ಪದ್ಯ ೬: ಸಾತ್ಯಕಿಯ ಎದುರು ಯಾವ ವೀರನು ನಿಂತನು?

ಥಟ್ಟು ಮುರಿದುದು ಕೊಂಡ ನೆಲನನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜನ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ (ಕರ್ಣ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ನಿಮ್ಮ ಸೈನ್ಯ ಮುರಿದು ಬಿದ್ದಿದೆ ನಿಂತ ಜಾಗವನ್ನು ಬಿಟ್ಟೋಡಿತು, ನಮ್ಮ ಸೈನ್ಯದವರು ಪರಾಕ್ರಮವನ್ನು ತೋರಿ ನಿಮ್ಮ ಸೈನ್ಯವನ್ನು ಭೇದಿಸಿ ಸಾತ್ಯಕಿಯು ರಾಜರಿದಿರಲ್ಲಿ ಬಂದು ನಿಂತನು. ಯಾರಿವನು ಇಷ್ಟು ಶೂರ, ಪರಾಕ್ರಮವನ್ನು ತೋರಿ ಇಲ್ಲಿ ಬಂದಿದ್ದಾನೆ ಎಂದುಕೊಂಡು ವಿಂದಾನುವಿಂದರು ಸಾತ್ಯಕಿಯ ಎದುರು ನಿಂತರು.

ಅರ್ಥ:
ಥಟ್ಟು: ಪಕ್ಕ, ಕಡೆ, ಗುಂಪು; ಮುರಿ: ಸೀಳು; ಕೊಂಡು: ತೆಗೆದು; ನೆಲ: ಭೂಮಿ; ಬಿಟ್ಟು: ತೊರೆದು; ಹಿಂದು: ಬತ್ತುಹೋಗು; ಬಲ: ಸೈನ್ಯ; ಮೈ:ತನು; ತಲೆ: ಶಿರ; ತೋರು: ಗೋಚರಿಸು; ದೊರೆ: ರಾಜ; ಇದಿರು: ಎದುರು; ದಿಟ್ಟ: ಧೈರ್ಯಶಾಲಿ, ಸಾಹಸಿ;ಈಸು: ಇಷ್ಟು; ಮುಷ್ಟಾಮುಷ್ಟಿ: ಬಲಶಾಲ್; ಬಂದವನು: ಆಗಮಿಸು; ಜಟ್ಟಿ: ಪರಾಕ್ರಮಿ, ಶೂರ; ನಿಂದರು: ನಿಲ್ಲು;

ಪದವಿಂಗಡಣೆ:
ಥಟ್ಟು +ಮುರಿದುದು +ಕೊಂಡ +ನೆಲನನು
ಬಿಟ್ಟು+ ಹಿಂಗಿತು+ ನಮ್ಮ +ಬಲ+ ಮೈ
ಬಿಟ್ಟು +ತಲೆದೋರಿದನು+ ಸಾತ್ಯಕಿ +ದೊರೆಗಳ್+ಇದಿರಿನಲಿ
ದಿಟ್ಟನಾರಿವನ್+ಈಸು +ಮುಷ್ಟಾ
ಮುಷ್ಟಿಯಲಿ +ಬಂದವನೆನುತ +ಜನ
ಜಟ್ಟಿಗಳು +ವಿಂದಾನುವಿಂದರು +ನಿಂದರ್+ಇದಿರಿನಲಿ

ಅಚ್ಚರಿ:
(೧) ಮುಷ್ಟಾಮುಷ್ಟಿ, ಜನಜಟ್ಟಿ, ದಿಟ್ಟ – ಶೂರನೆಂದು ವರ್ಣಿಸಲು ಬಳಸಿದ ಪದಗಳು
(೨) ಪರಾಕ್ರಮದಿಂದ ಹೋರಾಡಿದರು ಎಂದು ಹೇಳಲು – ಮೈಬಿಟ್ಟು ತಲೆದೋರಿದನು

ಪದ್ಯ ೫: ಸಾತ್ಯಕಿಯ ಯುದ್ಧದ ಪರಿಣಾಮವು ಹೇಗಿತ್ತು?

ಬಿದ್ದವಗಣಿತ ತುರಗ ದಳ ಕೈ
ಮುದ್ದೆ ಗೊಂಡನು ಕಾಲನಸುವಿಡಿ
ದಿದ್ದವರ ನಾ ಕಾಣೆ ತೊಡಕಿದ ವೈರಿ ಬಲದೊಳಗೆ
ಹದ್ದು ಕಾಗೆಗೆ ನಿನ್ನವರು ಸಾ
ಲಿದ್ದು ಬೋನವ ಸವಸಿದರು ಬಲ
ವಿದ್ದು ಮಾಡುವುದೇನು ನಿಮಗಿನ್ನರಸ ಕೇಳೆಂದ (ಕರ್ಣ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಸಾತ್ಯಕಿಯ ಪರಾಕ್ರಮಕ್ಕೆ ಲೆಕ್ಕವಿಲ್ಲದಷ್ಟು ರಾವುತರು ನೆಲಕ್ಕೆ ಬಿದ್ದರು. ಯಮನ ಕೈಯಲ್ಲಿ ಮುದ್ದೆಯಂತೆ ಅವರ ಪ್ರಾಣಗಳನ್ನು ಹಿಡಿದುಕೊಂಡನು. ನಿನ್ನ ಸೈನಿಕರು ಸಾಲಾಗಿ ಸತುಉ ಬಿದ್ದು ಹದ್ದು ಕಾಗೆಗಳು ಅವನ್ನು ಆಸ್ವಾದಿಸುತ್ತಿವೆ ಅಂತಹ ಸೈನ್ಯವಿದ್ದಾದರು ಏನು ಪ್ರಯೋಜನ?

ಅರ್ಥ:
ಬಿದ್ದವು: ಕೆಳಗೆ ಜಾರು; ಅಗಣಿತ: ಲೆಕ್ಕ ವಿಲ್ಲದ; ತುರಗ: ಕುದುರೆ; ದಳ: ಸೈನ್ಯ; ಕೈ: ಕರ; ಮುದ್ದೆ: ಮುದುಡೆಯಾದುದು, ದಪ್ಪವಾದ ಉಂಡೆ; ಕೊಂಡು: ತೆಗೆದು; ಕಾಲನು: ಯಮನು; ಅಸು: ಪ್ರಾಣ; ಕಾಣೆ: ಸಿಗಲಾರದು; ತೊಡಕು: ಸಿಕ್ಕಿಕೊಳ್ಳು; ವೈರಿ: ಶತ್ರು; ಬಲ: ಸೈನ್ಯ; ಹದ್ದು: ಪಕ್ಷಿಯ ಜಾತಿ; ಕಾಗೆ: ಕಾಕ; ಸಾಲು: ಆವಳಿ; ಬೋನ:ಅನ್ನ, ಆಹಾರ; ಸವಸು: ಆಸ್ವಾದಿಸು; ಬಲ: ಸೈನ್ಯ; ಅರಸ: ರಾಜ;

ಪದವಿಂಗಡಣೆ:
ಬಿದ್ದವ್+ಅಗಣಿತ +ತುರಗ +ದಳ +ಕೈ
ಮುದ್ದೆ +ಗೊಂಡನು +ಕಾಲನ್+ಅಸುವಿಡಿ
ದಿದ್ದವರ +ನಾ +ಕಾಣೆ +ತೊಡಕಿದ +ವೈರಿ +ಬಲದೊಳಗೆ
ಹದ್ದು +ಕಾಗೆಗೆ +ನಿನ್ನವರು +ಸಾ
ಲಿದ್ದು +ಬೋನವ +ಸವಸಿದರು +ಬಲ
ವಿದ್ದು +ಮಾಡುವುದೇನು +ನಿಮಗಿನ್ನರಸ +ಕೇಳೆಂದ

ಅಚ್ಚರಿ:
(೧) ಹಲವಾರು ಜನ ಸತ್ತರು ಎಂದು ಹೇಳಲು – ಕೈಮುದ್ದೆ ಗೊಂಡನು ಕಾಲನಸುವಿಡಿ
ದಿದ್ದವರ ನಾ ಕಾಣೆ; ಹದ್ದು ಕಾಗೆಗೆ ನಿನ್ನವರು ಸಾಲಿದ್ದು ಬೋನವ ಸವಸಿದರು

ಪದ್ಯ ೪: ಸಾತ್ಯಕಿಯ ಯುದ್ಧದ ಘೋರತೆ ಹೇಗಿತ್ತು?

ಅರೆರೆ ರಾವುತು ಜಾಗು ಸ್ವಾಮಿಯ
ಹರಿಬಕೋಸುಗ ಹಗೆಯ ಹೊಯ್ದಿರಿ
ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ
ಸರಳನೊಂದನೆ ತೊಡಚಿ ತುರಗದ
ಕೊರಳ ವಾಘೆಯ ಕರವ ರಾವ್ತರ
ಶಿರವನೆಚ್ಚನು ಕೊಂದನೀಪರಿ ಹತ್ತು ಸಾವಿರವ (ಕರ್ಣ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಅರರೆ ರಾವುತರೇ ಎಚ್ಚರ, ಸ್ವಾಮಿ ಕಾರ್ಯಕ್ಕಾಗಿ ಹಗೆಯನ್ನು ಹೊಯ್ಯಲು ನೀವು ಬಂದಿರೇ, ವೀರರಲ್ಲವೇ ನೀವು? ಎನ್ನುತ್ತಾ ಅವರ ಮೇಲೆ ನುಗ್ಗಿ ಬರುವ ರಾವುತರ ಮೇಲೆ ಸಾತ್ಯಕಿತ್ಯು ಬಾಣಗಳನ್ನು ಬಿಟ್ಟನು. ಅವನ ಒಂದೊಂದು ಬಾಣವು ಕುದುರೆಯ ಹಗ್ಗವನ್ನು ಹಿಡಿದ ಕೈ (ರಾವುತನ) ತಲೆಗಳನ್ನು ಕತ್ತರಿಸುತ್ತಿತ್ತು, ಹೀಗೆ ಹತ್ತು ಸಾವಿರ ರಾವುತರನ್ನು ಕೊಂದನು.

ಅರ್ಥ:
ಅರೆರೆ: ಆಶ್ಚರ್ಯ ಸೂಚಕ ಪದ; ರಾವುತ: ಕುದುರೆ ಸವಾರ; ಜಾಗು: ಎಚ್ಚರ; ತಡಮಾಡು; ಸ್ವಾಮಿ: ಒಡೆಯ; ಹರಿಬ: ಕೆಲಸ, ಕಾರ್ಯ; ಓಸುಗ: ಕಾರಣಕ್ಕಾಗಿ; ಹಗೆ: ವೈರತ್ವ; ಹೊಯ್ದಿರಿ: ಹೊತ್ತಿರಿ, ಹೊಡೆದಿರಿ; ಬಿರುದು: ಗೌರವಸೂಚಕ ಪದ; ಅಹುದು: ಹೌದು; ಎನುತ: ಹೇಳುತ್ತಾ; ಮೀರು: ಹೆಚ್ಚಾಗು; ಹಯ: ಕುದುರೆ; ಮುರಿ: ಸೀಳು; ಸರಳ: ಬಾಣ; ತೊಡಚು: ಕಟ್ಟು, ಬಂಧಿಸು; ತುರಗ: ಕುದುರೆ; ಕೊರಳ: ಕತ್ತು; ವಾಘೆ: ಲಗಾಮು; ಕರ: ಹಸ್ತ; ಶಿರ: ತಲೆ; ಎಚ್ಚು: ಕಡಿ; ಕೊಂದು: ಸಾಯಿಸು; ಪರಿ: ರೀತಿ; ಹತ್ತು: ದಶ; ಸಾವಿರ: ಸಹಸ್ರ;

ಪದವಿಂಗಡಣೆ:
ಅರೆರೆ +ರಾವುತು +ಜಾಗು +ಸ್ವಾಮಿಯ
ಹರಿಬಕೋಸುಗ +ಹಗೆಯ +ಹೊಯ್ದಿರಿ
ಬಿರುದರ್+ಅಹುದೋ +ಎನುತ +ಮೀರುವ +ಹಯವ +ಮುರಿಯೆಸುತ
ಸರಳನ್+ಒಂದನೆ +ತೊಡಚಿ +ತುರಗದ
ಕೊರಳ +ವಾಘೆಯ +ಕರವ+ ರಾವ್ತರ
ಶಿರವನ್+ಎಚ್ಚನು +ಕೊಂದನೀಪರಿ+ ಹತ್ತು +ಸಾವಿರವ

ಅಚ್ಚರಿ:
(೧) ತುರಗ, ಹಯ – ಸಮನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹರಿಬಕೋಸುಗ ಹಗೆಯ ಹೊಯ್ದಿರಿ

ಪದ್ಯ ೩: ಕುದುರೆಗಳ ಓಟದಿಂದ ಎದ್ದ ಧೂಳು ಎಲ್ಲಿ ಮುಟ್ಟಿದವು?

ರಾವುತೋ ಎನಿತೊಂದು ಹಂತಿಯ
ಸಾವಿನಾತಗಳೇರಿದರು ಪರಿ
ಧಾವನೋದ್ಗತ ಧೂಳಿ ಮುಸುಕಿತು ತರಣಿ ಮಂಡಲವ
ಆ ವೃಕೋದರ ಗತಿಯ ಕಂಡನು
ರಾವುತರ ದೃಢವಾಘೆ ವಾಘೆಯ
ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ (ಕರ್ಣ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ದಿಗ್ಭ್ರಮೆಗೊಂಡ ಜನರು ಸಾವನು ಬಯಸಿ ಸಾಲಾಗಿ ಮೇಲೆ ಬಂದರು. ಕುದುರೆಗಳ ಖುರಪುಟದ ಹೊಡೆತದಿಂದ ಧೂಳು ಸೂರ್ಯಮಂಡಲದವರೆಗೆ ಹಬ್ಬಿತು. ಭೀಮನು ಇದನ್ನು ನೋಡುತ್ತಿರಲು ಸಾತ್ಯಕಿಯು ಕುದುರೆಯ ಲಗಾಮಿನ ಹಗ್ಗದೆಳೆತ ಜೋರಾಗಿದೆ ಎನ್ನುತ್ತಾ ಧನುಸ್ಸನ್ನೆತ್ತಿಕೊಂಡನು.

ಅರ್ಥ:
ರಾವು: ಗಾಬರಿ, ದಿಗ್ಭ್ರಮೆ; ರಾವುತ: ಕುದುರೆ ಸವಾರ; ಹಂತಿ: ಹತ್ತಿರ; ಸಾಲು; ಸಾವು: ಮರಣ; ಏರು: ಮೇಲೆ ಹೋಗು; ಪರಿಧಾವನೆ: ಓಡುವುದು; ಪರಿಧಾವನೋದ್ಗತ: ಓಡುವುದರಿಂದ ಮೇಲೇಳುವ; ಧೂಳು: ಸಣ್ಣನೆಯ ಮಣ್ಣು; ಮುಸುಕು: ಕವಿ; ತರಣಿ: ಸೂರ್ಯ; ಮಂಡಲ: ಜಗತ್ತು; ವೃಕೋಧರ:ತೋಳದ ಹೊಟ್ಟೆಯವ (ಭೀಮ); ಗತಿ: ಇರುವ ಸ್ಥಿತಿ, ಅವಸ್ಥೆ; ಕಂಡು: ನೋಡು; ಧೃಢ: ಗಟ್ಟಿ; ವಾಘೆ: ಲಗಾಮು; ಲಾವಣಿಗೆ:ಗುಂಪು, ಸಮೂಹ, ಆಕ್ರಮಣ; ಲೇಸು: ಒಳ್ಳೆಯದು; ತುಡುಕು: ಬೇಗನೆ ಹಿಡಿಯುವುದು; ಧನು: ಧನಸ್ಸು;

ಪದವಿಂಗಡಣೆ:
ರಾವುತೋ ಎನಿತೊಂದು ಹಂತಿಯ
ಸಾವಿನಾತಗಳೇರಿದರು ಪರಿ
ಧಾವನೋದ್ಗತ ಧೂಳಿ ಮುಸುಕಿತು ತರಣಿ ಮಂಡಲವ
ಆ ವೃಕೋದರ ಗತಿಯ ಕಂಡನು
ರಾವುತರ ದೃಢವಾಘೆ ವಾಘೆಯ
ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪರಿಧಾವನೋದ್ಗತ ಧೂಳಿ ಮುಸುಕಿತು ತರಣಿ ಮಂಡಲವ
(೨) ವಾಘೆ – ಪದದ ಬಳಕೆ
(೩) ಲ ಕಾರದ ಜೋಡಿ ಪದ – ಲಾವಣಿಗೆ ಲೇಸೆನುತ

ಪದ್ಯ ೨: ಪಾಂಡವರ ಸೈನ್ಯ ಏಕೆ ಭಯಪಟ್ಟಿತು?

ಕರೆದು ಮೂದಲಿಸಿದರೆ ಹುಲ್ಲೆಯ
ಮರಿಗಳಿಗೆ ಖತಿಗೊಂಬುದೇ ಮದ
ಕರಿ ಕರೂಷದ ಕೊಬ್ಬಿನವದಿರು ಹಿಂದೆ ಹತ್ತಿದರೆ
ಮರಳಬಲ್ಲನೆ ಭೀಮನಿವರ
ಬ್ಬರಿಸಿ ಕವಿದರು ಹತ್ತು ಸಾವಿರ
ತುರಗ ಸರಿಸದಲೇರಿದವು ಪಡಿಮುಖದ ಬಲ ಬೆದರೆ (ಕರ್ಣ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ಹುಲ್ಲೆಯ ಮರಿಗಳು ಕರೆದು ಮೂದಲಿಸಿದರೆ ಮದಗಜಕ್ಕೆ ಸಿಟ್ಟು ಬಂದೀತೇ? ತಿಂದ ಕೊಬ್ಬಿನವರು ಬೆನ್ನಟ್ತಿದರೆ ಭೀಮನು ಓಡಿ ಹೋದನೇ? ಕೌರವರ ಕಡೆಯ ಹತ್ತು ಸಾವಿರ ಕುದುರೆಗಳು ಒಂದೇ ಬಾರಿ ದಾಳಿ ಮಾಡಿದವು, ಪಾಂಡವರ ಸೈನ್ಯ ಇದನ್ನು ನೋಡಿ ಬೆದರಿತು.

ಅರ್ಥ:
ಕರೆದು: ಬರೆಮಾಡಿ; ಮೂದಲಿಸು: ಹಂಗಿಸು; ಹುಲ್ಲೆ:ಚಿಗುರೆ, ಜಿಂಕೆ; ಮರಿ: ಚಿಕ್ಕದ್ದು; ಖತಿ: ಕೋಪ; ಮದಕರಿ: ಮದವೇರಿದ ಆನೆ; ಕರೂಷ: ಒಂದು ದೇಶದ ಜನ; ಕೊಬ್ಬು: ಅಹಂಕಾರ;ಹಿಂದೆ: ಹಿಂಬಾಗ; ಹತ್ತಿರ: ಸಮೀಪ; ಮರಳು: ಹಿಂದಕ್ಕೆ ಬರು; ಅಬ್ಬರಿಸು: ಜೋರಾಗಿ ಕೂಗು; ಕವಿ: ಮುಸುಕು; ಹತ್ತು: ದಶ; ಸಾವಿರ: ಸಹಸ್ರ; ತುರಗ: ಕುದುರೆ; ಸರಿಸು: ಪಕ್ಕಕ್ಕೆ ತರುವುದು; ಏರು: ಮೇಲೆ ಹೋಗು; ಪಡಿಮುಖ:ಎದುರಾಳಿ; ಬಲ: ಸೈನ್ಯ; ಬೆದರು: ಹೆದರು, ಅಂಜಿಕೆ;

ಪದವಿಂಗಡಣೆ:
ಕರೆದು +ಮೂದಲಿಸಿದರೆ +ಹುಲ್ಲೆಯ
ಮರಿಗಳಿಗೆ +ಖತಿಗೊಂಬುದೇ +ಮದ
ಕರಿ +ಕರೂಷದ+ ಕೊಬ್ಬಿನವದಿರು+ ಹಿಂದೆ +ಹತ್ತಿದರೆ
ಮರಳಬಲ್ಲನೆ +ಭೀಮನಿವರ್
ಅಬ್ಬರಿಸಿ+ ಕವಿದರು +ಹತ್ತು +ಸಾವಿರ
ತುರಗ +ಸರಿಸದಲ್+ಏರಿದವು +ಪಡಿಮುಖದ +ಬಲ +ಬೆದರೆ

ಅಚ್ಚರಿ:
(೧) ಪಾಂಡವರನ್ನು ಪಡಿಮುಖ (ಎದುರಾಳಿ) ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಕರೆದು ಮೂದಲಿಸಿದರೆ ಹುಲ್ಲೆಯ ಮರಿಗಳಿಗೆ ಖತಿಗೊಂಬುದೇ ಮದ ಕರಿ

ನುಡಿಮುತ್ತುಗಳು: ಕರ್ಣ ಪರ್ವ, ೩ ಸಂಧಿ

  • ಕರೆದು ಮೂದಲಿಸಿದರೆ ಹುಲ್ಲೆಯ ಮರಿಗಳಿಗೆ ಖತಿಗೊಂಬುದೇ ಮದ ಕರಿ – ಪದ್ಯ ೨
  • ಪರಿಧಾವನೋದ್ಗತ ಧೂಳಿ ಮುಸುಕಿತು ತರಣಿ ಮಂಡಲವ – ಪದ್ಯ ೩
  • ಅವನಿತಳ ನುಗ್ಗಾಯ್ತು ಪದಘಟ್ಟಣಿಯ ಫಲ್ಲಣೆಗೆ – ಪದ್ಯ ೭
  • ವಹ್ನಿ ಕರಡದ ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ – ಪದ್ಯ ೮
  • ಒಟ್ಟುವ ಹೆಣನ ಕಂಡೆನಿದಾವ ಬಾಳೆಯ ಹಣಿದವೊ ನಿನ್ನಾಳು –ಪದ್ಯ ೮
  • ಸುರನಾರಿಯರ ತೋಳಿನಲಿ ಕಾಬುದು ನೆಲನ ರಿಣ ಹರಿದು – ಪದ್ಯ ೧೫
  • ಆರಿದನು ಜಗ ನಡುಗಲಾ ಜಂಭಾರಿ ಜವಗೆಡೆ ಬೊಬ್ಬಿರಿದನಾ – ಪದ್ಯ ೧೮
  • ಭೀಮನತೋರಗರುಳಿನ ದಂಡೆಯನು ಕೈಯಾರೆ ಮಾರಿಗೆ ಮುಡಿಸುವೆನು – ಪದ್ಯ ೧೮
  • ಸರಳನೆಚ್ಚನು ಸರಳನಾ ಬಳಿ ಸರಳು ಮುಂಚಿದುದಾ ಸರಳ ಬಳಿ ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ – ಪದ್ಯ ೧೯
  • ವಿರೋಧಿ ಸ್ಮರಕಪರ್ದಿ ಕಣಾ ವೃಕೋದರ ಕರಿ ಮೃಗೇಂದ್ರ ಕಣಾ – ಪದ್ಯ ೧೯
  • ಸರಳ ಬಳಿಸರಳುಗಳನಾ ಲಘು ತರದ ಲೆಕ್ಕದಲೆಸೆವ ವಿವರದ ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ – ಪದ್ಯ ೨೦
  • ನೆನೆದ ಜಾಜಿನ ಗಿರಿಯೊ, ರಕ್ತಚಂದನ ಬನವೊ, ತಳಿತಶೋಕೆಯ ಮರನೊ – ಪದ್ಯ ೨೬
  • ಮನ ಹಣುಗಿ ತುಟಿಯೊಣಗಿ ನೋಟದ ಮೊನೆ ಮುರಿದು ಝೋಂಪಿಸುತ ಮುಂದಣಿ ಗೊನೆದು ಬಿದ್ದನು – ಪದ್ಯ ೨೬
  • ವೈರಿಗೆ ಧರೆಗೆ ಪಾಣಿಗ್ರಹಣವಾಯಿತೆ – ಪದ್ಯ ೨೭

ಪದ್ಯ ೧: ಕ್ಷೇಮಧೂರ್ತಿಯ ಸೈನಿಕರು ಒಡೆಯನ ಸಾವಿಗೆ ಹೇಗೆ ಪ್ರತಿಕ್ರಯಿಸಿದರು?

ಬೀಳಲಗ್ಗದ ಕ್ಷೇಮಧೂರ್ತಿ ನೃ
ಪಾಲಕನ ಪರಿವಾರ ಕೋಪ ಕ
ರಾಳ ಶಿಖಿಪರಿತಪ್ತ ಕಂಪಿತ ಖಡ್ಗದೊಗ್ಗಿನಲಿ
ಆಳಿದನ ಮರಣದಲಿ ಹಿಂದಣ
ಕೂಳಿನಾಸೆಯ ಕುನ್ನಿಗಳಿರೆನು
ತಾಳು ಕವಿದುದು ಭೀಮ ಫಡ ಫಡ ನಿಲ್ಲು ನಿಲ್ಲೆನುತ (ಕರ್ಣ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ವೀರನಾದ ಕ್ಷೇಮಧೂರ್ತಿಯು ಮಡಿಯಲು ಅವನ ಪರಿವಾರದವರು ರೋಷಾಗ್ನಿಯಿಂದ ಕಾದ ಖಡ್ಗಗಳನ್ನು ಝಳಪಿಸುತ್ತಾ, “ಒಡೆಯನ ಮರಣವನ್ನು ನೋಡಿ ಕೂಳಿನಾಸೆಯಿಂದ ಬದುಕುವ ಕುನ್ನಿಗಳೇ ಕಾದಲು ಮುಂದೆ ಬನ್ನಿ ಎಂದು ಪರಿತಪಿಸುತ್ತಾ ಭೀಮಾ ನಿಲ್ಲು ನಿಲ್ಲು ಎಂದು ಭೀಮನನ್ನು ಮುತ್ತಿದರು.

ಅರ್ಥ:
ಬೀಳು: ಕೆಳಕ್ಕೆ ಜಾರು; ಅಗ್ಗ: ಶ್ರೇಷ್ಠ; ನೃಪಾಲ: ರಾಜ; ಪರಿವಾರ: ಸಂಬಂಧಿಕರು; ಕೋಪ: ರೋಷ; ಕರಾಳ: ಭೀಕರ; ಶಿಖಿ: ಅಗ್ನಿ; ಪರಿತಪ್ತ:ಚೆನ್ನಾಗಿ ಕಾದ, ಸಂತಪ್ತ; ಕಂಪಿತ: ನಡುಗುವ; ಖಡ್ಗ: ಕತ್ತಿ; ಒಗ್ಗು: ಗುಂಪು, ಸಮೂಹ; ಆಳಿ: ಸಮೂಹ, ಗುಂಪು; ಮರಣ: ಸಾವು; ಆಳಿದನ: ಒಡೆಯ, ಆಳಿದವನ; ಹಿಂದಣ: ಹಿಂದೆ ಇದ್ದ; ಕೂಳು: ಊಟ; ಆಸೆ: ಇಚ್ಛೆ; ಕುನ್ನಿ: ನಾಯಿ; ಆಳು: ಸೈನಿಕರು; ಕವಿದು: ಮುಚ್ಚಳ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನಿಲ್ಲು: ತಂಗು, ಸ್ಥಿರವಾಗು;

ಪದವಿಂಗಡಣೆ:
ಬೀಳಲ್+ಅಗ್ಗದ +ಕ್ಷೇಮಧೂರ್ತಿ +ನೃ
ಪಾಲಕನ +ಪರಿವಾರ +ಕೋಪ +ಕ
ರಾಳ +ಶಿಖಿ+ಪರಿತಪ್ತ+ ಕಂಪಿತ +ಖಡ್ಗದ್+ಒಗ್ಗಿನಲಿ
ಆಳಿದನ +ಮರಣದಲಿ+ ಹಿಂದಣ
ಕೂಳಿನಾಸೆಯ+ ಕುನ್ನಿಗಳಿರೆನು
ತಾಳು +ಕವಿದುದು +ಭೀಮ +ಫಡ +ಫಡ+ ನಿಲ್ಲು +ನಿಲ್ಲೆನುತ

ಅಚ್ಚರಿ:
(೧) ಬಯ್ಯುವ ಪರಿ – ಆಳಿದನ ಮರಣದಲಿ ಹಿಂದಣ ಕೂಳಿನಾಸೆಯ ಕುನ್ನಿಗಳಿರೆನು ತಾಳು
(೨) ಕೋಪವನ್ನು ಸೂಚಿಸುವ ಪದ – ಕೋಪ ಕರಾಳ ಶಿಖಿ