ಪದ್ಯ ೨೦: ಅರ್ಜುನನ ಬಾಣಗಳು ಅಶ್ವತ್ಥಾಮನಿಗೆ ಏನು ಮಾಡಿದವು?

ಕಡುಗಿದರೆ ಕಾಲಾಗ್ನಿ ರುದ್ರನ
ಕಡುಹನಾನುವರೀತನೇ ಸೈ
ಗೆಡೆವ ರೋಮದ ಧೂಮ್ರವಕ್ತ್ರದ ಸ್ವೇದಬಿಂದುಗಳ
ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿ
ಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ (ಕರ್ಣ ಪರ್ವ, ೧೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೋಪಗೊಂಡು ಕಾಳಗಕ್ಕಿಳಿದರೆ ಪ್ರಳಯಕಾಲದ ರುದ್ರನ ಅಬ್ಬರವನ್ನು ಯಾರು ತಾನೆ ತಾಳಿಯಾರು? ರೋಮಗಳು ಜೋತು ಬಿದ್ದು, ಮುಖ ಕಪ್ಪಾಗಿ, ಬೆವರಿನ ಹನಿಗಳಿಯುತ್ತಿರಲು, ಕೋಪೋದ್ರಿಕ್ತನಾದ ಅರ್ಜುನನು ಮೈತೂಗಿ ಮಹಾಸ್ತ್ರ ಪ್ರಯೋಗ ಮಾಡಿ ಅಶ್ವತ್ಥಾಮನ ಸಾರಥಿ ರಥ ಕುದುರೆಗಳನ್ನು ಕಡಿದು ಬಿಟ್ಟನು.

ಅರ್ಥ:
ಕಡುಗು: ಶಕ್ತಿಗುಂದು; ಕಾಲಾಗ್ನಿ: ಪ್ರಳಯಕಾಲದ ಬೆಂಕಿ; ರುದ್ರ: ಶಿವನ ಅವತಾರ; ಕಡು: ವಿಶೇಷವಾಗಿ, ಹೆಚ್ಚಾಗಿ; ಆನು: ಯಾರು; ಅರಿ: ತಿಳಿ; ಸೈಗೆಡೆ:ಅಡ್ಡಬೀಳು, ನಮಸ್ಕರಿಸು; ರೋಮ: ಕೂದಲು; ಧೂಮ್ರ:ಬೂದುಬಣ್ಣ, ಹೊಗೆಯ ಬಣ್ಣ; ವಕ್ತ್ರ: ಮುಖ; ಸ್ವೇದ: ಬೆವರು; ಬಿಂದು: ಹನಿ; ಜಡಿ: ಗದರಿಸು, ಬೆದರಿಸು; ರೋಷ: ಕೋಪ; ಭರದ: ವೇಗ, ಆವೇಶ; ಅಡಿಗಡಿ: ಮತ್ತೆ ಮತ್ತೆ; ಒಡಲು: ದೇಹ; ಒಲೆ: ತೂಗಾಡು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಕಡಿ: ಸೀಳು; ಬಿಸುಟು: ಹೊರಹಾಕು; ಗುರುಸುತ: ಅಚಾರ್ಯರ ಮಗ (ಅಶ್ವತ್ಥಾಮ); ಸಾರಥಿ: ರಥವನ್ನು ಓಡಿಸುವವ; ರಥ: ಬಂಡಿ; ಹಯ: ಕುದುರೆ;

ಪದವಿಂಗಡಣೆ:
ಕಡುಗಿದರೆ +ಕಾಲಾಗ್ನಿ +ರುದ್ರನ
ಕಡುಹನ್+ಆನುವರ್+ಈತನೇ +ಸೈ
ಗೆಡೆವ +ರೋಮದ +ಧೂಮ್ರವಕ್ತ್ರದ +ಸ್ವೇದಬಿಂದುಗಳ
ಜಡಿವ +ರೋಷದ +ಭರದಲ್+ಅಡಿಗಡಿಗ್
ಒಡಲನ್+ಒಲೆದು +ಮಹಾಸ್ತ್ರದಲಿ +ಕಡಿ
ಕಡಿದು +ಬಿಸುಟನು +ಗುರುಸುತನ +ಸಾರಥಿಯ +ರಥ+ಹಯವ

ಅಚ್ಚರಿ:
(೧) ಅರ್ಜುನನ ವೀರಾವೇಶವನ್ನು ವಿವರಿಸುವ ಪದ್ಯ – ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ

ಪದ್ಯ ೧೯: ಅಶ್ವತ್ಥಾಮನು ಅರ್ಜುನನ ಮೇಲೆ ಹೇಗೆ ಬಾಣಗಳನ್ನು ಬಿಟ್ಟನು?

ತಳಿವ ನಿನ್ನಂಬಿನ ಮಳೆಗೆ ಮನ
ನಲಿವ ಚಾತಕಿಯರಿಯೆಲಾ ಕಳ
ವಳಿಸದಿರು ಕೊಳ್ಳಾದಡೆನುತೆಚ್ಚನು ಧನಂಜಯನ
ಹೊಳೆವ ಕಣೆ ಹೊಕ್ಕಿರಿದ ದಾರಿಯೊ
ಳುಳಿದ ಕಣೆ ದಾಂಟಿದವು ಗುರುಸುತ
ತುಳುಕಿದನು ಫಲುಗುಣನ ಮೈಯಲಿ ರಕುತ ರಾಟಳವ (ಕರ್ಣ ಪರ್ವ, ೧೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನಿನ್ನ ಬಾಣಗಳ ಮಳೆಯನ್ನು ಕಂಡು ಸಂತೋಷಿಸುವ ಚಾತಕ ಪಕ್ಷಿ ನಾನು. ಚಿಂತೆಗೊಳ್ಳಬೇಡ, ಈ ಬಾಣಗಳ ರುಚಿಯನ್ನು ಸವಿ ಎಂದು ಒಂದರ ಹಿಂದೆ ಮತ್ತೊಂದು, ಅದರ ಹಿಂದೆ ಇನ್ನೊಂದು ಬಾಣಗಳನ್ನು ಬಿಡಲು ಅರ್ಜುನನ ಮೈಯೆಲ್ಲಾ ರಕ್ತದ ರಾಟೆಯಾಯಿತು.

ಅರ್ಥ:
ತಳಿ:ಚೆಲ್ಲು, ಚಿಮುಕಿಸು; ಅಂಬು: ಬಾಣ; ಮಳೆ: ವರ್ಷ; ಮನ: ಮನಸ್ಸು; ನಲಿ: ಸಂತೋಷ; ಚಾತಕಿ: ಚಾತಕ ಪಕ್ಷಿ; ಅರಿ: ತಿಳಿ; ಕಳವಳ: ಚಿಂತೆ; ಕೊಳ್ಳು: ತೆಗೆದುಕೊ; ಎಚ್ಚು: ಬಾಣ ಬಿಡು; ಹೊಳೆ: ಪ್ರಕಾಶಿಸು; ಕಣೆ: ಬಾಣ; ಹೊಕ್ಕು: ಸೇರು; ಇರಿ: ಚುಚ್ಚು; ದಾರಿ: ಮಾರ್ಗ; ಉಳಿದ: ಮಿಕ್ಕ; ದಾಂಟು: ದಾಟು, ಪಾರಾಗು; ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ಮೈ: ತನು; ರಕುತ: ನೆತ್ತರು; ರಾಟಳ: ರಾಟೆ, ರಾಡಿ;

ಪದವಿಂಗಡಣೆ:
ತಳಿವ +ನಿನ್ನಂಬಿನ +ಮಳೆಗೆ +ಮನ
ನಲಿವ +ಚಾತಕಿಯ್+ಅರಿಯೆಲಾ +ಕಳ
ವಳಿಸದಿರು +ಕೊಳ್ಳಾದಡ್+ಎನುತ್+ಎಚ್ಚನು +ಧನಂಜಯನ
ಹೊಳೆವ+ ಕಣೆ +ಹೊಕ್ಕಿರಿದ +ದಾರಿಯೊಳ್
ಉಳಿದ +ಕಣೆ +ದಾಂಟಿದವು+ ಗುರುಸುತ
ತುಳುಕಿದನು +ಫಲುಗುಣನ +ಮೈಯಲಿ +ರಕುತ +ರಾಟಳವ

ಅಚ್ಚರಿ:
(೧) ಫಲುಗುಣ, ಧನಂಜಯ – ಅರ್ಜುನನಿಗೆ ಬಳಸಿದ ಪದಗಳು
(೨) ಅಂಬು, ಕಣೆ – ಸಮನಾರ್ಥಕ ಪದ
(೩) ಉಪಮಾನದ ಪ್ರಯೋಗ – ತಳಿವ ನಿನ್ನಂಬಿನ ಮಳೆಗೆ ಮನನಲಿವ ಚಾತಕಿಯರಿಯೆಲಾ

ಪದ್ಯ ೧೮: ಅರ್ಜುನ ಅಶ್ವತ್ಥಾಮರ ಬಾಣ ಯುದ್ಧ ಹೇಗೆ ಸಾಗಿತು?

ಸರಳ ಹರಿಮೇಖಳೆಗೆ ನೀವೇ
ಗುರುಗಳಲ್ಲಾ ನಿಮ್ಮ ವಿದ್ಯೆಯ
ಹುರುಳುಗೆಡಿಸುವಿರೆನುತ ಗುರುಸುತನಂಬ ಹರೆಗಡಿದು
ತುರಗದಲಿ ರಥಚಕ್ರದಲಿ ಕೂ
ಬರದೊಳೀಸಿನಲಚ್ಚಿನಲಿ ದು
ರ್ಧರ ಶಿಳೀಮುಖ ಜಾಳವನು ಜೋಡಿಸಿದನಾ ಪಾರ್ಥ (ಕರ್ಣ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಬಾಣದ ಇಂದ್ರಜಾಲ ವಿದ್ಯೆಗೆ ನೀವೆ ನನ್ನ ಗುರುಗಳು, ನೀವು ಕಲಿಸಿದ ವಿದ್ಯೆಯನ್ನು ನೀವೇ ಮೂದಲಿಸುತ್ತಿರುವಿರಲ್ಲಾ, ಎಂದು ಅರ್ಜುನನು ಅಶ್ವತ್ಥಾಮನ ಬಾಣಗಳನ್ನು ಕತ್ತರಿಸಿ ಅವನ ರಥ, ಕುದುರೆ, ಗಾಲಿ, ಈಚು, ಅಚ್ಚು, ನೊಗಗಳಿಗೆ ಬಾಣಗಳನ್ನು ಬಿಟ್ಟನು.

ಅರ್ಥ:
ಸರಳು: ಬಾಣ; ಹರಿಮೇಖಲೆ: ರತ್ನದ ಡಾಬು; ಗುರು: ಆಚಾರ್ಯ; ವಿದ್ಯೆ: ಜ್ಞಾನ; ಹುರುಳು: ಶಕ್ತಿ, ಸಾಮರ್ಥ್ಯ; ಕೆಡಿಸು: ಹಾಳು ಮಾದು; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಹರೆ: ಚೆದುರು; ಕಡಿ: ಸೀಳು; ತುರಗ: ಅಶ್ವ, ಕುದುರೆ; ರಥ: ಬಂಡಿ; ಚಕ್ರ: ಗಾಲಿ; ಕೂಬರ: ಬಂಡಿಯ ಈಸು; ಈಸು: ಗಾಡಿಯ ಮೂಕಿ, ಗಾಡಿ ಹೊಡೆಯುವವನು ಕೂಡುವ ಗಾಡಿಯ ಮುಂಭಾಗದ ಮರ; ದುರ್ಧರ: ಕಠಿನವಾದ; ಶಿಳೀಮುಖ: ಬಾಣ; ಜಾಳ: ಬಲೆ; ಸಮೂಹ; ಜೋಡಿಸು: ನಿರ್ಮಿಸು;

ಪದವಿಂಗಡಣೆ:
ಸರಳ+ ಹರಿಮೇಖಳೆಗೆ +ನೀವೇ
ಗುರುಗಳಲ್ಲಾ +ನಿಮ್ಮ +ವಿದ್ಯೆಯ
ಹುರುಳು+ಕೆಡಿಸುವಿರ್+ಎನುತ +ಗುರುಸುತನ್+ಅಂಬ +ಹರೆಗಡಿದು
ತುರಗದಲಿ+ ರಥ+ಚಕ್ರದಲಿ+ ಕೂ
ಬರದೊಳ್+ಈಸಿನಲ್+ಅಚ್ಚಿನಲಿ +ದು
ರ್ಧರ +ಶಿಳೀಮುಖ+ ಜಾಳವನು+ ಜೋಡಿಸಿದನಾ+ ಪಾರ್ಥ

ಅಚ್ಚರಿ:
(೧) ಬಾಣದ ಜಾಲ ಎಂದು ಹೇಳಲು – ಶಿಳೀಮುಖ ಜಾಳವನು ಜೋಡಿಸಿದ
(೨) ಶಿಳಿಮುಖ, ಅಂಬ, ಸರಳ – ಸಮನಾರ್ಥಕ ಪದ

ಪದ್ಯ ೧೭: ಅಶ್ವತ್ಥಾಮನು ಅರ್ಜುನನ ಮೇಲಿನ ಬಾಣ ಪ್ರಯೋಗ ಹೇಗಿತ್ತು?

ಖೂಳ ತೆಗೆ ಹೆರಸಾರು ಠಕ್ಕಿನ
ಠೌಳಿಯಾಟವೆ ಕದನ ಕುಟಿಲದ
ಬೇಳುವೆಯ ಡೊಳ್ಳಾಸ ಮದ್ದಿನ ಮಾಯೆ ನಮ್ಮೊಡನೆ
ಆಳುತನವುಳ್ಳೊಡೆ ಮಹಾಸ್ತ್ರದ
ಜಾಳಿಗೆಯನುಗಿಯೆನುತ ಪಾರ್ಥನ
ಕೋಲುಗಳ ನೆರೆ ತರಿದು ತೀವಿದನಂಬಿನಲಿ ನಭವ (ಕರ್ಣ ಪರ್ವ, ೧೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ನೀಚ, ಆಚೆ ಸರಿ, ನಮ್ಮೊಡನೆ ಬಾಣಗಳ ಮೋಸದ ಮದ್ದನ್ನು ಅರಿಯುವೆಯಾ? ಈ ಬಾಣಗಳಿಂದೇನಾಗುವುದು, ಮಹಾಸ್ತ್ರಗಳಿದ್ದರೆ ಅದನ್ನು ಹೊರತೆಗೆ, ಎಂದು ಅಶ್ವತ್ಥಾಮನು ಅರ್ಜುನನ ಬಾಣಗಳನ್ನು ಕತ್ತರಿಸಿ ಬಾಣಗಳಿಂದ ಆಗಸವನ್ನು ಮುಚ್ಚಿದನು.

ಅರ್ಥ:
ಖೂಳ: ದುಷ್ಟ; ತೆಗೆ: ಈಚೆಗೆ ತರು, ಹೊರತರು; ಹೆರಸಾರು: ಹಿಂದಕ್ಕೆ ಸರಿ; ಠಕ್ಕು:ಮೋಸ; ಠೌಳಿ:ಮೋಸ, ವಂಚನೆ; ಕದನ: ಯುದ್ಧ; ಕುಟಿಲ: ಮೋಸ, ವಂಚನೆ; ಬೇಳು:ಸುಟ್ಟುಹಾಕು, ಮರುಳು; ಡೊಳ್ಳಾಸ: ಮೋಸ, ಕಪಟ; ಮದ್ದು: ಔಷಧ, ಉಪಾಯ; ಮಾಯೆ: ಮೋಸ, ಕಪಟ; ಆಳುತನ: ಸೈನಿಕ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಜಾಳಿ: ಗುಂಪು; ಉಗಿ: ಹೊರಹಾಕು; ಕೋಲು: ಬಾಣ; ನೆರೆ: ಗುಂಪು; ತರಿ: ಸೀಳು; ತೀವು: ತುಂಬು; ಹೊರಸೂಸು; ಅಂಬು: ಬಾಣ; ನಭ: ಆಗಸ;

ಪದವಿಂಗಡಣೆ:
ಖೂಳ +ತೆಗೆ +ಹೆರಸಾರು +ಠಕ್ಕಿನ
ಠೌಳಿಯಾಟವೆ +ಕದನ +ಕುಟಿಲದ
ಬೇಳುವೆಯ +ಡೊಳ್ಳಾಸ +ಮದ್ದಿನ +ಮಾಯೆ +ನಮ್ಮೊಡನೆ
ಆಳುತನವುಳ್ಳೊಡೆ +ಮಹಾಸ್ತ್ರದ
ಜಾಳಿಗೆಯನ್+ಉಗಿಯೆನುತ +ಪಾರ್ಥನ
ಕೋಲುಗಳ +ನೆರೆ +ತರಿದು +ತೀವಿದನ್+ಅಂಬಿನಲಿ +ನಭವ

ಅಚ್ಚರಿ:
(೧) ಠಕ್ಕಿನ, ಠೌಳಿ, ಕುಟಿಲ, ಮಾಯೆ, ಡೊಳ್ಳಾಸ – ಮೋಸ ಎಂಬ ಅರ್ಥವನ್ನು ಸೂಚಿಸುವ ಪದ

ಪದ್ಯ ೧೬: ಅರ್ಜುನನು ಯಾರ ಬಳಿ ಉಪಾಯವನ್ನು ಕೇಳಿದನು?

ಆವುದಿಲ್ಲಿಗುಪಾಯವೀತನ
ಭಾವ ಬೆಟ್ಟಿತು ತೆರಹುಗೊಡನಿಂ
ದೀ ವಿಸಂಧಿಯೊಳರಿಯೆನವನಿಪನಾಗುಹೋಗುಗಳ
ದೇವ ಹದನೇನೆನುತ ವರ ಗಾಂ
ಡೀವಿ ಮುಕ್ತಕಳಂಬಕಾಂಡ
ಪ್ರಾವರಣದಲಿ ಮುಸುಕಿದನು ಗುರುನಂದನನ ರಥವ (ಕರ್ಣ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನಿಗೆ ಈಗ ಏನುಪಾಯ ಮಾಡಲಿ, ಇವನು ದೃಢ ಸಂಕಲ್ಪಮಾಡಿ ನನ್ನೆದುರು ಬಂದಿದ್ದಾನೆ, ಈಗ ಅರಸನು ಏನಾಗಿರುವನೋ ನನಗೆ ತಿಳಿಯದು. ದೇವ ಈಗ ಮಾಡುವುದೇನು ಎನ್ನುತ್ತಾ ಅರ್ಜುನನು ಬಾಣಗಳಿಂದ ಅಶ್ವತ್ಥಾಮನ ರಥವನ್ನು ಮುಸುಕಿದನು.

ಅರ್ಥ:
ಉಪಾಯ: ಯುಕ್ತಿ, ಹಂಚಿಕೆ; ಭಾವ: ಅಭಿಪ್ರಾಯ, ಮನಸ್ಸು; ಬೆಟ್ಟು: ಹೊಡೆ, ಬಡಿ; ತೆರಹು: ಎಡೆ, ಜಾಗ, ತೆರೆ; ವಿಸಂಧಿ:ಹೊಂದಿಕೆಯಾಗದಿರುವಿಕೆ; ಅವನಿಪ: ರಾಜ; ಆಗುಹೋಗು: ಪರಿಣಾಮ; ದೇವ: ಭಗವಂತ; ಹದ: ಸರಿಯಾದ ಸ್ಥಿತಿ; ವರ: ಶ್ರೇಷ್ಠ; ಗಾಂಡೀವಿ: ಅರ್ಜುನ; ಕಾಂಡ: ಬಾಣ; ಮುಕ್ತ: ಪಾರಾದವನು; ಕಳಂಬ: ಬಾಣ, ಅಂಬು; ಪ್ರಾವರಣ: ಶ್ರೇಷ್ಠ ವಾತಾವರಣ; ಮುಸುಕು: ಹೊದಿಕೆ; ಗುರುನಂದನ: ಗುರುವಿನ ಮಗ; ರಥ: ಬಂಡಿ;

ಪದವಿಂಗಡಣೆ:
ಆವುದಿಲ್ಲಿಗ್+ಉಪಾಯವ್+ಈತನ
ಭಾವ +ಬೆಟ್ಟಿತು +ತೆರಹುಗೊಡನ್+
ಇಂದೀ+ ವಿಸಂಧಿಯೊಳ್+ಅರಿಯೆನ್+ಅವನಿಪನ್+ಆಗುಹೋಗುಗಳ
ದೇವ +ಹದನೇನ್+ಎನುತ +ವರ +ಗಾಂ
ಡೀವಿ +ಮುಕ್ತ+ಕಳಂಬ+ಕಾಂಡ
ಪ್ರಾವರಣದಲಿ +ಮುಸುಕಿದನು+ ಗುರುನಂದನನ +ರಥವ

ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿತವಾಗಿರುವುದು
(೨) ಅರ್ಜುನನ ಬಾಣ ಪ್ರಯೋಗ – ವರ ಗಾಂಡೀವಿ ಮುಕ್ತಕಳಂಬಕಾಂಡ
ಪ್ರಾವರಣದಲಿ ಮುಸುಕಿದನು ಗುರುನಂದನನ ರಥವ

ಪದ್ಯ ೧೫: ಅಶ್ವತ್ಥಾಮನು ಅರ್ಜುನನನ್ನು ಹೇಗೆ ಕೆರಳಿಸಿದನು?

ಇತ್ತಲಿತ್ತಲು ಪಾರ್ಥ ಹೋಗದಿ
ರಿತ್ತಲಶ್ವತ್ಥಾಮನಾಣೆ ಮ
ಹೋತ್ತಮರು ಗುರು ಭೀಷ್ಮರಲಿ ಮೆರೆ ನಿನ್ನ ಸಾಹಸವ
ಕಿತ್ತು ಬಿಸುಡುವೆನಸುವನಿದಿರಾ
ಗುತ್ತಲೆಲವೋ ನಿನ್ನ ಜೋಕೆಯ
ಜೊತ್ತಿನಾಹವವಲ್ಲೆನುತ ತರುಬಿದನು ಗುರುಸೂನು (ಕರ್ಣ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಅರ್ಜುನನನ್ನು ಅಡ್ಡಗಟ್ಟಿ, ಎಲೈ ಅರ್ಜುನ ಆ ಕಡೆ ಹೋಗಬೇಡ, ಈ ಕಡೆ ಬಾ ನನ್ನಾಣೆ, ಶ್ರೇಷ್ಠರಾದ ಭೀಷ್ಮ ದ್ರೋಣರ ಹತ್ತಿರ ನಿನ್ನ ಸಾಹಸದ ತೋರಿಕೆಯನ್ನು ತೋರಿಸು, ನಿನ್ನ ಪ್ರಾಣವನ್ನು ಕಿತ್ತು ಎಸೆಯುತ್ತೇನೆ. ಎಲವೋ ಇಲ್ಲಿ ನನ್ನೆದುರಿಗೆ ಬಾ, ನಯವಾಗಿ ಪ್ರದರ್ಶನ ಮಾಡುವ ನಾಟಕ ಯುದ್ಧವಲ್ಲ ಎಂದು ಅಶ್ವತ್ಥಾಮನು ಅರ್ಜುನನನ್ನು ಕೆರಳಿಸಿದನು.

ಅರ್ಥ:
ಇತ್ತ: ಈ ಕಡೆ; ಹೋಗು: ತೆರಳು; ಆಣೆ: ಪ್ರಮಾಣ; ಮಹೋತ್ತಮ: ಶ್ರೇಷ್ಠ; ಗುರು: ಆಚಾರ್ಯ; ಮೆರೆ: ಪ್ರಸಿದ್ಧವಾಗು; ಸಾಹಸ: ಬಲ; ಕಿತ್ತು: ಹೊರಹಾಕು; ಬಿಸುಡು: ಎಸೆ; ಅಸು: ಪ್ರಾಣ; ಇದಿರು: ಎದುರು; ಜೋಕೆ: ಹುಷಾರು, ಎಚ್ಚರಿಕೆ; ಜೊತ್ತು: ಆಸರೆ, ನೆಲೆ; ಆಹವ: ಯುದ್ಧ; ತರುಬು:ತಡೆ, ನಿಲ್ಲಿಸು; ಸೂನು: ಮಗ;

ಪದವಿಂಗಡಣೆ:
ಇತ್ತಲಿತ್ತಲು +ಪಾರ್ಥ +ಹೋಗದಿರ್
ಅತ್ತಲ್+ಅಶ್ವತ್ಥಾಮನಾಣೆ +ಮ
ಹೋತ್ತಮರು +ಗುರು +ಭೀಷ್ಮರಲಿ+ ಮೆರೆ+ ನಿನ್ನ +ಸಾಹಸವ
ಕಿತ್ತು +ಬಿಸುಡುವೆನ್+ಅಸುವನ್+ಇದಿರಾ
ಗುತ್ತಲ್+ಎಲವೋ +ನಿನ್ನ +ಜೋಕೆಯ
ಜೊತ್ತಿನ್+ಆಹವವ್+ಅಲ್ಲೆನುತ +ತರುಬಿದನು+ ಗುರುಸೂನು

ಅಚ್ಚರಿ:
(೧) ಕೋಪದ ನುಡಿಗಳು – ಕಿತ್ತು ಬಿಸುಡುವೆನಸುವನ್;

ಪದ್ಯ ೧೪: ಸಂಶಪ್ತಕರ ಸೈನ್ಯವು ಅರ್ಜುನನ ರಥವನ್ನು ಹೇಗೆ ಆವರಿಸಿತು?

ಕವಿದುದದುಭುತ ಬಲ ಮುರಾರಿಯ
ತಿವಿದರಡಗಟ್ಟಿದರು ತೇಜಿಯ
ಜವಗೆಡಿಸಿ ತಲೆಯಾರ ತಡೆದರು ತುಡುಕಿದರು ನೊಗವ
ಆವರನೊಂದೇ ನಿಮಿಷದಲಿ ಪರಿ
ಭವಿಸಿ ನಡೆತರೆ ಮುಂದೆ ಗುರುಸಂ
ಭವನ ರಥವಡಹಾಯ್ದುದವನೀಪಾಲ ಕೇಳೆಂದ (ಕರ್ಣ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧವನ್ನು ವಿವರಿಸುತ್ತಾ, ರಾಜ ಸಂಶಪ್ತಕರ ಸೈನ್ಯವು ಅರ್ಜುನನ ರಥವನ್ನು ಮುತ್ತಿತು ಅವರು ಅರ್ಜುನನ ಕುದುರೆಗಳ ವೇಗವನ್ನು ಕುಗ್ಗಿಸಿ, ಶ್ರೀಕೃಷ್ಣನನ್ನು ತಿವಿದು ರಥದ ನೊಗವನ್ನು ಹಿಡಿದರು. ಆದರೆ ಅರ್ಜುನನ ಕ್ಷಣಾರ್ಧದಲ್ಲಿ ಅವರನ್ನು ಸೋಲಿಸಿ ಮುಂದುವರೆಯಲು, ಅಶ್ವತ್ಥಾಮನು ಅರ್ಜುನನ ನಡುವೆ ಬಂದು ನಿಂತನು.

ಅರ್ಥ:
ಕವಿದು: ಆವರಿಸು; ಬಲ: ಸೈನ್ಯ; ಅದುಭುತ: ಆಶ್ಚರ್ಯ; ಮುರಾರಿ: ಕೃಷ್ಣ; ತಿವಿ: ಚುಚ್ಚು; ಅಡಗಟ್ಟು: ಮಧ್ಯ ಬಂದು, ತಡೆದು; ತೇಜಿ: ಕುದುರೆ; ಜವ: ವೇಗ; ಕುಗ್ಗಿಸು: ಕಡಿಮೆ ಮಾಡು; ತಲೆಯಾರು: ಕುದುರೆಗೆ ಕಟ್ಟುವ ನೊಗ; ತಡೆ: ನಿಲ್ಲಿಸು; ತುಡುಕು: ಬೇಗನೆ ಹಿಡಿಯುವುದು; ನೊಗ: ಬಂಡಿಯನ್ನಾಗಲಿ, ಎಳೆಯಲು ಕುದುರೆ ಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ನಿಮಿಷ: ಕ್ಷಣ; ಪರಿಭವ: ಸೋಲು; ನಡೆ: ಮುಂದೆ ಹೋಗು; ಮುಂದೆ: ಎದುರು; ಸಂಭವ: ಹುಟ್ಟಿದ; ರಥ: ಬಂಡಿ; ಅಡಹಾಯ್ದು: ತಡೆ; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕವಿದುದ್+ಅದುಭುತ +ಬಲ +ಮುರಾರಿಯ
ತಿವಿದರ್+ಅಡಗಟ್ಟಿದರು+ ತೇಜಿಯ
ಜವಗೆಡಿಸಿ +ತಲೆಯಾರ +ತಡೆದರು +ತುಡುಕಿದರು +ನೊಗವ
ಆವರನ್+ಒಂದೇ +ನಿಮಿಷದಲಿ +ಪರಿ
ಭವಿಸಿ+ ನಡೆತರೆ +ಮುಂದೆ +ಗುರುಸಂ
ಭವನ +ರಥವ್+ಅಡಹಾಯ್ದುದ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತಲೆಯಾರ ತಡೆದರು ತುಡುಕಿದರು
(೨) ಕೃಷ್ಣನು ಯುದ್ಧದಲ್ಲಿ ಪೆಟ್ಟನ್ನು ಅನುಭವಿಸಿದನು ಎಂದು ಹೇಳುವ ಪದ್ಯ – ಮುರಾರಿಯ
ತಿವಿದರ್

ಪದ್ಯ ೧೩: ಅರ್ಜುನನನ್ನು ಯಾವ ಸೈನ್ಯ ಹಿಂಬಾಲಿಸಿತು?

ತಿರುಹಿ ವಾಘೆಯ ಹಿಡಿದು ಹರಿ ಹೂಂ
ಕರಿಸಿ ಬಿಟ್ಟನು ರಥವನಾತನ
ಮುರಿವ ಕಂಡುದು ಲಳಿ ಮಸಗಿ ಸಮಸಪ್ತಕರ ಸೇನೆ
ಅರರೆ ನರ ಪೈಸರಿಸಿದನೊ ಪೈ
ಸರಿಸಿದನೊ ಫಡ ಹೋಗಬಿಡದಿರಿ
ಕರುನೃಪಾಲನ ಪುಣ್ಯವೆನುತಟ್ಟಿದರು ಸೂಠಿಯಲಿ (ಕರ್ಣ ಪರ್ವ, ೧೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ರಥದ ಲಗಾಮಿನ ಹಗ್ಗಗಳನ್ನು ಎಳೆದು ಕುದುರೆಗಳನ್ನು ತಿರುಗಿಸಿ, ಶ್ರೀಕೃಷ್ಣನು ಹೂಂಕರಿಸುತ್ತಾ ರಥವನ್ನೋಡಿಸಿದನು. ಅದನ್ನು ನೋಡಿ ಉತ್ಸಾಹ ಭರದಿಂದ ಸಂಶಪ್ತಕರ ಸೇನೆಯವರು, ಅರೆರೆ ಅರ್ಜುನ ಜಾರಿಕೊಂಡು ಓಡಿ ಹೋಗಿ ಬಿಟ್ಟ. ಛೇ ಅವನು ಹೋಗದಂತೆ ತಡೆಯಿರಿ, ಇದು ಕೌರವನ ಪುಣ್ಯವೇ ಸರಿ. ಅವನು ಹೋಗದಂತೆ ತಡೆಯಿರಿ ಎನ್ನುತ್ತಾ ಅರ್ಜುನನನ್ನು ವೇಗದಿಂದ ಕೌರವನ ಸೇನೆ ಹಿಂಬಾಲಿಸಿದರು.

ಅರ್ಥ:
ತಿರುಹಿ: ತಿರುಹಿಸು; ವಾಘೆ:ಲಗಾಮು; ಹಿಡಿ: ಗ್ರಹಿಸು; ಹರಿ: ಕೃಷ್ಣ; ಹೂಂಕರ: ಆರ್ಭಟ; ಬಿಡು: ತೆರಳು; ರಥ: ಬಂಡಿ; ಮುರಿ: ತಿರುವು; ಕಂಡು: ನೋಡಿ; ಲಳಿ: ರಭಸ, ಆವೇಶ; ಮಸಗು:ಹರಡು; ಕೆರಳು; ತಿಕ್ಕು; ಸಮಸಪ್ತಕರು: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವವರು; ಸೇನೆ: ದಳ; ನರ: ಅರ್ಜುನ; ಪೈಸರಿಸು:ಹಿಮ್ಮೆಟ್ಟು, ಹಿಂಜರಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹೋಗಬಿಡದಿರಿ: ಹಿಡಿಯಿರಿ; ನೃಪಾಲ: ರಾಜ; ಪುಣ್ಯ: ಸುಕೃತ; ಅಟ್ಟು: ಬೆನ್ನಟ್ಟುವಿಕೆ; ಸೂಠಿ: ವೇಗ;

ಪದವಿಂಗಡಣೆ:
ತಿರುಹಿ +ವಾಘೆಯ +ಹಿಡಿದು +ಹರಿ +ಹೂಂ
ಕರಿಸಿ +ಬಿಟ್ಟನು +ರಥವನ್+ಆತನ
ಮುರಿವ +ಕಂಡುದು +ಲಳಿ +ಮಸಗಿ +ಸಮಸಪ್ತಕರ+ ಸೇನೆ
ಅರರೆ +ನರ +ಪೈಸರಿಸಿದನೊ +ಪೈ
ಸರಿಸಿದನೊ +ಫಡ +ಹೋಗಬಿಡದಿರಿ
ಕರುನೃಪಾಲನ +ಪುಣ್ಯವೆನುತ್+ಅಟ್ಟಿದರು +ಸೂಠಿಯಲಿ

ಅಚ್ಚರಿ:
(೧) ಸೈನ್ಯದವರು ಓಡಿಹೋದ ಎಂದು ಕಿರುಚುವ ಬಗೆಯನ್ನು ಚಿತ್ರಿಸಿರುವುದು
(೨) ಹ ಕಾರದ ತ್ರಿವಳಿ ಪದ – ಹಿಡಿದು ಹರಿ ಹೂಂಕರಿಸಿ