ಪದ್ಯ ೧೮: ಕರ್ಣನು ಅರ್ಜುನನಿಗೆ ಯಾವ ಯುದ್ಧದ ನಿಯಮವನ್ನು ತಿಳಿಸಿದನು?

ರೂಡಿಸಿದ ಭಟ ನೀನು ಪಂಥದ
ಪಾಡುಗಳ ಬಲ್ಲವನು ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ ಶಸ್ತ್ರ ಹೀನರ
ಕೂಡೆ ವಾಹನಹೀನರಲಿ ಕೈ
ಮಾಡಲನುಚಿತವೆಂಬ ಮಾರ್ಗವನೆಂದನಾ ಕರ್ಣ (ಕರ್ಣ ಪರ್ವ, ೨೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅರ್ಜುನನೊಂದಿಗೆ ಮಾತನಾಡುತ್ತಾ, ಅರ್ಜುನ ನೀನು ಹೆಸರಾಂತ ಪರಾಕ್ರಮಿ, ಯುದ್ಧದ ನೀತಿ ನಿಯಮಗಳನ್ನು ಚೆನ್ನಾಗಿ ಬಲ್ಲವನು. ಶಾಸ್ತ್ರವನ್ನು ಮೀರುವವನಲ್ಲ. ಲೌಕಿಕ, ವೈದಿಕ ಕಟ್ಟುಪಾಡುಗಳನ್ನು ಚೆನ್ನಾಗಿ ಬಲ್ಲವನು. ಶಸ್ತ್ರಹೀನರು ವಾಹನವಿಲ್ಲದವರ ಮೇಲೆ ಕೈಮಾಡುವುದು ಅನುಚಿತ ಎಂಬ ವಿಷಯ ನಿನಗೆ ಗೊತ್ತು ಎಂದು ಕರ್ಣನು ಹೇಳಿದನು.

ಅರ್ಥ:
ರೂಡಿ: ಆಚರಣೆಯಲ್ಲಿರುವ, ಹೆಸರಾಂತ; ಭಟ: ವೀರ, ಸೈನಿಕ; ಪಂಥ: ಪಂದ್ಯ; ಪಾಡು: ರೀತಿ; ಬಲ್ಲವ: ತಿಳಿದವ; ಶಾಸ್ತ್ರ: ವಿಧಿ, ನಿಯಮ; ಖೋಡಿ: ಹಾನಿ, ಕೇಡು, ಅಪರಾಧ; ಲೌಕಿಕ: ಲೋಕದ ನಡವಳಿಕೆಯನ್ನು ತಿಳಿದಿರುವವನು; ವೈದಿಕ: ವೇದದ ಅಧ್ಯಯನ ಮಾಡಿರುವವ; ಸ್ಥಿತಿ: ಅವಸ್ಥೆ; ನಾಡೆ: ವಿಶೇಷವಾಗಿ; ಬಲ್ಲಿರಿ: ತಿಳಿದಿರುವಿರಿ; ಶಸ್ತ್ರ: ಆಯುಧ; ಹೀನ: ಇಲ್ಲದಿರುವ; ಕೂಡೆ: ಜೊತೆ; ವಾಹನ: ಹೊರುವಿಕೆ, ಒಯ್ಯುವ ಸಾಧನ; ಕೈಮಾಡು: ಹೊಡೆ; ಅನುಚಿತ: ಸರಿಯಲ್ಲದ ಮಾರ್ಗ; ಮಾರ್ಗ: ರೀತಿ;

ಪದವಿಂಗಡಣೆ:
ರೂಡಿಸಿದ +ಭಟ +ನೀನು +ಪಂಥದ
ಪಾಡುಗಳ +ಬಲ್ಲವನು +ಶಾಸ್ತ್ರವ
ಖೋಡಿ+ಕಳೆವವನಲ್ಲ +ಲೌಕಿಕ +ವೈದಿಕ +ಸ್ಥಿತಿಯ
ನಾಡೆ +ಬಲ್ಲಿರಿ +ಶಸ್ತ್ರ +ಹೀನರ
ಕೂಡೆ +ವಾಹನ+ಹೀನರಲಿ +ಕೈ
ಮಾಡಲ್+ಅನುಚಿತವೆಂಬ +ಮಾರ್ಗವನೆಂದನಾ +ಕರ್ಣ

ಅಚ್ಚರಿ:
(೧) ಯುದ್ಧದ ನಿಯಮ – ನಾಡೆ ಬಲ್ಲಿರಿ ಶಸ್ತ್ರ ಹೀನರಕೂಡೆ ವಾಹನಹೀನರಲಿ ಕೈಮಾಡಲನುಚಿತ
(೨) ಅರ್ಜುನನ ಮೇಲಿನ ನಂಬಿಕೆ – ಶಾಸ್ತ್ರವ ಖೋಡಿಗಳೆವವನಲ್ಲ

ಪದ್ಯ ೧೭: ಕರ್ಣನು ಬಿಲ್ಲನ್ನು ರಥದಲ್ಲೇಕೆ ಇಟ್ಟನು?

ಇಳುಹಿದನು ರಥದೊಳಗೆ ಚಾಪವ
ನಳವಡಿಸಿದನು ಸೆರಗನಲ್ಲಿಂ
ದಿಳಿದು ಗಾಲಿಯನಲುಗಿ ಪಾರ್ಥನ ನೋಡಿ ನಸುನಗುತ
ಎಲೆ ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ ನಿನಗಾ
ನಳವಿಗೊಡುವೆನು ತನ್ನ ಪರಿಯನು ಬಳಿಕ ನೋಡೆಂದ (ಕರ್ಣ ಪರ್ವ, ೨೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಥದ ಚಕ್ರವು ಭೂಮಿಯಲ್ಲಿ ಸಿಕ್ಕುಹಾಕಿಕೊಂಡಿರಲು, ಅದನ್ನು ಸರಿಪಡಿಸಲು ಕರ್ಣನು ರಥದಿಂದ ಇಳಿದನು, ಬಿಲ್ಲನ್ನು ರಥದೊಳಗೆ ಬಿಟ್ಟು ತನ್ನ ಉತ್ತರೀಯವನ್ನು ಕಟ್ಟಿಕೊಂಡನು. ರಥದಿಂದ ಇಳಿದು ಚಕ್ರಗಳನ್ನು ಅಲುಗಿಸಿ, ಅರ್ಜುನನ ಕಡೆ ನೋಡಿ ಮಂದಸ್ಮಿತದಿಂದ, ಎಲೈ ಅರ್ಜುನ ಇನ್ನರ್ಧಗಳಿಗೆ ತಾಳು, ಈ ರಥವನ್ನು ಮೇಲಕ್ಕೆತ್ತಿ ನಿನ್ನೊಡನೆ ಮತ್ತೆ ಯುದ್ಧಮಾಡುತ್ತೇನೆ, ಆಮೇಲೆ ನನ್ನ ಸತ್ವವನ್ನು ನೋಡು ಎಂದು ಕರ್ಣನು ಹೇಳಿದನು.

ಅರ್ಥ:
ಇಳುಹು: ಇಳಿದು; ರಥ: ಬಂಡಿ; ಚಾಪ: ಬಿಲ್ಲು; ಅಳವಡಿಸು: ಸರಿಮಾಡಿಕೋ; ಸೆರಗು:ವಸ್ತ್ರದ ಕೊನೆ ಭಾಗ, ಅಂಚು, ಉತ್ತರೀಯ; ಗಾಲಿ: ಚಕ್ರ; ಅಲುಗು: ಅಲ್ಲಾಡಿಸು; ನೋಡಿ: ವೀಕ್ಷಿಸಿ; ನಸುನಗುತ: ಮಂದಹಾಸ; ಸೈರಿಸು: ಸಾವಧಾನದಿಂದಿರು; ಅರೆಗಳಿಗೆ: ಸ್ವಲ್ಪ ಹೊತ್ತು; ಎತ್ತು: ಮೇಲಕ್ಕೆ ತರು; ಅಳವಿ: ಶಕ್ತಿ, ಯುದ್ಧ; ಪರಿ: ರೀತಿ; ಬಳಿಕ: ನಂತರ; ನೋಡು: ವೀಕ್ಷಿಸು;

ಪದವಿಂಗಡಣೆ:
ಇಳುಹಿದನು +ರಥದೊಳಗೆ +ಚಾಪವನ್
ಅಳವಡಿಸಿದನು +ಸೆರಗನ್+ಅಲ್ಲಿಂದ್
ಇಳಿದು +ಗಾಲಿಯನ್+ಅಲುಗಿ +ಪಾರ್ಥನ +ನೋಡಿ +ನಸುನಗುತ
ಎಲೆ+ ಧನಂಜಯ+ ಸೈರಿಸುವುದ್+ಅರೆ
ಗಳಿಗೆಯನು +ರಥವೆತ್ತಿ+ ನಿನಗ್
ಆನ್+ಅಳವಿ+ಕೊಡುವೆನು +ತನ್ನ +ಪರಿಯನು +ಬಳಿಕ+ ನೋಡೆಂದ

ಅಚ್ಚರಿ:
(೧) ಇಂತಹ ಕ್ಲಿಷ್ಟದ ಸಮಯದಲ್ಲೂ ಕರ್ಣನ ಮುಖಭಾವದ ಚಿತ್ರಣ – ನಸುನಗುತ
(೨) ಕರ್ಣನ ಉತ್ಸಾಹದ ಮಾತು – ನಿನಗಾನಳವಿಗೊಡುವೆನು ತನ್ನ ಪರಿಯನು ಬಳಿಕ ನೋಡೆಂದ