ಪದ್ಯ ೪: ಸೇನೆಯ ಹೋರಾಟದ ದೃಶ್ಯ ಹೇಗಿತ್ತು?

ಹೊಯ್ದು ಮುಗ್ಗಿತು ಭಟರು ವೆಗ್ಗಳ
ಕೈದುಕಾರರು ತಲೆಗೆ ಸಂದರು
ಮೈದೆಗೆಯದೊಡವೆರಸಿ ಹೊಕ್ಕರು ಬೇಹಬೇಹವರು
ಕೊಯ್ದ ಕೊರಳಿನ ಕೊರೆದ ತೋಳಿನ
ಹಾಯ್ದ ಮೂಳೆಯ ಸುರಿವ ಕರುಳಿನ
ಲೆಯ್ದೆ ಪಡೆಗೇರಾಯ್ತು ಚೂಣಿಯ ಚಾತುರಂಗದಲಿ (ಕರ್ಣ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಭಟರು ಹೊಡೆದಾಡು ಸತ್ತರು, ವೀರರು ಮುಂದೆ ಬಂದು ಒಳಹೊಕ್ಕು ಯಾರು ಸಿಕ್ಕರೆ ಅವರೊಡನೆ ಹೋರಾಡಿದರು. ಕೊಯ್ದ ಕೊರಳು, ಕತ್ತರಿಸಿದ ತೋಳು, ಹೊರ ಬಂದ ಮೂಳೆ, ಕರುಳುಗಳು ಎಲ್ಲೆಲ್ಲೂ ಕಾಣಲು ಮುಂಚೂಣಿಯಲ್ಲಿ ಹಲವರು ನೆಲಕ್ಕೆ ಬಿದ್ದರು.

ಅರ್ಥ:
ಹೊಯ್ದು: ಹೊಡೆದು; ಮುಗ್ಗು: ಬಾಗು, ಮಣಿ; ಭಟರು: ಸೈನಿಕರು; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ಕೈದು: ಶಸ್ತ್ರ, ಕತ್ತಿ; ತಲೆ: ಶಿರ; ಸಂದು: ಬಿರುಕು, ಸೀಳು; ಮೈ: ತನು, ಶರೀರ; ತೆಗೆ: ತೋರು ; ಒಡವರೆಸು: ಜೊತೆಗೂಡು; ಹೊಕ್ಕರು: ಸೇರು; ಬೇಹ: ಬೇಕಾದ, ಗೂಢಚರ್ಯೆ; ಕೊಯ್ದ: ಕತ್ತರಿಸು; ಕೊರಳು: ಕತ್ತು; ಕೊರೆ: ಸೀಳು; ತೋಳು: ಬಾಹು; ಹಾಯ್ದ: ಹೊಡೆದ; ಮೂಳೆ: ಎಲುಬು, ಅಸ್ಥಿ; ಸುರಿ: ಹರಿವು; ಕರುಳು: ಪಚನಾಂಗ; ಪಡೆ: ಸೈನ್ಯ; ಚೂಣಿ: ಮುಂದಿನ ಸಾಲು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ;

ಪದವಿಂಗಡಣೆ:
ಹೊಯ್ದು +ಮುಗ್ಗಿತು +ಭಟರು +ವೆಗ್ಗಳ
ಕೈದುಕಾರರು +ತಲೆಗೆ +ಸಂದರು
ಮೈದೆಗೆಯದ್+ಒಡವೆರಸಿ +ಹೊಕ್ಕರು +ಬೇಹಬೇಹವರು
ಕೊಯ್ದ +ಕೊರಳಿನ+ ಕೊರೆದ +ತೋಳಿನ
ಹಾಯ್ದ +ಮೂಳೆಯ +ಸುರಿವ+ ಕರುಳಿನ
ಲೆಯ್ದೆ +ಪಡೆಗೇರಾಯ್ತು+ ಚೂಣಿಯ +ಚಾತುರಂಗದಲಿ

ಅಚ್ಚರಿ:
(೧) ಹಾಯ್ದ, ಕೊಯ್ದ; ತೋಳಿನ ಕರುಳಿನ – ಪ್ರಾಸ ಪದಗಳು
(೨) ಕ ಕಾರದ ತ್ರಿವಳಿ ಪದ – ಕೊಯ್ದ ಕೊರಳಿನ ಕೊರೆದ
(೩) ಕೊಯ್ದ, ಹೊರೆದ, ಹಾಯ್ದ, ಸುರಿವ, ಲೆಯ್ದ, ಹೊಕ್ಕು – ಯುದ್ಧವನ್ನು ವಿವರಿಸುವ ಪದಗಳು

ಪದ್ಯ ೩: ಕೌರವರು ಪಾಂಡವರು ಯಾವ ವ್ಯೂಹವನ್ನು ರಚಿಸಿದರು?

ಮೋಹರಿಸಿತಿದು ನಡೆದು ಮಕರ
ವ್ಯೂಹದಲಿ ಬಳಿಕರ್ಧಚಂದ್ರ
ವ್ಯೂಹದಲಿ ಬಂದೊಡ್ಡಿ ನಿಂದುದು ಪಾಂಡುಸುತಸೇನೆ
ಮೋಹರಿಸಲೊಡವೆರಸಿ ಹೊಯ್ದರು
ಗಾಹುಗತಕವನುಳಿದು ಚೂಣಿಯ
ಸಾಹಸಿಗರು ಸನಾಮರೊದಗಿದರೆರಡು ಥಟ್ಟಿನಲಿ (ಕರ್ಣ ಪರ್ವ, ೨ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಕರ್ಣನ ನೇತೃತ್ವದಲ್ಲಿ ಮಕರವ್ಯೂಹವನ್ನು ರಚಿಸಿತು. ಪಾಂಡವರ ಸೈನ್ಯವು ಅರ್ಧಚಂದ್ರಾಕೃತಿಯ ವ್ಯೂಹದಲ್ಲಿ ನಿಂತಿತು. ಯುದ್ಧವು ಆರಂಭವಾಗಲು ಒಬ್ಬರೊಡನೊಬ್ಬರು ಬೆರಸಿ ತಿವಿದಾಡಿದರು. ವೀರರೂ ಸಾಹಸಿಗರೂ ತಮ್ಮ ಪರಾಕ್ರಮವನ್ನು ಮೆರೆದರು.

ಅರ್ಥ:
ಮೋಹರ: ಯುದ್ಧ, ಕಾಳಗ; ಮಕರ: ಮೊಸಳೆ; ವ್ಯೂಹ: ಜಾಲ; ಬಳಿಕ: ನಂತರ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಚಂದ್ರ: ಶಶಿ; ಬಂದು: ಆಗಮಿಸಿ; ಒಡ್ಡು: ಸೈನ್ಯ, ಪಡೆ; ನಿಂದು: ನಿಲ್ಲು; ಸುತ: ಮಕ್ಕಳು; ಸೇನೆ: ಸೈನ್ಯ; ಒಡೆವೆರೆಸು: ಜೊತೆಗೂಡಿಸು; ಹೊಯ್ದು: ಹೊಡೆದು; ಗಾಹುಗತಕ: ಮೋಹ, ಭ್ರಾಂತಿ; ಉಳಿದು: ಮಿಕ್ಕ; ಚೂಣಿ: ಯುದ್ಧದಲ್ಲಿ ಮುಂದೆ ಇರುವ ಸೈನ್ಯ; ಸಾಹಸಿಗರು: ಶೂರರು; ಸನಾಮ: ಪ್ರಸಿದ್ಧಳಾದವಳು; ಒದಗು: ಲಭ್ಯ, ದೊರೆತುದು; ಥಟ್ಟು: ಸೈನ್ಯ, ಪಡೆ;

ಪದವಿಂಗಡಣೆ:
ಮೋಹರಿಸಿತ್+ಇದು +ನಡೆದು +ಮಕರ
ವ್ಯೂಹದಲಿ +ಬಳಿಕ್+ಅರ್ಧಚಂದ್ರ
ವ್ಯೂಹದಲಿ +ಬಂದೊಡ್ಡಿ +ನಿಂದುದು +ಪಾಂಡುಸುತ+ಸೇನೆ
ಮೋಹರಿಸಲ್+ಒಡವೆರಸಿ +ಹೊಯ್ದರು
ಗಾಹುಗತಕವನ್+ಉಳಿದು+ ಚೂಣಿಯ
ಸಾಹಸಿಗರು+ ಸನಾಮರ್+ಒದಗಿದರ್+ಎರಡು +ಥಟ್ಟಿನಲಿ

ಅಚ್ಚರಿ:
(೧) ಮೋಹರ – ೧, ೪ ಸಾಲಿನ ಮೊದಲ ಪದ
(೨) ವ್ಯೂಹ – ೨, ೩ ಸಾಲಿನ ಮೊದಲ ಪದ, ಮಕರವ್ಯೂಹ, ಅರ್ಧಚಂದ್ರವ್ಯೂಹ;
(೩) ಸಾಹಸಿಗರು, ಸನಾಮರು – ಪದಗಳ ಬಳಕೆ

ಪದ್ಯ ೨: ಸೈನ್ಯವು ಕಾಳಗಕ್ಕೆ ಹೇಗೆ ಹೊರಟಿತು?

ಸೂಳು ವಿಗಲಳ್ಳಿರಿದವುರು ನಿ
ಸ್ಸಾಳಕೋಟಿಗಳುದಯದಲಿ ದಿಗು
ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ
ತೂಳುವರೆಗಳ ರಾಯ ಗಿಡಗನ
ಘೋಳ ಘೋರದ ಘೋಷವವನಿಯ
ಸೀಳೆ ನಡೆದುದು ಸೇವೆ ರವಿನಂದನನ ನೇಮದಲಿ (ಕರ್ಣ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಅನೇಕ ನಿಸ್ಸಾಳಗಳು ಮತ್ತೆ ಮತ್ತೆ ಸದ್ದು ಮಾದಿದವು. ರಣಕಹಳೆಗಳು ಮೊರೆದವು. ತಮಟೆಗಳನ್ನು ಬಡಿದರು. ರಾಯಗಿಡಿಗಗಳ ಘೋರ ಶಬ್ದ ಭೂಮಿಯನ್ನು ಸೀಳಿತು. ಕರ್ಣನ ಅಪ್ಪಣೆಯಂತೆ ಸೈನ್ಯವು ಕಾಳಗಕ್ಕೆ ಹೊರಟಿತು.

ಅರ್ಥ:
ಸೂಳು: ಆರ್ಭಟ, ಬೊಬ್ಬೆ; ಅಳ್ಳಿರಿ: ನಡುಗಿಸು, ಚುಚ್ಚು; ಉರು: ಹೆಚ್ಚಾದ, ಅತಿದೊಡ್ಡ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅನೇಕ; ಉದಯ: ಹುಟ್ಟು; ದಿಗು: ದಿಕ್ಕು; ಜಾಲ: ಬಲೆ; ಸಮೂಹ; ಜರಿ: ನಿಂದಿಸು, ತಿರಸ್ಕರಿಸು; ಝಾಡಿ: ಕಾಂತಿ; ಝಾಡಿಗೆದರು: ರಾಶಿಯಾಗಿ ಕೆದರು; ಗೌರು: ಗಟ್ಟಿಯಾದ ಕೀರಲು ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ; ತೂಳು: ಆವೇಶ, ಉನ್ಮಾದ; ರಾಯ: ರಾಜ; ಗಿಡಿಗ: ಒಂದು ಬಗೆಯ ಹಕ್ಕಿ; ಘೋಳ: ಕುದುರೆ; ಘೋರ: ಉಗ್ರವಾದುದು; ಘೋಷ: ಗಟ್ಟಿಯಾದ ಶಬ್ದ; ಅವನಿ: ಭೂಮಿ; ಸೀಳು: ಚೂರು, ತುಂಡು; ನಡೆ: ಜರಗು; ಸೇವೆ: ಕಾರ್ಯ; ರವಿ: ಸೂರ್ಯ; ನಂದನ: ಮಗ; ನೇಮ: ನಿಯಮ;

ಪದವಿಂಗಡಣೆ:
ಸೂಳು+ ವಿಗಲ್+ಅಳ್ಳಿರಿದವ್+ಉರು +ನಿ
ಸ್ಸಾಳ+ಕೋಟಿಗಳ್+ಉದಯದಲಿ +ದಿಗು
ಜಾಲ +ಜರಿಯಲು+ ಝಾಡಿಗೆದರುವ +ಗೌರು+ಕಹಳೆಗಳ
ತೂಳುವರೆಗಳ +ರಾಯ +ಗಿಡಗನ
ಘೋಳ +ಘೋರದ +ಘೋಷವ್+ಅವನಿಯ
ಸೀಳೆ +ನಡೆದುದು +ಸೇವೆ +ರವಿನಂದನನ+ ನೇಮದಲಿ

ಅಚ್ಚರಿ:
(೧) ಘ ಕಾರದ ತ್ರಿವಳಿ ಪದ – ಘೋಳ ಘೋರದ ಘೋಷವವನಿಯ

ಪದ್ಯ ೧: ಸೂರ್ಯೊದಯವನ್ನು ಹೇಗೆ ವಿವರಿಸಬಹುದು?

ಮಗನು ದಳಪತಿಯಾದ ಗಡ ಕಾ
ಳಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯ ಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ (ಕರ್ಣ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಸೂರ್ಯನು ಉದಯವನ್ನು ಬಹು ಸೊಗಸಾಗಿ ವಿವರಿಸುವ ಪದ್ಯ. ತನ್ನ ಮಗನಾದ ಕರ್ಣನು ಸೇನಾಧಿಪತಿಯಾಗಿದ್ದಾನೆ ಅವನು ಯುದ್ಧ ಮಾಡುವ ರೀತಿಯನ್ನು ನೋಡಬೇಕೆನ್ನುವಂತೆ ಸೂರ್ಯೋದಯದ ಸಮಯವಾಯಿತು. ಕತ್ತಲಿನ ಕಾಡು ಕಡಿದು ಹೋಯಿತು, ಕನ್ನೈದಿಲಕಾಂತಿ ಕುಂದು ಹೋಗಿ ಕಮಲಗಳ ನಕ್ಕವು. ಚಕ್ರವಾಕಗಳ ವಿರಹವು ಕೊನೆಗೊಂಡಿತು, ಸೂರ್ಯನು ಉದಯಾಚಲಕ್ಕೇರಿದನು.

ಅರ್ಥ:
ಮಗ: ಪುತ್ರ; ದಳಪತಿ: ಸೇನಾಧಿಪತಿ; ಗಡ: ತ್ವರಿತವಾಗಿ; ಸಂತೋಷ; ಕಾಳಗ: ಯುದ್ಧ; ನೋಡು: ವೀಕ್ಷಿಸು; ಜಗ: ಜಗತ್ತು, ವಿಶ್ವ; ಅಗಲ: ವಿಸ್ತಾರ; ನೆರೆ: ಗುಂಪು; ಕಡಿತ: ಕಡಿಮೆ ಮಾಡು, ಕತ್ತರಿಸು; ತಿಮಿರ: ಕತ್ತಲು; ವನ: ಕಾಡು; ಹೊಗರು: ಕಾಂತಿ, ಪ್ರಕಾಶ; ಕುವಳಯ: ಕೆನ್ನೈದಿಲೆ; ಕಳಿ:ಸಾಯು, ಬಾಡು; ಸೊಂಪು: ಸೊಗಸು, ಚೆಲುವು; ನಗೆ: ಸಂತಸ; ಸರೋರುಹ: ಕಮಲ; ವಿರಹ: ಅಗಲಿಕೆ, ವಿಯೋಗ; ಢಗೆ: ಕಾವು, ದಗೆ; ರಥಾಂಗ: ಚಕ್ರವಾಕ ಪಕ್ಷಿ, ಜಕ್ಕವಕ್ಕಿ; ; ಅಳಿ: ಕೊನೆಗೊಳ್ಳು; ರವಿ: ಭಾನು; ಉದಯ: ಹುಟ್ಟು; ಅಚಲ: ಬೆಟ್ಟ; ಬಂದ: ಆಗಮಿಸು;

ಪದವಿಂಗಡಣೆ:
ಮಗನು+ ದಳಪತಿಯಾದ +ಗಡ +ಕಾ
ಳಗವ +ನೋಡುವೆನ್+ಎಂಬವೊಲು +ಜಗ
ದಗಲದಲಿ +ನೆರೆ+ ಕಡಿತವಿಕ್ಕಿತು +ತಿಮಿರ+ವನದೊಳಗೆ
ಹೊಗರು +ಕುವಳಯ +ಕಳಿಯೆ +ಸೊಂಪಿನ
ನಗೆ +ಸರೋರುಹಕೊಗೆಯ+ ವಿರಹದ
ಢಗೆ+ ರಥಾಂಗದೊಳ್+ಅಳಿಯೆ +ರವಿ+ಉದಯ+ಅಚಳಕೆ+ ಬಂದ

ಅಚ್ಚರಿ:
(೧) ಕತ್ತಲು ಕಡಿಮೆಯಾಯಿತು ಎನಲು – ಜಗದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
(೨) ಸೂರ್ಯೋದಯದ ಸಂಕೇತ – ಹೊಗರು ಕುವಳಯ ಕಳಿಯೆ; ಸೊಂಪಿನ ನಗೆ ಸರೋರುಹಕೊಗೆಯ; ವಿರಹದ ಢಗೆ ರಥಾಂಗದೊಳಳಿಯೆ
(೩) ಸೂರ್ಯನು ಬಂದ ಬಗೆ – ರವಿಯುದಯಾಚಳಕೆ ಬಂದ