ಪದ್ಯ ೩೮: ಯಾವ ಬಾಣವನ್ನು ಕರ್ಣನ ಮೇಲೆ ಪ್ರಯೋಗ ಮಾಡಿದರು?

ಇನಿಬರೊಂದೇ ಸೂಠಿಯಲಿ ಮುಂ
ಮೊನೆಯ ಬೋಳೆಯ ಸುರಿದರಡಿಗಡಿ
ಗಿನಿಬರಂಬನು ಮುರಿದು ತರಿದನು ಸೂತ ವಾಜಿಗಳ
ತನತನಗೆ ಹೊಸ ರಥದೊಳೊಂದೊ
ಗ್ಗಿನಲಿ ಕವಿದೆಚ್ಚರು ಮಹಾಹವ
ವೆನಗೆ ಬಣ್ಣಿಸಲರಿದು ಧರಣೀಪಾಲ ಕೇಳೆಂದ (ಕರ್ಣ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧವನ್ನು ವಿವರಿಸುತ್ತಾ, ರಾಜ ಇವರೆಲ್ಲರೂ ಒಂದೇ ಬಾರಿ ಒಂದೇ ವೇಗದಿಂದ ಬೋಳೆಯೆಂಬ ಬಾಣವನ್ನು ಕರ್ಣನ ಮೇಲೆ ಬಿಟ್ಟರು. ಕರ್ಣನು ಇವರೆಲ್ಲರ ಬಾಣಗಳನ್ನು ಕಡಿದು ಅವರ ಸಾರಥಿಯರನ್ನು ಕುದುರೆಗಳನ್ನು ಕೊಂದನು. ಅವರೆಲ್ಲರೂ ಮತ್ತೆ ಹೊಸ ರಥಗಳನ್ನೇರಿ ಒಟ್ಟಾಗಿ ಕರ್ಣನನ್ನು ಮುತ್ತಿದರು. ರಾಜನೇ ಇವರ ಆ ಮಹಾಯುದ್ಧವನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ ಎಂದು ಸಂಜಯನು ಹೇಳಿದನು.

ಅರ್ಥ:
ಇನಿಬರು: ಇಷ್ಟು ಜನ; ಸೂಠಿ: ವೇಗ; ಮೊನೆ: ಹರಿತವಾದ, ತೀಕ್ಷ್ಣವಾದ; ಬೋಳೆ:ಒಂದು ಬಗೆಯ ಹರಿತವಾದ ಬಾಣ; ಸುರಿ: ಮೇಲಿನಿಂದ ಬೀಳು, ವರ್ಷಿಸು; ಅಡಿಗಡಿ: ಮತ್ತೆ ಮತ್ತೆ; ಅಂಬು: ಬಾಣ; ಮುರಿ: ಸೀಳು; ತರಿ:ಕಡಿ, ಕತ್ತರಿಸು; ಸೂತ: ರಥವನ್ನು ಓಡಿಸುವ; ವಾಜಿ: ಕುದುರೆ; ತನತನಗೆ:ಅವರವರೇ; ಹೊಸ: ನವೀನ; ರಥ: ಬಂಡಿ, ತೇರು; ಒಗ್ಗು: ಗುಂಪು, ಸಮೂಹ; ಕವಿ: ಆವರಿಸು; ಎಚ್ಚು: ಬಾಣಬಿಡು; ಆಹವ: ಯುದ್ಧ; ಬಣ್ಣಿಸು: ವರ್ಣಿಸು; ಅರಿ: ತಿಳಿ; ಧರಣೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಇನಿಬರ್+ಒಂದೇ +ಸೂಠಿಯಲಿ +ಮುಂ
ಮೊನೆಯ+ ಬೋಳೆಯ +ಸುರಿದರ್+ಅಡಿಗಡಿಗ್
ಇನಿಬರ್+ಅಂಬನು +ಮುರಿದು +ತರಿದನು +ಸೂತ +ವಾಜಿಗಳ
ತನತನಗೆ+ ಹೊಸ +ರಥದೊಳ್+ಒಂದ್+
ಒಗ್ಗಿನಲಿ +ಕವಿದೆಚ್ಚರು +ಮಹ+ಆಹವವ್
ಎನಗೆ +ಬಣ್ಣಿಸಲ್+ಅರಿದು +ಧರಣೀಪಾಲ+ ಕೇಳೆಂದ

ಅಚ್ಚರಿ:
(೧) ಬಾಣದ ಹೆಸರು – ಬೋಳೆ
(೨) ಅಡಿಗಡಿಗೆ, ತನತನಗೆ – ಪದದ ಬಳಕೆ

ಪದ್ಯ ೩೭: ಕರ್ಣನ ರಥವನ್ನು ಯಾವು ಬಾಣಗಳಿಂದ ಮುಚ್ಚಿದರು?

ಬಿಡನು ರಾಯನ ಬೆನ್ನನೀತನ
ಕೆಡಹಿ ರಕುತವ ಕುಡಿಯೆನುತ ಬಲ
ನೆಡನೊಳಿಟ್ಟಣಿಸಿದರು ಸಾತ್ಯಕಿ ನಕುಳ ಸಹದೇವ
ತುಡುಕಿದರು ಪಾಂಚಾಲ ಮತ್ಸ್ಯರ
ಗಡಣ ಕೈಕೆಯ ಪಂಚ ಪಾಂಡವ
ರಡಸಿದರು ಹೊದಿಸಿದರು ಕಣಿಯಲಿ ರವಿಸುತನ ರಥವ (ಕರ್ಣ ಪರ್ವ, ೧೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಈ ಕರ್ಣನು ಯುಧಿಷ್ಠಿರನ ಬೆನ್ನನ್ನು ಬಿಡುವುದಿಲ್ಲ, ಇವನನ್ನು ಸಾಯಿಸಿ ರಕ್ತವನ್ನು ಕುಡಿಯಬೇಕೆಂದು ಕರ್ಣನ ಎಡಬಲಗಳಲ್ಲಿ ಸಾತ್ಯಕಿ, ನಕುಲ, ಸಹದೇವ ಪಾಂಚಾಲರು ಮತ್ಸ್ಯರು ಕೈಕೆಯರು ಉಪಪಾಂಡವರ ಒಂದಾಗಿ ಬಂದು ಕರ್ಣನ ರಥವನ್ನು ಬಾಣಗಳಿಂದ ಮುಚ್ಚಿದರು.

ಅರ್ಥ:
ಬಿಡನು: ಬಿಡುವುದಿಲ್ಲ; ರಾಯ: ರಾಜ; ಬೆನ್ನು: ಹಿಂದೆ, ಹಿಂಭಾಗ; ಕೆಡಹು: ನಾಶಮಾಡು; ರಕುತ: ನೆತ್ತರು; ಕುಡಿ: ಪಾನ ಮಾಡು; ಬಲ: ಬಲಭಾಗ; ಎಡ: ವಾಮಭಾಗ; ಇಟ್ಟಣಿಸು: ದಟ್ಟವಾಗು, ಒತ್ತಾಗು; ತುಡುಕು: ಹೋರಾಡು, ಸೆಣಸು; ಗಡಣ: ಕೂಡಿಸುವಿಕೆ; ಅಡಸು: ಆಕ್ರಮಿಸು, ಮುತ್ತು; ಹೊದಿಸು: ಮುಚ್ಚು; ಕಣಿ: ಬಾಣ; ರವಿಸುತ: ಸೂರ್ಯನ ಮಗ (ಕರ್ಣ); ರಥ: ಬಂಡಿ;

ಪದವಿಂಗಡಣೆ:
ಬಿಡನು +ರಾಯನ +ಬೆನ್ನನ್+ಈತನ
ಕೆಡಹಿ +ರಕುತವ+ ಕುಡಿಯೆನುತ+ ಬಲನ್
ಎಡನೊಳ್+ಇಟ್ಟಣಿಸಿದರು +ಸಾತ್ಯಕಿ +ನಕುಳ +ಸಹದೇವ
ತುಡುಕಿದರು +ಪಾಂಚಾಲ +ಮತ್ಸ್ಯರ
ಗಡಣ+ ಕೈಕೆಯ +ಪಂಚ +ಪಾಂಡವರ್
ಅಡಸಿದರು +ಹೊದಿಸಿದರು+ ಕಣಿಯಲಿ +ರವಿಸುತನ +ರಥವ

ಅಚ್ಚರಿ:
(೧) ಯುದ್ಧವನ್ನು ವಿವರಿಸುವ ಪದಗಳು – ಅಡಸು, ಹೊದಿಸು, ಕಣಿ, ತುಡುಕು, ಕೆಡಹು

ಪದ್ಯ ೩೬: ಕರ್ಣನು ಯುಧಿಷ್ಠಿರನನ್ನು ಹೇಗೆ ಮಾತಿನಿಂದ ಇರಿದನು?

ದ್ರೋಣ ಬರಸಿದ ಭಾಷೆಯೆಂದೇ
ಕ್ಷೋಣಿಪತಿ ಬಗೆಯದಿರು ತನ್ನನು
ವಾಣಿಯದ ವಿವರದಲಿ ಸಲಹನು ಕೌರವರ ರಾಯ
ಪ್ರಾಣದಾಸೆಯ ಮರೆದು ತನ್ನೊಳು
ಕೇಣವಿಲ್ಲದೆ ಕಾದೆನುತ ನಿ
ತ್ರಾಣನನು ನಿಬ್ಬರದ ನುಡಿಗಳಲಿರಿದನಾ ಕರ್ಣ (ಕರ್ಣ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ದ್ರೋಣನಂತೆ ನನ್ನ ಮಾತು ಎಂದು ನೀನು ತಿಳಿಯದಿರು, ನನ್ನನ್ನು ವ್ಯವ್ಯಹಾರಕ್ಕನುಗುಣವಾಗಿ ಕೌರವನು ಸಾಕಲಿಲ್ಲ. ಇನ್ನು ನಿನ್ನ ಪ್ರಾಣದಾಶೆಯನ್ನು ಬಿಡು, ಯಾವ ಸಂಕೋಚವೂ ಇಲ್ಲದೆ ನಿನ್ನ ಸಂಪೂರ್ಣ ಶಕ್ತಿಯಿಂದ ಯುದ್ಧಮಾಡು ಎಂದು ಕರ್ಣನು ನಿಶ್ಯಕ್ತನಾಗಿದ್ದ ಯುಧಿಷ್ಠಿರನನ್ನು ಮಾತಿನಿಂದ ಇರಿದನು.

ಅರ್ಥ:
ಬರಸು: ತುಂಬು; ಭಾಷೆ: ಮಾತು; ಕ್ಷೋಣಿಪತಿ: ರಾಜ; ಬಗೆ: ಆಲೋಚನೆ, ಯೋಚನೆ; ವಾಣಿ: ಮಾತು; ವಿವರ: ವಿಸ್ತಾರ; ಸಲಹು: ಕಾಪಾಡು; ರಾಯ: ರಾಜ; ಪ್ರಾಣ; ಜೀವ; ಆಸೆ: ಬಯಕೆ; ಮರೆ: ನೆನಪಿನಿಂದ ದೂರ ಮಾಡು; ಕೇಣ: ಹೊಟ್ಟೆಕಿಚ್ಚು, ಮತ್ಸರ ; ಕಾದು: ಯುದ್ಧಮಾಡು; ನಿತ್ರಾಣ: ಶಕ್ತಿಹೀನತೆ; ನಿಬ್ಬರ: ಕಠೋರತೆ; ನುಡಿ: ಮಾತು; ಇರಿ: ಚುಚ್ಚು;

ಪದವಿಂಗಡಣೆ:
ದ್ರೋಣ +ಬರಸಿದ +ಭಾಷೆಯೆಂದೇ
ಕ್ಷೋಣಿಪತಿ +ಬಗೆಯದಿರು +ತನ್ನನು
ವಾಣಿಯದ +ವಿವರದಲಿ +ಸಲಹನು +ಕೌರವರ+ ರಾಯ
ಪ್ರಾಣದಾಸೆಯ+ ಮರೆದು +ತನ್ನೊಳು
ಕೇಣವಿಲ್ಲದೆ +ಕಾದೆನುತ+ ನಿ
ತ್ರಾಣನನು +ನಿಬ್ಬರದ +ನುಡಿಗಳಲ್+ಇರಿದನಾ +ಕರ್ಣ

ಅಚ್ಚರಿ:
(೧) ನ ಕಾರದ ಪದ – ನಿತ್ರಾಣನನು ನಿಬ್ಬರದ ನುಡಿಗಳಲಿರಿದನಾ
(೨) ಕ್ಷೋಣಿಪತಿ, ರಾಯ; ವಾಣಿ, ನುಡಿ – ಸಮನಾರ್ಥಕ ಪದ

ಪದ್ಯ ೩೫: ಕರ್ಣನು ಮೆಲ್ಲನೆ ಯಾರ ಎದುರು ಯುದ್ಧಮಾಡಲು ಹೋದನು?

ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕೆ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಪುನಃ ಅವರೆಲ್ಲರೂ ಒಟ್ಟುಗೂಡಿ, ಕೌರವನನ್ನು ಅತ್ತನಿಲ್ಲಿಸಿ ಭೀಮನೆಂಬ ಮದದಾನೆಯನ್ನು ಬಾಣಗಳಿಂದ ಕೆಣಕಿದರು. ಕರ್ಣನು ಈ ಕೋಲಾಹಲದ ಮಧ್ಯೆ ನಿಧಾನವಾಗಿ ಮತ್ತೆ ಧರ್ಮಜನ ಎದುರು ಹೋಗಿ ಅವನನ್ನು ತಡೆದು ಮೂದಲಿಸಿದನು.

ಅರ್ಥ:
ಮತ್ತೆ: ಪುನಃ; ಜೋಡಿಸು: ಸೇರಿಸು; ಒತ್ತು: ಆಕ್ರಮಿಸು, ಮುತ್ತು; ಮಹಾರಥ: ಪರಾಕ್ರಮಿ; ರಿಪು: ವೈರಿ; ಮತ್ತದಂತಿ: ಮದದಾನೆ; ಕೆಣಕು: ರೇಗಿಸು; ಕೆದರು: ಹರಡು; ಮಾರ್ಗಣ:ಬಾಣ, ಅಂಬು; ಅವನೀಪತಿ: ರಾಜ; ಮೋಹರ: ಯುದ್ಧ; ಮೆಲ್ಲನೆ: ನಿಧಾನ; ರಥ: ಬಂಡಿ; ಬಿಟ್ಟನು: ತೆಗೆದನು; ಮೂದಲಿಸು: ಹಂಗಿಸು; ಯಮಸೂನು: ಯಮನ ಮಗ (ಧರ್ಮರಾಯ); ಕಲಿ: ಶೂರ;

ಪದವಿಂಗಡಣೆ:
ಮತ್ತೆ +ಜೋಡಿಸಿ +ಕೌರವೇಂದ್ರನನ್
ಒತ್ತಲಿಕ್ಕೆ +ಮಹಾರಥರು +ರಿಪು
ಮತ್ತದಂತಿಯ +ಕೆಣಕಿದರು +ಕೆದರಿದರು +ಮಾರ್ಗಣವ
ಎತ್ತಲ್+ಅವನೀಪತಿಯ+ ಮೋಹರವ್
ಅತ್ತ +ಮೆಲ್ಲನೆ +ರಥವ +ಬಿಟ್ಟನು
ಮತ್ತೆ +ಮೂದಲಿಸಿದನು+ ಯಮಸೂನುವನು+ ಕಲಿ+ಕರ್ಣ

ಅಚ್ಚರಿ:
(೧) ಭೀಮನನ್ನು ಮತ್ತದಂತಿ ಎಂದು ಕರೆದಿರುವುದು
(೨) ಮತ್ತೆ – ೧, ೬ ಸಾಲಿನ ಮೊದಲ ಪದ
(೩) ಮತ್ತ, ಅತ್ತ, ಎತ್ತ – ಪ್ರಾಸ ಪದಗಳು

ಪದ್ಯ ೩೪: ಭೀಮನು ಮಹಾರಥರನ್ನು ಹೇಗೆ ಓಡಿಸಿದನು?

ಗುರುಸುತನನೈವತ್ತು ಬಾಣದ
ಲರಸನನುಜರ ಕೃಪನ ಕೃತವ
ರ್ಮರನು ಮೂನೂರಂಬಿನಲಿ ವೃಷಸೇನ ಸೌಬಲರ
ಸರಳು ಮೂವತ್ತರಲಿ ಪುನರಪಿ
ಗುರುಸುತಾದಿ ಮಹಾರಥರನೆರ
ಡೆರಡರಲಿ ಮುರಿಯೆಚ್ಚು ವಿಮುಖರ ಮಾಡಿದನು ಭೀಮ (ಕರ್ಣ ಪರ್ವ, ೧೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಭೀಮನು ಅಶ್ವತ್ಥಾಮನನ್ನು ಐವತ್ತು ಬಾಣಗಳಿಂದಲೂ, ಕೌರವನ ತಮ್ಮಂದಿರನ್ನು, ಕೃಪಚಾರ್ಯ, ಕೃತವರ್ಮರನ್ನು ಮುನ್ನೂರು ಬಾಣಗಳಿಂದ, ವೃಷಸೇನ ಶಕುನಿಗಳನ್ನು ಮೂವತ್ತು ಬಾಣಗಳಿಂದ ಹೊಡೆದು, ಮತ್ತೆ ಒಬ್ಬೊಬ್ಬರನ್ನು ಎರಡೆರಡು ಬಾಣಗಳಿಂದ ಘಾತಿಸಿ ಅವರು ಬೆನ್ನು ತೋರಿಸುವಂತೆ ಮಾಡಿದನು.

ಅರ್ಥ:
ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಬಾಣ: ಶರ; ಅರಸ: ರಾಜ; ಅನುಜ: ತಮ್ಮ; ಅಂಬು: ಬಾಣ; ಸರಳು: ಬಾಣ; ಪುನರಪಿ: ಪುನಃ; ಆದಿ: ಮುಂತಾದ; ಮುರಿ: ಸೀಳು; ಎಚ್ಚು:ಬಾಣಬಿಡು; ವಿಮುಖ: ಸೋತವನು;

ಪದವಿಂಗಡಣೆ:
ಗುರುಸುತನನ್+ಐವತ್ತು +ಬಾಣದಲ್
ಅರಸನ್+ಅನುಜರ+ ಕೃಪನ+ ಕೃತವ
ರ್ಮರನು +ಮೂನೂರ್+ಅಂಬಿನಲಿ+ ವೃಷಸೇನ+ ಸೌಬಲರ
ಸರಳು+ ಮೂವತ್ತರಲಿ+ ಪುನರಪಿ
ಗುರುಸುತಾದಿ+ ಮಹಾರಥರನ್+ಎರ
ಡೆರಡರಲಿ +ಮುರಿ+ಎಚ್ಚು +ವಿಮುಖರ +ಮಾಡಿದನು +ಭೀಮ

ಅಚ್ಚರಿ:
(೧) ಬಾಣ, ಸರಳು, ಅಂಬು – ಸಮನಾರ್ಥಕ ಪದ

ಪದ್ಯ ೩೩: ಬಂದ ಮಹಾರಥರಿಗೆ ಭೀಮನು ಏನು ಹೇಳಿದನು?

ಅಖಿಳ ಬಲಭಾರಣೆಯಲೊಂದೇ
ಮುಖದಲೊಡ್ಡಿತು ಪವನಜನ ಸಂ
ಮುಖದೊಳನಿಬರು ಕೆಣಕಿದರು ಕಲ್ಪಾಂತಭೈರವನ
ಸುಖಿಗಳಕಟಾ ನೀವು ಸಮರೋ
ನ್ಮುಖರಹರೆ ಕರ್ಣಂಗೆ ಸಾವಿನ
ಸಖಿಗಳೇ ಲೇಸೆನುತ ಕೈಕೊಂಡೆಚ್ಚನಾ ಭೀಮ (ಕರ್ಣ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕರ್ಣನ ಜೊತೆಗೂಡಿದ ಮಹಾರಥರೆಲ್ಲರೂ ಒಟ್ಟಾಗಿ ಯುದ್ಧಕ್ಕೆ ಹೋದರು, ಯುಗಾಂತ್ಯದ ಕಾಲಭೈರವನ ಹಾಗೆ ಭೀಮನನ್ನು ಕೆಣಕಿದರು. ಭೀಮನು, ಅಯ್ಯೋ ಸುಖವಾಗಿರುವುದನ್ನು ಬಿಟ್ಟು ನೀವೆಲ್ಲರೇಕೆ ಯುದ್ಧಕ್ಕೆ ಬಂದಿರಿ, ಕರ್ಣನಿಗೆ ಸಾವಿನಲ್ಲಿ ನೀವು ಸ್ನೇಹಿತರಾಗಿ ಬಯಸುವವರೇ, ಒಳ್ಳೆಯದು ಎಂದು ಹೇಳುತ್ತಾ ಬಾಣಗಳನ್ನು ಹೂಡಿ ಅವರಿಗೆ ಹೊಡೆದನು.

ಅರ್ಥ:
ಅಖಿಳ: ಎಲ್ಲಾ; ಬಲ: ಸೈನ್ಯ; ಭಾರಣೆ: ಮಹಿಮೆ; ಮುಖ: ಆನನ; ಒಡ್ಡು: ಅರ್ಪಿಸು, ಈಡುಮಾಡು; ಪವನಜ: ಭೀಮ; ಸಂಮುಖ: ಎದುರುಗಡೆ, ಮುಂಭಾಗ; ಇನಿಬರು: ಇಷ್ಟುಜನ; ಕೆಣಕು: ರೇಗಿಸು, ಪ್ರಚೋದಿಸು; ಕಲ್ಪಾಂತ: ಯುಗದ ಅಂತ್ಯ; ಭೈರವ: ಶಿವನ ಅವತಾರ; ಸುಖಿ: ಸಂತೋಷದಿಂದಿರುವವನು; ಅಕಟ: ಅಯ್ಯೋ; ಸಮರ: ಯುದ್ಧ; ಉನ್ಮುಖ: ಸಿದ್ಧವಾಗಿರುವ, ಕಾತರನಾದ; ಸಾವು: ಮರಣ; ಸಖಿ: ಸ್ನೇಹಿತ; ಲೇಸು: ಒಳ್ಳೆಯದು; ಕೈಕೊಂಡು: ತೆಗೆದುಕೊಂಡು; ಎಚ್ಚು; ಬಾಣಬಿಡು;

ಪದವಿಂಗಡಣೆ:
ಅಖಿಳ +ಬಲಭಾರಣೆಯಲ್+ಒಂದೇ
ಮುಖದಲ್+ಒಡ್ಡಿತು +ಪವನಜನ +ಸಂ
ಮುಖದೊಳ್+ಅನಿಬರು +ಕೆಣಕಿದರು +ಕಲ್ಪಾಂತ+ಭೈರವನ
ಸುಖಿಗಳ್+ಅಕಟಾ +ನೀವು +ಸಮರೋ
ನ್ಮುಖರಹರೆ+ ಕರ್ಣಂಗೆ +ಸಾವಿನ
ಸಖಿಗಳೇ+ ಲೇಸೆನುತ+ ಕೈಕೊಂಡ್+ಎಚ್ಚನಾ +ಭೀಮ

ಅಚ್ಚರಿ:
(೧) ಬಂದ ಮಹಾರಥರನ್ನು ಭೀಮನು ಕರೆದ ಬಗೆ – ಕರ್ಣಂಗೆ ಸಾವಿನ ಸಖಿಗಳೇ

ಪದ್ಯ ೩೨: ಕರ್ಣನ ಸಹಾಯಕ್ಕೆ ಯಾರು ಬಂದರು?

ಭೀಮಸೇನನ ದಳಪತಿಯ ಸಂ
ಗ್ರಾಮ ಮಸೆದುದು ಮತ್ತೆ ಕೈಕೊಳ
ಲೀ ಮಹಾರಥರೆನುತ ಕೈಬೀಸಿದನು ಕುರುರಾಯ
ಸೋಮದತ್ತನ ಸೂನು ಕೃಪನು
ದ್ಧಾಮ ಶಕುನಿ ಸುಯೋಧನಾನುಜ
ನಾ ಮಹಾಹವಕೊದಗಿದರು ಕೃತವರ್ಮ ಗುರುಸುತರು (ಕರ್ಣ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣ ಮತ್ತು ಭೀಮರ ಯುದ್ಧವು ಪ್ರಾರಂಭವಾಯಿತು, ಇದನ್ನು ಗಮನಿಸಿದ ದುರ್ಯೋಧನನು ಕರ್ಣನಿಗೆ ಸಹಾಯವಾಗಲೆಂದು ಪರಾಕ್ರಮಿಗಳಾದ ಸೋಮದತ್ತನ ಮಕ್ಕಳು (ಭೂರಿ, ಭೂರಿಶ್ರವ, ಶಲ ಎನ್ನುವವರು ಸೋಮದತ್ತನ ಮಕ್ಕಳು), ಕೃಪಾಚಾರ್ಯರು, ಶಕುನಿ, ಕೃತವರ್ಮ, ಅಶ್ವತ್ಥಾಮ, ದುಶ್ಯಾಸನರನ್ನು ಸನ್ನೆ ಮಾಡಿ ಕಳುಹಿಸಿದನು.

ಅರ್ಥ:
ದಳಪತಿ: ಸೇನಾಧಿಪತಿ; ಸಂಗ್ರಾಮ: ಯುದ್ಧ; ಮಸೆ: ಹರಿತವಾದುದು; ಮತ್ತೆ: ಪುನಃ; ಕೈಕೊಳಲು: ಒದಗಲು; ಮಹಾರಥ: ಪರಾಕ್ರಮಿ; ಕೈಬೀಸು: ಸನ್ನೆ ಮಾಡು; ರಾಯ: ರಾಜ; ಸೂನು: ಪುತ್ರ; ಉದ್ದಾಮ: ಶ್ರೇಷ್ಠ; ಅನುಜ: ತಮ್ಮ; ಆಹವ: ಯುದ್ಧ; ಒದಗು: ಲಭ್ಯ, ದೊರೆತುದು; ಸುತ: ಮಗ;

ಪದವಿಂಗಡಣೆ:
ಭೀಮಸೇನನ +ದಳಪತಿಯ+ ಸಂ
ಗ್ರಾಮ +ಮಸೆದುದು +ಮತ್ತೆ +ಕೈಕೊಳಲ್
ಈ +ಮಹಾರಥರೆನುತ +ಕೈಬೀಸಿದನು +ಕುರುರಾಯ
ಸೋಮದತ್ತನ +ಸೂನು +ಕೃಪನ್
ಉದ್ಧಾಮ+ ಶಕುನಿ +ಸುಯೋಧನ+ಅನುಜನ್
ಆ+ ಮಹ+ಆಹವಕ್+ಒದಗಿದರು +ಕೃತವರ್ಮ +ಗುರುಸುತರು

ಅಚ್ಚರಿ:
(೧) ಸಹಾಯಕ್ಕೆ ಬಂದ ಪರಾಕ್ರಮಿಗಳು – ಭೂರಿ, ಭೂರಿಶ್ರವ, ಶಲ, ಕೃಪ, ಶಕುನಿ, ದುಶ್ಯಾಸನ, ಕೃತವರ್ಮ, ಅಶ್ವತ್ಥಾಮ

ಪದ್ಯ ೩೧: ಭೀಮನು ಏನು ಯೋಚಿಸಿ ಕರ್ಣನನ್ನು ನಿಲ್ಲಿಸಲು ಎದುರಾದನು?

ಆಳಲಿಸಿದನೇ ಧರ್ಮಪುತ್ರನ
ಬಳಿಚಿ ಬಿಟ್ಟೆನು ನಾಯ ಕೊಲ್ಲದೆ
ಕಳುಹಿದರೆ ಬೆಂಬಿಡನಲಾ ಮರುಕೊಳಿಸಿ ಮರುಕೊಳಿಸಿ
ತಲೆ ಕೊರಳ ಸಂಪ್ರತಿಗೆ ಭೇದವ
ಬಳಸಿದರೆ ಸಾಕೈಸಲೇ ಎನು
ತುಲಿದು ಕಣೆಗಳ ಕೆದರಿ ಕರ್ಣನ ತರುಬಿದನು ಭೀಮ (ಕರ್ಣ ಪರ್ವ, ೧೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಈ ಕರ್ಣನು ಮತ್ತೆ ಅಣ್ಣನನ್ನು ಅಳಲಿಸುತ್ತಿದ್ದಾನೆ, ಈ ನಾಯನ್ನು ಕೊಲ್ಲದೆ ಕೈ ಬಿಟ್ಟರೆ ಅಣ್ಣನಿಗೆ ಮತ್ತೆ ಮತ್ತೆ ತೊಂದರೆ ಕೊಡುತ್ತಿದ್ದಾನೆ, ಇವನ ತಲೆ ಮತ್ತು ಕೊರಳಿನ ಸಂಧಿಯನ್ನು ತಪ್ಪಿಸಿದರೆ ಸಾಕು ಎಂದುಕೊಂಡು ಭೀಮನು ಆರ್ಭಟಿಸುತ್ತಾ ಕರ್ಣನನ್ನು ಬಾಣಗಳಿಂದ ತಡೆದನು.

ಅರ್ಥ:
ಅಳಲು: ದುಃಖ; ಧರ್ಮಪುತ್ರ: ಯುಧಿಷ್ಠಿರ; ಬಳಿಚು: ಕತ್ತರಿಸು; ಬಿಟ್ಟೆ: ಬಿಡು; ನಾಯ: ಶ್ವಾನ; ಕೊಲ್ಲು: ಸಾಯಿಸು; ಕಳುಹು: ಹಿಂದಿರುಗು; ಬೆಂಬಿಡು: ಹಿಂಬಾಲಿಸದಿರು; ಮರುಕೊಳಿಸು: ಪುನಃ ಕಾಣಿಸಿಕೊಳ್ಳು;ತಲೆ: ಶಿರ; ಕೊರಳು: ಕತ್ತು; ಸಂಪ್ರತಿ:ತಕ್ಷಣ; ಭೇದ: ಮುರಿಯುವುದು; ಬಳಸು: ಉಪಯೋಗಿಸು; ಸಾಕು: ನಿಲ್ಲಿಸು; ಐಸಲೇ: ಅಲ್ಲವೇ; ಉಲಿ: ಧ್ವನಿ; ಕಣೆ: ಬಾಣ; ಕೆದರು: ಹರಡು; ತರುಬು:ತಡೆ, ನಿಲ್ಲಿಸು;

ಪದವಿಂಗಡಣೆ:
ಆಳಲಿಸಿದನೇ +ಧರ್ಮಪುತ್ರನ
ಬಳಿಚಿ +ಬಿಟ್ಟೆನು +ನಾಯ +ಕೊಲ್ಲದೆ
ಕಳುಹಿದರೆ+ ಬೆಂಬಿಡನಲಾ+ ಮರುಕೊಳಿಸಿ+ ಮರುಕೊಳಿಸಿ
ತಲೆ +ಕೊರಳ +ಸಂಪ್ರತಿಗೆ +ಭೇದವ
ಬಳಸಿದರೆ+ ಸಾಕ್+ಐಸಲೇ +ಎನುತ್
ಉಲಿದು +ಕಣೆಗಳ +ಕೆದರಿ+ ಕರ್ಣನ +ತರುಬಿದನು +ಭೀಮ

ಅಚ್ಚರಿ:
(೧) ಕ ಅಕ್ಷರದ ತ್ರಿವಳಿ ಪದ – ಕಣೆಗಳ ಕೆದರಿ ಕರ್ಣನ
(೨) ಕರ್ಣನನ್ನು ಕೋಪದಿಂದ ನಾಯ ಎಂದು ಭೀಮನು ಕರೆಯುವುದು
(೩) ಕೊಲ್ಲುವೆನೆಂದು ಹೇಳಲು – ತಲೆ ಕೊರಳ ಸಂಪ್ರತಿಗೆ ಭೇದವ ಬಳಸಿದರೆ ಸಾಕೈಸಲೇ