ಪದ್ಯ ೩೫: ರಾಜರು ಯಾವ ವಿಷಯಕ್ಕೆ ಡಂಗುರ ಸಾರಿದರು?

ದರುಶನವನಿತ್ತಖಿಳ ಧರಣೀ
ಶ್ವರರು ಕಂಡರು ಸೂತ ಮಾಗಧ
ವರವಿಬುಧವೈತಾಳಿಕರ ಕಾರ್ಪಣ್ಯವಡಗಿದವು
ಧುರಕೆ ಧೃಷ್ಟದ್ಯುಮ್ನನಾಜ್ಞೆಯೊ
ಳಿರವು ನಿಮಗೆಂದೈದೆ ಭೂಪಾ
ಲರ ನಿವಾಸಂಗಳೊಳು ಹೊಯ್ಸಿದರಂದು ಡಂಗುರವ (ಉದ್ಯೋಗ ಪರ್ವ, ೧೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸಮಸ್ತ ರಾಜರೂ ಧೃಷ್ಟದ್ಯುಮ್ನನನ್ನು ಕಂಡು ಸನ್ಮಾನಿಸಿದರು. ಹೊಗಳುಭಟ್ಟರು, ಸೂತ, ವಂದಿ ಮಾಗಧ, ವಿದ್ವಾಂಸ, ವೈತಾಳಿಕರಿಗೆ ಹೇರಳವಾಗಿ ಹಣವನ್ನು ಕೊಟ್ಟರು. ಧೃಷ್ಟದ್ಯುಮ್ನನ ಆಜ್ಞೆಯಂತೆ ಯುದ್ಧದಲ್ಲಿ ನಡೆಯಬೇಕೆಂದು ಎಲ್ಲ ರಾಜರ ನಿವಾಸಗಳಲ್ಲೂ ಡಂಗುರ ಹೊಡಿಸಿದರು.

ಅರ್ಥ:
ದರುಶನ: ತೋರು; ಅಖಿಳ: ಎಲ್ಲಾ; ಧರಣಿ: ಭೂಮಿ; ಧರಣೀಶ್ವರರು: ರಾಜರು; ಕಂಡರು: ತೋರಿದರು; ಸೂತ, ವಂದಿ: ಹೊಗಳು ಭಟ್ಟ, ಮಾಗಧ: ಸ್ತುತಿಪಾಠಕ; ವಿಬುಧ: ಪಂಡಿತ, ವಿದ್ವಾಂಸ; ವೈತಾಳಿಕ: ಹೊಗಳುಭಟ್ಟ; ಕಾರ್ಪಣ್ಯ: ಬಡತನ; ಅಡಗು: ಅವಿತುಕೊಳ್ಳು; ಧುರ:ಯುದ್ಧ, ಕಾಳಗ; ಆಜ್ಞೆ: ಅಪ್ಪಣೆ; ಭೂಪಾಲ: ರಾಜ; ನಿವಾಸ: ಆಲಯ; ಹೊಯ್ಸು: ಹೊಡಿಸು; ಡಂಗುರ: ಪ್ರಚಾರಮಾಡು;

ಪದವಿಂಗಡಣೆ:
ದರುಶನವನಿತ್+ಅಖಿಳ +ಧರಣೀ
ಶ್ವರರು +ಕಂಡರು +ಸೂತ +ಮಾಗಧ
ವರ+ವಿಬುಧ+ ವೈತಾಳಿಕರ+ ಕಾರ್ಪಣ್ಯವ್+ಅಡಗಿದವು
ಧುರಕೆ+ ಧೃಷ್ಟದ್ಯುಮ್ನನ್+ಆಜ್ಞೆಯೊಳ್
ಇರವು+ ನಿಮಗೆಂದೈದೆ +ಭೂಪಾ
ಲರ +ನಿವಾಸಂಗಳೊಳು +ಹೊಯ್ಸಿದರಂದು+ ಡಂಗುರವ

ಅಚ್ಚರಿ:
(೧) ಹೇರಳವಾಗಿ ಹಣ ನೀಡಿದರು ಎಂದು ಹೇಳಲು – ಕಾರ್ಪಣ್ಯವಡಗಿದವು

ಪದ್ಯ ೩೪: ಧೃಷ್ಟದ್ಯುಮ್ನನು ಸೇನಾಧಿಪತಿ ಪಟ್ಟಕ್ಕೆ ಹೇಗೆ ಏರಿದ?

ಸೂಳವಿಸಿದವು ಕಟಕದೊಳು ನಿ
ಸ್ಸಾಳ ಕೋಟಿಗಳಳ್ಳಿರಿಯೆ ಹೆ
ಗ್ಗಾಳೆಗಳು ಸಾರಿದವು ಭಟರುಬ್ಬಟೆಯ ಬಿರುದುಗಳ
ಬಾಲಕಿಯರಾರತಿಯ ತಳಿಗೆಗ
ಳೋಳಿ ಸಂದಣಿಸಿದವು ವರ ಪಾಂ
ಚಾಲತನುಜಂಗೆಸಗಿದರು ಮೂರ್ಧಾಭೀಷೇಚನವ (ಉದ್ಯೋಗ ಪರ್ವ, ೧೨ ಸಂಧಿ, ಪದ್ಯ ೩೪)

ತಾತ್ಪರ್ಯ:
ಸೈನ್ಯದಲ್ಲಿ ಕಹಳೆಗಳು, ಹೆಗ್ಗಾಳೆಗಳು ಮೊಳಗಿದವು. ಯೋಧರ ಬಿರುದುಗಳ ಘೋಷಣೆ ಮೇಲೆದ್ದ್ತು. ತರುಣಿಯರು ಧೃಷ್ಟದ್ಯುಮ್ನನಿಗೆ ಆರತಿಗಳನ್ನು ಮಾಡಿದರು. ಧೃಷ್ಟದ್ಯುಮ್ನನಿಗೆ ಮೂರ್ಧಾಭಿಷೇಕವಾಯಿತು.

ಅರ್ಥ:
ಸೂಳು: ಆರ್ಭಟ, ಬೊಬ್ಬೆ; ಕಟಕ: ಸೈನ್ಯ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ:ಲೆಕ್ಕವಿಲ್ಲದ; ಅಳ್ಳಿರಿ: ನಡುಗಿಸು, ಚುಚ್ಚು; ಹೆಗ್ಗಾಳೆ: ದೊಡ್ಡ ಕಹಳೆ; ಸಾರು: ಹರಡು; ಭಟರು: ಸೈನಿಕ; ಉಬ್ಬಟೆ: ಸಾಹಸ, ಹೆಚ್ಚಳ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಾಲಕಿ: ಹುಡುಗಿ; ಆರತಿ: ನೀರಾಜನ ; ತಳಿಗೆ: ತಟ್ಟೆ; ಓಳಿ: ಸಮೂಹ; ಸಂದಣಿಸು: ದಟ್ಟವಾಗು, ಗುಂಪುಗೂಡು; ವರ: ಶ್ರೇಷ್ಠ; ತನುಜ: ಮಗ; ಎಸಗು: ಮಾಡು; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಅಭಿಷೇಚನ: ಮಂಗಳಸ್ನಾನ;

ಪದವಿಂಗಡಣೆ:
ಸೂಳವಿಸಿದವು+ ಕಟಕದೊಳು +ನಿ
ಸ್ಸಾಳ +ಕೋಟಿಗಳ್+ಅಳ್ಳಿರಿಯೆ +ಹೆ
ಗ್ಗಾಳೆಗಳು +ಸಾರಿದವು +ಭಟರ್+ಉಬ್ಬಟೆಯ +ಬಿರುದುಗಳ
ಬಾಲಕಿಯರ್+ಆರತಿಯ +ತಳಿಗೆಗಳ್
ಓಳಿ +ಸಂದಣಿಸಿದವು +ವರ +ಪಾಂ
ಚಾಲತನುಜಂಗ್+ಎಸಗಿದರು +ಮೂರ್ಧಾಭೀಷೇಚನವ

ಅಚ್ಚರಿ:
(೧) ಸೂಳ, ನಿಸ್ಸಾಳ, ಹೆಗ್ಗಾಳ – ಪ್ರಾಸಪದಗಳು