ಪದ್ಯ ೬೮: ಯಾರಿಗೆ ಮೋಕ್ಷಗಳ ಐಶ್ವರ್ಯವು ತಪ್ಪುವುದಿಲ್ಲ?

ಧರಣಿಯಮರರ ಸೇವೆಯನು ವಿ
ಸ್ತರಿಸಿ ಸತ್ಕಾರದಲವರನಾ
ದರಿಸಿ ಬಹುಮಾನವನು ವಿರಚಿಸಿದಾ ಮಹಾತ್ಮರಿಗೆ
ಎರವಹುದೆ ಸ್ವರ್ಗಾಪವರ್ಗದ
ಸಿರಿಯದೆಂಬುದನರಿದು ನಡೆವಂ
ಗರಿದದಾವುದು ಭೂಪ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೬೮ ಪದ್ಯ)

ತಾತ್ಪರ್ಯ:
ಬ್ರಾಹ್ಮಣರ ಸೇವೆ ಸತ್ಕಾರಗಳನ್ನು ಮಾಡಿ ಹೆಚ್ಚಿನ ಉಡುಗೊರೆಗಳನ್ನು ಕೊಟ್ಟ ಮಹಾತ್ಮನಿಗೆ ಸ್ವರ್ಗ, ಮೋಕ್ಷಗಳ ಐಶ್ವರ್ಯವು ತಪ್ಪುವುದಿಲ್ಲ ಎನ್ನುವುದನ್ನು ತಿಳಿದು ನಡೆಯುವವನಿಗೆ ಅಸಾಧ್ಯವಾವುದಾದರೂ ಏನು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಧರಣಿ: ಭೂಮಿ; ಅಮರ: ದೇವತೆ; ಧರಣಿಯಮರರು: ಬ್ರಾಹ್ಮಣ; ಸೇವೆ: ಶುಶ್ರೂಷೆ; ವಿಸ್ತರ:ಹಬ್ಬುಗೆ, ವಿಸ್ತಾರ; ಸತ್ಕಾರ: ಗೌರವ; ಆದರಿಸು: ಪ್ರೀತಿ, ಉಪಕಾರ, ಸತ್ಕಾರ; ಬಹುಮಾನ: ಉಡುಗೊರೆ; ವಿರಚಿಸು: ನಿರ್ಮಿಸು; ಮಹಾತ್ಮ: ಶ್ರೇಷ್ಠ; ಎರವು: ಅಭಾವ, ದೋಷ; ಸ್ವರ್ಗ: ನಾಕ; ಅಪವರ್ಗ: ಮೋಕ್ಷ; ಸಿರಿ: ಐಶ್ವರ್ಯ; ಅರಿ: ತಿಳಿ; ನಡೆ: ಹೆಜ್ಜೆ ಹಾಕು; ಭೂಪ: ರಾಜ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ಧರಣಿ+ಯಮರರ +ಸೇವೆಯನು +ವಿ
ಸ್ತರಿಸಿ +ಸತ್ಕಾರದಲ್+ಅವರನ್+
ಆದರಿಸಿ +ಬಹುಮಾನವನು +ವಿರಚಿಸಿದ+ಆ +ಮಹಾತ್ಮರಿಗೆ
ಎರವಹುದೆ+ ಸ್ವರ್ಗ+ ಅಪವರ್ಗದ
ಸಿರಿಯದ್+ಎಂಬುದನ್+ಅರಿದು +ನಡೆವಂಗ್
ಅರಿದದ್+ಆವುದು +ಭೂಪ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಸ್ವರ್ಗಾಪವರ್ಗ – ಪದದ ಬಳಕೆ

ಪದ್ಯ ೬೭: ಧೃತರಾಷ್ಟ್ರನು ಇನ್ನಾವ ಪ್ರಶ್ನೆಗಳನ್ನು ಕೇಳಿದನು?

ಜ್ಞಾತವೇನಜ್ಞಾತವಾವುದು
ನೀತಿಯಾವುದನೀತಿ ಯಾವುದು
ದ್ವೈತವೇನದ್ವೈತವಾವುದು ವೈದಿಕಾಂಗದಲಿ
ಖ್ಯಾತಿಯೇನಖ್ಯಾತಿ ಯಾವುದು
ಭೀತಿ ಯಾವುದಭೀತಿ ಯಾವುದು
ನೀತಿಯಿಂದ ಮುನೀಶ ಬಿತ್ತರಿಸೆಂದನಾ ಭೂಪ (ಉದ್ಯೋಗ ಪರ್ವ, ೪ ಸಂಧಿ, ೬೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನಲ್ಲಿದ್ದ ಪ್ರಶ್ನೆಗಳನ್ನು ಮುಂದುವರೆಸಿದನು. ಮುನಿವರ್ಯರೇ, ತಿಳಿದುದು ಯಾವುದು, ತಿಳಿಯದಿರುವುದಾವುದು, ನೀತಿ ಯಾವುದು ಅನೀತಿ ಯಾವುದು, ದ್ವೈತವೇನು ಅದ್ವೈತವೇನು? ಕೀರ್ತಿಯಾವುದು ಅಪಕೀರ್ತಿ ಯಾವುದು, ಭೀತಿ ಮತ್ತು ನಿರ್ಭೀತಿ ಯಾವುದು, ಇವೆಲ್ಲವನ್ನು ತಿಳಿಯಹೇಳಲು ಧೃತರಾಷ್ಟ್ರನು ಸನತ್ಸುಜಾತರಿಗೆ ಕೇಳಿದನು.

ಅರ್ಥ:
ಜ್ಞಾತ: ತಿಳಿದವನು, ತಿಳಿದ; ಅಜ್ಞಾತ: ತಿಳಿಯದವ; ನೀತಿ: ಶಿಷ್ಟಾಚಾರ; ಅನೀತಿ: ಕೆಟ್ಟ ನಡತೆ; ದ್ವೈತ: ಉಭಯತ್ವ, ದ್ವಂದ್ವಸ್ಥಿತಿ; ಅದ್ವೈತ: ಒಂದೇ ಎಂದು ಪ್ರತಿಪಾದಿಸುವ ತತ್ವ; ವೈದಿಕ: ವೇದಗಳನ್ನು ಬಲ್ಲವನು; ಖ್ಯಾತಿ: ಪ್ರಸಿದ್ಧ; ಅಖ್ಯಾತಿ: ಅಪ್ರಸಿದ್ಧ; ಭೀತಿ: ಭಯ; ಅಭೀತಿ: ನಿರ್ಭಯ; ಮುನೀಶ: ಋಷಿ; ಬಿತ್ತರಿಸು: ತಿಳಿಸು; ಭೂಪ: ರಾಜ; ಅಂಗ: ಭಾಗ;

ಪದವಿಂಗಡಣೆ:
ಜ್ಞಾತವೇನ್+ಅಜ್ಞಾತವಾವುದು
ನೀತಿಯಾವುದ್+ಅನೀತಿ +ಯಾವುದು
ದ್ವೈತವೇನ್+ಅದ್ವೈತವಾವುದು +ವೈದಿಕಾಂಗದಲಿ
ಖ್ಯಾತಿಯೇನ್+ಅಖ್ಯಾತಿ +ಯಾವುದು
ಭೀತಿ+ ಯಾವುದ್+ಅಭೀತಿ +ಯಾವುದು
ನೀತಿಯಿಂದ +ಮುನೀಶ +ಬಿತ್ತರಿಸೆಂದನಾ+ ಭೂಪ

ಅಚ್ಚರಿ:
(೧) ವಿರುದ್ಧ ಪದಗಳ ಬಳಕೆ: ಜ್ಞಾತ, ಅಜ್ಞಾತ; ನೀತಿ, ಅನೀತಿ; ದ್ವೈತ, ಅದ್ವೈತ; ಖ್ಯಾತಿ, ಅಖ್ಯಾತಿ; ಭೀತಿ, ಅಭೀತಿ
(೨) ಖ್ಯಾತಿ, ಭೀತಿ, ನೀತಿ – ಪ್ರಾಸ ಪದಗಳ ಬಳಕೆ

ಪದ್ಯ ೬೬: ಯಾರು ಶಿಷ್ಟರ ಪಂಕ್ತಿಗೆ ಸೇರಲು ಅನರ್ಹರು?

ಯುವತಿಯರು ಗಾಯಕರು ಕಿತವರು
ತವತವಗೆ ಕೈವಾರಿಸುವರಾವ
ವವನನವನೇ ಪಂಕ್ತಿ ದೂಷಕೆನಿಹಪರಂಗಳಿಗೆ
ಇವರು ಮೂವರು ನಿಂದಿಸುವರಾ
ವವನನವ ಸರ್ವಜ್ಞನೆನಿಸುವ
ನವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ (ಉದ್ಯೋಗ ಪರ್ವ, ೪ ಸಂಧಿ, ೬೬ ಪದ್ಯ)

ತಾತ್ಪರ್ಯ:
ತರುಣಿಯರು, ಗಾಯಕರು, ಜೂಜುಗಾರರು ಈ ಮೂವರು ಯಾರನ್ನು ಹೊಗಳುವರೋ ಅವನು ಇಹಪರಲೋಕಗಳಲ್ಲಿ ಶಿಷ್ಟರ ಪಂಕ್ತಿಗೆ ಸೇರಲು ಅನರ್ಹರು. ಈ ಮೂರವು ಯಾರನ್ನು ನಿಂದಿಸುವರೋ ಅವನು ಸರ್ವಜ್ಞ, ಇದು ಧರ್ಮರಹಸ್ಯ ಎಂದು ನೀನು ಅರಿತುಕೋ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಯುವತಿ: ಹೆಣ್ಣು; ಗಾಯಕ: ಹಾಡುಗಾರ; ಕಿತವ: ಮೋಸಗಾರ, ಸುಳ್ಳುಗಾರ, ಜೂಜುಗಾರ; ತವ: ನಿನ್ನ; ಕೈವಾರಿಸು: ಹೊಗಳು; ಪಂಕ್ತಿ: ಸಾಲು; ದೂಷಕ: ದೂಷಿಸುವವ; ಇಹಪರ: ಈ ಲೋಕ ಮತ್ತು ಪರಲೋಕ; ಮೂವರು: ತ್ರಯ; ನಿಂದಿಸು: ದೂಷಿಸು; ಸರ್ವಜ್ಞ: ತಿಳಿದವ; ಅವನಿಪತಿ: ರಾಜ; ಚಿತ್ತೈಸು: ಗಮನಿಸು; ಧರ್ಮ: ಧಾರಣೆ ಮಾಡಿದುದು; ರಹಸ್ಯ: ಗೌಪ್ಯ; ವಿಸ್ತರ: ವಿವರಣೆ;

ಪದವಿಂಗಡಣೆ:
ಯುವತಿಯರು +ಗಾಯಕರು +ಕಿತವರು
ತವತವಗೆ+ ಕೈವಾರಿಸುವರ್+ಆವವ್
ಅವನನ್+ಅವನೇ+ ಪಂಕ್ತಿ +ದೂಷಕನ್+ಇಹಪರಂಗಳಿಗೆ
ಇವರು+ ಮೂವರು+ ನಿಂದಿಸುವರಾವ್
ಅವನನ್+ಅವ+ ಸರ್ವಜ್ಞನ್+ಎನಿಸುವನ್
ಅವನಿಪತಿ +ಚಿತ್ತೈಸು +ಧರ್ಮರಹಸ್ಯ+ ವಿಸ್ತರವ

ಅಚ್ಚರಿ:
(೧) ತವತವ, ಅವನವ – ಪದಗಳ ಬಳಕೆ
(೨) ಯಾರ ಹೊಗಳಿಕೆಯಿಂದ ಎಚ್ಚರವಾಗಿರಬೇಕೆಂದು ತಿಳಿಸುವ ಪದ್ಯ

ಪದ್ಯ ೬೫: ಏಕೆ ಬ್ರಾಹ್ಮಣೋತ್ತಮರಿಗೆ ಅಭಿವಾದನೆ ಮಾಡಬೇಕು?

ವೇದ ಪುರುಷರ ವಿಗ್ರಹದಲಿ ವಿ
ಭೇದವಿಲ್ಲದೆ ಬಿಸಜಸಂಭವ
ನಾದಿಯಾದ ಸಮಸ್ತ ದೇವರು ನೆಲೆವನೆಗಳಾಗಿ
ಕಾದುಕೊಂಡಿಹರಂತು ಕಾರಣ
ವಾದಿಸದೆ ವಿಪ್ರೋತ್ತಮರನಭಿ
ವಾದಿಸುವುದುತ್ತಮವಲೇ ಕೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೬೫ ಪದ್ಯ)

ತಾತ್ಪರ್ಯ:
ವೇದಾಧ್ಯಯನ ಸಂಪನ್ನರ ದೇಹದಲ್ಲಿ ಬ್ರಹ್ಮನೇ ಮೊದಲಾಗಿ ಸಮಸ್ತ ದೇವತೆಗಳು ನೆಲೆಸಿ ಮನೆ ಮಾಡಿ ಅವನನ್ನು ಕಾಯುತ್ತಿರುವರು. ಆದುದರಿಂದ ಬ್ರಾಹ್ಮಣೋತ್ತಮರನ್ನು ಕಂಡು ಅಭಿವಾದ ಮಾಡುವುದು ಉತ್ತಮ. ಈ ವಿಷಯದಲ್ಲಿ ವಾದಮಾಡಬಾರದು.

ಅರ್ಥ:
ವೇದ: ಶೃತಿ; ಪುರುಷ: ಮನುಷ್ಯ; ವಿಗ್ರಹ: ದೇಹ, ಶರೀರ; ವಿಭೇದ: ವ್ಯತ್ಯಾಸ; ಬಿಸಜ:ಕಮಲ, ತಾವರೆ; ಸಂಭವ: ಹುಟ್ಟು; ಆದಿ: ಮುಂತಾದ; ಸಮಸ್ತ: ಎಲ್ಲಾ; ದೇವರು: ಭಗವಂತ; ನೆಲೆ: ವಾಸಸ್ಥಾನ; ಕಾಯು: ಕಾವಲಿರು; ಕಾರಣ: ನಿಮಿತ್ತ, ಹೇತು; ವಾದ: ಚರ್ಚೆ, ವಿವಾದ; ವಿಪ್ರ: ಬ್ರಾಹ್ಮಣ: ಉತ್ತಮ: ಶ್ರೇಷ್ಠ; ಅಭಿವಾದನೆ: ನಮಸ್ಕರಿಸು; ಉತ್ತಮ: ಶ್ರೇಷ್ಠ, ದಕ್ಷ; ಕೇಳು: ಆಲಿಸು; ಮುನಿ: ಋಷಿ;

ಪದವಿಂಗಡಣೆ:
ವೇದ +ಪುರುಷರ +ವಿಗ್ರಹದಲಿ +ವಿ
ಭೇದವಿಲ್ಲದೆ +ಬಿಸಜಸಂಭವನ್
ಆದಿಯಾದ +ಸಮಸ್ತ +ದೇವರು +ನೆಲೆವನೆಗಳಾಗಿ
ಕಾದುಕೊಂಡಿಹರ್+ಅಂತು +ಕಾರಣ
ವಾದಿಸದೆ+ ವಿಪ್ರೋತ್ತಮರನ್+ಅಭಿ
ವಾದಿಸುವುದ್+ಉತ್ತಮವಲೇ +ಕೇಳೆಂದನಾ +ಮುನಿಪ

ಅಚ್ಚರಿ:
(೧) ಬ್ರಹ್ಮನನ್ನು ಬಿಸಜಸಂಭವ ಎಂದು ಕರೆದಿರುವುದು
(೨) ಆದಿ, ವಾದಿ – ಪ್ರಾಸ ಪದಗಳು
(೩) ವಾದಿಸದೆ, ಅಭಿವಾದಿಸು – ಪದಗಳ ಬಳಕೆ

ಪದ್ಯ ೬೪: ಯಾರು ಬ್ರಾಹ್ಮಣರಲ್ಲಿ ಸಮರ್ಥರು?

ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆಂದ (ಉದ್ಯೋಗ ಪರ್ವ, ೪ ಸಂಧಿ, ೬೪ ಪದ್ಯ)

ತಾತ್ಪರ್ಯ:
ಯಾವ ಬ್ರಾಹ್ಮಣನು ಯಜ್ಞವನು ಮಾಡುವನೋ, ತನ್ನ ಶಿಷ್ಯರಿಗೆ ಮಾಡುವ ವೇದಾಧ್ಯಯನದಿಂದ ಯೋಗ್ಯರಾದ ಶಿಷ್ಯರನ್ನು ತಯಾರಿಸಿ ಕಾಪಾಡುವನೋ, ದಾನ ನಿರತನೋ, ಇತರರು ಕೊಟ್ಟ ದಾನವನ್ನು ಸ್ವೀಕರಿಸಬಲ್ಲನೋ ಅಂತಹವನು ಬ್ರಾಹ್ಮಣರಲ್ಲಿ ಸಮರ್ಥನಾದವನು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಾಡು: ನಿರ್ವಹಿಸು, ರಚಿಸು, ತಯಾರಿಸು; ಯಜ್ಞ: ಅರ್ಧ್ವ; ಪರರು: ಇತರರು; ವೇದ: ಶೃತಿ; ಅಧ್ಯಯನ: ಓದು, ಕಲಿ; ವಿಷಯ: ವಿಚಾರ, ಸಂಗತಿ; ಯೋಗ್ಯ: ಸಮರ್ಥ; ದಾನ: ಪರರಿಗೆ ಕೊಡುವ ವಸ್ತು; ಲೋಗರು: ಜನರು; ನೀಡು: ಕೊಡು; ಒಳಕೊಂಬ: ತೆಗೆದುಕೊಳ್ಳು; ಗುಣ: ನಡತೆ, ಸ್ವಭಾವ; ಕೂಡಿಕೊಂಡಿಹ: ಹೊಂದಿಸಿಕೊಂಡಿರುವ; ಸಮರ್ಥ: ಯೋಗ್ಯವಾದ, ತಕ್ಕ; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಮಾಡುತಿಹ +ಯಜ್ಞವನು +ಪರರಿಗೆ
ಮಾಡಿಸುವ +ವೇದ+ಅಧ್ಯಯನವನು
ಮಾಡುತಿಹ +ತದ್ವಿಷಯದಲಿ +ಯೋಗ್ಯರನು +ಮಾಡಿಸುವ
ಮಾಡುತಿಹ+ ದಾನವನು +ಲೋಗರು
ನೀಡುತಿರಲ್+ಒಳಕೊಂಬ +ಗುಣವನು
ಕೂಡಿಕೊಂಡಿಹನೇ +ಸಮರ್ಥನು +ವಿಪ್ರರೊಳಗೆಂದ

ಅಚ್ಚರಿ:
(೧) ಮಾಡುತಿಹ – ೧, ೩, ೪ ಸಾಲಿನ ಮೊದಲ ಪದ
(೨) ಯೋಗ್ಯ, ಸಮರ್ಥ – ಸಮಾನಾರ್ಥಕ ಪದ