ಪದ್ಯ ೨೬: ಸರ್ಪಾಸ್ತ್ರವು ಎಲ್ಲಿಗೆ ಮುನ್ನುಗ್ಗುತ್ತಿತ್ತು?

ನಾಲಗೆಯ ಚೂರಣದ ದಳ್ಳುರಿ
ಜಾಳಿಗೆಯ ಚಮ್ಮಟದ ಗರಳದ
ಲೋಳೆಗಳ ಚಾರಣದ ಕಿಡಿಗಳ ಖಡುಗ ಪೂರಯದ
ಧೂಳಿಯುಗೆಯಬ್ಬರದ ಬಲುಗೈ
ಯಾಳವೊಲು ಭುಗಿಲೆಂಬ ರವದಲಿ
ಮೇಲುವಾಯ್ದುದು ಕೊರಳಸರಿಸಕೆ ಕಲಿಧನಂಜಯನಾ (ಕರ್ಣ ಪರ್ವ, ೨೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಾಲಗೆಯ ಕಿರುತತ್ತಿ, ದಳ್ಳುರಿಯ ಜಾಳಿಗೆಯ ಗುರಾಣಿ, ಹೊರಹೊಮ್ಮುತ್ತಿರುವ ವಿಷದ ಲೋಳೆಗಳ ಖಡ್ಗವೆಂಬಂತೆ ಮುನ್ನುಗ್ಗುತ್ತಾ ಅಧಿಕವಾಗಿ ಶಬ್ದದಿಂದ ಮಹಾ ಯೋಧನಂತೆ ಸದ್ದು ಮಾಡುತ್ತಾ ಸರ್ಪಾಸ್ತ್ರವು ಅರ್ಜುನನ ಕೊರಳಿನ ನೇರಕ್ಕೆ ವೇಗದಿಂದ ಬಂದಿತು.

ಅರ್ಥ:
ನಾಲಗೆ: ಜಿಹ್ವೆ; ಚೂರಣ: ತಿರುಗಿಸುವಿಕೆ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಜಾಳಿಗೆ: ಬಲೆ, ಜಾಲ, ಜಾಲಂದರ; ಚಮ್ಮಟ: ಚಾವಟಿ; ಗರಳ: ವಿಷ; ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಚಾರಣ: ತಿರುಗಾಡುವಿಕೆ, ಸಂಚಾರ; ಕಿಡಿ: ಬೆಂಕಿ; ಖಡುಗ: ಕತ್ತಿ, ಕರವಾಳ; ಪೂರ:ನೆರೆ, ಪ್ರವಾಹ; ಧೂಳಿ: ಮಣ್ಣಿನ ಹುಡಿ; ಹೊಗೆ: ಧೂಮ; ಅಬ್ಬರ: ಆರ್ಭಟ; ಬಲುಗೈ: ಪರಾಕ್ರಮ; ಆಳ: ಸೈನಿಕ; ಭುಗಿಲು: ಶಬ್ದ ಸೂಚಕ ಪದ; ರವ: ಶಬ್ದ; ಕೊರಳ: ಕಂಠ; ಸರಿಸ:ಸಮ್ಮುಖ, ಹತ್ತಿರ; ಕಲಿ: ಶೂರ;

ಪದವಿಂಗಡಣೆ:
ನಾಲಗೆಯ +ಚೂರಣದ +ದಳ್ಳುರಿ
ಜಾಳಿಗೆಯ +ಚಮ್ಮಟದ +ಗರಳದ
ಲೋಳೆಗಳ +ಚಾರಣದ +ಕಿಡಿಗಳ +ಖಡುಗ +ಪೂರಯದ
ಧೂಳಿಯುಗೆ+ಅಬ್ಬರದ +ಬಲುಗೈ
ಆಳವೊಲು +ಭುಗಿಲೆಂಬ +ರವದಲಿ
ಮೇಲುವಾಯ್ದುದು+ ಕೊರಳ+ಸರಿಸಕೆ+ ಕಲಿ+ಧನಂಜಯನಾ

ಅಚ್ಚರಿ:
(೧) ಪ್ರಾಸ ಪದಗಳು – ಚೂರಣದ, ಚಮ್ಮಟದ, ಚಾರಣದ, ಅಬ್ಬರದ
(೨) ಉಪಮಾನದ ಪ್ರಯೋಗ – ಧೂಳಿಯುಗೆಯಬ್ಬರದ ಬಲುಗೈಯಾಳವೊಲು

ಪದ್ಯ ೨೫: ಪಾಂಡವರ ಸೈನ್ಯವು ಏಕೆ ತಲ್ಲಣಿಸಿತು?

ಆರು ನಿಲಿಸುವರಕಟ ದುಷ್ಪ್ರತಿ
ಕಾರ ಶರವಿದು ಭೀಮಪಾರ್ಥರ
ಕೂರಲಗುಗಳು ಶಿವಶಿವಾ ಕೆಚ್ಚಾಯ್ತು ಕದಳಿಗಳ
ಕೌರವನ ಜಯವಧುವಿನೊಡನೆಯ
ಸೇರುಗೆಯ ಕೂಟಣೆಯೊ ಶರವಿ
ನಾರಿಗೊರಲುವೆವಕಟೆನುತ ತಲ್ಲಣಿಸಿತರಿಸೇನೆ (ಕರ್ಣ ಪರ್ವ, ೨೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶತ್ರು ಸೈನ್ಯವು, ಈ ಅಸ್ತ್ರಕ್ಕೆ ಪ್ರತಿಯೇ ಇಲ್ಲ. ಇದನ್ನು ತಡೆಯುವವರಾರು? ಭೀಮಾರ್ಜುನರು ಬಿಟ್ಟ ಬಾಣಗಳನ್ನು ಇದು ಬಾಳೆಯ ದಿಂಡನ್ನು ಕತ್ತರಿಸುವಂತೆ ಕತ್ತರಿಸಿತು. ಇದು ಕೌರವನನ್ನು ಜಯಲಕ್ಷ್ಮಿಗೆ ಸೇರಿಸುವ ಸಂಯೋಗವಾಗಿದೆ, ನಾವು ಯಾರಲ್ಲಿ ನಮ್ಮ ಅಳಲನ್ನು ಮೊರೆಯಿಡೋಣ ಎಂದು ಹತಾಶೆಯಿಂದ ಪಾಂಡವರ ಸೈನ್ಯವು ತಲ್ಲಣಿಸಿತು.

ಅರ್ಥ:
ನಿಲಿಸು: ತಡೆ; ಅಕಟ: ಅಯ್ಯೋ; ಪ್ರತಿಕಾರ: ಮಾಡಿದು ದಕ್ಕೆ ಪ್ರತಿಯಾಗಿ ಮಾಡುವುದು; ಶರ: ಬಾಣ; ಕೂರಲಗು: ಹರಿತವಾದ ಬಾಣ; ಕೆಚ್ಚು:ಧೈರ್ಯ, ಸಾಹಸ, ದರ್ಪ; ಕದಳಿ: ಬಾಳೆಹಣ್ಣು; ಜಯ: ಗೆಲುವು; ವಧು: ಸ್ತ್ರೀ, ಹೆಣ್ಣು; ಸೇರು: ಹೊಂದಿಸು, ಸೇರಿಸು; ಒಡಣೆ: ಕೂಡಲೆ; ಕೂಟಣೆ: ಸಂಯೋಗ; ಶರ: ಬಾಣ; ಒರಲು: ಕೂಗಿಕೊಳ್ಳು; ತಲ್ಲಣ:ಅಂಜಿಕೆ, ಭಯ; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಆರು +ನಿಲಿಸುವರ್+ಅಕಟ +ದುಷ್ಪ್ರತಿ
ಕಾರ +ಶರವಿದು+ ಭೀಮ+ಪಾರ್ಥರ
ಕೂರಲಗುಗಳು +ಶಿವಶಿವಾ+ ಕೆಚ್ಚಾಯ್ತು +ಕದಳಿಗಳ
ಕೌರವನ+ ಜಯವಧುವಿನೊಡನೆಯ
ಸೇರುಗೆಯ +ಕೂಟಣೆಯೊ +ಶರವಿನ್
ಆರಿಗ್+ಒರಲುವೆವ್+ಅಕಟೆನುತ +ತಲ್ಲಣಿಸಿತ್+ಅರಿಸೇನೆ

ಅಚ್ಚರಿ:
(೧) ಅಕಟ – ೧,೬ ಸಾಲಿನಲ್ಲಿ ಬರುವ ಪದ
(೨) ಉಪಮಾನದ ಪ್ರಯೋಗ – ಕೆಚ್ಚಾಯ್ತು ಕದಳಿಗಳ

ಪದ್ಯ ೨೪: ಸರ್ಪಾಸ್ತ್ರದ ಶಕ್ತಿ ಹೇಗಿತ್ತು?

ಜನಪ ಕೇಳೈ ಬಳಿಕ ಭೀಮಾ
ರ್ಜುನ ನಕುಲ ಸಹದೇವ ಸಾತ್ಯಕಿ
ತನತನಗೆ ದಿವ್ಯಾಸ್ತ್ರನಿಕರದಲೆಚ್ಚರಹಿಶರವ
ಅನಿತು ಶರವನು ನುಂಗಿ ಮಗುಳೆ
ಚ್ಚನಿತನೊಳುಕೊಳುತಾಜ್ಯಧಾರೆಗೆ
ನನೆದ ಹುತವಹನಂತೆ ಹೆಚ್ಚಿತು ತೀವ್ರ ಫಣಿಬಾಣ (ಕರ್ಣ ಪರ್ವ, ೨೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಆ ಬಳಿಕ ಭೀಮಾರ್ಜುನ ನಕುಲ, ಸಹದೇವ, ಸಾತ್ಯಕಿಯರು ಸರ್ಪಾಸ್ತ್ರದ ಮೇಲೆ ದಿವ್ಯಾಸ್ತ್ರಗಳನ್ನು ಬಿಟ್ಟರು. ಆದರೆ ಸರ್ಪಾಸ್ತ್ರವು ತುಪ್ಪದ ಧಾರೆಯಿಂದ ಹೆಚ್ಚುವ ಬೆಂಕಿಯಂತೆ ಎಲ್ಲವನ್ನು ನುಂಗಿತು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಬಳಿಕ: ನಂತರ; ದಿವ್ಯ: ಶ್ರೇಷ್ಠ; ಅಸ್ತ್ರ: ಶಸ್ತ್ರ; ನಿಕರ: ಗುಂಪು; ಎಚ್ಚು: ಬಾಣಬಿಡು; ಅಹಿ: ಹಾವು; ಶರ: ಬಾಣ; ಅನಿತು: ಅಷ್ಟು; ಶರ: ಬಾಣ; ನುಂಗು: ಕಬಳಿಸು, ಸ್ವಾಹಮಾಡು; ಮಗುಳು: ಪುನಃ, ಮತ್ತೆ; ಆಜ್ಯ; ತುಪ್ಪ; ಧಾರೆ: ಪ್ರವಾಹ, ಮೇಲಿನಿಂದ ಹರಿದುಬರುವ ನೀರು ಎಣ್ಣೆ; ನನೆ:ತೋಯು, ಒದ್ದೆಯಾಗು; ಹುತವಹ: ಅಗ್ನಿ; ಹೆಚ್ಚು: ಅಧಿಕ; ತೀವ್ರ: ತ್ವರೆ, ರಭಸ; ಫಣಿ: ಹಾವು; ಬಾಣ; ಶರ;

ಪದವಿಂಗಡಣೆ:
ಜನಪ +ಕೇಳೈ +ಬಳಿಕ +ಭೀಮಾ
ರ್ಜುನ +ನಕುಲ +ಸಹದೇವ +ಸಾತ್ಯಕಿ
ತನತನಗೆ +ದಿವ್ಯಾಸ್ತ್ರ+ನಿಕರದಲ್+ಎಚ್ಚರ್+ಅಹಿ+ಶರವ
ಅನಿತು +ಶರವನು +ನುಂಗಿ +ಮಗುಳ್
ಎಚ್ಚನ್+ಇತನೊಳುಕೊಳುತ್+ಆಜ್ಯ+ಧಾರೆಗೆ
ನನೆದ +ಹುತವಹನಂತೆ +ಹೆಚ್ಚಿತು +ತೀವ್ರ +ಫಣಿಬಾಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಜ್ಯಧಾರೆಗೆ ನನೆದ ಹುತವಹನಂತೆ
(೨) ಸಮನಾರ್ಥಕ ಪದ – ಶರ, ಬಾಣ
(೩) ಅಹಿ, ಆಜ್ಯ, ಅನಿತು – ಪದಗಳ ಬಲಕೆ

ಪದ್ಯ ೨೩: ಪಾಂಡವ ಸೇನೆಯು ಯಾರ ರಕ್ಷಣೆಯನ್ನು ಎದುರು ನೋಡುತ್ತಿದ್ದರು?

ಹಿಂದೆ ಭಗದತ್ತಾಯುಧದಿ ನೆರೆ
ಬೆಂದು ಬದುಕಿತು ಬಳಿಕಲೀ ಗುರು
ನಂದನನ ನಾರಾಯಣಾಸ್ತ್ರದಿನಾದುದಪಘಾತ
ಅಂದುಪಾಯದಲುಳಿದೆವೀ ಗೋ
ವಿಂದನಿಂದಪಮೃತ್ಯುವಿದನು ಮು
ಕುಂದ ತಾನೇ ಬಲ್ಲನೆನುತಿರ್ದುದು ಭಟಸ್ತೋಮ (ಕರ್ಣ ಪರ್ವ, ೨೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಈ ಹಿಂದೆ ಭಗದತ್ತನು ಪ್ರಯೋಗಿಸಿದ ಆಯುಧದಿಂದ ನಾವು ಅರೆ ಬೆಂದು ಬದುಕಿದೆವು, ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮನು ಪ್ರಯೋಗಿಸಿದ ನಾರಾಯಣಾಸ್ತ್ರಗಳ ಭಯದಿಂದ ಶ್ರೀಕೃಷ್ಣನು ಯುಕ್ತಿಯಿಂದ ನಮ್ಮೆಲ್ಲರನ್ನು ಅಕಾಲ ಮರಣದಿಂದ ರಕ್ಷಿಸಿದನು, ಈಗ ಈ ಸರ್ಪಾಸ್ತ್ರದ ತಾಪದಿಂದ ನಮ್ಮ ಗತಿಯೇನು? ಶ್ರೀಕೃಷ್ಣನೇ ನಮ್ಮನ್ನು ರಕ್ಷಿಸಲು ಬಲ್ಲ ಎಂದು ಪಾಂಡವ ಸೇನೆಯವರು ಮಾತಾಡುತ್ತಿದ್ದರು.

ಅರ್ಥ:
ಹಿಂದೆ: ಪುರಾತನ, ನಡೆದ; ಆಯುಧ: ಅಸ್ತ್ರ; ನೆರೆ: ಪೂರ್ಣವಾಗಿ; ಬೆಂದು: ಸುಟ್ಟು, ಕರಕಲಾಗು; ಬದುಕು: ಜೀವಿಸು; ಬಳಿಕ: ನಂತರ; ಗುರು: ಆಚಾರ್ಯ; ನಂದನ: ಮಗ; ಅಸ್ತ್ರ: ಶಸ್ತ್ರ; ಅಪಘಾತ: ಅವಘಡ, ತೊಂದರೆ; ಉಪಾಯ: ಯುಕ್ತಿ; ಉಳಿದೆವು: ಬದುಕಿದೆವು; ಗೋವಿಂದ: ಕೃಷ್ಣ; ಅಪಮೃತ್ಯು: ಅಕಾಲ ಮರಣ; ಬಲ್ಲ: ತಿಳಿದ; ಭಟಸ್ತೋಮ: ಸೈನಿಕರು;

ಪದವಿಂಗಡಣೆ:
ಹಿಂದೆ +ಭಗದತ್ತ+ಆಯುಧದಿ+ ನೆರೆ
ಬೆಂದು +ಬದುಕಿತು+ ಬಳಿಕಲೀ +ಗುರು
ನಂದನನ +ನಾರಾಯಣಾಸ್ತ್ರದಿನ್+ಆದುದ್+ಅಪಘಾತ
ಅಂದ್+ಉಪಾಯದಲ್+ಉಳಿದೆವ್+ಈ+ ಗೋ
ವಿಂದನಿಂದ್+ಅಪಮೃತ್ಯುವ್+ಇದನು +ಮು
ಕುಂದ +ತಾನೇ +ಬಲ್ಲನ್+ಎನುತಿರ್ದುದು +ಭಟಸ್ತೋಮ

ಅಚ್ಚರಿ:
(೧) ಕೃಷ್ಣನ ಹೆಸರ ಬಳಕೆ – ಗೋವಿಂದ, ಮುಕುಂದ

ಪದ್ಯ ೨೨: ನಾಗಾಸ್ತ್ರಕದಿಂದ ರಕ್ಷಿಸಿಕೊಳ್ಳಲು ಎಲ್ಲರು ಯಾವ ಮೊರೆಗೆ ಹೋದರು?

ಗರುಡಪಂಚಾಕ್ಷರಿಯ ಮಂತ್ರೋ
ಚ್ಚರಣೆಯಲಿ ಭೂನಾಗಸತ್ವದ
ಬೆರಳ ಮುದ್ರಿಕೆಗಳಲಿ ರಕ್ಷಾಯಂತ್ರಮಂತ್ರದಲಿ
ಮರಕತದ ಘುಟಿಕೆಯಲಿ ವಿಷಸಂ
ಹರಣ ವಿವಿಧೋಪಾಯದಲಿ ನೃಪ
ವರರು ನಿಂದುದು ಭೀಮಸೇನಾದಿಗಳು ದುಗುಡದಲಿ (ಕರ್ಣ ಪರ್ವ, ೨೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಉರಗಾಸ್ತ್ರಕ್ಕೆ ಪ್ರತಿಯಾಗಿ ಗರುಡ ಪಂಚಾಕ್ಷರೀ ಮಂತ್ರದ ಜಪ, ನಾಗಸತ್ವದ ಉಂಗುರಗಳು, ವಿಷದಿಂದ ರಕ್ಷಿಸುವ ಯಂತ್ರಮಂತ್ರಗಳು, ಮರಕತದ ಗುಳಿಗೆಗಳು, ಮೊದಲಾದ ವಿಷ ಸಂಹಾರೋಪಾಯಗಳಿಂದ ಭೀಮಾದಿಗಳು ದುಃಖತಪ್ತರಾಗಿ ನಿಂತರು.

ಅರ್ಥ:
ಗರುಡ: ವಿಷ್ಣುವಿನ ವಾಹನ, ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ; ಪಂಚಾಕ್ಷರಿ: ಐದು ಅಕ್ಷರವುಳ್ಳದ್ದು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಚ್ಚರಣೆ: ಹೇಳು; ಭೂ: ಭೂಮಿ; ನಾಗ: ಹಾವು; ಸತ್ವ: ಸಾರ; ಬೆರಳು: ಅಂಗುಲಿ; ಮುದ್ರಿಕೆ: ಉಂಗುರ; ರಕ್ಷ: ಕಾಪಾಡು, ರಕ್ಷಣೆ; ಯಂತ್ರ: ತಾಂತ್ರಿಕ ಪೂಜೆಗಾಗಿ ಸಾಮಾನ್ಯವಾಗಿ ತಾಮ್ರದ ತಗಡಿನ ಮೇಲೆ ಬರೆದಿಡುವ ಆಕೃತಿ, ತಾಯಿತ; ಮರಕತ: ನವರತ್ನಗಳಲ್ಲಿ ಒಂದು, ಪಚ್ಚೆ; ಘುಟಿಕೆ:ಗುಳಿಗೆ; ವಿಷ: ಗರಳ; ಸಂಹರಣ: ನಾಶ; ವಿವಿಧ: ಹಲವಾರು; ಉಪಾಯ: ರೀತಿ, ಯುಕ್ತಿ; ನೃಪ: ರಾಜ; ನಿಂದು: ನಿಂತುಕೊಳ್ಳು; ಆದಿ: ಮುಂತಾದ; ದುಗುಡ: ದುಃಖ;

ಪದವಿಂಗಡಣೆ:
ಗರುಡ+ಪಂಚಾಕ್ಷರಿಯ +ಮಂತ್ರ
ಉಚ್ಚರಣೆಯಲಿ +ಭೂ+ನಾಗ+ಸತ್ವದ
ಬೆರಳ +ಮುದ್ರಿಕೆಗಳಲಿ +ರಕ್ಷಾಯಂತ್ರ+ಮಂತ್ರದಲಿ
ಮರಕತದ+ ಘುಟಿಕೆಯಲಿ +ವಿಷ+ಸಂ
ಹರಣ+ ವಿವಿಧ+ಉಪಾಯದಲಿ +ನೃಪ
ವರರು +ನಿಂದುದು +ಭೀಮಸೇನಾದಿಗಳು +ದುಗುಡದಲಿ

ಅಚ್ಚರಿ:
(೧) ಪ್ರಾಸ ಪದಗಳು – ಯಂತ್ರ ಮಂತ್ರ
(೨) ರಕ್ಷಣೆ ಪಡೆದ ವಿಧಾನಗಳು – ಮಂತ್ರೋಚ್ಚರಣೆ, ಮುದ್ರಿಕೆ, ರಕ್ಷಾಯಂತ್ರ, ಘುಟಿಕೆ

ಪದ್ಯ ೨೧: ನಾಗಾಸ್ತ್ರದ ಪರಿಣಾಮ ಹೇಗಿತ್ತು?

ತುರಗತತಿ ತಲೆಗುತ್ತಿದವು ಮದ
ಕರಿಗಳೊದರಿದವಸವಳಿದು ರಥ
ತುರಗವೆಳೆದವು ರಥವನಾಗಳೆ ವಿಷದ ಝಳಹೊಯ್ದು
ಸುರಿವ ಗರಳದ ಗಾಳಿ ಸೋಂಕಿದ
ನರಗೆ ನಂಜೇರಿತು ಭಯಂಕರ
ತರದ ಭಾರಿಯ ವಿಷಕೆ ಕೋಳ್ಗುದಿಗೊಂಡುದರಿಸೇನೆ (ಕರ್ಣ ಪರ್ವ, ೨೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನು ಬಿಟ್ಟ ನಾಗಾಸ್ತ್ರವು ಪಾಂಡವರ ಸೈನ್ಯದ ಮೇಲೆ ಭಾರಿ ಪ್ರಮಾಣದ ತೊಂದರೆ ಒಡ್ಡಿತು. ಕುದುರೆಗಳು ತಲೆತಗ್ಗಿಸಿದವು, ಮದಗಜಗಳು ಶಕ್ತಿಗುಂದಿ ನೆಲಕ್ಕೆ ಬಿದ್ದವು. ರಥಕ್ಕೆ ಕಟ್ಟಿದ ಕುದುರೆಗಳು ವಿಷದ ತಾಪಕ್ಕೆ ಅಲ್ಲಾಡಲು ರಥಗಳು ತಲೆಕೆಳಗಾದವು, ವಿಷದ ಗಾಳಿಯು ಅರ್ಜುನನಿಗೆ ಸೋಂಕಿ ಅರ್ಜುನನಿಗೂ ನಂಜು ಮೈಯಲ್ಲೇರಿತು, ಸಮಸ್ತ ಪಾಂಡವ ಸೇನೆಯೂ ವಿಷದ ಝಳದಿಂದ ಅತಿಶಯ ಸಂತಾಪವನ್ನನುಭವಿಸಿತು.

ಅರ್ಥ:
ತುರಗ: ಅಶ್ವ, ಕುದುರೆ; ತತಿ: ಗುಂಪು; ತಲೆ: ಶಿರ; ಕುತ್ತು: ತಗ್ಗಿಸು; ಮದ: ಅಮಲು, ಸೊಕ್ಕು; ಕರಿ: ಆನೆ; ಒದರು: ಕೊಡಹು, ಜಾಡಿಸು; ಅಸು: ಪ್ರಾಣ; ಅಳಿ: ನಾಶ, ಮರೆಯಾಗು; ರಥ: ಬಂಡಿ; ವಿಷ: ಗರಳ; ಝಳ: ತಾಪ; ಸುರಿ: ಮೇಲಿನಿಂದ ಬೀಳು, ವರ್ಷಿಸು; ಹೊಯ್ದು: ಹೊಡೆದು; ಗಾಳಿ: ವಾಯು; ಸೋಂಕು: ತಾಗು, ಮುಟ್ಟು; ನರ: ಅರ್ಜುನ; ನಂಜು: ವಿಷ; ಏರು: ಮೇಲೆ, ಆರೋಹಿಸು; ಭಯಂಕರ: ಉಗ್ರ; ಭಾರಿ: ಗಾಢ; ಕೋಳ್ಗುದಿ: ಅತಿ ಸಂತಾಪ, ಕೊತಕೊತ ಕುದಿ; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ತುರಗ+ತತಿ +ತಲೆಗುತ್ತಿದವು +ಮದ
ಕರಿಗಳ್+ಒದರಿದವ್+ಅಸವಳಿದು+ ರಥ
ತುರಗವ್+ಎಳೆದವು +ರಥವನ್+ಆಗಳೆ+ ವಿಷದ +ಝಳ+ಹೊಯ್ದು
ಸುರಿವ +ಗರಳದ +ಗಾಳಿ +ಸೋಂಕಿದ
ನರಗೆ+ ನಂಜೇರಿತು +ಭಯಂಕರ
ತರದ +ಭಾರಿಯ +ವಿಷಕೆ +ಕೋಳ್ಗುದಿಗೊಂಡುದ್+ಅರಿ+ಸೇನೆ

ಅಚ್ಚರಿ:
(೧) ಸಮನಾರ್ಥಕ ಪದ – ವಿಷ, ನಂಜು, ಗರಳ
(೨) ಪ್ರಾಣ/ಶಕ್ತಿ ಕಳೆದುಕೊಂಡವು ಎಂದು ಹೇಳಲು – ತಲೆಗುತ್ತಿದವು, ಅಸವಳಿದು ಒದರಿದವು
(೩) ವಿಷದ ತಾಪವನ್ನು ವರ್ಣಿಸಲು – ಕೋಳ್ಗುದಿಗೊಂಡಿತು