ಪದ್ಯ ೪೯: ಬಿಡಾರದ ರಕ್ಷಣೆಯ ಭಾರ ಯಾರ ಮೇಲಿತ್ತು?

ಬಲದ ಮುಂಗುಡಿ ಭೀಮನದು ಪಿಂ
ತಿಳೆಯೊಳಾತನ ಕಾಹು ಬೀಡಿನ
ವಳಯದಾರೈಕೆಗಳು ಸಾತ್ಯಕಿ ನಕುಲ ಪಾರ್ಥರಿಗೆ
ಬಲಮಹಾಂಬುಧಿಯೊಳಗಿರುಳು ಮೇ
ಲ್ತಳವರನು ಹೈಡಿಂಬಿ ಪಾಂಡವ
ರುಳಿವು ಗದುಗಿನ ವೀರನಾರಾಯಣನ ಸುಯಿದಾನ (ಉದ್ಯೋಗ ಪರ್ವ, ೧೨ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯದ ಮುಂಚೂಣಿ ಭೀಮನದು, ಹಿಂಭಾಗದಲ್ಲೂ ಸಹ ಅವನದೇ ಕಾವಲಿತ್ತು, ಬೀಡಿನ ಎಲ್ಲರ ಅನುಕೂಲಗಳನ್ನು ನೋಡಿಕೊಳ್ಳುವವರು ಸಾತ್ಯಕಿ, ಅರ್ಜುನ, ನಕುಲರು. ಆ ಮಹಾಸೈನ್ಯ ಸಮುದ್ರವನ್ನು ರಾತ್ರಿಯಲ್ಲಿ ಕಾಯುವವನು ಘಟೋತ್ಕಚ, ಗದುಗಿನ ವೀರನಾರಾಯಣ (ಶ್ರೀ ಕೃಷ್ಣ) ಪಾಂಡವರ ರಕ್ಷಣೆಗೆ ನಿಂತನು.

ಅರ್ಥ:
ಬಲ: ಸೈನ್ಯ, ಮುಂಗುಡಿ: ಮುಂಚೂಣಿ, ಮುಂದೆ; ಪಿಂತಿಳೆ: ಹಿಂಬದಿ; ಕಾಹು: ಕಾವಲು; ಬೀಡು: ಗೂಡಾರ; ವಳಯ: ವರ್ತುಲ, ಅಂಗಳ, ಆವರಣ; ಆರೈಕೆ: ಶುಶ್ರೂಷೆ; ಅಂಬುಧಿ: ಸಾಗರ; ಇರುಳು: ರಾತ್ರಿ; ಮೇಲ್ತಳ: ಮೇಲಿಂದ ನೋಡಿಕೊ, ಕಾಪಾಡು; ಹೈಡಿಂಬಿ: ಘಟೋತ್ಕಚ; ಉಳಿವು: ರಕ್ಷಣೆ; ಸುಯಿದಾನ: ರಕ್ಷಣೆ;

ಪದವಿಂಗಡಣೆ:
ಬಲದ +ಮುಂಗುಡಿ+ ಭೀಮನದು +ಪಿಂ
ತಿಳೆಯೊಳ್+ಆತನ +ಕಾಹು +ಬೀಡಿನ
ವಳಯದ್+ಆರೈಕೆಗಳು +ಸಾತ್ಯಕಿ +ನಕುಲ +ಪಾರ್ಥರಿಗೆ
ಬಲಮಹ+ಅಂಬುಧಿಯೊಳಗ್+ಇರುಳು +ಮೇ
ಲ್ತಳವರನು+ ಹೈಡಿಂಬಿ +ಪಾಂಡವರ್
ಉಳಿವು +ಗದುಗಿನ +ವೀರನಾರಾಯಣನ +ಸುಯಿದಾನ

ಅಚ್ಚರಿ:
(೧) ಕಾಹು, ಉಳಿವು, ಸುಯಿದಾನ – ರಕ್ಷಣೆಯ ಸಾಮ್ಯಾರ್ಥ ಪದಗಳು

ಪದ್ಯ ೪೮: ಪಾಂಡವರ ಬೀಡು ಕುರುಭೂಮಿಯಲ್ಲಿ ಹೇಗೆ ರಾರಾಜಿಸಿತು?

ಎರಡು ಬಾಗಿಲ ಸೂತ್ರದಲಿ ವಿ
ಸ್ತರಿಸಿದಂಗಡಿ ಸೋಮ ವೀಧಿಯ
ತರಣಿ ವೀಧಿಯ ಲವರವರ ಪಾಳೆಯಕೆ ಮುರಿವುಗಳ
ಸುರರು ಸೃಷ್ಟಿಸ ಬಾರದಿನ್ನೀ
ನರರುಗಳ ಪಾಡೇನು ಕೌಂತೇ
ಯರ ಸಮಗ್ರದ ಬೀಡು ಕುರುಭೂಮಿಯಲಿ ರಂಜಿಸಿತು (ಉದ್ಯೋಗ ಪರ್ವ, ೧೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ಎರಡು ಬಾಗಿಲುಗಳಿರುವ ಬಿಡಾರದ ರಚನೆಯಾಗಿತ್ತು, ಒಂದು ಬಾಗಿಲು ಸೂರ್ಯವೀಧಿಯ ಮಾರ್ಗ, ಮತ್ತೊಂದಕ್ಕೆ ಚಂದ್ರವೀಧಿಯ ಮಾರ್ಗವೆಂದು ಕರೆಯಲಾಯಿತು. ಈ ಮಾರ್ಗದಲ್ಲಿ ಮುಂದುವರೆದರೆ ಅವರವರ ಪಾಳಯಕ್ಕೆ ಹೋಗವ ಹಾದಿ, ಹೀಗೆ ಸಮಗ್ರತೆಯನ್ನೊಳಗೊಂಡ ಭದ್ರವಾದ ಪಾಂಡವರ ಪಾಳೆಯದಂಥದನ್ನು ನಿರ್ಮಿಸಲು ದೇವತೆಗಳಿಗೂ ಅಸಾಧ್ಯವೆಂದ ಮೇಲೆ ಮನುಷ್ಯರ ಪಾಡೇನು? ಪಾಂಡವರ ಸಮಗ್ರ ಬೀಡು ಕುರುಭೂಮಿಯಲ್ಲಿ ರಾರಾಜಿಸಿತು.

ಅರ್ಥ:
ಎರಡು: ದ್ವಂದ್ವ, ಜೋಡಿ; ಬಾಗಿಲು: ಕವಾಟ; ಸೂತ್ರ: ಕ್ರಮ; ವಿಸ್ತರಿಸು: ಹರಡು; ಅಂಗಡಿ: ಬೀಡು; ಸೋಮ: ಚಂದ್ರ; ವೀಧಿ: ಮಾರ್ಗ, ದಾರಿ; ತರಣಿ: ಸೂರ್ಯ; ಪಾಳೆ: ಬಿಡಾರ, ಗೂಡಾರ; ಮುರಿ: ಸೀಳು, ಅಡ್ಡ; ಸುರರು: ದೇವತೆಗಳು; ಸೃಷ್ಟಿ: ರಚಿಸು; ನರ: ಮನುಷ್ಯ; ಪಾಡು: ಗತಿ; ಸಮಗ್ರ: ಒಟ್ಟಾರೆ; ಬೀಡು: ಆಲಯ, ಗೂಡಾರ; ರಂಜಿಸು: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಎರಡು +ಬಾಗಿಲ +ಸೂತ್ರದಲಿ +ವಿ
ಸ್ತರಿಸಿದ್+ಅಂಗಡಿ +ಸೋಮ +ವೀಧಿಯ
ತರಣಿ+ ವೀಧಿಯಲ್+ಅವರವರ +ಪಾಳೆಯಕೆ +ಮುರಿವುಗಳ
ಸುರರು +ಸೃಷ್ಟಿಸ ಬಾರದ್+ಇನ್ನೀ
ನರರುಗಳ+ ಪಾಡೇನು +ಕೌಂತೇ
ಯರ +ಸಮಗ್ರದ +ಬೀಡು +ಕುರುಭೂಮಿಯಲಿ +ರಂಜಿಸಿತು

ಅಚ್ಚರಿ:
(೧) ಸುರರು, ನರರು – ಪ್ರಾಸ ಪದಗಳು

ಪದ್ಯ ೪೭: ರಾಜಾಲಯದ ರಕ್ಷಣಾಕವಚ ಹೇಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಬೀಡಿನ ತೆಕ್ಕೆ ಬಿಗಿದುದು
ಪಾಳಯದ ಬಲುಹೊದಕೆ ಹೊರವಳಯದೊಳು ಕಲುಗೋಟೆ
ಮೇಲೆ ಪಡಿಯಗಳಾಶ್ರಯಕೆ ಮುಳು
ವೇಲಿ ದೀಹದ ಸಿಂಹ ಶರಭ
ವ್ಯಾಳ ಶಾರ್ದೂಲಾವಳಿಯ ಸುಯಿದಾನಮೊಪ್ಪಿದುದು (ಉದ್ಯೋಗ ಪರ್ವ, ೧೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಸೈನ್ಯದ ಸುತ್ತಲೂ ಅದಕ್ಕೆ ಹೊದಿಕೆಯಾಗಿ ಕಲ್ಲುಕೋಟೆ, ಅದರ ಸುತ್ತಲೂ ಕಂದಕ, ಮುಳ್ಳು ಬೇಲಿ, ಸಾಕಿದ ಸಿಂಹ, ಶರಭ, ಸರ್ಪ, ಹುಲಿಗಳು ರಕ್ಷಣೆ ಮಾಡಲೆಂದು ತಯಾರಾಗಿದ್ದವು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರಿ: ಭೂಮಿ; ಪಾಲ: ರಕ್ಷಿಸುವ; ಬೀಡು: ವಾಸಸ್ಥಳ, ವಸತಿ; ತೆಕ್ಕೆ: ಗುಂಪು; ಬಿಗಿದು: ಬಂಧಿಸು; ಪಾಳಯ:ಶಿಬಿರ,ಬೀಡು; ಬಲು:ಹೆಚ್ಚಳ; ಹೊದಕೆ: ಹೋಂದಾಣಿಕೆ, ಮೇಲ್ಛಾವಣಿ; ಹೊರವಳಯ: ಆಚೆಕಡೆ; ಕಲು: ಕಲ್ಲು; ಗೋಟೆ: ಕೋಟೆ, ದುರ್ಗ; ಮೇಲೆ: ಅಗ್ರಭಾಗ; ಪಡಿ: ಪ್ರತಿಯಾದುದು, ಬದಲು; ಆಶ್ರಯ: ನೆರವು; ಮುಳು: ಚುಚ್ಚುವ, ಮುಳ್ಳು; ವೇಲಿ: ಬೇಲಿ; ದೀಹ: ಬೇಟೆಗೆ ಉಪಯೋಗಿಸಲು ಪಳಗಿಸಿದ ಪ್ರಾಣಿ; ಸಿಂಹ: ಕೇಸರಿ; ಶರಭ: ಎಂಟು ಕಾಲುಗಳುಳ್ಳ ಒಂದು ವಿಲಕ್ಷಣ ಪ್ರಾಣಿ; ವ್ಯಾಳ: ಸರ್ಪ; ಶಾರ್ದೂಲ: ಹುಲಿ; ಆವಳಿ: ಗುಂಪು; ಸುಯಿದಾನ: ರಕ್ಷಣೆ; ಒಪ್ಪು: ಮೈದೋರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಬೀಡಿನ +ತೆಕ್ಕೆ +ಬಿಗಿದುದು
ಪಾಳಯದ +ಬಲುಹೊದಕೆ+ ಹೊರವಳಯದೊಳು +ಕಲುಗೋಟೆ
ಮೇಲೆ +ಪಡಿಯಗಳ್+ಆಶ್ರಯಕೆ +ಮುಳು
ವೇಲಿ +ದೀಹದ +ಸಿಂಹ +ಶರಭ
ವ್ಯಾಳ +ಶಾರ್ದೂಲ+ಆವಳಿಯ +ಸುಯಿದಾನಮ್+ಒಪ್ಪಿದುದು

ಅಚ್ಚರಿ:
(೧) ಸಿಂಹ, ಶರಭ, ವ್ಯಾಳ, ಶಾರ್ದೂಲ – ವನ್ಯಪ್ರಾಣಿಗಳ ರಕ್ಷಣೆ

ಪದ್ಯ ೪೬: ರಾಜರ ಡೇರೆಗಳಿಗೆ ಯಾವ ರೀತಿ ಭದ್ರತೆ ಒದಗಿಸಲಾಗಿತ್ತು?

ವೀರ ಪಾಂಡವರಿವರರಸುಕು
ಮಾರ ವರ್ಗದ ಮಂಡವಿಗೆ ಗೂ
ಡಾರಗಳನೊಳಕೊಂಡು ಬಿಗಿದವು ತಳಿಯ ಕಟ್ಟುಗಳು
ವಾರಣದ ಸಾಲುಗಳ ಸುತ್ತಲು
ಭಾರಿಸಿತು ಪಾಂಚಾಲ ಮತ್ಸ್ಯರ
ಭೂರಿ ಬಲ ಬಿಟ್ಟುದು ಮಹೀಶನ ಗುಡಿಯ ಬಳಸಿನಲಿ (ಉದ್ಯೋಗ ಪರ್ವ, ೧೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಉಪಪಾಂಡವರ, ರಾಜಪುತ್ರರ, ಗುಡಾರ ಮಂಟಪಗಳ ಸುತ್ತಲೂ ಮರದ ಕೊರಡುಗಳ ಕೋಟೆ ಆನೆಗಳ ಸಾಲುಗಳು, ಅದರ ಸುತ್ತಲೂ ಪಾಂಚಾಲ ಮತ್ಸ್ಯರ ಮಹಾಸೈನ್ಯಗಳು ಧರ್ಮಜನ ಮನೆಯ ಸುತ್ತಲೂ ಬಳಸಿ ನಿಂತವು.

ಅರ್ಥ:
ವೀರ: ಶೂರ; ಅರಸು: ರಾಜ; ಕುಮಾರ: ಮಕ್ಕಳು; ವರ್ಗ: ಗುಂಪು; ಮಂಡವಿಗೆ: ಗುಡಾರ, ಡೇರೆ; ಗುಡಾರ: ಶಿಬಿರ, ಬಟ್ಟೆಮನೆ; ಒಳಕೊಂಡು: ಸೇರಿಸಿ; ಬಿಗಿ: ಗಟ್ಟಿ, ಬಂಧನ; ತಳಿ: ಜಾತಿ, ಬೇಲಿ; ಕಟ್ಟು: ಆವರಿಸು; ವಾರಣ: ಆನೆ; ಸಾಲು: ಆವಳಿ; ಸುತ್ತಲು: ಆವರಿಸು; ಭಾರಿಸಿ: ಹರಡು; ಭೂರಿ: ಹೆಚ್ಚು, ಅಧಿಕ; ಬಲ: ಸೈನ್ಯ; ಬಿಟ್ಟುದು: ಆವರಿಸು, ಹರಡು; ಮಹೀಶ: ರಾಜ; ಗುಡಿ: ಆಲಯ; ಬಳಸು: ಸುತ್ತುವರಿಯುವಿಕೆ;

ಪದವಿಂಗಡಣೆ:
ವೀರ +ಪಾಂಡವರ್+ಇವರ್+ಅರಸು+ಕು
ಮಾರ +ವರ್ಗದ +ಮಂಡವಿಗೆ+ ಗೂ
ಡಾರಗಳನ್+ಒಳಕೊಂಡು +ಬಿಗಿದವು +ತಳಿಯ +ಕಟ್ಟುಗಳು
ವಾರಣದ +ಸಾಲುಗಳ +ಸುತ್ತಲು
ಭಾರಿಸಿತು+ ಪಾಂಚಾಲ +ಮತ್ಸ್ಯರ
ಭೂರಿ +ಬಲ +ಬಿಟ್ಟುದು +ಮಹೀಶನ +ಗುಡಿಯ +ಬಳಸಿನಲಿ

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಭೂರಿ ಬಲ ಬಿಟ್ಟುದು
(೨) ಗೂಡಾರ, ಮಂಡವಿಗೆ, ಗುಡಿ; ಬಳಸು, ಸುತ್ತಲು – ಸಾಮ್ಯಾರ್ಥ ಪದಗಳು

ಪದ್ಯ ೪೫: ಪಾಂಡವರ ಬಿಡಾರ ಹೇಗೆ ರಚಿತವಾಗಿತ್ತು?

ಅರಮನೆಯ ಕೆಲದಲಿ ಮುರಾಂತಕ
ನರಮನೆಗಳಾ ಕೆಲದೊಳರ್ಜುನ
ನಿರವು ಹಿಂದಣ ಭಾಗದಲಿ ನಕುಲಂಗೆ ಗುಡಾರ
ಅರಿಭಯಕರ ಭೀಮಸೇನನ
ನಿರುಪಮಾಲಯವೆಡದ ಕಡೆಯಲಿ
ಸರಿಸದಲಿ ಸೂತ್ರಿಸಿತು ಸಹದೇವರಿಗೆ ನೃಪಭವನ (ಉದ್ಯೋಗ ಪರ್ವ, ೧೨ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧರ್ಮಜನ ಭವನ ಪಕ್ಕದಲ್ಲಿ ಶ್ರೀಕೃಷ್ಣನ ಅರಮನೆಗಳು, ಅದರ ಪಕ್ಕದಲ್ಲಿ ಅರ್ಜುನನ ಮನೆ, ಹಿಂಭಾಗದಲ್ಲಿ ನಕುಲನ ಮನೆ, ಎಡಭಾಗದಲ್ಲಿ ಭೀಮಸೇನನ ಮನೆ ಅದಕ್ಕೆ ಸರಿಯಾಗಿ ಸಹದೇವನ ಅರಮನೆಗಳಿದ್ದವು.

ಅರ್ಥ:
ಅರಮನೆ: ರಾಜರ ವಾಸಸ್ಥಾನ; ಕೆಲ:ಬಲ, ಪಕ್ಕ; ಮುರಾಂತಕ: ಕೃಷ್ಣ; ಗೂಡಾರ: ಡೇರೆ; ಹಿಂದಣ; ಹಿಂಭಾಗ; ಅರಿ: ವೈರಿ; ಭಯಕರ: ಭಯವನ್ನು ಹುಟ್ಟಿಸುವವ; ನಿರುಪಮ: ಸಾಟಿಯಿಲ್ಲದ; ಎಡ: ವಾಮಭಾಗ; ಕಡೆ: ಪಕ್ಕ, ಸ್ಥಳ; ಸರಿ: ಸಮಾನ; ಸೂತ್ರಿಸು: ಜೋಡಿಸು, ಸೇರಿಸು; ನೃಪ:ರಾಜ; ಭವನ: ಮನೆ, ಆಲಯ;

ಪದವಿಂಗಡಣೆ:
ಅರಮನೆಯ +ಕೆಲದಲಿ +ಮುರಾಂತಕನ್
ಅರಮನೆಗಳ್+ಆ+ ಕೆಲದೊಳ್+ಅರ್ಜುನನ್
ಇರವು +ಹಿಂದಣ +ಭಾಗದಲಿ+ ನಕುಲಂಗೆ +ಗುಡಾರ
ಅರಿಭಯಕರ +ಭೀಮಸೇನನ
ನಿರುಪಮ+ಆಲಯವ್+ಎಡದ +ಕಡೆಯಲಿ
ಸರಿಸದಲಿ +ಸೂತ್ರಿಸಿತು+ ಸಹದೇವರಿಗೆ+ ನೃಪಭವನ

ಅಚ್ಚರಿ:
(೧) ‘ಸ’ಕಾರದ ತ್ರಿವಳಿ ಪದ – ಸರಿಸದಲಿ ಸೂತ್ರಿಸಿತು ಸಹದೇವರಿಗೆ
(೨) ಅರಮನೆ, ಗುಡಾರ, ಆಲಯ, ನೃಪಭವನ – ಸಮನಾರ್ಥಕ ಪದ
(೩) ಭೀಮಸೇನನ ಗುಣವಾಚಕ ಪದ – ಅರಿಭಯಕರ

ಪದ್ಯ ೪೪: ಪಾಂಡವರಿಗೆ ಎಂತಹ ಆಲಯವನ್ನು ನಿರ್ಮಿಸಿದರು?

ಮೇಲು ಗುಡಿಗಳ ಭದ್ರದುಪ್ಪರ
ಶಾಲೆಗಳ ಮಂಡವಿಗೆಗಳ ಬ
ಲ್ಲಾಳ ದಡ್ಡಿಯ ಚಂಪೆಯದ ಗೂಡಾರದೋವರಿಯ
ಸಾಲುಕಳಸದ ಮೇಲುಗಟ್ಟಿನ
ಕೀಲಣದ ಹೊಂಗೆಲಸದಲಿ ರಾ
ಜಾಲಯವನನುಕರಿಸಿದರು ಕುಂತೀಕುಮಾರರಿಗೆ (ಉದ್ಯೋಗ ಪರ್ವ, ೧೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಭದ್ರವಾದ ಉಪ್ಪರಿಗೆ, ಅದರ ಮೇಲೇರಿಸಿದ ಧ್ವಜ, ಮಂಟಪಗಳು, ಬಲ್ಲಾಳ ದಡ್ಡಿ, ಹೊಂದಿಕೊಂಡ ಡೇರೆ, ಗುಡಾರಗಳ ಪಾಗರ, ಡೇರೆಗಳ ಮೇಲೆ ಕಲಶಗಳು ಅದರ ಕೆಳಭಾಗಕ್ಕೆ ಹೊಂಗೆಲಸಗಳಿಂದ ಅಲಂಕೃತವಾಗಿ ಪಾಂಡವರಿಗಾಗಿ ರಾಜಾಲಯಗಳನ್ನು ಕಟ್ಟಿದರು.

ಅರ್ಥ:
ಮೇಲು: ಎತ್ತರ; ಗುಡಿ: ಆಲಯ; ಭದ್ರ: ಗಟ್ಟಿಯಾದ; ಉಪ್ಪರ:ಎತ್ತರ, ಉನ್ನತಿ; ಶಾಲೆ:ಆಲಯ; ಮಂಡವಿಗೆ: ಗುಡಾರ, ಡೇರೆ; ಬಲ್ಲಾಳ: ವೀರ, ಶೂರ; ಬಲ್ಲಾಳದಡ್ಡಿ: ವೀರರ ವಾಸಸ್ಥಾನ; ಚಂಪೆಯ: ಒಂದು ಬಗೆಯ ಡೇರೆ; ಗೂಡಾರ: ಶಿಬಿರ, ಬಟ್ಟೆಮನೆ; ಓವರಿ: ಕೋಣೆ, ಒಳಮನೆ; ಸಾಲು: ಆವಳಿ; ಕಳಸ: ಶಿಖರ; ಗಟ್ಟಿ: ಬಿಗಿಯಾದುದು; ಕೀಲಣ: ಕೆಳಭಾಗ; ಹೊಂಗೆಲಸ: ಚಿನ್ನದ ಅಲಂಕಾರಿಕ ಕೆಲಸ; ರಾಜಾಲಯ: ರಾಜರ ವಾಸಸ್ಥಾನ; ಅನುಕರಿಸು: ಪ್ರತಿಫಲ ಕೊಡು; ಕುಮಾರ: ಮಕ್ಕಳು;

ಪದವಿಂಗಡಣೆ:
ಮೇಲು+ ಗುಡಿಗಳ +ಭದ್ರದ್+ಉಪ್ಪರ
ಶಾಲೆಗಳ +ಮಂಡವಿಗೆಗಳ +ಬ
ಲ್ಲಾಳ +ದಡ್ಡಿಯ +ಚಂಪೆಯದ +ಗೂಡಾರದ್+ಓವರಿಯ
ಸಾಲುಕಳಸದ +ಮೇಲು+ಗಟ್ಟಿನ
ಕೀಲಣದ +ಹೊಂಗೆಲಸದಲಿ +ರಾ
ಜಾಲಯವನ್+ಅನುಕರಿಸಿದರು +ಕುಂತೀಕುಮಾರರಿಗೆ

ಅಚ್ಚರಿ:
(೧) ಗುಡಿ, ಶಾಲೆ, ಗೂಡಾರ, ಚಂಪೆ, ಆಲಯ – ಸಾಮ್ಯಾರ್ಥ ಪದಗಳು