ಪದ್ಯ ೩೦: ಧರ್ಮರಾಯನು ದಳಪತಿಯ ಅವಶ್ಯಕತೆಯನ್ನು ಹೇಗೆ ವರ್ಣಿಸಿದನು?

ಪರಿಮಿತಕೆ ತನ್ನಾಪ್ತ ಸಚಿವರ
ಕರೆಸಿಕೊಂಡನು ಕೃಷ್ಣರಾಯಂ
ಗರಸ ಬಿನ್ನಹ ಮಾಡಿದನು ನೃಪಕಾರ್ಯ ಸಂಗತಿಯ
ಧುರಕೆ ಸೇನಾನಾಥರಿಲ್ಲದೆ
ನೆರೆದ ಬಲ ಸಾಲಿರುಹೆ ಮುರಿದೊಡೆ
ಹರೆವವೊಲು ಹುರುಳಿಲ್ಲ ದಳಪತಿ ಯಾವನಹನೆಂದ (ಉದ್ಯೋಗ ಪರ್ವ, ೧೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಸಚಿವರ ಪರಿಮಿತಿ ಸಭೆಯನ್ನು ಕರೆದು ಕೃಷ್ಣನಲ್ಲಿ ವಿಜ್ಞಾಪಿಸಿಕೊಂಡನು, ಯುದ್ಧದಲ್ಲಿ ಸೈನ್ಯಕೊಬ್ಬ ಸೇನಾಪತಿಯಿರಬೇಕು, ಇಲ್ಲದಿದ್ದರೆ ಸಾಲು ಕಟ್ಟಿದ ಇರುವೆಗಳ ಸಾಲುಮುರಿದರೆ, ಇರುವೆಗಳು ಎಲ್ಲೆಂದರಲ್ಲಿಗೆ ಹೋಗುವಂತೆ ಸತ್ವವೇ ಕುಂದಿ ಹೋಗುತ್ತದೆ, ಅದಕ್ಕಾಗಿ ಯಾರು ದಳಪತಿಯಾಗಬೇಕೆಂದು ಕೇಳಿದನು.

ಅರ್ಥ:
ಪರಿಮಿತಿ: ಎಲ್ಲೆ, ಮೇರೆ; ಆಪ್ತ: ಹತ್ತಿರದವ; ಸಚಿವ: ಮಂತ್ರಿ; ಕರೆಸು: ಬರೆಮಾಡು; ರಾಯ: ರಾಜ; ಅರಸ: ರಾಜ; ಬಿನ್ನಹ: ಕೋರಿಕೆ; ನೃಪ: ರಾಜ; ಕಾರ್ಯ: ಕೆಲಸ; ಸಂಗತಿ: ವಿವರ, ಸಮಾಚಾರ; ಧುರ: ಯುದ್ಧ, ಕಾಳಗ; ಸೇನ: ಸೈನ್ಯ; ಅನಾಥ: ತಬ್ಬಲಿ, ನಿರ್ಗತಿಕ; ನೆರೆ: ಗುಂಪು; ಬಲ: ಶಕ್ತಿ, ಸೈನ್ಯ; ಸಾಲು: ರೇಖೆ; ಇರುಹೆ: ಇರುವೆ; ಮುರಿ: ಸೀಳು; ಹರಿ: ಚಲಿಸು, ಪ್ರವಹಿಸು; ಹುರುಳು: ಸತ್ತ್ವ, ಸಾರ; ದಳಪತಿ: ಸೇನಾಧಿಪತಿ; ಬೇಕು: ಇಚ್ಛಿಸು; ಯಾವನು: ಯಾರು;

ಪದವಿಂಗಡಣೆ:
ಪರಿಮಿತಕೆ +ತನ್+ಆಪ್ತ +ಸಚಿವರ
ಕರೆಸಿಕೊಂಡನು +ಕೃಷ್ಣ+ರಾಯಂಗ್
ಅರಸ+ ಬಿನ್ನಹ +ಮಾಡಿದನು +ನೃಪ+ಕಾರ್ಯ +ಸಂಗತಿಯ
ಧುರಕೆ+ ಸೇನ+ಅನಾಥರಿಲ್ಲದೆ
ನೆರೆದ+ ಬಲ +ಸಾಲ್+ಇರುಹೆ +ಮುರಿದೊಡೆ
ಹರೆವವೊಲು +ಹುರುಳಿಲ್ಲ +ದಳಪತಿ+ ಯಾವನಹನೆಂದ

ಅಚ್ಚರಿ:
(೧) ರಾಯ, ಅರಸ, ನೃಪ – ಸಮನಾರ್ಥಕ ಪದಗಳು
(೨) ‘ಹ’ ಕಾರದ ಜೋಡಿ ಪದ – ಹರೆವವೊಲು ಹುರುಳಿಲ್ಲ

ಪದ್ಯ ೨೯: ಪಾಂಡವರು ಯಾವ ಊರನ್ನು ಸೇರಿದರು?

ಬಲದ ದೆಖ್ಖಾಳವನು ನೋಡಿದ
ರೊಲವಿನಲಿ ನಿಜಸೇನೆ ಸಹಿತತಿ
ಬಲುರುಪಪ್ಲವ್ಯಕ್ಕೆ ಬಂದರು ಹೊಕ್ಕರಾಲಯವ
ಬಳಿಕ ಸುಮುಹೂರ್ತದಲಿ ಹೊರಗುಡಿ
ಗಳನು ಹಾಯ್ಕಿದರಂದು ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ (ಉದ್ಯೋಗ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ತಮ್ಮ ಮಹಾಸೈನ್ಯವನ್ನು ಅದರ ಬಲವನ್ನೂ ನೋಡಿ ಪಾಂಡವರು ಉಪಪ್ಲವ್ಯ ಪಟ್ಟಣಕ್ಕೆ ಬಂದು ಮನೆಗಳನ್ನು ಹೊಕ್ಕರು. ಬಳಿಕ ಒಳ್ಳೆಯ ಸಮಯವನ್ನು ನೋಡಿ ಶ್ರೀಕೃಷ್ಣನ ಅಪ್ಪಣೆಯಂತೆ ಹೊರಬೀಡನ್ನು ಹಾಕಿದರು.

ಅರ್ಥ:
ಬಲ: ಶಕ್ತಿ; ದೆಖ್ಖಾಳ: ಗೊಂದಲ, ಗಲಭೆ; ನೋಡು: ಗೋಚರ; ಒಲವು: ಪ್ರೀತಿ; ನಿಜ: ದಿಟ; ಸೇನೆ: ಸೈನ್ಯ; ಸಹಿತ: ಜೊತೆ; ಅತಿ: ಬಹಳ; ಬಲ: ಸೈನ್ಯ; ಉಪಪ್ಲವ್ಯ: ಪಟ್ಟಣದ ಹೆಸರು; ಬಂದು: ಆಗಮಿಸಿ; ಹೊಕ್ಕು: ಸೇರು; ಆಲಯ: ಮನೆ; ಬಳಿಕ: ನಂತರ; ಸುಮುಹೂರ್ತ: ಒಳ್ಳೆಯ ಗಳಿಗೆ; ಹೊರ: ಆಚೆ; ಗುಡಿ: ಬಿಡಾರ; ಹಾಯ್ಕು: ಹಾಕು, ನಿರ್ಮಿಸು; ಕುಲ: ವಂಶ; ತಿಲಕ: ಶ್ರೇಷ್ಠ; ಕರುಣ: ದಯೆ;

ಪದವಿಂಗಡಣೆ:
ಬಲದ +ದೆಖ್ಖಾಳವನು +ನೋಡಿದರ್
ಒಲವಿನಲಿ +ನಿಜಸೇನೆ+ ಸಹಿತ್+ಅತಿ
ಬಲುರ್+ಉಪಪ್ಲವ್ಯಕ್ಕೆ +ಬಂದರು +ಹೊಕ್ಕರ್+ಆಲಯವ
ಬಳಿಕ +ಸುಮುಹೂರ್ತದಲಿ +ಹೊರಗುಡಿ
ಗಳನು +ಹಾಯ್ಕಿದರ್+ಅಂದು +ಯದುಕುಲ
ತಿಲಕ +ಗದುಗಿನ+ ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ಕೃಷ್ಣನನ್ನು ಯದುಕುಲತಿಲಕ, ವೀರನಾರಾಯಣ ಎಂದು ಕರೆದಿರುವುದು;
(೨) ಬಲ – ೧, ೩ ಸಾಲಿನ ಮೊದಲ ಪದ

ಪದ್ಯ ೨೮: ಘಟೋತ್ಕಚನ ಆಗಮನ ಹೇಗಿತ್ತು?

ಕಾರಿರುಳ ಪಟ್ಟಣಕೆ ಚಂದ್ರನ
ತೋರಣವ ಬಿಗಿದಂತೆ ದಾಡೆಗ
ಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ
ಭಾರಿ ದೇಹನು ಭಟಭಯಂಕರ
ತೋರಹತ್ತನು ದೈತ್ಯಕುಲ ಪರಿ
ವಾರ ಬಹಳದಿ ಬಂದು ಕಂಡನು ಕಲಿ ಘಟೋತ್ಕಚನು (ಉದ್ಯೋಗ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕಪ್ಪಾದ ರಾತ್ರಿಯ ಪಟ್ಟಣಕ್ಕೆ ಚಂದ್ರನು ತೋರಣವನ್ನು ಕಟ್ಟಿದರೋ ಎಂಬಂತೆ ಕಪ್ಪು ದೇಹ, ಹೊಳೆವ ದಾಡೆ ಹಲ್ಲುಗಳು, ಭಾರಿದೇಹ, ತೋರ ಹಸ್ತ, ಭಟರಿಗೆ ಭಯಂಕರನಾದ ಘಟೋತ್ಕಚನು ಬಂದು ಪಾಂಡವರನ್ನು ಕಂಡನು.

ಅರ್ಥ:
ಇರುಳು: ರಾತ್ರಿ; ಕಾರಿರುಳು: ಕಾಳರಾತ್ರಿ; ಪಟ್ಟಣ: ಊರು; ಚಂದ್ರ: ಶಶಿ; ತೋರಣ: ಹೊರಬಾಗಿಲು , ಅಲಂಕಾರಕ್ಕಾಗಿ ಬಾಗಿಲಲ್ಲಿ ಕಟ್ಟುವ ತಳಿರು; ಬಿಗಿ: ಕಟ್ಟು; ದಾಡೆ: ದವಡೆ, ದಂತ; ಓರಣ: ಕ್ರಮ, ಸಾಲು, ಅಚ್ಚುಕಟ್ಟು; ಹೊಳಹು: ಪ್ರಕಾಶ, ಕಾಂತಿ; ಹೊಗರು: ಕಾಂತಿ, ಪ್ರಕಾಶ, ಹೆಚ್ಚಳ; ಕಪ್ಪು: ಕರಿ; ಭಾರಿ: ದೊಡ್ಡ; ದೇಹ: ತನು, ಕಾಯ; ಭಟ: ಶೂರ, ಪರಾಕ್ರಮಿ; ಭಯಂಕರ: ಸಾಹಸಿ, ಗಟ್ಟಿಗ; ತೋರು: ಗೋಚರಿಸು; ದೈತ್ಯ: ರಾಕ್ಷಸ; ಕುಲ: ವಂಶ; ಪರಿವಾರ: ಪರಿಜನ, ಕುಟುಂಬ; ಬಹಳ: ತುಂಬ; ಬಂದು: ಆಗಮಿಸಿ; ಕಂಡು: ನೋಡು; ಕಲಿ: ಶೂರ;

ಪದವಿಂಗಡಣೆ:
ಕಾರಿರುಳ+ ಪಟ್ಟಣಕೆ+ ಚಂದ್ರನ
ತೋರಣವ +ಬಿಗಿದಂತೆ +ದಾಡೆಗಳ್
ಓರಣದ +ಹೊಳಹುಗಳ+ ಹೊಗರಿಡುವ್+ಒಡಲ +ಕಪ್ಪುಗಳ
ಭಾರಿ +ದೇಹನು +ಭಟಭಯಂಕರ
ತೋರಹತ್ತನು +ದೈತ್ಯಕುಲ+ ಪರಿ
ವಾರ +ಬಹಳದಿ+ ಬಂದು +ಕಂಡನು +ಕಲಿ +ಘಟೋತ್ಕಚನು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾರಿರುಳ ಪಟ್ಟಣಕೆ ಚಂದ್ರನ ತೋರಣವ ಬಿಗಿದಂತೆ
(೨) ಘಟೋತ್ಕಚನ ವಿವರಣೆ – ದಾಡೆಗಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ
ಭಾರಿ ದೇಹನು ಭಟಭಯಂಕರ ತೋರಹತ್ತನು