ಪದ್ಯ ೪೦: ಭೀಮನು ಧರ್ಮರಾಯನನ್ನು ನೋಡಲು ಅರ್ಜುನನ್ನೇಕೆ ಹೋಗಲು ಹೇಳಿದನು?

ಎಲೆ ಧನಂಜಯ ನೀನೆ ಬಲುಗೈ
ಯುಳಿದವರು ರಣಖೇಡರೇ ಕುರು
ಬಲವನೊಬ್ಬನೆ ಕೇಣಿಗೊಂಡೆನು ಕರ್ಣ ಮೊದಲಾಗಿ
ಅಳಿಕಿಸುವೆನೀಕ್ಷಣಕೆ ತನ್ನ
ಗ್ಗಳಿಕೆಯನು ನೋಡವನಿಪಾಲನ
ಬಳಲಿಕೆಯ ಸಂತೈಸು ನಡೆ ನೀನೆಂದನಾ ಭೀಮ (ಕರ್ಣ ಪರ್ವ, ೧೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನೊಬ್ಬನೇ ವೀರ ಉಳಿದವರು ರಣಕ್ಕೆ ಹೆದರುವ ಹೇಡಿಗಳೆಂದು ನೀನು ತಿಳಿದಿರುವೆಯಾ? ಕರ್ಣನು ಸೇರಿದಂತೆ ಸಮಸ್ತ ಕುರುಸೈನ್ಯವನ್ನು ನಾನು ಗುತ್ತಿಗೆ ಪಡೆದು ಬೆದರಿಸುತ್ತೇನೆ, ನೀನು ಹೋಗಿ ಅಣ್ಣನನ್ನು ಉಪಚರಿಸು ನನ್ನ ಪರಾಕ್ರಮವನ್ನು ನೋಡು ಎಂದು ಭೀಮನು ಅರ್ಜುನನಿಗೆ ಹೇಳಿದನು.

ಅರ್ಥ:
ಬಲುಗೈ: ಪರಾಕ್ರಮಿ; ಉಳಿದ: ಮಿಕ್ಕ; ರಣ: ಯುದ್ಧ; ಖೇಡ: ಹೆದರು; ಬಲ:ಸೈನ್ಯ; ಕೇಣಿ: ಪಾಲು; ಭಾಗ, ಗುತ್ತಿಗೆ; ಮೊದಲು: ಆದಿ; ಅಳಿ: ನಾಶಮಾಡು; ಅಳುಕು: ಹೆದರಿಕೆ; ಕ್ಷಣ: ಸಮಯ; ಅಗ್ಗಳಿಕೆ: ಶ್ರೇಷ್ಠ; ನೋಡು: ವೀಕ್ಷಿಸು; ಅವನಿಪಾಲ: ರಾಜ; ಬಳಲಿಕೆ: ಆಯಾಸ; ಸಂತೈಸು: ಸಮಾಧಾನ ಪಡಿಸು; ನಡೆ: ಹೊರಡು;

ಪದವಿಂಗಡಣೆ:
ಎಲೆ +ಧನಂಜಯ +ನೀನೆ +ಬಲುಗೈ
ಯುಳಿದವರು+ ರಣಖೇಡರೇ +ಕುರು
ಬಲವನ್+ಒಬ್ಬನೆ +ಕೇಣಿಗೊಂಡೆನು +ಕರ್ಣ +ಮೊದಲಾಗಿ
ಅಳಿಕಿಸುವೆನ್+ಈಕ್ಷಣಕೆ +ತನ್ನ್
ಅಗ್ಗಳಿಕೆಯನು +ನೋಡ್+ಅವನಿಪಾಲನ
ಬಳಲಿಕೆಯ +ಸಂತೈಸು +ನಡೆ +ನೀನೆಂದನಾ +ಭೀಮ

ಅಚ್ಚರಿ:
(೧) ಅರ್ಜುನನನ್ನು ಕಾಲೆಳೆಯುವ ಬಗೆ – ನೀನೆ ಬಲುಗೈ ಯುಳಿದವರು ರಣಖೇಡರೇ

ಪದ್ಯ ೩೯: ಅರ್ಜುನನು ಭೀಮನನ್ನು ಯಾರ ಬಳಿ ಹೋಗಲು ಹೇಳಿದ?

ಆದಡೆಲೆ ಪವಮಾನಸುತ ನೀ
ನಾದರಿಸು ನಡೆ ನೃಪತಿಯನು ನಾ
ಕಾದುವೆನು ಕೌರವರ ಸಕಲಬಲ ಪ್ರಘಾಟದಲಿ
ಕೈದುಕಾರರು ನಿಖಿಲ ದೆಸೆಗಳ
ಲೈದಿ ಬರುತಿದೆ ನೀ ಮರಳು ನಾ
ಛೇದಿಸುವೆನರೆಘಳಿಗೆ ಮಾತ್ರದಲೆಂದನಾ ಪಾರ್ಥ (ಕರ್ಣ ಪರ್ವ, ೧೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹಾಗಾದರೆ ಎಲೆ ಭೀಮ ನೀನು ಅರಸನನ್ನು ಸಂತೈಸಲು ಅವನ ಬಳಿಗೆ ಹೋಗು, ನಾನೊಬ್ಬನೇ ಕೌರವ ಬಲವನ್ನೆಲ್ಲಾ ಇದಿರಿಸುತ್ತೇನೆ. ಆಯುಧವನ್ನು ಹಿಡಿದವರು ಎಲ್ಲಾ ದಿಕ್ಕುಗಳಿಂದಲೂ ನಮ್ಮ ಮೇಲೆ ಬರುತ್ತಿದ್ದಾರೆ, ಇವರೆಲ್ಲರನ್ನು ಅರೆಗಳಿಗೆಯಲ್ಲಿ ಸೋಲಿಸುತ್ತೇನೆ. ನೀನು ಅಣ್ಣನ ಬಳಿಗೆ ಹೋಗು ಎಂದು ಅರ್ಜುನನು ಭೀಮನಿಗೆ ತಿಳಿಸಿದನು.

ಅರ್ಥ:
ಆದಡ್: ಹಾಗಾದರೆ; ಪವಮಾನಸುತ: ವಾಯುಪುತ್ರ; ಆದರ: ಉಪಕಾರ, ಪ್ರೀತಿ; ನಡೆ: ಹೊರಡು; ನೃಪತಿ: ರಾಜ; ಕಾದು: ಯುದ್ಧ; ಸಕಲಬಲ: ಎಲ್ಲಾ ಸೈನ್ಯ; ಪ್ರಘಾಟ: ಬಲವಾದ ಹೊಡೆತ; ಕೈದು: ಆಯುಧ, ಕತ್ತಿ; ನಿಖಿಲ: ಎಲ್ಲಾ; ದೆಸೆ: ದಿಕ್ಕು; ಐದು: ಬಂದು ಸೇರು; ಬರು: ಆಗಮಿಸು; ಮರಳು: ಹಿಂದಿರುಗು; ಛೇದಿಸು: ಸಂಹರಿಸು; ಅರೆಘಳಿಗೆ: ನಿಮಿಷಾರ್ಧದಲಿ; ಮಾತ್ರ: ಕೇವಲ;

ಪದವಿಂಗಡಣೆ:
ಆದಡ್+ಎಲೆ +ಪವಮಾನಸುತ+ ನೀನ್
ಆದರಿಸು +ನಡೆ +ನೃಪತಿಯನು +ನಾ
ಕಾದುವೆನು +ಕೌರವರ +ಸಕಲಬಲ+ ಪ್ರಘಾಟದಲಿ
ಕೈದುಕಾರರು +ನಿಖಿಲ +ದೆಸೆಗಳಲ್
ಐದಿ+ ಬರುತಿದೆ+ ನೀ +ಮರಳು +ನಾ
ಛೇದಿಸುವೆನ್+ಅರೆಘಳಿಗೆ +ಮಾತ್ರದಲ್+ಎಂದನಾ +ಪಾರ್ಥ

ಅಚ್ಚರಿ:
(೧) ನೀನ್ ಆದರಿಸು, ನಾ ಕಾದುವೆನು; ನೀ ಮರಳು, ನಾ ಛೇದಿಸುವೆ
(೨) ನ ಕಾರದ ಸಾಲು ಪದ – ನೀನಾದರಿಸು ನಡೆ ನೃಪತಿಯನು ನಾಕಾದುವೆನು

ಪದ್ಯ ೩೮: ಭೀಮನು ಅರ್ಜುನನಿಗೆ ಏನು ಹೇಳಿದ?

ಬರುತ ಭೀಮನ ಕಂಡರಾತನ
ಹೊರೆಗೆ ಬಿಟ್ಟರು ರಥವನರ್ಜುನ
ಕರೆದು ಬೆಸಗೊಂಡನು ನೃಪಾಲನ ಕ್ಷೇಮ ಕೌಶಲವ
ಅರಸನಿಂದು ಸಜೀವಿಯೋ ಸುರ
ಪುರ ನಿವಾಸಿಯೊ ಹದನನೇನೆಂ
ದರಿಯೆನೀ ಸಂಗ್ರಾಮ ಧುರವೆನಗೆಂದನಾ ಭೀಮ (ಕರ್ಣ ಪರ್ವ, ೧೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮರಾಯನ ಪಾಳೆಯದತ್ತ ಹೋಗುತ್ತಿರಲು ದಾರಿಯಲ್ಲಿ ಭೀಮನನ್ನು ಕಂಡು ಅವನ ಬಳಿಗೆ ರಥವನ್ನು ಬಿಟ್ಟು, ಅವನಲ್ಲಿ ಅರಸನ ಯೋಗಕ್ಷೇಮವನ್ನು ಕುರಿತು ಕೇಳಿದರು. ಭೀಮನು ಧರ್ಮಜನು ಜೀವಿಸಿರುವನೋ, ಸ್ವರ್ಗಸ್ಥನಾಗಿರುವನೋ ನನಗೆ ತಿಳಿಯದು, ಈ ಯುದ್ಧದ ಭರದಲ್ಲಿದ್ದೇನೆ ಎಂದು ಅರ್ಜುನನಿಗೆ ತಿಳಿಸಿದನು.

ಅರ್ಥ:
ಬರುತ: ಆಗಮಿಸು; ಕಂಡು: ನೋಡು; ಹೊರೆ: ರಕ್ಷಣೆ, ಆಶ್ರಯ; ರಥ: ಬಂಡಿ; ಕರೆ: ಬರೆಮಾಡು; ಬೆಸ: ಕೆಲಸ, ಕಾರ್ಯ; ನೃಪಾಲ: ರಾಜ; ಕ್ಷೇಮ: ಆರೋಗ್ಯ; ಕೌಶಲ: ಕ್ಷೇಮ, ಸುಖ; ಅರಸ:ರಾಜ; ಸಜೀವಿ: ಜೀವವಿರುವವ; ಸುರಪುರ: ಸ್ವರ್ಗ; ನಿವಾಸಿ: ವಾಸಸ್ಥಾನ; ಹದ: ಸರಿಯಾದ ಸ್ಥಿತಿ; ಅರಿ: ತಿಳಿ; ಸಂಗ್ರಾಮ: ಯುದ್ಧ; ಧುರ: ಭರ, ವೇಗ

ಪದವಿಂಗಡಣೆ:
ಬರುತ +ಭೀಮನ +ಕಂಡರ್+ಆತನ
ಹೊರೆಗೆ+ ಬಿಟ್ಟರು +ರಥವನ್+ಅರ್ಜುನ
ಕರೆದು+ ಬೆಸಗೊಂಡನು +ನೃಪಾಲನ+ ಕ್ಷೇಮ +ಕೌಶಲವ
ಅರಸನ್+ಇಂದು+ ಸಜೀವಿಯೋ +ಸುರ
ಪುರ+ ನಿವಾಸಿಯೊ+ ಹದನನ್+ಏನೆಂದ್
ಅರಿಯೆನ್+ಈ+ ಸಂಗ್ರಾಮ +ಧುರವೆನಗ್+ಎಂದನಾ +ಭೀಮ

ಅಚ್ಚರಿ:
(೧) ಸತ್ತನೋ ಎಂದು ಹೇಳುವ ಬಗೆ – ಸುರಪುರ ನಿವಾಸಿಯೊ

ಪದ್ಯ ೩೭: ಅರ್ಜುನನು ಕೃಷ್ಣನಿಗೆ ಏನು ಹೇಳಿದ?

ಜೀವಿಸಿರಲಾವಾವ ಲೇಸಿನ
ಠಾವ ಕಾಣೆವು ಜೀಯ ಕರ್ಣನ
ನಾವು ತೊಡಚುವರಲ್ಲ ತೆರಳಿಚು ಪಾಳೆಯಕೆ ರಥವ
ಈ ವಿಗಡನಂತಿರಲೆನುತ ಗಾಂ
ಡೀವಿ ಚಾಪವನಿಳುಹೆ ರಥವನು
ದೇವಕೀಸುತ ನೂಕಿದನು ಪವಮಾನ ವೇಗದಲಿ (ಕರ್ಣ ಪರ್ವ, ೧೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನಿಗೆ, ಜೀಯ ಬದುಕಿದ್ದರೆ ಏನೇನೋ ಒಳ್ಳೆಯದನ್ನು ಕಾಣಬಹುದು, ಕರ್ಣನು ಇಲ್ಲಿರಲಿ, ರಥವನ್ನು ಪಾಳೆಯಕ್ಕೆ ತೆಗೆದುಕೊಂಡು ಹೋಗು, ಎಂದು ಗಾಂಡೀವವನ್ನು ಕೆಳಕಿಟ್ಟನು. ಕೃಷ್ಣನು ವಾಯುವೇಗದಿಂದ ರಥವನ್ನು ನಡೆಸಿದನು.

ಅರ್ಥ:
ಜೀವಿಸು: ಬದುಕಿದ್ದರೆ; ಲೇಸು: ಒಳ್ಳೆಯದು, ಶುಭ; ಠಾವು: ಎಡೆ, ಸ್ಥಳ, ಜಾಗ; ಕಾಣು: ತೋರು; ಜೀಯ: ಒಡೆಯ; ತೊಡಚು: ಕಟ್ಟು, ಬಂಧಿಸು; ತೆರಳು: ಹೋಗು, ನಡೆ; ಪಾಳೆಯ: ಬೀಡು, ಶಿಬಿರ; ರಥ: ಬಂಡಿ; ವಿಗಡ: ಶೌರ್ಯ, ಪರಾಕ್ರಮ; ಚಾಪ: ಧನಸ್ಸು; ಇಳುಹು: ಕೆಳಗಿಟ್ಟು; ರಥ: ಬಂಡಿ; ದೇವಕೀಸುತ: ಕೃಷ್ಣ; ನೂಕು: ತಳ್ಳು; ಪವಮಾನ: ವಾಯು; ವೇಗ: ರಭಸ;

ಪದವಿಂಗಡಣೆ:
ಜೀವಿಸಿರಲ್+ಆವಾವ+ ಲೇಸಿನ
ಠಾವ +ಕಾಣೆವು +ಜೀಯ +ಕರ್ಣನ
ನಾವು +ತೊಡಚುವರಲ್ಲ+ ತೆರಳಿಚು +ಪಾಳೆಯಕೆ +ರಥವ
ಈ +ವಿಗಡನಂತಿರಲ್+ಎನುತ +ಗಾಂ
ಡೀವಿ +ಚಾಪವನ್+ಇಳುಹೆ +ರಥವನು
ದೇವಕೀಸುತ +ನೂಕಿದನು+ ಪವಮಾನ +ವೇಗದಲಿ

ಅಚ್ಚರಿ:
(೧) ಜೀವಿಸುವುದು ಒಳಿತೆಂದು ಹೇಳುವ ಸಾಲು – ಜೀವಿಸಿರಲಾವಾವ ಲೇಸಿನ ಠಾವ ಕಾಣೆವು ಜೀಯ

ಪದ್ಯ ೩೬: ಅರ್ಜುನನು ಕೃಷ್ಣನಿಗೆ ಏನು ತಿಳಿಸಿದನು?

ಕಂಡನರ್ಜುನನಿದಿರೊಳಿವನು
ದ್ದಂಡತನವನು ನೃಪತಿ ಚಿಂತಾ
ಖಂಡಧೈರ್ಯರು ನಾವಲಾ ಹೊತ್ತಲ್ಲ ಕಾದುವರೆ
ಕಂಡಿರೇ ಮುರವೈರಿ ದಳಪತಿ
ಚಂಡಬಳನಹ ನಡುಗಹಗಲ ಮಾ
ರ್ತಾಂಡನಂತಿರೆ ತೋರುತೈದನೆ ರಥವ ತಿರುಹೆಂದ (ಕರ್ಣ ಪರ್ವ, ೧೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ಕರ್ಣನ ದರ್ಪವನ್ನು ಕಂಡು, ಚಿಂತೆಯಿಂದ ನನ್ನ ಧೈರ್ಯ ಮುರಿದಿದೆ. ಕಾದಲು ಇದು ಸಮಯವಲ್ಲ ಎಂದು ಚಿಂತಿಸಿ, ಕೃಷ್ಣಾ, ವೈರಿ ಸೇನಾಧಿಪತಿಯು ನಡುಹಗಲಿನ ಸೂರ್ಯನಂತೆ ತೋರುತ್ತಿದ್ದಾನೆ. ರಥವನ್ನು ತಿರುಗಿಸು ಎಂದು ಅರ್ಜುನನು ಕೃಷ್ಣನಿಗೆ ತಿಳಿಸಿದನು.

ಅರ್ಥ:
ಕಂಡು: ನೋಡು; ಇದಿರು: ಎದುರು; ಉದ್ದಂಡ: ಶೂರ, ಪ್ರಚಂಡ; ನೃಪತಿ: ರಾಜ; ಚಿಂತೆ: ಕಳವಳ, ಯೋಚನೆ; ಖಂಡ: ತುಂಡು, ಚೂರು; ಧೈರ್ಯ: ಎದೆಗಾರಿಕೆ, ಕೆಚ್ಚು, ದಿಟ್ಟತನ; ಕಾದು: ಹೋರಾಟ, ಯುದ್ಧ; ಹೊತ್ತು:ಉಂಟಾಗು, ಒದಗು; ಕಂಡು: ನೋಡು; ಮುರವೈರಿ: ಕೃಷ್ಣ; ದಳಪತಿ: ಸೇನಾಧಿಪತಿ; ಚಂಡಬಳನಹ: ಭಯಂಕರ ಶಕ್ತಿಯುಳ್ಳವನು; ನಡು: ಮಧ್ಯ; ಹಗಲ: ಬೆಳಗ್ಗೆ; ಮಾರ್ತಾಂಡ: ಸೂರ್ಯ; ತೋರು: ಗೋಚರ; ರಥ: ಬಂಡಿ; ತಿರುಹು: ತಿರುಹಿಸು; ಐದು: ಹೋಗಿಸೇರು;

ಪದವಿಂಗಡಣೆ:
ಕಂಡನ್+ಅರ್ಜುನನ್+ಇದಿರೊಳ್+ಇವನ್
ಉದ್ದಂಡತನವನು +ನೃಪತಿ+ ಚಿಂತಾ
ಖಂಡ+ಧೈರ್ಯರು +ನಾವಲಾ +ಹೊತ್ತಲ್ಲ +ಕಾದುವರೆ
ಕಂಡಿರೇ +ಮುರವೈರಿ+ ದಳಪತಿ
ಚಂಡಬಳನಹ+ ನಡುಗ+ಹಗಲ +ಮಾ
ರ್ತಾಂಡನಂತಿರೆ+ ತೋರುತ್+ಐದನೆ+ ರಥವ +ತಿರುಹೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಂಡಿರೇ ಮುರವೈರಿ ದಳಪತಿ ಚಂಡಬಳನಹ ನಡುಗಹಗಲ ಮಾರ್ತಾಂಡನಂತಿರೆ ತೋರುತೈದನೆ

ಪದ್ಯ ೩೫: ಅರ್ಜುನನು ಯಾವ ಬಾಣದಿಂದ ಕೌರವ ಸೇನೆಯನ್ನು ನಿಲ್ಲಿಸಿದನು?

ಬಳಿಕ ಸೇನಾಸ್ತಂಭ ಶರದಲಿ
ನಿಲಿಸಿದನು ಮಾರ್ಬಲವನಿತ್ತಲು
ಚಳೆಯದಲಿ ಹಿಮ್ಮೆಟ್ಟುತಿರೆ ಕಂಡನು ಧನಂಜಯನ
ಹೊಳಹು ದೂವಾಳಿಯಲಿ ಪಾರ್ಥನ
ಕೆಲಕೆ ಬಿಟ್ಟನು ರಥವ ನಿಲು ನಿ
ಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ (ಕರ್ಣ ಪರ್ವ, ೧೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕೌರವ ಸೇನೆಯು ತನ್ನ ಬಳಿ ಬರುವುದನ್ನು ಕಂಡ ಅರ್ಜುನನು ಸಂಭಾಸ್ತ್ರವನ್ನು ಪ್ರಯೋಗಿಸಿ ಅವರನ್ನು ನಿಲ್ಲಿಸಿ ಮತ್ತೆ ಧರ್ಮಜನ ಪಾಳೆಯದತ್ತ ಹೋಗುತ್ತಿರಲು, ಕರ್ಣನು ತನ್ನ ರಥವನ್ನು ಅರ್ಜುನನ ಕೆಲಕ್ಕೆ ಬಿಟ್ಟು ನಿಲ್ಲು ನಿಲ್ಲು ಹೋಗಬೇಡ ಎಂದು ಅವನನ್ನು ಬೆನ್ನಟ್ಟಿದನು.

ಅರ್ಥ:
ಬಳಿಕ: ನಂತರ; ಸೇನಾ: ಸೈನ್ಯ; ಸ್ತಂಭ: ಬಾಣದ ಹೆಸರು; ಶರ: ಬಾಣ; ನಿಲಿಸು: ತಡೆ; ಮಾರ್ಬಲ: ಶತ್ರು ಸೈನ್ಯ; ಚಳೆ: ಚಿಮುಕಿಸುವುದು; ಹಿಮ್ಮೆಟ್ಟು: ಹಿಂದಕ್ಕೆ ಸರಿ; ಕಂಡು: ನೋಡು; ಹೊಳಹು: ಕುದುರೆಯ ಓಟದಲ್ಲಿ ಒಂದು ಬಗೆ; ದೂವಾಳಿ: ವೇಗವಾಗಿ ಓಡುವುದು; ಕೆಲ: ಪಕ್ಕ, ಮಗ್ಗುಲು; ಬಿಡು: ತೊರೆ, ತ್ಯಜಿಸು; ರಥ: ಬಂಡಿ; ನಿಲು: ತಡೆ; ಹೊಗು: ತೆರಳು; ಬೆಂಬತ್ತಿ: ಅಟ್ಟಿಸಿಕೊಂಡು ಹೋಗು; ಕಲಿ: ಶೂರ;

ಪದವಿಂಗಡಣೆ:
ಬಳಿಕ +ಸೇನಾಸ್ತಂಭ +ಶರದಲಿ
ನಿಲಿಸಿದನು +ಮಾರ್ಬಲವನ್+ಇತ್ತಲು
ಚಳೆಯದಲಿ+ ಹಿಮ್ಮೆಟ್ಟುತಿರೆ+ ಕಂಡನು +ಧನಂಜಯನ
ಹೊಳಹು +ದೂವಾಳಿಯಲಿ +ಪಾರ್ಥನ
ಕೆಲಕೆ +ಬಿಟ್ಟನು +ರಥವ +ನಿಲು +ನಿಲ್
ಎಲವೊ +ಹೋಗದಿರೆನುತ+ ಬೆಂಬತ್ತಿದನು +ಕಲಿಕರ್ಣ

ಅಚ್ಚರಿ:
(೧) ಕರ್ಣನು ಕರೆಯುವ ಬಗೆಯನ್ನು ಚಿತ್ರಿಸಿರುವುದು – ನಿಲು ನಿಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ

ಪದ್ಯ ೩೪: ಸೇನೆಯನ್ನು ಕಂಡ ಅರ್ಜುನನು ಏನೆಂದು ಚಿಂತಿಸಿದನು?

ಕವಿದು ಕೆಂಧೂಳಿಡುವ ಸೇನಾ
ಟವಿಯ ನೋಡುತ ಹಿಂದೆ ಕರ್ಣನ
ಲವಲವಿಕೆಯಾಯತವ ಕಂಡನು ಕದನಕೇಳಿಯಲಿ
ಅವನಿಪನ ದರುಶನವೆನಗೆ ಸಂ
ಭವಿಸಲರಿಯದು ಭಾಪುರೇ ಕೌ
ರವ ಮಹಾರ್ಣವವೆನುತ ಮಕುಟವ ತೂಗಿದನು ಪಾರ್ಥ (ಕರ್ಣ ಪರ್ವ, ೧೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕರ್ಣನು ಸೇನೆಯೊಡನೆ ಬರುತ್ತಿರಲು ಮಣ್ಣಿನ ಕೆಂಪಾದ ಧೂಳು ಮೇಲೆದ್ದು ಆಕಾಶದತ್ತ ಹಾರಿತು, ಕರ್ಣನ ಉತ್ಸಾಹ, ಅವನೊಡನೆ ಸೇನೆಯವರನ್ನು ನೋಡಿ ಅರ್ಜುನನು, ಭಲೇ ಹೀಗೆ ಮತ್ತೆ ಮತ್ತೆ ಸೇನೆ ಬಂದರೆ, ಈ ದಿನ ನಾನು ಧರ್ಮರಾಯನನ್ನು ನೋಡುವುದು ಅಸಂಭವ ವಾದೀತು ಎಂದು ತನ್ನ ಕಿರೀಟವನ್ನು ತೂಗಿದನು.

ಅರ್ಥ:
ಕವಿ: ಆವರಿಸು; ಕೆಂದೂಳಿ: ಕೆಂಪಾದ ಧೂಳು; ಸೇನಾಟವಿ: ದಟ್ಟವಾದ ಕಾಡಿನಂತಹ ಸೇನೆ; ನೋಡು: ವೀಕ್ಷಿಸು; ಹಿಂದೆ: ಹಿಂಭಾಗ; ಲವಲವಿಕೆ: ಉತ್ಸಾಹ, ಹುರುಪು; ಆಯತ: ವಿಶಾಲವಾದ; ಕಂಡು: ನೋಡಿ; ಕದನ: ಯುದ್ಧ; ಕೇಳಿ: ವಿನೋದ, ಕ್ರೀಡೆ; ಅವನಿಪ: ರಾಜ; ದರುಶನ: ವೀಕ್ಷಣೆ; ಸಂಭವಿಸು: ಒದಗಿಬರು; ಅರಿ: ತಿಳಿ; ಭಾಪುರೇ: ಭಲೇ; ಅರ್ಣವ: ಸಮುದ್ರ; ಮಕುಟ: ಕಿರೀಟ; ತೂಗು: ಅಲ್ಲಾಡಿಸು;

ಪದವಿಂಗಡಣೆ:
ಕವಿದು +ಕೆಂಧೂಳಿಡುವ +ಸೇನಾ
ಟವಿಯ +ನೋಡುತ +ಹಿಂದೆ +ಕರ್ಣನ
ಲವಲವಿಕೆಯ+ಆಯತವ +ಕಂಡನು +ಕದನ+ಕೇಳಿಯಲಿ
ಅವನಿಪನ+ ದರುಶನವ್+ಎನಗೆ +ಸಂ
ಭವಿಸಲ್+ಅರಿಯದು +ಭಾಪುರೇ +ಕೌ
ರವ +ಮಹಾರ್ಣವವ್+ಎನುತ +ಮಕುಟವ +ತೂಗಿದನು +ಪಾರ್ಥ

ಅಚ್ಚರಿ:
(೧) ಸೇನಾಟವಿ, ಕೌರವ ಮಹಾರ್ಣವ – ಸೇನೆಯನ್ನು ಕಾಡು ಮತ್ತು ಸಮುದ್ರಕ್ಕೆ ಹೋಲಿಸಿರುವುದು

ಪದ್ಯ ೩೩: ಕರ್ಣನ ಜೊತೆ ಯಾರು ಬಂದರು?

ನೆರೆದುದಲ್ಲಿಯದಲ್ಲಿ ಕಹಳೆಯ
ಧರಧುರದ ನಿಸ್ಸಾಳ ಸೂಳಿನ
ಮೊರೆವ ಭೇರಿಯ ರಾಯಗಿಡಿಗನ ಜಡಿವ ಚುಂಬಕನ
ತುರಗ ಕರಿ ರಥ ಪಾಯದಳ ಚಾ
ಮರದ ಧವಳಚ್ಛತ್ರ ಪಟ ಪಳ
ಹರದ ಪಡಪಿನಲೌಕಿ ನಡೆದುದು ಮುಂದೆ ಪಾಯದಳ (ಕರ್ಣ ಪರ್ವ, ೧೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕರ್ಣನೊಡನೆ ರಣವಾದ್ಯದ ಗುಂಪು ಕಹಳೆ, ನಿಸ್ಸಾಳದ ವಾದ್ಯಗಳ ಜೋರಾದ ಶಬ್ದವು ಮೊಳಗಿತು. ರಾಯಗಿಡಿಗ, ಸೂಜಿಗಲ್ಲು, ಕುದುರೆ, ಆನೆ, ರಥ, ಸೈನಿಕರು, ಬಿಳಿಯ ಛತ್ರ, ಚಾಮರ, ಧ್ವಜವನ್ನು ಹಿಡಿದ, ಕತ್ತಿಯನ್ನು ತೋರುವ ಸೈನಿಕರು ಎಲ್ಲರೂ ಒತ್ತು ಮುಂದೆ ನಡೆದರು.

ಅರ್ಥ:
ನೆರೆ:ಪಕ್ಕ, ಮಗ್ಗಲು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಧರಧುರ: ಅತಿಶಯತೆ, ಭೀಕರ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೂಳು:ಆರ್ಭಟ, ಬೊಬ್ಬೆ; ಮೊರೆ: ಝೇಂಕಾರ; ಭೇರಿ:ನಗಾರಿ, ದುಂದುಭಿ; ಗಿಡಿಗ: ಒಂದು ಬಗೆಯ ಹಕ್ಕಿ; ಜಡಿ: ಹೊಡೆತ ; ಚುಂಬಕ: ಸೂಜಿಗಲ್ಲು; ತುರಗ: ಕುದುರೆ; ಕರಿ: ಆನೆ; ರಥ: ಬಂಡಿ; ಪಾಯದಳ: ಸೈನಿಕರ್; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಧವಳ: ಬಿಳಿ; ಛತ್ರ: ಕೊಡೆ; ಪಟ: ಧ್ವಜ; ಪಳ: ಕತ್ತಿ, ಖಡ್ಗ; ಹರ:ನಿವಾರಣೆ, ಪರಿಹಾರ ; ಪಡಪು: ಹೆಚ್ಚಳ, ಆಧಿಕ್ಯ, ಧಿಟ್ಟತನ; ಔಕು: ಒತ್ತು; ನಡೆ: ಚಲಿಸು; ಮುಂದೆ: ಮುಂಭಾಗ; ಪಾಯದಳ: ಸೈನಿಕ;

ಪದವಿಂಗಡಣೆ:
ನೆರೆದುದ್+ಅಲ್ಲಿಯದ್+ಅಲ್ಲಿ +ಕಹಳೆಯ
ಧರಧುರದ+ ನಿಸ್ಸಾಳ +ಸೂಳಿನ
ಮೊರೆವ+ ಭೇರಿಯ +ರಾಯಗಿಡಿಗನ +ಜಡಿವ +ಚುಂಬಕನ
ತುರಗ +ಕರಿ +ರಥ +ಪಾಯದಳ +ಚಾ
ಮರದ+ ಧವಳಚ್ಛತ್ರ+ ಪಟ+ ಪಳ
ಹರದ +ಪಡಪಿನಲ್+ಔಕಿ +ನಡೆದುದು +ಮುಂದೆ+ ಪಾಯದಳ

ಅಚ್ಚರಿ:
(೧) ಚಾಮರದ, ಪಳಹರದ, ಧರಧುರದ – ಪ್ರಾಸ ಪದಗಳು
(೨) ರಣವಾದ್ಯಗಳು – ನಿಸ್ಸಾಳ, ಕಹಳೆ, ಭೇರಿ