ಪದ್ಯ ೪೪: ದುರ್ಯೋಧನನ ಎಡಭಾಗದಲ್ಲಿ ಯಾರಿದ್ದರು?

ಎಳೆಯ ಮಿಂಚಿನ ಕುಡಿಯ ಸೂಸುವ
ನಳಿನದೃಶೆಯರು ಶಶಿಯ ಬಿಂಬವ
ಹಳಿವ ಹುರುಡಿಸುವಬುಜಮುಖಿಯರು ಕೋಮಲಾಂಗಿಯರು
ಸೆಳೆನಡುವಿನಗ್ಗಳೆಯರೊಪ್ಪುವ
ಕಳಶಕುಚೆಯರು ಜಘನ ಚಳ
ದಳಕಿಯರು ಕುರುರಾಯನೆಡವಂಕದಲಿ ಮೋಹಿದರು (ಉದ್ಯೋಗ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಚಿಕ್ಕದಾದ ಮಿಂಚಿನ ಕಾಂತಿಯನ್ನು ಬೀರುವ ಚೆಲುವೆಯರು, ಚಂದ್ರನ ಕಾಂತಿಯನ್ನೂ ಮೀರಿಸಿ ಪೈಪೋಟಿಯೊಡ್ಡುವ ಕಮಲಮುಖಿಯರು, ಮೃದುದೇಹವುಳ್ಳ ಸುಂದರಿಯರು, ಆಕರ್ಷಕ ನಡುವುಳ್ಳವರು, ಕಳಶವನ್ನು ಹೋಲುವ ಸ್ತನವುಳ್ಳ ಸುಂದರಿಯರು, ಮೋಹಕ ನಿತಂಬ ಮತ್ತು ಮುಂಗುರುಳುಳ್ಳ ಸುಂದರಿಯರು ಆಸ್ಥಾನದ ಎಡಭಾಗದಲ್ಲಿ ಶೋಭಿಸಿದರು.

ಅರ್ಥ:
ಎಳೆ: ಆಕರ್ಷಿಸು, ಚಿಕ್ಕದಾದ; ಮಿಂಚು: ಹೊಳಪು, ಕಾಂತಿ; ಕುಡಿ: ಚಿಗುರು; ಸೂಸು:ಎರಚು, ಚಲ್ಲು; ನಳಿನ: ಕಮಲ; ಶಶಿ: ಚಂದ್ರ; ಬಿಂಬ: ಕಾಂತಿ; ಹಳಿವ:ಮೀರು; ಹುರುಡಿಸು:ಪೈಪೋಟಿ ನಡೆಸು; ಅಬುಜ: ಕಮಲ; ಮುಖ: ಆನನ; ಕಮಲಮುಖಿ: ಕಮಲದಂತ ಮುಖವುಳ್ಳವರು, ಸುಂದರಿ; ಕೋಮಲಾಂಗಿ: ಸುಂದರಿ; ಅಂಗ: ತನು, ಭಾಗ; ಕೋಮಲ: ಮೃದು; ಸೆಳೆ: ಆಕರ್ಷಿಸು; ಅಗ್ಗ: ಶ್ರೇಷ್ಠತೆ; ಒಪ್ಪು: ಸಮ್ಮತಿ, ಚೆಲುವು; ಕಳಶ: ಕುಂಭ; ಕುಚ: ವಕ್ಷ, ಮೊಲೆ, ಸ್ತನ; ಜಘನ: ನಿತಂಬ,ಕಟಿ; ಚಳ:ಅಲುಗುವ; ಅಳಕ: ಮುಂಗುರುಳು; ಎಡ: ವಾಮಭಾಗ; ವಂಕ:ಬದಿ; ಮೋಹಿದ: ಅಡಸಿದ;

ಪದವಿಂಗಡಣೆ:
ಎಳೆಯ +ಮಿಂಚಿನ +ಕುಡಿಯ +ಸೂಸುವ
ನಳಿನ+ದೃಶೆಯರು +ಶಶಿಯ +ಬಿಂಬವ
ಹಳಿವ+ ಹುರುಡಿಸುವ್+ಅಬುಜ+ಮುಖಿಯರು +ಕೋಮಲಾಂಗಿಯರು
ಸೆಳೆನಡುವಿನ್+ಅಗ್ಗಳೆಯರ್+ಒಪ್ಪುವ
ಕಳಶ+ಕುಚೆಯರು +ಜಘನ +ಚಳ
ದಳಕಿಯರು +ಕುರುರಾಯನ್+ಎಡ+ವಂಕದಲಿ+ ಮೋಹಿದರು

ಅಚರಿ:
(೧) ಸೌಂದರ್ಯವನ್ನು ವರ್ಣಿಸುವ ಉಪಮಾನಗಳ ಪರ್ಯೋಗ – ಎಳೆಯ ಮಿಂಚಿನ ಕುಡಿಯ ಸೂಸುವ ನಳಿನದೃಶೆಯರು; ಶಶಿಯ ಬಿಂಬವ ಹಳಿವ ಹುರುಡಿಸುವಬುಜಮುಖಿಯರು; ಅಗ್ಗಳೆಯರೊಪ್ಪುವಕಳಶಕುಚೆಯರು; ಜಘನ ಚಳದಳಕಿಯರು
(೨) ನಳಿನ, ಅಬುಜ – ಸಮನಾರ್ಥಕ ಪದ

ಪದ್ಯ ೪೩: ಆಸ್ಥಾನದಲ್ಲಿದ್ದ ರಾಯಭಾರಿ ಮತ್ತು ವೀರರ ಗುಣವೆಂತಹುದು?

ನಡೆದು ಪರಮಂಡಲದ ರಾಯರ
ಜಡಿದು ಕಪ್ಪವ ತಪ್ಪ ಶಿಷ್ಟರ
ಗಡಣವೆಸೆದುದು ಪವನ ವೇಗದ ರಾಯಭಾರಿಗಳು
ಕಡುಗಿದರೆ ಕಾಲಂಗೆ ಬಿರುದಿನ
ತೊಡರನಿಕ್ಕುವ ಜವನ ದಾಡೆಯ
ತುಡುಕುವಗ್ಗದ ವೀರರೆಸೆದುದು ದಿಟ್ಟಿವಾರೆಯಲಿ (ಉದ್ಯೋಗ ಪರ್ವ, ೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಾಜನ ಆಜ್ಞೆಯನ್ನು ಪಾಲಿಸುವ ರಾಯಭಾರಿಗಳು ಗಾಳಿಯ ವೇಗದಲ್ಲಿ ಪರಮಂಡಲವನ್ನು ಹೊಕ್ಕು ಅಲ್ಲಿನ ರಾಜರನ್ನು ಜಡಿದು, ಕಪ್ಪವನ್ನು ಪಡೆದು ಒಳ್ಳೆಯವರ ಗುಂಪುನ್ನು ಸೇರಿಸುತ್ತಿದ್ದರು. ಕಪ್ಪವನ್ನು ಕೊಡಲಾಗದವರನ್ನು ಯಮನ ಬಿರುದಾವಳಿಗೆ ಸರಪಳಿಯಾಗಿ ಸೇರಿಸಿ ಯಮನ ಕೋರೆಹಲ್ಲುಗಳ ಜೊತೆ ಹೋರಾಡಲು ಸೇರಿಸುತ್ತಿದ ವೀರರು ಅವರ ಕುಡುನೋಟದಿಂದ ದುರ್ಯೋಧನನ ಸಭೆಯಲ್ಲಿ ಆಸೀನರಾಗಿದ್ದರು.

ಅರ್ಥ:
ನಡೆ: ಚಲಿಸು; ಪರ: ಬೇರೆ; ಮಂಡಲ: ಭೂಭಾಗ; ರಾಯ: ರಾಜ; ಜಡಿ: ಹೊಡೆ; ಕಪ್ಪ: ತೆರಿಗೆ, ಕಾಣಿಕೆ; ಶಿಷ್ಟ: ಒಳ್ಳೆಯವ; ಗಡಣ: ಗುಂಪು, ಸಮೂಹ; ಎಸೆ: ಶೋಭಿಸು; ಪವನ: ಗಾಳಿ; ವೇಗ: ಬಿರುಸು; ರಾಯಭಾರಿ: ರಾಜನ ಅಧಿಕಾರಿ; ಕಡುಗು: ಶಕ್ತಿಗುಂದು; ಕಾಲು: ಪಾದ, ಸಮಯ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ತೊಡರು: ಸರಪಳಿ, ಬಂಧನ; ಜವ: ಯಮ; ದಾಡೆ:ಕೋರೆಹಲ್ಲು; ತುಡುಕು: ಹೋರಾಡು, ಸೆಣಸು;ಅಗ್ಗ: ಶ್ರೇಷ್ಠ; ವೀರ: ಶೂರ; ದಿಟ್ಟಿವಾರೆ: ಕಡಗಣ್ಣೋಟ; ತಪ್ಪ: ಬಳಿಕ;

ಪದವಿಂಗಡಣೆ:
ನಡೆದು +ಪರ+ಮಂಡಲದ+ ರಾಯರ
ಜಡಿದು+ ಕಪ್ಪವ+ ತಪ್ಪ +ಶಿಷ್ಟರ
ಗಡಣವ್+ಎಸೆದುದು+ ಪವನ+ ವೇಗದ+ ರಾಯಭಾರಿಗಳು
ಕಡುಗಿದರೆ+ ಕಾಲಂಗೆ +ಬಿರುದಿನ
ತೊಡರನ್+ಇಕ್ಕುವ +ಜವನ+ ದಾಡೆಯ
ತುಡುಕುವ್+ಅಗ್ಗದ +ವೀರರ್+ಎಸೆದುದು +ದಿಟ್ಟಿವಾರೆಯಲಿ

ಅಚ್ಚರಿ:
(೧) ಕಾಲ, ಜವ – ಯಮನಿಗೆ ಬಳಸುವ ಪದಗಳು
(೨) ರಾಯಭಾರಿಗಳ ಗುಣವಾಚಕ – ಪವನವೇಗದ;
(೩) ವೀರರ ಕೂರುವ ಭಂಗಿ – ದಿಟ್ಟಿವಾರೆ

ಪದ್ಯ ೪೨: ಕೌರವನ ಆಸ್ಥಾನ ಹೇಗೆ ಕಾಣಿಸಿತು?

ಅತಿಮುದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರುಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ (ಉದ್ಯೋಗ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸೊಕ್ಕಿದ ದೇಹದಿಂದ ಕೂಡಿದ, ಅತಿ ಸಂತಸದಿಂದ ಲೀಲಾಜಾಲವಾಗಿ ಆನೆಗಳ ಕಿವಿಹಿಡಿದು ಎಳೆದು ಅಂಕುಶದಿಂದ ಅಂಜಿಸಿ ಅಕ್ಕಪಕ್ಕಕ್ಕೆ ಬಿಡುವ ಪಳಿಗಿದ ಶ್ರೇಷ್ಠ ಮಾವುತರು ದುರ್ಯೋಧನನ ಆಜ್ಞೆಯಲ್ಲಿ ಮೆರೆಯಲು ನೋಡುವವರಿಗೆ ಇಂದ್ರನ ಸಭೆಯೇ ಧರೆಗೆ ಕೌರವನ ಆಸ್ಥಾನವಾಗಿದಿಯೇ ಎಂದು ತೋರುತ್ತಿತ್ತು.

ಅರ್ಥ:
ಅತಿ: ತುಂಬ; ಮುದ: ಸಂತೋಷ; ತನು: ದೇಹ; ಸೊಕ್ಕು: ಅಮಲು, ಮದ; ಐರಾವತ: ಇಂದ್ರನ ಆನೆ; ಕಿವಿ: ಶ್ರವಣಸಾಧನವಾದ ಅವಯವ; ಎಳೆ: ಜಗ್ಗು; ದಿಗ್ಗಜ: ಅತಿಶ್ರೇಷ್ಠ;
ಭೂಭಾಗವನ್ನು ಹೊತ್ತಿರುವ ಎಂಟು ದಿಕ್ಕಿನ ಆನೆಗಳು; ತತಿ: ಗುಂಪು; ಅಮಳ: ನಿರ್ಮಲ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಅಂಜಿಸು: ಹೆದರಿಸು; ಕೆಲಬಲ: ಅಕ್ಕಪಕ್ಕ; ಬಿಡು: ತೊರೆ, ತ್ಯಜಿಸು; ನುತ: ಶ್ರೇಷ್ಠವಾದ; ಗಜ: ಆನೆ, ಕರಿ; ಆರೋಹಕ: ಹತ್ತುವವ; ಗಜಾರೋಹಕ: ಮಾವುತ; ಭೂಪತಿ: ರಾಜ; ಹೊರೆ: ಭಾರ; ಮೆರೆ: ಪ್ರಕಾಶಿಸು; ಅಮರಾವತಿ: ಇಂದ್ರನ ನಗರ; ರಾಯ: ರಾಜ; ಸಭೆ: ದರ್ಬಾರು; ಎಸೆ: ಶೋಭಿಸು; ಆಸ್ಥಾನ: ದರಬಾರು;

ಪದವಿಂಗಡಣೆ:
ಅತಿಮುದದಿ +ತನು +ಸೊಕ್ಕಿದ್+ಐರಾ
ವತವ +ಕಿವಿವಿಡಿದ್+ಎಳೆವ +ದಿಗ್ಗಜ
ತತಿಯನ್+ಅಮಳ+ಅಂಕುಶದಲ್+ಅಂಜಿಸಿ +ಕೆಲಬಲಕೆ +ಬಿಡುವ
ನುತ +ಗಜ+ಆರೋಹಕರು+ ಕುರುಭೂ
ಪತಿಯ +ಹೊರೆಯಲಿ +ಮೆರೆದರ್+ಅಮರಾ
ವತಿಯ +ರಾಯನ +ಸಭೆಯೊಲ್+ಎಸೆದುದು +ಕೌರವಾಸ್ಥಾನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುರುಭೂಪತಿಯ ಹೊರೆಯಲಿ ಮೆರೆದರಮರಾವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ
(೨) ‘ಅ’ ಕಾರದ ಪದ ಬಳಕೆ – ಅಮಳ, ಅಂಕುಶ, ಅಂಜಿಸಿ, ಅಮರಾವತಿ, ಅತಿ

ಪದ್ಯ ೪೧: ರಾವುತರು ಏನನ್ನು ಒಪ್ಪಿದರು?

ನಳನ ನಹುಷನ ಶಾಲಿಹೋತ್ರನ
ಬಲುಮೆಗಳು ಕಿರಿದೆಂಬ ವಿದ್ಯಾ
ನಿಳಯ ವರ ರೇವಂತನೇರಾಟವನು ನಸುನಗುತ
ಬಲಿದ ದೃಢ ವಾಘೆಗಳು ದೃಷ್ಟಾ
ವಳಿಯ ಹಯ ಪ್ರೌಢ ಪ್ರತಾಪರು
ಹೊಳೆವ ಮಕುಟದ ಸಾಲುಗಳಲೊಪ್ಪಿದರು ರಾವುತರು (ಉದ್ಯೋಗ ಪರ್ವ, ೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ನಳ, ನಹುಷ ಶಾಲಿಹೋತ್ರ ಇವರುಗಳ ಬಲವೆಲ್ಲವೂ ಅಲ್ಪವು (ಕಿರಿದು) ವಿದ್ಯೆಯ ಆಗರ ಶ್ರೇಷ್ಠನಾದ ರೇವಂತನ ಸ್ಪರ್ಧೆಯನ್ನು ನೋಡಿ ಬಲಿಷ್ಠವಾದ ಲಗಾಮನ್ನು, ನೋಡಲು ಸುಂದರವಾಗಿದ್ದ ಕುದುರೆಗಳು, ಅದನ್ನು ಓಡಿಸುವ ಮೆಚ್ಚುವಂತಹ ಪರಾಕ್ರಮಶಾಲಿಗಳು, ವಜ್ರಮಕುಟದಿಂದ ಪ್ರಕಾಶಮಾನವಾದ ಕಿರೀಟಗಳ ಸಾಲುಗಳನ್ನು ನಸುನಗುತ ರಾವುತರು ನೋಡುತ್ತಿದ್ದರು.

ಅರ್ಥ:
ಬಲುಮೆ: ಬಲ, ಶಕ್ತಿ; ಕಿರಿ: ಚಿಕ್ಕದು; ನಿಳಯ: ಆಲಯ; ಏರಾಟ: ಸ್ಪರ್ಧೆ, ಪೈಪೋಟಿ; ನಸು: ಸ್ವಲ್ಪ; ನಗು: ಸಂತೋಷ; ಬಲಿದ: ಗಟ್ಟಿಯಾದ; ದೃಢ: ಗಟ್ಟಿಯಾದುದು, ಬಲವಾದುದು; ವಾಘೆ: ಲಗಾಮು; ದೃಷ್ಟ: ಗೋಚರಿಸುವ; ಆವಳಿ: ಸಾಲು, ಗುಂಪು; ಹಯ: ಕುದುರೆ; ಪ್ರೌಢ: ಚೆನ್ನಾಗಿ ಬೆಳೆದ; ಪ್ರತಾಪ: ಪರಾಕ್ರಮ; ಹೊಳೆ: ಪ್ರಕಾಶಿಸು; ಮಕುಟ: ಕಿರೀಟ; ಸಾಲು: ಆವಳಿ; ಒಪ್ಪು: ಸಮ್ಮತಿಸು; ರಾವುತ: ಕುದುರೆ ಸವಾರ;

ಪದವಿಂಗಡಣೆ:
ನಳನ +ನಹುಷನ +ಶಾಲಿಹೋತ್ರನ
ಬಲುಮೆಗಳು +ಕಿರಿದೆಂಬ +ವಿದ್ಯಾ
ನಿಳಯ +ವರ +ರೇವಂತನ್+ಏರಾಟವನು +ನಸುನಗುತ
ಬಲಿದ +ದೃಢ +ವಾಘೆಗಳು +ದೃಷ್ಟಾ
ವಳಿಯ +ಹಯ +ಪ್ರೌಢ +ಪ್ರತಾಪರು
ಹೊಳೆವ +ಮಕುಟದ +ಸಾಲುಗಳಲ್+ಒಪ್ಪಿದರು +ರಾವುತರು

ಅಚ್ಚರಿ:
(೧) ಪರಾಕ್ರಮಶಾಲಿಗಳನ್ನು ಹೆಸರಿಸಿದ ಪದ್ಯ – ನಳ, ನಹುಷ, ಶಾಲಿಹೋತ್ರ, ರೇವಂತ