ಪದ್ಯ ೩೮: ಗಮಕಿಗಳು ಹೇಗೆ ಪ್ರಶಂಸೆ ಪಡೆಯುತ್ತಿದ್ದರು?

ನುಡಿದು ತಲೆದೂಗಿಸುವ ಮರೆಗ
ನ್ನಡಕೆ ಹಾ ಹಾಯೆನಿಸಿ ಮೆಚ್ಚನು
ಪಡೆದ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು
ಕೊಡುವ ಪದ್ಯಕೆ ಸುಪ್ರಮೇಯದ
ಗಡಣಕಬುಜಭವಾದಿ ವಿಭುಗಳು
ಬಿಡಿಸಲರಿದೆನಿಪತುಳ ತಾರ್ಕಿಕ ಜನಗಳೊಪ್ಪಿದರು (ಉದ್ಯೋಗ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮಾತನಾಡಿ ಅಹುದುದಹುದೆಂದು ತಲೆದೂಗಿಸಿ ರಹಸ್ಯವಾದ ಕನ್ನಡಕೆ ಹಾ ಹಾ ಎಂದು ಹೇಳಿ ಹೊಗಳಿಕೆಯನ್ನು ಪಡೆದು ವಾಗ್ಮಿಗಳು, ಓದಿ ಹೊಗಳಿಕೆಯನ್ನು ಪಡೆದ ಗಮಕಿಗಳು, ಕೊಡುವ ಪದ್ಯಕೆ ಸರಿಯಾಗಿ ವಿವೇಚಿಸಿ, ಪದಗಳನ್ನು ಕೂಡಿಸಿ ತಾವರೆಯ ಇರುವಿಕೆಯನ್ನು ತೋರುವ ಪ್ರಭು, ಬಿಡಿಸಿ ಅರ್ಥೈಸುವ ತಾರ್ಕಿಕ ಜನಗಳನ್ನು ಸಭೆಯಲ್ಲಿ ಒಪ್ಪಿದರು.

ಅರ್ಥ:
ನುಡಿ: ಮಾತು; ತಲೆ: ಶಿರ; ದೂಗಿಸು: ಅಲ್ಲಾಡಿಸು; ಮರೆಗನ್ನಡ: ರಹಸ್ಯವಾದ ಕನ್ನಡ; ಮೆಚ್ಚು: ಒಲುಮೆ, ಪ್ರೀತಿ; ಪಡೆ: ಸೈನ್ಯ, ಬಲ; ವಾಗ್ಮಿ: ಚೆನ್ನಾಗಿ ಮಾತನಾಡುವವನು; ಓದಿ: ತಿಳಿದು; ಹೊಗಳು: ಪ್ರಶಂಶಿಸು; ಗಮಕಿ: ಪದ್ಯಗಳನ್ನು ಹಾಡುವವರು; ಕೊಡು: ನೀಡು; ಪದ್ಯ: ಕಾವ್ಯ; ಪ್ರಮೇಯ: ವಿವೇಚಿಸಬೇಕಾದ, ಅಳೆಯಬಹುದಾದ; ಗಡಣ:ಕೂಡಿಸುವಿಕೆ; ಅಬುಜ: ತಾವರೆ; ಭವ: ಇರುವಿಕೆ, ಅಸ್ತಿತ್ವ; ವಿಭು:ದೇವರು, ಸರ್ವತ್ರವ್ಯಾಪ್ತ, ರಾಜ, ಪ್ರಭು; ಬಿಡಿಸು: ಕಳಚು, ಸಡಿಲಿಸು; ಅರಿ: ತಿಳಿ; ಅತುಳ: ಬಹಳ; ತಾರ್ಕಿಕ: ತರ್ಕಶಾಸ್ತ್ರವನ್ನು ತಿಳಿದವನು; ಜನ: ಮನುಷ್ಯ; ಒಪ್ಪು: ಸಮ್ಮತಿಸು;

ಪದವಿಂಗಡಣೆ:
ನುಡಿದು +ತಲೆದೂಗಿಸುವ+ ಮರೆ+
ಕನ್ನಡಕೆ +ಹಾ +ಹಾಯೆನಿಸಿ +ಮೆಚ್ಚನು
ಪಡೆದ+ ವಾಗ್ಮಿಗಳ್+ಓದಿ+ ಹೊಗಳಿಸಿಕೊಂಬ+ ಗಮಕಿಗಳು
ಕೊಡುವ +ಪದ್ಯಕೆ +ಸುಪ್ರಮೇಯದ
ಗಡಣಕ್+ಅಬುಜ+ಭವಾದಿ +ವಿಭುಗಳು
ಬಿಡಿಸಲ್+ಅರಿದ್+ಎನಿಪ್+ಅತುಳ +ತಾರ್ಕಿಕ +ಜನಗಳ್+ಒಪ್ಪಿದರು

ಅಚ್ಚರಿ:
(೧) ವಾಗ್ಮಿ, ಗಮಕಿ, ವಿಭು, ತಾರ್ಕಿಕ – ಜನಗಳ ಬಳಕೆ

ಪದ್ಯ ೩೭: ಎಂತಹ ಕವಿಗಳು ಸಭೆಯಲ್ಲಿದ್ದರು?

ಸಲೆ ಸಮಸ್ಯದನಂತ ಪದ್ಯವ
ಘಳಿಲನನ್ವೈಸುವ ಸುಕಾಂತಿಯ
ಲಲಿತ ಮಧುರ ಸಮಾಧಿ ಸುಕುಮಾರಾದಿ ರಚನೆಯಲಿ
ಹಲವುಪಮೆ ಉತ್ಪ್ರೇಕ್ಷೆ ರೂಪಕ
ಸುಲಲಿತಾಲಂಕೃತಿ ಚಮತ್ಕೃತಿ
ಗಳ ಚತುರ್ಭಾಷಾ ವಿಶಾರದ ಕವಿಗಳೊಪ್ಪಿದರು (ಉದ್ಯೋಗ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ವಿಸ್ತೀರ್ಣವಾಗಿ ರಚಿಸಬಲ್ಲ, ಸಾಹಿತ್ಯಾತ್ಮಕ ಸಮಸ್ಯೆಗಳನ್ನು ನಿವಾರಿಸಿ ಪದ್ಯಗಳನ್ನು ಹೊಂದಿಸುವ, ಹಿತವಾದ ಕಾಂತಿಯನ್ನು, ಚೆಲುವನ್ನು, ಸವಿಯನ್ನು, ಏಕಾಗ್ರತೆಯಲ್ಲಿ ಮೂಡಿಸುವ ಕೋಮಲತೆಯ ರಚನೆಯನ್ನು ಬರೆಯಬಲ್ಲ, ಹಲವಾರು ಉಪಮಾನ, ಉತ್ಪ್ರೇಕ್ಷೆ, ರೂಪಕಗಳನ್ನು ವಿಸ್ಮಯಗಳನ್ನು ಲೀಲಾಜಾಲವಾಗಿ ಅಲಂಕರಿಸಬಲ್ಲ ನಾಲ್ಕು ಭಾಷೆಗಳಲ್ಲಿ ಪಂಡಿತರಾದ ಕವಿವರ್ಯರು ಸಭೆಯನ್ನು ಅಲಂಕರಿಸಿದ್ದರು.

ಅರ್ಥ:
ಸಲೆ:ಒಂದೇ ಸಮನೆ, ವಿಸ್ತೀರ್ಣ; ಸಮಸ್ಯ: ಅಪೂರ್ಣವಾದುದನ್ನು ಪೂರ್ಣಗೊಳಿಸುವುದು, ತೊಡಕು; ಅನಂತ: ಅಸಂಖ್ಯವಾದ; ಪದ್ಯ: ಕಾವ್ಯ; ಅನ್ವೈಸು: ಹೊಂದಿಸು; ಸುಕಾಂತಿ: ಒಳ್ಳೆಯ ಪ್ರಕಾಶ; ಲಲಿತ: ಚೆಲುವು; ಮಧುರ: ಸಿಹಿ, ಸವಿ; ಸಮಾಧಿ: ಏಕಾಗ್ರತೆ, ತನ್ಮಯತೆ; ಸುಕುಮಾರ: ಮೃದುವಾದ ಅಕ್ಷರ ಯಾ ಪದಗಳ ಪ್ರಯೋಗ ರೂಪಕ; ಆರಿ: ಮೊದಲಾದ; ರಚನೆ: ನಿರ್ಮಾಣ, ಸೃಷ್ಟಿ; ಹಲವು: ಬಹಳ; ಉಪಮೆಯ: ಹೋಲಿಸಲ್ಪಡಬೇಕಾದ ವಸ್ತು ಯಾ ವಿಷಯ; ಉತ್ಪ್ರೇಕ್ಷೆ: ಅಧಿಕವಾಗಿ ವರ್ಣಿಸುವುದು; ರೂಪಕ: ಆಕಾರ, ಪರಿಜು, ಚೆಲುವು; ಲಲಿತ:ಚೆಲುವು; ಅಲಂಕೃತ: ಚೆಲುವು, ಭೂಷಣಾಪ್ರಾಯ; ಚಮತ್ಕೃತಿ: ಸೋಜಿಗ, ವಿಸ್ಮಯ ರಚನೆ; ಚತುರ್ಭಾಷಾ: ನಾಲ್ಕು ಭಾಷೆ; ವಿಶಾರದ: ವಿದ್ವಾಂಸ, ಪಂಡಿತ; ಕವಿ: ಕಬ್ಬಿಗ, ಕಾವ್ಯವನ್ನು ರಚಿಸುವವನು, ಶುಕ್ರ, ಬುದ್ಧಿವಂತ; ಒಪ್ಪು: ಹಿರಿಮೆ, ಗೌರವ

ಪದವಿಂಗಡಣೆ:
ಸಲೆ +ಸಮಸ್ಯದ್+ಅನಂತ+ ಪದ್ಯವ
ಘಳಿಲನನ್ವೈಸುವ+ ಸುಕಾಂತಿಯ
ಲಲಿತ +ಮಧುರ +ಸಮಾಧಿ +ಸುಕುಮಾರಾದಿ +ರಚನೆಯಲಿ
ಹಲವುಪಮೆ +ಉತ್ಪ್ರೇಕ್ಷೆ +ರೂಪಕ
ಸುಲಲಿತಾಲಂಕೃತಿ+ ಚಮತ್ಕೃತಿ
ಗಳ+ ಚತುರ್ಭಾಷಾ +ವಿಶಾರದ +ಕವಿಗಳ್ಳೊ+ಒಪ್ಪಿದರು

ಅಚ್ಚರಿ:
(೧) ಕಾವ್ಯಗಳ ರಚನ ಶೈಲಿಯನ್ನು ತಿಳಿಸುವ ಪದ್ಯ – ಉಪಮಾನ, ಉತ್ಪ್ರೇಕ್ಷೆ, ರೂಪಕ, ಸುಕಾಂತಿ, ಸುಕುಮಾರ

ಪದ್ಯ ೩೬: ಪಂಡಿತರ ಪಾಂಡಿತ್ಯವೆಂತಹದು?

ನಿಗಮ ತರ್ಕ ಪುರಾಣ ಕಾವ್ಯಾ
ದಿಗಳ ವಿಸಟಂಬರಿಗಳೊತ್ತೊ
ತ್ತುಗಳೊಳಿಟ್ಟೆಡೆಯಕಾಗಿ ಹಿಗ್ಗಿದ ಜಠರದಗ್ರಿಯರು
ಬಗೆಯುಪನ್ಯಾಸದ ಸುಶಾಖಾ
ಳಿಗಳ ಬೀಳಲು ಬೆಳೆದ ಗಡ್ಡದ
ವಿಗಡ ಭೂಯೋಪಾಧ್ಯರಿದ್ದುದು ರಾಜಸಭೆಯೊಳಗೆ (ಉದ್ಯೋಗ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ವೇದ, ತರ್ಕ, ಪುರಾಣ, ಕಾವ್ಯ ಮುಂತಾದ ಪ್ರಾಕಾರಗಳಲ್ಲಿ ಎಲ್ಲೆಮೀರಿ ನಡೆದಾಡಿ ಜ್ಞಾನವನ್ನು ಸಂಪಾದಿಸಿ ಉಬ್ಬಿದ ಹೊಟ್ಟೆಯನ್ನು ತೋರುತ್ತಾ, ಹಲವಾರು ವಿಷಯಗಳಬಗ್ಗೆ ಬೋಧನವನ್ನು ನೀಡಿ, ಜ್ಞಾನದ ಹಲವಾರು ಕೊಂಬೆಗಳನ್ನು ಬೆಳಸಿ, ಉದ್ದದ್ದ ಗಡ್ಡವನ್ನು ಇಟ್ಟುಕೊಂಡಿರುವ ಮಹಾ ಪಂಡಿತರು ರಾಜಸಭೆಯೊಳಗಿದ್ದರು.

ಅರ್ಥ:
ನಿಗಮ:ವೇದ, ಶೃತಿ; ತರ್ಕ: ವಿಚಾರ, ಪರ್ಯಾಲೋಚನೆ; ಪುರಾಣ: ಪೂರ್ವಕಾಲದಲ್ಲಿ ನಡೆದುಹೋದ ಕಥೆ; ಕಾವ್ಯ: ಪದ್ಯ; ಆದಿ: ಮುಂತಾದ; ವಿಸಟಂಬರಿ: ಸ್ವೇಚ್ಛೆಯಾಗಿ ಓಡಾಡು, ಮೇರೆಮೀರು; ಒತ್ತುಗೊಳಿಸು: ಸಹಾಯವಾಗುವಂತೆ ಮಾಡು; ಒತ್ತು: ಉಬ್ಬಸಗೊಳಿಸು; ಇಟ್ಟೆಡೆ: ಬಿಕ್ಕಟ್ಟು, ಗುಂಪು; ಹಿಗ್ಗು: ಸಂತೋಷ, ಆನಂದ; ಜಠರ:ಹೊಟ್ಟೆ, ಉದರ; ಅಗ್ರ: ಮೊದಲು; ಜಠರದಗ್ರಿ: ಹೊಟ್ಟೆಮುಂದಾದವರು; ಬಗೆ:ಹಲವಾರು ರೀತಿ; ಉಪನ್ಯಾಸ: ಬೋಧನೆ; ಶಾಖೆ: ಕೊಂಬೆ, ಕವಲು; ಆಳಿ: ಗುಂಪು, ಸಮೂಹ; ಬೀಳು: ಕೆಳಕ್ಕೆ – ಕೆಡೆ, ಕುಸಿ; ಬೀಳಲು: ಮರದ ಜಟೆ; ಬೆಳೆ:ಅಭಿವೃದ್ಧಿ; ಗಡ್ಡ:ದಾಡಿ; ವಿಗಡ: ಅತಿಶಯ; ಭೂಯೋಪಾಧ್ಯರು: ಮಹಾಪಂಡಿತರು; ರಾಜಸಭೆ: ದರ್ಬಾರು;

ಪದವಿಂಗಡಣೆ:
ನಿಗಮ +ತರ್ಕ +ಪುರಾಣ+ ಕಾವ್ಯಾ
ದಿಗಳ +ವಿಸಟಂಬರಿಗಳ್+ಒತ್ತೊ
ತ್ತುಗಳೊಳ್+ಇಟ್ಟೆಡೆಯಕಾಗಿ+ ಹಿಗ್ಗಿದ+ ಜಠರದ್+ಅಗ್ರಿಯರು
ಬಗೆಯುಪನ್ಯಾಸದ+ ಸುಶಾಖಾ
ಳಿಗಳ+ ಬೀಳಲು +ಬೆಳೆದ +ಗಡ್ಡದ
ವಿಗಡ+ ಭೂಯ+ಉಪಾಧ್ಯರ್+ಇದ್ದುದು +ರಾಜಸಭೆಯೊಳಗೆ

ಅಚ್ಚರಿ:
(೧) ಜ್ಞಾನದ ಭಾಗಗಳು – ನಿಗಮ, ತರ್ಕ, ಪುರಾಣ, ಕಾವ್ಯ
(೨) ಪಂಡಿತರ ಲಕ್ಷಣವನ್ನು ಹೇಳುವ ಪದ್ಯ – ಜಠರದಗ್ರಿ, ಬೆಳೆದ ಗಡ್ಡ,

ಪದ್ಯ ೩೫: ಮಂತ್ರಿಗಳ ಸಾಮರ್ಥ್ಯವೇನು?

ಕಲಹವಿಲ್ಲದೆ ನೂಲಿನೆಳೆಯಲಿ
ತಲೆಯನರಿವ ವಿರೋಧಿ ರಾಯರ
ನಳುಕಿಸುವ ಸಾಮದಲಿ ನಿಲಿಸುವ ನಿಖಿಳ ಭೂಭುಜರ
ಒಲಿದರೊಳಲಂಚದಲಿ ಛಿದ್ರಿಸಿ
ಕೊಲುವ ಮುನಿದೊಡೆ ಮಂತ್ರಶಕ್ತಿಯೊ
ಳಳುಕಿಸುವ ಮಂತ್ರಿಗಳು ಮೆರೆದರು ವಾಮಭಾಗದಲಿ (ಉದ್ಯೋಗ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಜಗಳವಾಡದೆಯೇ ದಾರದೆಳೆಯಲ್ಲಿ ತಲೆಯನ್ನು ಕತ್ತರಿಸುವ, ಶತ್ರು ರಾಜರನ್ನು ನಾಶಮಾಡುವ, ಎಲ್ಲಾ ರಾಜರನ್ನು ಶಾಂತತೆಯಲ್ಲಿ ನಿಲಿಸುವ, ಚಾಣಾಕ್ಷತನದಿಂದ ಒಳಲಂಚವನ್ನು ನೀಡಿ ಶತ್ರುರಾಜರನ್ನು ಛಿದ್ರಿಸಿ ಕೊಲುವ, ಕೋಪಗೊಂಡರೆ ಮಂತಶಕ್ತಿಯ ಸಾಮರ್ಥ್ಯದಿಂದ ಭಯಪಡಿಸಿ ಕೊಲುವ ಮಂತ್ರಿಗಳು ಆಸ್ಥಾನದ ಎಡಭಾಗದಲ್ಲಿ ಮೆರೆದರು.

ಅರ್ಥ:
ಕಲಹ: ಜಗಳ; ನೂಲು: ದಾರ, ಎಳೆ, ಸೂತ್ರ; ಎಳೆ:ಚಿಕ್ಕ; ತಲೆ: ಶಿರ; ಅರಿ:ಕತ್ತರಿಸು, ತಿಳಿ; ವಿರೋಧ: ವೈರತ್ವ, ಹಗೆತನ; ರಾಯ: ರಾಜ; ಅಳುಕಿಸು: ಅಳಿಸು, ಇಲ್ಲವಾಗಿಸು; ಸಾಮ: ಶಾಂತಗೊಳಿಸುವಿಕೆ; ನಿಲಿಸು: ತಡೆ; ನಿಖಿಳ: ಎಲ್ಲಾ; ಭೂಭುಜ: ರಾಜ; ಒಲಿ:ಒಪ್ಪು, ಸಮ್ಮತಿಸು; ಲಂಚ: ಕಾರ್ಯಸಾಧನೆಗಾಗಿ ಅಕ್ರಮವಾಗಿ ಪಡೆಯುವ ಯಾ ಕೊಡುವ ಹಣ; ಛಿದ್ರ: ಬಿರುಕು; ಕೊಲು: ಕೊಲ್ಲು, ಸಾಯಿಸು; ಮುನಿ: ಸಿಟ್ಟಾಗು, ಕೋಪಗೊಳ್ಳು; ಮಂತ್ರ: ಇಷ್ಟ ದೇವತೆಯನ್ನು ವಶೀಕರಿಸಿಕೊಳ್ಳುವುದಕ್ಕಾಗಿ ಹೇಳುವ ಆಯಾ ದೇವತೆಯ ಸಾಮರ್ಥ್ಯವುಳ್ಳ ವಾಕ್ಯ ಸಮೂಹ; ಶಕ್ತಿ: ಬಲ; ಮಂತ್ರಿ: ಸಚಿವ; ಮೆರೆ: ಶೋಭಿಸು; ವಾಮ: ಎಡ;

ಪದವಿಂಗಡಣೆ:
ಕಲಹವಿಲ್ಲದೆ +ನೂಲಿನ್+ಎಳೆಯಲಿ
ತಲೆಯನ್+ಅರಿವ +ವಿರೋಧಿ +ರಾಯರನ್
ಅಳುಕಿಸುವ +ಸಾಮದಲಿ +ನಿಲಿಸುವ +ನಿಖಿಳ+ ಭೂಭುಜರ
ಒಲಿದರ್+ಒಳ+ಲಂಚದಲಿ+ ಛಿದ್ರಿಸಿ
ಕೊಲುವ +ಮುನಿದೊಡೆ +ಮಂತ್ರ+ಶಕ್ತಿಯೊಳ್
ಅಳುಕಿಸುವ +ಮಂತ್ರಿಗಳು+ ಮೆರೆದರು +ವಾಮಭಾಗದಲಿ

ಅಚ್ಚರಿ:
(೧) ಮಂತ್ರಿಯರ ಸಾಮರ್ಥ್ಯವನ್ನು ತೋರುವ ಪದ್ಯ
(೨) ಅಳುಕಿಸು – ೩, ೬ ಸಾಲಿನ ಮೊದಲ ಪದ
(೩) ರಾಯ, ಭೂಭುಜ – ಸಮನಾರ್ಥಕ ಪದ

ಪದ್ಯ ೩೪: ದುರ್ಯೋಧನನ ಆಸ್ಥಾನ ಹೇಗೆ ಚೆಲುವಾಯಿತು?

ಮಿಸುಪ ತಮ್ಮ ಮುಖೇಂದುವನು ಸೈ
ರಿಸದ ಚಂದ್ರನ ಕಿತ್ತು ನಭದಲಿ
ಬಿಸುಟು ಬೇರ್ಗಳ ಹಿಡಿದರೋ ಹೇಳೆನಲು ಸಭೆಯೊಳಗೆ
ಶಶಿವದನೆಯರ ಕೈಯ ಸೀಗುರಿ
ವೆಸೆದವಿಕ್ಕೆಲದಲಿ ಸುಯೋಧನ
ವಸುಮತೀಶನ ವೈಭವದಲಾಸ್ಥಾನ ಚೆಲುವಾಯ್ತು (ಉದ್ಯೋಗ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹೊಳೆವ ತಮ್ಮ ಮುಖದ ಚಂದ್ರನನ್ನು ಸೈರಿಸದ ಚಂದ್ರನನ್ನು ಕಿತ್ತು ಆಗಸದಲ್ಲಿ ತ್ಯಜಿಸಿ ಬೇರೆಯ ಚಂದ್ರನನ್ನು ಹಿಡಿದರೋ ಎನ್ನುವಂತೆ ಸಭೆಯ ಎರಡು ಕಡೆಯಲ್ಲೂ ಸುಂದರಿಯರು ತಮ್ಮ ಕೈಯಲ್ಲಿ ಚಾಮರವನ್ನು ಹಿಡಿದು ಬೀಸುತ್ತಿರಲು ದುರ್ಯೋಧನ ದರ್ಬಾರಿನ ವೈಭವವು ಸುಂದರವಾಗಿ ತೋರುತ್ತಿತ್ತು.

ಅರ್ಥ:
ಮಿಸುಪ: ಹೊಳೆವ, ಸುಂದರವಾದ; ತಮ್ಮ: ಅವರ; ಮುಖ: ಆನನ; ಇಂದು: ಚಂದ್ರ; ಸೈರಿಸು: ತಾಳು, ಸಹಿಸು; ಚಂದ್ರ: ಶಶಿ, ಇಂದು; ಕಿತ್ತು: ಸೀಳಿ; ನಭ: ಆಗಸ; ಬಿಸುಟು: ಬಿಸಾಕು, ಎಸೆ; ಬೇರ್ಗಳ: ಬೇರೆ; ಹಿಡಿ: ಬಂಧನ, ಸೆರೆ; ಹೇಳು: ತಿಳಿಸು; ಸಭೆ: ದರ್ಬಾರು; ಶಶಿ: ಚಂದ್ರ; ವದನ: ಮುಖ; ಶಶಿವದನೆ: ಸುಂದರಿ; ಕೈ: ಹಸ್ತ, ಕರ; ಸೀಗುರಿ: ಚಾಮರ; ಎಸೆ:ಶೋಭಿಸು; ಇಕ್ಕೆಲ:ಎರಡೂ ಕಡೆ; ವಸುಮತಿ: ಭೂಮಿ; ಈಶ: ಒಡೆಯ; ವೈಭವ: ಐಶ್ವರ್ಯ; ಚೆಲುವು: ಸುಂದರ;

ಪದವಿಂಗಡಣೆ:
ಮಿಸುಪ+ ತಮ್ಮ +ಮುಖ+ಇಂದುವನು +ಸೈ
ರಿಸದ+ ಚಂದ್ರನ+ ಕಿತ್ತು +ನಭದಲಿ
ಬಿಸುಟು +ಬೇರ್ಗಳ +ಹಿಡಿದರೋ+ ಹೇಳ್+ಎನಲು+ ಸಭೆಯೊಳಗೆ
ಶಶಿವದನೆಯರ+ ಕೈಯ +ಸೀಗುರಿವ್
ಎಸೆದವ್+ಇಕ್ಕೆಲದಲಿ +ಸುಯೋಧನ
ವಸುಮತೀಶನ+ ವೈಭವದಲ್+ಆಸ್ಥಾನ +ಚೆಲುವಾಯ್ತು

ಅಚ್ಚರಿ:
(೧) ಆಗಸದ ಚಂದ್ರನಿಗಿಂತ ಸುಂದರಿಯರ ಮುಖಾರವಿಂದ ಚೆಲುವಾಗಿತ್ತು ಎಂಬ ಉಪಮಾನದ ಕಲ್ಪನೆ
(೨) ಶಶಿ, ಇಂದು, ಚಂದ್ರ – ಸಮನಾರ್ಥಕ ಪದ