ಪದ್ಯ ೩೦: ಅರ್ಜುನನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು -೨?

ನಿನ್ನ ಜೂಜಿನ ವಿಲಗದಲಿ ಸಂ
ಪನ್ನ ರಾಜ್ಯವ ಬಿಸುಟು ನಿನ್ನಯ
ಬೆನ್ನಲಡವಿಯಲಾಡಿದೆವು ಹನ್ನೆರಡು ವರ್ಷದಲಿ
ಮನ್ನಿಸಿದೆ ಲೇಸಾಗಿ ಕೌರವ
ರಿನ್ನು ಕೊಡುವರೆ ನಿನಗೆ ರಾಜ್ಯವ
ನಿನ್ನ ಹಿಡಿದೇ ಭೀಮ ಬದುಕಲಿ ಎಂದನಾ ಪಾರ್ಥ (ಕರ್ಣ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ನೀನು ಒಪ್ಪಿಕೊಂಡು ಸೋತ ಜೂಜಾಟದ ದೆಸೆಯಿಂದ, ರಾಜ್ಯವನ್ನು ಕಳೆದುಕೊಂಡು ನಿನ್ನ ಬೆನ್ನಹಿಂದೆ ಹನ್ನೆರಡು ವರ್ಷಗಳ ಕಾಲ ಅಡವಿಯಲ್ಲಿ ಅಲೆದಾಡಿದೆವು. ನಮ್ಮನ್ನು ಚೆನ್ನಾಗಿ ಗೌರವಿಸಿದೆ! ಇನ್ನು ಕೌರವರು ನಿನಗೆ ರಾಜ್ಯವನ್ನು ಕೊಡುವವರೇ? ಬೇಕಿದ್ದರೆ ಭೀಮನು ನಿನ್ನನ್ನು ಅನುಸರಿಸಲಿ ಎಂದು ಅರ್ಜುನನು ತನ್ನ ಮಾತನ್ನು ಮೊನಚುಗೊಳಿಸಿದನು.

ಅರ್ಥ:
ಜೂಜು: ಪಂದ್ಯ; ವಿಲಗ: ಹೊಂದಿಕೆಯಿಲ್ಲದಿರುವಿಕೆ; ಸಂಪನ್ನ: ಸಜ್ಜನ, ಸತ್ಪುರುಷ; ರಾಜ್ಯ: ರಾಷ್ಟ್ರ; ಬಿಸುಟು: ಹೊರಹಾಕು; ಬೆನ್ನು: ಹಿಂದೆ; ಅಡವಿ: ಕಾಡು; ಆಡು: ಅಲೆದಾಡು; ವರ್ಷ: ಸಂವತ್ಸರ; ಮನ್ನಿಸು: ಗೌರವಿಸು; ಲೇಸು: ಒಳಿತು; ಕೊಡು: ನೀಡು; ಹಿಡಿ: ಹಿಡಿಕೆ, ಕಾವು; ಬದುಕು: ಜೀವಿಸು;

ಪದವಿಂಗಡಣೆ:
ನಿನ್ನ +ಜೂಜಿನ +ವಿಲಗದಲಿ +ಸಂ
ಪನ್ನ +ರಾಜ್ಯವ +ಬಿಸುಟು +ನಿನ್ನಯ
ಬೆನ್ನಲ್+ಅಡವಿಯಲ್+ಆಡಿದೆವು +ಹನ್ನೆರಡು +ವರ್ಷದಲಿ
ಮನ್ನಿಸಿದೆ +ಲೇಸಾಗಿ +ಕೌರವ
ರಿನ್ನು +ಕೊಡುವರೆ +ನಿನಗೆ +ರಾಜ್ಯವ
ನಿನ್ನ+ ಹಿಡಿದೇ +ಭೀಮ +ಬದುಕಲಿ+ ಎಂದನಾ +ಪಾರ್ಥ

ಅಚ್ಚರಿ:
(೧) ಅಹಾ ಚೆನ್ನಾಗಿ ನಮ್ಮನ್ನು ಗೌರವಿಸಿದೆ ಎಂದು ಹಳಿಯುವ ಪರಿ – ಮನ್ನಿಸಿದೆ ಲೇಸಾಗಿ
(೨) ನಾನು ನಿನ್ನ ಜೊತೆ ಬರುವುದಿಲ್ಲ ಎಂದು ಹೇಳುವ ಪರಿ – ನಿನ್ನ ಹಿಡಿದೇ ಭೀಮ ಬದುಕಲಿ

ಪದ್ಯ ೨೯: ಅರ್ಜುನನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು -೧?

ಎಲೆ ಯುಧಿಷ್ಠಿರ ಜನಿಸಿದೈ ಶಶಿ
ಕುಲದ ವೀರ ಕ್ಷತ್ರ ಪಂತಿಯೊ
ಳೆಳಮನದ ಕಾಳಿಕೆಯ ತೊಡಹದ ಗಂಡು ರೂಪಿನಲಿ
ನೆಲನ ಕೊಂಡರು ನಿನ್ನ ಮೋರೆಯ
ಬಲುಹ ಕಂಡೇ ಕೌರವರು ನಿ
ನ್ನೊಳಗೆ ಬಲ್ಲಿದನೆನ್ನ ಭಂಗಿಸಲೇಕೆ ನೀನೆಂದ (ಕರ್ಣ ಪರ್ವ, ೧೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತಿನ ಕತ್ತಿಯಿಂದ ಯುಧಿಷ್ಥಿರನನ್ನು ಕೊಲ್ಲಲು ಪ್ರಾರಂಭಿಸಿದನು. ಎಲೈ ಯುಧಿಷ್ಠಿರ ನೀನು ಚಂದ್ರವಂಶದ ವೀರಕ್ಷತ್ರಿಯರ ಪಂಕ್ತಿಯಲ್ಲಿ ಕಪ್ಪು ಬಣ್ಣದ ಲೇಪವಿರುವ ದುರ್ಬಲಮನಸ್ಸಿನ ಗಂಡುರೂಪವನ್ನು ತಾಳಿ ಹುಟ್ಟಿದೆ. ನಿನ್ನ ಮುಖವನ್ನು ಕಂಡೇ, ನಿನ್ನೊಳಗೆ ಪರಾಕ್ರಮವಿಲ್ಲವೆಂದು ತಿಳಿದು ಕೌರವರು ರಾಜ್ಯವನ್ನು ಅಪಹರಿಸಿದರು. ಹೀಗಿರುವ ನೀನು ನನ್ನನ್ನು ಅವಮಾನಗೊಳಿಸುವುದೇ? ಎಂದು ನುಡಿದನು.

ಅರ್ಥ:
ಜನಿಸು: ಹುಟ್ಟು; ಶಶಿ: ಚಂದ್ರ; ಕುಲ: ವಂಶ; ವೀರ: ಪರಾಕ್ರಮ; ಕ್ಷತ್ರ: ಕ್ಷತ್ರಿಯ; ಪಂತಿ: ಸಾಲು; ಎಳಮನ: ದುರ್ಬಲ ಮನಸ್ಸು; ಕಾಳಿಕೆ: ಕೊಳಕು; ತೊಡಹು: ಆಭರಣ, ತೊಡಿಗೆ; ಗಂಡು: ವೀರ, ಗಂಡಸು; ರೂಪ: ಆಕಾರ; ನೆಲ: ಭೂಮಿ; ಕೊಂಡು: ತೆಗೆದು; ಮೋರೆ: ಮುಖ; ಬಲುಹ: ಬಲ, ಶಕ್ತಿ; ಕಂಡು: ನೋಡಿ; ಬಲ್ಲಿದ: ತಿಳಿದ; ಭಂಗಿಸು: ಅವಮಾನಿಸು;

ಪದವಿಂಗಡಣೆ:
ಎಲೆ +ಯುಧಿಷ್ಠಿರ +ಜನಿಸಿದೈ+ ಶಶಿ
ಕುಲದ +ವೀರ +ಕ್ಷತ್ರ+ ಪಂತಿಯೊಳ್
ಎಳಮನದ +ಕಾಳಿಕೆಯ +ತೊಡಹದ+ ಗಂಡು+ ರೂಪಿನಲಿ
ನೆಲನ +ಕೊಂಡರು +ನಿನ್ನ +ಮೋರೆಯ
ಬಲುಹ +ಕಂಡೇ +ಕೌರವರು +ನಿ
ನ್ನೊಳಗೆ +ಬಲ್ಲಿದನ್+ಎನ್ನ+ ಭಂಗಿಸಲೇಕೆ +ನೀನೆಂದ

ಅಚ್ಚರಿ:
(೧) ಬಿಳಿಯಾದ ಚಂದ್ರವಂಶದಲ್ಲಿ ಕಪ್ಪು ಚುಕ್ಕೆ ಎನ್ನುವ ಪರಿ – ಕಾಳಿಕೆಯ ತೊಡಹದ ಗಂಡು ರೂಪಿನಲಿ

ಪದ್ಯ ೨೮: ಕೃಷ್ಣನು ಯಾವ ಅಭಿಪ್ರಾಯವನ್ನು ಅರ್ಜುನನಿಗೆ ತಿಳಿಸಿದನು?

ಅರಸಗುಪಹತಿಯೆನಿಸದೇ ನಿ
ಷ್ಠುರ ದುರುಕ್ತಿ ಕೃಪಾಣದಲಿ ಸಂ
ಹರಿಸಿದರೆ ನಿರ್ವಾಹವಾಗದೆ ನಿನ್ನ ನುಡಿಗಳಿಗೆ
ಪರಮ ಋಷಿಮತವೆನೆ ಮುರಾರಿಯ
ಸಿರಿವಚನಕೆ ಹಸಾದವೆಂದು
ಬ್ಬರದ ಗರ್ವೋಕ್ತಿಯಲಿ ಗರುವಿಕೆಗೆಡಿಸಿದನು ನೃಪನ (ಕರ್ಣ ಪರ್ವ, ೧೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕೃಷ್ಣನು ಅರ್ಜುನನಿಗೆ ಉತ್ತರಿಸುತ್ತಾ, ಅರ್ಜುನ ನೀನು ನಿಷ್ಠುರವಾದ ದುರುಕ್ತಿಗಳ ಕತ್ತಿಯಿಂದ ಅರಸನನ್ನು ಸಂಹರಿಸಿದರೆ ನಿನ್ನ ಶಪಥವನ್ನು ನೆರವೇರಿಸಿದಂತಾಗುವುದಿಲ್ಲವೇ? ನಾನು ಹೇಳಿದುದು ಮಹರ್ಷಿಗಳ ಅಭಿಪ್ರಾಯ ಎಂದು ಹೇಳಿದನು. ಅವನ ಮಾತಿಗೆ ಅರ್ಜುನನು “ಮಹಾ ಪ್ರಸಾದ”ವೆಂದು ಹೇಳಿ ಗರ್ವದಿಂದ ಮಾತನಾಡಿ ಧರ್ಮಜನ ಅಭಿಮಾನವನ್ನು ಭಂಗಮಾಡಿದನು.

ಅರ್ಥ:
ಅರಸ: ರಾಜ; ಉಪಹತಿ: ಹೊಡೆತ; ನಿಷ್ಠುರ: ಕಠಿಣವಾದುದು; ದುರುಕ್ತಿ: ಕೆಟ್ಟ ನುಡಿ; ಕೃಪಾಣ:ಕತ್ತಿ, ಖಡ್ಗ; ಸಂಹರಿಸು: ಸಾಯಿಸು; ನಿರ್ವಾಹ:ಉಪಸಂಹಾರ; ನುಡಿ: ಮಾತು; ಪರಮ: ಶ್ರೇಷ್ಠ; ಋಷಿ: ಮುನಿ; ಮತ: ಅಭಿಪ್ರಾಯ; ಮುರಾರಿ: ಕೃಷ್ಣ; ಸಿರಿ: ಶ್ರೇಷ್ಠ, ಚಿನ್ನ; ಹಸಾದ: ಅನುಗ್ರಹ, ದಯೆ; ಉಬ್ಬರ: ಅತಿಶಯ, ಆಡಂಬರ; ಗರ್ವ: ಅಹಂಕಾರ; ಉಕ್ತಿ: ಮಾತು; ಗರುವು: ಅಹಂಕಾರ, ದರ್ಪ; ಕೆಡಿಸು: ಹಾಳುಮಾಡು; ನೃಪ: ರಾಜ;

ಪದವಿಂಗಡಣೆ:
ಅರಸಗ್+ಉಪಹತಿಯೆನಿಸದೇ+ ನಿ
ಷ್ಠುರ +ದುರುಕ್ತಿ +ಕೃಪಾಣದಲಿ +ಸಂ
ಹರಿಸಿದರೆ+ ನಿರ್ವಾಹವಾಗದೆ +ನಿನ್ನ +ನುಡಿಗಳಿಗೆ
ಪರಮ +ಋಷಿ+ಮತವ್+ಎನೆ +ಮುರಾರಿಯ
ಸಿರಿವಚನಕೆ+ ಹಸಾದ+ವೆಂದ್
ಉಬ್ಬರದ +ಗರ್ವೋಕ್ತಿಯಲಿ +ಗರುವಿಕೆ+ಕೆಡಿಸಿದನು +ನೃಪನ

ಅಚ್ಚರಿ:
(೧) ಗರ್ವ ಪದದ ಬಳಕೆ – ಉಬ್ಬರದ ಗರ್ವೋಕ್ತಿಯಲಿ ಗರುವಿಕೆಗೆಡಿಸಿದನು ನೃಪನ
(೨) ಉಪಹತಿ, ಸಂಹರ, ನಿರ್ವಾಹ – ಸಾಮ್ಯಾರ್ಥ ಪದಗಳು

ಪದ್ಯ ೨೭ : ಶ್ರೀಕೃಷ್ಣನ ಧರ್ಮವಚನ ನುಡಿ ಏನು ಹೇಳಿತು?

ಕೊಲುವುದೇನೊಂದರಿದೆ ಟಿಕ್ಕರಿ
ಗಳೆವುದೇ ಪರಹಿಂಸೆ ಲೋಗರ
ಹಳಿವುದೇ ವಧೆ ಶಸ್ತ್ರವಧೆ ವಧೆಯಲ್ಲ ನೋಡುವರೆ
ಖಳರ ದುಸ್ಸಹ ದುಷ್ಟವಚನದ
ಹಿಳುಕು ಹೃದಯವ ಕೊಂಡು ಮರುಮೊನೆ
ಮೊಳೆತ ಬಳಿಕವ ಬದುಕಿದವನೇ ಪಾರ್ಥ ಹೇಳೆಂದ (ಕರ್ಣ ಪರ್ವ, ೧೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾ, ಕೊಲ್ಲುವುದೇನು ಕಷ್ಟವಲ್ಲ. ಧಿಕ್ಕರಿಸಿ ಮಾತನಾಡುವುದೇ ಪರಹಿಂಸೆ. ಹಳಿಯುವುದೇ ವಧೆ. ಶಸ್ತ್ರದಿಂದ ಕೊಲ್ಲುವುದು ನಿಜವಾಗಿಯೂ ಕೊಂದಂತಲ್ಲ. ನೀಚರ ದುಷ್ಟವಚನದ ಆಯುಧದ ಮೊನೆ, ಮನಸ್ಸಿನಲ್ಲಿ ನೆಟ್ಟು ಸಹಿಸಲಾಗದಂತೆ ಚಿಗುರಿ ಬೆಳೆಯುತ್ತಿರಲು ಆತನು ಬದುಕಿದವನೇ ಎಂದು ಕೇಳಿದನು.

ಅರ್ಥ:
ಕೊಲು: ಕೊಲ್ಲು, ಸಾಯಿಸು; ಟಿಕ್ಕರಿಗಳೆ: ನಿಂದಿಸು, ಹೀಯಾಳಿಸು; ಪರ: ಬೇರೆ; ಹಿಂಸೆ: ತೊಂದರೆ, ನೋವು; ಲೋಗರ: ಜನರ; ಹಳಿ: ಹೀಯಾಳಿಸು; ವಧೆ: ಸಾಯಿಸು; ಶಸ್ತ್ರ: ಆಯುಧ; ಖಳ: ದುಷ್ಟ; ದುಸ್ಸಹ: ಸಹಿಸಲಸಾಧ್ಯವಾದ; ದುಷ್ಟವಚನ: ಕೆಟ್ಟನುಡಿ; ಹಿಳುಕು: ಬಾಣದ ಹಿಂಭಾಗ; ಹೃದಯ: ವಕ್ಷಸ್ಥಳ; ಕೊಂಡು: ತೆಗೆದು; ಮರುಮೊನೆಗೊಳ್: ಆಚೆಯ ಕಡೆ ತುದಿ ಕಾಣಿಸುವಂತೆ ನಾಟುವುದು; ಮೊಳೆ: ಮೊಳಕೆ, ಕುಡಿ;

ಪದವಿಂಗಡಣೆ:
ಕೊಲುವುದೇನ್+ಒಂದರಿದೆ+ ಟಿಕ್ಕರಿ
ಗಳೆವುದೇ+ ಪರಹಿಂಸೆ +ಲೋಗರ
ಹಳಿವುದೇ +ವಧೆ +ಶಸ್ತ್ರವಧೆ +ವಧೆಯಲ್ಲ +ನೋಡುವರೆ
ಖಳರ+ ದುಸ್ಸಹ +ದುಷ್ಟವಚನದ
ಹಿಳುಕು +ಹೃದಯವ +ಕೊಂಡು+ ಮರುಮೊನೆ
ಮೊಳೆತ +ಬಳಿಕ್+ಅವ +ಬದುಕಿದವನೇ +ಪಾರ್ಥ+ ಹೇಳೆಂದ

ಅಚ್ಚರಿ:
(೧) ಯಾವುದು ಪರಹಿಂಸೆ ಎನ್ನುವುದಕ್ಕೆ ಉತ್ತರ – ಟಿಕ್ಕರಿ ಗಳೆವುದೇ ಪರಹಿಂಸೆ
(೨) ಹಿತನುಡಿಯ ಮಹತ್ವವನ್ನು ತಿಳಿಸುವ ಪದ್ಯ

ಪದ್ಯ ೨೬: ಅರ್ಜುನ ಕೃಷ್ಣನಲ್ಲಿ ಹೇಗೆ ಮೊರೆಯಿಟ್ಟ?

ಭರತ ವಂಶದೊಳುದಿಸಿದೆಮ್ಮೈ
ವರಿಗೆ ಇಹಲೋಕದ ನಿವಾಸಕೆ
ಪರದ ಸೌಖ್ಯಸ್ಥಿತಿಗೆ ಹೊಣೆ ನೀನಲ್ಲದೆಮಗಾರು
ದುರುಳರಾವನ್ವಯ ಮದದ ದು
ರ್ಧರ ಪರಾಕ್ರಮ ಮದದ ಘನಮ
ತ್ತರಿಗೆ ಕೃಪೆಮಾಡೆಂದು ಬಿನ್ನಹ ಮಾದಿದನು ಪಾರ್ಥ (ಕರ್ಣ ಪರ್ವ, ೧೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕೃಷ್ಣಾ, ಭರತ ವಂಶದಲ್ಲಿ ಹುಟ್ಟಿದ ನಾವೈವರು ಇಹಲೋಕದ ಜೀವನ ಮತ್ತು ಪರಲೋಕದ ಸೌಖ್ಯಗಳಿಗೆ ನೀನೆ ನಮ್ಮ ಜವಾಬ್ದಾರಿಯನ್ನು ವಹಿಸಬೇಕು, ನೀನಲ್ಲದಿದ್ದರೆ ಇನ್ನಾರು ನಮಗೆ ಹೊಣೆ? ಕುಲಮದ ಪರಾಕ್ರಮ ಮದಗಳಿಂದ ಎಚ್ಚರತಪ್ಪಿದ ನಮ್ಮ ಮೇಲೆ ಕೃಪೆತೋರು ಎಂದು ಅರ್ಜುನನನು ಕೃಷ್ಣನಲ್ಲಿ ಮೊರೆಯಿಟ್ಟನು.

ಅರ್ಥ:
ವಂಶ: ಕುಲ; ಉದಿಸು: ಜನಿಸು; ಇಹಲೋಕ: ಮರ್ತ್ಯಲೋಕ; ನಿವಾಸ: ಆಲಯ; ಪರ: ಬೇರೆ; ಸೌಖ್ಯ: ಕ್ಷೇಮ; ಸ್ಥಿತಿ: ರೀತಿ, ಅವಸ್ಥೆ; ಹೊಣೆ: ಜವಾಬ್ದಾರಿ; ದುರುಳ: ದುಷ್ಟ; ಅನ್ವಯ: ವಂಶ; ಮದ: ಅಹಂಕಾರ; ದುರ್ಧರ: ಕಠಿಣವಾದ; ಪರಾಕ್ರಮ: ಶೌರ್ಯ; ಘನ: ಭಾರ, ಶ್ರೇಷ್ಠ; ಮತ್ತು: ಮದ, ಅಮಲು; ಬಿನ್ನಹ: ಕೋರಿಕೆ; ಕೃಪೆ: ದಯೆ;

ಪದವಿಂಗಡಣೆ:
ಭರತ +ವಂಶದೊಳ್+ಉದಿಸಿದ್+ಎಮ್ಮ್
ಐವರಿಗೆ+ ಇಹಲೋಕದ +ನಿವಾಸಕೆ
ಪರದ +ಸೌಖ್ಯ+ಸ್ಥಿತಿಗೆ +ಹೊಣೆ +ನೀನಲ್ಲದ್+ಎಮಗಾರು
ದುರುಳರ್+ಆವ್+ಅನ್ವಯ +ಮದದ +ದು
ರ್ಧರ +ಪರಾಕ್ರಮ +ಮದದ +ಘನಮ
ತ್ತರಿಗೆ +ಕೃಪೆಮಾಡೆಂದು+ ಬಿನ್ನಹ +ಮಾಡಿದನು +ಪಾರ್ಥ

ಅಚ್ಚರಿ:
(೧)ಆನ್ವಯ, ವಂಶ – ಸಮನಾರ್ಥಕ ಪದ
(೨) ಇಹ, ಪರ – ವಿರುದ್ಧ ಪದಗಳು
(೩) ಮದಗಳ ವಿವರ – ಅನ್ವಯ ಮದ, ಪರಾಕ್ರಮ ಮದ

ಪದ್ಯ ೨೫: ಅರ್ಜುನನು ಕೃಷ್ಣನನ್ನು ಏನು ಬೇಡಿದ?

ನಾವು ನೆರೆ ಸರ್ವಾಪರಾಧಿಗ
ಳಾವ ಗುಣದೋಷವನು ನಮ್ಮಲಿ
ಭಾವಿಸುವೆ ನಾವೆತ್ತ ಬಲ್ಲೆವು ಧರ್ಮನಿರ್ಣಯವ
ಆವ ಪರಿಯಲಿ ತನ್ನ ಸತ್ಯದ
ಠಾವು ನಿಲುವುದು ರಾಯನುಪಹತಿ
ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ (ಕರ್ಣ ಪರ್ವ, ೧೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನಲ್ಲಿ ಮೊರೆಹೋಗಿ, ಕೃಷ್ಣಾ ನಾವು ಸರ್ವಾಪರಾಧಿಗಳು. ಧರ್ಮನಿರ್ಣಯವನ್ನು ನಾವು ಎತ್ತಬಲ್ಲೆವು? ನಮ್ಮ ಗುಣದೋಷಗಳನ್ನು ಏಕೆ ಭಾವಿಸುತ್ತೀಯ? ಏನು ಮಾಡಿದರೆ ನನ್ನ ಪ್ರತಿಜ್ಞೆ ಸತ್ಯವಾಗುವುದೋ ನಮ್ಮಣ್ಣನಿಗೆ ಯಾವ ತೊಂದರೆಯೂ ಆಗುವುದಿಲ್ಲವೋ ಅದನ್ನು ನಿರ್ಣಯಿಸಿ ನನಗೆ ಅಪ್ಪಣೆ ಕೊಡು ಎಂದು ಬೇಡಿದನು.

ಅರ್ಥ:
ನೆರೆ: ಪೂರ್ತಿಯಾಗಿ, ಅತಿಶಯ; ಸರ್ವಾ: ಎಲ್ಲಾ; ಅಪರಾಧಿ: ತಪ್ಪಿತಸ್ಥ; ಗುಣ: ನಡತೆ; ದೋಷ: ಕುಂದು, ಕಳಂಕ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಬಲ್ಲೆ: ತಿಳಿ; ಧರ್ಮ: ಧಾರಣೆ ಮಾಡಿದುದು; ಪರಿ: ರೀತಿ; ಸತ್ಯ: ದಿಟ, ನಿಜ; ಠಾವು: ಎಡೆ, ಸ್ಥಳ, ತಾಣ; ನಿಲುವು: ಇರುವಿಕೆ, ಸ್ಥಿತಿ; ರಾಯ: ರಾಜ; ಉಪಹತಿ:ಹೊಡೆತ, ಆಘಾತ; ಅರಿ: ತಿಳಿ; ಬೆಸಸು: ಅಪ್ಪಣೆಮಾಡು;

ಪದವಿಂಗಡಣೆ:
ನಾವು +ನೆರೆ +ಸರ್ವಾಪರಾಧಿಗಳ್
ಆವ +ಗುಣದೋಷವನು +ನಮ್ಮಲಿ
ಭಾವಿಸುವೆ +ನಾವೆತ್ತ +ಬಲ್ಲೆವು +ಧರ್ಮ+ನಿರ್ಣಯವ
ಆವ +ಪರಿಯಲಿ +ತನ್ನ +ಸತ್ಯದ
ಠಾವು +ನಿಲುವುದು +ರಾಯನ್+ಉಪಹತಿ
ಆವ +ಪರಿಯಿಂದ್+ಆಗದಿಹುದ್+ಅದನ್+ಅರಿದು +ಬೆಸಸೆಂದ

ಅಚ್ಚರಿ:
(೧) ಆವ – ೨, ೪, ೬ ಸಾಲಿನ ಮೊದಲ ಪದ
(೨) ನಾವು, ಠಾವು – ಪ್ರಾಸ ಪದಗಳು
(೩) ಬೇಡುವ ಬಗೆ – ಆವ ಗುಣದೋಷವನು ನಮ್ಮಲಿ ಭಾವಿಸುವೆ ನಾವೆತ್ತ ಬಲ್ಲೆವು ಧರ್ಮನಿರ್ಣಯವ

ಪದ್ಯ ೨೩: ಅರ್ಜುನನ ಮನಸ್ಸು ಕರಗಲು ಕಾರಣವೇನು?

ನನೆದುದಂತಃಕರಣ ಮಧುಸೂ
ದನನ ಸೂಕ್ತಿಸುಧಾರಸದಿ ನೆರೆ
ನೆನೆದುದಾತನ ಮೈ ವಿಲೋಚನವಾರಿ ಪೂರದಲಿ
ಮನದ ಪರಿತಾಪವ್ಯಥಾ ದು
ರ್ಮನನು ಖಡ್ಗವನೊರೆಯೊಳೌಕುತ
ವಿನಯದಲಿ ಕೃಷ್ಣಂಗೆ ಬಿನ್ನಹ ಮಾಡಿದನು ಪಾರ್ಥ (ಕರ್ಣ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಅಮೃತದಂತಹ ಒಳ್ಳೆಯ ನುಡಿಗಳು ಅರ್ಜುನನ ಅಂತಃಕರಣವನ್ನು ಕರಗಿಸಿತು. ಕಂಬನಿಗಳಿಂದ ಮೈ ನೆನೆದುಹೋಯಿತು. ಕೈಯಲ್ಲಿದ್ದ ಖಡ್ಗವನ್ನು ಒರೆಯಲ್ಲಿಟ್ಟು ಅರ್ಜುನನು ಶ್ರೀಕೃಷ್ಣನಿಗೆ ಹೀಗೆಂದು ಕೋರಿದನು.

ಅರ್ಥ:
ನೆನೆ: ಒದ್ದೆಯಾಗು, ತೋಯು; ಅಂತಃಕರಣ: ಮನಸ್ಸು, ಚಿತ್ತ; ಮಧುಸೂದನ: ಕೃಷ್ಣ; ಸೂಕ್ತಿ: ಹಿತವಚನ; ಸುಧೆ: ಅಮೃತ; ರಸ: ತಿರುಳು; ನೆರೆ:ಪೂರ್ತಿಯಾಗಿ; ಮೈ: ತನು; ವಿಲೋಚನ: ಕಣ್ಣು; ವಾರಿ: ನೀರು; ಪೂರ: ಪೂರ್ತಿಯಾಗಿ; ಮನ: ಮನಸ್ಸು; ಪರಿತಾಪ: ಕಾವು, ಉಷ್ಣ; ವ್ಯಥ: ನೋವು, ಯಾತನೆ; ದುರ್ಮನ: ಕೆಟ್ಟ ಮನಸ್ಸು; ಖಡ್ಗ: ಕತ್ತಿ; ಒರೆ: ಕತ್ತಿಯನ್ನು ಇಡುವ ಸಾಧನ; ಔಕು: ತಳ್ಳು, ನೂಕು; ವಿನಯ: ಸೌಜನ್ಯ; ಬಿನ್ನಹ: ಕೋರಿಕೆ;

ಪದವಿಂಗಡಣೆ:
ನನೆದುದ್+ಅಂತಃಕರಣ+ ಮಧುಸೂ
ದನನ +ಸೂಕ್ತಿ+ಸುಧಾ+ರಸದಿ +ನೆರೆ
ನೆನೆದುದ್+ಆತನ +ಮೈ +ವಿಲೋಚನವಾರಿ+ ಪೂರದಲಿ
ಮನದ +ಪರಿತಾಪ+ವ್ಯಥಾ +ದು
ರ್ಮನನು +ಖಡ್ಗವನ್+ಒರೆಯೊಳ್+ಔಕುತ
ವಿನಯದಲಿ +ಕೃಷ್ಣಂಗೆ +ಬಿನ್ನಹ +ಮಾಡಿದನು +ಪಾರ್ಥ

ಅಚ್ಚರಿ:
(೧) ಅರ್ಜುನ ಮೈ ಮನಸ್ಸು ಕರಗಿತು ಎಂದು ಚಿತ್ರಿಸಲು – ನೆರೆ
ನೆನೆದುದಾತನ ಮೈ ವಿಲೋಚನವಾರಿ ಪೂರದಲಿ

ಪದ್ಯ ೨೨: ಕೃಷ್ಣನು ಅರ್ಜುನನನ್ನು ನಿರ್ದಯನೆಂದು ಏಕೆ ಕರೆದ?

ಈಸು ನಿರ್ದಯನೆಂಬುದನು ನಾ
ವೀಸು ದಿನವರಿಯೆವು ಮಹಾದೇ
ವೇಸು ಪರಿಯಂತಿದ್ದುದೋ ನಿನ್ನಂತರಂಗದಲಿ
ಏಸನೋದಿದಡೇನು ಪಾಪ ವಿ
ಳಾಸ ರಚನಾ ರೌರವಾತ್ಮರ
ವಾಸನೆಗಳವು ಬೇರೆ ಹರಹರ ಎಂದನಸುರಾರಿ (ಕರ್ಣ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಇಷ್ಟು ದಿನ ನಿನ್ನ ಜೊತೆಯಲ್ಲೇ ಇದ್ದರೂ ನೀನಿಷ್ಟು ನಿರ್ದಯನೆಂಬುದು ನಮಗೆ ತಿಳಿದಿರಲಿಲ್ಲ. ಎಷ್ಟು ಕಾಲ ಈ ನಿರ್ದಯೆ ನಿನ್ನ ಅಂತರಾಳದಲ್ಲಿತ್ತೋ ಏನೋ, ಪಾಪಕರ್ಮನಿರತರಾದ ರೌರವಾತ್ಮರು ಎಷ್ಟು ಓದಿದರೇನು, ಅವರ ಮನಸ್ಸಿನಲ್ಲಿ ಹುದುಗಿರುವ ವಾಸನೆಗಳೇ ಬೇರೆ ಶಿವ ಶಿವಾ ಎಂದು ಕೃಷ್ಣನು ಅರ್ಜುನನಿಗೆ ತಿಳಿಸಿದನು.

ಅರ್ಥ:
ಈಸು: ಇಷ್ಟು; ನಿರ್ದಯ: ಕರುಣೆಯಿಲ್ಲದವ; ದಿನ: ದಿವಸ; ಅರಿ: ತಿಳಿ; ಪರಿ: ಸ್ಥಿತಿ, ಪಾಡು; ಅಂತರಂಗ: ಚಿತ್ತ, ಮನಸ್ಸು; ಓದು: ಅಭ್ಯಾಸಮಾಡು, ತಿಳಿದುಕೋ; ಪಾಪ: ಪುಣ್ಯವಲ್ಲದ ಕಾರ್ಯ, ಕೆಟ್ಟ ಕೆಲಸ; ವಿಳಾಸ: ಸ್ಥಳ, ವಿಹಾರ; ರೌರವ: ಭಯಂಕರವಾದ; ಆತ್ಮ: ಜೀವ; ವಾಸನೆ: ಹಿಂದಿನ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ; ಬೇರೆ: ಅನ್ಯ; ಹರ: ಶಿವ; ಅಸುರಾರಿ: ದಾನವರ ವೈರಿ (ಕೃಷ್ಣ);

ಪದವಿಂಗಡಣೆ:
ಈಸು+ ನಿರ್ದಯನ್+ಎಂಬುದನು +ನಾವ್
ಈಸು +ದಿನವ್+ಅರಿಯೆವು +ಮಹಾದೇವ
ಈಸು +ಪರಿಯಂತಿದ್ದುದೋ +ನಿನ್ನಂತರಂಗದಲಿ
ಏಸನ್+ಓದಿದಡೇನು +ಪಾಪ +ವಿ
ಳಾಸ +ರಚನಾ+ ರೌರವ್+ಆತ್ಮರ
ವಾಸನೆಗಳವು +ಬೇರೆ +ಹರಹರ+ ಎಂದನ್+ಅಸುರಾರಿ

ಅಚ್ಚರಿ:
(೧) ಈಸು – ೧-೩ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ಏಸನೋದಿದಡೇನು ಪಾಪ ವಿಳಾಸ ರಚನಾ ರೌರವಾತ್ಮರ
ವಾಸನೆಗಳವು ಬೇರೆ

ಪದ್ಯ ೨೧: ಕೃಷ್ಣನು ಅರ್ಜುನನಿಗೆ ಏನು ಹೇಳಿದ?

ಗುರುಹತಿಯ ಕರ್ತವ್ಯ ತಾನಾ
ದರಿಸಿ ಮಾಡಿದ ಮಾತನೇ ಪತಿ
ಕರಿಸುವುದು ಶ್ರುತಿವಿಹಿತ ಧರ್ಮವಿದೆಂಬುದೀ ಲೋಕ
ಎರಡರಭ್ಯಂತರವ ನೀನೇ
ನರಿಯದವನೇ ವೇದಶಾಸ್ತ್ರದ
ವರ ನಿಧಾನಜ್ಞಾತೃವಲ್ಲ ಪಾರ್ಥ ನೀನೆಂದ (ಕರ್ಣ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಗುರುವನ್ನು ವಧಿಸುವುದೇ ಕರ್ತವ್ಯವೇ? ಆಡಿದ ಮಾತಿನಂತೆ ನಡೆಯುವುದೇ ವೇದಸಮ್ಮತವಾದ ಧರ್ಮವೆಂದು ಲೋಕವು ಹೇಳುತ್ತದೆ. ಇವೆರಡರ ನಡುವಿನ ವ್ಯತ್ಯಾಸ ನಿನಗೆ ಗೊತ್ತಿಲದೇ ಇಲ್ಲ. ವೇದಾಧ್ಯಯನ ಮಾಡಿದವನು ನೀನಲ್ಲವೇ ಎಂದು ಕೃಷ್ಣನು ಅರ್ಜುನನಿಗೆ ತಿಳಿಸಿದ.

ಅರ್ಥ:
ಗುರು: ಆಚಾರ್ಯ; ಹತಿ: ಹತ್ಯ; ಕರ್ತವ್ಯ: ಮಾಡಬೇಕಾದುದು; ಆದರ: ಆಸಕ್ತಿ, ವಿಶ್ವಾಸ; ಮಾತ: ನುಡಿ; ಪತಿಕರಿಸು: ದಯೆತೋರು, ಅನುಗ್ರಹಿಸು; ಶ್ರುತಿ: ವೇದ; ವಿಹಿತ: ಯೋಗ್ಯ; ಧರ್ಮ: ಧಾರಣೆ ಮಾಡಿದುದು, ನಿಯಮ; ಲೋಕ: ಜಗತ್ತು; ಅಭ್ಯಂತರ: ಅಂತರಾಳ; ಅರಿ: ತಿಳಿ; ವರ: ಶ್ರೇಷ್ಠ; ನಿಧಾನ: ವಿಳಂಬ, ಸಾವಕಾಶ; ಜ್ಞಾತೃ: ತಿಳಿದುಕೊಳ್ಳುವವನು;

ಪದವಿಂಗಡಣೆ:
ಗುರುಹತಿಯ+ ಕರ್ತವ್ಯ +ತಾನಾ
ದರಿಸಿ +ಮಾಡಿದ +ಮಾತನೇ +ಪತಿ
ಕರಿಸುವುದು +ಶ್ರುತಿವಿಹಿತ+ ಧರ್ಮವಿದ್+ಎಂಬುದೀ +ಲೋಕ
ಎರಡರ್+ಅಭ್ಯಂತರವ +ನೀನೇನ್
ಅರಿಯದವನೇ +ವೇದ+ಶಾಸ್ತ್ರದ
ವರ +ನಿಧಾನ+ಜ್ಞಾತೃವಲ್ಲ+ ಪಾರ್ಥ +ನೀನೆಂದ