ಪದ್ಯ ೨೮: ಅರ್ಜುನನು ತನ್ನನ್ನು ಹೇಗೆ ಸಮರ್ಥಿಸಿಕೊಂಡನು?

ಹೇಳಲಂಜುವೆನಾ ಸುಶರ್ಮಕ
ನಾಳು ತಾಯಿಗೆ ಮಕ್ಕಳಾಗದೆ
ಬೀಳಹೊಯ್ದು ನಿಹಾರದಲಿ ತಿರುಗಿದೆನು ಹರಿಸಹಿತ
ಕೋಲಗುರುವಿನ ಮಗನಲೇ ಹರಿ
ಧಾಳಿ ಹರಿದಡಿಗಟ್ಟಿ ತಡೆದನು
ಹೇಳಿ ಫಲವಿನ್ನೇನೆನುತ ಬಿಸುಸುಯ್ದ ನಾ ಪಾರ್ಥ (ಕರ್ಣ ಪರ್ವ, ೧೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ತನ್ನನ್ನು ಹೀಗೆ ಹಂಗಿಸಿದ ಧರ್ಮಜನಿಗೆ ಅರ್ಜುನನು, ಎಲೈ ರಾಜನೇ ನಿಮಗೆ ಹೇಳಲು ಅಂಜುತ್ತೇನೆ, ಸುಶರ್ಮನ ಸೈನ್ಯದಲ್ಲಿ ತಾಯಿಗೆ ಮಕ್ಕಳ ಮೇಲೆ ವಾತ್ಸಲ್ಯ ಹಾರಿಹೋಗುವಂತೆ ಮಾಡಿ, ಬೀಳುವಂತೆ ಹೊಡೆದು ಆಗ ಉಂಟಾದ ಧೂಳಿನ ನಡುವೆ ಶ್ರೀಕೃಷ್ಣನೊಡನೆ ಹಿಂದಿರುಗಿದೆ. ಅಷ್ಟರಲ್ಲಿ ಅಶ್ವತ್ಥಾಮನು ಧಾಳಿಯಿಟ್ಟು ಅಡ್ಡಗಟ್ಟಿ ನನ್ನನ್ನು ತಡೆದನು, ಇನ್ನೇನೆಂದು ನಾನು ಹೇಳಲಿ ಎಂದು ನಿಟ್ಟುಸಿರು ಬಿಟ್ಟನು.

ಅರ್ಥ:
ಹೇಳು: ತಿಳಿಸು; ಅಂಜು: ಹೆದರು; ತಾಯಿ: ಮಾತೆ; ಮಕ್ಕಳು: ಸುತ; ಬೀಳು: ತ್ಯಜಿಸು; ಹೊಯ್ದು: ಹೊರಡು; ನಿಹಾರ: ಧೂಳು, ಮಂಜು; ತಿರುಗು: ಓಡಾಡು; ಹರಿ: ಕೃಷ್ಣ; ಸಹಿತ: ಜೊತೆ; ಕೋಲಗುರು: ಬಾಣದ ಆಚಾರ್ಯ; ಮಗ: ಸುತ; ಹರಿ: ಸಿಂಹ, ಕಡಿ, ಕತ್ತರಿಸು; ಅಡಿಗಟ್ಟು: ಮಧ್ಯಪ್ರವೇಶ; ತಡೆ: ನಿಲ್ಲಿಸು; ಫಲ: ಪ್ರಯೋಜನ; ಬಿಸುಸುಯ್: ನಿಟ್ಟುಸಿರುಬಿಡು;

ಪದವಿಂಗಡಣೆ:
ಹೇಳಲ್+ಅಂಜುವೆನಾ +ಸುಶರ್ಮಕನ್
ಆಳು +ತಾಯಿಗೆ +ಮಕ್ಕಳಾಗದೆ
ಬೀಳಹೊಯ್ದು +ನಿಹಾರದಲಿ +ತಿರುಗಿದೆನು +ಹರಿಸಹಿತ
ಕೋಲಗುರುವಿನ+ ಮಗನಲೇ +ಹರಿ
ಧಾಳಿ +ಹರಿದ್+ಅಡಿಗಟ್ಟಿ +ತಡೆದನು
ಹೇಳಿ+ ಫಲವಿನ್ನೇನೆನುತ+ ಬಿಸುಸುಯ್ದ +ನಾ +ಪಾರ್ಥ

ಅಚ್ಚರಿ:
(೧) ಹರಿಸಹಿತ, ಹರಿಧಾಳಿ, ಹರಿದಡಿಗಟ್ಟಿ – ಪದಗಳ ಪ್ರಯೋಗ

ಪದ್ಯ ೨೭: ಅರ್ಜುನನಲ್ಲಿ ಯಾವ ರಸಭಾವ ಹೊಮ್ಮಿತು?

ಉಕ್ಕಿದುದು ತನಿ ವೀರರಸ ಕುದಿ
ದುಕ್ಕಿ ಹರಿದುದು ರೌದ್ರ ರಸವವ
ರಕ್ಕಜವ ನಭಕೊತ್ತಿ ಪರಿದುದು ಶಾಂತಿರಸಲಹರಿ
ಮಿಕ್ಕು ಬಹಳ ಕ್ರೋಧವೊಡಲೊಳ
ಗುಕ್ಕಿ ತಮಳೋತ್ಸಾಹ ಚಾಪಳ
ಸುಕ್ಕಿತೊಂದೇ ನಿಮಿಷ ಮೋನದೊಳಿರ್ದನಾ ಪಾರ್ಥ (ಕರ್ಣ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮಜನ ಹಂಗಿಸುವ ನುಡಿಗಳನ್ನು ಕೇಳಿ ಶೂರನಾದ ಅರ್ಜುನನ ಮನಸ್ಸಿನಲ್ಲಿ ವೀರರಸ ಉಕ್ಕಿತು. ರೌದ್ರರಸವು ದೇಹದ ಕಣಕಣದಲ್ಲಿ ಹೊರಹೊಮ್ಮಿತು, ಮತ್ಸರ ಹೊಟ್ಟೆಕಿಚ್ಚಿನ ರಸವನ್ನು ನಭಕ್ಕೆ ತೂರಿ ಶಾಂತಿರಸವು ಮನವನ್ನು ಆವರಿಸಿತು. ಅತಿಶಯ ಕೋಪವುಂಟಾಗಿ ನಿರುತ್ಸಾಹತೆ ಮೂಡಿತು. ಒಂದು ಕ್ಷಣದಲ್ಲಿ ಚಿತ್ತದ ಚಪಲತೆ ಮಾಯವಾಗಿ ಮೌನವು ಅರ್ಜುನನನ್ನು ಆವರಿಸಿತು.

ಅರ್ಥ:
ಉಕ್ಕು: ಹೊಮ್ಮಿ ಬರು ; ತನಿ:ಅತಿಶಯವಾಗು; ವೀರ: ಕಲಿ, ಶೂರ, ಪರಾಕ್ರಮಿ; ರಸ: ತಿರುಳು, ಸಾರ; ಕುದಿ: ಕೋಪಗೊಳ್ಳು, ಮರುಳು; ಹರಿ: ಚದರು; ರೌದ್ರ: ಭಯಂಕರ; ಅಕ್ಕಜ: ಹೊಟ್ಟೆಕಿಚ್ಚು, ಅಸೂಯೆ; ನಭ: ಆಗಸ; ಒತ್ತು: ನೂಕು; ಪರಿ: ರೀತಿ; ಶಾಂತಿ: ಮೌನ, ನೀರವತೆ; ಲಹರಿ: ರಭಸ, ಆವೇಗ; ಮಿಕ್ಕು: ಉಳಿದ; ಬಹಳ: ತುಂಬ; ಕ್ರೋಧ: ಕೋಪ; ಒಡಲು: ದೇಹ; ತಮ: ಅಂಧಕಾರ; ಉತ್ಸಾಹ: ಶಕ್ತಿ, ಬಲ, ಹುರುಪು; ಚಾಪಳ: ಚಪಲತೆ; ಸುಕ್ಕು:ನಿರುತ್ಸಾಹ, ಮಂಕಾಗು; ಮೋನ: ಮಾತನಾಡದಿರುವಿಕೆ, ಮೌನ;

ಪದವಿಂಗಡಣೆ:
ಉಕ್ಕಿದುದು +ತನಿ +ವೀರರಸ +ಕುದಿದ್
ಉಕ್ಕಿ +ಹರಿದುದು +ರೌದ್ರ +ರಸವವರ್
ಅಕ್ಕಜವ +ನಭಕೊತ್ತಿ+ ಪರಿದುದು+ ಶಾಂತಿ+ರಸ+ಲಹರಿ
ಮಿಕ್ಕು +ಬಹಳ +ಕ್ರೋಧ+ಒಡಲೊಳಗ್
ಉಕ್ಕಿ +ತಮಳೋತ್ಸಾಹ +ಚಾಪಳ
ಸುಕ್ಕಿತ್+ಒಂದೇ +ನಿಮಿಷ+ ಮೋನದೊಳ್+ಇರ್ದನಾ +ಪಾರ್ಥ

ಅಚ್ಚರಿ:
(೧) ಅರ್ಜುನನಲ್ಲಿ ಉಕ್ಕಿದ ಹಲವು ರಸಗಳು – ವೀರ, ರೌದ್ರ, ಶಾಂತಿ, ಕ್ರೋಧ

ಪದ್ಯ ೨೬: ಧರ್ಮಜನು ಅರ್ಜುನನ ಒಣದೊಡ್ಡಸ್ತಿಕೆಯನ್ನು ನಿಲ್ಲಿಸಲು ಏಕೆ ಹೇಳಿದ?

ಮಲೆತು ಧಾಳಾಧೂಳಿಯಲಿ ಬಲ
ಸುಳಿ ಮಸಗಿಯೆನ್ನೊಬ್ಬನನು ಮೈ
ಬಳಸಿ ಕಾದಿತು ವೀರ ಕರ್ಣನ ಕೂಡೆ ತಲೆಯೊತ್ತಿ
ಒಲವರವು ನಿನಗುಳ್ಳರಾಗಳೆ
ನಿಲಿಸಿದಾ ನೀ ಬಂದು ಬಯಲ
ಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ (ಕರ್ಣ ಪರ್ವ, ೧೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಮ್ಮ ಸೈನ್ಯವೆಲ್ಲಾ ಕರ್ಣನನ್ನು ತಡೆದು ನನ್ನನ್ನು ಸುಟ್ಟುಗಟ್ಟಿ ಅವನೊಡನೆ ಘೋರತರವಾಗಿ ಯುದ್ಧಮಾಡಿತು. ನನ್ನ ಮೇಲೆ ಪ್ರೀತಿಯಿದಿದ್ದರೆ ಆಗ ನೀನು ಬಂದು ಕರ್ಣನನ್ನು ನಿಲ್ಲಿಸಿದೆಯಾ? ಕೇವಲ ಒಣದೊಡ್ಡಸ್ತಿಕೆಯನ್ನು ಹೇಳಿಕೊಳ್ಳಬೇಡ ಬಿಡು ಎಂದು ಧರ್ಮಜನು ಅರ್ಜುನನನ್ನು ಹಂಗಿಸಿದನು.

ಅರ್ಥ:
ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಬಲ: ಶಕ್ತಿ, ಸೈನ್ಯ; ಸುಳಿ: ಸುತ್ತು, ಆವರ್ತ; ಮಸಗು: ಹರಡು; ಕೆರಳು; ಮೈ: ತನು,ದೇಹ; ಬಳಸು: ಉಪಯೋಗಿಸು; ಕಾದು: ಹೋರಾಡು; ವೀರ: ಪರಾಕ್ರಮಿ; ಕೂಡೆ: ಜೊತೆ; ತೆಲೆ: ಶಿರ; ಒತ್ತು: ಚುಚ್ಚು, ತಿವಿ, ನೂಕು; ಒಲವು: ಪ್ರೀತಿ; ನಿಲಿಸು: ತಡೆ; ಬಂದು: ಆಗಮಿಸು; ಬಯಲ: ನಿರರ್ಥಕವಾದುದು; ಅಗ್ಗಳಿಕೆ: ಶ್ರೇಷ್ಠತೆ, ಹೊಗಳಿಕೆ; ಬಿಡು: ತ್ಯಜಿಸು; ಕೆದರು: ಹರಡು; ಮಾಣ್: ಬಿಡು; ನೃಪ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ಮಲೆತು +ಧಾಳಾಧೂಳಿಯಲಿ +ಬಲ
ಸುಳಿ +ಮಸಗಿ+ಎನ್ನೊಬ್ಬನನು +ಮೈ
ಬಳಸಿ +ಕಾದಿತು +ವೀರ +ಕರ್ಣನ +ಕೂಡೆ +ತಲೆಯೊತ್ತಿ
ಒಲವರವು+ ನಿನಗುಳ್ಳರ್+ಆಗಳೆ
ನಿಲಿಸಿದಾ +ನೀ +ಬಂದು +ಬಯಲ್
ಅಗ್ಗಳಿಕೆಯನೆ +ಬಿಡೆ +ಕೆದರುತಿಹೆ+ ಮಾಣೆಂದು +ನೃಪ +ನುಡಿದ

ಅಚ್ಚರಿ:
(೧) ಕೇವಲ ಹೊಗಳಿಕೆ ನಿಲ್ಲಿಸು ಎಂದು ಹೇಳುವ ಪರಿ – ಬಯಲಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ

ಪದ್ಯ ೨೫: ಕರ್ಣನು ಯಾರಿಗೆ ದೇವ?

ಕಾದಿ ನೊಂದೆನು ತಾನು ಬಳಿಕ ವೃ
ಕೋದರನೆಯಡಹಾಯ್ದನಾತನ
ಕಾದಿ ನಿಲಿಸಿ ಮದೀಯ ರಥವನು ಮತ್ತೆ ಕೆಣಕಿದನು
ಮೂದಲಿಸಿ ಸಹದೇವ ನಕುಲರು
ಕಾದಲಿವದಿರ ಮುರಿದನಗ್ಗದ
ಕೈದುಕಾರರ ದೇವ ಕರ್ಣನ ಗೆಲುವರಾರೆಂದ (ಕರ್ಣ ಪರ್ವ, ೧೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನ, ನಾನು ಯುದ್ಧ ಮಾಡಿ ನೋವುಂಡೆ, ಆಮೇಲೆ ಭೀಮನೇ ಅಡ್ಡಗಟ್ಟಲು ಅವನೊಡನೆ ಕಾದಿ ನಿಲ್ಲಿಸಿ ಮತ್ತೆ ನನ್ನ ರಥವನ್ನು ತಡೆದನು. ಆಗ ನಕುಲ ಸಹದೇವರು ಅವನನ್ನು ಮೂದಲಿಸಿ ತಡೆದು ಕಾದಿದರು, ಆದರೆ ಕರ್ಣನು ಅವರನ್ನೂ ಗೆದ್ದ. ಶಸ್ತ್ರಧಾರರಿಗೆ ಈತನೇ ದೇವ ಅವನನ್ನು ಗೆಲ್ಲುವವರಾರು ಎಂದು ಧರ್ಮಜನು ಕರ್ಣನ ಪರಾಕ್ರಮವನ್ನು ಅರ್ಜುನನಿಗೆ ಹೇಳಿದನು.

ಅರ್ಥ:
ಕಾದಿ: ಹೋರಾಡಿ; ನೊಂದು: ಬೇಸರ; ಬಳಿಕ: ನಂತರ; ವೃಕೋದರ: ತೋಳದಂತ ಹೊಟ್ಟೆ (ಭೀಮ); ಅಡಹಾಯ್ದು: ಮಧ್ಯಬಂದು; ನಿಲಿಸು: ತಡೆ; ಮದೀಯ: ತನ್ನ; ರಥ: ಬಂಡಿ; ಕೆಣಕು: ರೇಗಿಸು, ಪ್ರಚೋದಿಸು; ಮೂದಲಿಸು: ಹಂಗಿಸು; ಇವದಿರು: ಇಷ್ಟು ಜನ; ಮುರಿ: ಸೀಳು; ಅಗ್ಗ: ಶ್ರೇಷ್ಠ; ಕೈದುಕಾರ: ಆಯುಧ ಹಿಡಿದ ಸೈನಿಕ; ದೇವ: ಭಗವಂತ; ಗೆಲುವು: ಜಯ;

ಪದವಿಂಗಡಣೆ:
ಕಾದಿ +ನೊಂದೆನು +ತಾನು +ಬಳಿಕ +ವೃ
ಕೋದರನೆ +ಅಡಹಾಯ್ದನ್+ಆತನ
ಕಾದಿ +ನಿಲಿಸಿ+ ಮದೀಯ +ರಥವನು +ಮತ್ತೆ +ಕೆಣಕಿದನು
ಮೂದಲಿಸಿ+ ಸಹದೇವ +ನಕುಲರು
ಕಾದಲ್+ಇವದಿರ+ ಮುರಿದನ್+ಅಗ್ಗದ
ಕೈದುಕಾರರ+ ದೇವ +ಕರ್ಣನ +ಗೆಲುವರಾರೆಂದ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಬಗೆ – ಅಗ್ಗದ ಕೈದುಕಾರರ ದೇವ

ಪದ್ಯ ೨೪: ಕರ್ಣನನ್ನು ಹೇಗೆ ಗೆಲ್ಲುವೆ ಎಂದು ಧರ್ಮಜನು ಅರ್ಜುನನನ್ನು ಕೇಳಿದನು?

ಮುರಿದು ಹರಿಹಂಚಾದ ನಿಜ ಮೋ
ಹರವ ನೆರೆ ಸಂತೈಸಿ ಜೋಡಿಸಿ
ಜರೆದು ಗರಿಗಟ್ಟಿದ ವಿರೋಧಿವ್ರಜದ ಥಟ್ಟಣೆಯ
ಮುರಿದು ಕುರಿದರಿ ಮಾಡಿ ದೊರೆಗಳ
ನರಸಿ ಕಾದಿ ವಿಭಾಡಿಸುವ ರಣ
ದುರಬೆಕಾರನನೆಂತು ಸೈರಿಸಿ ಗೆಲುವೆ ನೀನೆಂದ (ಕರ್ಣ ಪರ್ವ, ೧೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಧರ್ಮಜನು ಕರ್ಣನ ಪರಾಕ್ರಮವನ್ನು ವರ್ಣಿಸುತ್ತಾ, ಕರ್ಣನ ಸೈನ್ಯವು ಚೆಲ್ಲುವಂತೆ ಹೊಡೆದರೆ, ಅದನ್ನು ಸಂತೈಸಿ ಜೋಡಿಸಿಕೊಳ್ಳುವನು. ವೈರಿಗಳ ಸೈನ್ಯದ ಒಗ್ಗಟ್ಟನ್ನು ಮುರಿದು ಕುರಿಗಳಂತೆ ವಿರೋಧಿಗಳನ್ನು ಕೊಂದು ದೊರೆಗಳನ್ನು ಹುಡುಕಿ ಕಾದಿ ಬಡಿದು ಹಾಕುವ ಮಹಾಯೋಧನನ್ನು ನೀನು ಹೇಗೆ ತಡೆಯುವೆ ಹೇಗೆ ಗೆಲ್ಲುವೆ ಎಂದು ಪ್ರಶ್ನಿಸಿದನು.

ಅರ್ಥ:
ಮುರಿ: ಸೀಳು; ಹರಿಹಂಚಾದ: ಚೆಲ್ಲಾಪಿಲ್ಲಿಯಾದ; ನಿಜ: ದಿಟ; ಮೋಹರ: ಯುದ್ಧ, ಕಾಳಗ; ನೆರೆ: ಹೆಚ್ಚು; ಸಂತೈಸು: ಸಮಾಧಾನಿಸು; ಜೋಡಿಸು: ಕೂಡು; ಜರೆ: ಬಯ್ಯು; ಗರಿಗಟ್ಟು: ಶಕ್ತಿಶಾಲಿಯಾಗು; ವಿರೋಧ: ವೈರಿ, ಶತ್ರು; ವ್ರಜ: ಗುಂಪು; ಥಟ್ಟಣೆ: ಮಹಾಸಮೂಹ, ಮುತ್ತಿಗೆ; ಕುರಿದರಿ: ಸಣ್ಣದಾಗಿ ಕತ್ತರಿಸಿ; ದೊರೆ: ರಾಜ; ಅರಸು: ಹುಡುಕಿ; ಕಾದು: ಯುದ್ಧ; ವಿಭಾಡಿಸು: ನಾಶಮಾಡು; ರಣ:ಯುದ್ಧ; ಉರುಬೆ:ಅಬ್ಬರ; ಸೈರಿಸು: ತಾಳು, ಸಹಿಸು; ಗೆಲುವು: ಜಯ;

ಪದವಿಂಗಡಣೆ:
ಮುರಿದು +ಹರಿಹಂಚಾದ +ನಿಜ +ಮೋ
ಹರವ +ನೆರೆ +ಸಂತೈಸಿ +ಜೋಡಿಸಿ
ಜರೆದು +ಗರಿಗಟ್ಟಿದ +ವಿರೋಧಿ+ವ್ರಜದ+ ಥಟ್ಟಣೆಯ
ಮುರಿದು +ಕುರಿದರಿ+ ಮಾಡಿ +ದೊರೆಗಳನ್
ಅರಸಿ +ಕಾದಿ +ವಿಭಾಡಿಸುವ+ ರಣ
ದುರಬೆಕಾರನನ್+ಎಂತು +ಸೈರಿಸಿ+ ಗೆಲುವೆ +ನೀನೆಂದ

ಅಚ್ಚರಿ:
(೧) ಹರಿಹಂಚಾದ, ಗರಿಗಟ್ಟಿದ, ಕುರಿದರಿ, ರಣದುರುಬೆಕಾರ – ಪದಗಳ ಬಳಕೆ

ಪದ್ಯ ೨೩: ಕರ್ಣನ ಯಾವುದರಲ್ಲಿ ರಸಿಕನೆಂದು ಧರ್ಮಜನು ವರ್ಣಿಸಿದನು?

ಎಲ್ಲಿ ಕರ್ಣನು ತಿರುಗಿ ನೋಡಿದ
ಡಲ್ಲಿ ತಾನೆಡವಂಕ ಬಲ ಮುಖ
ದಲ್ಲಿ ಸೂತಜನೆಂಟು ದೆಸೆಗಳ ನೋಡೆ ಕರ್ಣಮಯ
ಎಲ್ಲಿ ನೋಡಿದಡಲ್ಲಿ ಕರ್ಣನ
ಬಿಲ್ಲ ಬೊಬ್ಬೆ ರಥಾಶ್ವರವವೆದೆ
ದಲ್ಲಣದ ದೆಖ್ಖಾಳ ರಚನಾ ರಸಿಕನವನೆಂದ (ಕರ್ಣ ಪರ್ವ, ೧೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯಾವ ಕಡೆ ತಿರುಗಿ ನೋಡಿದರೂ ಅಲ್ಲಿ ಕರ್ಣನೇ ಕಾಣುತ್ತಿದ್ದನು. ಎಡಕ್ಕೆ, ಬಲಕ್ಕೆ, ರಾಧೇಯನೇ, ಎಂತು ದಿಕ್ಕುಗಳೂ ಕರ್ಣಮಯವಾಗಿತ್ತು. ಎಲ್ಲಿ ಹೋದರೂ ಅಲ್ಲಿ ಕರ್ಣನ ಧನುಷ್ಟಂಕಾರ, ಅಲ್ಲಿ ಅವನ ಕುದುರೆಗಳ ಹೇಷಾರವ. ಎದೆ ನಡುಗಿಸುವಂತಹ ಯುದ್ಧ ಚಾತುರ್ಯ, ಅವನು ಶತ್ರುಗಳಿಗೆ ಭೀತಿಹುಟ್ಟಿಸುವಲ್ಲಿ ರಸಿಕ ನೆಂದು ಕರ್ಣನ ಪರಾಕ್ರಮವನ್ನು ಧರ್ಮಜನು ವರ್ಣಿಸಿದನು.

ಅರ್ಥ:
ತಿರುಗು: ಅಲೆದಾಡು, ಸುತ್ತು, ಸಂಚರಿಸು; ನೋಡು: ವೀಕ್ಷಿಸು; ವಂಕ: ಬದಿ, ಮಗ್ಗುಲು; ಎಡ: ವಾಮ; ಬಲ: ದಕ್ಷಿಣ ಪಾರ್ಶ್ವ; ಮುಖ: ಆನನ; ಸೂತಜ: ಸೂತನಮಗ (ಕರ್ಣ); ದೆಸೆ: ದಿಕ್ಕು; ಬಿಲ್ಲು: ಚಾಪ; ಬೊಬ್ಬೆ: ಆರ್ಭಟ; ರಥ: ಬಂಡಿ; ಅಶ್ವ: ಕುದುರೆ; ರವ: ಶಬ್ದ; ಎದೆ: ವಕ್ಷಸ್ಥಳ; ತಲ್ಲಣ: ಅಂಜಿಕೆ, ಭಯ; ದೆಖ್ಖಾಳ: ಗೊಂದಲ, ಗಲಭೆ; ರಚನೆ: ನಿರ್ಮಾಣ; ರಸಿಕ: ಆಸಕ್ತಿಯುಳ್ಳವನು

ಪದವಿಂಗಡಣೆ:
ಎಲ್ಲಿ +ಕರ್ಣನು +ತಿರುಗಿ +ನೋಡಿದಡ್
ಅಲ್ಲಿ +ತಾನ್+ಎಡವಂಕ+ ಬಲ+ ಮುಖ
ದಲ್ಲಿ +ಸೂತಜನ್+ಎಂಟು +ದೆಸೆಗಳ +ನೋಡೆ +ಕರ್ಣಮಯ
ಎಲ್ಲಿ +ನೋಡಿದಡಲ್ಲಿ +ಕರ್ಣನ
ಬಿಲ್ಲ+ ಬೊಬ್ಬೆ+ ರಥ+ಅಶ್ವ+ರವವ್+ಎದೆ
ತಲ್ಲಣದ +ದೆಖ್ಖಾಳ +ರಚನಾ +ರಸಿಕನ್+ಅವನೆಂದ

ಅಚ್ಚರಿ:
(೧) ಕರ್ಣನ ರಸಿಕತೆ – ಎದೆ ದಲ್ಲಣದ ದೆಖ್ಖಾಳ ರಚನಾ ರಸಿಕ
(೨) ಕರ್ಣ, ಸೂತಜ – ಕರ್ಣನನ್ನು ಕರೆದ ಬಗೆ