ಪದ್ಯ ೩೧: ಯುಧಿಷ್ಠಿರನ ಹೆಸರು ಏನಾಯಿತೆಂದು ಶಿಶುಪಾಲನು ಹೇಳಿದನು?

ಧರ್ಮಮಯವೀ ಯಜ್ಞ ನೀನೇ
ಧರ್ಮಸುತನೆಂದಿದ್ದೆವಿಲ್ಲಿ ವಿ
ಕರ್ಮವಾಯಿತಸೂಯವೇ ಶಿವನಾಣೆ ಜಗವರಿಯೆ
ಧರ್ಮವೇ ಅಪ್ರಾಪ್ತಕಾರ್ಯದ
ಕರ್ಮವೀ ನೃಪನಿಕರ ಮೆಚ್ಚಲ
ಧರ್ಮಸುತನೆಂದಾಯ್ತು ನಿನ್ನಭಿಧಾನವಿಂದಿನಲಿ (ಸಭಾ ಪರ್ವ, ೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಧರ್ಮದಿಂದ ಕೂಡಿರುವ ಯಜ್ಞವಿದು, ನೀನು ಧರ್ಮರಾಯ, ಯಮನ ಮಗನು ಎಂದು ಕೊಂಡು ನಾವಿಲ್ಲಿಗೆ ಬಂದೆವು, ಇಲ್ಲಿ ಅಧರ್ಮವಾದ ಕಾರ್ಯ ನಡೆದಿದೆ, ಶಿವನೇ ಇದಕ್ಕೆ ಪ್ರಮಾಣ, ಮಾಡಬಾರದ ಕರ್ಮವನ್ನು ಧರ್ಮವೆಂದು ಮಾಡಿದುದರಿಂದ ಎಲ್ಲ ರಾಜರೂ ಮೆಚ್ಚುವ ಹಾಗೆ ಈ ದಿನದಿಂದ ನೀನು ಅಧರ್ಮಪುತ್ರನೆನಿಸಿಕೊಂಡೆ ಎಂದು ಶಿಶುಪಾಲನು ನುಡಿದನು.

ಅರ್ಥ:
ಧರ್ಮ: ಧಾರಣ ಮಾಡಿದುದು; ಮಯ: ವ್ಯಾಪಿಸಿರುವುದು; ಯಜ್ಞ: ಯಾಗ; ಸುತ: ಮಗ; ಧರ್ಮ: ಯಮ; ಇದ್ದೆವು: ನೆರೆದೆವು; ಕರ್ಮ: ಕೆಲಸ; ವಿಕರ್ಮ: ಕೆಟ್ಟ ಕಾರ್ಯ; ಅಸೂಯೆ: ಅಸಮಾ ಧಾನ; ಜಗ: ಜಗತ್ತು, ವಿಶ್ವ; ಅರಿ: ತಿಳಿ; ಅಪ್ರಾಪ್ತ: ಸರಿಯಲ್ಲದ;ಕಾರ್ಯ: ಕೆಲಸ; ನೃಪ: ರಾಜ; ನಿಕರ: ಗುಂಫು; ಮೆಚ್ಚು: ಇಷ್ಟಪಡು; ಅಧರ್ಮ: ಧರ್ಮವಲ್ಲದ ಕಾರ್ಯ; ಅಭಿಧಾನ: ಹೆಸರು; ಇಂದು: ಇವತ್ತು; ಆಣೆ: ಪ್ರಮಾಣ;

ಪದವಿಂಗಡಣೆ:
ಧರ್ಮಮಯವೀ +ಯಜ್ಞ +ನೀನೇ
ಧರ್ಮಸುತನ್+ಎಂದಿದ್ದೆವ್+ಇಲ್ಲಿ +ವಿ
ಕರ್ಮ+ವಾಯಿತ್+ಅಸೂಯವೇ +ಶಿವನಾಣೆ +ಜಗವರಿಯೆ
ಧರ್ಮವೇ +ಅಪ್ರಾಪ್ತ+ಕಾರ್ಯದ
ಕರ್ಮವೀ +ನೃಪ+ನಿಕರ +ಮೆಚ್ಚಲ್
ಅಧರ್ಮ+ಸುತನೆಂದಾಯ್ತು +ನಿನ್ನ್+ಅಭಿಧಾನವ್+ಇಂದಿನಲಿ

ಅಚ್ಚರಿ:
(೧) ಧರ್ಮ – ೧, ೨, ೪ ಸಾಲಿನ ಮೊದಲ ಪದ
(೨) ಧರ್ಮ ಅಧರ್ಮ – ವಿರುದ್ಧ ಪದಗಳು
(೩) ಧರ್ಮ, ಕರ್ಮ – ಪ್ರಾಸ ಪದಗಳು

ಪದ್ಯ ೩೦: ಶಿಶುಪಾಲನು ಕೃಷ್ಣನಿಗೆ ಯಾವ ಪದಗಳನ್ನು ಬಳಸಿದನು?

ರಾಯ ನಿನಗಾವಿಂದು ದಿಟ ಸಿ
ದ್ಧಾಯವನು ನಾವ್ತೆತ್ತೆವಲ್ಲದೆ
ವಾಯುಜನ ಫಲುಗುಣನ ಬಿಲ್ಲಿನ ಬಲುಮೆಗಂಜಿದೆವೆ
ರಾಯ ಠಕ್ಕಿನ ನಿಧಿಯ ಠೌಳಿಯ
ಮಾಯಕಾರನ ತಂದು ಮನ್ನಿಸಿ
ರಾಯರಭಿಮಾನವ ವಿಭಾಡಿಸಿ ಕೊಂದೆ ನೀನೆಂದ (ಸಭಾ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜ ನಿನ್ನ ಮುಖವನ್ನು ನೋಡಿ ನಾವು ಯಾಗಕ್ಕೆ ನಮ್ಮ ಕಪ್ಪವನ್ನು ಕೊಟ್ಟೆವು, ಭೀಮಾರ್ಜುನರ ಬಿಲ್ಲನ ಬಲಕ್ಕೆ ನಾವು ಹೆದರಿ ಕೊಡಲಿಲ್ಲ. ಕಪಟನಿಧಿ, ಮೋಸದ ಮಾಯಾಕಾರನಾದ ಕೃಷ್ಣನನ್ನು ಗೌರವಿಸಿ ಇಲ್ಲಿ ಸೇರಿರುವ ರಾಜರ ಸ್ವಾಭಿಮಾನವನ್ನು ನೀನು ಹೊಡೆದು ಕೊಂದೆ ಎಂದು ಶಿಶುಪಾಲನು ಗುಡುಗಿದನು.

ಅರ್ಥ:
ರಾಯ: ರಾಜ; ದಿಟ: ಸತ್ಯ; ಸಿದ್ಧ: ಸಾಧಿಸಿದವನು; ಆಯ: ವರಮಾನ,ಉದ್ದೇಶ; ತೆತ್ತು:ಹೊಂದಿಕೊಂಡಿರು; ವಾಯುಜ: ಭೀಮ; ಫಲುಗುಣ: ಅರ್ಜುನ; ಬಿಲ್ಲು: ಚಾಪ; ಬಲು: ಬಲ ಅಂಜು: ಹೆದರು; ಠಕ್ಕು: ಮೋಸ; ನಿಧಿ: ಐಶ್ವರ್ಯ; ಠೌಳಿ: ಮೋಸ, ವಂಚನೆ; ಮಾಯಕಾರನ: ಮಾಯವನ್ನು ಮಾಡುವವ; ತಂದು: ಬರೆಮಾಡಿ; ಮನ್ನಿಸಿ: ಗೌರವಿಸಿ; ಅಭಿಮಾನ: ; ವಿಭಾಡಿಸು: ನಾಶಮಾಡು; ಕೊಂದು: ಸಾವು, ಅಳಿವು;

ಪದವಿಂಗಡಣೆ:
ರಾಯ +ನಿನಗಾವಿಂದು+ ದಿಟ+ ಸಿ
ದ್ಧ+ಆಯವನು +ನಾವ್+ತೆತ್ತೆವ್+ಅಲ್ಲದೆ
ವಾಯುಜನ +ಫಲುಗುಣನ+ ಬಿಲ್ಲಿನ+ ಬಲುಮೆಗ್+ಅಂಜಿದೆವೆ
ರಾಯ +ಠಕ್ಕಿನ+ ನಿಧಿಯ+ ಠೌಳಿಯ
ಮಾಯಕಾರನ +ತಂದು +ಮನ್ನಿಸಿ
ರಾಯರ್+ಅಭಿಮಾನವ +ವಿಭಾಡಿಸಿ +ಕೊಂದೆ +ನೀನೆಂದ

ಅಚ್ಚರಿ:
(೧) ಕೃಷ್ಣನನ್ನು ಬಯ್ಯುವ ಪರಿ – ಠಕ್ಕಿನ ನಿಧಿ; ಠೌಳಿಯ ಮಾಯಕಾರ
(೨) ರಾಯ – ೧, ೪, ೬ ಸಾಲಿನ ಮೊದಲನೇ ಪದ

ಪದ್ಯ ೨೯: ಕೃಷ್ಣನಿಗೆ ಗೌರವವನ್ನು ರಾಜಸಭೆಯಲ್ಲೇಕೆ ನೀಡಬಾರದು?

ಸ್ನಾತಕವ್ರತಿಯಲ್ಲ ಋತ್ವಿಜ
ನೀತನಲ್ಲಾಚಾರ್ಯನಲ್ಲ ಮ
ಹೀತಳಾಧಿಪನಲ್ಲ ಗುರುವಲ್ಲಸುರರಿಪು ನಿಮಗೆ
ಈತನೇ ಪ್ರಿಯನೆಂದು ಕೃಷ್ಣಂ
ಗೋತು ಕೊಡುವರೆ ಬೇರೆ ಕೊಡುವುದು
ಭೂತಳೇಶರ ಮುಂದೆ ಮನ್ನಿಪುದುಚಿತವಲ್ಲೆಂದ (ಸಭಾ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣನು ಗೃಹಸ್ಥನಲ್ಲ, ಯಜ್ಞದಲ್ಲಿ ಋತ್ವಿಜನಲ್ಲ, ನಿಮಗೆ ಆಚಾರ್ಯನಲ್ಲ, ರಾಜನಲ್ಲ ನಿಮಗೆ ಗುರುವಲ್ಲ ಇವನು ನಿಮಗೆ ಪ್ರಿಯನಾದವನೆಂದು ಮನ್ನಿಸುತ್ತೇವೆ ಎಂದು ಹೇಳಿದರೆ, ಆ ಮನ್ನಣೆಯನ್ನು ರಾಜರಸಭೆಯೆದುರು ಮಾಡಬೇಡಿ ಬೇರಲ್ಲಾದರೂ ಕರೆದುಕೊಂಡು ಮಾಡಿಕೊಳ್ಳಿ ಎಂದು ಶಿಶುಪಾಲನು ಗುಡುಗಿದನು.

ಅರ್ಥ:
ಸ್ನಾತಕ: ಗೃಹಸ್ಥ; ವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು; ಋತ್ವಿಜ: ಯಜ್ಞ ಮಾಡುವವ; ಆಚಾರ್ಯ: ಗುರು; ಮಹೀ: ಭೂಮಿ; ಮಹೀತಳಾಧಿಪ: ರಾಜ; ಗುರು: ಆಚಾರ್ಯ; ಅಸುರರಿಪು: ರಾಕ್ಷಸರ ವೈರಿ; ಪ್ರಿಯ: ಇಷ್ಟವಾದವ; ಭೂತಳೇಶ: ರಾಜ; ಮುಂದೆ: ಎದುರು; ಮನ್ನಿಸು: ಗೌರವಿಸು; ಉಚಿತ: ಸರಿಯಾದ;

ಪದವಿಂಗಡಣೆ:
ಸ್ನಾತಕವ್ರತಿಯಲ್ಲ+ ಋತ್ವಿಜನ್
ಈತನಲ್ಲ+ಆಚಾರ್ಯನಲ್ಲ+ ಮ
ಹೀತಳ+ಅಧಿಪನಲ್ಲ +ಗುರುವಲ್ಲ್+ಅಸುರರಿಪು +ನಿಮಗೆ
ಈತನೇ +ಪ್ರಿಯನೆಂದು +ಕೃಷ್ಣಂ
ಗೋತು +ಕೊಡುವರೆ+ ಬೇರೆ+ ಕೊಡುವುದು
ಭೂತಳೇಶರ+ ಮುಂದೆ +ಮನ್ನಿಪುದ್+ಉಚಿತವಲ್ಲೆಂದ

ಅಚ್ಚರಿ:
(೧) ಕೊಡುವರೆ, ಕೊಡುವುದು – ಪದಗಳ ಬಳಕೆ
(೨) ಸ್ನಾತಕ, ಋತ್ವಿಜ, ಆಚಾರ್ಯ, ಮಹೀತಳಾಧಿಪ, ಗುರು – ಈ ಗುಂಪಿನವನಲ್ಲ ಎಂದು ಹೇಳಲು ಬಳಸಿದ ಪದಗಳು
(೩) ಮಹೀತಳಾಧಿಪ, ಭೂತಳೇಶ – ಸಮನಾರ್ಥಕ ಪದ