ಪದ್ಯ ೩೦: ಕುರುಸೇನೆ ಏಕೆ ಚಿಂತಿಸಿತು?

ಶಕುನಿ ಮುರಿದನು ಬೇಹ ದಳನಾ
ಯಕರು ತಿರುಗಿತು ಭೀಮಸೇನನ
ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ
ಅಕಟಕಟ ಕುರುಸೇನೆ ನಿರ್ನಾ
ಯಕವಲಾ ಹಾ ಎನುತ ಮಂತ್ರಿ
ಪ್ರಕರ ಮರುಗಿತು ತುರುಗಿತಲ್ಲಿಯದಲ್ಲಿ ಕಳವಳಿಸಿ (ಕರ್ಣ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಶಕುನಿಯು ಸೋತು ಹಿಮ್ಮೆಟ್ಟಿದನು. ಕೌರವನ ಆಪ್ತ ನಾಯಕರು ಬೆನ್ನು ತೋರಿಸಿದರು. ಭೀಮನ ಸಿಂಹಗರ್ಜನೆಗೆ ಕುರುವೀರರ ಹೃದಯಗಳು ಕಳವಳಿಸಿದವು. ಮಂತ್ರಿಗಳು ಅಲ್ಲಲ್ಲಿ ಸೇರಿ, ಅಯ್ಯೋ ಕುರುಸೇನೆಗೆ ನಾಯಕರೇ ಇಲ್ಲವಲ್ಲಾ ಎನ್ನುತ್ತಾ ಭಯಗೊಂಡು ಅಲ್ಲಲ್ಲಿ ಗುಜುಗುಟ್ಟಿದರು.

ಅರ್ಥ:
ಮುರಿ: ಸೀಳು; ಬೇಹ: ಬೇಕಾದ; ದಳ: ಸೈನ್ಯ; ನಾಯಕ: ಒಡೆಯ; ತಿರುಗು: ಬೆನ್ನುತೋರು, ಹಿಂದಿರುಗು; ವಿಕಟ: ಭೀಕರವಾದ, ಭಯಾನಕವಾದ; ಸಿಂಹ: ಕೇಸರಿ; ಧ್ವನಿ: ಶಬ್ದ; ಜರಿ: ಅಳುಕು, ಹಿಂಜರಿ; ಭಟ: ಸೈನಿಕ; ಬಲು: ದೊಡ್ಡ; ಹೃದಯ: ಎದೆ, ವಕ್ಷಸ್ಥಳ; ಅಕಟಕಟ: ಅಯ್ಯೋ; ನಿರ್ನಾಯಕ: ನಾಯಕವಿಲ್ಲದ; ಮಂತ್ರಿ: ಸಚಿವ; ಪ್ರಕರ: ಗುಂಪು; ಮರುಗು: ದುಃಖಿಸು; ತುರುಗು: ಸಂದಣಿ, ದಟ್ಟಣೆ; ಕಳವಳ: ಗೊಂದಲ, ಚಿಂತೆ;

ಪದವಿಂಗಡಣೆ:
ಶಕುನಿ +ಮುರಿದನು +ಬೇಹ +ದಳ+ನಾ
ಯಕರು +ತಿರುಗಿತು+ ಭೀಮಸೇನನ
ವಿಕಟ +ಸಿಂಹಧ್ವನಿಗೆ +ಜರಿದುದು +ಭಟರ +ಬಲು+ಹೃದಯ
ಅಕಟಕಟ +ಕುರುಸೇನೆ +ನಿರ್ನಾ
ಯಕವಲಾ+ ಹಾ +ಎನುತ +ಮಂತ್ರಿ
ಪ್ರಕರ+ ಮರುಗಿತು +ತುರುಗಿತ್+ಅಲ್ಲಿಯದಲ್ಲಿ +ಕಳವಳಿಸಿ

ಅಚ್ಚರಿ:
(೧) ಭೀಮನ ಶಕ್ತಿಯ ವರ್ಣನೆ – ಭೀಮಸೇನನ ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ

ಪದ್ಯ ೨೯: ಶಕುನಿಯು ಹೇಗೆ ಹಿಂದಕ್ಕೆ ಹೋದನು?

ಒಗ್ಗಿನೈಸಾವಿರ ರಥಾವಳಿ
ಮುಗ್ಗಿದವು ಕಣೆ ಗಾತಿ ರಥಿಕರು
ನೆಗ್ಗಿದರು ಮೇಲಂಬು ಸುಳಿದೊಯ್ದವು ಸಜೀವಿಗಳ
ಒಗ್ಗೊಡೆದು ಕಲಿಶಕುನಿ ಘಾಯದ
ಸುಗ್ಗಿಯಲಿ ಲಘುವಾಗಿ ಹರುಷದ
ಮುಗ್ಗಿಲೊಣಗಿಲ ಮೋರೆಯಲಿ ತಿರುಗಿದನು ಮೋಹರಕೆ (ಕರ್ಣ ಪರ್ವ, ೧೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಐದು ಸಾವಿರ ರಥಗಳು ಮುರಿದು ಹೋದವು. ರಥಿಕರು ನೆಗ್ಗಿ ಹೋದರು. ಉಳಿದ ಬಾಣಗಳು ಬದುಕಿ ಉಳಿದವರನ್ನೆಲ್ಲಾ ಪರಲೋಕಕ್ಕೊಯ್ದವು. ಗುಂಪು ಮುರಿದು ಗಾಯದ ಸುಗ್ಗಿಯಾಗಿ ಶಕುನಿಯು ಮುಗ್ಗಿದ ಒಣಮೋರೆಯೊಡನೆ ಹಿಂದಕ್ಕೆ ಹೋದನು.

ಅರ್ಥ:
ಒಗ್ಗು:ಒಟ್ಟುಗೂಡು, ಗುಂಪು; ಸಾವಿರ: ಸಹಸ್ರ; ರಥ: ಬಂಡಿ; ಆವಳಿ: ಸಾಲು; ಮುಗ್ಗು: ಬಾಗು, ಮಣಿ; ಕಣೆ: ಬಾಣ; ತಾಗು: ಮುಟ್ಟು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ನೆಗ್ಗು: ಕುಗ್ಗು, ಕುಸಿ; ಅಂಬು: ಬಾಣ; ಸುಳಿ:ಬೀಸು, ತೀಡು; ಒಯ್ದು: ಕರೆದುಕೊಂಡು ಹೋಗು; ಸಜೀವಿ: ಜೀವವಿರುವ; ಒಡೆ: ಸೀಳು; ಕಲಿ: ಬಲಶಾಲಿ; ಘಾಯ: ಪೆಟ್ಟು; ಸುಗ್ಗಿ: ಹೆಚ್ಚಳ, ಸಮೃದ್ಧಿ; ಲಘು: ಬೇಗ; ಹರುಷ: ಸಂತೋಷ; ಮುಗ್ಗು: ಮುಗ್ಗರಿಸು, ನಾಶವಾಗು; ಒಣಗು: ಬಾಡು; ಮೋರೆ: ಮುಖ; ತಿರುಗು: ಹಿಮ್ಮೆಟ್ಟು, ಹಿಂದಿರುಗು; ಮೋಹರ: ಯುದ್ಧ;

ಪದವಿಂಗಡಣೆ:
ಒಗ್ಗಿನ್+ಐಸಾವಿರ+ ರಥಾವಳಿ
ಮುಗ್ಗಿದವು +ಕಣೆ +ಗಾತಿ +ರಥಿಕರು
ನೆಗ್ಗಿದರು +ಮೇಲ್+ಅಂಬು +ಸುಳಿದೊಯ್ದವು +ಸಜೀವಿಗಳ
ಒಗ್ಗೊಡೆದು +ಕಲಿ+ಶಕುನಿ +ಘಾಯದ
ಸುಗ್ಗಿಯಲಿ +ಲಘುವಾಗಿ+ ಹರುಷದ
ಮುಗ್ಗಿಲ್+ಒಣಗಿಲ +ಮೋರೆಯಲಿ +ತಿರುಗಿದನು +ಮೋಹರಕೆ

ಅಚ್ಚರಿ:
(೧) ಘಾಯವಾದರೆ ನೋವು ಸಹಜ, ಇಲ್ಲಿ ಕುಮಾರವ್ಯಾಸ ಘಾಯದ ಸುಗ್ಗಿ, ಸುಗ್ಗಿ ಸಾಮಾನ್ಯವಾಗಿ ಸಂತಸವನ್ನು ತೋರುವ ಪದ, ಇಲ್ಲಿ ಘಾಯಕ್ಕೆ ಸೇರಿಸಿರುವುದು ವಿಶೇಷ

ಪದ್ಯ ೨೮: ಭೀಮನ ಬಾಣಪ್ರಯೋಗ ಹೇಗಿತ್ತು?

ಒಂದು ಶರಸಂಧಾನದಲಿ ಕವಿ
ತಂದವೈಸಾವಿರ ರಥಾವಳಿ
ಯೊಂದು ಧನುವಿನೊಳೀತ ಮೊಗೆದನು ಸರಳಸಾಗರವ
ಸಂದಣಿಸಿತಾ ರಥಿಕರಾ ಹಯ
ವೃಂದವಾ ಸಾರಥಿಗಳಾ ರಥ
ಕೊಂದುಹತ್ತರ ಲೆಕ್ಕದಲಿ ಮಿಕ್ಕವು ಶರವ್ರಾತ (ಕರ್ಣ ಪರ್ವ, ೧೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಂದೇ ಬಾರಿಗೆ ಬಾಣ ಬಿಡುತ್ತಾ ಐದುಸಾವಿರ ರಥಗಳು ಮೇಲೆ ಬೀಳಲು, ಭೀಮನು ಒಂದೇ ಬಿಲ್ಲಿನಿಂದ ಆ ಸೇನೆಯ ಮೇಲೆ ಬಾನಗಳನ್ನು ಬಿಟ್ಟನು. ಆ ರಥಗಳು ರಥಿಕರು ಕುದುರೆಗಳು ಸಾರಥಿಗಳೆಷ್ಟು ಸಂಖ್ಯೆಯಲ್ಲಿದ್ದವೋ, ಅದರ ಹತ್ತರಷ್ಟು ಬಾಣಗಳನ್ನು ಬಿಟ್ಟನು.

ಅರ್ಥ:
ಶರ: ಬಾಣ; ಸಂಧಾನ: ಬಾಣವನ್ನು ಹೂಡುವಂಥದು; ಕವಿ: ಆವರಿಸು; ಸಾವಿರ: ಸಹಸ್ರ; ರಥ: ಬಂಡಿ; ಆವಳಿ: ಸಾಲು, ಗುಂಪು; ಧನು: ಧನಸ್ಸು, ಬಿಲ್ಲು; ಮೊಗೆ: ದಾಳಿಯಿಡು; ಸರಳ: ಬಾಣ; ಸಾಗರ: ಸಮುದ್ರ; ಸಂದಣಿ: ಗುಂಪು, ಸಮೂಹ; ರಥಿಕ: ರಥವನ್ನು ಓಡಿಸುವವ; ಹಯ: ಕುದುರೆ; ವೃಂದ: ಗುಂಪು; ಸಾರಥಿ: ಸೂತ; ರಥ: ಬಂಡಿ; ಕೊಂದು: ಕೊಲ್ಲು; ಲೆಕ್ಕ: ಎಣಿಕೆ; ಮಿಕ್ಕ: ಉಳಿದ; ಶರವ್ರಾತ: ಬಾಣಗಳ ಗುಂಪು;

ಪದವಿಂಗಡಣೆ:
ಒಂದು +ಶರ+ಸಂಧಾನದಲಿ +ಕವಿ
ತಂದವ್+ಐಸಾವಿರ+ ರಥಾವಳಿ
ಯೊಂದು +ಧನುವಿನೊಳ್+ಈತ +ಮೊಗೆದನು +ಸರಳ+ಸಾಗರವ
ಸಂದಣಿಸಿತ್+ಆ+ ರಥಿಕರ್+ಆ+ ಹಯ
ವೃಂದವ್+ಆ+ ಸಾರಥಿಗಳ್+ಆ+ ರಥಕ್
ಒಂದು+ ಹತ್ತರ +ಲೆಕ್ಕದಲಿ +ಮಿಕ್ಕವು +ಶರವ್ರಾತ

ಅಚ್ಚರಿ:
(೧) ಸರಳ ಸಾಗರ, ಶರವ್ರಾತ – ಲೆಕ್ಕವಿಲ್ಲದಷ್ಟು ಬಾಣ ಎಂದು ಹೇಳಲು
(೨) ಒಂದಕ್ಕೆ ಹತ್ತು ಎಂದು ಹೇಳಲು – ಒಂದು ಹತ್ತರ ಲೆಕ್ಕದಲಿ

ಪದ್ಯ ೨೭: ಭೀಮ ಶಕುನಿಯ ಯುದ್ಧ ಹೇಗೆ ನಡೆಯಿತು?

ಜನಪ ಕೇಳೈ ಬಳಿಕ ಭೀಮಾ
ರ್ಜುನರ ಮೋಹರಕೈದುಸಾವಿರ
ಕನಕಮಯರಥಸಹಿತ ಬಿಟ್ಟನು ಶಕುನಿ ಸೂಠಿಯಲಿ
ಅನಿಲಸುತನರ್ಜುನನ ನೀ ಸಾ
ರೆನುತ ಕೆದರಿದನಹಿತನಂಬಿನ
ಮೊನೆಯೊಳಳ್ಳಿರಿದೌಕಿ ತುಡುಕುವ ತೇರ ತೆಕ್ಕೆಯಲಿ (ಕರ್ಣ ಪರ್ವ, ೧೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಭೀಮಾರ್ಜುನರ ಸೈನ್ಯಕ್ಕೆ ಶಕುನಿಯು ಐದು ಸಾವಿರ ಬಂಗಾರದಿಂದ ಮಾಡಿದ ರಥಗಳೊಡನೆ ವೇಗದಿಂದ ಆಕ್ರಮಣ ಮಾಡಿದನು. ಭೀಮನು ಅರ್ಜುನನನ್ನು ಆಚೆಗೆ ಕಳಿಸಿ ಬಾಣಗಳನ್ನು ಸತತವಾಗಿ ಸುರಿದು ಶಕುನಿಯ ಸೇನೆಯ ರಥಗಳನ್ನು ನಿಲ್ಲಿಸಿದನು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಬಳಿಕ: ನಂತರ; ಮೋಹರ: ಯುದ್ಧ, ಸೈನ್ಯ; ಕನಕ: ಚಿನ್ನ; ಮಯ: ತುಂಬಿದ; ರಥ: ಬಂಡಿ; ಸಹಿತ: ಜೊತೆ; ಬಿಟ್ಟನು: ತೆರಳು; ಸೂಠಿ: ವೇಗ; ಅನಿಲ: ವಾಯು; ಸುತ: ಮಗ; ಸಾರು: ಹತ್ತಿರಕ್ಕೆ ಬರು; ಕೆದರು: ಚೆದರು; ಅಹಿತ: ಶತ್ರು; ಅಂಬು: ಬಾಣ; ಮೊನೆ: ತುದಿ; ಅಳ್ಳಿರಿ: ಚುಚ್ಚು, ನಡುಗಿಸು; ತುಡುಕು: ಹೋರಾಡು, ಸೆಣಸು; ತೇರ: ಬಂಡಿ; ತೆಕ್ಕೆ: ಗುಂಪು, ಸಮೂಹ;

ಪದವಿಂಗಡಣೆ:
ಜನಪ +ಕೇಳೈ +ಬಳಿಕ +ಭೀಮಾ
ರ್ಜುನರ +ಮೋಹರಕ್+ಐದುಸಾವಿರ
ಕನಕಮಯ+ರಥಸಹಿತ +ಬಿಟ್ಟನು +ಶಕುನಿ +ಸೂಠಿಯಲಿ
ಅನಿಲಸುತನ್+ಅರ್ಜುನನ +ನೀ +ಸಾ
ರೆನುತ +ಕೆದರಿದನ್+ಅಹಿತನ್+ಅಂಬಿನ
ಮೊನೆಯೊಳ್+ಅಳ್ಳಿರಿದ್+ಔಕಿ +ತುಡುಕುವ +ತೇರ +ತೆಕ್ಕೆಯಲಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತುಡುಕುವ ತೇರ ತೆಕ್ಕೆಯಲಿ

ಪದ್ಯ ೨೬: ಅರ್ಜುನನು ಭೀಮನಿಗೆ ಏನು ತಿಳಿಸಿದನು?

ದಳದ ಮಧ್ಯದೊಳೊಂದು ರಥದಲಿ
ಹೊಳೆದು ದುವ್ವಾಳಿಸಿ ಧನಂಜಯ
ನಿಲಿಸಿದನು ನಿಜರಥವ ಭೀಮನ ರಥದ ಮುಂಬಿನಲಿ
ಬಳಿಕ ತನ್ನಿಂದಾದ ಕೋಳಾ
ಹಳವನಾ ತರುವಾಯಲವ್ಯಾ
ಕುಳ ಸಮಾಧಾನವನು ಬಿನ್ನಹಮಾಡಿದನು ಪಾರ್ಥ (ಕರ್ಣ ಪರ್ವ, ೧೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಚೂಣಿಯ ನಡುವೆ ಹೊಳೆ ಹೊಳೆಯುವ ರಥದಲ್ಲಿ ಅರ್ಜುನನು ಬಂದು ಭೀಮನ ರಥದ ಮುಂದೆ ನಿಂತು ತಾನು ಮಾಡಿದ ಕೋಲಾಹಲವನ್ನೂ, ನಂತರ ಶ್ರೀಕೃಷ್ಣನ ಯುಕ್ತಿಯಿಂದಾದ ಸಮಾಧಾನ ಸಂತೋಷಗಳನ್ನೂ ಭೀಮನಿಗೆ ತಿಳಿಸಿದನು.

ಅರ್ಥ:
ದಳ: ಸೈನ್ಯ; ಮಧ್ಯ: ನಡುವೆ; ರಥ: ಬಂಡಿ; ಹೊಳೆ: ಕಾಂತಿ; ದುವ್ವಾಳಿ: ತೀವ್ರಗತಿ; ನಿಲಿಸು: ತಡೆ, ನಿಲ್ಲು; ಮುಂಬು: ಎದುರು; ಬಳಿಕ: ನಂತರ; ಕೋಳಾಹಲ: ಅವಾಂತರ, ಗದ್ದಲ; ತರುವಾಯ: ತದನಂತರ; ವ್ಯಾಕುಲ: ದುಃಖ, ವ್ಯಸನ; ಸಮಾಧಾನ: ಮನಸ್ಸಿನ ನೆಮ್ಮದಿ, ಶಾಂತಿ; ಬಿನ್ನಹ: ಮನವಿ;

ಪದವಿಂಗಡಣೆ:
ದಳದ +ಮಧ್ಯದೊಳ್+ಒಂದು +ರಥದಲಿ
ಹೊಳೆದು +ದುವ್ವಾಳಿಸಿ+ ಧನಂಜಯ
ನಿಲಿಸಿದನು+ ನಿಜರಥವ+ ಭೀಮನ +ರಥದ +ಮುಂಬಿನಲಿ
ಬಳಿಕ +ತನ್ನಿಂದಾದ +ಕೋಳಾ
ಹಳವನಾ +ತರುವಾಯಲ್+ಅವ್ಯಾ
ಕುಳ +ಸಮಾಧಾನವನು +ಬಿನ್ನಹ+ಮಾಡಿದನು +ಪಾರ್ಥ

ಅಚ್ಚರಿ:
(೧) ಜೋಡಿ ಪದಗಳು – ದುವ್ವಾಳಿಸಿ ಧನಂಜಯ; ನಿಲಿಸಿದನು ನಿಜರಥವ
(೨) ರಥ ಪದ ೩ ಬಾರಿ ಪ್ರಯೋಗ

ಪದ್ಯ ೨೫: ಕುರುಸೇನೆಯು ಏಕೆ ಕುಗ್ಗಿತು?

ಚಳಯದಲಿ ಫಲುಗುಣನ ಮೋಹರ
ಕಳನ ಪೊಕ್ಕುದು ಹಲವು ಮೊನೆಯಲಿ
ತಳಿತು ನಿಂದುದು ಜಡಿವ ಬಹುವಿಧವಾದ್ಯರಭಸದಲಿ
ಅಳುಕಿತೀ ನಮ್ಮವರು ಭೀಮನ
ಸುಳಿವಿನಲಿ ಸೊಪ್ಪಾದೆವರ್ಜುನ
ನೆಳತಟಕೆ ನಿಲವೆಂತೆನುತ ನೆಗ್ಗಿದುದು ದುಗುಡದಲಿ (ಕರ್ಣ ಪರ್ವ, ೧೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನ ಸೇನೆಯು ವೇಗವಾಗಿ ಬಂದು ರಣರಂಗವನ್ನು ಹೊಕ್ಕಿತು, ಹಲವು ಜಾಗಗಲಲ್ಲಿ ಆಕ್ರಮಣ ಮಾಡಲು ಸಜ್ಜಾಯಿತು. ರಣವಾದ್ಯಗಳು ಭೋರ್ಗರೆದವು. ಭೀಮನ ಹೊಡೆತದಿಂದ ಸೊಪ್ಪಾಗಿ ಹೋಗಿದ್ದೇವೆ, ಇನ್ನು ಅರ್ಜುನನ ಹಾವಳಿಯನ್ನು ಸಹಿಸುವುದು ಹೇಗೆ ಎಂದು ಕುರುಸೇನೆಯು ದುಃಖಭಾರದಿಂದ ಕುಗ್ಗಿತು.

ಅರ್ಥ:
ಚಳಯ: ವೇಗ, ಗತಿ; ಮೋಹರ: ಯುದ್ಧ, ಸೈನ್ಯ, ದಂಡು; ಕಳ: ರಣರಂಗ; ಪೊಕ್ಕು: ಹೊಕ್ಕು, ಸೇರು; ಹಲವು: ಬಗೆ ಬಗೆ, ಬಹಳ; ಮೊನೆ: ತುದಿ; ತಳಿ: ಥಳಿಸು, ಕುಟ್ಟು; ನಿಂದು: ನಿಲ್ಲು; ಜಡಿ: ಹೊಡೆತ; ಬಹು: ಬಹಳ; ವಿಧ: ಬಗೆ; ವಾದ್ಯ: ಸಂಗೀತದ ಸಾಧನ; ರಭಸ; ವೇಗ; ಅಳುಕು: ಹೆದರು; ಸುಳಿವು: ಗುರುತು, ಕುರುಹು; ಸೊಪ್ಪುಗು: ಶಕ್ತಿಗುಂದು, ಸೊರಗು; ನೆಳತಟ: ಭೂಮಿಯ ದಿಗಂತ; ನಿಲು: ನಿಲ್ಲು, ಎದುರಿಸು; ನೆಗ್ಗು: ಕುಗ್ಗು, ಕುಸಿ; ದುಗುಡ: ದುಃಖ;

ಪದವಿಂಗಡಣೆ:
ಚಳಯದಲಿ +ಫಲುಗುಣನ +ಮೋಹರ
ಕಳನ +ಪೊಕ್ಕುದು +ಹಲವು+ ಮೊನೆಯಲಿ
ತಳಿತು +ನಿಂದುದು +ಜಡಿವ +ಬಹುವಿಧ+ವಾದ್ಯ+ರಭಸದಲಿ
ಅಳುಕಿತೀ +ನಮ್ಮವರು +ಭೀಮನ
ಸುಳಿವಿನಲಿ +ಸೊಪ್ಪಾದೆವ್+ಅರ್ಜುನ
ನೆಳತಟಕೆ +ನಿಲವೆಂತೆನುತ +ನೆಗ್ಗಿದುದು +ದುಗುಡದಲಿ

ಅಚ್ಚರಿ:
(೧) ಶಕ್ತಿಗುಂದಿದೆವು ಎಂದು ಹೇಳಲು – ಸೊಪ್ಪಾದೆವು – ಆಡುಭಾಷೆಯ ಪ್ರಯೊಗ

ಪದ್ಯ ೨೪: ವಿಶೋಕನಿಗೆ ಭೀಮನು ಏನು ಹೇಳಿದ?

ಪೂತು ಸಾರಥಿ ಈಸುಬಾಣ
ವ್ರಾತವುಳಿದುದೆ ತನ್ನ ಕರ ಕಂ
ಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ
ಆತನೇನಾದನು ಯುಧಿಷ್ಠಿರ
ಸೋತು ಪಿಂಗಿದನೆಂಬ ಹಂಬಲು
ಬೀತುದಿನ್ನೇನೆನ್ನ ನೋಡಾ ಎನುತ ಗರ್ಜಿಸಿದ (ಕರ್ಣ ಪರ್ವ, ೧೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭಲೆ ಭೇಷ್ ವಿಶೋಕ ಎಂದು ಭೀಮನು ತನ್ನ ಸಾರಥಿಯನ್ನು ಹುರಿದುಂಬಿಸಿದನು, ಇಷ್ಟು ಆಯುಧಗಳು ಉಳಿದಿವೆಯೇ? ಕೌರವನ ನೆತ್ತಿಯಮೇಲೆ ಹೊಡೆದು ನನ್ನ ತೋಳಿನ ಕಡಿತವನ್ನು ಕಳೆದುಕೊಳ್ಳುತ್ತೇನೆ. ಆದರೆ ಅವನೆಲ್ಲಿ, ಯುಧಿಷ್ಠಿರನು ಸೋತು ಹಿಮ್ಮೆಟ್ಟಿದನೆಂಬ ಚಿಂತೆ ಈಗ ಮಾಗವಾಯಿಗು, ಇನ್ನೇನು, ನೋಡು ನನ್ನನ್ನು ಎಂದು ಭೀಮನು ಗರ್ಜಿಸಿದನು.

ಅರ್ಥ:
ಪೂತು: ಭಲೇ; ಸಾರಥಿ:ಸೂತ, ರಥವನ್ನು ಓಡಿಸುವವ; ಈಸು: ಇಷ್ಟು; ಬಾಣ: ಶರ; ವ್ರಾತ: ಗುಂಪು; ಉಳಿ: ಮಿಕ್ಕು; ಕರ: ಕೈ; ಕಂಡೂತಿ: ಕೆರೆತ, ನವೆ; ಕಳುಚು: ತೆಗೆ, ಬಿಚ್ಚು; ನೆತ್ತಿ: ಶಿರ; ಸೋತು: ಪರಾಭವ; ಪಿಂಗಿದ: ಹಿಮ್ಮೆಟ್ಟು; ಹಂಬಲು: ಚಿಂತೆ; ಬೀತುದು: ಕಳೆದುದು; ಗರ್ಜಿಸು: ಜೋರಾಗಿ ಕೂಗು, ಆರ್ಭಟಿಸು;

ಪದವಿಂಗಡಣೆ:
ಪೂತು +ಸಾರಥಿ +ಈಸು+ಬಾಣ
ವ್ರಾತವ್+ಉಳಿದುದೆ +ತನ್ನ +ಕರ +ಕಂ
ಡೂತಿಯನು +ಕಳುಚುವೆನಲಾ+ ಕೌರವನ+ ನೆತ್ತಿಯಲಿ
ಆತತ್+ಏನಾದನು +ಯುಧಿಷ್ಠಿರ
ಸೋತು +ಪಿಂಗಿದನೆಂಬ +ಹಂಬಲು
ಬೀತುದ್+ಇನ್ನೇನ್+ಎನ್ನ +ನೋಡಾ +ಎನುತ+ ಗರ್ಜಿಸಿದ

ಅಚ್ಚರಿ:
(೧) ದುರ್ಯೋಧನನನ್ನು ಹೊಡೆಯುವೆ ಎಂದು ಹೇಳಲು ಬಳಸಿದ ಉಪಮಾನ – ತೋಳಿನ ಕೆರೆತವನ್ನು ನಿವಾರಿಸಿಕೊಳ್ಳುವೆ ಎಂದು – ತನ್ನ ಕರ ಕಂಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ

ಪದ್ಯ ೨೩: ಯಾವ ಆಯುಧಗಳು ರಥಗಳಲ್ಲಿದ್ದವು?

ಪರಶು ಮುಸಲ ಮುಸುಂಡಿ ಸೆಲ್ಲೆಹ
ಪರಿಘ ತೋಮರ ಚಕ್ರವಸಿಮು
ದ್ಗರ ತ್ರಿಶೂಲ ಕಠಾರಿ ಖೇಟಕ ಪಿಂಡಿವಾಳಾಯ
ಸುರಗಿ ಮೊದಲಾದಖಿಳ ಶಸ್ತ್ರೋ
ತ್ಕರವನೊಂದೇ ಬಂಡಿಯಲಿ ಸಂ
ವರಿಸಿದೆನು ರಿಪುರಾಯರೊಡಲಲಿ ಬೀಯಮಾಡೆಂದ (ಕರ್ಣ ಪರ್ವ, ೧೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಡುಕೊಡಲಿ, ಒನಕೆ, ಮುಸುಂಡಿ, ಸೆಲ್ಲೆಹ, ಪರಿಘ, ತೋಮರ, ಚಕ್ರ, ಖಡ್ಗ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಭಿಂಡಿವಾಳ, ಸುರಗಿ, ಇವನ್ನೆಲ್ಲಾ ಒಂದೇ ಬಂಡಿಯಲ್ಲಿ ಸೇರಿಸಿಟ್ಟಿದ್ದೇನೆ. ಇವನ್ನು ಶತ್ರುರಾಜರ ದೇಹಗಳಲ್ಲಿ ವ್ಯಯಮಾಡು ಎಂದು ವಿಶೋಕನು ಭೀಮನಿಗೆ ತಿಳಿಸಿದನು.

ಅರ್ಥ:
ಪರಶು: ಕೊಡಲಿ, ಕುಠಾರ; ಮುಸಲ: ಗದೆ; ಮುಸುಂಡಿ: ಆಯುಧದ ಹೆಸರು; ಸೆಲ್ಲೆಹ: ಈಟಿ, ಭರ್ಜಿ; ಪರಿಘ: ಕಬ್ಬಿಣದ ಆಯುಧ, ಗದೆ; ತೋಮರ: ತಿದಿಯಲ್ಲಿ ಅರ್ಧಚಂದ್ರಾಕೃತಿಯಲ್ಲಿರುವ ಒಂದು ಬಗೆಯ ಬಾಣ, ಈಟಿಯಂತಿರುವ ಆಯುಧ; ಚಕ್ರ: ಗುಂಡಾಗಿ ತಿರುಗುವ ಆಯುಧ; ಮುದ್ಗರ: ಗದೆ; ತ್ರಿಶೂಲ: ಮೂರುಮೊನೆಯ ಆಯುಧ; ಕಠಾರಿ: ಚೂರಿ, ಕತ್ತಿ; ಖೇಟಕ: ಗುರಾಣಿ; ಪಿಂಡಿವಾಳ: ಒಂದು ಬಗೆಯ ಆಯುಧ, ಈಟಿ; ಚಯ: ಗುಂಪು, ರಾಶಿ; ಸುರಗಿ: ಸಣ್ಣ ಕತ್ತಿ, ಚೂರಿ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಬಂಡಿ: ರಥ; ಸಂವರಿಸು: ಸಂಗ್ರಹಿಸು; ರಿಪು: ವೈರಿ; ರಾಯ: ರಾಜ; ಒಡಲು: ದೇಹ; ಬೀಯ: ವ್ಯಯ, ಖರ್ಚು;

ಪದವಿಂಗಡಣೆ:
ಪರಶು +ಮುಸಲ +ಮುಸುಂಡಿ +ಸೆಲ್ಲೆಹ
ಪರಿಘ+ ತೋಮರ +ಚಕ್ರವಸಿ+ಮು
ದ್ಗರ +ತ್ರಿಶೂಲ +ಕಠಾರಿ +ಖೇಟಕ +ಪಿಂಡಿವಾಳಾಯ
ಸುರಗಿ+ ಮೊದಲಾದ್+ಅಖಿಳ +ಶಸ್ತ್ರೋ
ತ್ಕರವನ್+ಒಂದೇ +ಬಂಡಿಯಲಿ +ಸಂ
ವರಿಸಿದೆನು +ರಿಪುರಾಯರ್+ಒಡಲಲಿ +ಬೀಯಮಾಡೆಂದ

ಅಚ್ಚರಿ:
(೧) ಆಯುಧಗಳ ಹೆಸರು: ಪರಶು, ಮುಸಲ, ಮುಸುಂಡಿ, ಸೆಲ್ಲೆಹ, ಪರಿಘ, ತೋಮರ, ಚಕ್ರವಸಿ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಪಿಂಡಿವಾಳ, ಸುರಗಿ

ಪದ್ಯ ೨೨: ವಿಶೋಕನು ಮತ್ತೆಷ್ಟು ಬಾಣಗಳ ಲೆಕ್ಕವನ್ನು ಭೀಮನಿಗೆ ನೀಡಿದನು?

ಆಲಿಸೈ ಮುಗುಳಂಬು ಸಾವಿರ
ವೇಳು ಬಳಿಕೊಂಬತ್ತು ಸಾವಿರ
ಕೋಲು ಮೀಂಟೆಯ ಕವಲುಗಣೆ ಹನ್ನೆರಡುಸಾವಿರವು
ಮೇಲೆ ಸಾವಿರ ನಾಲ್ಕು ಮುಮ್ಮೊನೆ
ಬೋಳೆಯಂಬೀರೈದುಸಾವಿರ
ನಾಳಿಯಂಬುಗಳಾರುಬಂಡಿಯ ಲೆಕ್ಕವಿದೆಯೆಂದ (ಕರ್ಣ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಲೈ ರಾಜನೆ ಕೇಳು, ಹೂವಿನ ಆಕಾರದ ತುದಿಯಿವುರ ಏಳು ಸಾವಿರ ಬಾಣಗಳು, ಒಂಬತ್ತು ಸಾವಿರ ಕೋಲು ಬಾಣಗಳು, ಕವಲು ಬಾಣಗಳು ಹನ್ನೆರಡು ಸಾವಿರ, ನಾಲ್ಕುಸಾವಿರ ಮೂರು ತುದಿಯಿರುವ ಬೋಳೆಯ ಬಾಣಗಳು, ಹತ್ತು ಸಾವಿರ ನಾಳಿಯ ಬಾಣಗಳು, ಇವೆಲ್ಲವು ಆರು ಬಂಡಿಗಳಲ್ಲಿರುವ ಬಾಣಗಳ ಲೆಕ್ಕ ಎಂದು ವಿಶೋಕನು ಭೀಮನಿಗೆ ತಿಳಿಸಿದನು.

ಅರ್ಥ:
ಆಲಿಸು: ಕೇಳು; ಮುಗುಳು: ಮೊಗ್ಗು, ಚಿಗುರು; ಅಂಬು: ಬಾಣ; ಸಾವಿರ: ಸಹಸ್ರ; ಕೋಲು: ಬಾಣ; ಮೊನೆ: ತುದಿ, ಕೊನೆ; ಬಂಡಿ: ರಥ; ಲೆಕ್ಕ: ಎಣಿಕೆ; ಮೀಂಟೆ: ಬಾಣ;

ಪದವಿಂಗಡಣೆ:
ಆಲಿಸೈ +ಮುಗುಳ್+ಅಂಬು +ಸಾವಿರವ್
ಏಳು +ಬಳಿಕ್+ಒಂಬತ್ತು +ಸಾವಿರ
ಕೋಲು +ಮೀಂಟೆಯ +ಕವಲುಗಣೆ+ ಹನ್ನೆರಡು+ಸಾವಿರವು
ಮೇಲೆ +ಸಾವಿರ +ನಾಲ್ಕು +ಮುಮ್ಮೊನೆ
ಬೋಳೆ+ಅಂಬೀರ್+ಐದುಸಾವಿರ
ನಾಳಿ+ಅಂಬುಗಳ್+ಆರು+ಬಂಡಿಯ+ ಲೆಕ್ಕವಿದೆಯೆಂದ

ಅಚ್ಚರಿ:
(೧) ಬಾಣಗಳ ಹೆಸರು: ಮುಗುಳು, ಕವಲು, ಕೋಲು, ಮುಮ್ಮೊನೆ ಬೋಳೆ
(೨) ಸಾವಿರ – ೧-೫ಸಾಲಿನಲ್ಲಿ ಉಲ್ಲೇಖಿತವಾಗಿದೆ

ಪದ್ಯ ೨೧: ವಿಶೋಕನು ಭೀಮನಿಗೆ ಏನು ಹೇಳಿದ?

ಅರಸ ಚಿತ್ತವಿಸುಳಿದ ಧನು ಹ
ನ್ನೆರಡುಸಾವಿರ ಬಲುಸರಳು ಹ
ನ್ನೆರಡುಸಾವಿರ ಬೋಳೆಯೈನೂರರ್ಧಚಂದ್ರಶರ
ಪರಿಗಳಿತ ಲುಳಿಯಂಬು ಕಣಗಿಲ
ಸರಳುಗೂಡಿಪ್ಪತ್ತು ಸಾವಿರ
ವೆರಡುಸಾವಿರವುಳಿದವೀ ನಾರಾಚ ನಿಕರದಲಿ (ಕರ್ಣ ಪರ್ವ, ೧೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಹನ್ನೆರಡು ಸಾವಿರ ಬಿಲ್ಲುಗಳು, ಹನ್ನೆರಡು ಸಾವಿರ ಬೋಳೆಯ ಭಾರೀ ಬಾಣಗಳು, ಐನೂರು ಅರ್ಧ ಚಂದ್ರ ಬಾಣಗಳು, ವೇಗದಿಂದ ಚಲಿಸುವ ಲುಳಿ ಬಾಣಗಳು, ಕಣಗಿಲ ಬಾಣಗಳು ಇಪ್ಪತ್ತು ಸಾವಿರ ಇದ್ದವು. ಇವುಗಳಲ್ಲಿ ಎರಡು ಸಾವಿರ ಬಾಣಗಳುಳಿದಿವೆ ಎಂದು ವಿಶೋಕನು ಭೀಮನಿಗೆ ತಿಳಿಸಿದನು.

ಅರ್ಥ:
ಅರಸ: ರಾಜ; ಚಿತ್ತವಿಸು: ಗಮನವಿಟ್ಟು ಕೇಳು; ಧನು: ಧನಸ್ಸು; ಸಾವಿರ: ಸಹಸ್ರ; ಬಲು: ಭಾರೀ; ಸರಳು: ಬಾಣ; ಬೋಳೆ: ಒಂದು ಬಗೆಯ ಹರಿತವಾದ ಬಾಣ; ಶರ: ಬಾಣ; ಪರಿಗಳಿತ: ತಲೆಕೆಳಗಾದ, ಉರುಳಿದ; ಲುಳಿ:ರಭಸ, ವೇಗ; ಅಂಬು: ಬಾಣ; ಉಳಿದ: ಮಿಕ್ಕ; ನಾರಾಚ: ಬಾಣ; ನಿಕರ: ಗುಂಪು;

ಪದವಿಂಗಡಣೆ:
ಅರಸ +ಚಿತ್ತವಿಸ್+ಉಳಿದ +ಧನು +ಹ
ನ್ನೆರಡು+ಸಾವಿರ+ ಬಲು+ಸರಳು +ಹ
ನ್ನೆರಡು+ಸಾವಿರ+ ಬೋಳೆ+ಐನೂರ್+ಅರ್ಧಚಂದ್ರ+ಶರ
ಪರಿಗಳಿತ+ ಲುಳಿ+ಅಂಬು +ಕಣಗಿಲ
ಸರಳು+ಕೂಡ್+ಇಪ್ಪತ್ತು +ಸಾವಿರ
ಎರಡು+ಸಾವಿರ+ಉಳಿದವ್+ಈ+ ನಾರಾಚ +ನಿಕರದಲಿ

ಅಚ್ಚರಿ:
(೧) ಬಾಣಗಳ ಹೆಸರು: ಬಲು, ಬೋಳೆ, ಅರ್ಧಚಂದ್ರ, ಲುಳಿ, ಕಣಗಿಲ
(೨) ಸರಳು, ಶರ, ಅಂಬು, ನಾರಾಚ – ಸಮನಾರ್ಥಕ ಪದ