ಪದ್ಯ ೩೯: ಆಸ್ಥಾನದ ಪರಿಸ್ಥಿತಿಯನ್ನು ಅರಿತು ಯಾರು ಮಧ್ಯ ಪ್ರವೇಶಿಸಿದರು?

ಕದಡಿತಾ ಆಸ್ಥಾನ ಹೋಯೆಂ
ದೊದರಿ ಋಷಿಗಳ ನಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಯಾದವರು ಆಯುಧಗಳನ್ನು ಹೊರತೆಗೆಯಲು ಆಸ್ಥಾನದ ವಾತಾವರಣವು ಕದಡಿತು, ಋಷಿಗಳು ಹೋಯೆಂದು ಕೂಗಿದರು, ಅವರ ನಾಲಿಗೆಗಳು ಒಣಗಿದವು. ರಥ, ಆನೆ, ಕುದುರೆಗಳು ಯುದ್ಧಕ್ಕೆ ಸಿದ್ಧವಾದವು. ಯಾದವರಾಜರು ಈಚೆ ನಿಂತು ಈ ಸುನೀತನನ್ನು(ದುಷ್ಟನನ್ನು, ಶಿಶುಪಾಲನನ್ನು ವ್ಯಂಗ್ಯವಾಗಿ ಒಳ್ಳೆಯ ನಡತೆಯುಳ್ಳವನೆಂದು ಹೇಳಿರುವುದು) ಬಡಿದು ಇವನ ಹೃದಯವನ್ನು ತೆಗೆಯಿರಿ ಎಂದು ಗರ್ಜಿಸಲು ಭೀಷ್ಮನು ಇವರ ನಡುವೆ ಬಂದನು.

ಅರ್ಥ:
ಕದಡು: ಕ್ಷೋಭೆಗೊಳಿಸು; ಆಸ್ಥಾನ: ದರ್ಬಾರು; ಹೋ: ಜೋರಾಗಿ ಕೂಗುವ ಶಬ್ದ; ಒದರು: ಹೇಳು; ಋಷಿ: ಮುನಿ; ನಾಳಿಗೆ: ನಾಲಗೆ, ಜಿಹ್ವೆ; ಒಣಗು: ಬಾಡು, ನೀರಿಲ್ಲದ; ಹಲ್ಲಣ:ಜೀನು, ಕಾರ್ಯ; ರಥ: ಬಂಡಿ; ಮಾತಂಗ: ಆನೆ; ವಾಜಿ: ಕುದುರೆ; ಕೆದರು: ಹರಡು, ಚದರಿಸು; ದೆಸೆ: ದಿಕ್ಕು; ನೀತಿ: ಒಳ್ಳೆಯ ನಡತೆ; ಸದೆ:ಕುಟ್ಟು, ಪುಡಿಮಾಡು; ತೆಗೆಸು: ಹೊರಹಾಕು; ಸುಂಟಿಗೆ: ಹೃದಯದ ಮಾಂಸ; ಎನುತ: ಹೇಳಿ; ನೃಪ: ರಾಜ; ಗಜಬಜ: ಗಲಾಟೆ, ಕೋಲಾಹಲ; ಎಡೆ: ಹತ್ತಿರ, ಸಮೀಪ; ಹೊಕ್ಕು: ಸೇರು;

ಪದವಿಂಗಡಣೆ:
ಕದಡಿತಾ +ಆಸ್ಥಾನ +ಹೋಯೆಂದ್
ಒದರಿ +ಋಷಿಗಳ +ನಾಳಿಗೆಗಳ್+ಒಣ
ಗಿದವು +ಹಲ್ಲಣಿಸಿದವು +ರಥ +ಮಾತಂಗ +ವಾಜಿಗಳು
ಕೆದರಿತ್+ಈಚೆಯ +ದೆಸೆ +ಸುನೀತನ
ಸದೆದು +ತೆಗೆ+ಸುಂಟಿಗೆಯನ್+ಎನುತಲಿ
ಯದು +ನೃಪಾಲರು +ಗಜಬಜಿಸಲ್+ಎಡೆ+ವೊಕ್ಕನಾ +ಭೀಷ್ಮ

ಅಚ್ಚರಿ:
(೧) ಶಿಶುಪಾಲನನ್ನು ವ್ಯಂಗ್ಯವಾಗಿ ಸುನೀತನೆಂದು ಕರೆದಿರುವುದು

ಪದ್ಯ ೩೮: ಯಾರು ಕೋಪಗೊಂಡು ಆಯುಧವನ್ನು ಹೊರತೆಗೆದರು?

ಸೀಳಿವನ ಹೆಡತಲೆಯೊಳಗೆ ತೆಗೆ
ನಾಲಗೆಯನೆಲೆ ಕುನ್ನಿಗಳಿದ
ಕೇಳುವರೆ ಪತಿನಿಂದೆಯನು ಪಾತಕಕೆ ಗುರುವಲ್ಲ
ಏಳೆನುತ ಕೃತವರ್ಮ ಸಾಂಬ ನೃ
ಪಾಲ ಮೊದಲಾದಖಿಳ ಯಾದವ
ಜಾಲವೆದ್ದುದು ಬಿಗಿದ ಬಿಲುಗಳ ಸೆಳೆದಡಾಯುಧದಿ (ಸಭಾ ಪರ್ವ, ೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಶಿಶುಪಾಲನು ಕೃಷ್ಣನನ್ನು ಬಯ್ಯುವುದನ್ನು ಕೇಳಿ ಕೋಪಗೊಂಡ ಯಾದವರು, ಇವನ ನಾಲಗೆಯನ್ನು ಸೀಳಿ ತೆಲೆಯ ಹಿಂದೆ ತೆಗೆ, ಎಲೋ ನಾಯಿಗಳೇ ಸುಮ್ಮನಿರುವಿರಲ್ಲಾ, ಈತನು ನಮ್ಮ ಒಡೆಯನನ್ನು ನಿಂದಿಸುತ್ತಿದ್ದಾನೆ, ಪತಿನಿಂದೆಯನ್ನು ಸುಮ್ಮನೆ ಕೇಳುವುದು ಪಾಪಗಳಿಗೆಲ್ಲಾ ಗುರು. ಏಳಿ, ಎದ್ದೇಳಿ, ಎಂದು ಕೃತವರ್ಮ, ಸಾಂಬನೇ ಮೊದಲಾದ ಯಾದವರಾಜರೆಲ್ಲರೂ, ಬಿಲ್ಲುಗಳ ಹೆದೆಯೇರಿಸಿ ಕತ್ತಿಗಳನ್ನು ಒರೆಯಿಂದೆಳೆದು ಎದ್ದುನಿಂತರು.

ಅರ್ಥ:
ಸೀಳು: ಚೂರು, ತುಂಡು; ಹೆಡತಲೆ: ಹಿಂದಲೆ; ತೆಗೆ: ಹೊರತರು; ನಾಲಗೆ: ಜಿಹ್ವೆ; ಕುನ್ನಿ: ನಾಯಿ; ಕೇಳು: ಆಲಿಸು; ಪತಿ: ಒಡೆಯ; ನಿಂದೆ: ಬಯ್ಯುವಿಕೆ; ಪಾತಕ: ನರಕ; ಗುರು: ಭಾರವಾದುದು, ಕಠಿನವಾದುದು; ಏಳು: ಮೇಲೇಳು; ನೃಪಾಲ: ರಾಜ; ಮೊದಲಾದ: ಮುಂತಾದ; ಅಖಿಳ: ಸರ್ವ; ಜಾಲ: ಗುಂಪು; ಬಿಗಿ: ಹಿಡಿ, ಬಂಧಿಸು; ಬಿಲು: ಬಿಲ್ಲು, ಚಾಪ; ಸೆಳೆ: ಜಗ್ಗು, ಎಳೆ; ಆಯುಧ: ಶಸ್ತ್ರ;

ಪದವಿಂಗಡಣೆ:
ಸೀಳಿವನ +ಹೆಡತಲೆ+ಯೊಳಗೆ +ತೆಗೆ
ನಾಲಗೆಯನ್+ಎಲೆ +ಕುನ್ನಿಗಳ್+ಇದ
ಕೇಳುವರೆ+ ಪತಿನಿಂದೆಯನು +ಪಾತಕಕೆ +ಗುರುವಲ್ಲ
ಏಳ್+ಎನುತ+ ಕೃತವರ್ಮ +ಸಾಂಬ +ನೃ
ಪಾಲ +ಮೊದಲಾದಖಿಳ+ ಯಾದವ
ಜಾಲವೆದ್ದುದು +ಬಿಗಿದ +ಬಿಲುಗಳ +ಸೆಳೆದಡ್+ಆಯುಧದಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪತಿನಿಂದೆಯನು ಪಾತಕಕೆ ಗುರುವಲ್ಲ
(೨) ಬಯ್ಯುವ ಪರಿ – ಕುನ್ನಿಗಳ್
(೩) ಹೋರಾಡಲು ಸಿದ್ಧರಾಗುವ ಪರಿ – ಬಿಗಿದ ಬಿಲುಗಳ ಸೆಳೆದಡಾಯುಧದಿ

ಪದ್ಯ ೩೭: ಯಾರು ಯಾರಿಗೆ ಸಮನೆಂದು ಶಿಶುಪಾಲನು ಜರಿದನು?

ಜರಡು ಮಖವೀ ಮಖಕೆ ಹೋಲುವ
ಧರಣಿಪತಿಯೀ ಮಖಕೆ ಧರಣೀ
ಶ್ವರಗೆ ಪಾಸಟಿ ಭೀಷ್ಮನೀ ಮಖ ಭೂಪ ಭೀಷ್ಮರಿಗೆ
ಸರಿಸನಾದನು ಕೃಷ್ಣನೀ ಮಖ
ಧರಣಿಪತಿ ಭೀಷ್ಮಂಗೆ ಕೃಷ್ಣಗೆ
ಸರಿಯ ಕಾಣೆನು ನಿಮ್ಮೊಳೊಬ್ಬರಿಗೊಬ್ಬರೆಣೆಯೆಂದ (ಸಭಾ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೆಲಸಕ್ಕೆ ಬಾರದ ಈ ಯಜ್ಞ, ಇದಕ್ಕೆ ತಕ್ಕ ಯಜಮಾನ ಯುಧಿಷ್ಠಿರ, ಇವೆರಡಕ್ಕೆ ಸರಿಸಮಾನನಾದ ಭೀಷ್ಮ, ಈ ಮೂರಕ್ಕೂ ಸರಿಸಮಾನನಾದ ಕೃಷ್ಣ, ಆದರೆ ಈ ನಾಲ್ಕಕ್ಕೂ ಸರಿಸಮಾನವಾದುದು ಇನ್ನೊಂದಿಲ್ಲ, ಈ ನಾಲ್ಕೂ ಒಂದಕ್ಕೊಂದು ಸಮ ಎಂದು ಶಿಶುಪಾಲನು ಜರೆದನು.

ಅರ್ಥ:
ಜರಡು: ನಿಷ್ಪ್ರಯೋಜಕವಾದ; ಮಖ: ಯಜ್ಞ; ಹೋಲು: ಸರಿಸಮಾನ; ಧರಣಿ: ಭೂಮಿ; ಧರಣಿಪತಿ: ರಾಜ; ಧರಣೀಶ್ವರ: ರಾಜ; ಪಾಸಟಿ: ಸಮಾನ, ಹೋಲಿಕೆ; ಭೂಪ: ರಾಜ; ಸರಿಸನಾದ: ಸಮವಾದ; ಕಾಣೆ: ತೋರು; ಎಣೆ: ಸಮ, ಸಾಟಿ;

ಪದವಿಂಗಡಣೆ:
ಜರಡು +ಮಖವ್+ಈ+ ಮಖಕೆ +ಹೋಲುವ
ಧರಣಿಪತಿಯೀ+ ಮಖಕೆ+ ಧರಣೀ
ಶ್ವರಗೆ +ಪಾಸಟಿ +ಭೀಷ್ಮನ್+ಈ+ ಮಖ +ಭೂಪ +ಭೀಷ್ಮರಿಗೆ
ಸರಿಸನಾದನು+ ಕೃಷ್ಣನ್+ಈ+ ಮಖ
ಧರಣಿಪತಿ+ ಭೀಷ್ಮಂಗೆ +ಕೃಷ್ಣಗೆ
ಸರಿಯ +ಕಾಣೆನು +ನಿಮ್ಮೊಳ್+ಒಬ್ಬರಿಗ್+ಒಬ್ಬರ್+ಎಣೆಯೆಂದ

ಅಚ್ಚರಿ:
(೧) ಧರಣಿಪತಿ, ಧರಣೀಶ್ವರ, ಭೂಪ – ಸಮನಾರ್ಥಕ ಪದ
(೨) ಮಖ – ೫ ಬಾರಿ ಪ್ರಯೋಗ