ಪದ್ಯ ೨೯: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೬?

ಧರೆಯ ಬಿಟ್ಟೆವು ಕುರುಪತಿಗೆ ನಾ
ವರುವರೊಡವುಟ್ಟಿದರು ವಿಪಿನಾಂ
ತರದೊಳಗೆ ಭಜಿಸುವೆವು ನಿನ್ನನು ಭಾವಶುದ್ಧಿಯಲಿ
ತೆರಳುವೀ ಸಿರಿಗೋಸುಗರ ಸೋ
ದರನ ಕೊಲುವೆನೆ ಕೃಷ್ಣ ಕರುಣಿಸು
ಕರುಣಿಸಕಟಾ ಕೃಷ್ಣ ಕರುಣಿಸು ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣ ನಾವು ಈ ಭೂಮಿಯನ್ನು ಕೌರವನಿಗೆ ಬಿಟ್ಟು ಬಿಡುತ್ತೇವೆ, ನಾವಾರು ಜನ ಅರಣ್ಯಕ್ಕೆ ಹೋಗಿ ನಿನ್ನನ್ನು ಭಾವಶುದ್ಧತೆಯಿಂದ ಭಜಿಸುತ್ತೇವೆ, ಹೀಗೆ ಬಂದು ಹೀಗೆ ಹೋಗುವ ಐಶ್ವರ್ಯ ಸಂಪಾದನೆಗಾಗಿ ನನ್ನ ಸೋದರ ಕರ್ಣನನ್ನು ಕೊಲ್ಲಲ್ಲಾದೀತೇ? ಅಯ್ಯ ಕೃಷ್ಣ ದಯವಿಟ್ಟು ಕರುಣೆದೋರಿ ಕರ್ಣನು ಯಾರೆಂದು ಹೇಳು ಎಂದು ಅಂಗಲಾಚಿ ಬೇಡಿಕೊಂಡನು.

ಅರ್ಥ:
ಧರೆ: ಭೂಮಿ; ಬಿಟ್ಟೆವು: ತೊರೆ; ಅರುವರು: ಆರುಜನ; ಒಡವುಟ್ಟು: ಅಣ್ಣ ತಮ್ಮಂದಿರು, ಒಟ್ಟಿಗೆ ಜನಿಸಿದವರು; ವಿಪಿನ: ಅರಣ್ಯ, ಕಾಡು; ಅಂತರ: ಒಳಗೆ; ಭಜಿಸು: ಪೂಜಿಸು; ಭಾವ:ಮನಸ್ಸು, ಚಿತ್ತ; ಶುದ್ಧ: ಪವಿತ್ರವಾದ; ತೆರಳು: ಹೋಗು; ಸಿರಿ: ಐಶ್ವರ್ಯ; ಓಸುಗ: ಓಸ್ಕರ, ಕಾರಣ; ಸೋದರ: ಅಣ್ಣ ತಮ್ಮ; ಕೊಲು: ಕೊಲ್ಲು; ಕರುಣಿಸು: ದಯಪಾಲಿಸು; ಅಕಟ: ಅಯ್ಯೋ;

ಪದವಿಂಗಡಣೆ:
ಧರೆಯ +ಬಿಟ್ಟೆವು +ಕುರುಪತಿಗೆ +ನಾ
ವರುವರ್+ಒಡವುಟ್ಟಿದರು +ವಿಪಿನಾಂ
ತರದೊಳಗೆ +ಭಜಿಸುವೆವು +ನಿನ್ನನು +ಭಾವ+ಶುದ್ಧಿಯಲಿ
ತೆರಳುವ್+ಈ+ ಸಿರಿಗೋಸುಗರ +ಸೋ
ದರನ +ಕೊಲುವೆನೆ+ ಕೃಷ್ಣ +ಕರುಣಿಸು
ಕರುಣಿಸಕಟಾ +ಕೃಷ್ಣ +ಕರುಣಿಸು+ ಕರ್ಣನಾರೆಂದ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೊಲುವೆನೆ ಕೃಷ್ಣ ಕರುಣಿಸು ಕರುಣಿಸಕಟಾ ಕೃಷ್ಣ ಕರುಣಿಸು ಕರ್ಣನಾರೆಂದ
(೨) ವೇದಾಂತಿಯಂತೆ ಅರ್ಜುನನ ಮಾತು – ತೆರಳುವೀ ಸಿರಿಗೋಸುಗರ ಸೋದರನ ಕೊಲುವೆನೆ

ಪದ್ಯ ೨೮: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೫?

ಋಷಿಗಳನುಮತದಿಂದ ಕುಂತಿಯ
ಬಸುರಲೇನುದಯಿಸನಲೇ ನೀ
ನಸುರರಿಪು ಬಹು ಕಪಟನಾಟಕ ಸೂತ್ರಧಾರನಲೆ
ವಸುಮತಿಯ ಭಾರವನು ಸಲೆ ಹಿಂ
ಗಿಸುವ ಕೃತ್ಯವು ನಿನ್ನದೆನಗು
ಬ್ಬಸವಿದೇನೆಂದರಿಯೆನಕಟಾ ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ನನ್ನ ತಾಯಿಗೆ ಮುನಿಗಳು ನೀಡಿದ ವರದಿಂದ ಇವನು ನನ್ನ ತಾಯಿಯ ಗರ್ಭದಲ್ಲಿ ಹುಟ್ಟಿದವನೇ? ನೀನು ದಾನವವೈರಿ, ಕಪಟನಾಟಕ ಸೂತ್ರಧಾರ, ಭೂಭಾರವನ್ನಿಳಿಸುವದೇ ನಿನ್ನ ಪ್ರತಿಜ್ಞೆ, ನನಗೇಕೆ ಈಗ ಸಂಕಟವಾಗುತ್ತಿದೆ? ಅಯ್ಯೋ ಕೃಷ್ಣ ಕರ್ಣನಾರು ಎಂದು ದಯವಿಟ್ಟು ತಿಳಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ಋಷಿ: ಮುನಿ; ಮತ: ವಿಚಾರ ; ಅನು: ರೀತಿ, ಕ್ರಮ; ಬಸುರ: ಗರ್ಭ; ಉದಯಿಸು: ಹುಟ್ಟು; ಅಸುರರಿಪು: ರಾಕ್ಷಸವೈರಿ; ಬಹು: ತುಂಬ; ಕಪಟ: ಮೋಸ; ಕಪಟನಾಟಕ: ಸೃಷ್ಟಿ ಮುಂತಾದವುಗಳ ಬಂಧನವಿಲ್ಲದೆ, ಅವುಗಳನ್ನು ನಡೆಸುವವ; ಸೂತ್ರಧಾರ: ನಿರೂಪಕ, ಆಡಿಸುವವ; ವಸುಮತಿ: ಭೂಮಿ; ಭಾರ: ಹೊರೆ, ತೂಕ; ಸಲೆ: ವಿಸ್ತೀರ್ಣ; ಕೃತ್ಯ: ಕೆಲಸ; ಉಬ್ಬಸ: ಸಂಕಟ, ಮೇಲುಸಿರು; ಅರಿ: ತಿಳಿ; ಅಕಟಾ: ಅಯ್ಯೋ;

ಪದವಿಂಗಡಣೆ:
ಋಷಿಗಳ್+ಅನುಮತದಿಂದ+ ಕುಂತಿಯ
ಬಸುರಲೇನ್+ಉದಯಿಸನಲೇ +ನೀನ್
ಅಸುರರಿಪು +ಬಹು +ಕಪಟನಾಟಕ+ ಸೂತ್ರಧಾರನಲೆ
ವಸುಮತಿಯ +ಭಾರವನು +ಸಲೆ +ಹಿಂ
ಗಿಸುವ +ಕೃತ್ಯವು +ನಿನ್ನದ್+ಎನಗ್
ಉಬ್ಬಸವಿದೇನೆಂದ್+ಅರಿಯೆನ್+ಅಕಟಾ +ಕರ್ಣನಾರೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆಯುವ ಬಗೆ – ಅಸುರರಿಪು ಕಪಟನಾಟಕ ಸೂತ್ರಧಾರ; ವಸುಮತಿಯ ಭಾರವನು ಸಲೆ ಹಿಂಗಿಸುವ ಕೃತ್ಯವು ನಿನ್ನದೆ

ಪದ್ಯ ೨೭: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೪?

ಕಾಲಯವನನುಪಾಯದಿಂದವೆ
ಬೀಳಿಸಿದೆ ಮಾಗಧನನಾ ಪರಿ
ಸೀಳಿಸಿದೆ ಭೀಷ್ಮಾದಿಗಳ ಸೋಲಿಸಿದೆ ಸಾಮದಲಿ
ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು ನಿನ್ನ ಮಾಯೆಯ
ಹೇಳಲಮ್ಮೆನು ಕೃಷ್ಣ ಕರುಣಿಸು ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕೃಷ್ಣ ನೀನು ಕಾಲಯವನನ್ನು ಉಪಾಯದಿಂದ ಕೊಲ್ಲಿಸಿದೆ, ಜರಾಸಂಧನನ್ನು ಹೇಗೆ ಸೀಳಿಸಿದೆಯೆಂದು ನಾನೇ ನೋಡಿದ್ದೇನೆ. ಭೀಷ್ಮ, ದ್ರೋಣರನ್ನು ಸಾಮೋಪಾಯದಿಂದ ಕೊಲ್ಲಿಸಿದೆ ಎಂದು ನಾನು ತಿಳಿದಿರವೆ, ನೀನು ವಂಚಕ, ಮಹಾ ಮೋಸಗಾರ, ವಕ್ರಮಾರ್ಗದ ಠಕ್ಕಿನವನು, ನಿನ್ನ ಮಾಯೆಯನ್ನು ವರ್ಣಿಸಲು ಮಾತುಗಳಿಲ್ಲ. ದಯವಿಟ್ಟು ಕೃಷ್ಣ ಕರ್ಣನು ಯಾರೆಂದು ತಿಳಿಸು.

ಅರ್ಥ:
ಉಪಾಯ: ಯುಕ್ತಿ; ಬೀಳಿಸು: ಅಳಿ, ಕೊಲ್ಲು; ಮಾಗಧ: ಜರಾಸಂಧ; ಸೀಳಿಸು: ಕತ್ತರಿಸು; ಸೋಲಿಸು: ಪರಾಭವ; ಸಾಮ: ಒಡಂ ಬಡಿಕೆ, ಕಾರ್ಯ ಸಾಧನೆಯ ಚತುರೋಪಾಯಗಳಲ್ಲಿ ಒಂದು; ಡಾಳ: ಮೋಸ; ಡೊಂಕಣಿ: ಈಟಿ; ಠಕ್ಕು:ಮೋಸ; ಠೌಳಿ:ಮೋಸ, ವಂಚನೆ; ಮಾಯ:ಗಾರುಡಿ, ಇಂದ್ರಜಾಲ, ಮೋಸ; ಹೇಳು: ತಿಳಿಸು; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ಕಾಲಯವನನ್+ಉಪಾಯದಿಂದವೆ
ಬೀಳಿಸಿದೆ+ ಮಾಗಧನನ್+ಆ+ ಪರಿ
ಸೀಳಿಸಿದೆ +ಭೀಷ್ಮಾದಿಗಳ +ಸೋಲಿಸಿದೆ +ಸಾಮದಲಿ
ಡಾಳನತಿ+ ಡೊಂಕಣಿಯ +ಠಕ್ಕಿನ
ಠೌಳಿಕಾರನು+ ನಿನ್ನ +ಮಾಯೆಯ
ಹೇಳಲಮ್ಮೆನು+ ಕೃಷ್ಣ+ ಕರುಣಿಸು +ಕರ್ಣನಾರೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೃಷ್ಣ ಕರುಣಿಸು ಕರ್ಣನಾರೆಂದ
(೨) ಕೃಷ್ಣನನ್ನು ಮೋಸಗಾರ ಎಂದು ಹೇಳುವ ಬಗೆ – ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು

ಪದ್ಯ ೨೬: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೩?

ಅಸುರದ ವ್ಯಾಮೋಹವಿದು ಡೊ
ಳ್ಳಾಸವೋ ಕೌರವರ ಥಟ್ಟಿನ
ವೈಸಿಕವೊ ನಿಮ್ಮಡಿಯ ಮಾಯಾಮಯದ ಮಾಲೆಗಳೊ
ವಾಸಿ ಬೀತುದು ಛಲಗಿಲದ ಕಾ
ಳಾಸ ಸೋತುದು ಕರ್ಣನಲಿ ಹಿರಿ
ದಾಸೆಯಾಯಿತು ಕೃಷ್ಣ ಕರುಣಿಸು ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಸುರೀ ಪ್ರೀತಿ, ಮೋಹಗಳು ಇವು ಹೇಗೆ ಬಂದವು? ಕೌರವ ಸೈನ್ಯದವರು ಮಾಡಿದ ವಂಚನೆಯೋ, ಕೌರವರೇನಾದರು ಮಾಟ ಮಾಡಿದರೋ, ಅಥವ ಇದು ನಿಮ್ಮ ಚರಣದ ಮಾಯೆಯೋ, ಕರ್ಣನ ಮೇಲಿದ್ದ ನನ್ನ ಛಲವು ಹೊರಟುಹೋಯಿತು. ಕರ್ಣನಲ್ಲಿ ಪ್ರೀತಿ ಮೂಡಿದೆ, ಕೃಷ್ಣ ಕರ್ಣನು ಯಾರೆಂದು ದಯವಿಟ್ಟು ತಿಳಿಸೆಂದು ಅರ್ಜುನನು ಬೇಡಿದನು.

ಅರ್ಥ:
ಅಸುರ: ರಾಕ್ಷಸ, ದಾನವ; ವ್ಯಾಮೋಹ: ಪ್ರೀತಿ; ಡೊಳ್ಳಾಸ: ಮೋಸ, ಕಪಟ; ಥಟ್ಟು: ಗುಂಪು; ವೈಸಿಕ:ಠಕ್ಕು, ಮೋಸ; ನಿಮ್ಮಡಿ: ನಿಮ್ಮ ಚರಣದ; ಮಾಯ:ಗಾರುಡಿ, ಇಂದ್ರಜಾಲ; ಮಾಲೆ: ಹಾರ; ವಾಸಿ: ಛಲ, ಹಠ; ಬೀತು: ಕಡಿಮೆಯಾಯಿತು, ಹೊರಟುಹೋಯಿತು; ಛಲ: ದೃಢ ನಿಶ್ಚಯ; ಕಾಳಾಸ: ಬೆಸುಗೆ, ಗಾಢತ್ವ; ಸೋತು: ಪರವಶವಾಗು, ಮೋಹಗೊಳ್ಳು; ಹಿರಿ: ದೊಡ್ಡ; ಆಸೆ: ಇಚ್ಛೆ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ಅಸುರದ +ವ್ಯಾಮೋಹವ್+ಇದು+ ಡೊ
ಳ್ಳಾಸವೋ +ಕೌರವರ+ ಥಟ್ಟಿನ
ವೈಸಿಕವೊ +ನಿಮ್ಮಡಿಯ +ಮಾಯಾಮಯದ +ಮಾಲೆಗಳೊ
ವಾಸಿ +ಬೀತುದು +ಛಲಗಿಲದ+ ಕಾ
ಳಾಸ +ಸೋತುದು +ಕರ್ಣನಲಿ +ಹಿರಿ
ದಾಸೆಯಾಯಿತು +ಕೃಷ್ಣ +ಕರುಣಿಸು +ಕರ್ಣನಾರೆಂದ

ಅಚ್ಚರಿ:
(೧) ಬೀತುದು, ಸೋತುದು; ಡೊಳ್ಳಾಸ, ಕಾಳಾಸ – ಪ್ರಾಸ ಪದಗಳು
(೨) ವಾಸಿ, ಛಲ – ಸಮನಾರ್ಥಕ ಪದಗಳು

ಪದ್ಯ ೨೫: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೨?

ಕೌರವನ ಮೇಲಿಲ್ಲದಗ್ಗದ
ವೈರವೀತನಮೇಲೆ ನಮಗಪ
ಕಾರಿಯೀತನು ಮರಣದನುಸಂಧಾನವಿನ್ನೆಬರ
ವೈರವುಪಶುಮಿಸಿತು ಯುಧಿಷ್ಠಿರ
ವೀರನಿಂದಿಮ್ಮಡಿಯ ನೇಹದ
ಭಾರವಣೆ ತೋರುವುದಿದೇನೈ ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಮೇಲಿರುವ ವೈರತ್ವಕ್ಕಿಂತ ಕರ್ಣನ ಮೇಲೆ ಹೆಚ್ಚಿನ ಹಗೆತನವಿತ್ತು, ನಮಗೆ ಅಪಕಾರವನ್ನು ಎಸಗಿದವನನ್ನು ಈ ಕ್ಷಣದವರೆಗೂ ಕೊಲ್ಲಬೇಕೆಂದು ಮನ ತವಕಿಸುತ್ತಿತ್ತು, ಆದರೀಗ ವೈರತ್ವದ ಭಾವವು ಶಾಂತವಾಗಿದೆ, ಧರ್ಮಜನ ಮೇಲಿರುವ ಪ್ರೀತಿಯ ಎರಡರಷ್ಟು ಪ್ರೀತಿ ಇವನ ಮೇಲೆ ಹುಟ್ಟಿದೆ, ಕೃಷ್ಣ ಕರ್ಣನು ಯಾರೆಂದು ದಯವಿಟ್ಟು ಹೇಳು ಎಂದು ಅರ್ಜುನನು ಗೋಗರೆದನು.

ಅರ್ಥ:
ಅಗ್ಗ: ಹೆಚ್ಚು; ವೈರ: ಹಗೆ, ಶತ್ರು; ಅಪಕಾರ: ಕೆಟ್ಟದ್ದು; ಮರಣ: ಸಾವು; ಅನುಸಂಧಾನ: ಪರಿಶೀಲನೆ; ಉಪಶಮನ: ಶಾಂತವಾಗುವುದು; ವೀರ: ಶೂರ; ಇಮ್ಮಡಿ: ಎರಡು ಪಟ್ಟು; ನೇಹ: ಗೆಳೆತನ, ಸ್ನೇಹ; ಭಾರವಣೆ: ಘನತೆ, ಗೌರವ; ತೋರು: ಗೋಚರಿಸು;

ಪದವಿಂಗಡಣೆ:
ಕೌರವನ +ಮೇಲಿಲ್ಲದ್+ಅಗ್ಗದ
ವೈರವ್+ಈತನಮೇಲೆ +ನಮಗ್+ಅಪ
ಕಾರಿ+ಈತನು +ಮರಣದ್+ಅನುಸಂಧಾನವ್+ಇನ್ನೆಬರ
ವೈರವ್+ಉಪಶುಮಿಸಿತು+ ಯುಧಿಷ್ಠಿರ
ವೀರನಿಂದ್+ಇಮ್ಮಡಿಯ +ನೇಹದ
ಭಾರವಣೆ+ ತೋರುವುದ್+ಇದೇನೈ +ಕರ್ಣನಾರೆಂದ

ಅಚ್ಚರಿ:
(೧) ಅರ್ಜುನನಿಗೆ ಕರ್ಣನ ಮೇಲೆ ಪ್ರೀತಿಯುಕ್ಕಿತು ಎಂದು ಹೇಳಲು – ವೈರವುಪಶುಮಿಸಿತು ಯುಧಿಷ್ಠಿರವೀರನಿಂದಿಮ್ಮಡಿಯ ನೇಹದ ಭಾರವಣೆ ತೋರುವುದ್