ಪದ್ಯ ೭೯: ಯಾವುದನ್ನು ಒಳಗೂಡಿಸಿಕೊಂಡರೆ ಅದು ಉತ್ತಮ ಜೀವನ?

ಬಲಿಯ ರಾಜ್ಯ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲಹು ಹನುಮಾನುವಿನ ಭುಜಬಲ ವೀರರಾಘವನ
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೭೯ ಪದ್ಯ)

ತಾತ್ಪರ್ಯ:
ಉತ್ತಮರಾಗಲು ಯಾವ ಗುಣವನ್ನು ಅನುಸರಿಸಬೇಕೆಂದು ಇಲ್ಲಿ ಹೇಳಲಾಗಿದೆ. ಬಲಿ ಚಕ್ರವರ್ತಿಯ ರಾಜ್ಯ, ವಿಭೀಷಣನ ಐಶ್ವರ್ಯ, ಸಮುದ್ರದ ಗಾಂಭೀರ್ಯ, ಬಾಣನ ಶೌರ್ಯ, ಹನುಮಂತನ ಬಾಹುಬಲ, ರಾಮನ ಛಲ, ದಧೀಚಿಯ ದಾನದ ಗುಣ, ಪಾರ್ಥನ ಸ್ನೇಹದ ಗುಣ, ಯುಧಿಷ್ಠಿರನ ಸಹನೆ ಈ ಗುಣಗಳನ್ನು ಹೊಂದಿಸಿಕೊಳ್ಳುವವನೇ ಉತ್ತಮ ಖ್ಯಾತಿಯನ್ನು ಹೊಂದುತ್ತಾನೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಬಲಿ: ಚಕ್ರವರ್ತಿಯ ಹೆಸರು; ರಾಜ್ಯ: ರಾಷ್ಟ್ರ, ದೇಶ; ಸಿರಿ: ಸಂಪತ್ತು, ಐಶ್ವರ್ಯ; ಜಲನಿಧಿ: ಸಮುದ್ರ; ಗಾಂಭೀರ್ಯ: ಆಳ, ಘನತೆ; ಬಾಣ: ಬಲೀಂದ್ರನ ಮಗ; ಬಲುಹು: ಬಲ, ಶಕ್ತಿ; ಭುಜಬಲ: ತೋಳ್ಬಲ, ಶಕ್ತಿ; ವೀರ: ಕಲಿ, ಶೂರ; ರಾಘವ: ರಾಮ; ಛಲ: ದೃಢ ನಿಶ್ಚಯ; ದಾನ: ನೀಡು; ಕೆಳೆ: ಸ್ನೇಹ, ಗೆಳೆತನ; ನೃಪ: ರಾಜ; ಸೈರಣೆ: ತಾಳ್ಮೆ, ಸಹನೆ; ಅಳವಡು: ಹೊಂದು, ಸೇರು, ಕೂಡು; ಬದುಕು: ಜೀವಿಸು; ವಿಖ್ಯಾತಿ: ಪ್ರಸಿದ್ಧ; ಕೇಳು: ಆಲಿಸು;

ಪದವಿಂಗಡಣೆ:
ಬಲಿಯ +ರಾಜ್ಯ +ವಿಭೀಷಣನ +ಸಿರಿ
ಜಲನಿಧಿಯ +ಗಾಂಭೀರ್ಯ +ಬಾಣನ
ಬಲಹು +ಹನುಮಾನುವಿನ+ ಭುಜಬಲ+ ವೀರ+ರಾಘವನ
ಛಲ +ದಧೀಚಿಯ +ದಾನ +ಪಾರ್ಥನ
ಕೆಳೆ+ ಯುಧಿಷ್ಠಿರ +ನೃಪನ +ಸೈರಣೆಗ್
ಅಳವಡುವ +ಬದುಕುಳ್ಳಡ್+ಅದು +ವಿಖ್ಯಾತಿ +ಕೇಳೆಂದ

ಅಚ್ಚರಿ:
(೧) ಬಲಿ, ವಿಭೀಷಣ, ಜಲನಿಧಿ, ಬಾಣ, ಹನುಮಂತ, ರಾಮ, ದಧೀಚಿ, ಪಾರ್ಥ, ಯುಧಿಷ್ಠಿರ – ೯ ಗುಣಗಳನ್ನು ಉಪಮಾನದ ಮೂಲಕ ತಿಳಿಸುವ ಪದ್ಯ

ಪದ್ಯ ೭೮: ಯಾರನ್ನು ದೇವತೆಗಳು ನೆಲಕ್ಕೆ ಕಳಿಸುತ್ತಾರೆ?

ಪೊಡವಿಯೊಳಗೆ ಪುರೋಹಿತರನವ
ಗಡಿಸಿ ಧರ್ಮದ ಬಲದಿ ನಾಕಕೆ
ನಡೆವ ರಾಯರ ಹೊಯಿದಿಳಿಯಲಿಕ್ಕುವರಧೋಗತಿಗೆ
ಕೆಡಿಸುವರು ರಾಷ್ಟ್ರವನು ಕ್ಷಾತ್ರವ
ತಡೆಗಡಿಸಿ ಚತುರಂಗ ಬಲವನು
ಹುಡಿಹುಡಿಯ ಮಾಡುವರು ನಿರ್ಜರರರಸ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೭೮ ಪದ್ಯ)

ತಾತ್ಪರ್ಯ:
ವೇದೋಕ ಧಾರ್ಮಿಕ ಕಾರ್ಯ ಮಾಡಿಸುವವನು ಶ್ರೇಷ್ಠ ಅವನನ್ನು ಎದುರು ಹಾಕಿಕೊಳ್ಳಬಾರದೆಂದು ತಿಳಿಸುವ ಪದ್ಯ. ಧರ್ಮ ಕಾರ್ಯವನ್ನು ಮಾಡಿದರೂ, ಪುರೋಹಿತರನ್ನು ಮೀರಿದವನಾದರೆ, ಸ್ವರ್ಗಕ್ಕೆ ಹೋದೊಡನೆ ಅವನನ್ನು ದೇವತೆಗಳು ಬಡಿದು ನೆಲಕ್ಕೆ ಕಳಿಸುತ್ತಾರೆ. ಅವನ ಪರಾಕ್ರಮವನ್ನು ಕಿತ್ತುಕೊಂಡು, ದೇಶವನ್ನು ಕೆಡಿಸಿ, ಚತುರಂಗ ಸೈನ್ಯವನ್ನು ಪುಡಿಪುಡಿ ಮಾಡುತ್ತಾರೆ ಎಂದು ಸನತ್ಸುಜಾತರು ಎಚ್ಚರಿಸಿದರು.

ಅರ್ಥ:
ಪೊಡವಿ: ಭೂಮಿ; ಪುರೋಹಿತ: ವೇದೋಕ್ತ ವಿಧಿ, ಧಾರ್ಮಿಕ ವ್ರತ ಮಾಡಿಸುವವ; ಅವಗಡಿಸು: ಕಡೆಗಣಿಸು, ಸೋಲಿಸು; ಧರ್ಮ: ಧಾರಣೆ ಮಾಡುವುದು; ನಾಕ: ಸ್ವರ್ಗ; ಬಲ: ಶಕ್ತಿ; ನಡೆ: ಹೆಜ್ಜೆ ಹಾಕು; ರಾಯ: ರಾಜ; ಹೊಯಿದು: ಹೊಡೆದು; ಇಳಿ: ಕೆಳಕ್ಕೆ ಬರು, ಬೀಳು; ಅಧೋಗತಿ: ನರಕ; ಕೆಡಿಸು: ಹಾಳುಮಾಡು; ರಾಷ್ಟ್ರ: ದೇಶ; ಕ್ಷಾತ್ರ: ಕ್ಷತ್ರಿಯ ಧರ್ಮ ಪಾಲಿಸುವ; ತಡೆಗಡಿಸು: ಕಿತ್ತುಕೊಳ್ಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಹುಡಿಹುಡಿ: ಚೂರು; ನಿರ್ಜರ: ದೇವತೆ; ಅರಸ: ರಾಜ;

ಪದವಿಂಗಡಣೆ:
ಪೊಡವಿಯೊಳಗೆ+ ಪುರೋಹಿತರನ್+ಅವ
ಗಡಿಸಿ +ಧರ್ಮದ +ಬಲದಿ +ನಾಕಕೆ
ನಡೆವ+ ರಾಯರ +ಹೊಯಿದ್+ಇಳಿಯಲಿಕ್ಕುವರ್+ಅಧೋಗತಿಗೆ
ಕೆಡಿಸುವರು +ರಾಷ್ಟ್ರವನು +ಕ್ಷಾತ್ರವ
ತಡೆಗಡಿಸಿ+ ಚತುರಂಗ +ಬಲವನು
ಹುಡಿಹುಡಿಯ +ಮಾಡುವರು +ನಿರ್ಜರರ್+ಅರಸ +ಕೇಳೆಂದ

ಅಚ್ಚರಿ:
(೧) ನಾಕ, ಅಧೋಗತಿ – ಸ್ವರ್ಗ, ನರಕಕ್ಕೆ ಬಳಸಿದ ಪದಗಳು
(೨) ದೇವತೆಗಳನ್ನು ನಿರ್ಜರರ್ ಎಂದು ಕರೆದು; ನಿರ್ಜರರರಸ ಪದವನ್ನು ಬಳಸಿರುವುದು

ಪದ್ಯ ೭೭: ಯಾರಿಗೆ ಅತಿಶಯವಾದ ಸಿದ್ಧಿ ಸಿಗುತ್ತದೆ?

ಉತ್ತಮರ ಸಂಗದೊಳಗೋಲಾ
ಡುತ್ತ ದುರ್ವಿಷಯಂಗಳನು ಮುರಿ
ಯೊತ್ತಿ ಸಕಲ ಚರಾಚರದ ಸುಖ ದುಃಖವನು ತಾನು
ಹೊತ್ತು ನಡೆವುತ ಪುಣ್ಯ ಪಾಪವಿ
ದೆತ್ತಣದು ತನಗೆಂಬ ಕಾಣಿಕೆ
ಯುತ್ತರೋತ್ತರ ಸಿದ್ಧಿ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೭೭ ಪದ್ಯ)

ತಾತ್ಪರ್ಯ:
ಒಳ್ಳೆಯವರ ಸಂಗದಲ್ಲಿದ್ದು, ಕೆಟ್ಟವಿಷಯಗಳ ಹಿಂದೆ ಹೋಗದೆ, ಜೀವಿಸುವ ಮತ್ತು ನಿರ್ಜೀವದೆಲ್ಲದರ ಸುಖ ದುಃಖವೂ ತನ್ನದೇ ಎಂದು ಭಾವಿಸಿ, ಎಲ್ಲರಿಗೂ ಸುಖ ದುಃಖಗಳು ಕಲ್ಪಿತ ಎಂದು ತಿಳಿದು, ಅವರಿಗೆ ಸರಿಯಾದ ದಾರಿ ತನಗೆ ಪುಣ್ಯವೂ ಇಲ್ಲ ಪಾಪವೂ ಇಲ್ಲ ಎಂದರಿಯುವುದು ಅತಿಶಯವಾದ ಸಿದ್ಧಿ (ಆತ್ಮನಿಗೆ ಕರ್ಮಲೇಪವಿಲ್ಲವೆಂದು ತಿಳಿದರೆ ಪುಣ್ಯವೂ ಪಾಪವೂ ಅಂಟುವುದಿಲ್ಲ) ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಉತ್ತಮ: ಶ್ರೇಷ್ಠ; ಸಂಗ: ಜೊತೆ; ಓಲಾಡು: ಹಾರಾಡು, ಸುಖದಿಂದ ಆಡು; ದುರ್ವಿಷಯ: ಕೆಟ್ಟ ವಿಚಾರ; ಮುರಿ: ಸೀಳು; ಸಕಲ: ಎಲ್ಲಾ; ಚರಾಚರ: ಜೀವ ಮತ್ತು ನಿರ್ಜೀವ ವಸ್ತುಗಳು; ಸುಖ: ಸಂತೋಷ; ದುಃಖ: ದುಗುಡ; ಹೊತ್ತು: ಹೊರು; ನಡೆ: ಹೆಜ್ಜೆ ಹಾಕು; ಪುಣ್ಯ: ಸದಾಚಾರ, ಪರೋಪಕಾರ; ಪಾಪ: ಕೆಟ್ಟ ಕೆಲಸ; ಎತ್ತಣ: ಎಲ್ಲಿಯ; ತನಗೆ: ಅವನಿಗೆ; ಕಾಣಿಕೆ: ಉಡುಗೊರೆ; ಉತ್ತರೋತ್ತರ: ಹೆಚ್ಚು, ಬೆಳವಣಿಗೆ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ಉತ್ತಮರ +ಸಂಗದೊಳಗ್+ಓಲಾ
ಡುತ್ತ +ದುರ್ವಿಷಯಂಗಳನು +ಮುರಿ
ಯೊತ್ತಿ+ ಸಕಲ +ಚರಾಚರದ+ ಸುಖ +ದುಃಖವನು +ತಾನು
ಹೊತ್ತು +ನಡೆವುತ+ ಪುಣ್ಯ +ಪಾಪವಿದ್
ಎತ್ತಣದು +ತನಗೆಂಬ +ಕಾಣಿಕೆ
ಯುತ್ತರೋತ್ತರ +ಸಿದ್ಧಿ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಸುಖ, ದುಃಖ; ಪುಣ್ಯ, ಪಾಪ; ಚರ, ಅಚರ; – ವಿರುದ್ಧ ಪದಗಳ ಬಳಕೆ

ಪದ್ಯ ೭೬: ಉಭಯತ್ವ ನೀತಿ ಹೇಳುವುದೇನು?

ಜೀವ ಪರಮರಭೇದವನು ಸಂ
ಭಾವಿಸದೆ ವೇದಾಂತ ಶಾಸ್ತ್ರವಿ
ದಾವ ಮುಖವೆಂದರಿಯದೇ ದಾಸೋಹಮೆಂದೆನುತೆ
ಕೋವಿದರ ಸಂಗವನುಲೀದು ಮಾ
ಯಾ ವಿಲಾಸದ ಬಗೆಯ ನೋಡದೆ
ಸಾವುತಿಹುದೈ ದ್ವೈತ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೭೬ ಪದ್ಯ)

ತಾತ್ಪರ್ಯ:
ಜೀವಾತ್ಮನೇ ಪರಮಾತ್ಮನೆಂಬ ಅಭೇದವನ್ನು ಒಪ್ಪದೆ, ವೇದಾಂತ ಶಾಸ್ತ್ರದ ಮುಖವಾವುದು ಎಂಬುಅನ್ನು ತಿಳಿಯದೇ, ಕೇವಲ ದಾಸೋಹಂ ಎಂದು ಹೇಳುತ್ತಾ, ಜ್ಞಾನಿಗಳ ಸಂಗವನ್ನು ಕೈಬಿಟ್ಟು ಮಾಯೆಯ ವಿಲಾಸವನ್ನು ತಿಳಿದುಕೊಳ್ಳದೆ, ದ್ವೈತವು ನಶಿಸುತ್ತಿದ್ದೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಜೀವ: ಉಸಿರಾಡುವ; ಪರಮ: ಪರಮಾತ್ಮ; ಭೇದ: ಬೇರೆ; ಸಂಭಾವಿಸು: ಧ್ಯಾನ ಮಾಡು, ಯೋಚಿಸು; ವೇದಾಂತ: ಉಪನಿಷತ್ತುಗಳು; ಶಾಸ್ತ್ರ: ಧಾರ್ಮಿಕ ವಿಷಯ; ಆವ: ಯಾವುದು; ಮುಖ: ಆನನ; ಅರಿ: ತಿಳಿ; ದಾಸೋಹಂ; ನಾನು ದಾಸ, ಭಕ್ತ; ಕೋವಿದ: ಜ್ಞಾನಿ, ವಿದ್ವಾಂಸ; ಸಂಗ: ಜೊತೆ; ಅಳಿ: ನಾಶ, ದೂರವುಳಿ; ಉಳಿ: ಬಿಡು, ತೊರೆ; ಮಾಯ: ಮಿಥ್ಯೆ, ಭ್ರಾಂತಿ; ವಿಲಾಸ:ಉಲ್ಲಾಸ, ಸಂಭ್ರಮ; ಬಗೆ: ರೀತಿ; ನೋಡು: ವೀಕ್ಷಿಸು; ಸಾವು: ನಾಶ, ಕೊನೆ, ಮರಣ; ದ್ವೈತ: ಬ್ರಹ್ಮ ಮತ್ತು ಜೀವ ಬೇರೆ ಬೇರೆ ಎಂದು ಪ್ರತಿಪಾದಿಸುವ ಮತ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ಜೀವ+ ಪರಮರ್+ಅಭೇದವನು+ ಸಂ
ಭಾವಿಸದೆ+ ವೇದಾಂತ +ಶಾಸ್ತ್ರವಿದ್
ಆವ +ಮುಖವೆಂದ್+ಅರಿಯದೇ +ದಾಸೋಹಂ+ಎಂದೆನುತೆ
ಕೋವಿದರ+ ಸಂಗವನ್+ಉಳಿದು +ಮಾ
ಯಾ +ವಿಲಾಸದ +ಬಗೆಯ +ನೋಡದೆ
ಸಾವುತಿಹುದೈ +ದ್ವೈತ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಐ ಕಾರದ ಪದಗಳ ಬಳಕೆ – ಸಾವುತಿಹುದೈ ದ್ವೈತ ಚಿತ್ತೈಸು

ಪದ್ಯ ೭೫: ಪಶು ಯೋನಿಯಲ್ಲಿ ಸಂಭೋಗಿಸಿದರೇನಾಗುತ್ತದೆ?

ಯೋನಿಯಲ್ಲದ ಠಾವುಗಳಲಿ ವಿ
ಯೋನಿಯಹ ವಿಷಯಂಗಳಲಿ ಪಶು
ಯೋನಿಯಲಿ ಸಂಭೋಗಿಸುವ ಪಾತಕರ ಪರಿವಿಡಿಯ
ಏನ ಹೇಳಲು ಬಹುದು ನರಕ ವಿ
ತಾನದೊಳಗೋಲಾಡಿ ಬಳಿಕಾ
ಶ್ವಾನಯೋನಿಯೊಳವರು ಜನಿಸುವರೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೭೫ ಪದ್ಯ)

ತಾತ್ಪರ್ಯ:
ಯೋನಿಯನ್ನು ಬಿಟ್ಟು ನಿಷಿದ್ಧ ಸ್ಥಳಗಳಲ್ಲಿ, ಪ್ರಾಣಿಗಳಿಗೆ ವಿಷಯವಾದೆಡೆಗಳಲ್ಲಿ, ಮನುಷ್ಯ ಯೋನಿಯಲ್ಲದೆ ಪ್ರಾಣಿ ಯೋನಿಗಳಲ್ಲಿ ಸಂಭೋಗಿಸುವವರು ಅನೇಕ ನರಕಗಳಲ್ಲಿದ್ದು ಬಳಿಕ ನಾಯಿಯಾಗಿ ಜನ್ಮತಾಳುತ್ತಾರೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಯೋನಿ: ಗರ್ಭಕೋಶ; ಅಲ್ಲದ: ನಿಷಿದ್ಧ; ಠಾವು: ಎಡೆ , ಸ್ಥಳ; ವಿಯೋನಿ: ಜಡ ಪದಾರ್ಥ; ವಿಷಯ: ಇಂದ್ರಿಯ ಗೋಚರವಾಗುವ; ಪಶು: ಪ್ರಾಣಿ; ಸಂಭೋಗ:ಕೂಟ, ಸುರತ, ಉಪಭೋಗ; ಪಾತಕ: ಪಾಪಿ; ಪರಿವಿಡಿ: ವ್ಯವಸ್ಥಿತವಾದ ಕ್ರಮ, ಅನುಕ್ರಮ; ಹೇಳು: ತಿಳಿಸು; ನರಕ: ಅಧೋಲೋಕ; ವಿತಾನ:ಹಬ್ಬುವಿಕೆ, ವಿಸ್ತಾರ; ಓಲಾಡು: ಹಾರಾಡು; ಬಳಿಕ: ನಂತರ; ಶ್ವಾನ: ನಾಯಿ; ಜನಿಸು: ಹುಟ್ಟು; ಮುನಿ: ಋಷಿ;

ಪದವಿಂಗಡಣೆ:
ಯೋನಿಯಲ್ಲದ +ಠಾವುಗಳಲಿ+ ವಿ
ಯೋನಿಯಹ +ವಿಷಯಂಗಳಲಿ +ಪಶು
ಯೋನಿಯಲಿ +ಸಂಭೋಗಿಸುವ+ ಪಾತಕರ+ ಪರಿವಿಡಿಯ
ಏನ+ ಹೇಳಲು +ಬಹುದು +ನರಕ +ವಿ
ತಾನದೊಳಗ್+ಓಲಾಡಿ +ಬಳಿಕಾ
ಶ್ವಾನ+ಯೋನಿಯೊಳ್+ಅವರು +ಜನಿಸುವರ್+ಎಂದನಾ +ಮುನಿಪ

ಅಚ್ಚರಿ:
(೧) ಯೋನಿ – ೧-೩ ಸಾಲಿನ ಮೊದಲ ಪದ
(೨) ವಿಯೋನಿ, ವಿಷಯ, ವಿತಾನ – ವಿ ಕಾರದ ಪದಗಳ ಬಳಕೆ
(೩) ಪ ಕಾರದ ಜೋಡಿ ಪದ – ಪಾತಕರ ಪರಿವಿಡಿ

ಪದ್ಯ ೭೪: ಯಾವುದು ರಾಜನೀತಿಯಲ್ಲ?

ವಿಲಗ ಸಾಗರನಾಗಿ ದೇಶವ
ಹಿಳಿದು ಹಿಂಡುತ ದಾನ ಧರ್ಮವ
ನುಳಿದು ದೇವ ಬ್ರಾಹ್ಮರೆನ್ನದೆ ಕಂಡ ಜನರಿಂದೆ
ಗಳಿಗೆ ಗಳಿಗೆಗೆ ದಂಡದೋಷವ
ಕೊಳುತೆ ಕಡೆಯೊಳಧೋಗತಿಗೆ ತಾ
ನಿಳಿದು ಹೋಹುದು ನೀತಿಯೇ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೭೪ ಪದ್ಯ)

ತಾತ್ಪರ್ಯ:
ಹಿಂಸೆಯ ಸಾಗರನಾಗಿ, ಜನರ ವಿರೋಹವನ್ನು ಕಟ್ಟಿಕೊಂಡು, ದೇಶದ ಪ್ರಜೆಗಳನ್ನು ಹಿಂಡಿ ಹಿಪ್ಪೆಮಾಡಿ, ದಾನ ಧರ್ಮಗಳನ್ನು ಬಿಟ್ಟು, ದೇವರು ಬ್ರಾಹ್ಮಣರೆಂದು ನೋಡದೆ ಯಾರೆಂದರೆ ಅವರಿಂದ ಮತ್ತೆ ಮತ್ತೆ ದಂಡವನ್ನು ವಿಧಿಸಿ, ತೆರಿಗೆಯನ್ನು ಸಂಗ್ರಹಿಸಿ, ಕೊನೆಗೆ ಅಧೋಗತಿಗಿಳಿಯುವುದು ನೀತಿಯೇ ರಾಜ ಎಂದು ಧೃತರಾಷ್ಟ್ರನನ್ನು ಸನತ್ಸುಜಾತರು ಪ್ರಶ್ನಿಸಿದರು.

ಅರ್ಥ:
ವಿಲಗ: ತೊಂದರೆ, ಕಷ್ಟ, ಹಿಂಸೆ; ಸಾಗರ: ಸಮುದ್ರ; ದೇಶ: ರಾಷ್ಟ್ರ; ಹಿಳಿ:ಹಿಸುಕಿ ರಸವನ್ನು ತೆಗೆ, ಹಿಂಡು; ಹಿಂಡು: ಹಿಸುಕು; ದಾನ: ಪರರಿಗೆ ಕೊಡುವ ಕೊಡುಗೆ; ಧರ್ಮ: ಧಾರಣ ಮಾಡಿದುದು, ನಡತೆ; ಉಳಿ: ಬಿಡು, ತೊರೆ ; ದೇವ: ಭಗವಂತ; ಬ್ರಾಹ್ಮ: ಬ್ರಾಹ್ಮಣ, ಶ್ರೇಷ್ಠ; ಕಂಡ: ನೋಡಿದ; ಜನ: ಮನುಷ್ಯ; ಗಳಿಗೆ: ಕ್ಷಣ; ದಂಡ: ಶಿಕ್ಷೆ; ದೋಷ: ತಪ್ಪು; ಕಡೆ: ಕೊನೆ; ಅಧೋಗತಿ: ನರಕ; ಇಳಿದು: ಜಾರಿ; ಹೋಹು: ಹೋಗು; ನೀತಿ: ಒಳ್ಳೆಯ ನಡತೆ, ಶಿಷ್ಟಾಚಾರ; ಹೇಳು: ತಿಳಿಸು; ಮುನಿ: ಋಷಿ;

ಪದವಿಂಗಡಣೆ:
ವಿಲಗ+ ಸಾಗರನಾಗಿ +ದೇಶವ
ಹಿಳಿದು +ಹಿಂಡುತ +ದಾನ +ಧರ್ಮವನ್
ಉಳಿದು +ದೇವ +ಬ್ರಾಹ್ಮರೆನ್ನದೆ +ಕಂಡ +ಜನರಿಂದೆ
ಗಳಿಗೆ +ಗಳಿಗೆಗೆ+ ದಂಡ+ದೋಷವ
ಕೊಳುತೆ +ಕಡೆಯೊಳ್+ಅಧೋಗತಿಗೆ+ ತಾನ್
ಇಳಿದು +ಹೋಹುದು +ನೀತಿಯೇ +ಹೇಳೆಂದನಾ+ ಮುನಿಪ

ಅಚ್ಚರಿ:
(೧) ವಿಲಗ ಸಾಗರ – ಹಿಂಸೆಯ ಸಾಗರ, ಕಡು ದುಷ್ಟ ನೆಂದು ಸೂಚಿಸಲು ಬಳಸಿದ ಪದ
(೨) ಹಿಳಿ, ಹಿಂಡು – ಸಮನಾರ್ಥಕ ಪದ
(೩) ಜೋಡಿ ಪದಗಳು – ‘ಹಿ’ – ಹಿಳಿದು ಹಿಂಡು; ‘ದ’ – ದಾನ ಧರ್ಮ
(೪) ಜೋಡಿ ಪದ – ಗಳಿಗೆ ಗಳಿಗೆ

ಪದ್ಯ ೭೩: ರಾಜನೀತಿ ಎಂದರೇನು?

ನುಡಿದುದನು ಪೂರೈಸಿ ಕಾಲದ
ಕಡೆಯ ಕಾಣಿಸಿ ಹೋಹವರ ಬೀ
ಳ್ಕೊಡುತ ಹಳೆಯರನಾಪ್ತರನು ಮನ್ನಿಸುತ ತನ್ನುವನು
ಹಿಡಿದು ಸೇವೆಯ ಮಾಡುವವರನು
ಬಿಡದೆ ನಾನಾ ತೆರದ ಪದವಿಯ
ಕೊಡುತಲಿಹುದಿದು ನೀತಿ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೭೩ ಪದ್ಯ)

ತಾತ್ಪರ್ಯ:
ಕೊಟ್ಟ ಮಾತಿಗೆ ತಪ್ಪದೆ, ಸಮಯ ಪಾಲನೆ ಮಾಡುತ್ತಾ, ಹೋಗುವವರನ್ನು ಬೀಳ್ಕೊಟ್ಟು, ಹಿಂದಿನಿಂದ ಇದ್ದವರನ್ನು ಆಪ್ತರನ್ನು ಮನ್ನಿಸುತ್ತಾ, ತನ್ನ ಸೇವಕರ ಕೈ ಬಿಡದೆ, ಅವರವರ ಯೋಗ್ಯತಾನುಸಾರವಾದ ಪದವಿಯನ್ನು ಕೊಡುವುದು ರಾಜನೀತಿ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ನುಡಿ: ಮಾತು; ಪೂರೈಸು: ಪೂರ್ಣಗೊಳಿಸು, ಪಾಲಿಸು; ಕಾಲ: ಸಮಯ; ಕಡೆ: ಕೊನೆ, ಅಂಚು; ಕಾಣಿಸು: ನೋಡಿ; ಹೋಹ: ಹೋಗು; ಬೀಳ್ಕೊಡು: ಕಳಿಸಿಕೊಡು; ಹಳೆಯ:ಪುರಾತನ, ಹಿಂದಿನ; ಆಪ್ತ: ಹತ್ತಿರದವ; ಮನ್ನಿಸು: ಗೌರವಿಸು; ಹಿಡಿ: ಬಂಧನ, ಮುಟ್ಟಿಗೆ, ಮುಷ್ಟಿ; ಸೇವೆ: ಉಪಚಾರ, ಶುಶ್ರೂಷೆ; ಬಿಡದೆ: ತೊರೆಯದೆ; ನಾನಾ: ಹಲವಾರು; ತೆರದ: ರೀತಿಯ; ಪದವಿ: ಪಟ್ಟ; ಕೊಡು: ನೀಡು; ನೀತಿ: ಒಳ್ಳೆಯ ನಡತೆ, ಶಿಷ್ಟಾಚಾರ, ನ್ಯಾಯ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ನುಡಿದುದನು+ ಪೂರೈಸಿ +ಕಾಲದ
ಕಡೆಯ +ಕಾಣಿಸಿ +ಹೋಹವರ +ಬೀ
ಳ್ಕೊಡುತ +ಹಳೆಯರನ್+ಆಪ್ತರನು +ಮನ್ನಿಸುತ +ತನ್ನುವನು
ಹಿಡಿದು +ಸೇವೆಯ +ಮಾಡುವವರನು
ಬಿಡದೆ +ನಾನಾ +ತೆರದ +ಪದವಿಯ
ಕೊಡುತಲಿಹುದಿದು+ ನೀತಿ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಕೊಡುತ – ೩, ೬ ಸಾಲಿನ ಮೊದಲ ಪದ
(೨) ಕ ಕಾರದ ಸಾಲು ಪದಗಳು – ಕಾಲದ ಕಡೆಯ ಕಾಣಿಸಿ