ಪದ್ಯ ೩೭: ಅರ್ಜುನನು ಏಕೆ ಕರ್ಣನನು ಕೊಲ್ಲುವುದಿಲ್ಲವೆಂದ -೨?

ಬಿಸುಟು ಹೋದನು ರಥವ ಸಾರಥಿ
ವಸುಧೆಯಲಿ ರಥವೆದ್ದು ಕೆಡೆದುದು
ನಿಶಿತಮಾರ್ಗಣವಿಲ್ಲ ಕಯ್ಯಲಿ ದಿವ್ಯದನುವಿಲ್ಲ
ಎಸುವಡೆಂತೇಳುವುವು ಕಯ್ ನೀ
ಬೆಸಸುವಡೆ ಮನವೆಂತು ಬಂದುದು
ಬಸುರ ಶಿಖಿ ಬಲುಹಾಯ್ತು ಕರ್ಣನ ಕೊಲುವನಲ್ಲೆಂದ (ಕರ್ಣ ಪರ್ವ, ೨೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕರ್ಣನ ಸ್ಥಿತಿಯನ್ನು ನೋಡಿ ಅರ್ಜುನ, ಕೃಷ್ಣ, ಇವನ ಸಾರಥಿಯು ಇವನ ರಥವನ್ನು ತೊರೆದು ಹೋಗಿದ್ದಾನೆ, ರಥವು ನೆಲದಲ್ಲಿ ಹೂತು ಹೋಗಿದೆ, ಕೈಯಲ್ಲಿ ಬಿಲ್ಲಿಲ್ಲ, ಬಾಣವಿಲ್ಲ, ಇವನ ಮೇಲೆ ಬಾಣ ಬಿಡಲು ನನ್ನ ಕೈಯಾದರೂ ಹೇಗೆ ಮೇಲೇಳುತ್ತದೆ? ನೀನಗೆ ಅಪ್ಪಣೆ ಕೊಡಲು ಮನಸ್ಸಾದರೂ ಹೇಗೆ ಬರುತ್ತದೆ? ಹೊಟ್ಟೆಯಲ್ಲಿ ಬೆಂಕಿ ಬಿದ್ದಿದೆ, ಬಹಳ ನೋವಾಗಿದೆ, ನಾನು ಕರ್ಣನನ್ನು ಕೊಲ್ಲುವುದಿಲ್ಲ ಎಂದು ಅರ್ಜುನನು ಕೃಷ್ಣನಿಗೆ ಹೇಳಿದನು.

ಅರ್ಥ:
ಬಿಸುಟು: ಹೊರಹಾಕು, ತೊರೆದು; ಹೋಗು: ತೆರಳು; ರಥ: ಬಂಡಿ; ಸಾರಥಿ: ಸೂತ, ರಥವನ್ನು ಓಡಿಸುವವ; ವಸುಧೆ: ಭೂಮಿ; ಕೆಡೆ: ಬೀಳು, ಕುಸಿ; ನಿಶಿತ: ಹರಿತ; ಮಾರ್ಗಣ: ಬಾಣ; ಕಯ್ಯ್: ಹಸ್ತ; ದಿವ್ಯ: ಶ್ರೇಷ್ಠ; ಧನು: ಬಿಲ್ಲು; ಎಸು: ಬಾಣ ಬಿಡು; ಏಳು: ಮೇಲೇರಿಸು; ಬೆಸಸು: ಆಜ್ಞಾಪಿಸು, ಹೇಳು; ಮನ: ಮನಸ್ಸು; ಬಸುರ: ಗರ್ಭ; ಶಿಖಿ: ಬೆಂಕಿ; ಬಲುಹು: ಬಹಳ; ಕೊಲು: ಸಾಯಿಸು;

ಪದವಿಂಗಡಣೆ:
ಬಿಸುಟು +ಹೋದನು +ರಥವ +ಸಾರಥಿ
ವಸುಧೆಯಲಿ +ರಥವ್+ಇದ್ದು +ಕೆಡೆದುದು
ನಿಶಿತಮಾರ್ಗಣವಿಲ್ಲ+ ಕಯ್ಯಲಿ +ದಿವ್ಯದನುವಿಲ್ಲ
ಎಸುವಡ್+ಎಂತ್+ಏಳುವುವು +ಕಯ್ +ನೀ
ಬೆಸಸುವಡೆ +ಮನವೆಂತು +ಬಂದುದು
ಬಸುರ +ಶಿಖಿ +ಬಲುಹಾಯ್ತು +ಕರ್ಣನ +ಕೊಲುವನಲ್ಲೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಸುರ ಶಿಖಿ ಬಲುಹಾಯ್ತು

ಪದ್ಯ ೩೬: ಅರ್ಜುನನು ಏಕೆ ಕರ್ಣನನು ಕೊಲ್ಲುವುದಿಲ್ಲವೆಂದ?

ಅಕಟ ನಿಷ್ಕರುಣಿಯೆ ವೃಥಾ ಪಾ
ತಕವಿದೇಕೈ ಹೇಳು ಜಯಕಾ
ಮುಕರು ನಾವೊಲ್ಲದಡೆ ನಿಮಗೇಕೀಸು ನಿರ್ಬಂಧ
ಪ್ರಕಟ ಕುರುವಂಶದಲಿ ಯದುರಾ
ಜಕರೊಡನೆ ಹಗೆಯಿಲ್ಲಲೇ ಮತಿ
ವಿಕಳನಾದೆನು ಕೃಷ್ಣ ಕರ್ಣನ ಕೊಲುವನಲ್ಲೆಂದ (ಕರ್ಣ ಪರ್ವ, ೨೬ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ಅಯ್ಯೋ ನಿಷ್ಕರುಣಿಯಾದೆಯಾ ಕೃಷ್ಣ, ಸುಮ್ಮನೆ ಈ ಪಾಪದ ಕಾರ್ಯವನ್ನು ಏಕೆ ಮಾಡಬೇಕು? ಜಯವು ಬೇಕಾಗಿರುವುದು ನಮಗೆ, ನೀನೇಕೆ ಇಷ್ಟು ನಿರ್ಬಂಧವನ್ನು ಹೇರುತ್ತಿರುವೆ?ಕೌರವರಿಗೂ ಯಾದವರಿಗೂ ಯಾವುದಾದರು ರಹಸ್ಯ ವೈರತ್ವವಿಲ್ಲತಾನೆ? ನನ್ನ ಬುದ್ಧಿ ಕೆಟ್ಟು ಹೋಗಿದೆ ನಾನು ಕರ್ಣನನ್ನು ಕೊಲ್ಲುವುದಿಲ್ಲ ಕೃಷ್ಣ ಎಂದು ಅರ್ಜುನನು ಹೇಳಿದನು.

ಅರ್ಥ:
ಅಕಟ: ಅಯ್ಯೋ; ನಿಷ್ಕರುಣಿ: ಕರುಣೆಯಿಲ್ಲದ; ವೃಥಾ: ಸುಮ್ಮನೆ; ಪಾತಕ: ಪಾಪ, ದೋಷ; ಹೇಳು: ತಿಳಿಸು; ಜಯ; ಗೆಲುವು; ಮುಕುರ: ಕನ್ನಡಿ; ಈಸು: ಇಷ್ಟು; ನಿರ್ಬಂಧ: ಪಟ್ಟು ಹಿಡಿಯುವಿಕೆ, ದೃಢ ಸಂಕಲ್ಪ; ಪ್ರಕಟ: ನಿಚ್ಚಳವಾದ, ಸ್ಪಷ್ಟವಾದ; ವಂಶ: ಕುಲ; ಹಗೆ: ವೈರ; ಮತಿ: ಬುದ್ಧಿ; ವಿಕಳ:ಭ್ರಮೆ, ಭ್ರಾಂತಿ;

ಪದವಿಂಗಡಣೆ:
ಅಕಟ +ನಿಷ್ಕರುಣಿಯೆ +ವೃಥಾ +ಪಾ
ತಕವ್+ಇದೇಕೈ +ಹೇಳು +ಜಯಕಾ
ಮುಕರು +ನಾವೊಲ್ಲದಡೆ+ ನಿಮಗೇಕ್+ಈಸು +ನಿರ್ಬಂಧ
ಪ್ರಕಟ+ ಕುರುವಂಶದಲಿ +ಯದು+ರಾ
ಜಕರೊಡನೆ +ಹಗೆಯಿಲ್ಲಲೇ +ಮತಿ
ವಿಕಳನಾದೆನು +ಕೃಷ್ಣ +ಕರ್ಣನ +ಕೊಲುವನಲ್ಲೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೃಷ್ಣ ಕರ್ಣನ ಕೊಲುವನಲ್ಲೆಂದ
(೨) ಅರ್ಜುನ ಕೃಷ್ಣನನ್ನು ಸಂಶಯಿಸುವ ಪರಿ – ಅಕಟ ನಿಷ್ಕರುಣಿಯೆ ವೃಥಾ ಪಾ
ತಕವಿದೇಕೈ, ಕುರುವಂಶದಲಿ ಯದುರಾಜಕರೊಡನೆ ಹಗೆಯಿಲ್ಲಲೇ

ಪದ್ಯ ೩೫: ಶ್ರೀಕೃಷ್ಣನು ಅರ್ಜುನನಿಗೆ ಏನು ಆಜ್ಞಾಪಿಸಿದ?

ಈಗಲೀ ಧರ್ಮಶ್ರವಣ ನೀ
ನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ ಮರೆದಲಾ ಮಾತುಗಳು ಹಳಸುವವೆ
ಹೋಗಲೆಲೆ ಮರುಳೇ ವಿಭಾಡಿಸು
ಬೇಗದಲಿ ಬಹುರಾಜಕಾರ್ಯವ
ನೀಗಳೇ ತಿದ್ದುವೆನು ತೊಲಗಿಸು ಸೂತಜನ ಶಿರವ (ಕರ್ಣ ಪರ್ವ, ೨೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಏನಿದು ಅರ್ಜುನ ಈಗಲೇ ಏನೋ ಧರ್ಮ ಶ್ರವಣ ಮಾಡಿಸುತ್ತಿರುವೇ? ನೀನು ಹಿಂದೆ ಮಾಡಿದ ಶಪಥ ಮೂಗು ಕತ್ತರಿಸಿ ಹೋಯಿತೇ? ನಿನ್ನ ಶಪಥ ಹಳಸಿಹೋಯಿತೇ? ಅರ್ಜುನ ನಿನಗೆಲ್ಲೋ ಹುಚ್ಚು ಹಿಡಿದಿದೆ, ಕರ್ಣನನ್ನು ಬೇಗೆ ಬಡಿದುಕೊಲ್ಲು, ರಾಜಕಾರ್ಯವನ್ನು ಸರಿಪಡಿಸುತ್ತೇನೆ, ಕರ್ಣನ ತಲೆಯನ್ನು ಕದಿದುರುಳಿಸು ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಈಗಲೆ: ಕೂಡಲೆ; ಧರ್ಮ: ಧಾರಣೆ ಮಾಡಿದುದು, ನಿಯಮ; ಶ್ರವಣ: ಕೇಳು; ಏರಿಸಿ: ಜೋರಾದ, ಹೆಚ್ಚಾದ; ನುಡಿ: ಮಾತಾಡು; ಭಾಷೆ: ಮಾತು, ಪ್ರತಿಜ್ಞೆ; ಮೂಗುಹೋಗು: ಮೂಗು ಕತ್ತರಿಸು, ವಿಮುಖನಾಗು; ಮರೆ: ನೆನಪಿನಿಂದ ದೂರ ಸರಿ; ಮಾತು: ವಾಣಿ; ಹಳಸು: ಕೆಟ್ಟುಹೋಗು, ಹಳೆಯದಾಗು; ಹೋಗು: ತೆರಳು; ಮರುಳು: ಮೂರ್ಖ,ಹುಚ್ಚು; ವಿಭಾಡಿಸು: ನಾಶಮಾಡು; ಬೇಗ: ಶೀಘ್ರ; ಬಹು: ದೊಡ್ಡ; ರಾಜಕಾರ್ಯ: ರಾಜಕಾರಣ, ರಾಜಕೆಲಸ; ತಿದ್ದು: ಸರಿಪಡಿಸು; ತೊಲಗಿಸು: ನಾಶಮಾಡು, ಹೊರಹಾಕು; ಸೂತಜ: ಸೂತಪುತ್ರ; ಶಿರ: ತಲೆ;

ಪದವಿಂಗಡಣೆ:
ಈಗಲೀ ಧರ್ಮಶ್ರವಣ ನೀ
ನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ ಮರೆದಲಾ ಮಾತುಗಳು ಹಳಸುವವೆ
ಹೋಗಲೆಲೆ ಮರುಳೇ ವಿಭಾಡಿಸು
ಬೇಗದಲಿ ಬಹುರಾಜಕಾರ್ಯವ
ನೀಗಳೇ ತಿದ್ದುವೆನು ತೊಲಗಿಸು ಸೂತಜನ ಶಿರವ

ಅಚ್ಚರಿ:
(೧) ಅರ್ಜುನನನ್ನು ಮೂದಲಿಸುವ ಪರಿ – ನೀನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ, ಮರೆದಲಾ ಮಾತುಗಳು ಹಳಸುವವೆ, ಹೋಗಲೆಲೆ ಮರುಳೇ

ಪದ್ಯ ೩೪: ಕೃಷ್ಣನು ಅರ್ಜುನನನ್ನು ಹೇಗೆ ಉತ್ತೇಜಿಸಲು ಪ್ರಯತ್ನಿಸಿದನು?

ಹೇಳು ಹೇಳಿನ್ನೊಮ್ಮೆ ಧರ್ಮವ
ಕೇಳಿದರಿಯೆವು ನಿಮ್ಮ ಕಯ್ಯಲಿ
ಕೇಳಲಾಗದೆ ರಾಜಧರ್ಮ ಪುರಾಣ ಸಂಗತಿಯ
ಆಳಿವನಘಾಟವೆ ದೊಠಾರಿಸಿ
ಸೋಲಿಸುವುದೇನರಿದೆ ಬಲುಗೈ
ಯಾಳಲಾ ನೀ ರಣಕೆ ದಿಟ ವಸುದೇವನಾಣೆಂದ (ಕರ್ಣ ಪರ್ವ, ೨೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನ ಧರ್ಮವಿಚಾರವನ್ನು ಕೇಳಿ, ಅರ್ಜುನ ಹೇಳು ಇನ್ನೊಮ್ಮೆ ಹೇಳು, ಧರ್ಮವಿಚಾರವನ್ನು ನಾನು ಕೇಳಿ ತಿಳಿದಿಲ್ಲ, ರಾಜಧರ್ಮದ ಪುರಾತನ ತತ್ವವನ್ನು ನಿನ್ನಿಂದ ಕೇಳಿ ತಿಳಿದರೇನು ತಪ್ಪು, ಇವನೇನು ದುರ್ಬಲನಾದವನೇ? ಇವನನ್ನು ಯುದ್ಧದಲ್ಲಿ ವೀರಾವೇಶದಿಂದ ಕಾದಿ ಸೋಲಿಸುವುದೇನು ಕಷ್ಟದ ಸಂಗತಿಯೇ? ನೀನು ಮಹಾಶೂರ, ಯುದ್ಧದಲ್ಲಿ ನಿನಗೆ ಸಮನಾರು? ಇದು ವಸುದೇವನಾಣೆ ಎಂದು ಕೃಷ್ಣನು ಅರ್ಜುನನನ್ನು ಉತ್ತೇಜಿಸಲು ಪ್ರಯತ್ನಿಸಿದ.

ಅರ್ಥ:
ಹೇಳು: ತಿಳಿಸು; ಧರ್ಮ: ಧಾರಣೆ ಮಾಡಿದುದು; ಕೇಳಿ: ಆಲಿಸು; ಅರಿ: ತಿಳಿ; ಕಯ್ಯಲಿ: ನಿಮ್ಮಿಂದ; ರಾಜಧರ್ಮ: ರಾಜಕಾರ್ಯ; ಪುರಾಣ: ಹಿಂದಿನ; ಸಂಗತಿ: ವಿಚಾರ; ಘಾಟ: ಕುತ್ತಿಗೆಯ ಹಿಂಭಾಗ, ಹೆಕ್ಕತ್ತು; ದೊಠಾರ: ಶೂರ, ಕಲಿ; ಸೋಲಿಸು: ಪರಾಭವಗೊಳಿಸು; ಬಲುಗೈಯಾಳು: ಮಹಾಶೂರ; ರಣ: ಯುದ್ಧ; ದಿಟ: ಸತ್ಯ; ಆಣೆ: ಪ್ರತಿಜ್ಞೆ;

ಪದವಿಂಗಡಣೆ:
ಹೇಳು +ಹೇಳ್+ಇನ್ನೊಮ್ಮೆ +ಧರ್ಮವ
ಕೇಳಿದ್+ಅರಿಯೆವು +ನಿಮ್ಮ +ಕಯ್ಯಲಿ
ಕೇಳಲಾಗದೆ +ರಾಜಧರ್ಮ +ಪುರಾಣ +ಸಂಗತಿಯ
ಆಳಿವನಘಾಟವೆ +ದೊಠಾರಿಸಿ
ಸೋಲಿಸುವುದ್+ಏನ್+ಅರಿದೆ+ ಬಲುಗೈ
ಯಾಳಲಾ +ನೀ +ರಣಕೆ +ದಿಟ +ವಸುದೇವನಾಣೆಂದ

ಅಚ್ಚರಿ:
(೧) ದೊಠಾರ, ಬಲುಗೈಯಾಳು – ಅರ್ಜುನನನ್ನು ಹೊಗಳುವ ಪರಿ

ಪದ್ಯ ೩೩: ಅರ್ಜುನನು ಕೃಷ್ಣನಿಗೆ ಯಾವುದು ಧರ್ಮ ಎಂದು ಕೇಳಿದ?

ಕ್ಷಿತಿಯೊಳೀ ಕ್ಷತ್ರಿಯರ ಧರ್ಮ
ಸ್ಥಿತಿಯನರಿಯಾ ಕೃಶ್ಣ ಚಾಪ
ಚ್ಯುತರನಪಗತವಾಹನರ ಪರಿಮುಕ್ತ ಕೇಶಿಗಳೆ
ಗತಿವಿಹೀನರ ದೈನ್ಯವಾಚಾ
ಯುತರ ತರು ವಲ್ಮೀಕ ಜಲ ಸಂ
ಗತರನಿರಿವುದು ಧರ್ಮವೇ ನಾವರಿಯೆವೆದನೆಂದ (ಕರ್ಣ ಪರ್ವ, ೨೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನ ಮಾತಿಗೆ ಉತ್ತರಿಸುತ್ತಾ, ಕೃಷ್ಣ ನಿನಗೆ ಕ್ಷತ್ರಿಯ ಧರ್ಮ ತಿಳಿಯದೇ? ಬಿಲ್ಲು ಜಾರಿದವರನ್ನು ವಾಹನವಿಲ್ಲದವರನ್ನು, ತಲೆಯನ್ನು ಬಿರಿ ಹೊಯ್ದುಕೊಂಡಿರುವವರನ್ನು, ಗತಿಯಿಲ್ಲದವರನ್ನು ದೈನ್ಯದಿಂದ ಮಾತಾಡುವವರನ್ನು, ಮರ, ಹುತ್ತ, ನೀರನ್ನು ಆಶ್ರಯಿಸಿರುವವರನ್ನು ಕೊಲ್ಲುವುದು ಧರ್ಮವೇ? ನನಗಿದು ತಿಳಿದಿಲ್ಲ ಎಂದು ಅರ್ಜುನನು ಹೇಳಿದನು.

ಅರ್ಥ:
ಕ್ಷಿತಿ: ಭೂಮಿ; ಕ್ಷತ್ರಿಯ: ನಾಲ್ಕು ವರ್ಣಗಳಲ್ಲೊಂದು; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಅವಸ್ಥೆ; ಅರಿ: ತಿಳಿ; ಚಾಪ: ಬಿಲ್ಲು; ಚ್ಯುತ: ಕಳೆದುಕೊಂಡವನು; ಅಪಗತ: ದೂರ ಸರಿದ; ವಾಹನ: ಚಲಿಸುವ ಸಾಧನ; ಮುಕ್ತ: ಬಿಡುಗಡೆ ಹೊಂದಿದವನು; ಕೇಶಿ: ಕೂದಲು; ಗತಿ:ವೇಗ; ವಿಹೀನ: ತೊರೆದ, ತ್ಯಜಿಸಿದ; ದೈನ್ಯ: ದೀನತೆ, ಹೀನಸ್ಥಿತಿ; ವಾಚಾಯುತ: ಮಾತಾಡು; ತರು: ಮರ; ವಲ್ಮೀಕ: ಹುತ್ತ; ಜಲ: ನೀರು; ಸಂಗತರ: ಜೊತೆ, ಆಶ್ರಯಿಸು; ಇರಿ: ಚುಚ್ಚು; ಅರಿ: ತಿಳಿ;

ಪದವಿಂಗಡಣೆ:
ಕ್ಷಿತಿಯೊಳ್+ಈ+ ಕ್ಷತ್ರಿಯರ +ಧರ್ಮ
ಸ್ಥಿತಿಯನ್+ಅರಿಯಾ+ಕೃಷ್ಣ+ ಚಾಪ
ಚ್ಯುತರನ್+ಅಪಗತ+ವಾಹನರ+ ಪರಿಮುಕ್ತ+ ಕೇಶಿಗಳೆ
ಗತಿವಿಹೀನರ +ದೈನ್ಯ+ವಾಚಾ
ಯುತರ+ ತರು +ವಲ್ಮೀಕ +ಜಲ +ಸಂ
ಗತರನ್+ಇರಿವುದು +ಧರ್ಮವೇ+ ನಾವರಿಯೆವಿದನೆಂದ

ಅಚ್ಚರಿ:
(೧) ಕ್ಷಿತಿ, ಕ್ಷತ್ರಿಯ; ಚಾಪ ಚ್ಯುತ; – ಪದಗಳ ಬಳಕೆ

ಪದ್ಯ ೩೨: ಕೃಷ್ಣನು ಅರ್ಜುನನನ್ನು ಹೇಗೆ ಹಂಗಿಸಿದನು?

ವಾಸಿಗಾದುದೆ ಜಾತಿಸಂಕರ
ಬೇಸರಾಯಿತೆ ಧೃತಿಗೆ ಕಲಿತನ
ಕೀಸು ಮೊಲೆಗಳು ಮೂಡಿದವಲಾ ಪಾರ್ಥ ಸಮರದಲಿ
ಹೂಸಕದ ಛಲವೀಯಹಂಕೃತಿ
ಮೀಸಲಳಿದುದೆ ಶಿವಶಿವಾ ನಿ
ರ್ದೋಷದಲಿ ಬಹುದೋಷವಿದು ವಿಪರೀತವಾಯ್ತೆಂದ (ಕರ್ಣ ಪರ್ವ, ೨೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಮಾತನ್ನು ಮುಂದುವರಿಸುತ್ತಾ, ಅರ್ಜುನ, ನಿನ್ನ ಶಪಥ ಕುಲತೆಟ್ಟಿತೇ? ಧರಿಯಕ್ಕೆ ಬೇಸರ ಬಂದಿತೇ? ನಿನ್ನ ಶೂರತ್ವಕ್ಕೆ ಹೆಣ್ತನ ಬಂದಿತೇ? ನಿನ್ನ ಛಲ ನಿಜವಾದ ಛಲದಂತೆ ಕಾಣುತ್ತಿಲ್ಲ, ನಿನ್ನ ಸ್ವಾಭಿಮಾನ ಕಳೆಗುಂದಿತೆ, ಶಿವ ಶಿವಾ ನಿರ್ದೋಷಿಯಾದ ನಿನ್ನಲ್ಲಿ ಬಹುದೋಷವುಂಟಾದದ್ದು ಅಚ್ಚರಿ ಎಂದು ಕೃಷ್ಣನು ಅರ್ಜುನನನ್ನು ಜರೆದನು.

ಅರ್ಥ:
ವಾಸಿ: ಪ್ರತಿಜ್ಞೆ, ಶಪಥ; ಸಂಕರ: ಬೆರಕೆ, ಮಿಶ್ರಣ; ಜಾತಿ: ಕುಲ; ಜಾತಿಸಂಕರ: ಜಾತಿಗಳು ಪರಸ್ಪರ ಬೆರಕೆಯಾಗುವುದು; ಬೇಸರ: ಬೇಜಾರು; ಧೃತಿ: ಧೈರ್ಯ; ಕಲಿ: ಶೂರ; ಮೊಲೆ: ಸ್ತನ; ಮೂಡು: ಕಾಣಿಸು; ಸಮರ: ಯುದ್ಧ; ಹೂಸಕ: ಸುಳ್ಳು, ಹುಸಿ, ಆಡಂಬರ; ಛಲ: ದೃಢ ನಿಶ್ಚಯ; ಅಹಂ: ಗರ್ವ, ಠೀವಿ; ಮೀಸಲು: ಮುಡಿಪು; ನಿರ್ದೋಷ: ದೋಷರಹಿತನಾದ; ಬಹು: ಬಹಳ, ತುಂಬ; ದೋಷ: ನ್ಯೂನ್ಯತೆ; ವಿಪರೀತ: ತುಂಬ, ಹೆಚ್ಚು;

ಪದವಿಂಗಡಣೆ:
ವಾಸಿಗಾದುದೆ +ಜಾತಿಸಂಕರ
ಬೇಸರಾಯಿತೆ +ಧೃತಿಗೆ+ ಕಲಿತನಕ್
ಈಸು+ ಮೊಲೆಗಳು+ ಮೂಡಿದವಲಾ +ಪಾರ್ಥ +ಸಮರದಲಿ
ಹೂಸಕದ+ ಛಲವೀ+ಅಹಂಕೃತಿ
ಮೀಸಲ್+ಅಳಿದುದೆ +ಶಿವಶಿವಾ +ನಿ
ರ್ದೋಷದಲಿ +ಬಹುದೋಷವಿದು+ ವಿಪರೀತವಾಯ್ತೆಂದ

ಅಚ್ಚರಿ:
(೧) ಅರ್ಜುನನ ಶೂರತ್ವವನ್ನು ಪ್ರಶ್ನಿಸುವ ಬಗೆ – ಕಲಿತನಕೀಸು ಮೊಲೆಗಳು ಮೂಡಿದವಲಾ
(೨) ಅರ್ಜುನನನ್ನು ಹೊಗಳು ಮತ್ತು ತೆಗಳುವ ಬಗೆ – ನಿರ್ದೋಷದಲಿ ಬಹುದೋಷವಿದು ವಿಪರೀತವಾಯ್ತೆಂದ

ಪದ್ಯ ೩೧: ಕೃಷ್ಣನು ಅರ್ಜುನನಿಗೆ ಕರ್ಣನಾರೆಂದು ಉತ್ತರಿಸಿದ?

ಅರಸ ಕೇಳೈ ಬಳಿಕ ಪಾರ್ಥನ
ಕರುಣರಸದಾಳಾಪ ವಾಗ್ವಿ
ಸ್ತರಕೆ ಮನದಲಿ ಮರುಗಿದನು ಮುರವೈರಿ ನಸುನಗುತ
ಕೆರಳಿದನು ಮಾತಿನಲಿ ಸುಡು ಬಾ
ಹಿರನಲಾ ನೀ ನಿನ್ನ ವಂಶಕೆ
ಸರಿಯೆ ಸೂತನ ಮಗನಿದೇನೆಂದಸುರರಿಪು ಜರೆದ (ಕರ್ಣ ಪರ್ವ, ೨೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಕಥೆಯ ವಿವರಣೆಯನ್ನು ಮುಂದುವರೆಸುತ್ತಾ, ರಾಜ ಕೇಳು ಅರ್ಜುನನ ವಿಸ್ತಾರವಾದ ಪ್ರಶ್ನೆಗಳನ್ನು ಆಲಿಸಿದ ಶ್ರೀಕೃಷ್ಣನು ಅರ್ಜುನನ ಸ್ಥಿತಿಗೆ ಮನದಲ್ಲಿಯೇ ಕನಿಕರಿಸಿದನು, ಆದರೆ ಬಾಹಿರದಲ್ಲಿ ನಸುನಕ್ಕು ಕೋಪಗೊಂಡವನಂತೆ ಅರ್ಜುನ ಇವನು ನಿನ್ನ ವಂಶಕ್ಕೂ ಕ್ಷತ್ರಿಯ ಕುಲಕ್ಕೂ ಹೊರಗಾದವನು, ಈ ಸೂತಪುತ್ರನು ಚಂದ್ರವಂಶದಲ್ಲಿ ಜನಿಸಿದ ನಿನಗೆ ಸರಿಸಮಾನನೇ ಎಂದು ಜರೆದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ಕರುಣರಸ: ದಯೆಯ ಭಾವನೆ; ಆಳಾಪ: ಅಳಲು; ವಾಗ್: ಮಾತು; ವಿಸ್ತರ: ವಿಶಾಲ; ಮನ: ಮನಸ್ಸು; ಮರುಗು: ಕನಿಕರಿಸು; ಮುರವೈರಿ: ಕೃಷ್ಣ; ನಸುನಗು: ಮಂದಸ್ಮಿತ; ಕೆರಳು: ಕೋಪಗೊಳ್ಳು; ಮಾತು: ವಾಣಿ; ಸುಡು: ನಾಶಮಾಡು; ಬಾಹಿರ: ಹೊರಗಿನವ; ವಂಶ: ಕುಲ; ಸರಿ: ಸಮಾನ; ಸೂತ: ರಥವನ್ನು ಓಡಿಸುವವ; ಮಗ: ಪುತ್ರ; ಅಸುರರಿಪು: ದಾನವರ ವೈರಿ (ಕೃಷ್ಣ); ಜರೆ: ಬಯ್ಯು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಪಾರ್ಥನ
ಕರುಣರಸದ್+ಆಳಾಪ +ವಾಗ್ವಿ
ಸ್ತರಕೆ+ ಮನದಲಿ +ಮರುಗಿದನು+ ಮುರವೈರಿ+ ನಸುನಗುತ
ಕೆರಳಿದನು +ಮಾತಿನಲಿ +ಸುಡು +ಬಾ
ಹಿರನಲಾ +ನೀ +ನಿನ್ನ+ ವಂಶಕೆ
ಸರಿಯೆ+ ಸೂತನ+ ಮಗನ್+ಇದೇನೆಂದ್+ಅಸುರರಿಪು+ ಜರೆದ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮನದಲಿ ಮರುಗಿದನು ಮುರವೈರಿ
(೨) ಕೃಷ್ಣನ ಭಾವನೆಯ ಚಿತ್ರಣ – ನದಲಿ ಮರುಗಿದನು ಮುರವೈರಿ ನಸುನಗುತ
ಕೆರಳಿದನು ಮಾತಿನಲಿ

ಪದ್ಯ ೩೦: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೭?

ದೂರುವವರಾವಲ್ಲ ಕರುಣವ
ತೋರಿ ಬಿನ್ನಹಮಾಡಿದೆನು ಹಗೆ
ಯೇರದಿವನಲಿ ಸೇರುವುದು ಸೋದರದ ಸಂಬಂಧ
ಆರೆನೀತನ ಕೊಲೆಗೆ ಹೃದಯವ
ಸೂರೆಗೊಂಡನು ಕರ್ಣನಕಟಾ
ತೋರಿ ನುಡಿಯಾ ಕೃಷ್ಣ ಕರುಣಿಸು ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೃಷ್ಣ ನಾನು ನಿನ್ನನ್ನು ದೂರುವುದಿಲ್ಲ, ನೀನು ನನ್ನ ಮೇಲೆ ಕರುಣೆಯನ್ನು ತೋರಿಸುವೆ ಎಂದು ಬಿನ್ನಹ ಮಾಡುತ್ತಿದ್ದೇನೆ, ಇವನ ಮೇಲೆ ನನಗೆ ವೈರತ್ವವೇ ಬರುತ್ತಿಲ್ಲ. ಸೋದರ ಸಂಬಂಧದ ಪ್ರೀತಿ ಹೆಚ್ಚಾಗುತ್ತಿದೆ, ಇವನನ್ನು ನಾನು ಕೊಲ್ಲಲಾರೆ, ನನ್ನ ಹೃದಯವನ್ನು ಇವನು ಸೂರೆಗೊಂಡಿದ್ದಾನೆ, ಏಕೆ ಹೀಗಾಯಿತು, ಕರುಣೆತೋರಿ ಹೇಳು ಕೃಷ್ಣ ಕರ್ಣನು ಯಾರೆಂದು ಎಂದು ಅರ್ಜುನನ ಕೃಷ್ಣನನ್ನು ಬೇಡಿದನು.

ಅರ್ಥ:
ದೂರು: ಚಾಡಿ, ಆರೋಪ ಮಾಡು; ಕರುಣ: ದಯೆ; ತೋರು: ಗೋಚರಿಸು; ಬಿನ್ನಹ: ಕೇಳು; ಹಗೆ: ವೈರ; ಏರು: ಹೆಚ್ಚಾಗು; ಸೇರು: ಜೊತೆ; ಸೋದರ: ಅಣ್ಣ ತಮ್ಮ; ಸಂಬಂಧ: ಬಾಂಧವ್ಯ, ನೆಂಟು; ಆರು: ಯಾರು; ಕೊಲೆ: ಸಾಯಿಸು; ಹೃದಯ: ವಕ್ಷ; ಸೂರೆ: ಲೂಟಿ; ಅಕಟ: ಅಯ್ಯೋ; ನುಡಿ: ಮಾತು; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ದೂರುವವರಾವಲ್ಲ +ಕರುಣವ
ತೋರಿ +ಬಿನ್ನಹಮಾಡಿದೆನು+ ಹಗೆ
ಏರದ್+ಇವನಲಿ+ ಸೇರುವುದು +ಸೋದರದ +ಸಂಬಂಧ
ಆರೆನ್+ಈತನ+ ಕೊಲೆಗೆ+ ಹೃದಯವ
ಸೂರೆಗೊಂಡನು +ಕರ್ಣನ್+ಅಕಟಾ
ತೋರಿ +ನುಡಿಯಾ +ಕೃಷ್ಣ +ಕರುಣಿಸು +ಕರ್ಣನಾರೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೇರುವುದು ಸೋದರದ ಸಂಬಂಧ
(೨) ಕ ಕಾರದ ತ್ರಿವಳಿ ಪದ – ಕೃಷ್ಣ ಕರುಣಿಸು ಕರ್ಣನಾರೆಂದ