ಪದ್ಯ ೩೯: ಆಸ್ಥಾನದ ಪರಿಸ್ಥಿತಿಯನ್ನು ಅರಿತು ಯಾರು ಮಧ್ಯ ಪ್ರವೇಶಿಸಿದರು?

ಕದಡಿತಾ ಆಸ್ಥಾನ ಹೋಯೆಂ
ದೊದರಿ ಋಷಿಗಳ ನಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಯಾದವರು ಆಯುಧಗಳನ್ನು ಹೊರತೆಗೆಯಲು ಆಸ್ಥಾನದ ವಾತಾವರಣವು ಕದಡಿತು, ಋಷಿಗಳು ಹೋಯೆಂದು ಕೂಗಿದರು, ಅವರ ನಾಲಿಗೆಗಳು ಒಣಗಿದವು. ರಥ, ಆನೆ, ಕುದುರೆಗಳು ಯುದ್ಧಕ್ಕೆ ಸಿದ್ಧವಾದವು. ಯಾದವರಾಜರು ಈಚೆ ನಿಂತು ಈ ಸುನೀತನನ್ನು(ದುಷ್ಟನನ್ನು, ಶಿಶುಪಾಲನನ್ನು ವ್ಯಂಗ್ಯವಾಗಿ ಒಳ್ಳೆಯ ನಡತೆಯುಳ್ಳವನೆಂದು ಹೇಳಿರುವುದು) ಬಡಿದು ಇವನ ಹೃದಯವನ್ನು ತೆಗೆಯಿರಿ ಎಂದು ಗರ್ಜಿಸಲು ಭೀಷ್ಮನು ಇವರ ನಡುವೆ ಬಂದನು.

ಅರ್ಥ:
ಕದಡು: ಕ್ಷೋಭೆಗೊಳಿಸು; ಆಸ್ಥಾನ: ದರ್ಬಾರು; ಹೋ: ಜೋರಾಗಿ ಕೂಗುವ ಶಬ್ದ; ಒದರು: ಹೇಳು; ಋಷಿ: ಮುನಿ; ನಾಳಿಗೆ: ನಾಲಗೆ, ಜಿಹ್ವೆ; ಒಣಗು: ಬಾಡು, ನೀರಿಲ್ಲದ; ಹಲ್ಲಣ:ಜೀನು, ಕಾರ್ಯ; ರಥ: ಬಂಡಿ; ಮಾತಂಗ: ಆನೆ; ವಾಜಿ: ಕುದುರೆ; ಕೆದರು: ಹರಡು, ಚದರಿಸು; ದೆಸೆ: ದಿಕ್ಕು; ನೀತಿ: ಒಳ್ಳೆಯ ನಡತೆ; ಸದೆ:ಕುಟ್ಟು, ಪುಡಿಮಾಡು; ತೆಗೆಸು: ಹೊರಹಾಕು; ಸುಂಟಿಗೆ: ಹೃದಯದ ಮಾಂಸ; ಎನುತ: ಹೇಳಿ; ನೃಪ: ರಾಜ; ಗಜಬಜ: ಗಲಾಟೆ, ಕೋಲಾಹಲ; ಎಡೆ: ಹತ್ತಿರ, ಸಮೀಪ; ಹೊಕ್ಕು: ಸೇರು;

ಪದವಿಂಗಡಣೆ:
ಕದಡಿತಾ +ಆಸ್ಥಾನ +ಹೋಯೆಂದ್
ಒದರಿ +ಋಷಿಗಳ +ನಾಳಿಗೆಗಳ್+ಒಣ
ಗಿದವು +ಹಲ್ಲಣಿಸಿದವು +ರಥ +ಮಾತಂಗ +ವಾಜಿಗಳು
ಕೆದರಿತ್+ಈಚೆಯ +ದೆಸೆ +ಸುನೀತನ
ಸದೆದು +ತೆಗೆ+ಸುಂಟಿಗೆಯನ್+ಎನುತಲಿ
ಯದು +ನೃಪಾಲರು +ಗಜಬಜಿಸಲ್+ಎಡೆ+ವೊಕ್ಕನಾ +ಭೀಷ್ಮ

ಅಚ್ಚರಿ:
(೧) ಶಿಶುಪಾಲನನ್ನು ವ್ಯಂಗ್ಯವಾಗಿ ಸುನೀತನೆಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ