ಪದ್ಯ ೩೮: ಪಾಂಡವರು ಯುದ್ಧರಂಗಕ್ಕೆ ಹೇಗೆ ಹೊರಟರು?

ಮುಂದೆ ಹರಿರಥವಸುರ ವೈರಿಯ
ಹಿಂದೆ ಧರ್ಮಜನೆಡಬಲದಲಾ
ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು
ಸಂದಣಿಸಿದುದು ಸೇನೆ ಸೈರಿಸಿ
ನಿಂದನಾದಡೆ ಫಣಿಗೆ ಸರಿಯಿ
ಲ್ಲೆಂದು ಸುರಕುಲವುಲಿಯೆ ನಡೆದರು ಪಾಂಡುನಂದನರು (ಉದ್ಯೋಗ ಪರ್ವ, ೧೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸೈನ್ಯದ ಮುಂಬಾಗದಲ್ಲಿ ಶ್ರೀಕೃಷ್ಣನ ರಥ, ಅವನ ಹಿಂದೆ ಯುಧಿಷ್ಠಿರನು, ಅವನ ಎಡಬಲದಲ್ಲಿ ಪಾಂಡವರ ಮಕ್ಕಳು, ಬಲಭಾಗದ ಪಕ್ಕದಲ್ಲಿ ಭೀಮಾರ್ಜುನರು, ಹೀಗೆ ಹಲವಾರು ಮಂದಿ ರಥವೇರಿ ಸಿದ್ಧರಾದರು. ಸೈನ್ಯವೂ ಸೇರಿತು. ಈ ಭಾರಕ್ಕೆ ತಲೆ ಬಾಗಿಸದೆ ನೆಟ್ಟನಿದ್ದರೆ ಆದಿಶೇಷನಿಗೆ ಯಾರೂ ಸರಿಯಿಲ್ಲ ಎಂದು ದೇವತೆಗಳು ಮಾತನಾಡುತ್ತಿರಲು ಪಾಂಡವರು ಯುದ್ಧರಂಗಕ್ಕೆ ನಡೆದರು.

ಅರ್ಥ:
ಮುಂದೆ: ಅಗ್ರ, ಮೊದಲು; ರಥ: ಬಂಡಿ; ಅಸುರವೈರಿ: ರಾಕ್ಷರಸ ರಿಪು (ಕೃಷ್ಣ); ಹಿಂದೆ: ಹಿಂಬಾಗ; ಧರ್ಮಜ: ಯುಧಿಷ್ಠಿರ; ಎಡಬಲ: ಆಚೆಯೀಚೆ, ಪಕ್ಕದಲ್ಲಿ; ನಂದನ: ಮಕ್ಕಳು; ಕೆಲಬಲ: ಬಲಭಾಗದಲ್ಲಿ; ಆದಿ: ಮುಂತಾದವರು; ಸಂದಣಿ: ಗುಂಪು; ಸೇನೆ: ಸೈನ್ಯ; ಸೈರಿಸಿ: ತಾಳು, ಸಹಿಸು; ನಿಂದು: ನಿಲ್ಲು; ಫಣಿ: ಹಾವು; ಸರಿ: ಸದೃಶ, ತಪ್ಪಲ್ಲದ್ದು; ಸುರ: ದೇವತೆ; ಕುಲ: ವಂಶ; ಉಲಿ: ಧ್ವನಿ; ನಡೆ: ಸಾಗು;

ಪದವಿಂಗಡಣೆ:
ಮುಂದೆ +ಹರಿ+ರಥವ್+ಅಸುರ ವೈರಿಯ
ಹಿಂದೆ +ಧರ್ಮಜನ್+ಎಡಬಲದಲ್
ಆ+ನಂದನರು+ ಕೆಲಬಲದಲ್+ಆ+ ಭೀಮಾರ್ಜುನ+ಆದಿಗಳು
ಸಂದಣಿಸಿದುದು +ಸೇನೆ +ಸೈರಿಸಿ
ನಿಂದನಾದಡೆ+ ಫಣಿಗೆ+ ಸರಿಯಿ
ಲ್ಲೆಂದು+ ಸುರ+ಕುಲ+ಉಲಿಯೆ +ನಡೆದರು +ಪಾಂಡು+ನಂದನರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೈರಿಸಿ ನಿಂದನಾದಡೆ ಫಣಿಗೆ ಸರಿಯಿಲ್ಲೆಂದು ಸುರಕುಲವುಲಿಯೆ
(೨) ಹರಿ, ಅಸುರವೈರಿ – ಕೃಷ್ಣನಿಗೆ ಉಪಯೋಗಿಸಿದ ಪದಗಳು

ಪದ್ಯ ೩೭: ಕೃಷ್ಣನು ತನ್ನ ರಥವನ್ನು ಹೇಗೆ ಏರಿದನು?

ಹರಿಯ ಚರಣಕ್ಕೆರಗಿ ವಿಜಯದ
ಹರಕೆಗಳ ಕೈಕೊಂಡು ರಥವನು
ತುರಗಗಜವನು ಗಡಣ ಮಿಗಲೇರಿದರು ಪಾಂಡವರು
ಗರುಡ ಸಿಂಧವನೆತ್ತಿ ದಾರುಕ
ನಿರದೆ ರಥವನು ಸುಳಿಸೆ ಯದುಮೋ
ಹರದ ಮಧ್ಯದೊಳಸುರ ಧೂಳೀಪಟಲ ಸೇರಿದನು (ಉದ್ಯೋಗ ಪರ್ವ, ೧೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಪಾದಕ್ಕೆ ನಮಸ್ಕರಿಸಿ ಪಾಂಡವರು ಯುದ್ಧದಲ್ಲಿ ಗೆಲ್ಲುವ ಆಶೀರ್ವಾದವನ್ನು ಪಡೆದು, ಸುತ್ತಲೂ ಕುದುರೆ, ಆನೆಗಳಿದ್ದ ಸೈನ್ಯದ ಮಧ್ಯೆ ತಮ್ಮ ರಥವನ್ನು ಏರಿದರು. ಸಾರಥಿಯಾದ ದಾರುಕನು ಗರುಡಧ್ವಜವನ್ನು ಕಟ್ಟಿ ರಥವನ್ನು ತೆಗೆದುಕೊಂಡುಬರಲು, ಯಾದವರ ನಡುವೆ ದಾನವಾಂತಕ ಶ್ರೀಕೃಷ್ಣನು ರಥವೇರಿದನು.

ಅರ್ಥ:
ಹರಿ: ವಿಷ್ಣು; ಚರಣ: ಪಾದ; ಎರಗು: ನಮಸ್ಕರಿಸು; ವಿಜಯ: ಗೆಲುವು; ಹರಕೆ: ಆಶೀರ್ವಾದ, ಆಶೀರ್ವಚನ; ಕೈಕೊಂಡು: ಪಡೆದು; ರಥ: ಬಂಡಿ; ತುರಗ: ಕುದುರೆ; ಗಜ: ಆನೆ; ಗಡಣ: ಸಮೂಹ; ಮಿಗಿಲು: ಹೆಚ್ಚು; ಏರು: ಮೇಲೆಹೋಗು; ಸಿಂಧ: ಬಾವುಟ; ಸುಳಿಸು: ತಿರುಗಿಸು ; ಮೋಹರ: ಸೈನ್ಯ, ದಂಡು;ಮಧ್ಯ: ನಡುವೆ; ಧೂಳು: ಕಸ; ಧೂಳೀಪಟ: ಹಬ್ಬಿರುವ ಧೂಳು; ಸೇರು: ತಲುಪು; ಇರಿ: ಚುಚ್ಚು; ಅಸುರ: ರಾಕ್ಷಸ;

ಪದವಿಂಗಡಣೆ:
ಹರಿಯ +ಚರಣಕ್ಕೆರಗಿ +ವಿಜಯದ
ಹರಕೆಗಳ +ಕೈಕೊಂಡು +ರಥವನು
ತುರಗ+ಗಜವನು+ ಗಡಣ +ಮಿಗಲೇರಿದರು+ ಪಾಂಡವರು
ಗರುಡ +ಸಿಂಧವನೆತ್ತಿ+ ದಾರುಕ
ನಿರದೆ+ ರಥವನು+ ಸುಳಿಸೆ +ಯದುಮೋ
ಹರದ+ ಮಧ್ಯದೊಳ್+ಅಸುರ +ಧೂಳೀಪಟಲ+ ಸೇರಿದನು

ಅಚ್ಚರಿ:
(೧) ಉಪಮಾನದ ಪ್ರಯೋಗ – ಯದುಮೋಹರದ ಮಧ್ಯದೊಳಸುರ ಧೂಳೀಪಟಲ ಸೇರಿದನು

ಪದ್ಯ ೩೬: ಸೈನ್ಯ ಸಾಗರವು ಯಾವ ಪರಿ ಹೊರಟಿತು?

ರೂಢಿಸಿದ ಸುಮುಹೂರ್ತದೊಳು ಹೊರ
ಬೀಡ ಬಿಟ್ಟರು ರಣಕೆ ಪಯಣವ
ಮಾಡಲೋಸುಗ ಸಾರಿದರು ನೃಪಪಾಳೆಯಂಗಳೊಳು
ಕೂಡಿತಾಹವ ಸೈನ್ಯಸಾಗರ
ವೀಡಿರಿದು ನಡೆಗೊಂಡುದುದಧಿಯ
ನೋಡಿಸುವ ಜೋಡಿಗಳ ಜೋಕೆಯ ಘನರವಂಗಳೊಳು (ಉದ್ಯೋಗ ಪರ್ವ, ೧೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಒಂದು ಒಳ್ಳೆಯ ಗಳಿಗೆಯಲ್ಲಿ ಪಾಂಡವರ ಸೈನ್ಯವು ಹೊರಬೀಡು ಬಿಟ್ಟಿತು. ಯುದ್ಧಕ್ಕೆ ಹೊರಡಬೇಕೆಂದು ರಾಜರು ತಮ್ಮ ಪಾಳೆಯಗಳಲ್ಲಿ ಸಾರಿದರು. ಸೈನ್ಯ ಸಾಗರವು ಸಮುದ್ರದ ಮೊರೆತವನ್ನು ಮೀರಿಸುವ ಸದ್ದುಮಾಡುತ್ತಾ ಪ್ರಯಾಣ ಬೆಳೆಸಿತು.

ಅರ್ಥ:
ರೂಢಿಸು: ನೆಲಸು, ಇರು; ಸುಮುಹೂರ್ತ: ಒಳ್ಳೆಯ ಗಳಿಗೆ; ಹೊರ: ಆಚೆ; ಬೀಡು: ಗುಂಪು; ಬೀಡಬಿಟ್ಟರು: ಸೇರಿದರು; ರಣ: ಯುದ್ಧ; ಪಯಣ: ಪ್ರಯಾಣ; ಓಸುಗ: ಕಾರಣ, ಓಸ್ಕರ; ಸಾರು: ಹರಡು; ನೃಪ: ರಾಜ; ಪಾಳೆಯ: ಗುಂಪು; ಕೂಡು: ಸೇರು; ಆಹವ: ಯುದ್ಧ; ಸೈನ್ಯ: ಸೇನೆ, ಬಲ; ಸಾಗರ: ಸಮುದ್ರ; ನಡೆಗೊಂಡು: ಚಲಿಸುತ್ತ; ಉದಧಿ: ಸಾಗರ; ಓಡಿಸು: ಹೊರದೂಡು; ಜೋಡಿ: ಗುಂಪು; ಜೋಕೆ:ಎಚ್ಚರಿಕೆ, ಜಾಗರೂಕತೆ, ಸೊಗಸು; ಘನ: ಶ್ರೇಷ್ಠ; ರವ: ಧ್ವನಿ, ಶಬ್ದ;ಅಂಗಳ: ಆವರಣ;

ಪದವಿಂಗಡಣೆ:
ರೂಢಿಸಿದ +ಸುಮುಹೂರ್ತದೊಳು +ಹೊರ
ಬೀಡ +ಬಿಟ್ಟರು +ರಣಕೆ +ಪಯಣವ
ಮಾಡಲೋಸುಗ+ ಸಾರಿದರು +ನೃಪ+ಪಾಳೆ+ ಅಂಗಳೊಳು
ಕೂಡಿತ್+ಆಹವ +ಸೈನ್ಯ+ಸಾಗರ
ವೀಡಿರಿದು +ನಡೆಗೊಂಡುದ್+ಉದಧಿಯನ್
ಓಡಿಸುವ +ಜೋಡಿಗಳ+ ಜೋಕೆಯ +ಘನ+ರವಂಗಳೊಳು

ಅಚ್ಚರಿ:
(೧) ಪಾಳೆಯಂಗಳೊಳು, ರವಂಗಳೊಳು – ಪ್ರಾಸ ಪದ
(೨) ಉದಧಿ, ಸಾಗರ- ಸಮನಾರ್ಥಕ ಪದ ,೪,೫ ಸಾಲಿನ ಕೊನೆ ಪದ
(೩) ‘ಜ’ ಕಾರದ ಜೋಡಿ ಪದ – ಜೋಡಿಗಳ ಜೋಕೆಯ