ಪದ್ಯ ೩: ಕೃಷ್ಣನ ಸ್ವಾಗತವನ್ನು ಹೇಗೆ ಕೋರಿದರು?

ನಡುವೆ ಮಣಿಮಂಚದಲಿ ಮೇಲ್ವಾ
ಸಡಕಿಲನು ಹಚ್ಚಡಿಸಿದರು ಮೇ
ಲಡರಿದವು ಮಣಿಖಚಿತ ಚಿತ್ರದ ಮೇಲುಕಟ್ಟುಗಳು
ಉಡುಗೊರೆಯ ತರಿಸಿದನು ರಾಯನ
ಮಡದಿಯರು ಹೊಂಗಳಸ ಜಲವನು
ಪಡಿಗವನು ಹಿಡಿದಸುರರಿಪುವಿನ ಬರವ ಹಾರಿದರು (ಉದ್ಯೋಗ ಪರ್ವ, ೮ ಸಂಧಿ, ೩ ಪದ್ಯ)

ತಾತ್ಪರ್ಯ:
ಕೃಷ್ಣನ ಆಗಮನಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ರತ್ನಮಣಿಗಳಿಂದ ಅಲಂಕೃತವಾದ ಆಸನವು ಮಧ್ಯದಲ್ಲಿಡಿಸಲಾಗಿತ್ತು, ಅದರ ಮೇಲ್ಭಾಗದಲ್ಲಿ ಛತ್ರಿಯನ್ನು ಹೋಲುವಂತೆ ಕುಚ್ಚಿನ ಅಲಂಕಾರವನ್ನು ಮಾಡಿ ಚಿತ್ರಗಳಿಂದ ಅಲಂಕರಿಸಲಾಗಿತ್ತು. ಕೃಷ್ಣನಿಗೆ ಬಳುವಳಿಗಳನ್ನು ರಾಜನು ತರಿಸಿದನು, ರಾಯನ ಮಡದಿಯರು ಜಲದಿಂದ ಕೂಡಿದ ಕಳಸವನ್ನು ಬಾಗಿಲ ಬಳಿ ಹಿಡಿದು ಕೃಷ್ಣನ ಆಗಮನವನ್ನು ಎದುರುನೋಡುತ್ತಿದ್ದರು.

ಅರ್ಥ:
ನದುವೆ: ಮಧ್ಯ; ಮಣಿ: ರತ್ನ; ಮಂಚ: ಆಸನ; ಸಡಕು: ಅಲಂಕಾರಕ್ಕಾಗಿ ಕಟ್ಟುವ ಕುಚ್ಚು; ಹಚ್ಚು: ಅಂಟಿಸು, ತೊಡಗಿಸು; ಅಡರು: ಮೇಲಕ್ಕೆ ಹತ್ತು, ಆಸರೆ; ಖಚಿತ: ಕೂಡಿಸಿದ; ಚಿತ್ರ: ಪಟ; ಕಟ್ಟು:ಹೂಡು; ಉಡುಗೊರೆ: ಕಾಣಿಕೆ, ಬಳುವಳಿ; ತರಿಸು: ಬರೆಮಾದು; ರಾಯ: ರಾಜ; ಮಡದಿ: ಹೆಂಡತಿ; ಕಳಶ: ಕುಂಭ; ಜಲ: ನೀರು; ಪಡಿ: ಬಾಗಿಲು, ಸಮಾನವಾದುದು, ಅಳತೆಯ ಪ್ರಮಾಣ; ಹಿಡಿದು: ತಳೆ, ಗ್ರಹಿಸು;ಅಸುರರಿಪು: ಕೃಷ್ಣ; ಅಸುರ; ರಾಕ್ಷಸ; ರಿಪು: ವೈರಿ; ಬರವ: ಆಗಮನ; ಹಾರು:ನೋಡು; ಪಡಿಗ: ತೊಳೆದ ನೀರನ್ನು ಗ್ರಹಿಸುವ ಪಾತ್ರೆ

ಪದವಿಂಗಡಣೆ:
ನಡುವೆ +ಮಣಿಮಂಚದಲಿ +ಮೇಲ್ವಾ
ಸಡಕಿಲನು +ಹಚ್ಚಡಿಸಿದರು+ ಮೇ
ಲಡರಿದವು +ಮಣಿಖಚಿತ +ಚಿತ್ರದ+ ಮೇಲು+ಕಟ್ಟುಗಳು
ಉಡುಗೊರೆಯ +ತರಿಸಿದನು +ರಾಯನ
ಮಡದಿಯರು +ಹೊಂಗಳಸ +ಜಲವನು
ಪಡಿಗವನು+ ಹಿಡಿದ್+ಅಸುರರಿಪುವಿನ +ಬರವ+ ಹಾರಿದರು

ಅಚ್ಚರಿ:
(೧) ಮೇಲೆ ಪದದ ಬಳಕೆ – ಮೇಲ್ವಾಸಡಕಿಲನು, ಮೇಲುಕಟ್ಟುಗಳು, ಮೇಲಡರಿದವು – ೧-೩ ಸಾಲಿನ ಕೊನೆಯ ಪದ ಮೇ ಇಂದು ಪ್ರಾರಂಭ

ಪದ್ಯ ೨: ಕೃಷ್ಣನಿಗೆ ದುರ್ಯೋಧನನು ಏನು ಮಾಡಿಸಿದ?

ಶೌರಿ ಕಾಣಿಸಿಕೊಂಡನಾ ಗಾಂ
ಧಾರಿಯನು ಸುಕ್ಷೇಮ ಕುಶಲವ
ನಾರಯಿದು ಕಾಣಿಕೆಯ ಕೊಂಡನು ಕೊಟ್ಟನುಡುಗೊರೆಯ
ಕೌರವನು ತನ್ನರಮನೆಗೆ ಹರಿ
ಬಾರದಿರನೆಂದಖಿಳ ವಿಧದಲಿ
ಸಾರ ವಸ್ತುವ ತರಿಸಿಯಾರೋಗಣೆಗೆ ಮಾಡಿಸಿದ (ಉದ್ಯೋಗ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಗಾಂಧಾರಿಯನ್ನು ಎದುರು ನೋಡುತ್ತಲೇ ಅವರ ಯೋಗಕ್ಷೇಮವನ್ನು ವಿಚಾರಿಸಿ ಅವನು ತಂದಿದ್ದ ಉಡೊಗೊರೆಯನ್ನು ನೀಡಿದನು. ಗಾಂಧಾರಿಯು ಕೃಷ್ಣನಿಗೆ ಕಾಣಿಕೆಯನ್ನು ಸಲ್ಲಿಸಲು ಕೃಷ್ಣನು ಅದನ್ನು ಸ್ವೀಕರಿಸಿದನು. ದುರ್ಯೋಧನನು ಕೃಷ್ಣನನ್ನು ತನ್ನ ಅರಮನೆಗೆ ಕರೆಯುವುದಕ್ಕೆ ಇಚ್ಛೆಯಿರಲಿಲ್ಲ ಹಾಗಾಗಿ ಧೃತರಾಷ್ಟ್ರನ ಅರಮನೆಯಲ್ಲೇ ಅವನು ಒಳ್ಳೆಯ ಪದಾರ್ಥಗಳನ್ನೊಳಗೊಂಡ ಅಡಿಗೆಯನ್ನು ಮಾಡಿಸಿದ.

ಅರ್ಥ:
ಶೌರಿ: ವಿಷ್ಣು, ಕೃಷ್ಣ; ಕಾಣಿಸು: ತೋರು, ಗೋಚರ; ಕ್ಷೇಮ: ಕುಶಲ, ಚೆನ್ನಾಗಿರುವ; ಕುಶಲ: ಸರಿಯಾದ, ಕ್ಷೇಮ; ಅರಿ: ತಿಳಿ; ಕಾಣಿಕೆ: ಉಡುಗೊರೆ; ಉಡುಗೊರೆ: ಬಳುವಳಿ; ಕೌರವ: ದುರ್ಯೋಧನ; ಅರಮನೆ: ರಾಜರ ವಾಸಸ್ಥಳ; ಹರಿ: ಕೃಷ್ಣ; ಬಾರದಿರು: ಆಗಮಿಸದಿರು, ಬರದಿರು; ಅಖಿಳ: ಎಲ್ಲಾ; ವಿಧ: ರೀತಿ; ಸಾರ: ಶ್ರೇಷ್ಠವಾದ, ಉತ್ಕೃಷ್ಟವಾದ, ತಿರುಳು; ವಸ್ತು: ಸಾಮಾನು, ಪದಾರ್ಥ; ತರಿಸಿ: ತಂದು; ಆರೋಗಣೆ: ಭೋಜನ;

ಪದವಿಂಗಡಣೆ:
ಶೌರಿ +ಕಾಣಿಸಿಕೊಂಡನಾ+ ಗಾಂ
ಧಾರಿಯನು +ಸುಕ್ಷೇಮ +ಕುಶಲವನ್
ಅರಯಿದು +ಕಾಣಿಕೆಯ +ಕೊಂಡನು+ ಕೊಟ್ಟನ್+ಉಡುಗೊರೆಯ
ಕೌರವನು +ತನ್ನರಮನೆಗೆ +ಹರಿ
ಬಾರದಿರನೆಂದ್+ಅಖಿಳ +ವಿಧದಲಿ
ಸಾರ +ವಸ್ತುವ +ತರಿಸಿ+ಆರೋಗಣೆಗೆ+ ಮಾಡಿಸಿದ

ಅಚ್ಚರಿ:
(೧) ಶೌರಿ, ಹರಿ – ಕೃಷ್ಣನಿಗೆ ಬಳಸಿದ ಹೆಸರುಗಳು
(೨) ‘ಕ’ ಕಾರದ ಸಾಲು ಪದಗಳು – ಕಾಣಿಕೆಯ ಕೊಂಡನು ಕೊಟ್ಟನುಡುಗೊರೆಯ ಕೌರವನು