ಪದ್ಯ ೬೦: ದುರ್ಯೋಧನನು ತನ್ನ ಪಾದಕ್ಕೆ ಬಿದ್ದುದನ್ನು ನೋಡಿ ಕೃಷ್ಣನು ಏನು ಹೇಳಿದನು?

ಧರಣಿಪತಿ ಸಿಂಹಾಸನದ ಮೇ
ಲಿರದೆ ಬಹರೇ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ
ಸುರನದೀಸುತ ಕೈಗುಡಲು ಕೇ
ಸರಿಯ ಪೀಠಕೆ ದೇವ ಬಂದನು
ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ (ಉದ್ಯೋಗ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೂಮಿಯನ್ನಾಳುವ ರಾಜನು ಸಿಂಹಾಸನದ ಮೇಲಿರದೆ ಹೀಗೆ ನನ್ನ ಕಾಲ ಬಳಿ ಎರಗುವುದು ಸರಿಯೇ, ಅಯ್ಯೋ ತಾಪ್ಪಾಯಿತಲ್ಲ, ನಾವೆ ನಿಮ್ಮ ಬಳಿ ಬಂದು ಆಶೀರ್ವದಿಸುತ್ತಿದ್ದೆವು ಎಂದು ಹೇಳುತ್ತಾ ದುರ್ಯೋಧನನ ತಲೆಯನ್ನು ಸವರಿಸುತ್ತಾ ಮೇಲೇಳಿಸಿದನು. ಭೀಷ್ಮರು ತಮ್ಮ ಹಸ್ತವನ್ನು ಚಾಚಿ ಕೃಷ್ಣನ ಆಸನವನ್ನು ತೋರಲು, ಕೃಷ್ಣನು ತನ್ನ ಸಿಂಹಾಸನಕ್ಕೆ ಬರಲು ಕುರುಕುಲದ ಶ್ರೇಷ್ಠರಿಂದ ಸನ್ಮಾನವನ್ನು ಸ್ವೀಕರಿಸಿದನು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಸಿಂಹಾಸನ: ರಾಜರು ಕುಳಿತುಕೊಳ್ಳುವ ಆಸನ; ಮೇಲೆ: ಅಗ್ರಭಾಗ; ಬಹರು: ಬರುವುದು; ಹರಸು: ಆಶೀರ್ವದಿಸು; ತಪ್ಪು: ಸರಿಯಾಗದ; ಎತ್ತು: ಮೇಲೇಳಿಸು; ಮಸ್ತಕ: ಶಿರ, ತಲೆ; ಸುರನದಿ: ಗಂಗೆ; ಸುತ: ಮಗ; ಸುರನದೀಸುತ: ಭೀಷ್ಮ; ಕೈ: ಹಸ್ತ; ಕೈಗುಡಲು: ಹಸ್ತವನ್ನು ನೀಡಲು; ಕೇಸರಿ: ಸಿಂಹ; ಪೀಠ: ಆಸನ; ದೇವ: ಭಗವಂತ; ಬಂದು: ಆಗಮಿಸು; ಅಗ್ರಣಿ: ಶ್ರೇಷ್ಠರು; ಕುಲ: ವಂಶ; ಸನ್ಮಾನ: ಗೌರವ; ಕೈಕೊಳುತ: ಸ್ವೀಕರಿಸು;

ಪದವಿಂಗಡಣೆ:
ಧರಣಿಪತಿ +ಸಿಂಹಾಸನದ+ ಮೇ
ಲಿರದೆ +ಬಹರೇ +ನಾವು +ಬಂದೇ
ಹರಸುವೆವು +ತಪ್ಪಾವುದ್+ಎನುತ್+ಎತ್ತಿದನು +ಮಸ್ತಕವ
ಸುರನದೀಸುತ +ಕೈಗುಡಲು +ಕೇ
ಸರಿಯ +ಪೀಠಕೆ +ದೇವ +ಬಂದನು
ಕುರುಕುಲ+ಅಗ್ರಣಿಗಳ+ ಸುಸನ್ಮಾನವನು +ಕೈಕೊಳುತ

ಅಚ್ಚರಿ:
(೧) ಸಿಂಹಾಸನ, ಕೇಸರಿಯ ಪೀಠ – ಸಮನಾರ್ಥಕ ಪದ

ಪದ್ಯ ೫೯: ಕೃಷ್ಣನನ್ನು ನೋಡಿ ದುರ್ಯೋಧನನು ಏನು ಮಾಡಿದನು?

ಸೆಣಸು ಸೇರದ ದೇವನಿದಿರಲಿ
ಮಣಿಯದಾತನ ಕಾಣುತವೆ ಧಾ
ರುಣಿಯನೊತ್ತಿದನಂಗುಟದ ತುದಿಯಿಂದ ನಸುನಗುತ
ಮಣಿಖಚಿತ ಕಾಂಚನದ ಪೀಠದ
ಗೊಣಸು ಮುರಿದುದು ಮೇಲೆ ಸುರ ಸಂ
ದಣಿಗಳಾ ಎನೆ ಕವಿದು ಬಿದ್ದನು ಹರಿಯ ಚರಣದಲಿ (ಉದ್ಯೋಗ ಪರ್ವ, ೮ ಸಂಧಿ, ೫೯ ಪದ್ಯ)

ತಾತ್ಪರ್ಯ:
ಮತ್ಸರ ಹಗೆತನವನ್ನು ತೋರದ/ತಿಳಿಯದ ಭಗವಂತನ ಎದುರಿಗೆ ನಮಸ್ಕರಿಸದೆ (ಬಾಗದೆ) ಆತನನ್ನು ನೋಡಿದ ಕ್ಷಣವೇ ಕೋಪಗೊಂಡು ಭೂಮಿಯನ್ನು ತನ್ನ ಕಾಲಿನ ಹೆಬ್ಬೆರಳಿನಿಂದ ನಗುತ್ತಲೇ ತುಳಿದನು. ಅವನ ತುಳಿತದ ಭಾರಕ್ಕೆ ರತ್ನಾಭರಣಗಳಿಂದ ಕೂಡಿದ ಪೀಠದ ಒಂದು ಕಾಲು ಮುರಿಯಿತು, ಆಗಸದಲ್ಲಿ ಸುರರ ಗುಂಪು ಏನಾಯಿತು ಎಂದು ನೋಡಲು ದುರ್ಯೋಧನನು ಅವನ ಆಸನದಿಂದ ಮುಗ್ಗುರಿಸಿ ಕೃಷ್ಣನ ಪಾದದ ಬಳಿ ಬಿದ್ದನು.

ಅರ್ಥ:
ಸೆಣಸು: ವಿರೋಧ, ಪ್ರತಿಭಟನೆ, ಅಸೂಯೆ; ಸೇರು: ಜೊತೆಗೂಡು; ದೇವ: ಭಗವಂತ; ಇದಿರು: ಎದುರು; ಮಣಿ: ಬಾಗು, ಬಗ್ಗು; ಕಾಣು: ತೋರು; ಧಾರುಣಿ: ಭೂಮಿ; ಒತ್ತು: ಮುತ್ತು, ಚುಚ್ಚು; ಅಂಗುಟ: ಬೆರಳು; ತುದಿ: ಅಗ್ರ; ನಸುನಗು: ಮಂದಸ್ಮಿತ; ಮಣಿಖಚಿತ: ರತ್ನಗಳಿಂದ ಕೂಡಿದ; ಕಾಂಚನ: ಚಿನ್ನ; ಪೀಠ: ಆಸನ; ಗೊಣಸು: ಕೊಂಡಿ, ಸರಪಣಿಯ ಕುಣಿಕೆ; ಮುರಿ: ಸೀಳು; ಸುರ: ದೇವತೆಗಳು; ಮೇಲೆ: ಆಗಸದಲ್ಲಿ; ಸಂದಣಿ: ಗುಂಪು; ಕವಿ: ಮುಸುಕು, ದಟ್ಟವಾಗು; ಬಿದ್ದ: ಕೆಳಗೆ ಬೀಳು; ಹರಿ: ವಿಷ್ಣು, ಕೃಷ್ಣ; ಚರಣ: ಪಾದ;

ಪದವಿಂಗಡಣೆ:
ಸೆಣಸು +ಸೇರದ+ ದೇವನ್+ಇದಿರಲಿ
ಮಣಿಯದ್+ಆತನ+ ಕಾಣುತವೆ+ ಧಾ
ರುಣಿಯನ್+ಒತ್ತಿದನ್+ಅಂಗುಟದ+ ತುದಿಯಿಂದ +ನಸುನಗುತ
ಮಣಿಖಚಿತ+ ಕಾಂಚನದ +ಪೀಠದ
ಗೊಣಸು +ಮುರಿದುದು +ಮೇಲೆ +ಸುರ +ಸಂ
ದಣಿಗಳ್+ಆ+ ಎನೆ +ಕವಿದು+ ಬಿದ್ದನು +ಹರಿಯ+ ಚರಣದಲಿ

ಅಚ್ಚರಿ:
(೧) ಹೊರಗೆ ನಗು ಒಳಗೆ ಮತ್ಸರವನ್ನು ಚಿತ್ರಿಸಿರುವ ಬಗೆ – ಸೆಣಸು ಸೇರದ ದೇವನಿದಿರಲಿ
ಮಣಿಯದಾತನ ಕಾಣುತವೆ ಧಾರುಣಿಯನೊತ್ತಿದನಂಗುಟದ ತುದಿಯಿಂದ ನಸುನಗುತ
(೨) ಸಿಂಹಾಸನದ ವರ್ಣನೆ – ಮಣಿಖಚಿತ ಕಾಂಚನದ ಪೀಠ
(೩) ಮಣಿ, ಧಾರುಣಿ, ಸಂದಣಿ; ಸೆಣಸು, ಗೊಣಸು – ಪ್ರಾಸಪದಗಳು
(೪) ಮಣಿ – ೨ ರೀತಿ ಅರ್ಥಬರುವಂತೆ ಬಳಸಿರುವುದು, ೨, ೪ ಸಾಲಿನ ಮೊದಲ ಪದ

ಪದ್ಯ ೫೮: ಕೃಷ್ಣನನ್ನು ನೋಡಿ ಯಾರು ತನ್ನಾಸನದಿಂದ ಇಳಿಯಲಿಲ್ಲ?

ಸಮರ ಸರ್ವಜ್ಞರುಗಳಂಘ್ರಿಗೆ
ನಮಿಸಿದರು ಬಹಳೋಲಗದ ಸಂ
ಭ್ರಮದ ಸಿರಿ ತಲೆವಾಗುತಿರ್ದುದು ನೊಸಲ ಕೈಗಳಲಿ
ಕಮಲನಯನದ ದೇವನೇ ಸಾ
ಕೆಮಗೆ ಮಾಡುವುದೇನೆನುತ ತ
ತ್ಕುಮತಿ ಕೌರವನಿಳಿಯದಿರ್ದನು ಸಿಂಹವಿಷ್ಟರವ (ಉದ್ಯೋಗ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಕೃಷ್ಣನ ಆಗಮನಕ್ಕೆ ಯುದ್ಧಪರಿಣಿತರೆಲ್ಲರೂ ಕೃಷ್ಣನ ಪಾದಕಮಲಗಳಿಗೆ ನಮಿಸಿದರು, ಓಲಗದಲ್ಲಿದ್ದ ಎಲ್ಲರೂ ಶಿರಬಾಗಿ ತಮ್ಮ ಹಣೆಯನ್ನು ಹಸ್ತದ ಬಳಿ ತಂದರು (ನಮಸ್ಕರಿಸಿದರು), ಕಮಲದಂತ ಕಣ್ಣುಳ್ಳ ಕೃಷ್ಣನೇ ನಮಗೆ ಸಾಕು, ನಾವು ಮಾಡುವುದಾದರೂ ಇನ್ನೇನು ಎಂದು ಹೇಳುತ್ತಿರಲು, ದುಷ್ಟಬುದ್ಧಿಯ ದುರ್ಯೋಧನನು ಮಾತ್ರ ತನ್ನ ಸಿಂಹಾಸನದಿಂದ ಕೆಳಗೆ ಇಳಿಯಲಿಲ್ಲ.

ಅರ್ಥ:
ಸಮರ: ಯುದ್ಧ; ಸರ್ವಜ್ಞ: ಎಲ್ಲಾ ತಿಳಿದವ; ಅಂಘ್ರಿ: ಪಾದ; ನಮಿಸು: ಎರಗು, ವಂದಿಸು; ಬಹಳ: ತುಂಬ; ಓಲಗ: ದರ್ಬಾರು; ಸಂಭ್ರಮ: ಸಂತಸ; ಸಿರಿ: ಐಶ್ವರ್ಯ; ತಲೆ: ಶಿರ; ನೊಸಲು: ಹಣೆ; ಕೈ: ಹಸ್ತ; ಕಮಲ: ತಾವರೆ;ನಯನ: ಕಣ್ಣು; ದೇವ: ಭಗವಂತ; ಸಾಕು: ಇನ್ನು ಬೇಡ; ಎಮಗೆ: ನಮಗೆ; ಕುಮತಿ: ಕೆಟ್ಟಬುದ್ಧಿ; ಇಳಿ: ಕೆಳಗೆ ಬಾ; ವಿಷ್ಟರ: ಆಸನ;

ಪದವಿಂಗಡಣೆ:
ಸಮರ +ಸರ್ವಜ್ಞರುಗಳ್+ಅಂಘ್ರಿಗೆ
ನಮಿಸಿದರು +ಬಹಳ+ಓಲಗದ +ಸಂ
ಭ್ರಮದ +ಸಿರಿ +ತಲೆವಾಗುತಿರ್ದುದು +ನೊಸಲ +ಕೈಗಳಲಿ
ಕಮಲನಯನದ+ ದೇವನೇ +ಸಾ
ಕೆಮಗೆ +ಮಾಡುವುದೇನ್+ಎನುತ +ತತ್
ಕುಮತಿ+ ಕೌರವನ್+ಇಳಿಯದಿರ್ದನು +ಸಿಂಹ+ವಿಷ್ಟರವ

ಅಚ್ಚರಿ:
(೧) ನಮಸ್ಕರಿಸಿದ ಪರಿ – ಓಲಗದ ಸಂಭ್ರಮದ ಸಿರಿ ತಲೆವಾಗುತಿರ್ದುದು ನೊಸಲ ಕೈಗಳಲಿ
(೨) ಸಮರ ಸರ್ವಜ್ಞರು; ಕುಮತಿ ಕೌರವ – ಜೋಡಿ ಅಕ್ಷರಗಳ ಪದ ಬಳಕೆ

ಪದ್ಯ ೫೭: ಕೃಷ್ಣನು ರಥದಿಂದ ಹೇಗೆ ಇಳಿದನು?

ಎಂದು ಗಂಗಾನಂದನನು ನಲ
ವಿಂದ ಕೈಗೊಡೆ ಸುರಗಿರಿಯ ತುದಿ
ಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
ಅಂದು ನೀಲಾಚಲ ನಿಕಾಯದ
ಸೌಂದರಾಂಗದ ಕೌಸ್ತುಭ ಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ (ಉದ್ಯೋಗ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎಲ್ಲರೂ ಕೃಷ್ಣನಿಗೆ ಎರಗಿದ ನಂತರ ಭೀಷ್ಮರು ಕೃಷ್ಣನನ್ನು ರಥದಿಂದ ಇಳಿಸಲು ತಮ್ಮ ಹಸ್ತವನ್ನು ಚಾಚಲು, ಮೇರುಪರ್ವತದ ತುದಿಯಿಂದ ಚಿಕ್ಕ ಮಿಂಚುಗಳು ಭೂಮಿಗೆ ಬರುವಂತೆ ಅಂದು ನೀಲವರ್ಣದ ಸುಂದರಾಂಗ ಕೃಷ್ಣನ ಧರಿಸಿದ ಕೌಸ್ತುಭಮಣಿಯ ಪ್ರಭೆಯು ಪ್ರಜ್ವಲಿಸಿ ಚಿನ್ನದ ರಥದಿಂದ ಕೃಷ್ಣನು ಇಳಿದನು.

ಅರ್ಥ:
ಗಂಗಾನಂದನ: ಭೀಷ್ಮ; ನಂದನ: ಮಗ; ನಲವು: ಸಂತೋಷ; ಕೈ: ಕರ, ಹಸ್ತ; ಕೊಡು: ನೀಡು; ಸುರ: ದೇವ; ಗಿರಿ: ಬೆಟ್ಟ; ತುದಿ: ಅಗ್ರಭಾಗ; ಮಿಂಚು: ಹೊಳಪು, ಕಾಂತಿ; ಮರಿ: ಚಿಕ್ಕ; ಮುಗಿಲು: ಆಗಸ; ಇಳಿ: ಕೆಳಗೆ ಬಾ; ಭೂತಳ: ಭೂಮಿ; ಅಚಲ: ಬೆಟ್ಟ; ನಿಕಾಯ: ದೇಹ, ಶರೀರ; ಸೌಂದರ: ಚೆಲುವು; ಅಂಗ: ಭಾಗ; ಕೌಸ್ತುಭ: ವಿಷ್ಣುವಿನ ಎದೆಯನ್ನು ಅಲಂಕರಿಸಿರುವ ಒಂದು ರತ್ನ; ಪ್ರಭೆ: ಕಾಂತಿ; ಕಾಂಚನ: ಚಿನ್ನ; ರಥ: ಬಂಡಿ; ದಾನವ: ರಾಕ್ಷಸ; ಅರಾತಿ: ಶತ್ರು; ಸುರಗಿರಿ: ಮೇರುಪರ್ವತ;

ಪದವಿಂಗಡಣೆ:
ಎಂದು +ಗಂಗಾ+ನಂದನನು +ನಲ
ವಿಂದ +ಕೈಗೊಡೆ +ಸುರಗಿರಿಯ +ತುದಿ
ಯಿಂದ +ಮರಿಮಿಂಚುಗಳ+ ಮುಗಿಲ್+ಇಳಿವಂತೆ+ ಭೂತಳಕೆ
ಅಂದು +ನೀಲ+ಅಚಲ+ ನಿಕಾಯದ
ಸೌಂದರಾಂಗದ+ ಕೌಸ್ತುಭ+ ಪ್ರಭೆ
ಯಿಂದ+ ಕಾಂಚನ +ರಥವನ್+ಇಳಿದನು+ ದಾನವ+ಅರಾತಿ

ಅಚ್ಚರಿ:
(೧) ಉಪಮಾನದ ಬಳಕೆ – ಸುರಗಿರಿಯ ತುದಿಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
(೨) ಕೃಷ್ಣನ ವರ್ಣನೆ – ನೀಲಾಚಲ ನಿಕಾಯದ ಸೌಂದರಾಂಗದ ಕೌಸ್ತುಭ ಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ