು ತಡೆದು ನಿಲ್ಲಿಸಿದನು. ಕುರುಸೇನೆಗೆ ಅಭಯವನ್ನಿತ್ತು ಅರ್ಜುನನನ್ನು ಬಾಣಗಳಿಂದ ಮುಚ್ಚಿದನು. ಭೇರಿಗಳು ಬದಿದವು, ಕಹಳೆಗಳು ಶತ್ರುಗಳನ್ನು ಬಯ್ದವು, ಎರಡೂ ಸೇನೆಗಳಲ್ಲಿ ರಣವಾದ್ಯಗಳು ಹೆಚ್ಚಿನ ಸದ್ದುಮಾಡತೊಡಗಿದವು.

ಅರ್ಥ:
ಧನು: ಬಿಲ್ಲು; ಕೊಂಡು: ಹಿಡಿದು; ಹಯ: ಕುದುರೆ; ಜರೆ: ಜಗ್ಗು; ತರುಬು: ತಡೆ, ನಿಲ್ಲಿಸು; ಅಖಿಳ: ಎಲ್ಲಾ; ಬಲ: ಸೈನ್ಯ; ಅಧಿಕ: ಹೆಚ್ಚಿನ; ಅಭಯ: ಧೈರ್ಯ; ಮುಸುಕು: ಆವರಿಸು; ಅಂಬು: ಬಾಣ; ನರ: ಅರ್ಜುನ; ಕನಲು: ಸಿಟ್ಟಿಗೇಳು; ನಿಸ್ಸಾಳ: ಚರ್ಮವಾದ್ಯ; ರಿಪು: ವೈರಿ; ನೃಪ: ರಾಜ; ಬಯ್ದು: ಜರೆ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಬಹುವಿಧ: ಬಹಳ; ನಿನದ: ಧ್ವನಿ; ಗರ್ಜಿಸು: ಜೋರಾಗಿ ಕೂಗು; ಒಡ್ಡು: ಗುಂಪು; ಘನ: ಗಟ್ಟಿ, ಶ್ರೇಷ್ಠ; ವಾದ್ಯ: ಸಂಗೀತದ ಸಾಧನ;

ಪದವಿಂಗಡಣೆ:
ಧನುವ +ಕೊಂಡನು +ಹಯವ +ಜರೆದ್
ಅರ್ಜುನನ +ತರುಬಿದನ್+ಅಖಿಳ +ಕುರುಬಲ
ವನ್+ಅಧಿಕ್+ಅಭಯವನಿತ್ತು+ ಮುಸುಕಿದನ್+ಅಂಬಿನಲಿ +ನರನ
ಕನಲಿದವು +ನಿಸ್ಸಾಳ +ರಿಪು+ನೃಪ
ಜನವ+ ಬಯ್ದವು+ ಕಹಳೆ+ ಬಹುವಿಧ
ನಿನದದಲಿ +ಗರ್ಜಿಸಿದವ್+ಎರಡ್+ಒಡ್ಡಿನಲಿ +ಘನವಾದ್ಯ

ಅಚ್ಚರಿ:
(೧) ವಾದ್ಯಗಳು ಬಯ್ದವು ಎಂದು ಹೇಳುವ ಕವಿಯ ಕಲ್ಪನೆ – ಕನಲಿದವು ನಿಸ್ಸಾಳ ರಿಪುನೃಪ ಜನವ ಬಯ್ದವು ಕಹಳೆ

ಪದ್ಯ ೪೭: ಕರ್ಣನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ರಥದ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ (ಕರ್ಣ ಪರ್ವ, ೨೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕರ್ಣನು ರಥವನ್ನೆತ್ತಿ ಸಿದ್ಧಪಡಿಸಿಕೊಂಡನು. ಅತಿರಥ ಭಯಂಕರನಾದ ಕರ್ಣನು ಕೈಕಾಲುಗಳನ್ನು ತೊಳೆದುಕೊಂಡು, “ಭೂಮಿಯು ನನಗೆ ಮಾಡಿದ ಅಪಕಾರವು ಲೋಕಪ್ರಸಿದ್ಧವಾಯಿತು, ಒಳ್ಳೆಯದು, ಕುಂತಿಯ ಮಕ್ಕಳೇ ಬದುಕಲಿ, ಎನ್ನುತ್ತಾ ನಕ್ಕು ವೀಳೆಯನ್ನು ಹಾಕಿಕೊಂಡನು.

ಅರ್ಥ:
ರಥ: ಬಂಡಿ; ಸಂತೈಸು: ಕಾಪಾಡು, ನಿವಾರಿಸು; ಬಳಿಕ: ನಂತರ; ಅತಿರಥ: ಪರಾಕ್ರಮಿ; ಭಯಂಕರ: ಭೀಕರ, ಉಗ್ರ; ಏರು: ಮೇಲೇಳು; ನಿಜ: ತನ್ನ ಸ್ವಂತ, ದಿಟ; ಹರುಷ: ಸಂತೋಷ; ತೊಳೆ: ಸ್ವಚ್ಛಗೊಳಿಸು; ಚರಣ: ಪಾದ; ಕರತಳ: ಅಂಗೈ; ಪೃಥಿವಿ: ಭೂಮಿ; ಅಪಕಾರ: ಕೆಡಕು ಮಾಡುವವ, ದ್ರೋಹ; ಲೋಕ: ಜಗತ್ತು; ಪ್ರಥಿತ: ಹೆಸರುವಾಸಿಯಾದ; ಸಾಕು: ಇನ್ನು ಬೇಡ, ಪೋಷಿಸು; ಬದುಕು: ಜೀವಿಸು; ಮಕ್ಕಳು: ತನುಜರು; ಕೊಂಡು: ಹಿಡಿದು; ನಗುತ: ಸಂತಸ; ವೀಳೆ: ತಾಂಬೂಲ;

ಪದವಿಂಗಡಣೆ:
ರಥದ +ಸಂತೈಸಿದನು +ಬಳಿಕ್+ಅತಿ
ರಥ +ಭಯಂಕರನ್+ಏರಿದನು +ನಿಜ
ರಥವನ್+ಅತಿ+ಹರುಷದಲಿ +ತೊಳೆದನು +ಚರಣ +ಕರತಳವ
ಪೃಥಿವಿ +ನೆನದ್+ಅಪಕಾರ +ಲೋಕ
ಪ್ರಥಿತವಾಯಿತು +ಸಾಕು +ಬದುಕಲಿ
ಪೃಥೆಯ +ಮಕ್ಕಳೆನುತ್ತ+ ಕೊಂಡನು +ನಗುತ +ವೀಳೆಯವ

ಅಚ್ಚರಿ:
(೧) ೧-೩ ಸಾಲಿನ ಮೊದಲ ಪದ “ರಥ”, ೪-೬ ಸಾಲು “ಪೃಥಿ, ಪೃಥ”
(೨) ಕರ್ಣನ ನೋವಿನ ನುಡಿ – ಪೃಥಿವಿ ನೆನದಪಕಾರ ಲೋಕ ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ

ಪದ್ಯ ೪೬: ಅರ್ಜುನನು ಕರ್ಣನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಹಿಡಿ ಧನುವನನುವಾಗುಸಾಕಿ
ನ್ನೆಡಬಲನ ಹಾರದಿರೆನುತ ಕಯ್
ಗಡಿಯನೆಚ್ಚನು ನೂರು ಶರದಲಿ ಸೂತನಂದನನ
ತೊಡಗಿತೇ ಕಕ್ಕುಲಿತೆ ಮನದಲಿ
ಫಡ ಎನುತ ನೂರಂಬನೆಡೆಯಲಿ
ಕಡಿದು ಬಿಸುಟನು ಸೆಳೆದು ಕಿಗ್ಗಟ್ಟಿನ ಕಠಾರಿಯಲಿ (ಕರ್ಣ ಪರ್ವ, ೨೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತನ್ನು ಕೇಳಿ ಅರ್ಜುನನು ಕರ್ಣನಿಗೆ, ಎಲೈ ಕರ್ಣ ಸಿದ್ಧನಾಗು ಧನುಸ್ಸನ್ನು ಹಿಡಿ, ಅಕ್ಕಪಕ್ಕದವರ ಬೆಂಬಲವನ್ನು ನಿರೀಕ್ಷಿಸಬೇಡ, ಎನ್ನುತ್ತಾ ನೂರು ಬಾಣಗಳನ್ನು ಕರ್ಣನ ಮೇಲೆ ಬಿಟ್ಟನು. ಇಂತಹ ಸ್ಥಿತಿಯಲ್ಲಿ ನನ್ನನ್ನು ಗೆಲ್ಲಬಹುದೆಂಬ ಚಿಂತೆ ನಿನ್ನ ಮನಸ್ಸಿನಲ್ಲಿ ಬಂದೀತೇ? ಎಂದು ಹೇಳಿ ಕರ್ಣನು ಕಠಾರಿಯಿಂದ ಆ ಬಾಣಗಳನ್ನು ಕಡಿದನು.

ಅರ್ಥ:
ಹಿಡಿ: ಬಂಧಿಸು; ಧನು: ಬಿಲ್ಲು; ಅನುವಾಗು: ಅನುಕೂಲ; ಎಡಬಲ: ಅಕ್ಕ ಪಕ್ಕ; ಬಲ: ಸೈನ್ಯ; ಹಾರು: ಬಯಸು; ಕಯ್: ಹಸ್ತ; ಗಡಿ: ಎಲ್ಲೆ; ಕಯ್ಗಡಿ: ಕೈಯ ತುದಿ; ಎಚ್ಚು: ಬಾಣ ಬಿಡು; ನೂರು: ಶತ; ಶರ: ಬಾಣ; ಸೂತ: ರಥವನ್ನು ಓಡಿಸುವವ; ನಂದನ: ಮಗ; ತೊಡಗು: ಸೆಣಸು, ಹೋರಾಡು; ಕಕ್ಕುಲಿತೆ:ಚಿಂತೆ; ಮನ: ಮನಸ್ಸು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಎನುತ: ಹೇಳುತ್ತಾ; ಅಂಬು: ಬಾಣ; ಎಡೆ: ತೆಗೆ, ತಕ್ಷಣ; ಕಡಿ: ಸೀಳು; ಬಿಸುಟು: ಹೊರಹಾಕು; ಸೆಳೆ: ಹತ್ತಿರ ತರು; ಕಿಗ್ಗಟ್ಟು: ಕೆಳಭಾಗದ ಕಟ್ಟು; ಕಠಾರಿ: ಕತ್ತಿ

ಪದವಿಂಗಡಣೆ:
ಹಿಡಿ +ಧನುವನ್+ಅನುವಾಗು+ಸಾಕಿನ್
ಎಡಬಲನ +ಹಾರದಿರ್+ಎನುತ +ಕಯ್
ಗಡಿಯನ್+ಎಚ್ಚನು +ನೂರು +ಶರದಲಿ +ಸೂತ+ನಂದನನ
ತೊಡಗಿತೇ+ ಕಕ್ಕುಲಿತೆ+ ಮನದಲಿ
ಫಡ+ ಎನುತ +ನೂರಂಬನ್+ಎಡೆಯಲಿ
ಕಡಿದು +ಬಿಸುಟನು +ಸೆಳೆದು+ ಕಿಗ್ಗಟ್ಟಿನ +ಕಠಾರಿಯಲಿ

ಅಚ್ಚರಿ:
(೧) ಕರ್ಣನ ಪರಾಕ್ರಮ: ನೂರಂಬನೆಡೆಯಲಿ ಕಡಿದು ಬಿಸುಟನು ಸೆಳೆದು ಕಿಗ್ಗಟ್ಟಿನ ಕಠಾರಿಯಲಿ
(೨) ಕರ್ಣನು ಅರ್ಜುನನನ್ನು ಬಯ್ಯುವ ಪರಿ – ತೊಡಗಿತೇ ಕಕ್ಕುಲಿತೆ ಮನದಲಿ ಫಡ

ಪದ್ಯ ೪೫: ಅರ್ಜುನನು ಮತ್ತೆ ಬಿಲ್ಲನ್ನು ಏಕೆ ಹಿಡಿದನು?

ಬೀಸಿದನು ನಿಜ ಮಾಯೆಯನು ಡೊ
ಳ್ಳಾಸದಲಿ ಹರಹಿದನು ತಮವನು
ರೋಷವನು ಬಿತ್ತಿದನು ಮನದಲಿ ನರನ ಕಲಿಮಾಡಿ
ಐಸೆ ಬಳಿಕೇನೆನ್ನಖಿಳಗುಣ
ದೋಷ ನಿನ್ನದು ಪುಣ್ಯಪಾಪದ
ವಾಸಿ ನಮಗೇಕೆನುತ ಕೊಂಡನು ಧನುವನಾ ಪಾರ್ಥ (ಕರ್ಣ ಪರ್ವ, ೨೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕೃಷ್ಣನ ಇಷ್ಟೆಲ್ಲಾ ಮಾತುಗಳಿಗೆ ಅರ್ಜುನನು ಒಪ್ಪದಿರಲು, ಕೃಷ್ಣನು ತನ್ನ ಮಾಯೆಯನ್ನು ಬೀಸಿ ತಮೋಗುಣವನ್ನು ಅರ್ಜುನನ ಮನಸ್ಸಿನಲ್ಲಿ ಬಿತ್ತಿ ಕೋಪವನ್ನುಂಟುಮಾಡಿದನು. ಆಗ ಅರ್ಜುನನು ಅಷ್ಟೇ ತಾನೇ ನನ್ನ ಎಲ್ಲಾ ಗುಣದೋಷಗಳೂ ನಿನಗೆ ಸೇರಿದ್ದು, ಪುಣ್ಯವೋ ಪಾಪವೋ ಅದರ ಲೆಕ್ಕವೇಕೆ? ಎನ್ನುತ್ತಾ ಅರ್ಜುನನು ಗಾಂಡೀವವನ್ನು ಹಿಡಿದನು.

ಅರ್ಥ:
ಬೀಸು: ವಿಸ್ತಾರ, ಹರಹು; ನಿಜ: ದಿಟ, ತನ್ನ; ಮಾಯೆ: ಅಜ್ಞಾನ, ತಮೋಗುಣ, ಗಾರುಡಿ; ಡೊಳ್ಳಾಸ: ಮೋಸ, ಕಪಟ; ಹರಹು: ಹಬ್ಬುವಿಕೆ, ಪ್ರಸರ; ತಮ: ಮೂರು ಮೂಲ ಗುಣಗಳಲ್ಲಿ ಒಂದು, ಅಜ್ಞಾನ; ರೋಷ: ಕೋಪ; ಬಿತ್ತು: ಉಂಟುಮಾಡು; ಮನ: ಮನಸ್ಸು; ನರ: ಅರ್ಜುನ; ಕಲಿ: ಅರಿತುಕೊಳ್ಳು, ವೀರ; ಐಸೆ: ಅಷ್ಟೆ; ಬಳಿಕ: ನಂತರ; ಅಖಿಳ: ಎಲ್ಲಾ; ಗುಣ: ನಡತೆ, ಸ್ವಭಾವ; ದೋಷ: ಕುಂದು, ಕಳಂಕ; ಪುಣ್ಯ: ಸದಾಚಾರ; ಪಾಪ: ಪುಣ್ಯವಲ್ಲದ ಕಾರ್ಯ; ವಾಸಿ: ಪ್ರತಿಜ್ಞೆ, ಶಪಥ; ಕೊಂಡನು: ಹಿಡಿ; ಧನು: ಬಿಲ್ಲು;

ಪದವಿಂಗಡಣೆ:
ಬೀಸಿದನು +ನಿಜ +ಮಾಯೆಯನು +ಡೊ
ಳ್ಳಾಸದಲಿ +ಹರಹಿದನು +ತಮವನು
ರೋಷವನು +ಬಿತ್ತಿದನು +ಮನದಲಿ +ನರನ +ಕಲಿಮಾಡಿ
ಐಸೆ +ಬಳಿಕೇನ್+ಎನ್ನ್+ಅಖಿಳ+ಗುಣ
ದೋಷ +ನಿನ್ನದು +ಪುಣ್ಯ+ಪಾಪದ
ವಾಸಿ +ನಮಗೇಕೆನುತ+ ಕೊಂಡನು +ಧನುವನಾ+ ಪಾರ್ಥ

ಅಚ್ಚರಿ:
(೧) ಅರ್ಜುನನ ಕೃಷ್ಣನ ಮೇಲಿನ ನಂಬಿಕೆ – ಅಖಿಳಗುಣ ದೋಷ ನಿನ್ನದು ಪುಣ್ಯಪಾಪದ
ವಾಸಿ ನಮಗೇಕೆ;
(೨) ನು ಕಾರಾಂತ್ಯ ಪದಗಳು – ತಮವನು, ಮಾಯೆಯನು, ಬಿತ್ತಿದನು, ರೋಷವನು, ಹರಹಿದನು