ಪದ್ಯ ೧೨: ಕರ್ಣನು ಅರ್ಜುನನ ಯಾವ ಭಾಗಕ್ಕೆ ಸರ್ಪಾಸ್ತ್ರವನ್ನು ಹೂಡಿದನು?

ಹೂಡಿದನು ತಿರುವಿನಲಿ ಬಾಣದ
ಝಾಡಿಯುರಿನಾಲಗೆಯ ನಿರುತನ
ನೋಡಿ ಪಾರ್ಥನ ಗಳಕೆ ಸಂಧಾನವ ನಿಧಾನಿಸುತ
ನೋಡಿದನು ಶಲ್ಯನನು ಮಿಗೆ ತೂ
ಗಾಡಿದನು ಕೌರವನ ಪುಣ್ಯದ
ಬೀಡು ಬಿಡುವಡೆ ಕಾಣಲಹುದಿಂದೆಂದನಾ ಕರ್ಣ (ಕರ್ಣ ಪರ್ವ, ೨೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕರ್ಣನು ಸರ್ಪಾಸ್ತ್ರವನ್ನು ಹೆದೆಯಲ್ಲಿ ಹೂಡಿ ಅದರ ತುದಿಯ ಉರಿನಾಲಗೆಯ ನೇರವನ್ನು ನೋಡಿ, ಅರ್ಜುನನ ಕುತ್ತಿಗೆಗೆ ಗುರಿಯಿಟ್ಟು, ಶಲ್ಯನನ್ನು ನೋಡಿ ತಲೆದೂಗಿ, ಕೌರವನ ಪುಣ್ಯದ ಬೀಡು ಬಿಡಲು ಇಂದೇ ಸರಿಯಾದ ಸಮಯ ನೋಡಿ ಎಂದು ನುಡಿದನು.

ಅರ್ಥ:
ಹೂಡು: ಅಣಿಗೊಳಿಸು; ತಿರುವು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಬಾಣ: ಅಂಬು; ಝಾಡಿಸು: ಅಲುಗಾಡಿಸು, ಒದರು; ಉರಿ: ಬೆಂಕಿಯ ಕಿಡಿ; ನಾಲಗೆ: ಜಿಹ್ವೆ; ನಿರುತ: ಸತ್ಯ,ನಿಶ್ಚಯ, ನಿರ್ಧಾರವಾದ ಭಾವನೆ; ನೋಡಿ: ವೀಕ್ಷಿಸಿ; ಗಳ: ಕಂಠ, ಕೊರಳು; ಸಂಧಾನ: ಹೊಂದಿಸುವುದು, ಸಂಯೋಗ; ನಿಧಾನಿಸು: ತಡೆದು; ಮಿಗೆ: ಮತ್ತು; ತೂಗಾಡು: ಅಲ್ಲಾಡಿಸು; ಪುಣ್ಯ: ಒಳ್ಳೆಯ, ಮಂಗಳಕರವಾದ; ಬೀಡು: ವಾಸಸ್ಥಾನ; ಬಿಡು: ಅಡೆಯಿಲ್ಲದಿರು; ಕಾಣಲು: ತೋರಲು;

ಪದವಿಂಗಡಣೆ:
ಹೂಡಿದನು +ತಿರುವಿನಲಿ +ಬಾಣದ
ಝಾಡಿ+ಉರಿನಾಲಗೆಯ +ನಿರುತನ
ನೋಡಿ +ಪಾರ್ಥನ +ಗಳಕೆ +ಸಂಧಾನವ +ನಿಧಾನಿಸುತ
ನೋಡಿದನು +ಶಲ್ಯನನು +ಮಿಗೆ +ತೂ
ಗಾಡಿದನು +ಕೌರವನ +ಪುಣ್ಯದ
ಬೀಡು +ಬಿಡುವಡೆ +ಕಾಣಲ್+ಅಹುದ್+ಇಂದ್+ಎಂದನಾ +ಕರ್ಣ

ಅಚ್ಚರಿ:
(೧) ಬಾಣಕ್ಕೆ ನೀಡಿದ ಆಜ್ಞೆ: ಬಾಣದ ಝಾಡಿಯುರಿನಾಲಗೆಯ ನಿರುತನ ನೋಡಿ ಪಾರ್ಥನ ಗಳಕೆ ಸಂಧಾನವ ನಿಧಾನಿಸುತ
(೨) ಹೂಡಿ, ಝಾಡಿ, ನೋಡಿ, ತೂಗಾಡಿ – ಪ್ರಾಸ ಪದಗಳು

ಪದ್ಯ ೧೧ : ಸರ್ಪಾಸ್ತ್ರದ ತಾಪ ಹೇಗಿತ್ತು?

ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ (ಕರ್ಣ ಪರ್ವ, ೨೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಹೆಡೆಯಿಂದ ಉರಿಯ ಜೀರ್ಕೊಳವೆಗಳು ಬಂದವು. ದಳ್ಳುರಿಯು ಸಿಮಿಸಿಮಿ ಸದ್ದು ಮಾಡಿತು. ಕಿಡಿಯ ತುಂತುರುಗಳು, ಕಿಡಿಗಳ ತೆಕ್ಕೆ ಉಸಿರಾಟದಿಂದ ಬಂದ ಝಳ, ಕಪ್ಪುಹೊಗೆಯ ಹೊರಳಿಗಳು ಹಬ್ಬುತ್ತಿರಲು ಸರ್ಪವು ನನಗೆ ಅಪ್ಪಣೆಯೇನು ಎಂದು ಬೇಡಿತು.

ಅರ್ಥ:
ಉರಿ: ಬೆಂಕಿಯ ಕಿಡಿ; ಜೀರ್ಕೊಳವಿ: ಪಿಚಕಾರಿ; ಪೂತ್ಕರಿಸು: ಹೊರಹಾಕು; ಫಣಿ: ಹಾವು; ವದನ: ಮುಖ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಸಿಮಿಸಿಮಿ: ಉರಿಯ ಶಬ್ದದ ವರ್ಣನೆ; ತುಷಾರ: ಹಿಮ, ಇಬ್ಬನಿ; ತುಂತುರು: ಸಣ್ಣ ಸಣ್ಣ ಹನಿ; ಕಿಡಿ: ಬೆಂಕಿ; ಹೊರಳು: ತಿರುಗು, ಬಾಗು; ಕಿಡಿ: ಬೆಂಕಿ; ಕರ್ಬೊಗೆ: ಕಪ್ಪಾದ ಹೊಗೆ; ಕಾಹುರ: ಆವೇಶ, ಸೊಕ್ಕು, ಕೋಪ; ಸುಯ್ಲು: ನಿಟ್ಟುಸಿರು; ಝಳ: ಪ್ರಕಾಶ, ಕಾಂತಿ; ಗರಳ:ವಿಷ; ಜಿಗಿ: ಹಾರು; ಮಾತು: ವಾಣಿ; ತೋರು: ಗೋಚರಿಸು; ಬೆಸಸು: ಹೇಳು, ಆಜ್ಞಾಪಿಸು;

ಪದವಿಂಗಡಣೆ:
ಉರಿಯ+ ಜೀರ್ಕೊಳವಿಗಳವೊಲು +ಪೂ
ತ್ಕರಿಸಿದವು +ಫಣಿ +ವದನದಲಿ+ ದ
ಳ್ಳುರಿಯ +ಸಿಮಿಸಿಮಿಗಳ+ ತುಷಾರದ+ ಕಿಡಿಯ +ತುಂತುರಿನ
ಹೊರಳಿ+ಕಿಡಿಗಳ +ಕರ್ಬೊಗೆಯ +ಕಾ
ಹುರದ +ಸುಯ್ಲಿನ +ಝಳವ +ಗರಳಾ
ಕ್ಷರದ +ಜಿಗಿಯಲಿ +ಮಾತು +ತೋರಿತು +ಬೆಸಸು +ಬೆಸಸೆನುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಜೀರ್ಕೊಳವಿಗಳವೊಲು ಪೂತ್ಕರಿಸಿದವು ಫಣಿ
(೨) ಸರ್ಪಾಸ್ತ್ರದ ವರ್ಣನೆ – ಫಣಿ ವದನದಲಿ ದಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
(೩) ಬೆಂಕಿಯನ್ನು ಶಬ್ದದಲ್ಲಿ ಹಿಡಿಯುವ ಪರಿ – ಸಿಮಿಸಿಮಿ
(೪) ದಳ್ಳುರಿಯನ್ನು ತಂಪಾದ ತುಂತುರು ಎಂದು ಹೇಳುವ ಕವಿಯ ಕಲ್ಪನೆ

ಪದ್ಯ ೧೦: ದುರ್ಯೋಧನನು ರೋಮಾಂಚನಗೊಂಡು ಏನು ಹೇಳಿದ?

ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಲೀ ಹದನಾಯ್ತು ಚಾಪದೊ
ಳೋಡಿಸಿದಡೇನಹುದು ಹರಹರ ಹರ ಮಹಾಸ್ತ್ರವಲೆ
ನೋಡಿರೈ ಗುರುಸುತಕೃಪಾದಿಗ
ಳೋಡದಿರಿ ನೀವೆನುತ ಪುಳಕದ
ಬೀಡಿನಲಿ ಮೈ ಮುಳುಗಿ ತೂಗಾಡಿದನು ಕುರುರಾಯ (ಕರ್ಣ ಪರ್ವ, ೨೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಬತ್ತಳಿಕೆಯಿಂದ ಬಾಣವನ್ನು ತೆಗೆದು ಬಿಲ್ಲಿನಲ್ಲಿ ಹೂಡುವಷ್ಟರಲ್ಲಿ ಇದೇನು ಸ್ಥಿತಿಯಾಯಿತು, ಈ ಬಾಣವನ್ನು ಎಳೆದು ಬಿಟ್ಟರೆ ಏನಾಗುವುದೋ ಇದು ಮಹಾಸ್ತ್ರವಲ್ಲವೇ ಶಿವ ಶಿವಾ ಎನ್ನುತ್ತಾ ದುರ್ಯೋಧನನು ಕೃಪಚಾರ್ಯರು, ಅಶ್ವತ್ಥಾಮರನ್ನು ಓಡಬೇಡಿ ಇದನ್ನು ನೋಡಿರಿ ಎಂದು ರೋಮಾಂಚನಗೊಂಡು ಪುಳಕಜಲದಲ್ಲಿ ಮುಳುಗಿ ಹೇಳಿದನು.

ಅರ್ಥ:
ಮೂಡಿಗೆ: ಬಾಣಗಳನ್ನಿಡುವ ಚೀಲ, ಬತ್ತಳಿಕೆ; ಅಂಬು: ಬಾಣ; ಉಗಿದು: ಹೊರಹಾಕು; ತಿರುಗು: ಬಾಗು, ಅಲೆದಾಡು, ಸುತ್ತು; ಹೂಡು: ಅಣಿಗೊಳಿಸು; ಹದ: ಸರಿಯಾದ ಸ್ಥಿತಿ; ಚಾಪ: ಬಿಲ್ಲು; ಓಡಿಸು: ಬಿಡು; ಹರಹರ: ಮಹಾದೇವ; ಮಹಾಸ್ತ್ರ: ದೊಡ್ಡ/ಶ್ರೇಷ್ಠವಾದ ಆಯುಧ; ನೋಡು: ವೀಕ್ಷಿಸು; ಗುರುಸುತ: ಅಶ್ವತ್ಥಾಮ; ಆದಿ: ಮುಂತಾದ; ಸುತ: ಮಗ; ಓಡು: ಪಲಾಯನ; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಬೀಡು: ವಸತಿ, ವಾಸ್ತವ್ಯ; ಮೈ: ತನು; ಮುಳುಗು: ಅದ್ದು, ತೋಯ್ದು; ತೂಗಾಡು: ಅಲ್ಲಾಡು; ರಾಯ: ರಾಜ;

ಪದವಿಂಗಡಣೆ:
ಮೂಡಿಗೆಯೊಳ್+ಅಂಬ್+ಉಗಿದು +ತಿರುವಿಗೆ
ಹೂಡಲೀ+ ಹದನಾಯ್ತು+ ಚಾಪದೊಳ್
ಓಡಿಸಿದಡ್+ಏನಹುದು +ಹರಹರ +ಹರ+ ಮಹಾಸ್ತ್ರವಲೆ
ನೋಡಿರೈ +ಗುರುಸುತ+ಕೃಪಾದಿಗಳ್
ಓಡದಿರಿ +ನೀವ್+ಎನುತ +ಪುಳಕದ
ಬೀಡಿನಲಿ+ ಮೈ +ಮುಳುಗಿ+ ತೂಗಾಡಿದನು +ಕುರುರಾಯ

ಅಚ್ಚರಿ:
(೧) ರೋಮಾಂಚನಗೊಂಡ ಸ್ಥಿತಿಯ ವರ್ಣನೆ – ಪುಳಕದ ಬೀಡಿನಲಿ ಮೈ ಮುಳುಗಿ ತೂಗಾಡಿದನು ಕುರುರಾಯ

ಪದ್ಯ ೯: ಕೌರವರು ಏಕೆ ಹರುಷಿಸಿದರು?

ಹಣುಗಿದರು ಭೀಮಾದಿಗಳು ಕ
ಟ್ಟೊಣಗಿಲಾದವು ಭಟರ ಮೋರೆಗ
ಳೆಣಿಸುತಿರ್ದರು ಜಪವನರ್ಜುನ ಕೃಷ್ಣರೆಂಬವರು
ಸೆಣಸುವನು ಗಡ ಕೌರವನೊಳಿ
ನ್ನುಣಲಿ ಧರೆಯನು ಧರ್ಮಸುತನೆಂ
ದಣಕವಾಡಿತು ನಿನ್ನ ದುಷ್ಪರಿವಾರ ಹರುಷದಲಿ (ಕರ್ಣ ಪರ್ವ, ೨೫ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಮನೇ ಮೊದಲಾದ ಪಾಂಡವ ವೀರರು ಹೊಂಚು ಹಾಕಿದರು. ಯೋಧರ ಮೋರೆಗಳು ಬಡವಾದವು. ಕೃಷ್ಣ ಅರ್ಜುನರ ನಾಮಸ್ಮರಣೆಮಾಡಲಾರಂಭಿಸಿದರು. ಎಲೈ ರಾಜ ಧೃತರಾಷ್ಟ್ರ ನಿನ್ನ ದುಷ್ಟಪರಿವಾರವು ಧರ್ಮರಾಯನಿಗೆ, ಇವನು ಕೌರವನೊಡನೆ ಯುದ್ಧಕ್ಕಿಳಿದನೋ, ಇನ್ನು ರಾಜ್ಯವನ್ನನುಭವಿಸಲಿ ಎಂದು ಅಣಕಿಸಿದರು.

ಅರ್ಥ:
ಹಣುಗು: ಹಿಂಜರಿ, ಹೊಂಚು; ಆದಿ: ಮುಂತಾದ; ಒಣಗು: ಬತ್ತಿದ, ಸತ್ತ್ವವಿಲ್ಲದ; ಭಟ: ಸೈನಿಕ; ಮೋರೆ: ಮುಖ; ಎಣಿಸು: ಗಣನೆ ಮಾಡು; ಜಪ: ನಾಮಸ್ಮರಣೆ; ಸೆಣಸು: ಯುದ್ಧಮಾದು; ಗಡ: ಅಲ್ಲವೆ; ತ್ವರಿತವಾಗಿ; ಉಣು: ಊಟಮಾಡು; ಧರೆ: ಭೂಮಿ; ಸುತ: ಮಗ; ಧರ್ಮ: ಯಮ; ಅಣಕ: ಹಂಗಿಸು; ಪರಿವಾರ: ಸುತ್ತಲಿನವರು, ಪರಿಜನ; ದುಷ್ಪರಿವಾರ: ದುಷ್ಟಪರಿಜನ; ಹರುಷ: ಸಂತೋಷ;

ಪದವಿಂಗಡಣೆ:
ಹಣುಗಿದರು +ಭೀಮಾದಿಗಳು +ಕಟ್
ಒಣಗಿಲಾದವು+ ಭಟರ+ ಮೋರೆಗಳ್
ಎಣಿಸುತಿರ್ದರು +ಜಪವನ್+ಅರ್ಜುನ +ಕೃಷ್ಣರ್+ಎಂಬವರು
ಸೆಣಸುವನು+ ಗಡ+ ಕೌರವನೊಳ್
ಇನ್ನುಣಲಿ +ಧರೆಯನು +ಧರ್ಮಸುತನೆಂದ್
ಅಣಕವಾಡಿತು +ನಿನ್ನ+ ದುಷ್ಪರಿವಾರ +ಹರುಷದಲಿ

ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವರ್ಣಿಸುವ ಪದಗಳು – ಹಣುಗು, ಕಟ್ಟೊಣಗು, ಜಪ
(೨) ಸಂಜಯನು ಧೃತರಾಷ್ಟ್ರನಿಗೆ ತನ್ನದು ದುಷ್ಟಪರಿವಾರ ಎಂದು ಹೇಳುತ್ತಿರುವುದು
(೩) ಎಣಿಸು, ಸೆಣಸು – ಪ್ರಾಸ ಪದ

ಇಂದ್ರನು ಅರ್ಜುನನ ಒಳಿತಿಗೆ ಯಾರನ್ನು ಭಜಿಸಿದನು?

ಭುಜವ ಹೊಯ್ದರು ಸೂರ್ಯತಕ್ಷಕ
ರಜನ ಸಭೆಯಲಿ ಭಯದಿ ಸುರಪತಿ
ಭಜಿಸಿದನು ಗರುಡನನು ನಿರ್ವಿಷಮಸ್ತು ನರಗೆನುತ
ಗಜರಿದವು ನಿಸ್ಸಾಳವಾದ್ಯ
ವ್ರಜದ ಕಹಳೆಯ ಭಟರ ಬೊಬ್ಬೆಯ
ಗಜಬಜಿಕೆ ಘಾಡಿಸಿತು ಕೌರವಸೈನ್ಯ ಶರಧಿಯಲಿ (ಕರ್ಣ ಪರ್ವ, ೨೫ ಸಂಧಿ, ೮ ಪದ್ಯ)

ತಾತ್ಪರ್ಯ:
ಬ್ರಹ್ಮನ ಸಭೆಯಲ್ಲಿ ಸೂರ್ಯನೂ ತಕ್ಷಕನು ಒಬ್ಬರನೊಬ್ಬರು ತೋಳು ತಟ್ಟಿದರು. ದೇವೇಂದ್ರನು ಅರ್ಜುನನಿಗೆ ವಿಷ ಸೋಂಕದಿರಲಿ ಎಂದು ಪ್ರಾರ್ಥಿಸುತ್ತಾ ಗರುಡನನ್ನು ಭಜಿಸಿದನು. ಕೌರವ ಸೈನ್ಯದಲ್ಲಿ ರಣಭೇರಿ ಕಹಳೆಗಳು ಉತ್ತುಂಗ ಘೋಷವನ್ನು ಮಾಡಿದವು.

ಅರ್ಥ:
ಭುಜ: ತೋಳು; ಹೊಯ್ದು: ಹೊಡೆ; ಸೂರ್ಯ: ರವಿ; ತಕ್ಷಕ: ಅಷ್ಟಫಣಿಗಳಲ್ಲಿ ಒಂದು; ಅಜ: ಬ್ರಹ್ಮ; ಸಭೆ: ಓಲಗ; ಭಯ: ಅಂಜಿಕೆ, ಹೆದರಿಕೆ; ಸುರಪತಿ: ಇಂದ್ರ; ಭಜಿಸು: ಆರಾಧಿಸು; ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ, ವಿಷ್ಣುವಿನ ವಾಹನ; ವಿಷ: ಗರಳ, ನಂಜು; ನರ: ಅರ್ಜುನ; ಗಜರು: ಬೆದರಿಸು, ಗದರು; ನಿಸ್ಸಾಳ: ಒಂದು ಬಗೆಯ ರಣವಾದ್ಯ; ವ್ರಜ: ಗುಂಪು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಭಟ: ಸೈನಿಕರು; ಬೊಬ್ಬೆ: ಆರ್ಬಟ; ಗಜಬಜ: ಗದ್ದಲ; ಘಾಡಿಸು: ವ್ಯಾಪಿಸು; ಶರಧಿ: ಸಮುದ್ರ; ಸೈನ್ಯ: ಪಡೆ;

ಪದವಿಂಗಡಣೆ:
ಭುಜವ +ಹೊಯ್ದರು +ಸೂರ್ಯ+ತಕ್ಷಕರ್
ಅಜನ +ಸಭೆಯಲಿ +ಭಯದಿ +ಸುರಪತಿ
ಭಜಿಸಿದನು +ಗರುಡನನು +ನಿರ್ವಿಷಮಸ್ತು +ನರ+ ಗೆನುತ
ಗಜರಿದವು +ನಿಸ್ಸಾಳವಾದ್ಯ
ವ್ರಜದ +ಕಹಳೆಯ +ಭಟರ +ಬೊಬ್ಬೆಯ
ಗಜಬಜಿಕೆ+ ಘಾಡಿಸಿತು +ಕೌರವಸೈನ್ಯ+ ಶರಧಿಯಲಿ

ಅಚ್ಚರಿ:
(೧) ಭುಜ, ಅಜ, ಗಜ, ವ್ರಜ – ಪ್ರಾಸ ಪದಗಳು
(೨) ಸೇನಾ ಸಮುದ್ರ ಎಂದು ಹೇಳಲು – ಕೌರವಸೈನ್ಯ ಶರಧಿಯಲಿ

ಪದ್ಯ ೭: ಸರ್ಪಾಸ್ತ್ರವು ಯಾರನ್ನು ಸಂತಸಗೊಳಿಸಿತು?

ಆವರಿಸಿದವು ಪುಷ್ಕಳಾವ
ರ್ತಾವಳಿಗಳೆನೆ ಬಹಳವಿಷಧೂ
ಮಾವಳಿಯಲೇ ಧಾತುಗೆಟ್ಟುದು ಸಕಳಭುವನಜನ
ದೇವತತಿ ಬೆಂಡಾಯ್ತು ಮೊದಲಿನ
ದೇವರುಬ್ಬಿದರುರಗಪತಿಯ ಫ
ಣಾವಳಿಯ ಗುಡಿಯೆತ್ತಿದವು ಪಾತಾಳಲೋಕದಲಿ (ಕರ್ಣ ಪರ್ವ, ೨೫ ಸಂಧಿ, ೭ ಪದ್ಯ)

ತಾತ್ಪರ್ಯ:
ಪುಷ್ಕರಾವರ್ತಾದಿ ಮೇಘಗಳು ಕವಿದವೋ ಎಂಬಂತೆ ವಿಷದ ಹೊಗೆಯಿಂದ ಜನರೆಲ್ಲರೂ ಧಾತುಗೆಟ್ಟರು. ದೇವತೆಗಳು ಬೆಂಡಾದರು. ರಾಕ್ಷಸರು ಉಬ್ಬಿದರು. ಪಾತಾಳದಲ್ಲಿದ್ದ ಆದಿಶೇಷನು ತನ್ನ ಸಾವಿರ ಹೆಡೆಗಳನ್ನು ಎತ್ತಿ ಹಿಡಿದನು.

ಅರ್ಥ:
ಆವರಿಸು: ಹರಡು, ವ್ಯಾಪಿಸು; ಪುಷ್ಕಳ: ಬಹಳ, ವಿಪುಲ, ಶ್ರೇಷ್ಠ; ಆವಳಿ: ಸಾಲು, ಗುಂಪು; ಬಹಳ: ತುಂಬ; ವಿಷ: ನಂಉ; ಧೂಮ: ಹೊಗೆ; ಧಾತು: ಮೂಲವಸ್ತು; ಸಕಳ: ಎಲ್ಲಾ; ಭುವನ: ಜಗತ್ತು, ಪ್ರಪಂಚ; ದೇವ: ಸುರರು; ತತಿ: ಗುಂಪು; ಬೆಂಡು:ತಿರುಳಿಲ್ಲದುದು, ಜೊಳ್ಳು; ಮೊದಲು: ಆದಿ; ದೇವ: ಭಗವಂತ, ಸುರ; ಉಬ್ಬು: ಹೆಚ್ಚಾಗು, ಅಧಿಕ; ಉರಗ: ಹಾವು; ಪತಿ: ಒಡೆಯ; ಉರಗಪತಿ: ನಾಗರಾಜ; ಫಣಾವಳಿ: ಹಾವುಗಳ ಗುಂಪು; ಗುಡಿ:ಗುಂಪು, ಸಮೂಹ; ಪಾತಾಳ: ಅಧೋಲೋಕ; ಲೋಕ: ಜಗತ್ತು;

ಪದವಿಂಗಡಣೆ:
ಆವರಿಸಿದವು +ಪುಷ್ಕಳಾವ
ರ್ತಾವಳಿಗಳ್+ಎನೆ +ಬಹಳ+ವಿಷಧೂ
ಮಾವಳಿಯಲೇ+ ಧಾತುಗೆಟ್ಟುದು +ಸಕಳ+ಭುವನಜನ
ದೇವತತಿ+ ಬೆಂಡಾಯ್ತು +ಮೊದಲಿನ
ದೇವರ್+ಉಬ್ಬಿದರ್+ಉರಗಪತಿಯ+ ಫ
ಣಾವಳಿಯ+ ಗುಡಿಯೆತ್ತಿದವು+ ಪಾತಾಳ+ಲೋಕದಲಿ

ಅಚ್ಚರಿ:
(೧) ರಾಕ್ಷಸರನ್ನು ಮೊದಲಿನದೇವರು ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಆವರಿಸಿದವು ಪುಷ್ಕಳಾವ ರ್ತಾವಳಿಗಳೆನೆ ಬಹಳವಿಷಧೂ
ಮಾವಳಿಯಲೇ ಧಾತುಗೆಟ್ಟುದು ಸಕಳಭುವನಜನ

ಪದ್ಯ ೬: ಬಾಣದ ಹೊಗೆಯು ಯಾವುದನ್ನು ಆವರಿಸಿತು?

ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳೆಂದ (ಕರ್ಣ ಪರ್ವ, ೨೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಪ್ರಭಾವದಿಂದ ಅಕ್ಕಪಕ್ಕದವರ ಮೈಗಳು ಮರಗಟ್ಟಿದವು. ರಥದ ಕುದುರೆಗಳು ಆಯಾಸಗೊಂಡವು. ಶಲ್ಯನು ಅತಿಶಯ ವಿಸ್ಮಯದಲ್ಲಿ ಮುಳುಗಿಹೋದನು. ಉರಿ ಸುತ್ತಲೂ ಹಬ್ಬಿತು. ಹೊಗೆಯು ಆಗಸವನ್ನೇ ತುಂಬಿತು.

ಅರ್ಥ:
ಹೊರೆ: ರಕ್ಷಣೆ, ಆಶ್ರಯ, ಸಮೀಪ; ಮರನಾದರು: ಗಟ್ಟಿಯಾಗು, ಬಿರುಸಾದ; ರಥ: ಬಂಡಿ; ತುರಗ: ಕುದುರೆ; ತತಿ: ಗುಂಪು, ಸಮೂಹ; ಲಟಕಟಿಸು: ಉದ್ರೇಕಗೊಳ್ಳು; ನಿಬ್ಬರ: ಅತಿಶಯ, ಹೆಚ್ಚಳ; ಬೆರಗು: ವಿಸ್ಮಯ, ಸೋಜಿಗ; ಅದ್ದು: ತೋಯ್ದು; ನಿಮಿಷ: ಕಾಲ ಪ್ರಮಾಣ; ಉರಿ: ಬೆಂಕಿಯ ಕಿಡಿ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಪೂತ: ತೂರಿದ; ಕೃತಿ: ಕೆಲಸ; ಪಂಜರ: ಹಕ್ಕಿ, ಪ್ರಾಣಿಗಳನ್ನು ಕೂಡುವ ಸಾಧನ; ಪಲ್ಲವಿಸು: ವಿಕಸಿಸು; ಉಬ್ಬು: ಹೆಚ್ಚಾಗು, ಹಿಗ್ಗು; ಹೊರಳು: ತಿರುವು, ಬಾಗು; ಹೊಗೆ: ಧೂಮ; ಅಂಬರ: ಆಗಸ; ತುಂಬು: ಪೂರ್ತಿಗೊಳ್ಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊರೆಯವರು +ಮರನಾದರ್+ಆ+ ರಥ
ತುರಗ+ತತಿ +ಲಟಕಟಿಸಿದವು+ ನಿ
ಬ್ಬರದ +ಬೆರಗಿನೊಳ್+ಅದ್ದು +ಹೋದನು +ಶಲ್ಯ +ನಿಮಿಷದಲಿ
ಉರಿ+ ಛಡಾಳಿಸಿ +ಪೂತ್ಕೃತಿಯ+ ಪಂ
ಜರದೊಳಗೆ +ಪಲ್ಲವಿಸಿತ್+ಉಬ್ಬಿದ
ಹೊರಳಿ+ಹೊಗೆ+ಅಂಬರವ+ ತುಂಬಿತು +ಭೂಪ +ಕೇಳೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪೂತ್ಕೃತಿಯ ಪಂಜರದೊಳಗೆ ಪಲ್ಲವಿಸಿತುಬ್ಬಿದ