ಪದ್ಯ ೨೩: ಕರ್ಣನನ್ನು ಯಾರು ಅಡ್ಡಗಟ್ಟಿದರು?

ಕಾಲಯಮನೋ ಕರ್ಣನೋ ಭೂ
ಪಾಲಕನ ಬೆಂಬತ್ತಿದನು ಪಾಂ
ಚಾಲೆಯೋಲೆಯ ಕಾವರಿಲ್ಲಾ ಎನುತ ಬಲನೊದರೆ
ಕೇಳಿದನು ಕಳವಳವನೀ ರಿಪು
ಜಾಲವನು ಜರೆದಡ್ಡಹಾಯ್ದನು
ಗಾಳಿಗುದಿಸಿದ ವೀರನದ್ಭುತ ಸಿಂಹನಾದದಲಿ (ಕರ್ಣ ಪರ್ವ, ೧೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣನು ಬರುವ ಬಗೆಯನ್ನು ಕಂಡ ಪಾಂಡವರ ಸೈನ್ಯವು ಇವನು ಕರ್ಣನೋ, ಪ್ರಳಯಕಾಲದ ಯಮನೋ? ಧರ್ಮಜನನ್ನು ಬೆನ್ನು ಹತ್ತಿದ್ದಾನೆ. ಅರಸನನ್ನು ಕಾಪಾದುವವರೇ ಇಲ್ಲ ಎಂದು ಹೆದರಿಕೂಗಿಕೂಳ್ಳಲು ಭೀಮನು ಈ ಸದ್ದನ್ನು ಕೇಳಿ ಶತ್ರುಗಳನ್ನು ಜರೆದು ಅದ್ಭುತವಾದ ಸಿಂಹನಾದವನ್ನು ಮಾಡುತ್ತಾ ಕರ್ಣನನ್ನು ಅಡ್ಡಗಟ್ಟಿದನು.

ಅರ್ಥ:
ಕಾಲ: ಪ್ರಳಯಕಾಲ, ಅಂತ್ಯದ ಸಮಯ; ಯಮ: ಮೃತ್ಯುದೇವತೆ; ಭೂಪಾಲಕ: ರಾಜ, ನೃಪ; ಬೆಂಬತ್ತಿ: ಹಿಂದೆ; ಪಾಂಚಾಲೆ: ದ್ರೌಪದಿ; ಓಲೆ: ಕಿವಿಯ ಆಭರಣ; ಕಾವ: ರಕ್ಷಿಸುವ; ಬಲ: ಸೈನ್ಯ; ಒದರು: ಹೇಳು, ಅರಚು; ಕೇಳು: ಆಲಿಸು; ಕಳವಳ: ಆತಂಕ; ರಿಪು: ವೈರಿ; ಜಾಲ:ಬಲೆ; ಜರೆ: ಬಯ್ಯು, ಹೀಯಾಳಿಸು; ಅಡ್ಡಹಾಕು: ತಡೆ; ಹಾಯ್ದು: ಬಂದು; ಗಾಳಿ: ವಾಯು; ಉದಿಸು: ಹುಟ್ಟು; ವೀರ: ಶೂರ, ಪರಾಕ್ರಮಿ; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ;

ಪದವಿಂಗಡಣೆ:
ಕಾಲಯಮನೋ +ಕರ್ಣನೋ +ಭೂ
ಪಾಲಕನ+ ಬೆಂಬತ್ತಿದನು +ಪಾಂ
ಚಾಲೆ+ಓಲೆಯ +ಕಾವರಿಲ್ಲಾ+ ಎನುತ+ ಬಲನ್+ಒದರೆ
ಕೇಳಿದನು +ಕಳವಳವನ್+ಈ+ ರಿಪು
ಜಾಲವನು+ ಜರೆದ್+ಅಡ್ಡ+ಹಾಯ್ದನು
ಗಾಳಿಗ್+ಉದಿಸಿದ +ವೀರನ್+ಅದ್ಭುತ +ಸಿಂಹನಾದದಲಿ

ಅಚ್ಚರಿ:
(೧) ಭೀಮನನ್ನು ಗಾಳಿಗುದಿಸಿದ ಎಂದು ಕರೆದಿರುವುದು
(೨) ಧರ್ಮರಾಯನಿಗೆ ರಕ್ಷಣೆಕೊಡುವವರಿಲ್ಲ ಎಂದು ಹೇಳಲು – ಪಾಂಚಾಲೆಯೋಲೆಯ ಕಾವರಿಲ್ಲಾ ಎಂದು ಕರೆದಿರುವುದು

ಪದ್ಯ ೨೨: ಕರ್ಣನು ಯಾರನ್ನು ಹಿಡಿಯಲು ಮುನ್ನಡೆದನು?

ಖಾತಿ ಮೊಳೆತುದು ಮತ್ತೆ ಬಲ ಸಂ
ಘಾತಕಭಯವನಿತ್ತು ಬಾಣ
ವ್ರಾತವನು ಹೊದೆಗೆದರಿ ಹೊಸ ಹೊಗರೆದ್ದನಡಿಗಡಿಗೆ
ಭೂತನಾಥನ ಮರೆಯ ಹೊಗಲಿ ಮ
ಹೀತಳೇಶನ ಹಿಡಿವೆನೆನುತ ವಿ
ಧೂತ ರಿಪುಬಲ ರಥವ ಬಿಟ್ಟನು ಧರ್ಮಜನ ಹೊರೆಗೆ (ಕರ್ಣ ಪರ್ವ, ೧೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶಲ್ಯನ ಮಾತುಗಳಿಂದ ಉತ್ತೇಜನಗೊಂಡ ಕರ್ಣನು ಕರ್ಣನಿಗೆ ಮತ್ತೆ ಕೋಪವುಕ್ಕೇರಿತು. ತನ್ನ ಸೈನ್ಯಕ್ಕೆ ಅಭಯವನ್ನಿತ್ತು ಮತ್ತೆ ಹೊಸ ಉತ್ಸಾಹದಿಂದ ಉಬ್ಬಿ ಧರ್ಮಜನು ಶಿವನನ್ನೇ ಮರೆಹೊಕ್ಕರೂ ಅವನನ್ನು ಸೆರೆಹಿಡಿಯುತ್ತೇನೆ, ಎಂದು ಧರ್ಮಜನ ಬಳಿಗೆ ರಥವನ್ನು ಬಿಟ್ಟನು.

ಅರ್ಥ:
ಖಾತಿ:ಕೋಪ, ಕ್ರೋಧ; ಮೊಳೆ: ಚಿಗುರು, ಅಂಕುರಿಸು, ಮೂಡು; ಬಲ: ಶಕ್ತಿ, ಸೈನ್ಯ; ಸಂಘಾತ: ಹೊಡೆತ, ಘರ್ಷಣೆ; ಅಭಯ: ರಕ್ಷಣೆ, ನಿರ್ಭಯತೆ; ಬಾಣ: ಶರ; ವ್ರಾತ: ಗುಂಪು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕೆದರು: ಚದುರು; ಹೊಸ: ನವೀನ; ಹೊಗರು: ಪ್ರಕಾಶಿಸು, ಹೊಳೆ; ಅಡಿಗಡಿಗೆ: ಮತ್ತೆ ಮತ್ತೆ; ಭೂತನಾಥ: ಶಿವ; ಮರೆ:ಮೊರೆ, ಶರಣಾಗತಿ; ಹೊಗಲು: ನಡೆ, ಹೋಗು; ಮಹೀತಳ: ಭೂಮಿ; ಮಹೀತಳೇಶ:ರಾಜ, ದೊರೆ; ಹಿಡಿ: ಬಂಧಿಸು; ವಿಧೂತ: ತೊರೆದ, ತ್ಯಜಿಸಿದ; ರಿಪುಬಲ: ವೈರಿಸೈನ್ಯ; ಬಿಟ್ಟು: ತೊರೆದು; ಹೊರೆ; ಹತ್ತಿರ

ಪದವಿಂಗಡಣೆ:
ಖಾತಿ +ಮೊಳೆತುದು +ಮತ್ತೆ +ಬಲ +ಸಂ
ಘಾತಕ್+ಅಭಯವನಿತ್ತು +ಬಾಣ
ವ್ರಾತವನು +ಹೊದೆಗೆದರಿ +ಹೊಸ +ಹೊಗರೆದ್ದನ್+ಅಡಿಗಡಿಗೆ
ಭೂತನಾಥನ+ ಮರೆಯ +ಹೊಗಲಿ +ಮ
ಹೀತಳೇಶನ+ ಹಿಡಿವೆನ್+ಎನುತ +ವಿ
ಧೂತ +ರಿಪುಬಲ+ ರಥವ+ ಬಿಟ್ಟನು +ಧರ್ಮಜನ +ಹೊರೆಗೆ

ಅಚ್ಚರಿ:
(೧) ಕರ್ಣನ ದೃಢ ನಿರ್ಧಾರ – ಭೂತನಾಥನ ಮರೆಯ ಹೊಗಲಿ ಮಹೀತಳೇಶನ ಹಿಡಿವೆನೆನುತ

ಪದ್ಯ ೨೧: ಶಲ್ಯನು ಕರ್ಣನಿಗೆ ಹೇಗೆ ಧೈರ್ಯ ತುಂಬಿದನು?

ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ (ಕರ್ಣ ಪರ್ವ, ೧೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಯ್ಯೋ ಕರ್ಣ, ಛೇ, ನೀನೇನು ಮರುಳೇ, ಹುಚ್ಚನಂತೆ ಮನಸ್ಸನ್ನು ಕುಂದುಗೊಳಿಸಬೇಡ. ಸೋಲು ಗೆಲುವುಗಳು ದೈವಾಧೀನವಾಗಿರುವವು. ಒಂದು ಸೋಲಿನಿಂದ ನಿನ್ನ ಪರಾಕ್ರಮಕ್ಕೆ ಕುಂದುಂಟಾಗುವುದಿಲ್ಲ. ದೇವ ದಾನವರಲ್ಲಿ ಕಲಹವಾದಾಗ ಅನೇಕ ವೀರರಿದ್ದರೂ ಮಹಾಬಲಶಾಲಿಗಳೇ ದುರ್ಬಲಗಾರಿ ಸೋತರು. ಹೆದರಬೇಡ, ನಿನ್ನ ಬಿಲ್ಲನ್ನು ಹಿಡಿ ಎಂದು ಕರ್ಣನನ್ನು ಶಲ್ಯನು ಹುರಿದುಂಬಿಸಿದನು.

ಅರ್ಥ:
ಮರುಳ: ಮೂಢ; ರಾಧೇಯ: ಕರ್ಣ; ಫಡ: ಛೀ, ಮೂದಲಿಸುವ ಶಬ್ದ; ಮನ: ಮನಸ್ಸು; ಇಳುಹು: ಇಳಿಸು; ತಪ್ಪು:ಸುಳ್ಳಾಗು; ಸೋಲು: ಅಪಜಯ; ಗೆಲುವು: ಜಯ; ದೈವ: ಭಗವಂತ; ಅಧೀನ: ವಶ; ಆಳುತನ: ಪರಾಕ್ರಮ; ಕುಂದು: ಲೋಪ; ಹಲಬರು: ಅನೇಕ ಜನರು; ಅಮರ: ದೇವ; ಅಸುರ: ದಾನವ, ರಾಕ್ಷಸ; ಹೆಬ್ಬಲ: ಮಹಾಬಲಶಾಲಿ; ದುರ್ಬಲ: ನಿಶ್ಯಕ್ತ; ಮನ: ಮನಸ್ಸು; ಅಳುಕು: ಹೆದರು; ಹಿಡಿ: ತೆಗೆದುಕೋ; ಧನು: ಧನಸ್ಸು; ಅನುವಾಗು: ತಯಾರಾಗು, ಸಿದ್ಧನಾಗು;

ಪದವಿಂಗಡಣೆ:
ಎಲೆ +ಮರುಳೆ +ರಾಧೇಯ +ಫಡ +ಮನವ್
ಇಳುಹದಿರು +ತಪ್ಪೇನು +ಸೋಲವು
ಗೆಲವು+ ದೈವಾಧೀನ+ ನಿನ್+ಆಳ್ತನಕೆ +ಕುಂದೇನು
ಹಲಬರ್+ಅಮರ್+ಅಸುರರೊಳಗೆ+ ಹೆ
ಬ್ಬಲವೆ+ ದುರ್ಬಲವಾಯ್ತು +ನೀ +ಮನವ್
ಅಳುಕದಿರು+ ಹಿಡಿ+ ಧನುವನ್+ಅನುವಾಗ್+ಎಂದನಾ +ಶಲ್ಯ

ಅಚ್ಚರಿ:
(೧) ಹುರಿದುಂಬಿಸುವ ಪದಗಳು – ಮನವಿಳುಹದಿರು ತಪ್ಪೇನು ಸೋಲವು ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು; ನೀ ಮನವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ
(೨) ಸೋಲು, ಗೆಲುವು; ಹೆಬ್ಬಲ, ದುರ್ಬಲ; ಅಮರ, ಅಸುರ – ವಿರುದ್ಧ ಪದಗಳು

ಪದ್ಯ ೨೦: ಕರ್ಣನೇಕೆ ಬೇಸರಪಟ್ಟನು?

ಪೂತು ದೈವವೆ ಭೀಮಸೇನನ
ಘಾತಿಯಲಿ ಸೊಪ್ಪಾದೆನೈ ಸುಡ
ಲೇತಕೀ ಧನುವೇತಕೀ ದಿವ್ಯಾಸ್ತ್ರನಿಕರಗಳು
ಜಾತಿ ನಾನೆಂದೆನ್ನನಗ್ಗಿಸಿ
ಭೂತಳಾಧಿಪ ಸಾಕಿದನು ತಾ
ನೇತರಿಂದುಪಕಾರಿ ಎಂದನು ಸುಯ್ದು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ ತಮ್ಮಂದಿರನ್ನು ಕೊಂದ ಸುದ್ದಿಯನ್ನು ಕೇಳಿ ಅವಮಾನದಿಂದ ಕುದಿಯುತ್ತಾ, ಭಲೇ ವಿಧಿಯೇ ಭೀಮನ ಹೊಡೆತದಿಂದ ನಾನು ಬಲಹೀನನಾದೆ, ಈ ಬಿಲ್ಲು, ಈ ದಿವ್ಯಾಸ್ತ್ರಗಳೀದ್ದರೂ ಏನು ಫಲ? ಇವನ್ನು ಸುಡಬೇಕು, ಉತ್ತಮ ಜಾತಿಯವನೆಂದು ನನ್ನನ್ನು ಮೇಲೆತ್ತಿ ಸಾಕಿದ ಕೌರವನಿಗೆ ನಾನು ಮಾಡಿದ ಉಪಕಾರವಾದರೂ ಏನು? ಎಂದು ಕರ್ಣನು ನಿಟ್ಟುಸಿರು ಬಿಟ್ಟನು.

ಅರ್ಥ:
ಪೂತು: ಭಲೇ, ಭೇಷ್; ದೈವ: ಭಗವಂತ; ಘಾತ: ಹೊಡೆತ, ಪೆಟ್ಟು; ಸೊಪ್ಪು: ಕುಗ್ಗಿದ ಸ್ಥಿತಿ; ಸುಡು: ದಹಿಸು; ಧನು: ಧನಸ್ಸು; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧಗಳು; ನಿಕರ: ಗುಂಪು; ಜಾತಿ: ಕುಲ; ಅಗ್ಗ: ಶ್ರೇಷ್ಠ; ಭೂತಳಾಧಿಪ: ರಾಜ; ಸಾಕು: ಸಲಹು; ಉಪಕಾರ: ಸಹಾಯ; ಸುಯ್ದು: ನಿಟ್ಟುಸಿರು; ಕಲಿ: ಶೂರ;

ಪದವಿಂಗಡಣೆ:
ಪೂತು +ದೈವವೆ +ಭೀಮ+ಸೇನನ
ಘಾತಿಯಲಿ +ಸೊಪ್ಪಾದೆನೈ +ಸುಡಲ್
ಏತಕೀ+ ಧನುವ್+ಏತಕೀ +ದಿವ್ಯಾಸ್ತ್ರ+ನಿಕರಗಳು
ಜಾತಿ +ನಾನೆಂದ್+ಎನ್ನನ್+ಅಗ್ಗಿಸಿ
ಭೂತಳಾಧಿಪ+ ಸಾಕಿದನು+ ತಾನ್
ಏತರಿಂದ್+ಉಪಕಾರಿ +ಎಂದನು +ಸುಯ್ದು +ಕಲಿಕರ್ಣ

ಅಚ್ಚರಿ:
(೧) ಘಾತಿ, ಜಾತಿ – ಪ್ರಾಸ ಪದ
(೨) ಏತಕೀ – ೨ ಬಾರಿ ಬಳಕೆ
(೩) ಕೃತಜ್ಞತೆಯನ್ನು ತೋರುವ ಮಾತು – ಜಾತಿ ನಾನೆಂದೆನ್ನನಗ್ಗಿಸಿ ಭೂತಳಾಧಿಪ ಸಾಕಿದನು

ಪದ್ಯ ೧೯: ಕರ್ಣನು ಅವಮಾನದಲಿ ಏಕೆ ಕುದಿದನು?

ಶಿವ ಶಿವಾ ಕೌರವನ ತಮ್ಮದಿ
ರವಗಡಿಸಿದರು ನಂದೋಪನಂದರು
ಜವಗೆ ಜೇವಣಿಯಾದರೇ ಕಲಿ ಭೀಮನಿದಿರಿನಲಿ
ತಿವಿವರಿನ್ನಾರೆನುತ ಗುರುಸಂ
ಭವ ಕೃಪಾದಿಗಳೊತ್ತಿ ನಡೆತಹ
ರವವ ಕೇಳಿದು ಕುದಿದನವಮಾನದಲಿ ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಯ್ಯೋ ಶಿವ ಶಿವಾ ಭೀಮನು ಕೌರವನ ತಮ್ಮಂದಿರನ್ನು ಸೋಲಿಸಿ ಕೊಂದನು, ಅವರು ಭೀಮನ ಮೇಲೆ ಯುದ್ಧ ಮಾಡಿ ಯಮನ ಊಟಕ್ಕೆ ಗ್ರಾಸವಾದರೇ? ಇವನನ್ನು ನಿಲ್ಲಿಸಿ ಯುದ್ಧಮಾಡುವವರಾರು ಎಂದು ಕೃಪ, ಅಶ್ವತ್ಥಾಮ ಮುಂತಾದವರು ಹೇಳುತ್ತಾ ಬರುತ್ತಿದ್ದ ಶಬ್ದವನ್ನು ಕೇಳಿ ಕರ್ಣನು ಅವಮಾನದಿಂದ ಕೋಪಗೊಂಡು ಕುದಿದನು.

ಅರ್ಥ:
ತಮ್ಮ: ಅನುಜ; ಅವಗಡಿಸು: ಸೋಲಿಸು; ನಂದ: ಮಗ; ಜವ: ಯಮ; ಜೀವಣಿ: ಗ್ರಾಸ, ಭೋಜನ; ಕಲಿ: ಶೂರ; ಇರಿದು: ಎದುರು; ತಿವಿ: ಚುಚ್ಚು; ಗುರುಸಂಭವ: ದ್ರೋಣರ ಮಗ (ಅಶ್ವತ್ಥಾಮ); ಆದಿ: ಮುಂತಾದ; ಒತ್ತು: ಚುಚ್ಚು; ಒಟ್ಟಿ: ಒಟ್ಟಿಗೆ; ರವ: ಶಬ್ದ; ಕೇಳು: ಆಲಿಸು; ಅವಮಾನ: ಅಗೌರವ; ಕುದಿ: ಸಂಕಟ, ಕೋಪ;

ಪದವಿಂಗಡಣೆ:
ಶಿವ+ ಶಿವಾ +ಕೌರವನ+ ತಮ್ಮದಿರ್
ಅವಗಡಿಸಿದರು +ನಂದೋಪನಂದರು
ಜವಗೆ+ ಜೇವಣಿಯಾದರೇ +ಕಲಿ +ಭೀಮನ್+ಇದಿರಿನಲಿ
ತಿವಿವರ್+ಇನ್ನಾರ್+ಎನುತ +ಗುರು+ಸಂ
ಭವ+ ಕೃಪಾದಿಗಳ್+ಒತ್ತಿ +ನಡೆತಹ
ರವವ+ ಕೇಳಿದು +ಕುದಿದನ್+ಅವಮಾನದಲಿ +ಕಲಿಕರ್ಣ

ಅಚ್ಚರಿ:
(೧) ನೋವು, ವಿಸ್ಮಯವನ್ನು ಸೂಚಿಸಲು ಬಳಸುವ ಪದ – ಶಿವ ಶಿವಾ
(೨) ಉಪಮಾನದ ಪ್ರಯೋಗ – ನಂದೋಪನಂದರು ಜವಗೆ ಜೇವಣಿಯಾದರೇ ಕಲಿ ಭೀಮನಿದಿರಿನಲಿ

ಪದ್ಯ ೧೮: ಭೀಮನು ಯುದ್ಧದಲ್ಲಿ ಹೇಗೆ ತೋರಿದನು?

ಸವರಿದನು ರವಿಸುತನ ಪರಿವಾ
ರವನು ಮಗುಳುಬ್ಬೆದ್ದ ಕೌರವ
ನಿವಹದಲಿ ಕಾದಿದನು ದುರ್ಯೋಧನ ಸಹೋದರರ
ತಿವಿದು ನಾಲ್ವರ ಕೊಂದನುಬ್ಬರಿ
ಸುವರ ಗರ್ವವ ಮುರಿದು ಪ್ರಳಯದ
ಭವನ ರೌದ್ರದವೋಲು ಭುಲ್ಲಯಿಸಿದನು ಕಲಿಭೀಮ (ಕರ್ಣ ಪರ್ವ, ೧೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭೀಮನು ಕರ್ಣನ ಪರಿವಾರದವರನ್ನೆಲ್ಲಾ ಕೊಂದು, ಉದ್ವೇಗದಿಂದ ಬಂದ ಕೌರವರ ಗುಂಪಿನಲ್ಲಿ ಸೆಣಸಿ ದುರ್ಯೋಧನನ ನಾಲ್ಕು ತಮ್ಮಂದಿರನ್ನು ಕೊಂದು ಗರ್ವದಿಂದ ಉಬ್ಬಿ ಬಂದವರ ಗೌರವವನ್ನು ಮುರಿದು, ಪ್ರಳಯ ರುದ್ರನ ರೌದ್ರಕಾರವನ್ನು ಯುದ್ಧರಂಗದಲ್ಲಿ ಮೆರೆದನು.

ಅರ್ಥ:
ಸವರು: ನಾಶಮಾಡು; ರವಿಸುತ: ಸೂರ್ಯನ ಮಗ (ಕರ್ಣ); ಪರಿವಾರ: ಬಂಧುಜನ; ಮಗುಳು: ಹಿಂತಿರುಗು; ಉಬ್ಬು: ಹಿಗ್ಗು, ಹೆಚ್ಚಾಗು; ನಿವಹ: ಗುಂಪು; ಕಾದು:ಯುದ್ಧ, ಜಗಳ; ಸಹೋದರ: ತಮ್ಮ/ಅಣ್ಣ; ತಿವಿ: ಚುಚ್ಚು; ಕೊಂದು: ಸಾಯಿಸು; ಉಬ್ಬರಿಸು: ಜೋರುಮಾಡು; ಗರ್ವ: ಅಹಂಕಾರ; ಮುರಿ: ಸೀಳು; ಪ್ರಳಯ:ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಭವ: ಶಿವ; ರೌದ್ರ: ಭಯಂಕರ; ಭುಲ್ಲಯಿಸು: ಸಂತೋಷಿಸು; ಕಲಿ: ಶೂರ;

ಪದವಿಂಗಡಣೆ:
ಸವರಿದನು +ರವಿಸುತನ +ಪರಿವಾ
ರವನು +ಮಗುಳ್+ಉಬ್ಬೆದ್ದ +ಕೌರವ
ನಿವಹದಲಿ+ ಕಾದಿದನು +ದುರ್ಯೋಧನ +ಸಹೋದರರ
ತಿವಿದು +ನಾಲ್ವರ +ಕೊಂದನ್+ಉಬ್ಬರಿ
ಸುವರ +ಗರ್ವವ +ಮುರಿದು +ಪ್ರಳಯದ
ಭವನ+ ರೌದ್ರದವೋಲು +ಭುಲ್ಲಯಿಸಿದನು +ಕಲಿಭೀಮ

ಅಚ್ಚರಿ:
(೧) ಸವರು, ಕಾದಿದನು, ಕೊಂದನು, ಮುರಿ – ಯುದ್ಧವನ್ನು ವರ್ಣಿಸುವ ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ಪ್ರಳಯದ ಭವನ ರೌದ್ರದವೋಲು ಭುಲ್ಲಯಿಸಿದನು ಕಲಿಭೀಮ