ಪದ್ಯ ೩೩: ಪಾಂಡವರ ಕೌರವರ ಸೈನ್ಯದ ಸ್ಥಿತಿ ಹೇಗಿತ್ತು?

ಆರಿತದು ಬೊಬ್ಬೆಯಲಿ ದುಗುಡದ
ಭಾರದಲಿ ತಲೆಗುತ್ತಿತಿವರು
ಬ್ಬಾರದಲಿ ಭುಲ್ಲವಿಸಿತವರು ವಿಘಾತಿಯಿಂದಿವರು
ಪೂರವಿಸಿದುದು ಪುಳಕದಲಿ ದೃಗು
ವಾರಿ ಪೂರದಲಿವರಖಿಳ ಪರಿ
ವಾರವಿದ್ದುದು ಕೇಳು ಜನಮೇಜಯ ಮಹೀಪಾಲ (ಕರ್ಣ ಪರ್ವ, ೧೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಜನಮೇಜಯ ಮಹಾರಾಜ ಕೇಳು, ಪಾಂಡವ ಕೌರವರ ಸೈನ್ಯವು ಹಿಂದಿರುಗಿತು. ಪಾಂಡವರು ಗೆದ್ದ ಸಂತೋಷದಿಂದ ಬೊಬ್ಬೆಯಿಟ್ಟರು, ಕೌರವರು ಸೋತ ದುಃಖದಿಂದ ತಲೆತಗ್ಗಿಸಿದರು. ಜಯದ ಆರ್ಭಟೆಯಿಂದ ಅವರು ಸಂತೋಷಗೊಂಡರು. ಒದೆ ತಿಂದು ಇವರು ದುಃಖಿತರಾದರು. ಪಾಂಡವರು ವಿಜಯದಿಂದ ರೋಮಾಂಚನಗೊಂಡರು, ಇವರು ಸೋತು ಕಣ್ಣಿರಿಟ್ಟರೆಂದು ವೈಶಂಪಾಯನರು ಭಾರತದ ಕಥೆಯನ್ನು ತಿಳಿಸುತ್ತಿದ್ದರು.

ಅರ್ಥ:
ಬೊಬ್ಬೆ: ಜೋರಾದ ಶಬ್ದ; ದುಗುಡು: ದುಃಖ; ಭಾರ: ಹೊರೆ; ತಲೆ: ಶಿರ; ತಲೆಗುತ್ತು: ತಲೆ ತಗ್ಗಿಸು; ಉಬ್ಬಾರ: ಸಂಭ್ರಮ, ಹಿಗ್ಗು; ಭುಲ್ಲವಿಸು: ಉತ್ಸಾಹಗೊಳ್ಳು; ವಿಘಾತ: ನಾಶ, ಧ್ವಂಸ; ಪೂರವಿಸು: ತುಂಬು; ಪುಳಕ: ರೋಮಾಂಚನ; ದೃಗುವಾರಿ: ಕಣ್ಣೀರು; ಪೂರದ:ತುಂಬ; ಅಖಿಳ: ಎಲ್ಲಾ; ಪರಿವಾರ: ಸಂಬಂಧದವರು; ಮಹೀಪಾಲ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ಆರಿತದು +ಬೊಬ್ಬೆಯಲಿ +ದುಗುಡದ
ಭಾರದಲಿ+ ತಲೆಗುತ್ತಿತ್+ಇವರ್
ಉಬ್ಬಾರದಲಿ +ಭುಲ್ಲವಿಸಿತ್+ಅವರು +ವಿಘಾತಿಯಿಂದ್+ಇವರು
ಪೂರವಿಸಿದುದು+ ಪುಳಕದಲಿ +ದೃಗು
ವಾರಿ +ಪೂರದಲ್+ಇವರ್+ಅಖಿಳ +ಪರಿ
ವಾರವಿದ್ದುದು +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ದೃಗುವಾರಿ, ದುಗುಡ, ವಿಘಾತಿ – ಕೌರವರ ಸ್ಥಿತಿಯನ್ನು ವಿವರಿಸಲು ಬಳಸಿದ ಪದ
(೨) ಬೊಬ್ಬೆ, ಭುಲ್ಲವಿಸು, ಪೂರವಿಸು – ಪಾಂಡವರ ಸ್ಥಿತಿಯನ್ನು ವಿವರಿಸಲು ಬಳಸಿದ ಪದ

ಪದ್ಯ ೩೨: ಕರ್ಣನು ಹೇಗೆ ಚೇತರಿಸಿಕೊಂಡನು?

ರಥಕೆ ಮರಳಿದನಾತನೀತನ
ವ್ಯಥೆಯನೇನೆಂಬೆನು ಸುಯೋಧನ
ರಥಿಗಳುಬ್ಬಟೆ ಗರ್ಭವಿಕ್ಕಿತು ನಿಮಿಷಮಾತ್ರದಲಿ
ರಥದೊಳಗೆ ಮಾದ್ರೇಶನೀ ಸಮ
ರಥನ ಸಂತೈಸಿದನು ಕವಳ
ಪ್ರಥಿತ ಮಂತ್ರೌಷಧಿಗಳಲಿ ಹದುಳಿಸಿದನಾ ಕರ್ಣ (ಕರ್ಣ ಪರ್ವ, ೧೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಲ್ಯನ ಮಾತಿನಂತೆ ಭೀಮನು ರಥಕ್ಕೆ ಹಿಂದಿರುಗಿದನು. ಕೌರವ ವೀರರ ಆರ್ಭಟ ತಣ್ಣಗಾಯಿತು. ಕರ್ಣನ ವ್ಯಥೆಯನ್ನು ಹೇಳಲು ಬರುವುದಿಲ್ಲ. ಶಲ್ಯನು ಕರ್ಣನಿಗೆ ತಾಂಬೂಲ, ಮಂತ್ರ, ಔಷದಿಗಳನ್ನು ಕೊಟ್ಟು ಸಂತೈಸಿದನು. ಕರ್ಣನು ಸ್ವಸ್ಥನಾದನು.

ಅರ್ಥ:
ರಥ: ಬಂಡಿ, ತೇರು; ಮರಳಿ: ಹಿಂದಿರುಗಿ; ವ್ಯಥೆ: ನೋವು, ಯಾತನೆ; ರಥಿ: ರಥದ ಮೇಲೆ ಹೋರಾಡುವ ಯೋಧ; ಉಬ್ಬಟೆ: ಅತಿಶಯ; ಗರ್ಭವಿಕ್ಕು: ಅತಿಶಯವಾಗು, ಹೆಚ್ಚಾಗು; ನಿಮಿಷ: ಕ್ಷಣ; ಮಾದ್ರೇಶ: ಮದ್ರ ದೇಶದ ರಾಜ (ಶಲ್ಯ); ಸಮರಥ: ಪರಾಕ್ರಮಿ; ಸಂತೈಸು: ಸಮಾಧಾನಪಡಿಸು; ಕವಳ: ಊಟ; ಪ್ರಥಿತ: ಹೆಸರುವಾಸಿಯಾದ; ಮಂತ್ರೌಷಧಿ: ಮದ್ದು; ಹದುಳ: ಸೌಖ್ಯ, ಕ್ಷೇಮ;

ಪದವಿಂಗಡಣೆ:
ರಥಕೆ +ಮರಳಿದನ್+ಆತನ್+ಈತನ
ವ್ಯಥೆಯನ್+ಏನೆಂಬೆನು +ಸುಯೋಧನ
ರಥಿಗಳ್+ಉಬ್ಬಟೆ +ಗರ್ಭವಿಕ್ಕಿತು+ ನಿಮಿಷಮಾತ್ರದಲಿ
ರಥದೊಳಗೆ +ಮಾದ್ರೇಶನ್+ಈ+ ಸಮ
ರಥನ +ಸಂತೈಸಿದನು +ಕವಳ
ಪ್ರಥಿತ +ಮಂತ್ರೌಷಧಿಗಳಲಿ +ಹದುಳಿಸಿದನಾ +ಕರ್ಣ

ಅಚ್ಚರಿ:
(೧) ರಥ, ಪ್ರಥಿತ, ಸಮರಥ – ಪ್ರಾಸ ಪದಗಳು
(೨) ಆತನ, ಈತನ – ಪದಗಳ ಬಳಕೆ

ಪದ್ಯ ೩೧: ಭೀಮನನ್ನು ಶಲ್ಯನು ಏಕೆ ನೂಕಿದನು?

ಸಾಕು ಹೆರತೆಗೆ ಘಾಯವಡೆದವಿ
ವೇಕಿ ಮೈ ಮರೆದಿದ್ದ ಹೊತ್ತಿದು
ನೀ ಕುಠಾರನಲಾ ಕಿರೀಟಿಯ ಭಾಷಿತದ್ರುಮಕೆ
ಲೋಕಮಾನ್ಯನು ಕರ್ಣ ಕುರುಬಲ
ದಾಕೆವಾಳನು ಭಂಗವಡೆದುದೆ
ಸಾಕು ನೀ ಸಾರೆಂದು ಭೀಮನ ನೂಕಿದನು ಶಲ್ಯ (ಕರ್ಣ ಪರ್ವ, ೧೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಭೀಮನು ಕರ್ಣನ ನಾಲಗೆಯನ್ನು ಸೀಳಲು ಮುಂದೆಬರಲು, ಶಲ್ಯನು ಅವನನ್ನು ತಡೆದು, ಸಾಕು, ಹಿಂದಕ್ಕೆ ಸರಿ, ಈ ಅವಿವೇಕಿಯು ಗಾಯಗೊಂಡು ಎಚ್ಚರ ತಪ್ಪಿದ ಹೊತ್ತು. ಈಗ ಅವನನ್ನು ಕೊಂದು ಅರ್ಜುನನ ಪ್ರತಿಜ್ಞೆಯ ಮರಕ್ಕೆ ಕೊಡಲಿಯಾಗಬೇಡ. ಕರ್ಣನು ಕುರುಸೈನ್ಯದಲ್ಲಿ ಮಹಾ ಪ್ರರಾಕ್ರಮಿ ಎಂದು ಖ್ಯಾತಿಪಡೆದವನು, ಲೋಕ ಪ್ರಸಿದ್ಧನು ಸಹ. ಅವನು ಈಗ ಭಂಗ ಹೊಂದಿದುದೇ ಸಾಕು. ನೀನು ಈಗ ಹಿಂದಿರುಗು ಎಂದು ಭೀಮನನ್ನು ನೂಕಿದನು.

ಅರ್ಥ:
ಸಾಕು: ನಿಲ್ಲಿಸು; ಹೆರತೆಗೆ: ಹಿಂದಕ್ಕೆ ಸರಿ; ಘಾಯ: ಪೆಟ್ಟು; ಅವಿವೇಕಿ: ಯುಕ್ತಾಯುಕ್ತ ವಿಚಾರ ಮಾಡದವ; ಮೈ: ತನು; ಮರೆದು: ಎಚ್ಚರ ತಪ್ಪಿ; ಹೊತ್ತಿದ; ಉರಿದ; ಕುಠಾರ: ಕೊಡಲಿ; ಕಿರೀಟಿ: ಅರ್ಜುನ; ಭಾಷಿತ: ಭಾಷೆ, ನುಡಿ; ದ್ರುಮ: ಮರ; ಲೋಕಮಾನ್ಯನು: ಲೋಕ ಪ್ರಸಿದ್ಧ; ಆಕೆವಾಳ: ಪರಾಕ್ರಮಿ; ಬಲ: ಸೈನ್ಯ; ಭಂಗ: ಮುರಿಯುವಿಕೆ; ಸಾರು: ಸರಿ, ದೂರ ಹೋಗು; ನೂಕು: ತಳ್ಳು;

ಪದವಿಂಗಡಣೆ:
ಸಾಕು +ಹೆರತೆಗೆ +ಘಾಯವಡೆದ್+ಅವಿ
ವೇಕಿ +ಮೈ+ ಮರೆದಿದ್ದ+ ಹೊತ್ತಿದು
ನೀ +ಕುಠಾರನಲಾ+ ಕಿರೀಟಿಯ +ಭಾಷಿತ+ದ್ರುಮಕೆ
ಲೋಕಮಾನ್ಯನು +ಕರ್ಣ +ಕುರುಬಲದ್
ಆಕೆವಾಳನು +ಭಂಗವಡೆದುದೆ
ಸಾಕು +ನೀ +ಸಾರೆಂದು +ಭೀಮನ +ನೂಕಿದನು +ಶಲ್ಯ

ಅಚ್ಚರಿ:
(೧) ಸಾಕು – ೧, ೬ ಸಾಲಿನ ಮೊದಲ ಪದ
(೨) ಕರ್ಣನನ್ನು ಅವಿವೇಕಿ, ಆಕೆವಾಳ ಎಂದು ಕರೆದಿರುವುದು
(೩) ಉಪಮಾನದ ಪ್ರಯೋಗ – ಹೊತ್ತಿದು ನೀ ಕುಠಾರನಲಾ ಕಿರೀಟಿಯ ಭಾಷಿತದ್ರುಮಕೆ

ಪದ್ಯ ೩೦: ಭೀಮನು ಶಲ್ಯನಿಗೆ ಹೇಗೆ ಉತ್ತರಿಸಿದನು?

ದುರುಳತನದಿಂದಣ್ಣ ದೇವನ
ಹುರುಳುಗೆಡೆ ನುಡಿದನು ವಿರೋಧಿಯ
ಶರಹತಿಗೆ ಬೆಂಡಾಗನಿವನ ದುರುಕ್ತಿ ಶರಹತಿಗೆ
ಅರಸ ಬಳಲಿದನೇನ ಮಾಡುವೆ
ದುರುಳ ನುಡಿದನ ನಾಲಗೆಯ ನಿಡು
ಸೆರೆಯ ಬಿಡಿಸುವೆ ಮಾವ ಸೈರಿಸಿಯೆಂದನಾ ಭೀಮ (ಕರ್ಣ ಪರ್ವ, ೧೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಶಲ್ಯನು ಭೀಮನಿಗೆ ಹಿಂದಿರುಗಲು ಹೇಳಲು ಭೀಮನು ಅದನ್ನು ವಿರೋಧಿಸುವ ಪರಿ, ಮಾವ ಇವನು ದುರುಳುತನದಿಂದ ಅಣ್ಣನನ್ನು ಅವಮಾನಿಸಿ ಮಾತನಾಡಿದ್ದಾನೆ. ಅಣ್ಣನು ಇವನ ಬಾಣಗಳಿಂದ ನೋವನ್ನು ಪಡಲಿಲ್ಲ, ಬದಲಾಗಿ ಇವನ ಕೆಟ್ಟಮಾತುಗಳಿಂದ ನೊಂದು ಸೊರಗಿದ್ದಾನೆ, ಏನು ಮಾಡಲಿ ನಾನು, ಅಣ್ಣನ ಮೇಲೆ ಕೆಟ್ಟಮಾತುಗಳನ್ನಾಡಿದ ಇವನ ನಾಲಿಗೆಯ ಬಂಧನವನ್ನು ಬಿಡಿಸುತ್ತೇನೆ, ಸ್ವಲ್ಪ ತಾಳು ಎಂದು ಭೀಮನು ಉತ್ತರಿಸಿದನು.

ಅರ್ಥ:
ದುರುಳ: ದುಷ್ಟ; ಅಣ್ಣ: ಹಿರಿಯ ಸಹೋದರ; ಹುರುಳು: ಶಕ್ತಿ, ಸಾಮರ್ಥ್ಯ; ನುಡಿ: ಮಾತು; ವಿರೋಧಿ: ವೈರಿ; ಹತಿ: ಹೊಡೆತ, ಸಂಹಾರ; ಶರ: ಬಾಣ; ಬೆಂಡಾಗು: ಸೊರಗು, ಶಕ್ತಿಹೀನನಾಗು; ದುರುಕ್ತಿ: ಕೆಟ್ಟ ಮಾತು; ಅರಸ: ರಾಜ; ಬಳಲು: ಆಯಾಸ, ದಣಿವು; ನಾಲಗೆ: ಜಿಹ್ವೆ; ನಿಡು: ಉದ್ದವಾದ; ಸೆರೆ: ಬಂಧನ; ಬಿಡಿಸು: ಕಳಚು, ಮುಕ್ತಗೊಳಿಸು; ಸೈರಿಸು: ತಾಳು;

ಪದವಿಂಗಡಣೆ:
ದುರುಳತನದಿಂದ್+ಅಣ್ಣ+ ದೇವನ
ಹುರುಳುಗೆಡೆ +ನುಡಿದನು +ವಿರೋಧಿಯ
ಶರಹತಿಗೆ+ ಬೆಂಡಾಗನ್+ಇವನ+ ದುರುಕ್ತಿ +ಶರಹತಿಗೆ
ಅರಸ+ ಬಳಲಿದನ್+ಏನ +ಮಾಡುವೆ
ದುರುಳ +ನುಡಿದನ+ ನಾಲಗೆಯ +ನಿಡು
ಸೆರೆಯ +ಬಿಡಿಸುವೆ +ಮಾವ +ಸೈರಿಸಿಯೆಂದನಾ +ಭೀಮ

ಅಚ್ಚರಿ:
(೧) ಶರಹತಿ – ೩ ಸಾಲಿನ ಮೊದಲ ಮತ್ತು ಕೊನೆ ಪದ
(೨) ನ ಕಾರದ ತ್ರಿವಳಿ ಪದ – ನುಡಿದನ ನಾಲಗೆಯ ನಿಡುಸೆರೆಯ

ಪದ್ಯ ೨೯: ಶಲ್ಯನು ಭೀಮನಿಗೆ ಏನು ಹೇಳಿದ?

ಥಟ್ಟುಗೆಡಹಿದ ಕರ್ಣನನು ಕೈ
ಮುಟ್ಟದಿರು ಹೆರಸಾರು ಪಾರ್ಥನು
ಕೊಟ್ಟ ಭಾಷೆಯ ಮರೆದೆಲಾ ಕೈತಪ್ಪ ಮಾಡದಿರು
ಬಿಟ್ಟು ಹಿಂಗೆಲೆ ಭೀಮ ಭೀತಿಯ
ಬಿಟ್ಟು ಬೆರಸಿದ ಸಾಕು ಹರಿಬಕೆ
ಮುಟ್ಟಸಿದ ಗೆಲವಾಯ್ತು ಮರಳಿನ್ನೆಂದನಾ ಶಲ್ಯ (ಕರ್ಣ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶಲ್ಯನು ಭೀಮನನ್ನುದೇಶಿಸಿ, ಕೆಳಗೆ ಬಿದ್ದಿರುವ ಕರ್ಣನನ್ನು ಮುಟ್ಟಬೇಡ, ದೂರ ಸರಿ, ಅರ್ಜುನನು ಮಾಡಿದ ಪ್ರತಿಜ್ಞೆಯನ್ನು ಮರೆತೆಯಾ? ಕರ್ಣನನ್ನು ಮುಟ್ಟಿ ತಪ್ಪು ಮಾಡಬೇಡ. ನೀನು ನಿರ್ಭೀತಿಯಿಂದ ಯುದ್ಧ ಮಾಡಿ ಗೆದ್ದೆ, ಇನ್ನು ಹಿಂತಿರುಗು ಎಂದು ಭೀಮನಿಗೆ ಹೇಳಿದ.

ಅರ್ಥ:
ಥಟ್ಟು:ಸೈನ್ಯ, ಪಡೆ; ಕೆಡಹು: ಹಾಳುಮಾಡು; ಕೈ: ಕರ; ಮುಟ್ಟು: ಹತ್ತಿರ ಬರು, ಸ್ಪರ್ಶ; ಹೆರಸಾರು: ಹಿಂದಕ್ಕೆ ಸರಿ; ಕೊಟ್ಟ: ನೀಡಿದ; ಭಾಷೆ: ನುಡಿ; ಮರೆ: ನೆನಪಿನಿಂದ ದೂರ ಮಾಡು; ತಪ್ಪು: ಸರಿಯಲ್ಲದ;; ಬಿಡು: ಬರಿದು; ಹಿಂಗು: ಬತ್ತು, ಒಣಗು; ಭೀತಿ: ಭಯ, ಹೆದರಿಕೆ; ಬೆರಸು: ಕೂಡಿರುವಿಕೆ; ಸಾಕು: ಕೊನೆ; ಹರಿಬ: ಕಾಳಗ, ಯುದ್ಧ; ಗೆಲುವು: ಜಯ; ಮರಳಿ: ಹಿಂದಿರುಗು;

ಪದವಿಂಗಡಣೆ:
ಥಟ್ಟು+ಕೆಡಹಿದ +ಕರ್ಣನನು +ಕೈ
ಮುಟ್ಟದಿರು +ಹೆರಸಾರು +ಪಾರ್ಥನು
ಕೊಟ್ಟ +ಭಾಷೆಯ +ಮರೆದೆಲಾ +ಕೈತಪ್ಪ+ ಮಾಡದಿರು
ಬಿಟ್ಟು +ಹಿಂಗೆಲೆ +ಭೀಮ +ಭೀತಿಯ
ಬಿಟ್ಟು +ಬೆರಸಿದ +ಸಾಕು +ಹರಿಬಕೆ
ಮುಟ್ಟಸಿದ +ಗೆಲವಾಯ್ತು +ಮರಳಿನ್ನೆಂದನಾ +ಶಲ್ಯ

ಅಚ್ಚರಿ:
(೧) ಬ ಕಾರದ ಸಾಲು ಪದ – ಭೀಮ ಭೀತಿಯ ಬಿಟ್ಟು ಬೆರಸಿದ
(೨) ಥಟ್ಟು, ಬಿಟ್ಟು; ಕೊಟ್ಟ, ಮುಟ್ಟ – ಪ್ರಾಸ ಪದಗಳು

ಪದ್ಯ ೨೮: ಭೀಮನು ಕರ್ಣನ ಮುಂದಲೆಯ ಹಿಡಿದುದನ್ನು ಸೇನೆಯು ಹೇಗೆ ಪ್ರತಿಕ್ರಿಯಿಸಿತು?

ಬಾಯ ಬಿಟ್ಟುದು ಸೇನೆ ಕೌರವ
ರಾಯನಾವೆಡೆ ದಳಕೆ ಬಲುಗೈ
ನಾಯಕರು ಕೃಪ ಗುರುಸುತರು ಕೈಗೊಟ್ಟರೇ ಹಗೆಗೆ
ವಾಯುಜನ ಕೈದೊಳಸಿನಲಿ ಕುರು
ರಾಯ ರಾಜ್ಯಶ್ರೀಯ ಮುಂದಲೆ
ಹೋಯಿತೋ ಹಾ ಎನುತ ಮರುಗಿತು ಕೂಡೆ ಕುರುಸೇನೆ (ಕರ್ಣ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಭೀಮನು ಕರ್ಣನ ಎದೆಗೊದೆದ ದೃಶ್ಯವನ್ನು ನೋಡಿ ಕುರುಸೇನೆಯ ಸೈನಿಕರು ಬಾಯಿಬಿಟ್ಟು ನಿಂತರು, ಕೌರವಸೇನೆಯಲ್ಲಿಯ ವೀರಾಗ್ರಣಿಗಳಾದ ಕೃಪ, ಅಶ್ವತ್ಥಾಮರು ಶತ್ರುಗಳಿಗೆ ನೆರವಾದರೇ? ಭೀಮನು ಕೌರವ ರಾಜ್ಯಲಕ್ಷ್ಮಿಯ ಮುಂದಲೆಯನ್ನು ಹಿಡಿಗುಬಿಟ್ಟನಲಾ ಎಂದು ಕೌರವ ಸೇನೆಯು ದುಃಖಿಸಿತು.

ಅರ್ಥ:
ಬಾಯ: ಮುಖದಲ್ಲಿನ ಅಂಗ; ಬಿಟ್ಟು: ತೆರೆದು; ಸೇನೆ: ಸೈನ್ಯ, ದಳ; ರಾಯ: ರಾಜ; ಬಲುಗೈ: ಶ್ರೇಷ್ಠ, ಬಲಿಷ್ಠ; ನಾಯಕ: ಒಡೆಯ; ಸುತ: ಮಗ; ಕೈಕೊಟ್ಟು: ಕಳಚಿ, ಸಹಾಯಕ್ಕೆ ಬಾರದ; ಹಗೆ: ವೈರಿ; ವಾಯುಜ: ಭೀಮ; ಕೈದೊಳಸು: ಕೈಚಳಕ; ರಾಜ್ಯಶ್ರೀ; ರಾಜ್ಯಲಕ್ಷ್ಮಿ; ಮುಂದಲೆ: ತಲೆಯ ಮುಂದಿನ ಕೂದಲು; ಹೋಯಿತು: ಜಾರಿತು, ಕಳಚು; ಮರುಗು: ದುಃಖಿಸು; ಕೂಡೆ: ಜೊತೆ, ಒಟ್ಟು;

ಪದವಿಂಗಡಣೆ:
ಬಾಯ +ಬಿಟ್ಟುದು +ಸೇನೆ +ಕೌರವ
ರಾಯನ್+ಆವೆಡೆ +ದಳಕೆ +ಬಲುಗೈ
ನಾಯಕರು +ಕೃಪ +ಗುರುಸುತರು +ಕೈಗೊಟ್ಟರೇ +ಹಗೆಗೆ
ವಾಯುಜನ+ ಕೈದೊಳಸಿನಲಿ +ಕುರು
ರಾಯ +ರಾಜ್ಯಶ್ರೀಯ +ಮುಂದಲೆ
ಹೋಯಿತೋ +ಹಾ +ಎನುತ +ಮರುಗಿತು +ಕೂಡೆ +ಕುರುಸೇನೆ

ಅಚ್ಚರಿ:
(೧) ಆಶ್ಚರ್ಯವನ್ನು ಚಿತ್ರಿಸುವ ಬಗೆ – ಬಾಯ ಬಿಟ್ಟುದು ಸೇನೆ
(೨) ದುಃಖಿಸುವ ಸಂಗತಿ – ವಾಯುಜನ ಕೈದೊಳಸಿನಲಿ ಕುರು
ರಾಯ ರಾಜ್ಯಶ್ರೀಯ ಮುಂದಲೆ ಹೋಯಿತೋ ಹಾ ಎನುತ ಮರುಗಿತು ಕೂಡೆ ಕುರುಸೇನೆ

ಪದ್ಯ ೨೭: ಭೀಮನು ಕರ್ಣನನ್ನು ಎಲ್ಲಿ ಒದೆದನು?

ಹೊಡೆದು ತಲೆಯನು ಹಗೆಯ ರಕುತವ
ಕುಡಿವೆನಲ್ಲದೊಡವನಿಪಾಲನ
ಕೆಡೆನುಡಿದ ನಾಲಗೆಯ ಕೀಳುವೆನೆನುತ ಕೋಪದಲಿ
ಸಿಡಿವ ಕಿಡಿಗಳ ಕೋಪಶಿಖಿಯು
ಗ್ಗಡದ ಮಾರುತಿ ಹೊಯ್ದು ಕರ್ಣನ
ಕೆಡಹಿದನು ಮುರಿಯೊದೆದನೆದೆಯನು ಹಾಯ್ದು ಮುಂದಲೆಗೆ (ಕರ್ಣ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಮನ ಕೋಪಾಗ್ನಿಯು ಏರುತ್ತಿತ್ತು. ವೈರಿಯ ತಲೆ ಕಡೆದು ಅವನ ರಕ್ತವನ್ನು ಕುಡಿಯುತ್ತೇನೆ, ಇಲ್ಲವೆ ಅಣ್ಣನನ್ನು ಹೀಯಾಳಿಸಿದ ನಾಲಿಗೆಯನ್ನು ಕಿತ್ತು ಹಾಕುತ್ತೇನೆ ಎಂದುಕೊಂಡು, ರೋಷಾಗ್ನಿಯು ಭುಗಿಲೆದ್ದು ಕೆಂಗಣ್ಣಿನ ಭೀಮನು ಕರ್ಣನ ಮುಂದಲೆಗೂದಲನ್ನು ಹಿಡಿದು ಕೆಡವಿ, ಮುರಿದುಹೋಗುವಂತೆ ಎದೆಗೊದೆದನು.

ಅರ್ಥ:
ಹೊಡೆ: ಪೆಟ್ಟು; ತಲೆ: ಶಿರ; ಹಗೆ: ವೈರಿ; ರಕುತ: ನೆತ್ತರು; ಕುಡಿ: ಪಾನ ಮಾಡು; ಅಲ್ಲದೊಡೆ: ಇಲ್ಲದಿದ್ದರೆ; ಅವನಿಪಾಲ: ರಾಜ; ಕೆಡೆನುಡಿ: ಕೆಟ್ಟಮಾತು; ನಾಲಗೆ: ಜಿಹ್ವೆ; ಕೀಳು: ಸೀಳು, ಮುರಿ; ಕೋಪ: ರೋಷ; ಸಿಡಿ: ಸ್ಫೋಟ, ಚಿಮ್ಮು; ಕಿಡಿ: ಬೆಂಕಿಯ ಕಣ; ಕೋಪಶಿಖಿ: ರೊಷಾಗ್ನಿ; ಉಗ್ಗಡ:ಉತ್ಕಟತೆ, ಅತಿಶಯ; ಮಾರುತಿ: ವಾಯು; ಹೊಯ್ದು: ಹೊಡೆ; ಕೆಡಹು: ತಳ್ಳು, ಕೆಳಕ್ಕೆ ನೂಕು; ಮುರಿ: ಸೀಳು; ಒದೆ: ಕಾಲಿನಿಂದ ತಳ್ಳು; ಎದೆ: ವಕ್ಷ; ಹಾಯ್ದು: ಮೇಲೆಬಿದ್ದು; ಮುಂದಲೆ: ತಲೆಯ ಮುಂಭಾಗದಲ್ಲಿರುವ ಕೂದಲು;

ಪದವಿಂಗಡಣೆ:
ಹೊಡೆದು +ತಲೆಯನು +ಹಗೆಯ +ರಕುತವ
ಕುಡಿವೆನ್+ಅಲ್ಲದೊಡ್+ಅವನಿಪಾಲನ
ಕೆಡೆ+ನುಡಿದ +ನಾಲಗೆಯ +ಕೀಳುವೆನ್+ಎನುತ+ ಕೋಪದಲಿ
ಸಿಡಿವ +ಕಿಡಿಗಳ +ಕೋಪ+ಶಿಖಿ
ಉಗ್ಗಡದ +ಮಾರುತಿ +ಹೊಯ್ದು +ಕರ್ಣನ
ಕೆಡಹಿದನು+ ಮುರಿ+ಒದೆದನ್+ಎದೆಯನು +ಹಾಯ್ದು +ಮುಂದಲೆಗೆ

ಅಚ್ಚರಿ:
(೧) ಭೀಮನ ರೋಷದ ಚಿತ್ರಣ – ಸಿಡಿವ ಕಿಡಿಗಳ ಕೋಪಶಿಖಿಯುಗ್ಗಡದ ಮಾರುತಿ
(೨) ಕರ್ಣನನ್ನು ತಳ್ಳಿದ ಬಗೆ – ಹೊಯ್ದು ಕರ್ಣನಕೆಡಹಿದನು ಮುರಿಯೊದೆದನೆದೆಯನು ಹಾಯ್ದು ಮುಂದಲೆಗೆ

ಪದ್ಯ ೨೬: ಭೀಮಸೇನನು ಖಡ್ಗವನ್ನೇಕೆ ಧರಿಸಿದನು?

ಅರಸ ಕೇಳಾಶ್ಚರಿಯವನು ಟೆ
ಬ್ಬರಿಸುವನೆ ಕಲಿಭೀಮನುಬ್ಬಟೆ
ಯರಿಗಳಾಹವ ಧೀರರಾದರೆ ಧಾತುಗೆಡುವವನೆ
ಶರಧನುವ ಹಾಯ್ಕಿದನು ಧೊಪ್ಪನೆ
ಧರೆಗೆ ಧಮ್ಮಿಕ್ಕಿದನು ಖಡುಗವ
ತಿರುಹಿ ಬೆರಸಿದನಳವಿಯಲಿ ಕುರುಸೇನೆ ಕಳವಳಿಸೆ (ಕರ್ಣ ಪರ್ವ, ೧೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು ಒಂದು ಅಶ್ಚರ್ಯದ ಸಂಗತಿಯ. ಭೀಮನು ಕರ್ಣನ ಬಿಟ್ಟ ಬಾಣಗಳಿಗೆ ಹೆದರಲಿಲ್ಲ, ಯುದ್ಧದಲ್ಲಿ ವೈರಿಯು ಧೀರನಾದರೆ ಇವನು ಶಕ್ತಿಗುಂದುವವನೇ? ಭೀಮನು ಯುದ್ಧರಂಗದಲ್ಲಿ ಬಿಲ್ಲು ಬಾಣಗಳನ್ನು ಕೆಳಗಿಟ್ಟು, ಧೊಪ್ಪನೆ ಭೂಮಿಗೆ ಧುಮುಕಿ ಖಡ್ಗವನ್ನೆಳೆದು ಕೊಂಡು ಅದನ್ನು ಬೀಸುತ್ತಾ ಮುನ್ನುಗ್ಗಿದನು. ಇದನ್ನು ನೋಡಿದ ಕುರುಸೇನೆಯು ಬೆದರಿತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಆಶ್ಚರ್ಯ: ಕುತೂಹಲ; ಟೆಬ್ಬರ: ಹಿಂಸೆ, ಕಾಟ; ಕಲಿ: ಶೂರ; ಉಬ್ಬಟೆ: ಅತಿಶಯ, ಹಿರಿಮೆ; ಅರಿ: ವೈರಿ; ಆಹವ: ಯುದ್ಧ; ಧೀರ: ಶೂರ; ಧಾತು: ವೀರ್ಯ; ಶಕ್ತಿ; ಕೆಡು: ಹಾಳು; ಶರ: ಬಾಣ; ಧನು: ಬಿಲ್ಲು; ಹಾಯ್ಕು: ಇಡು, ಇರಿಸು; ಧೊಪ್ಪನೆ: ಒಮ್ಮೆಲೆ; ಖಡುಗ: ಕತ್ತಿ; ತಿರುಹು: ತಿರುಗಿಸು; ಬೆರಸು: ಸೇರು; ಅಳವಿ: ಯುದ್ಧ; ಕಳವಳ: ಚಿಂತೆ;

ಪದವಿಂಗಡಣೆ:
ಅರಸ +ಕೇಳ್+ಆಶ್ಚರಿಯವನು+ ಟೆ
ಬ್ಬರಿಸುವನೆ+ ಕಲಿಭೀಮನ್+ಉಬ್ಬಟೆ
ಅರಿಗಳ್+ಆಹವ +ಧೀರರಾದರೆ+ ಧಾತುಗೆಡುವವನೆ
ಶರಧನುವ+ ಹಾಯ್ಕಿದನು +ಧೊಪ್ಪನೆ
ಧರೆಗೆ+ ಧಮ್ಮಿಕ್ಕಿದನು+ ಖಡುಗವ
ತಿರುಹಿ +ಬೆರಸಿದನ್+ಅಳವಿಯಲಿ +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ಧ ಕಾರದ ಸಾಲು ಪದಗಳು – ಧೊಪ್ಪನೆ ಧರೆಗೆ ಧಮ್ಮಿಕ್ಕಿದನು; ಧೀರರಾದರೆ ಧಾತುಗೆಡುವವನೆ
(೨) ಭೀಮನ ಹಿರಿಮೆ – ಯರಿಗಳಾಹವ ಧೀರರಾದರೆ ಧಾತುಗೆಡುವವನೆ

ಪದ್ಯ ೨೫: ಕರ್ಣನು ಹೇಗೆ ಭೀಮನ ಬಾಣಗಳನ್ನು ಎದುರಿಸಿದನು?

ಏನ ಹೇಳುವೆನಿತ್ತಲೀ ರವಿ
ಸೂನುವೇ ದುರ್ಬಲನೆ ಭೀಮನ
ನೂನ ಶರಸಂಘತವನು ಖಂಡಿಸಿದನಾಕ್ಷಣಕೆ
ದೀನನೇ ಶರನಿಕರದಲಿ ಪವ
ಮಾನಜನೊ ಪಾತಾಳಿಯೋ ಕಲಿ
ವೈನತೇಯನೊ ಕರ್ಣನೋ ನಾವರಿಯೆವಿದನೆಂದ (ಕರ್ಣ ಪರ್ವ, ೧೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ನಾನು ಏನೆಂದು ಹೇಳಲಿ, ಕರ್ಣನೇನು ದುರ್ಬಲನೇ? ಅವನೂ ಸಹ ಪರಾಕ್ರಮಿಯೆ, ಭೀಮನ ಬಾಣಗಳನ್ನು ಒಂದೇ ಕ್ಷಣದಲ್ಲಿ ಖಂಡಿಸಿದನು. ಬಾಣ ಪ್ರಯೋಗದಲ್ಲಿ ಅವನೇನು ದೈನ್ಯನೇ? ಭೀಮನೆಂಬ ಸರ್ಪಕ್ಕೆ ಕರ್ಣನು ಗರಡನಂತಾದನು ಎಂದು ಹೇಳಿದನು.

ಅರ್ಥ:
ಹೇಳು: ತಿಳಿಸು; ರವಿಸೂನು: ಸೂರ್ಯನ ಪುತ್ರ (ಕರ್ಣ); ಶರ: ಬಾಣ; ಸಂಘಾತ: ಹೊಡೆತ, ಘರ್ಷಣೆ; ಖಂಡಿಸು: ಕಡಿ, ಕತ್ತರಿಸು; ದೀನ: ದಾರಿದ್ರ್ಯ; ನಿಕರ: ಗುಂಪು; ಪವಮಾನಜ: ವಾಯುವಿನ ಪುತ್ರ (ಭೀಮ); ಪಾತಾಳಿ: ಉರಗ, ಸರ್ಪ; ಕಲಿ: ಶೂರ; ವೈನತೇಯ: ಗರುಡ; ಅರಿ: ತಿಳಿ;

ಪದವಿಂಗಡಣೆ:
ಏನ +ಹೇಳುವೆನ್+ಇತ್ತಲ್+ಈ+ ರವಿ
ಸೂನುವೇ+ ದುರ್ಬಲನೆ +ಭೀಮನ
ನೂನ +ಶರ+ಸಂಘತವನು +ಖಂಡಿಸಿದನ್+ಆ+ಕ್ಷಣಕೆ
ದೀನನೇ+ ಶರನಿಕರದಲಿ+ ಪವ
ಮಾನಜನೊ+ ಪಾತಾಳಿಯೋ +ಕಲಿ
ವೈನತೇಯನೊ +ಕರ್ಣನೋ +ನಾವ್+ಅರಿಯೆವ್+ಇದನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪವಮಾನಜನೊ ಪಾತಾಳಿಯೋ ಕಲಿ ವೈನತೇಯನೊ ಕರ್ಣನೋ
(೨) ಶರಸಂಘತ, ಶರನಿಕರ – ಬಾಣಗಳ ಗುಂಪು ಎಂದು ತಿಳಿಸುವ ಪದಗಳು