ಪದ್ಯ ೧೬: ಕರ್ಣನ ಸೈನಿಕರು ಭೀಮನ ಮೇಲೆ ಹೇಗೆ ಎರಗಿದರು?

ಮತ್ತೆ ಕವಿದುದು ಮೇಲೆ ಪಡಿಬಲ
ವೊತ್ತಿ ಹೊಕ್ಕುದು ಹೆಣದ ಬೆಟ್ಟವ
ಹತ್ತಿ ಹುಡಿಹುಡಿ ಮಾಡಿ ಹಿಡಿದರು ರಥದ ಕುದುರೆಗಳ
ಕುತ್ತಿದರು ಸಾರಥಿಯನಾತನ
ತೆತ್ತಿಸಿದರಿಟ್ಟಿಯಲಿ ಭೀಮನ
ಮುತ್ತಿ ಕೈಮಾಡಿದರು ರವಿಸುತ ಸಾಕಿದತಿಬಳರು (ಕರ್ಣ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕರ್ಣನು ಅಕ್ಕರೆಯಿಂದ ಪೋಷಿಸಿದ ಸೈನಿಕರು ಹೆಣಗಳ ಬೆಟ್ಟವನ್ನು ಹತ್ತಿ ತುಳಿದು ಮುಂದಕ್ಕೆ ನುಗ್ಗಿ ಭೀಮನ ರಥದ ಕುದುರೆಗಳನ್ನು ಹಿಡಿದು ಹೊಡೆದರು. ಅವನ ಸಾರಥಿಯನ್ನು ಈಟಿಯಿಂದ ತಿವಿದರು. ಭೀಮನ ಮೇಲೂ ಕೈಮಾಡಿದರು.

ಅರ್ಥ:
ಮತ್ತೆ: ಪುನಃ; ಕವಿ: ಮುಚ್ಚು; ಪಡಿಬಲ: ಶತ್ರುಸೈನ್ಯ; ಒತ್ತು: ನೂಕು; ಹೊಕ್ಕು: ಸೇರು; ಹೆಣ: ಶವ; ಬೆಟ್ಟ: ಗುಡ್ಡ; ಹತ್ತು: ಏರು; ಹುಡಿ: ತುಳಿ; ಹಿಡಿ: ಬಂಧಿಸು; ರಥ: ಬಂಡಿ; ಕುದುರೆ: ಅಶ್ವ; ಕುತ್ತು: ಚುಚ್ಚು, ತಿವಿ; ಸಾರಥಿ:ಸೂತ; ತೆತ್ತಿಸು: ಜೋಡಿಸು; ಈಟಿ: ಭರ್ಜಿ; ಮುತ್ತು: ಆವರಿಸು; ಕೈಮಾಡು: ಹೊಡೆದಾಡು ರವಿಸುತ: ಕರ್ಣ; ಸಾಕಿದ: ಪೋಷಿಸಿದ; ಬಳರು: ಸೈನಿಕರು;

ಪದವಿಂಗಡಣೆ:
ಮತ್ತೆ +ಕವಿದುದು+ ಮೇಲೆ +ಪಡಿಬಲವ್
ಒತ್ತಿ +ಹೊಕ್ಕುದು +ಹೆಣದ +ಬೆಟ್ಟವ
ಹತ್ತಿ +ಹುಡಿಹುಡಿ+ ಮಾಡಿ +ಹಿಡಿದರು+ ರಥದ+ ಕುದುರೆಗಳ
ಕುತ್ತಿದರು+ ಸಾರಥಿಯನ್+ಆತನ
ತೆತ್ತಿಸಿದರ್+ಇಟ್ಟಿಯಲಿ +ಭೀಮನ
ಮುತ್ತಿ +ಕೈಮಾಡಿದರು +ರವಿಸುತ+ ಸಾಕಿದ್+ಅತಿಬಳರು

ಅಚ್ಚರಿ:
(೧) ಒತ್ತಿ, ಹತ್ತಿ, ಕುತ್ತಿ, ತೆತ್ತಿ, ಮುತ್ತಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ