ಪದ್ಯ ೧: ಕೃಷ್ಣನು ಯಾರನ್ನು ಬೀಳ್ಕೊಟ್ಟನು?

ಕೇಳು ಜನಮೇಜಯ ಧರಿತ್ರೀ
ಪಾಲ ಮುರಹರ ಗುರು ನದೀಜರ
ಬೀಳುಕೊಟ್ಟನು ಕೃಪನ ಮನ್ನಿಸಿ ಮನೆಗೆ ಕಳುಹಿದನು
ಆಲಯಕೆ ವಿದುರಂಗೆ ಕೊಟ್ಟನು
ವೀಳಯವನೊಡನೆಯ್ದಿ ಬಂದ
ನೃಪಾಲಕರ ಮೊಗಸನ್ನೆಯಲಿ ಕಳುಹಿದನು ಮನೆಗಳಿಗೆ (ಉದ್ಯೋಗ ಪರ್ವ, ೮ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಜನಮೇಜಯ ರಾಜನಿಗೆ ಮಹಾಭಾರತದ ಕಥೆಯನ್ನು ಮುಂದುವರಿಸುತ್ತಾ, ಕೃಷ್ಣನು ಧೃತರಾಷ್ಟ್ರನನ್ನು ಬೀಳ್ಕೊಟ್ಟಮೇಲೆ ಅವರ ಜೊತೆಯಿದ್ದ ದ್ರೋಣ ಮತ್ತು ಭೀಷ್ಮರನ್ನು ಕಳುಹಿಸಿದನು, ಕೃಪಚಾರ್ಯರನ್ನು ಮನ್ನಿಸಿ ಅವರನ್ನು ಕಳುಹಿಸಿ, ವಿದುರನಿಗೆ ಅವನ ಮನೆಗೆ ಹೋಗಲು ವೀಳಯವನ್ನು ನೀಡಿ ಉಳಿದೆಲ್ಲ ರಾಜರನ್ನು ಮುಖಸನ್ನೆಯಲ್ಲೆ ಅವರ ಮನೆಗೆ ಹೋಗಲು ಅಪ್ಪಣೆನೀಡಿದನು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಮುರಹರ: ಕೃಷ್ಣ; ಗುರು: ಆಚಾರ್ಯ (ದ್ರೋಣ), ನದೀಜ: ಗಂಗೆಯಲ್ಲಿ ಹುಟ್ಟಿದ (ಭೀಷ್ಮ); ಬೀಳುಕೊಟ್ಟನು: ಕಳುಹಿಸಿದನು; ಮನ್ನಿಸು: ಅನುಗ್ರಹಿಸು; ಮನೆ: ಆಲಯ; ವೀಳಯ: ತಾಂಬೂಲ; ಐದು: ಹೋಗಿಸೇರು; ನೃಪಾಲ: ರಾಜ; ಮೊಗ: ಮುಖ; ಸನ್ನೆ: ಸಂಕೇತ, ಸುಳಿವು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಮುರಹರ +ಗುರು +ನದೀಜರ
ಬೀಳುಕೊಟ್ಟನು +ಕೃಪನ +ಮನ್ನಿಸಿ +ಮನೆಗೆ +ಕಳುಹಿದನು
ಆಲಯಕೆ+ ವಿದುರಂಗೆ +ಕೊಟ್ಟನು
ವೀಳಯವನ್+ಒಡನೆಯ್ದಿ+ ಬಂದ
ನೃಪಾಲಕರ+ ಮೊಗಸನ್ನೆಯಲಿ+ ಕಳುಹಿದನು +ಮನೆಗಳಿಗೆ

ಅಚ್ಚರಿ:
(೧) ಕೇಳು, ಬೀಳು – ಪ್ರಾಸ ಪದ
(೨) ಆಲಯ, ಮನೆ; ಬೀಳುಕೊಟ್ಟನು, ಕಳುಹಿದನು – ಸಮನಾರ್ಥಕ ಪದ

ಪದ್ಯ ೩೧: ಕೃಷ್ಣನು ಧೃತರಾಷ್ಟ್ರನ ಅರಮನೆಯನ್ನು ಹೇಗೆ ಹೊಕ್ಕನು?

ಇದಿರುಗೊಂಡನು ಕಾಣಿಕೆಯನಿ
ಕ್ಕಿದನು ಕುಶಲ ಕ್ಷೇಮವನು ಕೇ
ಳಿದನು ಬಕುತಿಯಲೆರಗಿದನು ಚರಣದಲಿ ಧೃತರಾಷ್ಟ್ರ
ಸದನವನು ಹೊಕ್ಕಂತೆ ನಿಮಿಷಾ
ರ್ಧದಲಿ ಕುಳ್ಳಿರ್ದನಿಬರನು ಕಳು
ಹಿದನು ಕಾರುಣ್ಯದಲಿ ಗದುಗಿನ ವೀರ ನಾರಯಣ (ಉದ್ಯೋಗ ಪರ್ವ, ೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೃಷ್ಣನು ಧೃತರಾಷ್ಟ್ರನ ಅರಮನೆಯನ್ನು ಪ್ರವೇಶಿಸಲು ಧೃತರಾಷ್ಟ್ರನು ಕೃಷ್ಣನನ್ನು ಎದುರು ನೋಡಿದನು. ಕೃಷ್ಣನು ಅವನು ತಂದ ಕಾಣಿಕೆಗಳನ್ನು ಒಪ್ಪಿಸಿ ಕುಶಲೋಪ ಮಾತುಗಳನ್ನು ಆಡಲು, ಧೃತರಾಷ್ಟ್ರನು ಭಕ್ತಿಯಿಂದ ಕೃಷ್ಣನ ಚರಣಕೆ ನಮಸ್ಕರಿಸಿದನು. ದರ್ಬಾರನ್ನು ಸೇರುತ್ತಿದ್ದಂತೆ ಕ್ಷಣಮಾತ್ರದಲ್ಲಿ ಎಲ್ಲರನ್ನು ಕೂರಿಸಿ ಉಳಿದವರನ್ನು ಕಾರುಣ್ಯಪೂರಕವಾಗಿ ಕಳಿಸಿಕೊಟ್ಟನು.

ಅರ್ಥ:
ಇದಿರು: ಎದುರು; ಇದಿರುಗೊಂಡು: ಎದುರೆದುರು ಭೇಟಿಯಾಗಿ; ಕಾಣಿಕೆ: ಉಡುಗೊರೆ; ಇಕ್ಕು: ಇಡು; ಕುಶಲ: ಕ್ಷೇಮ; ಕ್ಷೇಮ: ಸ್ವಾಸ್ಥ್ಯ; ಕೇಳು: ಪ್ರಶ್ನಿಸು; ಬಕುತಿ: ಭಕ್ತಿ, ಗೌರವ; ಎರಗು: ನಮಸ್ಕರಿಸು; ಚರಣ: ಪಾದ; ಸದನ: ದರ್ಬಾರು; ಹೊಕ್ಕು: ಸೇರು; ನಿಮಿಷ: ಕಾಲದ ಪ್ರಮಾಣ; ಕುಳ್ಳಿರ್ದನು: ಕೂರಿಸು; ಕಳುಹು: ಬರೆಮಾಡು, ಬೀಳ್ಕೊಡು; ಕಾರುಣ್ಯ: ದಯೆ, ಕರುಣೆ;

ಪದವಿಂಗಡಣೆ:
ಇದಿರುಗೊಂಡನು+ ಕಾಣಿಕೆಯನ್
ಇಕ್ಕಿದನು +ಕುಶಲ +ಕ್ಷೇಮವನು +ಕೇ
ಳಿದನು +ಬಕುತಿಯಲ್+ಎರಗಿದನು+ ಚರಣದಲಿ+ ಧೃತರಾಷ್ಟ್ರ
ಸದನವನು+ ಹೊಕ್ಕಂತೆ+ ನಿಮಿಷಾ
ರ್ಧದಲಿ+ ಕುಳ್ಳಿರ್ದನ್+ಇಬರನು +ಕಳು
ಹಿದನು +ಕಾರುಣ್ಯದಲಿ+ ಗದುಗಿನ+ ವೀರ ನಾರಯಣ

ಅಚ್ಚರಿ:
(೧) ಇದಿರು, ಇಕ್ಕು, ಇಬರನು – ಇ ಕಾರದ ಪದಗಳು
(೨) ಕ ಕಾರದ ಸಾಲು ಪದಗಳು – ಕಾಣಿಕೆಯನಿಕ್ಕಿದನು ಕುಶಲ ಕ್ಷೇಮವನು ಕೇಳಿದನು

ಪದ್ಯ ೩೦: ಕೃಷ್ಣನು ಧೃತರಾಷ್ಟ್ರನ ಅರಮನೆಗೆ ಹೇಗೆ ಬಂದನು?

ಮಂದದಲಿ ಸುಳಿವಾನೆ ಕುದುರೆಯ
ಸಂದಣಿಯ ಕೀಲಿಸಿದ ಭೂಮಿಪ
ರಂದಣದ ಸಾಲುಗಳ ತೆಕ್ಕೆಯ ಹಳಿಯದಾಳುಗಳ
ಮಂದಿಯಲಿ ಹೊಗಲನಿಲಗುಬ್ಬಸ
ವೆಂದರುಳಿದವರಳವೆಯೆನಲರ
ವಿಂದನಾಭನು ಬಂದನು ಧೃತರಾಷ್ಟ್ರನರಮನೆಗೆ (ಉದ್ಯೋಗ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೃಷ್ಣನು ಅರಮನೆಯ ಕಡೆಗೆ ಹೊರಟಿದ್ದನು, ನಿಧಾನವಾಗಿ ಆನೆ ಕುದುರೆಗಳ ಸಾಲುಗಳು ಬರುತ್ತಿದ್ದವು, ಅದರ ಜೊತೆಗಿದ್ದ ರಾಜರ ಅಂದವಾದ ಸಾಲುಗಳು, ಸೇವಕರ ಗುಂಪು ಸಾಗಿತ್ತು. ಆ ಜನಜಂಗುಳಿಯಲ್ಲಿ ಜನರು ಹೋಗುತ್ತಿರಲು ಕೆಲವರು ಹೆಚ್ಚು ಉಸಿರನ್ನು ಹೀರಿದರೆ ಮಿಕ್ಕರು ಸ್ವಲ್ಪ ಉಸಿರನ್ನು ಒಳಗೆಳೆದುಕೊಳ್ಳತ್ತಿರಲು, ಕೃಷ್ಣನು ಇವರೆಲ್ಲರ ನಡುವೆ ಸಾಗುತ್ತ ಧೃತರಾಷ್ಟ್ರನ ಅರಮನೆಯನ್ನು ಸೇರಿದನು.

ಅರ್ಥ:
ಮಂದ: ನಿಧಾನ; ಸುಳಿ: ಗೋಚರವಾಗು, ಆವರಿಸು; ಆನೆ: ಕರಿ, ಇಭ; ಕುದುರೆ: ಅಶ್ವ; ಸಂದಣಿ: ಗುಂಪು; ಕೀಲು: ಮರ್ಮ, ಗುಟ್ಟು; ಕೀಲಿಸು: ಜೋಡಿಸು; ಭೂಮಿಪ: ರಾಜ; ಅಂದಣ: ಚೆಂದ, ಚೆಲುವು; ಸಾಲು: ಆವಳಿ; ತೆಕ್ಕೆ: ಗುಂಪು, ಸಮೂಹ, ಆಲಿಂಗನ; ಹಳಿ: ನಿಂದಿಸು, ಬಯ್ಯು; ಆಳು: ಸೇವಕ; ಮಂದಿ: ಜನ; ಹೊಗು: ಪ್ರವೇಶಿಸು; ಅನಿಲ: ಗಾಳಿ; ಉಬ್ಬಸ: ಹೆಚ್ಚು; ಅಳವೆ: ನದೀಮುಖ, ತೂಬು; ಉಳಿದ: ಮಿಕ್ಕ; ಅರವಿಂದ: ಕಮಲ; ಬಂದನು: ಆಗಮಿಸು; ಅರಮನೆ: ಆಲಯ;

ಪದವಿಂಗಡಣೆ:
ಮಂದದಲಿ +ಸುಳಿವಾನೆ +ಕುದುರೆಯ
ಸಂದಣಿಯ +ಕೀಲಿಸಿದ +ಭೂಮಿಪರ್
ಅಂದಣದ +ಸಾಲುಗಳ +ತೆಕ್ಕೆಯ +ಹಳಿಯದ್+ಆಳುಗಳ
ಮಂದಿಯಲಿ+ ಹೊಗಲ್+ಅನಿಲಗ್+ಉಬ್ಬಸ
ವೆಂದರ್+ಉಳಿದವರ್+ಅಳವೆ+ಯೆನಲ್+ಅರ
ವಿಂದನಾಭನು +ಬಂದನು +ಧೃತರಾಷ್ಟ್ರನ್+ಅರಮನೆಗೆ

ಅಚ್ಚರಿ:
(೧) ಮಂದ, ಅಂದ, ಅರವಿಂದ, ಸಂದ – ಪ್ರಾಸ ಪದಗಳು
(೨) ಸಂದಣಿ, ತೆಕ್ಕೆ, ಮಂದಿ – ಗುಂಪನ್ನು ಸೂಚಿಸುವ ಪದಗಳು