ಪದ್ಯ ೯: ಸಾತ್ಯಕಿಯ ಮೇಲೆ ಹೇಗೆ ಆಕ್ರಮಣ ಮಾಡಿದರು?

ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಿಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸುಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ (ಕರ್ಣ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ತಮ್ಮ ಬಲವು ತಗ್ಗಲು ವಿಂದಾನುವಿಂದರು ಮುಂದೆ ನುಗ್ಗಿ ಸಾತ್ಯಕಿಯನ್ನು ಬಾಣಗಳಿಂದ ಮುಚ್ಚಿದರು. ಆಹಾ ಬಾಣಗಳು ಚೆನ್ನಾಗಿ ಬರುತ್ತಿವೆ, ಶಿವ ಶಿವಾ ರಾಜರಲ್ಲವೇ ಮಹಾ ಸಾಹಸಿಗರಲ್ಲವೇ ನೀವು, ಎಂದು ಸಾತ್ಯಕಿಯು ಬಾಣಗಳನ್ನು ಬಿಟ್ಟನು.

ಅರ್ಥ:
ದೊರೆ: ರಾಜ; ಅವದಿರು: ಅವರು; ಬಲ: ಸೈನ್ಯ; ಸಂವರಣೆ: ಸಜ್ಜು, ಸನ್ನಾಹ; ನೆಗ್ಗು:ಕುಗ್ಗು, ಕುಸಿ; ಹೇವ:ಮಾನ, ಹಗ್; ಹೊಡಕರಿಸು: ಕಾಣಿಸು; ಹೊಕ್ಕು: ಸೇರಿ; ಹೂಳು: ನೆಲದಲ್ಲಿ ಹುದುಗಿಸು; ಅಂಬು: ಬಾಣ; ಸರಳ: ಬಾಣ; ಬರವೊಳು: ಬರುವು, ಆಗಮನ; ಮಹಾದೇವ: ಶಿವ; ಅರಸು: ರಾಜ; ಮಕ್ಕಳು: ಸುತರ್; ವಿರೋಧ: ವೈರತ್ವ; ಹರಹರ: ಶಿವ ಶಿವಾ; ಸಾಹಸಿ: ಪರಾಕ್ರಮಿ; ಅಹುದು: ಹೌದು; ತೆಗೆ: ಹೊರಗೆ ತರು;

ಪದವಿಂಗಡಣೆ:
ದೊರೆಗಳ್+ಅವದಿರು +ತಮ್ಮ +ಬಲ +ಸಂ
ವರಣೆ +ನೆಗ್ಗಿದ+ ಹೇವದಲಿ+ ಹೊಡ
ಕರಿಸಿ +ಹೊಕ್ಕರು +ಹೂಳಿದರು +ಸಾತ್ಯಕಿಯನ್+ಅಂಬಿನಲಿ
ಸರಳ +ಬರವೊಳ್ಳಿತು +ಮಹಾ ದೇವ್
ಅರಸು+ಮಕ್ಕಳಲೇ +ವಿರೋಧವೆ
ಹರಹರ್+ಅತಿಸಾಹಸಿಕರ್+ಅಹುದ್+ಅಹುದೆನುತ+ ತೆಗೆದೆಚ್ಚ

ಅಚ್ಚರಿ:
(೧) ಹ ಕಾರದ ಪದಗಳ ಬಳಕೆ – ಹೇವ, ಹೊಡಕರಿಸು, ಹೂಳು, ಹರಹರ
(೨) ಅಂಬು, ಸರಳ – ಸಮನಾರ್ಥಕ ಪದ

ಪದ್ಯ ೮: ಸಾತ್ಯಕಿಯ ಸುತ್ತಲು ಯಾರು ಬಿದ್ದಿದ್ದರು?

ಕೆಣಕಿದರೆ ಭುಗಿಲೆಂದುದೀತನ
ರಣಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣಿದವೊ ನಿನ್ನಾಳು ಕುದುರೆಯನರಿಯೆ ನಾನೆಂದ (ಕರ್ಣ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಶತ್ರುಗಳು ಮೇಲೆ ಬೀಳಲು ಸಾತ್ಯಕಿಯ ಪರಾಕ್ರಮದ ಬೆಂಕಿ ಭುಗಿಲೆಂದು ಉಬ್ಬಿತು. ಕಾಡುಕಿಚ್ಚಿನ ಬಾಯಿಗೆ ಒಣಗಿದ ಹುಲ್ಲಿನ ಬಣವೆ ಸಿಕ್ಕ ಹಾಗಾಯಿತು. ಸಾತ್ಯಕಿಯ ಬಾಣಗಳೇ ಕಾಣಲಿಲ್ಲ. ಅವನ ಸುತ್ತಲೂ ಹೆಣದ ಬಣವೆ ಹಾಣಿಸಿತು. ನಿನ್ನ ಸೈನಿಕರು, ಕುದುರೆಗಳು ಬಾಳೆಯ ಗಿಡದಂತೆ ಸುಲಭವಾಗಿ ಕಡಿತಗೊಂಡು ಬಿದ್ದರು.

ಅರ್ಥ:
ಕೆಣಕು: ಪ್ರಚೋದಿಸು, ರೇಗಿಸು; ಭುಗಿಲ್: ಶಬ್ದವನ್ನು ವರ್ಣಿಸುವ ಪದ; ರಣ: ಯುದ್ಧ; ಪರಾಕ್ರಮ: ಶೌರ್ಯ; ವಹ್ನಿ: ಬೆಂಕಿ; ಕರಡ:ಕಾಡಿನಲ್ಲಿ ಬೆಳೆದು ಒಣಗಿದ ಹುಲ್ಲು; ಬಣಬೆ: ಮೆದೆ; ಸಿಕ್ಕು: ದೊರೆತು; ಕಾಳುಗಿಚ್ಚು: ಅಡವಿ ಬೆಂಕಿ; ಬಾಯ: ತಿನ್ನಲು ಬಳಸುವ ಅಂಗ; ಬಗರೆಗೆ: ಓಡು; ಕಣೆ: ಬಾಣ; ಕಾಣು: ನೋಡು; ಸುತ್ತ: ಎಲ್ಲಾಕಡೆ; ಒಟ್ಟು: ಎಲ್ಲಾ; ಹೆಣ: ಶವ; ಕಂಡು: ನೋಡು; ಬಾಳೆ: ಕದಳಿ; ಹಣಿ: ಬಾಗು, ಮಣಿ; ಆಳು: ಸೈನ್ಯ; ಕುದುರೆ: ತುರಗ, ಅಶ್ವ; ಅರಿ: ತಿಳಿ;

ಪದವಿಂಗಡಣೆ:
ಕೆಣಕಿದರೆ +ಭುಗಿಲೆಂದುದ್+ಈತನ
ರಣಪರಾಕ್ರಮ+ವಹ್ನಿ +ಕರಡದ
ಬಣಬೆ+ ಸಿಕ್ಕಿತು +ಕಾಳುಗಿಚ್ಚಿನ +ಬಾಯ +ಬಗರಗೆಗೆ
ಕಣೆಯ +ಕಾಣೆನು +ಸುತ್ತಲೊಟ್ಟುವ
ಹೆಣನ+ ಕಂಡೆನ್+ಇದಾವ +ಬಾಳೆಯ
ಹಣಿದವೊ +ನಿನ್ನಾಳು +ಕುದುರೆಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಹ್ನಿ ಕರಡದ ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
(೨) ಉಪಮಾನದ ಪ್ರಯೋಗ – ಒಟ್ಟುವ ಹೆಣನ ಕಂಡೆನಿದಾವ ಬಾಳೆಯ ಹಣಿದವೊ ನಿನ್ನಾಳು

ಪದ್ಯ ೭: ಸಾತ್ಯಕಿಯನ್ನು ಆವರಿಸಿದ ಸೈನ್ಯದ ಬಲ ಎಂತಹದು?

ಕವಿದುದಿವದಿರ ಸೇನೆ ಸಾತ್ಯಕಿ
ಹವಣನರಿಯದೆ ಹೊಕ್ಕು ಸಿಕ್ಕಿದ
ನವರೊಳಗೆ ಕಟ್ಟಿದವು ಸುತ್ತಲು ಸಾವಿರಾನೆಗಳು
ನವ ಸಹಸ್ರ ತುರಂಗ ಕಾಲಾ
ಳವಗಡಿಸಿತೈವತ್ತು ಸಾವಿರ
ವವನಿತಳ ನುಗ್ಗಾಯ್ತು ಪದಘಟ್ಟಣಿಯ ಫಲ್ಲಣೆಗೆ (ಕರ್ಣ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಂದಾನುವಿಂದರ ಸೇನೆ ಸಾತ್ಯಕಿಯ ಸುತ್ತಲೂ ಮುತ್ತಿತು. ತನ್ನ ಶಕ್ತಿಯ ಮಿತಿಯನ್ನರಿಯದೆ ಸಾತ್ಯಕಿ ಸಿಕ್ಕು ಹಾಕಿಕೊಂಡನು. ಒಂದು ಸಾವಿರ ಅನೆಗಳು, ಒಂಬತ್ತು ಸಾವಿರ ಕುದುರೆಗಳು, ಐವತ್ತು ಸಾವಿರ ಕಾಲಾಳುಗಳು ಅವನ ಮೇಲೆ ಬಿದ್ದರು. ಅವರ ಪದಹತಿಗೆ ಭೂಮಿಯೇ ನೆಗ್ಗಿತು.

ಅರ್ಥ:
ಕವಿದು: ಮುಸುಕು, ಮುಚ್ಚು; ಇವದಿರ: ಇವರ; ಸೇನೆ: ಸೈನ್ಯ; ಹವಣ: ಉಪಾಯ, ಸಿದ್ಧತೆ; ಅರಿ: ತಿಳಿ; ಹೊಕ್ಕು: ಸೇರು; ಸಿಕ್ಕಿದನು: ಬಂಧನಕ್ಕೊಳಗಾಗು; ಕಟ್ಟು: ಬಂಧಿಸು; ಸುತ್ತಲು: ಎಲ್ಲಾಕಡೆ; ಸಾವಿರ: ಸಹಸ್ರ; ಆನೆ: ಕರಿ, ಗಜ; ನವ: ಒಂಬತ್ತು; ತುರಂಗ: ಕುದುರೆ; ಕಾಲಾಳು: ಸೈನ್ಯ; ಅವಗಡಿಸು: ಅಡ್ಡಗಟ್ಟು ; ಅವನಿತಳ: ಭೂಮಿ; ನುಗ್ಗು: ನೂಕಾಟ, ತಳ್ಳಿಕೊಂಡು ಮುಂದೆ ಸರಿ; ಪದ: ಪಾದ, ಕಾಲು; ಘಟ್ಟಣೆ: ಗಟ್ಟಿಮಾಡುವುದು, ಗಾಯ; ಘಲ್ಲಣೆ: ಘಲ್ ಎಂಬ ಶಬ್ದ;

ಪದವಿಂಗಡಣೆ:
ಕವಿದುದ್+ಇವದಿರ +ಸೇನೆ +ಸಾತ್ಯಕಿ
ಹವಣನ್+ಅರಿಯದೆ +ಹೊಕ್ಕು +ಸಿಕ್ಕಿದನ್
ಅವರೊಳಗೆ+ ಕಟ್ಟಿದವು +ಸುತ್ತಲು +ಸಾವಿರ್+ಆನೆಗಳು
ನವ+ ಸಹಸ್ರ+ ತುರಂಗ+ ಕಾಲಾಳ್
ಅವಗಡಿಸಿತ್+ಐವತ್ತು +ಸಾವಿರವ್
ಅವನಿತಳ+ ನುಗ್ಗಾಯ್ತು +ಪದಘಟ್ಟಣಿಯ +ಫಲ್ಲಣೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅವನಿತಳ ನುಗ್ಗಾಯ್ತು ಪದಘಟ್ಟಣಿಯ ಫಲ್ಲಣೆಗೆ
(೨) ಸೈನ್ಯದ ನಡಿಗೆಯ ಶಬ್ದದ ವರ್ಣನೆ – ಪದಘಟ್ಟಣಿಯ ಘಲ್ಲಣೆ
(೩) ಸಾವಿರ, ಸಹಸ್ರ – ಸಮನಾರ್ಥಕ ಪದ