ಪದ್ಯ ೮: ಅರ್ಜುನನೇಕೆ ಧರ್ಮಜನನನ್ನು ಸಾಯಿಸಲು ಹೊರಟನು?

ದೇವ ಪೂರ್ವದಲೆನ್ನ ನುಡಿ ಗಾಂ
ಡೀವವೇತಕೆ ನಿನಗೆ ನಿನಗೀ
ದೇವಧನು ಸಾದೃಶ್ಯವೇ ತೆಗೆಯೆಂದು ರೋಷದಲಿ
ಆವನೊಬ್ಬನು ನುಡಿದನಾತನ
ಜೀವನವ ಜಕ್ಕುಲಿಸಿಯೆನ್ನ ವ
ಚೋವಿಳಾಸವ ಕಾಯ್ವೆನೆಂದೆನು ಕೃಷ್ಣ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಷ್ಣ ಈ ಹಿಂದೆ ನಿನಗೆ ಈ ದೇವತೆಗಳ ಬಿಲ್ಲೇಕೆ, ತೆಗೆ ಎಂದು ಯಾರು ಹೇಳುವರೋ ಅವರ ಪ್ರಾಣವನ್ನು ತೆಗೆಯುತ್ತೇನೆ ಎಂದು ಶಪಥಮಾಡಿದ್ದೆ. ಈಗ ಧರ್ಮಜನು ಈ ಮಾತನ್ನು ಹೇಳಿದ್ದಾನೆ, ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ತನ್ನನ್ನು ಸಮರ್ಥಿಸಿಕೊಂಡನು.

ಅರ್ಥ:
ದೇವ: ಭಗವಂತ; ಪೂರ್ವ: ಈ ಹಿಂದೆ; ನುಡಿ: ಮಾತು; ಧನು: ಬಿಲ್ಲು; ಸಾದೃಶ್ಯ:ಹೋಲಿಕೆ; ತೆಗೆ: ಈಚೆಗೆ ತರು, ಹೊರತರು; ರೋಷ: ಕೋಪ; ನುಡಿ: ಮಾತು; ಜೀವ: ಬದುಕು, ಉಸಿರು; ಜಕ್ಕುಲಿಸು: ಗೇಲಿ, ಹಾಸ್ಯಮಾಡು; ವಚೋವಿಳಾಸ: ಮಾತಿನ ಸೌಂದರ್ಯ; ಕಾಯುವೆ: ಕಾಪಾಡು;

ಪದವಿಂಗಡಣೆ:
ದೇವ +ಪೂರ್ವದಲ್+ಎನ್ನ +ನುಡಿ +ಗಾಂ
ಡೀವವ್+ಏತಕೆ +ನಿನಗೆ +ನಿನಗೀ
ದೇವ+ಧನು+ ಸಾದೃಶ್ಯವೇ +ತೆಗೆ+ಯೆಂದು +ರೋಷದಲಿ
ಆವನೊಬ್ಬನು +ನುಡಿದನ್+ಆತನ
ಜೀವನವ+ ಜಕ್ಕುಲಿಸಿ+ ಎನ್ನ +ವ
ಚೋವಿಳಾಸವ +ಕಾಯ್ವೆನ್+ಎಂದೆನು +ಕೃಷ್ಣ +ಕೇಳೆಂದ

ಅಚ್ಚರಿ:
(೧) ಜೀವವನ್ನು ತೆಗೆಯುತ್ತೇನೆ ಎಂದು ಹೇಳಲು – ಜೀವನವ ಜಕ್ಕುಲಿಸಿ
(೨) ವಚೋವಿಳಾಸ – ಮಾತಿನ ಹಿರಿಮೆ – ಪದಬಳಕೆ

ಪದ್ಯ ೭: ಅರ್ಜುನನು ಪ್ರಾಯಶ್ಚಿತ್ತಕ್ಕೆ ಏನು ಮಾಡಲು ಹೊರಟನು?

ಬೆದರಿಸದಿರೈ ಕೃಷ್ಣ ದುಷ್ಕ
ರ್ಮದಲಿ ಸುಳಿಯೆನು ಭೂಪತಿಯ ಗ
ದ್ಗದ ವಚೋವಿನ್ಯಾಸದನ್ಯಾಯ ಪ್ರಪಂಚವಿದು
ಅದರಿನೀತನ ಪೊಯ್ದು ಕೊಂದ
ಲ್ಲದೆ ಸುನಿಷ್ಕೃತಿಯಿಲ್ಲ ಸತ್ಯಾ
ಭ್ಯುದಯವೇ ತನ್ನುದಯವದರಳಿವೆನ್ನ ಲಯವೆಂದ (ಕರ್ಣ ಪರ್ವ, ೧೭ ಸಂಧಿ, ೭ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತಿಗೆ ಅರ್ಜುನನು ಉತ್ತರಿಸುತ್ತಾ, ಕೃಷ್ಣ ನನ್ನನ್ನು ಬೆದರಿಸಬೇಡ. ನಾನೆಂದೂ ದುಷ್ಕರ್ಮವನ್ನು ಮಾಡುವುದಿಲ್ಲ. ದೊರೆಯು ದುಃಖದಿಂದ ಗದ್ಗದಿತನಾಗಿ ಆಡಿದುದೆಲ್ಲಾ ಅನ್ಯಾಯದ ಮಾತು. ಆದುದರಿಂದ ಇವನನ್ನು ಹೊಡೆದು ಕೊಲ್ಲದೆ ನನಗೆ ಪ್ರಾಯಶ್ಚಿತ್ತವಾಗುವುದಿಲ್ಲ. ಸತ್ಯದ ಏಳಿಗೆಯೇ ನನ್ನ ಏಳಿಗೆ, ಅದರ ನಾಶವೇ ನನ್ನ ನಾಶ ಎಂದು ಉತ್ತರಿಸಿದನು.

ಅರ್ಥ:
ಬೆದರು: ಭಯ, ಅಂಜಿಕೆ; ದುಷ್ಕರ್ಮ: ಕೆಟ್ಟ ಕೆಲಸ; ಸುಳಿ: ಸುತ್ತು, ಆವರ್ತ; ಭೂಪತಿ: ರಾಜ; ಗದ್ಗದ: ದುಃಖದ; ವಚ: ಮಾತು; ವಿನ್ಯಾಸ: ರಚನೆ; ಅನ್ಯಾಯ: ಅನೀತಿ, ಅಧರ್ಮ; ಪ್ರಪಂಚ: ಜಗತ್ತು; ಪೊಯ್ದು: ಹೊಡೆದು; ಕೊಂದು: ಸಾಯಿಸಿ; ನಿಷ್ಕೃತಿ:ಪ್ರಾಯಶ್ಚಿತ್ತ; ಸತ್ಯ: ನಿಜ, ದಿಟ; ಅಭ್ಯುದಯ: ಏಳಿಗೆ; ಉದಯ: ಹುಟ್ಟು; ಅಳಿವು: ನಾಶ; ಲಯ: ಪ್ರಳಯ, ನಾಶ;

ಪದವಿಂಗಡಣೆ:
ಬೆದರಿಸದಿರೈ +ಕೃಷ್ಣ +ದುಷ್ಕ
ರ್ಮದಲಿ +ಸುಳಿಯೆನು +ಭೂಪತಿಯ +ಗ
ದ್ಗದ +ವಚೋ+ವಿನ್ಯಾಸದ್+ಅನ್ಯಾಯ +ಪ್ರಪಂಚವಿದು
ಅದರ್+ಈತನ +ಪೊಯ್ದು +ಕೊಂದ
ಲ್ಲದೆ +ಸುನಿಷ್ಕೃತಿಯಿಲ್ಲ +ಸತ್ಯ
ಅಭ್ಯುದಯವೇ +ತನ್+ಉದಯವ್+ಅದರ್+ಅಳಿವ್+ಎನ್ನ+ ಲಯವೆಂದ

ಅಚ್ಚರಿ:
(೧) ಅರ್ಜುನನು ತನ್ನ ನಡೆಯನ್ನು ಸಮರ್ಥಿಸಿಕೊಳ್ಳುವ ಪರಿ
(೨) ಅರ್ಜುನನು ಸತ್ಯದ ಪರ ಎಂದು ಹೇಳುವ ಪರಿ – ಸತ್ಯಾಭ್ಯುದಯವೇ ತನ್ನುದಯವದರಳಿವೆನ್ನ ಲಯವೆಂದ

ಪದ್ಯ ೬: ಕೃಷ್ಣನು ಅರ್ಜುನನು ಕತ್ತಿ ಹಿಡಿದದ್ದಕ್ಕೆ ಏನು ಹೇಳಿದ?

ಧರಣಿಪನ ಕೊಲಲೆಂದೊ ಮೇಣೀ
ತರುಣಿಯರಿಗೋ ನಕುಲ ಸಹದೇ
ವರಿಗೆಯೋ ಮೇಣೆನಗೆಯೋ ನೀನುಗಿದಡಾಯುಧದ
ಪರಿಯ ಹೇಳೈ ಪಾರ್ಥ ಮೋನದೊ
ಳಿರದಿರೆನ್ನಾಣೆನಲು ಬೆರಗಿನ
ಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ (ಕರ್ಣ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ನೀನೇಕೆ ಕತ್ತಿಯನ್ನೆಳೆದೆ? ಧರ್ಮಜನನ್ನು ಕೋಲ್ಲಲೋ, ಅಥವ ರಾಣಿವಾಸದವರನ್ನು ಸಾಯಿಸಲೋ, ಅಥವ ನಕುಲ ಸಹದೇವರನ್ನೋ ಅಥವ ನನ್ನನ್ನೋ, ಏಕೆ ಕತ್ತಿ ಹಿರಿದೆ, ಸುಮ್ಮನಿರಬೇಡ, ನನ್ನಾಣೆ ಉತ್ತರವನ್ನು ಹೇಳು ಎಂದು ಕೃಷ್ಣನು ಕೇಳಲು ಅರ್ಜುನನು ಮೌನದೊಳಿದ್ದನು.

ಅರ್ಥ:
ಧರಣಿಪ: ರಾಜ; ಕೊಲಲು: ಕೊಂದು, ಸಾಯಿಸು; ಮೇಣ್: ಅಥವ; ತರುಣಿ: ಸ್ತ್ರೀ; ಎನಗೆ: ನನಗೆ; ಉಗಿದು: ಹೊರತೆಗೆ; ಆಯುಧ: ಶಸ್ತ್ರ; ಪರಿ: ರೀತಿ; ಮೋನ: ಮೌನ; ಆಣೆ: ಪ್ರಮಾಣ; ಬೆರಗು: ವಿಸ್ಮಯ, ಸೋಜಿಗ; ಅಗರು: ಒಂದು ಬಗೆಯ ಕೆಂಪುದ್ರವ್ಯ, ಲಾಕ್ಷ; ಗಾಹು: ಪ್ರಭಾವ, ತಿಳುವಳಿಕೆ; ಅದ್ದು: ತೋಯ್ದು;

ಪದವಿಂಗಡಣೆ:
ಧರಣಿಪನ +ಕೊಲಲೆಂದೊ +ಮೇಣ್+ಈ
ತರುಣಿಯರಿಗೋ +ನಕುಲ +ಸಹದೇ
ವರಿಗೆಯೋ +ಮೇಣ್+ಎನಗೆಯೋ +ನೀನ್+ಉಗಿದಡ್+ಆಯುಧದ
ಪರಿಯ +ಹೇಳೈ +ಪಾರ್ಥ +ಮೋನದೊಳ್
ಇರದಿರ್+ಎನ್ನಾಣ್+ಎನಲು +ಬೆರಗಿನ್
ಅಗರದ+ ಗಾಹಿನಲದ್ದು +ಮೋನದೊಳ್+ಇದ್ದನಾ ಪಾರ್ಥ

ಅಚ್ಚರಿ:
(೧) ತೆಗೆದ ಆಯುಧ ಎಂದು ಹೇಳಲು – ಉಗಿದಡಾಯುಧ ಪದದ ಬಳಕೆ
(೨) ಅರ್ಜುನನು ಮೌನದೊಳಿದ್ದ ಪರಿ – ಬೆರಗಿನಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ

ಪದ್ಯ ೫: ಕೃಷ್ಣನು ಅರ್ಜುನನನ್ನು ಹೇಗೆ ಗದರಿದನು?

ಅಕಟ ಗುರುಹತ್ಯಾ ಮಹಾ ಪಾ
ತಕಕೆ ತಂದೈ ಮನವ ಭರತ
ಪ್ರಕಟಕುಲ ನಿರ್ಮೂಲಕನೆ ನೀನೊಬ್ಬನುದಿಸಿದೆಲ
ವಿಕಳ ಕುರುನೃಪರೊಳಗೆ ದುರಿತಾ
ತ್ಮಕರ ಕಾಣೆನು ನಿನ್ನ ಸರಿ ಹೋ
ಲಿಕೆಗೆ ಹರಹರದೇನ ನೆನೆದನೆನುತ್ತ ಗರ್ಜಿಸಿದ (ಕರ್ಣ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ಅಯ್ಯೋ ಅರ್ಜುನ ಗುರುಹತ್ಯವೆಂಬ ಮಹಾ ಪಾಪಕ್ಕೆ ಮನಸ್ಸು ಮಾಡಿರುವೆಯೆಲ್ಲಾ! ಭರತವಂಶ ನಿರ್ಮೂಲನಕ್ಕೆ ನೀನೊಬ್ಬ ಹುಟ್ಟಿದೆ, ಕೌರವ ಕುಲದ ರಾಜರಲ್ಲಿ ನಿನ್ನ ಸರಿಹೋಲಿಕೆಗೆ ಪಾಪಾತ್ಮರೊಬ್ಬರನ್ನೂ ನಾನು ಕಾಣಲಿಲ್ಲ. ಶಿವ ಶಿವಾ ಏನು ಮಾಡಬೇಕೆಂದು ಬಯಸಿದೆ ಎಂದು ಕೃಷ್ಣನು ಗರ್ಜಿಸಿದನು.

ಅರ್ಥ:
ಅಕಟ: ಅಯ್ಯೋ; ಗುರು: ಅಚಾರ್ಯ: ಹತ್ಯ: ಕೊಲ್ಲು; ಪಾತಕ: ಪಾಪ; ಮನ: ಮನಸ್ಸು; ಪ್ರಕಟ: ನಿಚ್ಚಳವಾದ; ಕುಲ: ವಂಶ; ನಿರ್ಮೂಲಕ: ನಾಶ; ಉದಿಸು: ಹುಟ್ಟು; ವಿಕಳ: ಭ್ರಾಂತಿ, ನ್ಯೂನತೆ; ನೃಪ: ರಾಜ; ದುರಿತ: ಪಾಪ, ಪಾತಕ; ಹೋಲಿಕೆ: ಸಮಾನ; ನೆನೆ: ಸ್ಮರಿಸು, ವಿಚಾರಿಸು;

ಪದವಿಂಗಡಣೆ:
ಅಕಟ +ಗುರುಹತ್ಯಾ +ಮಹಾ +ಪಾ
ತಕಕೆ +ತಂದೈ +ಮನವ +ಭರತ
ಪ್ರಕಟಕುಲ +ನಿರ್ಮೂಲಕನೆ +ನೀನೊಬ್ಬನ್+ಉದಿಸಿದೆಲ
ವಿಕಳ +ಕುರು+ನೃಪರೊಳಗೆ +ದುರಿತಾ
ತ್ಮಕರ+ ಕಾಣೆನು +ನಿನ್ನ +ಸರಿ+ ಹೋ
ಲಿಕೆಗೆ+ ಹರಹರದ್+ಏನ +ನೆನೆದನೆನುತ್ತ+ ಗರ್ಜಿಸಿದ

ಅಚ್ಚರಿ:
(೧) ಅಕಟ, ಪ್ರಕಟ – ಪ್ರಾಸ ಪದ
(೨) ಬಯ್ಯುವ ಪರಿ – ಗುರುಹತ್ಯಾ ಮಹಾ ಪಾತಕಕೆ ತಂದೈ; ಮನವ ಭರತ
ಪ್ರಕಟಕುಲ ನಿರ್ಮೂಲಕನೆ ನೀನೊಬ್ಬನುದಿಸಿದೆಲ; ವಿಕಳ ಕುರುನೃಪರೊಳಗೆ ದುರಿತಾ
ತ್ಮಕರ ಕಾಣೆನು ನಿನ್ನ ಸರಿ ಹೋಲಿಕೆಗೆ

ಪದ್ಯ ೪: ಅರ್ಜುನನನ್ನು ಯಾರು ಬೈದರು?

ಹಿಡಿಯದಿರು ಮುರವೈರಿ ಪಾರ್ಥನ
ಬಿಡು ಬಿಡೀತನ ಖಡ್ಗಕಿದೆಯೆ
ನ್ನೊಡಲು ತನ್ನನೆ ಧಾರೆಯೆರೆದೆನು ನಯನವಾರಿಯಲಿ
ತೊಡಗಿದೀತನ ರಾಜಕಾರ್ಯವ
ಕೆಡಿಸದಿರು ನಿರ್ವಾಹಿಸಲಿ ನೀ
ಬಿಡು ಬಿಡೆನೆ ಜರೆದನು ಮುರಾಂತಕನಿಂದ್ರನಂದನನ (ಕರ್ಣ ಪರ್ವ, ೧೭ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನು ಕತ್ತಿಯನ್ನು ಹಿಡಿದು ತನ್ನ ಮೇಲೆ ಬರುವುದು, ಅವನನ್ನು ತಡೆದ ಕೃಷ್ಣನನ್ನು ನೋಡಿದ ಧರ್ಮಜನು, ಅರ್ಜುನನನ್ನು ಬಿಡು, ಅವನನ್ನು ತಡೆಯಬೇಡ ಕೃಷ್ಣ, ನನ್ನ ದೇಹವು ಇವನ ಖಡ್ಗಕ್ಕೆ ಮೀಸಲು. ಕಣ್ಣೀರಿನ ಧಾರೆಯೆರೆದು ಇವನ ಕತ್ತಿಯ ಅಲಗಿಗೆ ಕೊಟ್ಟಿದ್ದೇನೆ, ಇವನ ರಾಜಕಾರ್ಯವನ್ನು ಕೆಡಿಸಬೇಡ, ಅದು ನಡೆಯಲಿ, ನೀನವನನ್ನು ಬಿಡು ಎಂದು ಧರ್ಮಜನು ನುಡಿಯಲು, ಕೃಷ್ಣನು ಅರ್ಜುನನನ್ನು ಬೈದನು.

ಅರ್ಥ:
ಹಿಡಿ: ಬಂಧಿಸು; ಮುರವೈರಿ: ಕೃಷ್ಣ; ಬಿಡು: ತೊರೆ; ಖಡ್ಗ: ಕತ್ತಿ; ಒಡಲು: ದೇಹ; ಧಾರೆ: ಕತ್ತಿಯ ಅಲಗು; ನಯನ: ಕಣ್ಣು; ನಯನವಾರಿ: ಕಣ್ಣೀರು; ತೊಡಗು: ಸೆಣಸು, ಹೋರಾಡು; ರಾಜಕಾರ್ಯ: ರಾಜ್ಯ ಕೆಲಸ; ಕೆಡಿಸು: ಹಾಳುಮಾದು; ನಿರ್ವಹಿಸು: ಆಚರಿಸು; ಜರೆ: ಬಯ್ಯು; ಮುರಾಂತಕ: ಕೃಷ್ಣ; ಇಂದ್ರ: ಶಕ್ರ; ನಂದನ: ಮಗ;

ಪದವಿಂಗಡಣೆ:
ಹಿಡಿಯದಿರು +ಮುರವೈರಿ +ಪಾರ್ಥನ
ಬಿಡು +ಬಿಡ್+ಈತನ +ಖಡ್ಗಕ್+ಇದೆ
ಎನ್ನೊಡಲು +ತನ್ನನೆ +ಧಾರೆಯೆರೆದೆನು+ ನಯನ+ವಾರಿಯಲಿ
ತೊಡಗಿದ್+ಈತನ +ರಾಜಕಾರ್ಯವ
ಕೆಡಿಸದಿರು +ನಿರ್ವಾಹಿಸಲಿ +ನೀ
ಬಿಡು +ಬಿಡ್+ಎನೆ +ಜರೆದನು+ ಮುರಾಂತಕನ್+ಇಂದ್ರ+ನಂದನನ

ಅಚ್ಚರಿ:
(೧) ಮುರವೈರಿ, ಮುರಾಂತಕ; ಪಾರ್ಥ, ಇಂದ್ರನಂದನ – ಕೃಷ್ಣಾರ್ಜುನರನ್ನು ಕರೆಯಲು ಬಳಸಿದ ಪದಗಳು
(೨) ಬಿಡು ಬಿಡ್ – ೨, ೬ ಸಾಲಿನ ಮೊದಲ ಪದ

ಪದ್ಯ ೩: ಅರ್ಜುನನನ್ನು ಯಾರು ತಡೆದರು?

ಆಹಹ ಕೈತಪ್ಪಾಯ್ತು ಹಾ ಹಾ
ರಹವಿದೇನೆಂದೆನುತ ರಾಯನ
ಮಹಿಳೆ ಬಿದ್ದಳು ಮೇಲುಖಡ್ಗಕೆ ತನ್ನ ನಡೆಯೊಡ್ಡಿ
ಬಹಳ ಶೋಕದಲಖಿಳ ಜನವು
ಮ್ಮಹವ ಬಿಸುಟರು ದೈವಗತಿ ದು
ಸ್ಸಹವಲಾ ಎನುತಸುರರಿಪು ಹಿಡಿದನು ಧನಂಜಯನ (ಕರ್ಣ ಪರ್ವ, ೧೭ ಸಂಧಿ, ೩ ಪದ್ಯ)

ತಾತ್ಪರ್ಯ:
ಅರ್ಜುನನು ಕೋಪದ್ರೇಕನಾಗಿ ಕತ್ತಿಯನ್ನು ತೆಗೆದು ಧರ್ಮಜನ ಬಳಿ ಹೋಗವುದನ್ನು ನೋಡಿದ ದ್ರೌಪದಿಯು, ಅಯ್ಯೋ ಇದೇನು ಆಶ್ಚರ್ಯ ಕೈತಪ್ಪಿತೇ ಎಂದು ಹೇಳುತ್ತಾ ಯುಧಿಷ್ಠಿರನ ಮೇಲೆ ಎತ್ತಿದ ಕತ್ತಿಗೆ ದ್ರೌಪದಿಯು ಅಡ್ಡ ಬಂದು ಬಿದ್ದಳು. ಅಲ್ಲಿದ್ದವರಿಗೆಲ್ಲಾ ಸಂತೋಷವು ದೂರವಾಗಿ ದುಃಖವು ಆವರಿಸಿತು. ಇದೇನು ದುಸ್ಸಾಹಸದ ವರ್ತನೆ ಎಂದು ಕೃಷ್ಣನು ಅರ್ಜುನನನ್ನು ತಡೆದನು.

ಅರ್ಥ:
ಕೈ: ಹಸ್ತ; ತಪ್ಪು: ಸರಿಯಿಲ್ಲದ; ರಹ: ಸೋಜಿಗ, ಆಶ್ಚರ್ಯ; ರಾಯ: ರಾಜನ; ಮಹಿಳೆ: ಸ್ತ್ರೀ; ರಾಯನ ಮಹಿಳೆ: ರಾಣಿ (ದ್ರೌಪದಿ); ಬಿದ್ದು: ಕೆಳಗೆ ಜಾರು; ಮೇಲು: ಎತ್ತರದ; ಖಡ್ಗ: ಕತ್ತಿ; ನಡೆ: ನಡು, ಮಧ್ಯಭಾಗ; ಒಡ್ಡು: ತೋರು; ಶೋಕ: ದುಃಖ; ಅಖಿಳ: ಎಲ್ಲಾ; ಉಮ್ಮಹ: ಉತ್ಸಾಹ; ಬಿಸುಟು: ಹೊರಹಾಕು; ದೈವ: ಭಗವಂತ; ದೈವಗತಿ: ವಿಧಿ; ದುಸ್ಸಹಸ: ಕೆಟ್ಟ ಸಾಹಸ; ಅಸುರರಿಪು: ದಾನವರ ವೈರಿ (ಕೃಷ್ಣ); ಹಿಡಿ: ತಡೆ, ಬಂಧಿಸು;

ಪದವಿಂಗಡಣೆ:
ಆಹಹ +ಕೈತಪ್ಪಾಯ್ತು +ಹಾ +ಹಾ
ರಹವ್+ಇದೇನ್+ಎಂದೆನುತ +ರಾಯನ
ಮಹಿಳೆ+ ಬಿದ್ದಳು +ಮೇಲು+ಖಡ್ಗಕೆ+ ತನ್ನ +ನಡೆಯೊಡ್ಡಿ
ಬಹಳ+ ಶೋಕದಲ್+ಅಖಿಳ +ಜನವ್
ಉಮ್ಮಹವ+ ಬಿಸುಟರು +ದೈವಗತಿ+ ದು
ಸ್ಸಹವಲಾ +ಎನುತ್+ಅಸುರರಿಪು +ಹಿಡಿದನು+ ಧನಂಜಯನ

ಅಚ್ಚರಿ:
(೧) ದ್ರೌಪದಿಯನ್ನು ರಾಯನ ಮಹಿಳೆ ಎಂದು ಕರೆದಿರುವುದು
(೨) ದುಃಖವು ಆವರಿಸಿತು ಎಂದು ಹೇಳಲು – ಉಮ್ಮಹವ ಬಿಸುಟರು ಎಂಬ ಪದ ಬಳಕೆ
(೩) ಆಹಹ, ಹಾ ಹಾ – ಆಶ್ಚರ್ಯ ಸೂಚಕ ಪದಗಳ ಬಳಕೆ

ಪದ್ಯ ೨: ಕೋಪದಲ್ಲಿ ಅರ್ಜುನನು ಧರ್ಮಜನ ಬಳಿ ಹೇಗೆ ಹೋದನು?

ಆಯುಧವ ಹಿಡಿದೊರೆಯನುಗಿದನ
ಡಾಯುಧವ ಝಳಪಿಸುತ ರೌದ್ರ
ಸ್ಥಾಯಿಭಾವದ ಭಾರದಲಿ ಭುಲ್ಲಯಿಸಿ ಭಯವಡಗಿ
ರಾಯನಲ್ಲಿಗೆ ಮೆಲ್ಲ ಮೆಲ್ಲನು
ಪಾಯಗತಿ ಪಲ್ಲವಿಸಲುಪ್ಪರ
ಘಾಯದಲಿ ಲಾಗಿಸುವ ಪಾರ್ಥನೆ ಕಂಡುದಖಿಳಜನ (ಕರ್ಣ ಪರ್ವ, ೧೭ ಸಂಧಿ, ೨ ಪದ್ಯ)

ತಾತ್ಪರ್ಯ:
ತನ್ನ ಒರೆಯಲ್ಲಿದ್ದ ಆಯುಧದ ಮೇಲೆ ಕೈಹಾಕಿ ಅದನ್ನು ಹಿಡಿದೆಳೆದು, ಹೊರತೆಗೆದಂತೆ ಪ್ರಕಾಶಮಾನವಾಗಿ ಝಳಪಿಸುತ್ತಿದ್ದ, ತನ್ನ ನರನಾಡಿಗಳಲ್ಲಿ ಕೋಪವು ಹರಿಯುವುದ ಅತಿರೇಕದಿಂದ ಭಯವನ್ನು ಬಿಟ್ಟು, ಅಣ್ಣನ ಬಳಿಗೆ ಮೆಲ್ಲನೆ ಹೋಗಿ, ಕತ್ತಿಯನ್ನು ಮೇಲೆತ್ತಿ ಹೊಡೆಯಲು ಅನುವಾಗುವುದನ್ನು ಎಲ್ಲರೂ ನೋಡಿದರು.

ಅರ್ಥ:
ಆಯುಧ: ಅಸ್ತ್ರ, ಶಸ್ತ್ರ; ಹಿಡಿ: ಮುಷ್ಟಿ; ಒರೆ: ಬಳಿ, ಸವರು; ಉಗಿ: ಹೊರಹಾಕು; ಝಳಪಿಸು: ಹೊಳೆ;ರೌದ್ರ: ಭಯಂಕರ; ಸ್ಥಾಯಿ:ಸ್ಥಿರವಾದ, ನೆಲೆಗೊಂಡ; ಭಾವ: ಭಾವನೆ, ಚಿತ್ತವೃತ್ತಿ; ಭಾರ: ಹೊರೆ; ಭುಲ್ಲಯಿಸು: ಸಂತೋಷವಾಗಿ; ಭಯ: ಅಂಜಿಕೆ; ಅಡಗು: ಮರೆಯಾಗು; ರಾಯ: ರಾಜ; ಮೆಲ್ಲ: ನಿಧಾನ; ಪಾಯ: ಪಾದ, ಅಡಿ; ಪಲ್ಲವಿಸು: ಚಿಗುರು; ಉಪ್ಪರ: ಎತ್ತರ; ಘಾಯ: ಪೆಟ್ಟು; ಲಾಗಿಸು: ಜಂಘಿಸು, ಹಾರು; ಕಂಡು: ನೋಡಿ; ಅಖಿಳ: ಎಲ್ಲಾ;

ಪದವಿಂಗಡಣೆ:
ಆಯುಧವ +ಹಿಡಿದ್+ಒರೆಯನ್+ಉಗಿದನಡ್
ಆಯುಧವ+ ಝಳಪಿಸುತ+ ರೌದ್ರ
ಸ್ಥಾಯಿಭಾವದ +ಭಾರದಲಿ+ ಭುಲ್ಲಯಿಸಿ +ಭಯವಡಗಿ
ರಾಯನಲ್ಲಿಗೆ +ಮೆಲ್ಲ +ಮೆಲ್ಲನು
ಪಾಯಗತಿ+ ಪಲ್ಲವಿಸಲ್+ಉಪ್ಪರ
ಘಾಯದಲಿ +ಲಾಗಿಸುವ +ಪಾರ್ಥನೆ +ಕಂಡುದ್+ಅಖಿಳ+ಜನ

ಅಚ್ಚರಿ:
(೧) ರಾಯ, ಪಾಯ, ಘಾಯ – ಪ್ರಾಸ ಪದಗಳು
(೨) ಭ ಕಾರದ ತ್ರಿವಳಿ ಪದ – ಭಾರದಲಿ ಭುಲ್ಲಯಿಸಿ ಭಯವಡಗಿ

ನುಡಿಮುತ್ತುಗಳು: ಕರ್ಣ ಪರ್ವ, ೧೭ ಸಂಧಿ

  • ಮೇಲು ಮೇಲುಬ್ಬೇಳ್ವ ರೋಷ ಜ್ವಾಲೆ ಹೊದಿಸಿತು ವದನವನು ಕಣ್ಣಾಲಿ ಕಾಹೇರಿದವು – ಪದ್ಯ ೧
  • ಬೆರಗಿನಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ – ಪದ್ಯ ೬
  • ಸತ್ಯಾಭ್ಯುದಯವೇ ತನ್ನುದಯವದರಳಿವೆನ್ನ ಲಯವೆಂದ – ಪದ್ಯ ೭
  • ನುಡಿದ ಮಾತ್ರದಲಿರದು ಧರ್ಮದ ಬೆಡಗು ತಾನದು ಬೇರೆ – ಪದ್ಯ ೧೩ 
  • ಕ್ಷಿತಿಯೊಳಬುಜ ಮೃಣಾಳಕೋಸುಗ ಕೃತತಟಾಕವನೊಡೆದವೊಲು – ಪದ್ಯ ೨೦
  • ಏಸನೋದಿದಡೇನು ಪಾಪ ವಿಳಾಸ ರಚನಾ ರೌರವಾತ್ಮರ ವಾಸನೆಗಳವು ಬೇರೆ – ಪದ್ಯ ೨೨
  • ನೆರೆ ನೆನೆದುದಾತನ ಮೈ ವಿಲೋಚನವಾರಿ ಪೂರದಲಿ – ಪದ್ಯ ೨೩
  • ಖಳರ ದುಸ್ಸಹ ದುಷ್ಟವಚನದ ಹಿಳುಕು ಹೃದಯವ ಕೊಂಡು ಮರುಮೊನೆಮೊಳೆತ ಬಳಿಕವ ಬದುಕಿದವನೇ – ಪದ್ಯ ೨೬
  • ಎಲೆ ಯುಧಿಷ್ಠಿರ ಜನಿಸಿದೈ ಶಶಿಕುಲದ ವೀರ ಕ್ಷತ್ರ ಪಂತಿಯೊಳೆಳಮನದ ಕಾಳಿಕೆಯ ತೊಡಹದ ಗಂಡು ರೂಪಿನಲಿ – ಪದ್ಯ ೨೯ 
  • ದೇಹವನಳಿವುದೇ ಕೊಲೆಯಲ್ಲ ನಿನ್ನಗ್ಗಳಿಕೆಗಳ ನೀನಾಡಿ ನಿನ್ನನೆ ಕೊಂದುಕೊಳ್ಳೆಂದ – ಪದ್ಯ ೩೬ 
  • ತನ್ನನೆಕೊಂದವನು ತನ್ನಾಳುತನವನು ತಾನೆ ಹೊಗಳಿದರೆ – ಪದ್ಯ ೩೭ 
  • ಜಗಕೆ ಲೋಗರ ನಿಂದಿಸುವುದೇ ಹಿಂಸೆ- ಪದ್ಯ ೩೭
  • ಹರಹಿನೊಳುರುವ ಫಲಿತದ ಬೀಡು ಬಿಟ್ಟುದು ನಮ್ಮ ತನುವಿನಲಿ – ಪದ್ಯ ೪೨
  • ತರಣಿ ಬಿಜಯಂಗೈದರಬುಜದಸಿರಿಗೆ ಸುಮ್ಮಾನವೆ – ಪದ್ಯ ೪೭
  • ಕಿರೀಟಿಯ ಹೃದಯ ಹೊಗೆದುದು ಹೊತ್ತಿದನುಪಮ ಶೋಕವಹ್ನಿಯಲಿ – ಪದ್ಯ ೪೮
  • ಚರಣದಗ್ರದೊಳೊಡಲ ಹಾಯಿಕಿ ಹೊರಳಿದನು ಹೊನಲಿಡುವ ಲೋಚನವಾರಿ ಪೂರದಲಿ – ಪದ್ಯ ೫೦ 
  • ದುಷ್ಕಾಲವೀ ಸಾಮ್ರಾಜ್ಯ ಭೋಗವ್ಯಾಳ ವಿಷಕಂಜುವೆನು – ಪದ್ಯ ೫೨
  • ನೆಳಲಿಂಗೆ ಬೇರೆ ವಿವೇಕ ಚೇಷ್ಟೆಗಳೇ – ಪದ್ಯ ೫೪ 

ಪದ್ಯ ೧: ಧರ್ಮಜನ ಮಾತನ್ನು ಕೇಳಿ ಅರ್ಜುನನಿಗೆ ಏನಾಯಿತು?

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನಾಡಿದ ನುಡಿಯನಾಲಿಸಿ
ಕೇಳಿದನು ಕೆದರಿದನು ಜಡಿದವು ರೋಮರಾಜಿಗಳು
ಮೇಲು ಮೇಲುಬ್ಬೇಳ್ವ ರೋಷ
ಜ್ವಾಲೆ ಹೊದಿಸಿತು ವದನವನು ಕ
ಣ್ಣಾಲಿ ಕಾಹೇರಿದವು ಪಾರ್ಥಂಗೊಂದು ನಿಮಿಷದಲಿ (ಕರ್ಣ ಪರ್ವ, ೧೭ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಯುದ್ಧವೃತ್ತಾಂತವನ್ನು ಹೇಳುತ್ತಾ, ರಾಜ ಧರ್ಮಜನು ಆಡಿದ ಮಾತನ್ನು ಕೇಳಿ ಅರ್ಜುನನ ಮನಸ್ಸು ಕೆದರಿತು, ತನ್ನ ದೇಹದ ಕೂದಲುಗಳು ಎದ್ದು ನಿಂತವು, ಕೋಪವ ನರನಾಡಿಗಳಲ್ಲಿ ಹರಿದು ಉಬ್ಬೇಳಿ, ರೋಷದ ಅಗ್ನಿಯು ಮುಖದಿಂದ ಹೊರಳಿ, ಕಣ್ಣುಗಳು ಬೆಂಕಿಯನ್ನು ಉಗಿಯುತ್ತಿರುವಂತೆ ಪಾರ್ಥನು ತೋರಿದನು.

ಅರ್ಥ:
ಅವನಿಪ: ರಾಜ; ಕೇಳು: ಆಲಿಸು; ಭೂಪಾಲ: ರಾಜ; ಆಡಿದ: ಮಾತಾಡು; ನುಡಿ: ಮಾತು, ವಾಣಿ; ಆಲಿಸು: ಕೇಳು; ಕೆದರು: ಚದರಿಸು; ಜಡಿ: ಝಳಪಿಸು, ಅಲ್ಲಾಡು; ರೋಮ: ಕೂದಲು; ರೋಮರಾಜಿ: ಕೂದಲಿನ ಸಾಲು; ಮೇಲು: ನಂತರ; ಉಬ್ಬು: ಕಣ್ಣಿನ ಮೇಲಿನ ಕೂದಲಿನ ಸಾಲು; ಏಳ್ವ: ಅಧಿಕವಾಗು; ರೋಷ: ಕೋಪ; ಜ್ವಾಲೆ: ಬೆಂಕಿ; ಹೊದಿಸು: ಆವರಿಸು, ಮುಸುಕು; ವದನ: ಮುಖ; ಕಣ್ಣಾಲಿ: ಕಣ್ಣುಗುಡ್ಡೆ; ಕಾಹೇರು: ಉದ್ವೇಗಗೊಳ್ಳು;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಭೂ
ಪಾಲನ್+ಆಡಿದ +ನುಡಿಯನ್+ಆಲಿಸಿ
ಕೇಳಿದನು +ಕೆದರಿದನು+ ಜಡಿದವು+ ರೋಮರಾಜಿಗಳು
ಮೇಲು +ಮೇಲ್+ಉಬ್ಬೇಳ್ವ +ರೋಷ
ಜ್ವಾಲೆ +ಹೊದಿಸಿತು +ವದನವನು+ ಕ
ಣ್ಣಾಲಿ +ಕಾಹೇರಿದವು +ಪಾರ್ಥಂಗೊಂದು +ನಿಮಿಷದಲಿ

ಅಚ್ಚರಿ:
(೧) ಅವನಿಪ, ಭೂಪಾಲ; ಆಲಿಸಿ, ಕೇಳಿ – ಸಮನಾರ್ಥಕ ಪದ
(೨) ಕೋಪವನ್ನು ಚಿತ್ರಿಸುವ ಬಗೆ: ಮೇಲು ಮೇಲುಬ್ಬೇಳ್ವ ರೋಷ ಜ್ವಾಲೆ ಹೊದಿಸಿತು ವದನವನು ಕಣ್ಣಾಲಿ ಕಾಹೇರಿದವು