ಪದ್ಯ ೨೨: ಬ್ರಹ್ಮನು ಶಿವನಲ್ಲಿ ಏನು ಬಿನ್ನವಿಸಿದನು?

ತಾರಕನ ಮಕ್ಕಳುಗಳಿಗೆ ನೆರೆ
ಸೂರೆವೋದುದು ಸುರರ ಸಿರಿ ಮು
ಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ
ಚಾರು ವೈದಿಕ ಹವ್ಯಕವ್ಯವಿ
ಹಾರ ವೃತ್ತಿಗಳಳಿದವಿದನವ
ಧಾರಿಸೆಂದಬುಜಾಸನನು ಮಾಡಿದನು ಬಿನ್ನಹವ (ಕರ್ಣ ಪರ್ವ, ೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶಿವನು ಬ್ರಹ್ಮನನ್ನು ಸಂತೈಸಿದ ಬಳಿಕ ಬ್ರಹ್ಮನು, ಎಲೈ ಶಿವನೇ, ತಾರಕಾಸುರನ ಮಕ್ಕಳು ದೇವತೆಗಳ ಐಶ್ವರ್ಯವನ್ನು ಸೂರೆಗೊಂಡರು, ದೇವತಾ ಸ್ತ್ರೀಯರನ್ನು ಅಸುರರ ದಾಸಿಯಾಗಿ ಮಾಡಿದ್ದಾರೆ. ವೈದಿಕ ಹವ್ಯಕವ್ಯಾದಿ ಕರ್ಮಗಳು ನಿಂತು ಹೋದವು. ಇದನ್ನು ಮನಸ್ಸಿಟ್ಟು ಕೇಳು ಎಂದು ಬ್ರಹ್ಮನು ಶಿವನಲ್ಲಿ ಬಿನ್ನಹ ಮಾಡಿದನು.

ಅರ್ಥ:
ಮಕ್ಕಳು: ಸುತರು; ನೆರೆ: ಪೂರ್ಣವಾಗಿ, ಹೆಚ್ಚು; ಸೂರೆ:ಕೊಳ್ಳೆ; ಸುರ: ದೇವತೆ; ಸಿರಿ: ಐಶ್ವರ್ಯ; ಮುಮ್ಮಾರುವೋಗು: ಮೊದಲೇ ಸೂರೆಯಾಗು; ಸುರ: ದೇವತೆ; ಸತಿ: ಹೆಂಡತಿ; ಖಳ: ದುಷ್ಟ; ಮನೆ: ಆಲಯ; ಚಾರು: ಸುಂದರ, ಶ್ರೇಷ್ಠವಾದ; ವೈದಿಕ: ವೇದಕ್ಕೆ ಸಂಬಂಧಿಸಿದ; ಹವ್ಯಕ: ಬ್ರಾಹ್ಮಣರ ಒಂದು ವರ್ಗ; ವ್ಯವಹಾರ: ಕರ್ಮ, ಕೆಲಸ, ಉದ್ಯೋಗ; ವೃತ್ತಿ: ಕೆಲಸ; ಅವಧರಿಸು: ಮನಸ್ಸಿಟ್ಟು ಕೇಳು; ಅಬುಜಸಾನ: ಕಮಲದ ಮೇಲೆ ಕುಳಿತ (ಬ್ರಹ್ಮ); ಬಿನ್ನಹ: ಕೋರಿಕೆ; ಅಳಿ: ನಾಶ; ಹವ್ಯ:ಹೋಮದ ಮೂಲಕ ದೇವತೆಗಳಿಗೆ ಕೊಡುವ ಆಹುತಿ, ಹವಿಸ್ಸು; ಕವ್ಯ: ಪಿತೃಗಳಿಗೆ ಅರ್ಪಿಸುವ ಯಜ್ಞ; ವಿಹಾರ: ಯಾಗಾದಿ,ತಿರುಗಾಡು;

ಪದವಿಂಗಡಣೆ:
ತಾರಕನ+ ಮಕ್ಕಳುಗಳಿಗೆ +ನೆರೆ
ಸೂರೆವೋದುದು+ ಸುರರ+ ಸಿರಿ+ ಮು
ಮ್ಮಾರುವೋದುದು +ಸುರರ+ ಸತಿಯರು +ಖಳರ +ಮನೆಗಳಿಗೆ
ಚಾರು +ವೈದಿಕ+ ಹವ್ಯ+ಕವ್ಯ+ವಿ
ಹಾರ +ವೃತ್ತಿಗಳಳ್+ಅಳಿದವ್+ಇದನ್+ಅವ
ಧಾರಿಸ್+ಎಂದ್+ಅಬುಜಾಸನನು +ಮಾಡಿದನು +ಬಿನ್ನಹವ

ಅಚ್ಚರಿ:
(೧) ಬ್ರಹ್ಮನನ್ನು ಅಬುಜಾಸನ ಎಂದು ಕರೆದಿರುವುದು
(೨) ಮೊದಲೇ ದೇವತೆಗಳು ಸೋತರು ಎಂದು ಹೇಳಲು – ಮುಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ

ಪದ್ಯ ೨೧: ಶಿವನು ಹೇಗೆ ದೇವತೆಗಳನ್ನು ಕಂಡನು?

ಪರಮಕರುಣ ಕಟಾಕ್ಷರಸದಲಿ
ಹೊರೆದು ಕಮಳಾಸನನ ಹತ್ತಿರೆ
ಕರೆದು ಮನ್ನಿಸಿ ನಿಖಿಳ ನಿರ್ಜರ ಜನವ ಸಂತೈಸಿ
ಬರವಿದೇನಿದ್ದಂತೆ ವಿಶ್ವಾ
ಮರ ಕದಂಬಕ ಸಹಿತ ಎಂದಂ
ಬುರುಹಭವನನು ನಸುನಗುತ ನುಡಿದನು ಶಶಿಮೌಳಿ (ಕರ್ಣ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಶಂಕರನು ಅತ್ಯಂತ ಕರುಣಾಪೂರಕನಾಗಿ, ತನ್ನ ಕೃಪೆಯನ್ನು ತೋರಿ ಬ್ರಹ್ಮನನ್ನು ನೋಡಿ ಹತ್ತಿರ ಕರೆದು ಕೂಡಿಸಿ ಮನ್ನಿಸಿ, ದೇವತೆಗಳೆಲ್ಲರನ್ನೂ ಮನ್ನಿಸಿ ನಸುನಗುತಾ, ಇದೇನು ಇದ್ದಕ್ಕಿದ್ದಂತೆ ಸಮಸ್ತ ದೇವಗಣಗಳೊಡನೆ ಎಲ್ಲರೂ ಇಲ್ಲಿ ಬಂದಿದ್ದೀರಿ ಎಂದು ಕೇಳುತ್ತಾ ಬ್ರಹ್ಮನನ್ನು ಮಾತನಾಡಿಸಲು ಚಂದ್ರಶೇಖರನು ಪ್ರಾರಂಭಿಸಿದನು.

ಅರ್ಥ:
ಪರಮ: ಶ್ರೇಷ್ಠ, ಬಹಳ; ಕರುಣ: ದಯೆ, ಕಾರುಣ್ಯ; ಕಟಾಕ್ಷ: ಅನುಗ್ರಹ; ರಸ: ಸಾರ; ಹೊರೆ: ರಕ್ಷಣೆ, ಆಶ್ರಯ; ಕಮಳಾಸನ: ಕಮಲದಮೇಳೆ ಕುಳಿತಿರುವ (ಬ್ರಹ್ಮ); ಹತ್ತಿರ: ಬಳಿ; ಕರೆದು: ಬರೆಮಾಡಿ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ನಿಖಿಳ: ಎಲ್ಲಾ, ಸರ್ವ; ನಿರ್ಜರ: ದೇವತೆ; ಜನವ: ಗುಂಪು; ಸಂತೈಸು: ಸಾಂತ್ವನಗೊಳಿಸು; ಬರವು: ಆಗಮನ; ವಿಶ್ವ: ಜಗತ್ತು; ಅಮರ: ದೇವತೆ; ಕದಂಬಕ: ಗುಂಪು, ಸಮೂಹ; ಸಹಿತ: ಜೊರೆ; ಅಂಬು: ನೀರು; ಅಂಬುರುಹ: ನೀರಿನಲ್ಲಿ ಹುಟ್ಟುವ (ಕಮಲ) ಅಂಬುರುಹಭವ: ಕಮಲದಿಂದ ಹುಟ್ಟಿದ (ಬ್ರಹ್ಮ); ನಸುನಗುತ: ಸಂತಸ; ನುಡಿಸು: ಮಾತನಾಡಿಸು; ಶಶಿ: ಚಂದ್ರ; ಮೌಳಿ; ಶಿರ; ಶಶಿಮೌಳಿ: ಚಂದ್ರನನ್ನು ತಲೆಯಮೇಲೆ ಧರಿಸಿದವ (ಶಿವ);

ಪದವಿಂಗಡಣೆ:
ಪರಮಕರುಣ +ಕಟಾಕ್ಷ+ರಸದಲಿ
ಹೊರೆದು +ಕಮಳಾಸನನ +ಹತ್ತಿರೆ
ಕರೆದು+ ಮನ್ನಿಸಿ +ನಿಖಿಳ +ನಿರ್ಜರ +ಜನವ +ಸಂತೈಸಿ
ಬರವಿದೇನ್+ಇದ್ದಂತೆ +ವಿಶ್ವ
ಅಮರ +ಕದಂಬಕ+ ಸಹಿತ+ ಎಂದ್
ಅಂಬುರುಹಭವನನು +ನಸುನಗುತ +ನುಡಿದನು +ಶಶಿಮೌಳಿ

ಅಚ್ಚರಿ:
(೧) ಅಂಬುರುಹಭವ, ಕಮಳಾಸನನ – ಬ್ರಹ್ಮನನ್ನು ಕರೆಯಲು ಬಳಸಿದ ಪದ
(೨) ನ ಕಾರದ ಜೋಡಿ ಪದ – ನಿಖಿಳ ನಿರ್ಜರ; ನಸುನಗುತ ನುಡಿದನು

ಪದ್ಯ ೨೦: ದೇವತೆಗಳಾದಿ ಶಿವನನ್ನು ಹೇಗೆ ಆರಾಧಿಸಿದರು?

ಪುಳಕಜಲವುಬ್ಬರಿಸೆ ಕುಸುಮಾಂ
ಜಳಿಯನಂಘ್ರಿದ್ವಯಕೆ ಹಾಯಿಕಿ
ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ
ಬಳಿಯಲಮರೇಂದ್ರಾದಿ ದಿವಿಜಾ
ವಳಿಗಳವನಿಗೆ ಮೆಯ್ಯ ಚಾಚಿದ
ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ (ಕರ್ಣ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶಿವನನ್ನು ನೋಡಿದ ಬ್ರಹ್ಮನು ರೋಮಾಂಚನ ಗೊಂಡು ಸ್ವೇದಗಳುಂಟಾದವು. ಬೊಗಸೆಯಲ್ಲಿ ಹೂಗಳನ್ನು ಶಿವನ ಪಾದಗಳಿಗೆ ಹಾಕಿ, ಭಯಭರಿತ ಭಕ್ತಿಯಿಂದ ಬ್ರಹ್ಮನು ನಮಸ್ಕರಿಸಿದನು. ಆವನೊಡನೆ ಸಮಸ್ತದೇವತೆಗಳೂ ನಮಸ್ಕರಿಸಿ ಜಯಘೋಷವನ್ನು ಹಾಡಿದರು.

ಅರ್ಥ:
ಪುಳಕ: ಮೈನವಿರೇಳುವಿಕೆ, ರೋಮಾಂಚನ; ಜಲ: ನೀರು; ಪುಳಕಜಲ: ರೋಮಾಂಚನದ ನೀರು; ಉಬ್ಬರಿಸು:ಅತಿಶಯ, ಹೆಚ್ಚಳ; ಕುಸುಮ: ಹೂವು; ಆಂಜಳಿ:ಕೈಬೊಗಸೆ, ಜೋಡಿಸಿದ ಕೈಗಳು; ಅಂಘ್ರಿ: ಪಾದ; ದ್ವಯ: ಎರಡು; ಹಾಯಿಕಿ: ಹಾಕಿ; ನಳಿನ:ಕಮಲ; ನಳಿನಭವ: ಕಮಲದಿಂದ ಹುಟ್ಟಿದ (ಬ್ರಹ್ಮ); ಮೈಯ್ಯಿಕ್ಕು: ನಮಸ್ಕರಿಸು; ಭಯ: ಹೆದರಿಕೆ; ಭರಿತ: ತುಂಬಿದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಳಿ: ಹತ್ತಿರ; ಅಮರೇಂದ್ರ: ದೇವತೆಗಳ ರಾಜ (ಇಂದ್ರ); ಆದಿ: ಮುಂತಾದ; ದಿವಿಜ: ಸುರ, ದೇತವೆ; ಆವಳಿ: ಗುಂಪು; ಮೆಯ್ಯಚಾಚು: ದೀರ್ಘದಂಡ ನಮಸ್ಕಾರ; ಉಲಿವು:ಧ್ವನಿ; ಜಯ: ಗೆಲುವು, ಹೊಗಳು; ಧ್ವಾನ: ಧ್ವನಿ; ಸುರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಪುಳಕಜಲವ್+ಉಬ್ಬರಿಸೆ +ಕುಸುಮಾಂ
ಜಳಿಯನ್+ಅಂಘ್ರಿ+ದ್ವಯಕೆ +ಹಾಯಿಕಿ
ನಳಿನಭವ+ ಮೆಯ್ಯಿಕ್ಕಿದನು+ ಭಯಭರಿತ+ ಭಕ್ತಿಯಲಿ
ಬಳಿಯಲ್+ಅಮರೇಂದ್ರಾದಿ +ದಿವಿಜಾ
ವಳಿಗಳ್+ಅವನಿಗೆ+ ಮೆಯ್ಯ ಚಾಚಿದರ್
ಉಲಿವುತಿರ್ದುದು +ಜಯಜಯ +ಧ್ವಾನದಲಿ +ಸುರಕಟಕ

ಅಚ್ಚರಿ:
(೧) ಕುಸುಮಾಂಜಳಿ, ದಿವಿಜಾವಳಿ, ಬಳಿ – ಪ್ರಾಸ ಪದಗಳು
(೨) ಮೆಯ್ಯಿಕ್ಕು, ಮೆಯ್ಯ ಚಾಚು – ನಮಸ್ಕರಿಸು ಎಂದು ಹೇಳಲು ಬಳಸಿದ ಪದ
(೩) ಕಟಕ, ಆವಳಿ – ಗುಂಪು ಪದದ ಸಮನಾರ್ಥ

ಪದ್ಯ ೧೯: ಶಿವನು ಯಾರ ಮಧ್ಯದಲ್ಲಿ ನೆಲಸಿದ್ದ?

ಇದ್ದುದಗಣಿತ ರುದ್ರ ಕೋಟಿಗ
ಳಿದ್ದುದನುಪಮ ವಿಷ್ಣು ಕೋಟಗ
ಳಿದ್ದುದಂಬುಜಭವ ಸುರೇಂದ್ರಾದಿಗಳು ಶತಕೋಟಿ
ಇದ್ದುದಮಳಾಮ್ನಾಯ ಕೋಟಿಗ
ಳಿದ್ದುದಗಣಿತ ಮಂತ್ರಮಧ್ಯದೊ
ಳಿದ್ದ ನಿರ್ಮಳ ಖಂಡಪರಶುವ ಕಂಡನಬುಜಭವ (ಕರ್ಣ ಪರ್ವ, ೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ಕೋಟಿ ರುದ್ರರು, ವಿಷ್ಣುಗಳು ಅಲ್ಲಿದ್ದರು. ನೂರು ಕೋಟಿ ಬ್ರಹ್ಮ ಇಂದ್ರರು ಇದ್ದರು. ಕೋಟಿ ವೇದಗಳೂ ಲೆಕ್ಕವಿಲ್ಲದಷ್ಟು ಮಂತ್ರಗಳೂ ಇದ್ದವು. ಮಧ್ಯದಲ್ಲಿ ಶಿವನಿದ್ದನು.

ಅರ್ಥ:
ಅಗಣಿತ: ಎಣಿಕೆಗೆ ಮೀರಿದವನು; ರುದ್ರ: ಭಯಂಕರವಾದ, ಭೀಕರವಾದ; ಕೋಟಿ: ಲೆಕ್ಕವಿಲ್ಲದಷ್ಟು; ಅನುಪಮ: ಉತ್ಕೃಷ್ಟವಾದುದು; ಅಂಬುಜ: ಕಮಲ; ಅಂಬುಜಭವ: ಬ್ರಹ್ಮ; ಸುರೆಂದ್ರ: ಇಂದ್ರ; ಸುರ: ದೇವತೆ; ಆದಿ: ಮುಂತಾದ; ಶತ: ನೂರು; ಅಮಳ: ನಿರ್ಮಲ; ಆಮ್ನಾಯ: ವೇದ, ಶೃತಿ; ಮಂತ್ರ: ದೇವತಾಸ್ತುತಿ; ಖಂಡಪರಶು: ಶಿವ; ಅಬುಜಭವ: ಬ್ರಹ್ಮ;

ಪದವಿಂಗಡಣೆ:
ಇದ್ದುದ್+ಅಗಣಿತ +ರುದ್ರ +ಕೋಟಿಗಳ್
ಇದ್ದುದ್+ಅನುಪಮ +ವಿಷ್ಣು +ಕೋಟಗಳ್
ಇದ್ದುದ್+ಅಂಬುಜಭವ+ ಸುರೇಂದ್ರಾದಿಗಳು +ಶತಕೋಟಿ
ಇದ್ದುದ್+ಅಮಳ+ಆಮ್ನಾಯ +ಕೋಟಿಗಳ್
ಇದ್ದುದ್+ಅಗಣಿತ+ ಮಂತ್ರ+ಮಧ್ಯದೊಳ್
ಇದ್ದ +ನಿರ್ಮಳ +ಖಂಡಪರಶುವ+ ಕಂಡನ್+ಅಬುಜಭವ

ಅಚ್ಚರಿ:
(೧) ಇದ್ದು – ಪ್ರತಿ ಸಾಲಿನ ಮೊದಲ ಪದ
(೨) ಅ ಕಾರದ ಪದಗಳು – ಅಗಣಿತ, ಅನುಪಮ, ಅಮಳ, ಅಗಣಿತ, ಅಂಬುಜಭವ
(೩) ಕೋಟಿ – ೪ ಸಾಲಿನ ಕೊನೆಯ ಪದ

ಪದ್ಯ ೧೮: ಶಿವನನ್ನು ಹೇಗೆ ವರ್ಣಿಸಬಹುದು?

ಕಂತುಹರನನು ವಿಮಳನನು ವೇ
ದಾಂತ ವೇದ್ಯನನದ್ವೀತಿಯನ
ಚಿಂತ್ಯ ಮಹಿಮನ ಸಚ್ಚಿದಾನಂದೈಕರಸಮಯನ
ಅಂತ್ಯರಹಿತನನಪ್ರಮೇಯನ
ನಂತರೂಪನನಂಘ್ರಿಭಜಕ ಭ
ವಾಂತಕನನುದ್ದಂಡ ದೈವವ ಕಂಡನಬುಜಭವ (ಕರ್ಣ ಪರ್ವ, ೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮನ್ಮಥನನ್ನು ಸುಟ್ಟವನು (ಕಾಮವನ್ನು ಗೆದ್ದವನು), ನಿರ್ಮಲನೂ, ವೇದಾಂತದ ಜ್ಞಾನವುಳ್ಳವನೂ, ತನಗೆರಡನೆದಿಲ್ಲದವನೂ, ಚಿಂತನೆಗೆ ನಿಲುಕದ ಮಹಿಮೆಯುಳ್ಳವನೂ, ಪ್ರಮೇಯಗಳಿಂದ ಸಿದ್ಧನಾಗದವನೂ, ಅನಂತ ರೂಪಗಳುಳ್ಳವನೂ, ಸಚ್ಚಿದಾನಂದ ಸ್ವರೂಪನೂ, ಏಕರಸವುಳ್ಳವನೂ, ತನ್ನ ಭಕ್ತರ ಸಂಸಾರದ ಬಂಧನಗಳನ್ನು ಕೊನೆಗೊಳಿಸಿ ಮುಕ್ತಿಕೊಡುವವನೂ ಆದ ಶಿವನನ್ನು ಬ್ರಹ್ಮನು ನೋಡಿದನು.

ಅರ್ಥ:
ಕಂತು: ಮನ್ಮಥ; ಹರ: ಸಂಹಾರ; ವಿಮಳ: ನಿಮ್ರಲ; ವೇದಾಂತ: ಉಪನಿಷತ್ತುಗಳು; ವೇದ್ಯ: ಜ್ಞಾನಿ, ತಿಳಿದವನು; ಅದ್ವಿತೀಯ: ಅಸಮಾನವಾದುದು; ಅಚಿಂತ್ಯ: ಚಿಂತಿಸಲಾಗದ, ಕಲ್ಪನೆಗೆ ಮೀರಿದ; ಮಹಿಮ: ಹಿರಿಮೆ ಯುಳ್ಳವನು, ಮಹಾತ್ಮ; ಸಚ್ಚಿದಾನಂದ:ಆನಂದ ಸ್ವರೂಪನಾದ ಪರಮಾತ್ಮ, ಸತ್ ಚಿತ್ ಆನಂದ ಆತ್ಮ; ಅಂತ್ಯ: ಕೊನೆ; ರಹಿತ: ಇಲ್ಲದ; ಅಪ್ರಮೇಯ:ಅಳತೆಗೆ ಮೀರಿದುದು; ಅನಂತ: ಕೊನೆಯಿಲ್ಲದ; ರೂಪ: ಆಕಾರ, ಆಕೃತಿ; ಅಂಘ್ರಿ: ಪಾದ; ಭಜಕ: ಭಕ್ತ; ಭವ: ಇರುವಿಕೆ, ಅಸ್ತಿತ್ವ; ಅಂತ: ಕೊನೆ; ಉದ್ದಂಡ:ಪ್ರಬಲವಾದ, ಪ್ರಚಂಡವಾದ; ದೈವ: ಭಗವಂತ; ಕಂಡನು: ನೋಡಿದನು; ಅಬುಜಭವ: ಬ್ರಹ್ಮ;

ಪದವಿಂಗಡಣೆ:
ಕಂತುಹರನನು+ ವಿಮಳನನು +ವೇ
ದಾಂತ ವೇದ್ಯನನ್+ಅದ್ವೀತಿಯನ್
ಅಚಿಂತ್ಯ +ಮಹಿಮನ+ ಸಚ್ಚಿದಾನಂದ್+ಏಕರಸಮಯನ
ಅಂತ್ಯರಹಿತನ್+ಅಪ್ರಮೇಯನ್
ಅನಂತರೂಪನ್+ಅಂಘ್ರಿಭಜಕ+ ಭವ
ಅಂತಕನ್+ಉದ್ದಂಡ +ದೈವವ +ಕಂಡನ್+ಅಬುಜಭವ

ಅಚ್ಚರಿ:
(೧) ಶಿವನ ಗುಣಗಳು – ಅದ್ವೀತಿಯನ್, ಅಂತ್ಯರಹಿತನ್, ಅಪ್ರಮೇಯನ್, ಅನಂತರೂಪನ್, ಅಂಘ್ರಿಭಜಕ ಭವಾಂತಕನ್, ಕಂತುಹರನ್, ವಿಮಳನ್, ವೇದಾಂತ ವೇದ್ಯನ್

ಪದ್ಯ ೧೭: ಶಿವನ ಮಹಿಮೆ ಎಂತಹದು?

ವೇದವರಿಯದ ತರ್ಕವಿದ್ಯಾ
ವಾದ ನಿಲುಕದ ಬುಧರ ಮತಿ ಸಂ
ಪಾದನೆಗೆ ಮುಖಗೊಡದ ವಾಚ್ಯಾಯನರ ಚೇತನಕೆ
ಹೋದ ಹೊಲಬಳವಡದ ಬ್ರಹ್ಮೇಂ
ದ್ರಾದಿ ಸುರರುಬ್ಬಟೆಗೆ ಸೋಲದ
ನಾದಿ ದೇವರದೇವ ಶಿವನನು ಕಂಡನಬುಜಭವ (ಕರ್ಣ ಪರ್ವ, ೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ವೇದವು ಅರಿಯದ, ತರ್ಕವಿದ್ಯೆಯ ವಾದಕ್ಕೆ ನಿಲುಕದ, ವಿದ್ವಾಂಸರು ಶೇಖರಿಸಿದ ವಿದ್ಯೆಯತ್ತ ಮುಖವನ್ನೂ ತೋರಿಸದ, ತರ್ಕದಿಂದ ತನ್ನನ್ನು ಅರಿಯುವ ದಾರಿಯೇ ಸಿಗದ, ಬ್ರಹ್ಮ ಇಂದ್ರಾದಿಗಳಿಗೆ ಸೋಲದ, ಅನಾದಿಯೂ ದೇವರ ದೇವನೂ ಆದ ಶಿವನನ್ನು ಬ್ರಹ್ಮನು ಕಂಡನು.

ಅರ್ಥ:
ವೇದ: ಜ್ಞಾನ, ಆಗಮ; ಅರಿ: ತಿಳಿ; ತರ್ಕ: ಪರ್ಯಾಲೋಚನೆ; ವಿದ್ಯ: ಜ್ಞಾನ; ವಾದ: ಮಾತು, ಸಂಭಾಷಣೆ; ನಿಲುಕು: ದೊರಕು; ಬುಧ: ವಿದ್ವಾಂಸ; ಮತಿ: ಬುದ್ಧಿ; ಸಂಪಾದನೆ: ಗಳಿಸು; ಮುಖ: ಆನನ; ಮುಖಕೊಡದ: ಇಷ್ಟಪಡದ; ವಾಚ್ಯ: ವಿವರಣೆ; ವಾಚ್ಯ: ಶಾಬ್ದಿಕವಾದ ಅರ್ಥ ಚೇತನ: ಮನಸ್ಸು, ಬುದ್ಧಿ; ಹೋದ: ತೆರಳಿದ; ಹೊಲಬು: ದಾರಿ, ಪಥ, ಮಾರ್ಗ; ಇಂದ್ರ: ಸುರಪತಿ; ಸುರರು: ದೇವತೆ; ಉಬ್ಬಟೆ: ಉನ್ನತಿಕೆ; ಸೋಲು: ಪರಾಜಯ; ಆದಿ: ಮೊದಲು; ದೇವ: ಭಗವಂತ; ಶಿವ: ಶಂಕರ; ಅಬುಜಭವ: ಬ್ರಹ್ಮ; ಅಳವಡಿಸು: ಹೊಂದಿಸು;

ಪದವಿಂಗಡಣೆ:
ವೇದವ್+ಅರಿಯದ +ತರ್ಕವಿದ್ಯಾ
ವಾದ +ನಿಲುಕದ+ ಬುಧರ+ ಮತಿ +ಸಂ
ಪಾದನೆಗೆ +ಮುಖಗೊಡದ+ ವಾಚ್ಯಾಯನರ+ ಚೇತನಕೆ
ಹೋದ +ಹೊಲಬ್+ಅಳವಡದ +ಬ್ರಹ್ಮ
ಇಂದ್ರಾದಿ +ಸುರರ್+ಉಬ್ಬಟೆಗೆ +ಸೋಲದನ್
ಆದಿ +ದೇವರದೇವ+ ಶಿವನನು+ ಕಂಡನ್+ಅಬುಜಭವ

ಪದ್ಯ ೧೬: ಶಿವನ ಸ್ವರೂಪವು ಹೇಗಿತ್ತು?

ಕೊರಳ ಕಪ್ಪಿನ ಚಾರು ಚಂದ್ರಾ
ಭರಣ ಮೂರ್ಧದ ಭಾಳನಯನದ
ಭರಿತ ಪರಿಮಳದಂಗವಟ್ಟದ ಜಡಿದ ಕೆಂಜಡೆಯ
ಕರಗಿ ಕಾಸಿದವಿದ್ಯೆಯನು ಬೇ
ರಿರಿಸಿ ಶುದ್ಧ ಬ್ರಹ್ಮವನು ಕಂ
ಡರಿಸಿದಂತಿರಲೆಸೆವ ಶಿವನನು ಕಂಡನುಬುಜಭವ (ಕರ್ಣ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಬ್ರಹ್ಮನಾದಿಯಾಗಿ ಎಲ್ಲಾ ದೇವತೆಗಳು ಶಿವನ ಬಳಿಗೆ ಬಂದರು. ಹಾಲಹಲ ವಿಷವನ್ನು ಕುಡಿದಿದ್ದರಿಂದ ಕಪ್ಪಾಗಿದ್ದ ಕಂಠವನ್ನುಳವನೂ, ಚಂದ್ರನನ್ನೇ ಆಭರಣವನ್ನಾಗಿಸಿದವನೂ, ಹಣೆಗಣ್ಣನೂ, ಪರಿಮಳಭರಿತ ದೇಹನೂ, ಕೆಂಜೆಡೆಯುಳ್ಳವನೂ, ಅವಿದ್ಯೆಯನ್ನು ಕಾಯಿಸಿ ಬೇರೆ ಕಡೆಗಿಟ್ಟು ಶುದ್ಧ ಬ್ರಹ್ಮವನ್ನೇ ಕಡೆದು ಮಾಡಿದ ಮೂರ್ತಿಯೂ ಆದ ಶಿವನನ್ನು ಬ್ರಹ್ಮನು ನೋಡಿದನು.

ಅರ್ಥ:
ಕೊರಳು: ಕತ್ತು; ಕಪ್ಪು: ಕರಿ; ಚಾರು: ಸುಂದರ; ಚಂದ್ರ: ಇಂದು, ಶಶಿ; ಆಭರಣ: ಒಡವೆ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಭಾಳ: ಹಣೆ; ನಯನ: ಕಣ್ಣು; ಭರಿತ: ತುಂಬಿದ; ಪರಿಮಳ: ಸುಗಂಧ; ಅಂಗವಟ್ಟ: ಶರೀರ, ಮೈಕಟ್ಟು; ಜಡಿ: ಹರಡು, ಝಳಪಿಸು; ಕೆಂಜಡೆ: ಕೆಂಪಾದ ಕೂದಲು; ಕರಗು: ನೀರಾಗಿಸು; ಅವಿದ್ಯೆ: ಅಜ್ಞಾನ; ಬೇರೆ: ಅಂತರ; ಶುದ್ಧ: ನಿರ್ಮಲ; ಬ್ರಹ್ಮ: ಪರಮಾತ್ಮ, ಪರತತ್ತ್ವ; ಕಂಡು: ನೋಡಿ; ಎಸೆ: ತೋರುವ; ಶಿವ: ಶಂಕರ; ಕಂಡು: ನೋಡು; ಅಬುಜಭವ: ಬ್ರಹ್ಮ;

ಪದವಿಂಗಡಣೆ:
ಕೊರಳ+ ಕಪ್ಪಿನ+ ಚಾರು +ಚಂದ್ರಾ
ಭರಣ +ಮೂರ್ಧದ +ಭಾಳನಯನದ
ಭರಿತ+ ಪರಿಮಳದಂಗವಟ್ಟದ +ಜಡಿದ +ಕೆಂಜಡೆಯ
ಕರಗಿ+ ಕಾಸಿದ+ವಿದ್ಯೆಯನು +ಬೇ
ರಿರಿಸಿ +ಶುದ್ಧ +ಬ್ರಹ್ಮವನು +ಕಂಡ್
ಅರಿಸಿದಂತಿರಲ್+ಎಸೆವ +ಶಿವನನು +ಕಂಡನ್+ಅಬುಜಭವ

ಅಚ್ಚರಿ:
(೧) ಜೋಡಿ ಪದಗಳು: ಕೊರಳ ಕಪ್ಪಿನ; ಚಾರು ಚಂದ್ರಾಭರಣ; ಜಡಿದ ಕೆಂಜೆಡೆ; ಕರಗಿ ಕಾಸಿದ

ಪದ್ಯ ೧೫: ಕೈಲಾಸದಲ್ಲಿ ದೇವತೆಗಳು ಯಾರನ್ನು ಕಂಡರು?

ಬಂದು ಕೈಲಾಸಾದ್ರಿಯಲಿ ಗಿರಿ
ನಂದನಾವಕ್ಷೋಜ ಘಸೃಣ
ಸ್ಕಂಧತನು ಚಿನ್ಮಯ ನಿರಂಜನ ಭೂರಿ ಪಂಜರನ
ವಂದ್ಯಮಾನ ಸುರಾಸುರೋರಗ
ವೃಂದ ಮಣಿಮಕುಟ ಪ್ರಭಾ ನಿ
ಷ್ಯಂದ ಭೂಯಸ್ತಿಮಿತಕಾಯನ ಕಂಡನಬುಜಭವ (ಕರ್ಣ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಬ್ರಹ್ಮನಾದಿಯಾಗಿ ಎಲ್ಲಾ ದೇವತೆಗಳೊಡನೆ ಕೈಲಾಸಕ್ಕೆ ಬಂದು ಪಾರ್ವತಿಯ ಎದೆಯ ಮೇಲೆ ಹೆಗಲನ್ನಿಟ್ಟ ಚಿನ್ಮಯನೂ ನಿರಂಜನನೂ, ತನಗೆರಗಿದ ಸುರ, ಅಸುರ, ನಾಗರ ಮಣಿಮಕುಟದ ಪ್ರಭೆ ಬಿದ್ದ ಸ್ತಿಮಿತ ಕಾಯನೂ ಆದ ಶಿವನನ್ನು ಕಂಡನು.

ಅರ್ಥ:
ಬಂದು: ಆಗಮಿಸಿ; ಅದ್ರಿ: ಬೆಟ್ಟ; ಗಿರಿ: ಅದ್ರಿ, ಬೆಟ್ಟ; ಗಿರಿನಂದನಾ: ಪಾರ್ವತಿ; ವಕ್ಷ: ಎದೆ; ವಕ್ಷೋಜ: ಮೊಲೆ, ಸ್ತನ; ಸ್ಕಂಧ: ಹೆಗಲು, ಭುಜಾಗ್ರ; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ನಿರಂಜನ: ಪರಿಶುದ್ಧನಾದವನು; ಭೂರಿ: ಹೆಚ್ಚಾದ, ಅಧಿಕವಾದ; ಪಂಜರ: ಗೂಡು, ಎಲುಬುಗೂಡು; ವಂದ್ಯ: ಪೂಜನೀಯ, ನಮಸ್ಕರಿಸಲು ತಕ್ಕ; ಸುರ: ದೇವತೆ; ಅಸುರ: ದಾನವ; ಉರಗ: ಹಾವು; ವೃಂದ: ಗುಂಪು; ಮಣಿಮಕುಟ: ಕಿರೀಟ; ಪ್ರಭೆ: ಕಾಂತಿ; ಸ್ತಿಮಿತ: ಭದ್ರವಾದ ನೆಲೆ; ಭೂಯಸ್ತಿಮಿತಕಾಯ: ಸ್ಥಿರವಾದ ದೇಹವುಳ್ಳವನು; ಕಂಡು: ನೋಡು; ಅಬುಜಭವ: ಬ್ರಹ್ಮ;

ಪದವಿಂಗಡಣೆ:
ಬಂದು+ ಕೈಲಾಸಾದ್ರಿಯಲಿ +ಗಿರಿ
ನಂದನಾ+ವಕ್ಷೋಜ +ಘಸೃಣ
ಸ್ಕಂಧತನು +ಚಿನ್ಮಯ+ ನಿರಂಜನ+ ಭೂರಿ +ಪಂಜರನ
ವಂದ್ಯಮಾನ +ಸುರ+ಅಸುರ+ಉರಗ
ವೃಂದ+ ಮಣಿಮಕುಟ+ ಪ್ರಭಾ +ನಿ
ಷ್ಯಂದ +ಭೂಯಸ್ತಿಮಿತಕಾಯನ +ಕಂಡನ್+ಅಬುಜಭವ

ಅಚ್ಚರಿ:
(೧) ಅದ್ರಿ, ಗಿರಿ – ಸಮನಾರ್ಥಕ ಪದ
(೩) ೩ ಲೋಕಗಳು ಎಂದು ಹೇಳಲು – ಸುರಾಸುರೋರಗ ಪದದ ಬಳಕೆ
(೩) ಈಶ್ವರನನ್ನು ಹೊಗಳಲು ಬಳಸಿದ ಪದ – ಚಿನ್ಮಯ ನಿರಂಜನ ಭೂರಿ ಪಂಜರನ
ವಂದ್ಯಮಾನ ಸುರಾಸುರೋರಗವೃಂದ ಮಣಿಮಕುಟ ಪ್ರಭಾ ನಿಷ್ಯಂದ ಭೂಯಸ್ತಿಮಿತಕಾಯನ

ಪದ್ಯ ೧೪: ದೇವತೆಗಳು ಯಾರ ಬಳಿ ತಮ್ಮ ಅಳಲನ್ನು ತೋಡಿಕೊಂಡರು?

ಆದರೆಯು ನಮಗಾತನೇ ಗತಿ
ಯೀ ದುರಾತ್ಮರಿಗೆಂದು ಹರಿವೆಂ
ದಾದರಿಸಿ ಕೇಳುವೆವೆನುತ ಕಮಲಜನ ಹೊರೆಗೈದಿ
ಖೇದವನ್ನುಸುರಲು ಪಿತಾಮಹ
ನಾ ದಿವಿಜಗಣ ಸಹಿತ ಬಂದನು
ವೇದಸಿದ್ಧ ವಿಶುದ್ಧ ದೈವವ ಕಾಬ ತವಕದಲಿ (ಕರ್ಣ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ದೇವತೆಗಳು ತಮ್ಮ ಅಳಲನ್ನು ಯಾರಿಗೆ ಹೇಳಬೇಕೆಂದು ಯೋಚಿಸುತ್ತಾ, ಆ ದುಷ್ಟರಿಗೆ ವರವನ್ನು ನೀಡಿದ ಬ್ರಹ್ಮನೇ ನಮ್ಮ ಗತಿ ಎಂದು ತಿಳಿದು ಅವನನ್ನೇ ಕೇಳೋಣ ಈ ದುಷ್ಟರು ಸಾಯುವುದು ಯಾವಾಗೆ ಎಂದು ಕೇಳೋಣವೆಂದು ಬ್ರಹ್ಮನ ಬಳಿ ಬಂದು ತಮ್ಮ ಅಳಲನ್ನು ತೋಡಿಕೊಂಡರು. ಬ್ರಹ್ಮನು ಅವರೊಡನೆ ವೇದಸಿದ್ಧನಾದ ನಿರ್ಮಲನಾದ ಶಿವನನ್ನು ಕಾಣಲು ಕೈಲಾಸಕ್ಕೆ ಹೊರಟರು.

ಅರ್ಥ:
ಗತಿ: ಗಮನ; ದುರಾತ್ಮ: ದುಷ್ಟ; ಹರಿ: ಕೀಳು, ಕಿತ್ತುಹಾಕು;ಆದರಿಸಿ: ಉಪಚಾರಮಾಡು; ಕೇಳು: ಆಲಿಸು; ಕಮಲಜ: ಬ್ರಹ್ಮ; ಹೊರೆ: ಕಾಪಾಡು, ರಕ್ಷಿಸು; ಖೇದ: ದುಃಖ, ಉಮ್ಮಳ; ಉಸುರು: ಮಾತನಾಡು; ಪಿತಾಮಹ: ಬ್ರಹ್ಮ; ದಿವಿಜ: ದೇವತೆ; ಗಣ: ಗುಂಪು; ಸಹಿತ: ಜೊರೆ; ವೇದ: ಜ್ಞಾನ; ಸಿದ್ಧ: ಸಾಧಿಸಿದವ; ವಿಶುದ್ಧ: ಪರಿಶುದ್ಧವಾದುದು; ದೈವ: ಭಗವಂತ; ಕಾಬ: ನೋಡುವ; ತವಕ: ಕಾತುರ, ಕುತೂಹಲ;

ಪದವಿಂಗಡಣೆ:
ಆದರೆಯು +ನಮಗ್+ಆತನೇ +ಗತಿ
ಯೀ +ದುರಾತ್ಮರಿಗೆಂದು +ಹರಿವೆಂದ್
ಆದರಿಸಿ +ಕೇಳುವೆವ್+ಎನುತ ಕಮಲಜನ +ಹೊರೆಗೈದಿ
ಖೇದವನ್+ಉಸುರಲು+ ಪಿತಾಮಹನ್
ಆ+ ದಿವಿಜಗಣ +ಸಹಿತ +ಬಂದನು
ವೇದಸಿದ್ಧ +ವಿಶುದ್ಧ +ದೈವವ +ಕಾಬ +ತವಕದಲಿ

ಅಚ್ಚರಿ:
(೧) ಶಿವನ ಗುಣವಾಚಕ ಪದ – ವೇದಸಿದ್ಧ ವಿಶುದ್ಧ ದೈವ

ಪದ್ಯ ೧೩: ದೇವತೆಗಳ ಅಳಲುವೇನು?

ತಾರಕನ ಮಕ್ಕಳುಗಳೇ ಹಿಂ
ದಾರ ಗೆಲಿದರು ತಪವ ಮಾದಿ ವಿ
ಕಾರಿಗಳು ಬ್ರಹಂಗೆ ಬಂದಿಯನಿಕ್ಕಿದರು ಬಳಿಕ
ವಾರಿಜೋದ್ಭವ ಮೇಲನರಿಯ ಕು
ಠಾರ ನಾಯ್ಗಳ ಹೆಚ್ಚಿಸಿದನಿದ
ನಾರಿಗರುಪುವೆವೆಂದು ಸುಯ್ದರು ಬಯ್ದು ಕಮಲಜನ (ಕರ್ಣ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ದೇವತೆಗಳೆಲ್ಲಾ ಸೇರಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾ, ಈ ಹಿಂದೆ ತಾರಕನ ಮಕ್ಕಳು ಯಾರೊಡನೆಯೂ ಹೋರಾಡಿ ಗೆದ್ದಿಲ್ಲ, ಈ ದುಷ್ಟರು ಬ್ರಹ್ಮನನ್ನು ಆರಾಧಿಸಿ ತಪವ ಮಾಡಿ ಅವನನ್ನು ಒಲಿಸಿ ಅವನ ಕೈ ಕಟ್ಟಿದರು. ಬ್ರಹ್ಮನಾದರೋ ಮುಂದೇನಾಗುವುದೆಂಬ ಆಲೋಚನೆಯಿಲ್ಲದೆ, ಲೋಕಕ್ಕೆ ಕೊಡಲಿಯಾಗಿರುವೆ ಈ ನಾಯಿಗಳನ್ನು ಹೆಚ್ಚಿಸಿಬಿಟ್ಟ. ಈಗ ನಾವು ಯಾರ ಬಳಿ ದೂರನ್ನು ಒಯ್ಯೋಣ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಅರ್ಥ:
ಮಕ್ಕಳು: ಸುತರು; ಹಿಂದೆ: ಪರೋಕ್ಷ; ಗೆಲಿದರು: ಗೆದ್ದರು; ತಪ: ತಪಸ್ಸು, ಧ್ಯಾನ; ವಿಕಾರಿ: ಕುರೂಪ, ದುಷ್ಟ; ಬ್ರಹ್ಮ: ಅಜ; ಬಂದಿ: ಬಂಧನ; ಬಳಿಕ: ನಂತರ; ವಾರಿಜೋದ್ಭವ: ಕಮಲದಲ್ಲಿ ಜನಿಸಿದ (ಬ್ರಹ್ಮ); ಮೇಲೆ: ಮುಂದಿನದು, ಮುಂದಕ್ಕೆ; ಅರಿ: ತಿಳಿ; ಕುಠಾರ: ಒರಟು ವ್ಯಕ್ತಿ, ಕ್ರೂರಿ; ನಾಯಿ: ಶ್ವಾನ; ಹೆಚ್ಚಿಸು: ಅಧಿಕಮಾಡು; ಅರುಪು: ತಿಳಿಸು; ಸುಯ್ದರು: ನಿಟ್ಟುಸಿರುಬಿಟ್ಟು; ಬಯ್ದು: ಜರಿದು; ಕಮಲಜ: ಬ್ರಹ್ಮ;

ಪದವಿಂಗಡಣೆ:
ತಾರಕನ +ಮಕ್ಕಳುಗಳೇ +ಹಿಂ
ದಾರ +ಗೆಲಿದರು +ತಪವ +ಮಾಡಿ+ ವಿ
ಕಾರಿಗಳು +ಬ್ರಹ್ಮಂಗೆ+ ಬಂದಿಯನಿಕ್ಕಿದರು +ಬಳಿಕ
ವಾರಿಜೋದ್ಭವ +ಮೇಲನ್+ಅರಿಯ +ಕು
ಠಾರ +ನಾಯ್ಗಳ +ಹೆಚ್ಚಿಸಿದನ್+ಇದನ್
ಆರಿಗ್+ಅರುಪುವೆವ್+ಎಂದು +ಸುಯ್ದರು +ಬಯ್ದು +ಕಮಲಜನ

ಅಚ್ಚರಿ:
(೧) ಬ್ರಹ್ಮ, ಕಮಲಜ, ವಾರಿಜೋದ್ಭವ – ಬ್ರಹ್ಮನನ್ನು ಕರೆದಿರುವ ರೀತಿ
(೨) ವಿಕಾರಿ, ಕುಠಾರ, ನಾಯಿ – ತಾಕರನ ಮಕ್ಕಳನ್ನು ಬಯ್ದಿರುವ ಬಗೆ