ಪದ್ಯ ೨೫: ಕೃಪಾಚಾರ್ಯರು ಕರ್ಣನ ಸೇನಾಧಿಪಟ್ಟಕ್ಕೆ ಏನು ಹೇಳಿದರು?

ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರು ನದೀಸುತರ
ಸಾಕಿ ಸಲಹಿದ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ (ಕರ್ಣ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿದ ಕೃಪಾಚಾರ್ಯರು, ಚರ್ಚೆ ಸಾಕು, ವೀರರನ್ನು ಸೇನಾಧಿಪತ್ಯಕ್ಕೆ ಕೂಡಿಸು, ಭೀಷ್ಮ, ದ್ರೋಣರೆಂಬ ಅತಿಶಯ ಪುಣ್ಯಶಾಲಿಗಳ ಮಾತೇಕೆ? ನೀನು ಕರ್ಣನನ್ನು ಸಾಕಿ ಸಲಹಿದವನು ಅದರಲ್ಲಿ ಮತ್ಸರವೇಕೆ? ಸೇನಾಧಿಪತ್ಯದ ಹೊಣೆ ಹೊರಲು ಸಮರ್ಥನಾಗಿದ್ದಾನೆ ಎಂದು ಹೇಳಿದರು.

ಅರ್ಥ:
ಸಾಕು: ನಿಲ್ಲಿಸು; ಅದಂತಿರಲಿ: ಹಾಗಿರಲಿ; ಥಟ್ಟು: ಸೈನ್ಯ, ಮೋಹರ; ಆಕೆವಾಳ: ಶೂರ, ಪರಾಕ್ರಮಿ; ಅಸ್ತೋಕ: ಅಧಿಕವಾದ; ಪುಣ್ಯ: ಸದಾಚಾರ; ಮಾತು: ನುಡಿ; ಗುರು: ಆಚಾರ್ಯ (ದ್ರೋಣ); ನದೀಸುತ: ಭೀಷ್ಮ; ಸುತ: ಮಗ; ಸಾಕು: ಬೆಳೆಸು, ಪೋಷಿಸು; ಸಲಹು: ಕಾಪಾಡು; ಹುರುಡು: ಪೈಪೋಟಿ, ಸ್ಪರ್ಧೆ; ಗುಣ: ನಡತೆ, ಸ್ವಭಾವ; ಅನೀಕ: ಸೈನ್ಯ; ಭಾರ: ಹೊಣೆ; ಹೊರಿಗೆ: ಹೊರಲು; ಗಹನ: ಗೌರವಸ್ಥ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು +ಥಟ್ಟಿಂಗ್
ಆಕೆವಾಳರ+ ಮಾಡು +ಸಾಕ್
ಅಸ್ತೋಕ+ಪುಣ್ಯರ +ಮಾತದೇತಕೆ+ ಗುರು +ನದೀಸುತರ
ಸಾಕಿ +ಸಲಹಿದ +ಕರ್ಣನನು +ಹುರು
ಡೇಕೆ +ಗುಣದೊಳಗ್+ಈತ +ಸೇನ
ಅನೀಕ+ಭಾರದ +ಹೊರಿಗೆ+ಗಹನೆಂದನು+ ಕೃಪಾಚಾರ್ಯ

ಅಚ್ಚರಿ:
(೧) ಸಾಕ್ – ೩ ಬಾರಿ ಪ್ರಯೋಗ
(೨) ಅಸ್ತೋಕ, ಆಕೆವಾಳ, ಅನೀಕ – ಪದಗಳ ಬಳಕೆ

ಪದ್ಯ ೨೪: ಕರ್ಣನು ತನಗೇಕೆ ಸೇನಾಧಿಕಾರಿ ಪಟ್ಟ ಬೇಡವೆಂದನು?

ಬೇರೆ ತನಗಗ್ಗಳಿಕೆಯೋಲೆಯ
ಕಾರತನವೇ ರಾಯ ಮನವೊಲಿ
ದೇರಿಸಿದರೇರುವುದು ದೊರೆ ಮನಮುರಿಯೆ ಕುಂದುವುದು
ತೋರಿ ನುಡಿದರೆ ಭೀಷ್ಮ ದ್ರೋಣರು
ಜಾರಿಸಿದ ರಣವೆಮಗೆ ಸದರವೆ
ದೂರುವವರಾವಲ್ಲವೆಂದನು ಭಾನುಸುತ ನಗುತ (ಕರ್ಣ ಪರ್ವ, ೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕರ್ಣನನ್ನು ಸೇನಾಧಿಕಾರಿಯಾಗಿ ನೇಮಿಸಲು ಎಲ್ಲರೂ ಕರೆಕೊಟ್ಟಾಗ ಕರ್ಣನು, ನನಗೆ ಸೇನಾಧಿಪಟ್ಟವೇ? ರಾಜನ ಮನಸ್ಸಿಗೆ ಬಂದರೆ ಪದವಿ ಏರುತ್ತದೆ ಮತ್ತು ಅವನ ಮನಸ್ಸು ಮುರಿದರೆ ಪದವಿಗೆ ಭಂಗ ಬರುತ್ತದೆ. ಇನ್ನು ಇದ್ದುದನ್ನು ಹೇಳಬೇಕೆಂದರೆ ಭೀಷ್ಮ ದ್ರೋಣರನ್ನು ನುಂಗಿದ ಯುದ್ಧವು ನಮಗೆ ಸುಲಭವಲ್ಲ, ನಾನು ಯಾರನ್ನು ದೂರುವುದಿಲ್ಲ ಎಂದು ಹೇಳಿದನು.

ಅರ್ಥ:
ಬೇರೆ: ಅನ್ಯ; ಅಗ್ಗಳಿಕೆ: ಶ್ರೇಷ್ಠತೆ; ಓಲೆಯಕಾರ: ಸೇವಕ; ರಾಯ: ರಾಜ; ಮನ: ಮನಸ್ಸು; ಒಲಿ: ಪ್ರೀತಿ; ಏರಿಸು: ಹೆಚ್ಚಾಗು; ದೊರೆ: ರಾಜ; ಮುರಿ: ಸೀಳು, ಭಂಗ; ಕುಂದು: ಕೊರತೆ, ನೂನ್ಯತೆ; ತೋರು: ಕಾಣಿಸು; ನುಡಿ: ಮಾತಾಡು; ಜಾರಿಸು: ಬೀಳಿಸು; ರಣ: ಯುದ್ಧ; ಸದರ: ಸಲಿಗೆ, ಸುಲಭ; ದೂರು: ಮೊರೆ, ಅಹವಾಲು; ಭಾನು: ಸೂರ್ಯ; ಸುತ: ಮಗ; ನಗು: ಹರುಷ;

ಪದವಿಂಗಡಣೆ:
ಬೇರೆ +ತನಗ್+ಅಗ್ಗಳಿಕೆ+ಓಲೆಯ
ಕಾರತನವೇ +ರಾಯ +ಮನವೊಲಿದ್
ಏರಿಸಿದರೇರುವುದು +ದೊರೆ +ಮನಮುರಿಯೆ+ ಕುಂದುವುದು
ತೋರಿ +ನುಡಿದರೆ +ಭೀಷ್ಮ +ದ್ರೋಣರು
ಜಾರಿಸಿದ+ ರಣವ್ +ಎಮಗೆ +ಸದರವೆ
ದೂರುವವರಾವಲ್ಲವೆಂದನು +ಭಾನುಸುತ +ನಗುತ

ಅಚ್ಚರಿ:
(೧) ರಾಯ, ದೊರೆ – ಸಮನಾರ್ಥಕ ಪದ
(೨) ಮನವೊಲಿ, ಮನಮುರಿ – ಪದ ಬಳಕೆ

ಪದ್ಯ ೨೩: ಆಸ್ಥಾನದಲ್ಲಿದ್ದ ರಾಜರ ಅಭಿಪ್ರಾಯವೇನು?

ಜೀಯ ಸಂಶಯವಿಲ್ಲ ಗುರುಗಾಂ
ಗೇಯರಳುಕಿದರೇನು ಕಲಿ ರಾ
ಧೇಯನೇ ವಜ್ರಾಂಗಿಯಲ್ಲಾ ನಮ್ಮ ಮೋಹರಕೆ
ರಾಯ ನೀ ಪತಿಕರಿಸಿದರೆ ಚ
ಕ್ರಾಯುಧನ ಚಾತುರ್ಯ ಕೊಳ್ಳದು
ಜೀಯ ಕರ್ಣನ ಮುಂದೆಯೆಂದುದು ನಿಖಿಳ ಪರಿವಾರ (ಕರ್ಣ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆಸ್ಥಾನದಲ್ಲಿದ್ದ ರಾಜರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ, ಒಡೆಯ ನಿಮ್ಮ ಮಾತು ನಿಜ ಅದರಲ್ಲೇನೂ ಸಂಶಯವಿಲ್ಲ, ಭೀಷ್ಮ, ದ್ರೋಣರು ಅಳುಕಿದರೇನಂತೆ? ಕರ್ಣನು ನಮ್ಮ ಸೈನ್ಯಕ್ಕೆ ವಜ್ರ ಕವಚ, ನೀವು ಕರ್ಣನನ್ನು ಸೇನಾಪತಿಯನ್ನಾಗಿ ಮಾಡಿ ಸತ್ಕರಿಸಿರಿ, ಅವನ ಮುಂದೆ ಕೃಷ್ಣನ ಆಟ ನಡೆಯುವುದಿಲ್ಲ ಎಂದು ಅಲ್ಲಿ ನೆರೆದಿದ್ದ ರಾಜರು ತಿಳಿಸಿದರು.

ಅರ್ಥ:
ಜೀಯ: ಒಡೆಯ; ಸಂಶಯ: ಅನುಮಾನ, ಸಂದೇಹ; ಗುರು: ಆಚಾರ್ಯ; ಗಾಂಗೇಯ: ಭೀಷ್ಮ;
ಅಳುಕು: ಹೆದರು; ಕಲಿ: ಶೂರ; ರಾಧೇಯ: ಕರ್ಣ; ವಜ್ರ: ಗಟ್ಟಿಯಾದ; ಅಂಗಿ: ಬಟ್ಟೆ; ಮೋಹರ: ಯುದ್ಧ; ರಾಯ: ರಾಜ; ಪತಿಕರಿಸು: ಅಂಗೀಕರಿಸು; ಚಕ್ರಾಯುಧ: ಸುದರ್ಶನ ಚಕ್ರ; ಚಾತುರ್ಯ: ಜಾಣತನ, ಬುದ್ಧಿವಂತಿಕೆ; ಕೊಳ್ಳದು: ನಡೆಯದು; ಜೀಯ: ಒಡೆಯ; ಮುಂದೆ: ಎದುರು; ನಿಖಿಳ: ಎಲ್ಲಾ, ಸರ್ವ; ಪರಿವಾರ: ಸುತ್ತಲಿನವರು, ಪರಿಜನ

ಪದವಿಂಗಡಣೆ:
ಜೀಯ +ಸಂಶಯವಿಲ್ಲ +ಗುರು+ಗಾಂ
ಗೇಯರ್+ಅಳುಕಿದರೇನು +ಕಲಿ +ರಾ
ಧೇಯನೇ +ವಜ್ರಾಂಗಿಯಲ್ಲಾ +ನಮ್ಮ +ಮೋಹರಕೆ
ರಾಯ +ನೀ +ಪತಿಕರಿಸಿದರೆ+ ಚ
ಕ್ರಾಯುಧನ +ಚಾತುರ್ಯ ಕೊಳ್ಳದು
ಜೀಯ +ಕರ್ಣನ +ಮುಂದೆ+ಯೆಂದುದು +ನಿಖಿಳ +ಪರಿವಾರ

ಅಚ್ಚರಿ:
(೧) ಜೀಯ – ೧, ೬ ಸಾಲಿನ ಮೊದಲ ಪದ
(೨) ಕೃಷ್ಣನನ್ನು ಚಕ್ರಾಯುಧನ ಎಂದು ಕರೆದಿರುವುದು
(೩) ಚ ಕಾರದ ಜೋಡಿ ಪದ ಚಕ್ರಾಯುಧನ ಚಾತುರ್ಯ

ಪದ್ಯ ೨೨: ಯಾರ ಭಂಡಾರದ ಆಯುಧವನ್ನು ತೆಗೆಸುವೆನೆಂದು ದುರ್ಯೋಧನನು ಹೇಳಿದನು?

ಬಿಗಿದ ತಿಮಿರದ ಕೆಚ್ಚು ಸೂರ್ಯನ
ಸೊಗಡು ಹೊಯ್ದರೆ ಮುರಿಯದೇ ಕಾ
ಳಗಕೆ ಕರ್ಣನ ಕೈದು ಭಂಡಾರಿಸಿದುದಿನ್ನಬರ
ತೆಗೆಸುವೆವು ನಾಳಿನಲಿ ನಿಮ್ಮಯ
ಮೊಗದ ದುಗುಡದ ದಡ್ಡಿಯನು ಮೈ
ದೆಗೆಯದಿರಿ ಕಲಿಯಾಗಿಯೆಂದನು ನೃಪತಿ ಸುಭಟರಿಗೆ (ಕರ್ಣ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ತನ್ನ ಸೇನಾ ನಾಯಕರನ್ನು ಉದ್ದೇಶಿಸುತ್ತಾ, ಸೂರ್ಯನ ವಾಸನೆ ಬಡಿದರೆ ಕತ್ತಲಿನ ಕೆಚ್ಚು ಕರಗಿ ಹೋಗುವುದಿಲ್ಲವೇ? ಇಷ್ಟು ದಿನವೂ ಕರ್ಣನ ಆಯುಧಗಳು ಭಂಡಾರದಲ್ಲೇ ಹುದುಗಿದ್ದವು, ನಾಳೆ ಅವನ ಅಸ್ತ್ರಗಳನ್ನು ಹೊರತೆಗೆಸುತ್ತೇವೆ, ನಿಮ್ಮ ಮುಖದ ದುಃಖದ ಮುಸುಕನ್ನೂ ಹೋಗಲಾಡಿಸುತ್ತೇವೆ, ನೀವು ಬೆದರದೆ ಹಿಂಜರಿಯದೆ ವೀರರಾಗಿ ನಿಲ್ಲಿ ಎಂದು ಹುರಿದುಂಬಿಸಿದನು.

ಅರ್ಥ:
ಬಿಗಿ: ಬಂಧನ, ಗಟ್ಟಿ; ತಿಮಿರ: ಕತ್ತಲು; ಕೆಚ್ಚು: ಧೈರ್ಯ, ಸಾಹಸ; ಸೂರ್ಯ: ಭಾನು; ಸೊಗಡು: ಕಂಪು, ವಾಸನೆ; ಹೊಯ್ದು: ಹೊಡೆದು; ಮುರಿ: ಸೀಳು; ಕಾಳಗ: ಯುದ್ಧ; ಕೈದು: ಕತ್ತಿ, ಆಯುಧ; ಭಂಡಾರ: ಬೊಕ್ಕಸ; ಇನ್ನಬರ: ಇಷ್ಟು; ತೆಗೆಸು: ಹೊರಗೆ ತರು; ನಾಳಿನಲಿ: ಮರುದಿನ; ಮೊಗ: ಮುಖ; ದುಗುಡ: ದುಃಖ; ದಡ್ಡಿ: ತೆರೆ, ಜವನಿಕೆ; ಮೈ: ತನು, ಕಾಯ; ತೆಗೆ: ಈಚೆಗೆ ತರು, ಹೊರತರು; ಕಲಿ: ಶೂರ, ವೀರ; ನೃಪತಿ: ರಾಜ; ಸುಭಟ: ಶ್ರೇಷ್ಠ ಸೈನಿಕರು;

ಪದವಿಂಗಡಣೆ:
ಬಿಗಿದ +ತಿಮಿರದ +ಕೆಚ್ಚು +ಸೂರ್ಯನ
ಸೊಗಡು +ಹೊಯ್ದರೆ +ಮುರಿಯದೇ +ಕಾ
ಳಗಕೆ +ಕರ್ಣನ +ಕೈದು +ಭಂಡಾರಿಸಿದುದ್+ಇನ್ನಬರ
ತೆಗೆಸುವೆವು +ನಾಳಿನಲಿ +ನಿಮ್ಮಯ
ಮೊಗದ+ ದುಗುಡದ +ದಡ್ಡಿಯನು +ಮೈ
ದೆಗೆಯದಿರಿ +ಕಲಿಯಾಗಿ+ಯೆಂದನು +ನೃಪತಿ +ಸುಭಟರಿಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿಗಿದ ತಿಮಿರದ ಕೆಚ್ಚು ಸೂರ್ಯನ ಸೊಗಡು ಹೊಯ್ದರೆ ಮುರಿಯದೇ
(೨) ಕ ಅಕ್ಷರದ ತ್ರಿವಳಿ ಪದ ಕಾಳಗಕೆ ಕರ್ಣನ ಕೈದು
(೩) ಹುರಿದುಂಬಿಸುವ ಬಗೆ – ನಿಮ್ಮಯ ಮೊಗದ ದುಗುಡದ ದಡ್ಡಿಯನು ಮೈ
ದೆಗೆಯದಿರಿ ಕಲಿಯಾಗಿಯೆಂದನು ನೃಪತಿ ಸುಭಟರಿಗೆ

ಪದ್ಯ ೨೧: ದುರ್ಯೋಧನನು ತನ್ನ ಸೇನಾ ನಾಯಕರನ್ನು ಹೇಗೆ ಸಂಭೋದಿಸಿದನು?

ಕೆತ್ತುಕೊಂಡಿರಲೇಕೆ ನೀವು
ನ್ನತ್ತ ರಾಯಿಗಳೆಮ್ಮ ಭಾಗ್ಯದ
ಬಿತ್ತು ಹಿರಿದರೆ ಬಿರುದ ಭಟರಿದ್ದೇನಮಾಡುವರು
ಮೆತ್ತಿದಂಬಿನ ಮೆಯ್ಯ ಭೀಷ್ಮನು
ಹೊತ್ತ ಕೈದುವ ಬಿಸುಟ ಕಳಶಜ
ನುತ್ತಮಿಕೆಗಳ ಮೆರೆದರೆಂದನು ಕೌರವರ ರಾಯ (ಕರ್ಣ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಆಸ್ಥಾನಕ್ಕೆ ಬರಲು ಎಲ್ಲರು ಅಡವಿಕೊಂಡಿರುವುದನ್ನು ಗಮನಿಸಿ, ನೀವೆಲ್ಲ ಏಕೆ ಹೀಗೆ ಹುದುಗಿಕೊಂಡಿರುವಿರಿ? ನಮ್ಮ ಸೈನ್ಯದ ವಿಜಯಕ್ಕೆ ನೀವೆ ಹಕ್ಕುದಾರರು. ನಮ್ಮ ಭಾಗ್ಯದ ಬೀಜ ಹುರಿದು ಹೋದರೆ ಬಿರುದಾಂತ ವೀರರಿದ್ದು ಏನು ಮಾಡಿಯಾರು? ಮೈಗೆ ಬಾಣನಟ್ಟ ಭೀಷ್ಮ, ಕೈಯ ಶಸ್ತ್ರವನ್ನು ಎಸೆದ ದ್ರೋಣ ಇವರಿಬ್ಬರೂ ತಮ್ಮ ಉತ್ತಮಿಕೆಯನ್ನು ತೋರಿಸಿಬಿಟ್ಟರು ಎಂದು ಹೇಳಿದನು.

ಅರ್ಥ:
ಕೆತ್ತು: ಮುಚ್ಚು; ಉನ್ನತ: ಶ್ರೇಷ್ಠ; ರಾಯಿಗಳು: ರಾಜ; ಭಾಗ್ಯ: ಅದೃಷ್ಟ; ಬಿತ್ತು: ಉಂಟುಮಾಡು; ಹುರಿ: ನುಲಿಯುವಿಕೆ; ಬಿರುದು: ಗೌರವಸೂಚಕ ಹೆಸರು; ಭಟರು: ಸೈನಿಕರು; ಮೆತ್ತು: ಲೇಪಿಸು, ಬಳಿ; ಅಂಬು: ಬಾಣ; ಮೆಯ್ಯ: ಕಾಯ, ದೇಹ; ಹೊತ್ತ: ಎತ್ತಿದ; ಕೈದು: ಕತ್ತಿ, ಆಯುಧ; ಬಿಸುಟ: ಹೊರಹಾಕು, ಕಳಚು; ಕಳಶಜ: ದ್ರೋಣ; ಉತ್ತಮಿಕೆ: ಶ್ರೇಷ್ಠ; ಮೆರೆದು: ತೋರಿ; ರಾಯ: ರಾಜ;

ಪದವಿಂಗಡಣೆ:
ಕೆತ್ತುಕೊಂಡಿರಲೇಕೆ +ನೀವ್+
ಉನ್ನತ್ತ+ ರಾಯಿಗಳ್+ಎಮ್ಮ +ಭಾಗ್ಯದ
ಬಿತ್ತು+ ಹಿರಿದರೆ+ ಬಿರುದ +ಭಟರಿದ್ದೇನ+ಮಾಡುವರು
ಮೆತ್ತಿದ್+ಅಂಬಿನ +ಮೆಯ್ಯ +ಭೀಷ್ಮನು
ಹೊತ್ತ +ಕೈದುವ +ಬಿಸುಟ +ಕಳಶಜನ್
ಉತ್ತಮಿಕೆಗಳ +ಮೆರೆದರ್+ಎಂದನು +ಕೌರವರ+ ರಾಯ

ಅಚ್ಚರಿ:
(೧) ಉನ್ನತ್ತ, ಉತ್ತಮ; ರಾಯಿಗಳು, ರಾಯ; – ಸಾಮ್ಯಾರ್ಥ ಪದಗಳು
(೨) ದ್ರೋಣನನ್ನು ಕಳಶಜ ಎಂದು ಕರೆದಿರುವುದು
(೩) ಎಲ್ಲರೂ ಹೆದರಿರುವಾಗ ನಾಯಕನ ಲಕ್ಷಣವನ್ನು ತಿಳಿಸುವ ದುರ್ಯೋಧನನ ನಡತೆ

ಪದ್ಯ ೨೦: ದುರ್ಯೋಧನನ ಆಸ್ಥಾನವು ಹೇಗೆ ಕಂಡಿತು?

ಎಲೆ ಮಿಡುಕದಾಸ್ಥಾನ ವೀಳೆಯ
ದೆಲೆಯ ಮಡಿಸುವ ರಭಸವಿಲ್ಲೋಳ
ಗೊಳಗೆ ಸನ್ನೆಗಳೋರೆಗೊರಳುಗಳೌಡುಗಚ್ಚುಗಳ
ಹಳಸಿದಗ್ಗಳಿಕೆಗಳ ಮೀಸಲು
ಗಳೆದ ಬಿರುದಿನ ಮಾನಭಂಗದ
ಕಳವಳದ ಕನಸುಗಳಲಿದ್ದುದು ರಾಯನಾಸ್ಥಾನ (ಕರ್ಣ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಂಜಿಕೆಯಿಂದ ಇದ್ದ ರಾಜರು ಎಲೆಗಳು ಅಲುಗುವಷ್ಟು ಅಲ್ಲಾಡುತ್ತಿರಲಿಲ್ಲ, ವೀಳೆಯದೆಲೆಯನ್ನು ಮಡಿಸುವ ಸದ್ದೂ ಸಹ ಆಸ್ಥಾನದಲ್ಲಾಗುತ್ತಿರಲಿಲ್ಲ, ಕತ್ತನ್ನು ಓರೆ ಮಾಡಿ, ತುಟಿಗಳನ್ನು ಹಲ್ಲಿನಿಂದ ಕಡಿಯುತ್ತಾ, ಒಬ್ಬರನೊಬ್ಬರು ಒಳ ಸನ್ನೆಗಳ ಮಾಡುತ್ತಿದ್ದರು. ವೀರರ ಹಿರಿಮೆಗಳು ಹಳಸಿದವು, ಬಿರುದುಗಳಿಗೆ ಅರ್ಥವೇ ಇರಲಿಲ್ಲ, ಮಾನಭಂಗ ಕಳವಳಗಳನ್ನೇ ನಿರೀಕ್ಷಿಸುತ್ತಾ ಆಸ್ಥಾನವು ಕಳಾಹೀನವಾಗಿತ್ತು.

ಅರ್ಥ:
ಎಲೆ: ಪರ್ಣ; ಮಿಡುಕು: ಅಲ್ಲಾಡು; ಆಸ್ಥಾನ: ದರ್ಬಾರು, ಓಲಗ; ವೀಳೆ: ತಾಂಬೂಲಕ್ಕೆ ಬಳಸುವ ಎಲೆ; ಮಡಿಸು: ಮಡಿಕೆ ಮಾಡು, ಮಡಿಚು; ರಭಸ: ವೇಗ; ಒಳಗೊಳಗೆ: ಆಂತರ್ಯ, ಕಾಣಿಸದಂತೆ; ಸನ್ನೆ: ಸಂಕೇತ; ಓರೆ: ವಕ್ರ, ಡೊಂಕು; ಕೊರಳು: ಕತ್ತು; ಔಡು:ಕೆಳತುಟಿ, ಹಲ್ಲಿನಿಂದ ಕಚ್ಚು; ಕಚ್ಚು: ಹಲ್ಲಿನಿಂದ – ಹಿಡಿ, ಕಡಿ; ಹಳಸು: ಹಾಳಾಗು, ಹಳತಾಗು; ಅಗ್ಗಳಿಕೆ: ಹಿರೆಮೆ; ಮೀಸಲು:ಮುಡಿಪು, ಪ್ರತ್ಯೇಕತೆ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಮಾನ: ಮರ್ಯಾದೆ, ಗೌರವ; ಭಂಗ: ತುಂಡು, ಚೂರು; ಕಳವಳ: ತಳಮಳ, ಭ್ರಾಂತಿ; ಕನಸು: ಸ್ವಪ್ನ; ರಾಯ: ದೊರೆ; ಆಸ್ಥಾನ: ದರ್ಬಾರು;

ಪದವಿಂಗಡಣೆ:
ಎಲೆ +ಮಿಡುಕದ್+ಆಸ್ಥಾನ +ವೀಳೆಯದ್
ಎಲೆಯ +ಮಡಿಸುವ +ರಭಸವಿಲ್ಲ್+ಓಳ
ಗೊಳಗೆ+ ಸನ್ನೆಗಳ್+ಓರೆ+ಕೊರಳುಗಳ್+ಔಡುಗಚ್ಚುಗಳ
ಹಳಸಿದ್+ಅಗ್ಗಳಿಕೆಗಳ +ಮೀಸಲು
ಗಳೆದ+ ಬಿರುದಿನ +ಮಾನಭಂಗದ
ಕಳವಳದ +ಕನಸುಗಳಲಿದ್ದುದು +ರಾಯನಾಸ್ಥಾನ

ಅಚ್ಚರಿ:
(೧) ಉಪಮಾನಗಳಿಂದ ಭರಿತವಾದ ಪದ್ಯ:
ನಿಶ್ಯಬ್ದವಾಗಿತ್ತು ಎಂದು ತಿಳಿಸಲು – ವೀಳೆಯದೆಲೆಯ ಮಡಿಸುವ ರಭಸವಿಲ್ಲ
ಉಸಿರಾಡುವ ಗಾಳಿಯು ಜೋರಾಗಿರಲಿಲ್ಲ ಎಂದು ತಿಳಿಸಲು – ಎಲೆ ಮಿಡುಕದಾಸ್ಥಾನ
ಅವಮಾನದಿಂದ ನಿಂತಿರುವ ಬಗ್ಗೆ – ಓರೆಗೊರಳುಗಳೌಡುಗಚ್ಚುಗಳ
ಬಿರುದಾವಳಿಗೆ ಬೆಲೆ ಇಲ್ಲ ಎಂದು ತಿಳಿಸಲು – ಹಳಸಿದಗ್ಗಳಿಕೆಗಳ ಮೀಸಲುಗಳೆದ ಬಿರುದು