ಪದ್ಯ ೩೦: ದರ್ಬಾರು ಹೇಗೆ ಕಂಗೊಳಿಸುತ್ತಿತ್ತು?

ಬಲದ ಗದ್ದುಗೆಗಳಲಿ ಭಟರ
ಗ್ಗಳೆಯ ರವಿಸುತ ನದಿಯ ಮಗ ನೃಪ
ತಿಲಕ ದುಶ್ಯಾಸನ ಕೃಪ ದ್ರೋಣಾದಿ ನಾಯಕರು
ಹೊಳೆವ ರತುನದ ಸಾಲ ಮಕುಟದ
ಚೆಲುವಿಕೆಯ ಸೌರಂಭದಲಿ ಗಜ
ಗಲಿಸಿದರು ಮಾಣಿಕ್ಯಮಯ ಭೂಷಣ ವಿಳಾಸದಲಿ (ಉದ್ಯೋಗ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಒಡ್ಡೋಲಗವು ರಾಜರ, ಶ್ರೇಷ್ಠ ವ್ಯಕ್ತಿಗಳಿಂದ ಅಲಂಕೃತವಾಗಿತ್ತು. ಸಾಮರ್ಥ್ಯವುಳ್ಳ ಸೈನಿಕರು, ಶ್ರೇಷ್ಠನಾದ ಕರ್ಣನು, ಭೀಷ್ಮರು, ಧೃತರಾಷ್ಟ್ರ, ದುರ್ಯೋಧನ, ದುಶ್ಯಾಸನ, ಕೃಪಾಚಾರ್ಯರು, ದ್ರೋಣ ಮುಂತಾದ ನಾಯಕರು ಚಿನ್ನದ ಆಸನದಲ್ಲಿ ಆಸೀನರಾಗಿದ್ದರು. ಅವರು ಧರಿಸಿದ್ದ ಕಿರೀಟದಿಂದ ಹೊಳೆವ ಕಾಂತಿಯು, ಸಾಲಿನಲ್ಲಿ ಕಾಣುವ ಅವರ ಮುಕುಟದ ಸೌಂದರ್ಯವು ಮತ್ತು ಕಾಂತಿಯು ಇಡೀ ಸಭೆಯನ್ನು ಮಾಣಿಕ್ಯಮಯವಂತಾಗಿಸಿತು.

ಅರ್ಥ:
ಬಲ: ಶಕ್ತಿ, ಸಾಮರ್ಥ್ಯ; ಗದ್ದುಗೆ: ಸಿಂಹಾಸನ; ಭಟ: ಸೈನಿಕ, ಶೂರ; ಅಗ್ಗ:ಶ್ರೇಷ್ಠತೆ; ರವಿಸುತ: ಕರ್ಣ; ಸುತ: ಮಗ; ರವಿ: ಸೂರ್ಯ; ನದಿಯಮಗ: ಭೀಷ್ಮ; ನದಿ: ಹೊಳೆ, ತೊರೆ; ನೃಪ: ರಾಜ; ತಿಲಕ: ಅಗ್ರಗಣ್ಯ, ಶ್ರೇಷ್ಠ; ಆದಿ: ಮುಂತಾದ; ನಾಯಕ: ಮುಖಂಡ; ಹೊಳೆ: ಪ್ರಕಾಶಿಸು; ರತುನ: ಮಣಿ; ಸಾಲ: ಆವಳಿ, ಪ್ರಾಕಾರ; ಮಕುಟ: ಕಿರೀಟ; ಚೆಲುವು: ಸುಂದರ; ಸೌರಂಭ: ಸಂಭ್ರಮ, ಸಡಗರ; ಗಜಗಲಿಸು: ಹೊಳೆ, ಪ್ರಕಾಶಿಸು; ಮಾಣಿಕ್ಯ: ರತ್ನ; ಮಯ: ವ್ಯಾಪಿಸಿರುವುದು; ಭೂಷಣ: ಅಲಂಕರಿಸುವುದು; ವಿಳಾಸ: ಆಸ್ಥಾನ, ನಿವಾಸ;

ಪದವಿಂಗಡಣೆ:
ಬಲದ +ಗದ್ದುಗೆಗಳಲಿ +ಭಟರ್
ಅಗ್ಗಳೆಯ +ರವಿಸುತ +ನದಿಯ ಮಗ+ ನೃಪ
ತಿಲಕ+ ದುಶ್ಯಾಸನ +ಕೃಪ +ದ್ರೋಣಾದಿ +ನಾಯಕರು
ಹೊಳೆವ +ರತುನದ+ ಸಾಲ +ಮಕುಟದ
ಚೆಲುವಿಕೆಯ +ಸೌರಂಭದಲಿ +ಗಜ
ಗಲಿಸಿದರು +ಮಾಣಿಕ್ಯಮಯ +ಭೂಷಣ +ವಿಳಾಸದಲಿ

ಅಚ್ಚರಿ:
(೧) ಕರ್ಣ ಮತ್ತು ಭೀಷ್ಮರನ್ನು ರವಿಸುತ, ನದಿಯ ಮಗ ಎಂದು ಕರೆದಿರುವುದು
(೨) ಮಗ, ಸುತ; ರತುನ, ಮಾಣಿಕ್ಯ; ಹೊಳೆ, ಗಜಗಲಿಸು – ಸಮನಾರ್ಥಕ ಪದ

ಪದ್ಯ ೨೯: ದುರ್ಯೋಧನನು ಸಭೆಯನ್ನು ಹೇಗೆ ರಚಿಸಿದನು?

ಕರೆಸಿದನು ಮಣಿಮಕುಟ ಕಿರಣದ
ಗರುವರನು ಗಾಢಪ್ರತಾಪರ
ಬರಿಸಿದನು ತೂಕದ ಮಹಾ ಮಂಡಳಿಕ ಮನ್ನೆಯರ
ಧುರವಿಜಯ ಸಿದ್ಧರನು ಚಾಮೀ
ಕರದ ಗದ್ದುಗೆಯಖಿಳ ಸಾಮಂ
ತರನು ಪೃಥ್ವೀಪಾಲರನು ನೆರಹಿದನು ಭೂಪಾಲ (ಉದ್ಯೋಗ ಪರ್ವ, ೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ಸಭೆಗೆ ಮಣಿಮಕುಟ ಕಿರೀಟವನ್ನು ಅಲಂಕರಿಸಿದ ಹಿರಿಯರನ್ನು, ಹೆಚ್ಚು ಪರಾಕ್ರಮಶಾಲಿಗಳನ್ನು, ಗೌರವಕ್ಕೆ ಪಾತ್ರರಾದ ಮಂಡಳೀಕರನ್ನು, ಯುದ್ಧದಲ್ಲಿ ಜಯಗಳಿಸುವ ಸಾಮರ್ಥ್ಯವುಳ್ಳವರನ್ನು, ಬಂಗಾರದ ಸಿಂಹಾಸನವನ್ನು ಅಲಂಕರಿಸುವ ದೇಶದ ಎಲ್ಲಾ ಶ್ರೇಷ್ಠ ರಾಜರನ್ನು ಸಂಧಿಯ ಸಭೆಗೆ ಒಟ್ಟುಗೂಡಿಸಿದನು.

ಅರ್ಥ:
ಕರೆಸು: ಬರೆಮಾಡು; ಮಣಿ: ರತ್ನ; ಮಕುಟ: ಕಿರೀಟ; ಕಿರಣ: ಕಾಂತಿ; ಗರುವ: ಹಿರಿಯ, ಶ್ರೇಷ್ಠ; ಗಾಢ: ಹೆಚ್ಚಳ, ಅತಿಶಯ; ಪ್ರತಾಪ: ಪರಾಕ್ರಮ; ಬರಿಸು: ತುಂಬಿಸು; ತೂಕ: ಭಾರ, ಗುರುತ್ವ; ಮಹಾ: ಶ್ರೇಷ್ಠ; ಮಂಡಳಿಕ: ಸಾಮಂತ; ಮನ್ನೆಯ: ಮೆಚ್ಚಿನ, ಗೌರವಕ್ಕೆ ಪಾತ್ರನಾದ; ಧುರ: ಸಿರಿ, ಸಂಪತ್ತು; ಧುರವಿಜಯ: ಯುದ್ಧದಲ್ಲಿ ವಿಜಯ ಸಾಧಿಸುವವ; ಸಿದ್ಧ: ಸಾಧಿಸಿದವನು; ಚಾಮೀಕರ:ಬಂಗಾರ, ಚಿನ್ನ; ಗದ್ದುಗೆ: ಸಿಂಹಾಸನ; ಅಖಿಳ: ಎಲ್ಲಾ; ಸಾಮಂತ:ಒಬ್ಬ ರಾಜನಿಗೆ ಅಧೀನದಲ್ಲಿದ್ದು ಕಪ್ಪಕಾಣಿಕೆಗಳನ್ನು ಒಪ್ಪಿಸುವ ಆಶ್ರಿತರಾಜ, ಮಾಂಡ ಲಿಕ; ಪೃಥ್ವಿ: ಭೂಮಿ; ಪೃಥ್ವೀಪಾಲ: ರಾಜ; ನೆರಹು: ಸೇರಿಸು, ಒಟ್ಟುಗೂಡಿಸು; ಭೂಪಾಲ: ರಾಜ;

ಪದವಿಂಗಡಣೆ:
ಕರೆಸಿದನು+ ಮಣಿಮಕುಟ +ಕಿರಣದ
ಗರುವರನು+ ಗಾಢ+ಪ್ರತಾಪರ
ಬರಿಸಿದನು +ತೂಕದ +ಮಹಾ +ಮಂಡಳಿಕ+ ಮನ್ನೆಯರ
ಧುರವಿಜಯ +ಸಿದ್ಧರನು +ಚಾಮೀ
ಕರದ +ಗದ್ದುಗೆಯ+ಅಖಿಳ +ಸಾಮಂ
ತರನು+ ಪೃಥ್ವೀಪಾಲರನು +ನೆರಹಿದನು +ಭೂಪಾಲ

ಅಚ್ಚರಿ:
(೧) ಗುಣವಿಶೇಷಣಗಳ ಬಳಕೆ – ಮಣೀಮಕುಟ ಕಿರಣದ, ಗಾಢ ಪ್ರತಾಪ, ಮಹಾ ಮಂಡಳಿಕ, ಚಾಮೀಕರದ ಗದ್ದುಗೆ
(೨) ‘ಮ’ ಕಾರದ ತ್ರಿವಳಿ ಪದ – ಮಹಾ ಮಂಡಳಿಕ ಮನ್ನೆಯರು
(೩) ಪೃಥ್ವೀಪಾಲ, ಭೂಪಾಲ – ಸಮನಾರ್ಥಕ ಪದ

ಪದ್ಯ ೨೮: ದುರ್ಯೋಧನನು ವಿದುರನಿಗೆ ಏನು ಹೇಳಿದನು?

ನಾಳೆ ಬರಹೇಳೆಂದು ವಿದುರನ
ಬೀಳುಕೊಟ್ಟನು ಬೇಹ ಭಟರಿಗೆ
ವೀಳೆಯವ ನೀಡಿದನು ಹರಿದುದು ರಾಯನಾಸ್ಥಾನ
ಜಾಳಿಸಿತು ತಮ ಮೂಡಣಾದ್ರಿಯ
ಮೇಲೆ ತಲೆದೋರಿದನು ರವಿ ಭೂ
ಪಾಲ ಕೌರವನಂದಿನೊಡ್ಡೋಲಗವ ರಚಿಸಿದನು (ಉದ್ಯೋಗ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರನಿಗೆ ಕೃಷ್ಣನು ನಾಳೆ ಬರಲೆಂದು ಹೇಳಿ ಗೂಢಚಾರ್ಯರಿಗೆ ಅಪ್ಪಣೆಯನ್ನು ನೀಡಿ ಸಭೆಯನ್ನು ವಿಸರ್ಜಿಸಿದನು. ಅಂಧಕಾರವನ್ನು ಹೊರದೂಡಿ ಪೂರ್ವದ ಬೆಟ್ಟದ ಮೇಲೆ ರವಿ ಉದಯಿಸಿದನು, ದುರ್ಯೋಧನನು ಅಂದು ದೊಡ್ಡ ಸಭೆಯನ್ನು ರಚಿಸಿದನು.

ಅರ್ಥ:
ನಾಳೆ: ಮರುದಿನ; ಬರು: ಆಗಮಿಸು; ಹೇಳು: ತಿಳಿಸು; ಬೀಳುಕೊಟ್ಟು: ಕಳುಹಿಸಿ; ಬೇಹು:ಗುಪ್ತಚಾರಿಕೆ; ಭಟ:ಸೈನಿಕ ; ವೀಳೆಯ: ಒಪ್ಪಿಗೆ ಕೊಡು, ಆಮಂತ್ರಿಸು; ನೀಡು: ಕೊಡು; ಹರಿ: ಮುಗಿ, ತೀರು; ಆಸ್ಥಾನ: ದರ್ಬಾರು; ರಾಯ: ರಾಜ; ಜಾಳಿಸು: ಚಲಿಸು, ನಡೆ; ತಮ: ಅಂಧಕಾರ; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಮೇಲೆ: ತುದಿಯಲ್ಲಿ, ಅಗ್ರಭಾಗ; ತಲೆದೋರು: ತೋರು, ಕಾಣಿಸು; ರವಿ: ಸೂರ್ಯ; ಭೂಪಾಲ: ರಾಜ; ಒಡ್ಡೋಲಗ: ಸಭೆ, ದೊಡ್ಡ ದರ್ಬಾರು; ರಚಿಸು: ರೂಪಿಸು, ಸಜ್ಜುಗೊಳಿಸು;

ಪದವಿಂಗಡಣೆ:
ನಾಳೆ +ಬರಹೇಳ್+ಎಂದು +ವಿದುರನ
ಬೀಳುಕೊಟ್ಟನು +ಬೇಹ +ಭಟರಿಗೆ
ವೀಳೆಯವ +ನೀಡಿದನು +ಹರಿದುದು +ರಾಯನಾಸ್ಥಾನ
ಜಾಳಿಸಿತು +ತಮ +ಮೂಡಣ+ಅದ್ರಿಯ
ಮೇಲೆ +ತಲೆದೋರಿದನು +ರವಿ+ ಭೂ
ಪಾಲ +ಕೌರವನ್+ಅಂದಿನ+ಒಡ್ಡೋಲಗವ+ ರಚಿಸಿದನು

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಬೀಳುಕೊಟ್ಟನು ಬೇಹ ಭಟರಿಗೆ
(೨) ಮುಂಜಾನೆಯ ವರ್ಣನೆ: ಜಾಳಿಸಿತು ತಮ ಮೂಡಣಾದ್ರಿಯಮೇಲೆ ತಲೆದೋರಿದನು ರವಿ
(೩) ಸಭೆಯನ್ನು ವಿಸರ್ಜಿಸಿದನು ಎಂದು ಹೇಳಲು – ಹರಿದುದು ರಾಯನಾಸ್ಥಾನ ಪದದ ಬಳಕೆ

ಪದ್ಯ ೨೭: ದುರ್ಯೋಧನನು ಪಾಂಡವರ ಬಗ್ಗೆ ಏನು ಹೇಳಿದನು?

ನೋಡಿರೈ ಪಾಂಡವರು ಪಾತಕ
ರಾಡಿದಾಟವನಾಡಿದೊಡೆ ಯೀ
ನಾಡೊಳಗಹುದು ಸಲುವುದವನಿಯೊಳಧಿಕ ಲೇಸೆನಿಸಿ
ರೂಡಿಯೊಳಗಾಚಾರವಡಗಿತು
ಜೋಡೆಯಲಿ ಜನಿಸಿದರನೀ ಬೀ
ಡಾಡಿ ಕೂಡಿದನೆಂದು ಹೊಯಿದನು ರವಿಸುತನ ಕರದ (ಉದ್ಯೋಗ ಪರ್ವ, ೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ನೋಡಿದಿರಾ ನೀವೆಲ್ಲ ಈ ಪಾಂಡವರು ಎಂತಹ ಪಾಪಿಗಳು, ಇವರು ಆಡಿದ ಆಟವನ್ನು ಆಡಿದರೆ, ನಾವು ನೋಡಿಕೊಂಡು ಈ ನಾಡಿನಲ್ಲಿ ಇವರ ಆಟ ನಡೆಯುತ್ತದೆ, ಭೂಮಿಗೆ ಒಳೆತೆಂದು ತಿಳಿದರೆ, ರೂಢಿಯಲ್ಲಿ ಆಚಾರ ಮುಚ್ಚಿದಂತಾಗಿದೆ, ನಮ್ಮೊಟ್ಟಿಗೆ ಜನಿಸಿದ ಇವರು ಅಪ್ರಯೋಜಕರ, ಇವರ ಜೊತೆ ಸೇರಬೇಕಾಗಿದೆ ಎಂದು ಬಯ್ಯುತ್ತಾ, ಕರ್ಣನನ್ನು ಬರೆಮಾಡಿದನು.

ಅರ್ಥ:
ನೋಡು: ವೀಕ್ಷಿಸು; ಪಾತಕ: ಪಾಪಿ; ಆಟ:ಕ್ರೀಡೆ, ನಾಟಕ; ನಾಡು: ರಾಷ್ಟ್ರ; ಸಲ್ಲು: ನೆರವೇರು, ತಕ್ಕದಾಗಿರು; ಅಧಿಕ: ಹೆಚ್ಚು; ಲೇಸು: ಒಳಿತು; ರೂಢಿ: ವಾಡಿಕೆ, ಅಭ್ಯಾಸ; ಆಚಾರ: ಕಟ್ಟುಪಾಡು, ಸಂಪ್ರದಾಯ; ಅಡಗು: ಮುಚ್ಚು; ಜೋಡಿ: ಜೊತೆ; ಜನಿಸು: ಹುಟ್ಟು; ಬೀಡಾಡಿ: ಅಪ್ರಯೋಜಕ; ಕೂಡು: ಸೇರು; ಹೊಯಿ: ಬಯ್ಯು, ತೆಗಳು; ರವಿ: ಸೂರ್ಯ; ಸುತ: ಮಗ; ಕರದ: ಬರೆಮಾಡು;

ಪದವಿಂಗಡಣೆ:
ನೋಡಿರೈ +ಪಾಂಡವರು +ಪಾತಕರ್
ಆಡಿದಾಟವನ್+ಆಡಿದೊಡೆ+ ಯೀ
ನಾಡೊಳಗ್+ಅಹುದು+ ಸಲುವುದ್+ಅವನಿಯೊಳ್+ಅಧಿಕ +ಲೇಸೆನಿಸಿ
ರೂಡಿಯೊಳಗ್+ಆಚಾರವ್+ಅಡಗಿತು
ಜೋಡೆಯಲಿ+ ಜನಿಸಿದರನೀ ಬೀ
ಡಾಡಿ +ಕೂಡಿದನೆಂದು +ಹೊಯಿದನು +ರವಿಸುತನ +ಕರದ

ಅಚ್ಚರಿ:
(೧) ಆಡಿದಾಟ ಆಡಿದೊಡೆ – ಆಡಿ ಪದದ ಬಳಕೆ
(೨) ನಾಡು, ಅವನಿ – ಸಮನಾರ್ಥಕ ಪದ
(೩) ‘ಜ’ ಕಾರದ ಜೋಡಿ ಪದ – ಜೋಡಿಯಲಿ ಜನಿಸಿದರು
(೪) ಆಡಿ, ನೋಡಿ, ರೂಡಿ, ಬೀಡಾಡಿ – ಪ್ರಾಸ ಪದಗಳು