ಪದ್ಯ ೧೨೧: ಯಾರು ಶ್ರೇಷ್ಠರು?

ಜಲಧಿಯೊಳು ದುಗ್ಧಾಬ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ
ಜಲರುಹಾಕ್ಷನು ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೨೧ ಪದ್ಯ)

ತಾತ್ಪರ್ಯ:
ಸಮುದ್ರಗಳಲ್ಲಿ ಕ್ಷೀರಸಮುದ್ರ, ತೀರ್ಥಗಳಲ್ಲಿ ಗಂಗಾನದಿ, ಮುನಿಗಳಲ್ಲಿ ವೇದವ್ಯಾಸ, ವ್ರತಿಗಳಲ್ಲಿ ಹನುಮಂತ, ದೇವತೆಗಳಲ್ಲಿ ವಿಷ್ಣು, ರಾಜರಲ್ಲಿ ಧರ್ಮರಾಯ ಇವರು ಶ್ರೇಷ್ಠರು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ; ದುಗ್ಧ: ಹಾಲು; ಅಬ್ಧಿ: ಸಮುದ್ರ; ತೀರ್ಥ:ಪವಿತ್ರವಾದ ಜಲ; ಸುರನದಿ: ಗಂಗಾ; ಮುನಿ: ಋಷಿ; ವ್ರತಿ:ನಿಯಮಬದ್ಧವಾದ ನಡವಳಿಕೆಯುಳ್ಳವನು;ಜಲ: ನೀರು; ಜಲರುಹ: ಕಮಲ; ಅಕ್ಷ: ಕಣ್ಣು; ದೈವ: ದೇವತೆ; ಧರಣಿ: ಭೂಮಿ; ಧರಣೀಪಾಲ: ರಾಜ; ಅಗ್ಗ: ಶ್ರೇಷ್ಠತೆ; ಚಿತ್ತೈಸು: ಗಮನಿಸು; ಆವಳಿ: ಗುಂಪು, ಸಾಲು;

ಪದವಿಂಗಡಣೆ:
ಜಲಧಿಯೊಳು +ದುಗ್ಧ+ಅಬ್ಧಿ +ತೀರ್ಥ
ಆವಳಿಗಳೊಳು +ಸುರನದಿ+ ಮುನೀಶ್ವರ
ರೊಳಗೆ+ ವೇದವ್ಯಾಸನಾ+ ವ್ರತಿಗಳೊಳು +ಹನುಮಂತ
ಜಲರುಹಾಕ್ಷನು +ದೈವದೊಳು +ಕೇಳ್
ಉಳಿದ +ಧರಣೀಪಾಲರೊಳಗ್
ಅಗ್ಗಳೆಯನೈ+ ಧರ್ಮಜನು +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಕಮಲಕ್ಕೆ ಜಲರುಹ, ಗಂಗೆಗೆ ಸುರನದಿ ಎಂಬ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ