ಪದ್ಯ ೫೪: ಯಾವುದರಿಂದ ಅತ್ಯಂತ ಪುಣ್ಯಲಭಿಸುತ್ತದೆ?

ಜಾತಿಧರ್ಮವನನುಸರಿಸಿ ವರ
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತೆ ಪರಗುಣಸ್ತುತಿ ನಿಂದೆಗಳನುಳಿದು
ಭೂತನಾಥನ ಭುಕುತಿಯಲಿ ವಿ
ಖ್ಯಾತವಹ ಗುರುದೈವದಲಿ ಭಯ
ಭೀತಿ ಯಿಂದಿರಲದುವೆ ಕೇಳ್ ಸುಕೃತಕ್ಕೆ ಕಡೆಯೆಂದ (ಉದ್ಯೋಗ ಪರ್ವ, ೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ತನ್ನ ಕುಲ, ಜಾತಿ ಧರ್ಮವನ್ನನುಸರಿಸುತ್ತ, ತಂದೆ ತಾಯಿಗಳ ಶುಶ್ರೂಷೆ ಮಾಡುತ್ತಾ, ಪರರ ಗುಣದ ಹೊಗಳಿಕೆ ತೆಗಳಿಕೆಗಳನ್ನು ಬಿಟ್ಟು, ಶಿವನಲ್ಲಿ ಗುರು ದೈವದಲ್ಲಿ ಭಯಭಕ್ತಿಯಿಂದಿರುವುದೇ ಅತಿ ಹೆಚ್ಚಿನ ಪುಣ್ಯವನ್ನುಂಟು ಮಾಡುತ್ತದೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಜಾತಿ: ಕುಲ; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ವರ: ಶ್ರೇಷ್ಠ; ಮಾತೃ: ಮಾತೆ; ಪಿತೃ: ಪಿತ; ಪರಿಚರ್ಯೆ: ಸೇವೆ, ಶುಶ್ರೂಷೆ; ಸಂಪ್ರೀತಿ: ಅತಿಶಯವಾದ ಪ್ರೀತಿ, ಒಲವು; ಪರ: ಬೇರೆ; ಗುಣ: ನಡತೆ; ಸ್ತುತಿ: ಹೊಗಳಿಕೆ; ನಿಂದೆ: ತೆಗಳಿಕೆ; ಉಳಿದು: ಮಿಕ್ಕ; ಭೂತನಾಥ: ಶಿವ, ದೇವರು; ಭುಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಭೀತಿ: ಭಯ; ಸುಕೃತ: ಒಳ್ಳೆಯ ಕೆಲಸ; ಕಡೆ: ದಾರಿ;

ಪದವಿಂಗಡಣೆ:
ಜಾತಿ+ಧರ್ಮವನ್+ಅನುಸರಿಸಿ +ವರ
ಮಾತೃ+ಪಿತೃ +ಪರಿಚರಿಯದಲಿ +ಸಂ
ಪ್ರೀತಿವಡೆಯುತೆ +ಪರಗುಣ+ಸ್ತುತಿ +ನಿಂದೆಗಳನ್+ಉಳಿದು
ಭೂತನಾಥನ +ಭುಕುತಿಯಲಿ +ವಿ
ಖ್ಯಾತವಹ +ಗುರುದೈವದಲಿ +ಭಯ
ಭೀತಿ +ಯಿಂದಿರಲ್+ಅದುವೆ +ಕೇಳ್ +ಸುಕೃತಕ್ಕೆ +ಕಡೆಯೆಂದ

ಅಚ್ಚರಿ:
(೧) ಸ್ತುತಿ, ನಿಂದೆ – ವಿರುದ್ಧ ಪದ
(೨) ಮಾತೃ ಪಿತೃ; ಭಯ ಭಕ್ತಿ – ಜೋಡಿ ಪದಗಳ ಬಳಕೆ

ಪದ್ಯ ೫೩: ಉತ್ತಮರನ್ನು ರಕ್ಷಿಸಿ ಸಿಗುವ ಫಲವನ್ನು ಎಣಿಸಲು ಸಾಧ್ಯವೆ?

ಎಣಿಸಬಹುದೂರ್ವರೆಯ ಸೈಕತ
ಮಣಿಯನೊಯ್ಯಾರದಲಿ ಗಗನಾಂ
ಗಣದೊಳೈತಹ ವೃಷ್ಟಿಬಿಂದುವ ಲೆಕ್ಕಗೊಳಬಹುದು
ಎಣಿಸಬಾರದದೊಂದು ದಿವಿಜರ
ಗಣಕೆ ಗೋಚರವಾಗಿ ಸದ್ಬ್ರಾ
ಹ್ಮಣರೊಳೊಬ್ಬನ ರಕ್ಷಿಸಿದ ಫಲವರಸ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಭೂಮಿಯ ಮೇಲಿನ ಮರಳಿನ ಕಣಗಳನ್ನು ಬೇಕಾದರೆ ಲೆಕ್ಕ ಮಾಡಬಹುದು, ಆಕಾಶದಿಂದ ಉದುರುವ ಮಳೆಹನಿಯನ್ನು ಒಂದು ವೇಳೆ ಎಣಿಸಬೇಕಾದರೂ ಎಣಿಸಬಹುದು, ಆದರೆ ಬ್ರಾಹ್ಮಣರಲ್ಲಿ ಉತ್ತಮನಾದ ಸದ್ಬ್ರಾಹ್ಮಣನೊಬ್ಬನನ್ನು ರಕ್ಷಿಸಿದರೆ ಬರುವ ಫಲವನ್ನು ಮಾತ್ರ ಎಣಿಸಲು ದೇವತೆಗಳಿಗೂ ಸಾಧ್ಯವಿಲ್ಲ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ಹೇಳಿದರು.

ಅರ್ಥ:
ಎಣಿಸು: ಲೆಕ್ಕಮಾಡು; ಊರ್ವ: ಸಮುದ್ರದ ಬೆಂಕಿ, ಜಲಾಶಯ; ಸೈಕತ: ಮರಳು, ಉಸುಕು; ಮಣಿ: ಹರಳು, ಮುತ್ತು; ಒಯ್ಯಾರ: ಬೆಡಗು, ಬಿನ್ನಾಣ, ಸೊಗಸು; ಗಗನ: ಆಕಾಶ; ಅಂಗಣ: ಅಂಗಳ; ವೃಷ್ಟಿ: ಮಳೆ; ಬಿಂದು: ಚುಕ್ಕಿ; ವೃಷ್ಟಿಬಿಂದು: ಮಳೆ ಹನಿ; ಲೆಕ್ಕ: ಎಣಿಸು; ಒಂದು: ಏಕ; ದಿವಿಜ: ಬ್ರಾಹ್ಮಣ; ಗಣ: ಗುಂಪು; ಗೋಚರ:ಕಾಣುವುದು; ಸದ್ಬ್ರಾಹ್ಮಣ: ಒಳ್ಳೆಯ ವಿಪ್ರ; ರಕ್ಷಿಸು: ಕಾಪಾಡು; ಫಲ: ಫಲಿತಾಂಶ, ಪ್ರಯೋಜನ; ಕೇಳು: ಆಲಿಸು;

ಪದವಿಂಗಡಣೆ:
ಎಣಿಸಬಹುದ್+ಊರ್ವರೆಯ +ಸೈಕತ
ಮಣಿಯನ್+ಒಯ್ಯಾರದಲಿ +ಗಗನ+
ಅಂಗಣದೊಳ್+ಐತಹ +ವೃಷ್ಟಿ+ಬಿಂದುವ +ಲೆಕ್ಕಗೊಳಬಹುದು
ಎಣಿಸಬಾರದದ್+ಒಂದು +ದಿವಿಜರ
ಗಣಕೆ+ ಗೋಚರವಾಗಿ +ಸದ್ಬ್ರಾ
ಹ್ಮಣರೊಳ್+ಒಬ್ಬನ +ರಕ್ಷಿಸಿದ +ಫಲವ್+ಅರಸ+ ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಣಿಸಬಹುದೂರ್ವರೆಯ ಸೈಕತ ಮಣಿಯನ್; ಒಯ್ಯಾರದಲಿ ಗಗನಾಂಗಣದೊಳೈತಹ ವೃಷ್ಟಿಬಿಂದುವ ಲೆಕ್ಕಗೊಳಬಹುದು
(೨) ದಿವಿಜ, ಬ್ರಾಹ್ಮಣ – ಸಮಾನಾರ್ಥಕ ಪದ

ಪದ್ಯ ೫೨: ಯಾರು ಕಲ್ಲನ್ನು ದೈವವನ್ನಾಗಿ ಪರಿವರ್ತಿಸುತ್ತಾರೆ?

ಕೆಲಸ ಗತಿಯೊಳು ಕಡೆದ ಶಿಲೆಯನು
ಕಲುಕುಟಿಕನಿಳುಹುವನದಲ್ಲದೆ
ಹಲವು ಪರಿಯಿಂದದನು ಲೋಕಕೆ ದೈವವನು ಮಾಡಿ
ನಿಲಿಸುವವರುಂಟೇ ಸುರಾಸುರ
ರೊಳಗೆ ವಿಪ್ರೋತ್ತಮರುಳಿಯೆ ಜಗ
ದೊಳಗೆ ದೈವವದಾವುದೈ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶಿಲ್ಪಿಯು ತನ್ನ ಕುಶಲತೆಯಿಂದ ಕಲ್ಲುಬಂಡೆಯನ್ನು ಕಡೆದು ಮೂರ್ತಿಯನ್ನಾಗಿಸುತ್ತಾನೆ. ಹಲವು ರೀತಿಯಿಂದ ಅದನ್ನು ದೈವವನ್ನಾಗಿ ಪರಿವರ್ತಿಸುವವರು ಸುರ ಮತ್ತು ಅಸುರರೊಳಗೆ ಬ್ರಾಹ್ಮಣೋತ್ತಮರಲ್ಲದೆ ಇನ್ನಾರಾದರೂ ಇರುವವರೇ? ಜಗತ್ತಿನಲ್ಲಿ ದೈವವೆನ್ನುವುದು ಯಾವುದು ಹೇಳು ಎಂದು ಸನತ್ಸುಜಾತರು ಧೃತರಾಷ್ಟ್ರನನ್ನು ಪ್ರಶ್ನಿಸಿದರು.

ಅರ್ಥ:
ಕೆಲಸ: ಕಾರ್ಯ; ಗತಿ: ಸಂಚಾರ, ವೇಗ; ಕಡೆದು: ರೂಪಿಸು, ಕೆತ್ತು; ಶಿಲೆ: ಕಲ್ಲುಬಂಡೆ, ಅರೆ; ಕಲುಕುಟಿಕ: ಶಿಲ್ಪಿ; ಇಳುಹು: ಇಳಿಸು, ಕತ್ತರಿಸು; ಹಲವು: ಬಹಳ; ಪರಿ: ರೀತಿ; ಲೋಕ: ಜಗತ್ತು; ದೈವ: ದೇವರು; ನಿಲಿಸು: ಸ್ಥಾಪಿಸು; ಸುರ: ದೇವ: ಅಸುರ: ರಾಕ್ಷಸ; ವಿಪ್ರ: ಬ್ರಾಹ್ಮಣ; ಉತ್ತಮ: ಶ್ರೇಷ್ಠ; ಉಳಿಯೆ: ಮಿಕ್ಕ; ಹೇಳು: ತಿಳಿಸು; ಮುನಿ: ಋಷಿ;

ಪದವಿಂಗಡಣೆ:
ಕೆಲಸ +ಗತಿಯೊಳು+ ಕಡೆದ +ಶಿಲೆಯನು
ಕಲುಕುಟಿಕನ್+ಇಳುಹುವನ್+ಅದಲ್ಲದೆ
ಹಲವು +ಪರಿಯಿಂದ್+ಅದನು +ಲೋಕಕೆ +ದೈವವನು +ಮಾಡಿ
ನಿಲಿಸುವವರುಂಟೇ +ಸುರ+ಅಸುರ
ರೊಳಗೆ+ ವಿಪ್ರೋತ್ತಮರ್+ಉಳಿಯೆ +ಜಗ
ದೊಳಗೆ+ ದೈವವದ್+ಆವುದೈ +ಹೇಳೆಂದನಾ +ಮುನಿಪ

ಅಚ್ಚರಿ:
(೧) ಸುರ ಅಸುರ – ವಿರುದ್ಧ ಪದ
(೨) ಒಳಗೆ – ೫, ೬ ಸಾಲಿನ ಮೊದಲ ಪದ
(೩) ಬ್ರಾಹ್ಮಣರ ಮಹತ್ವವನ್ನು ತಿಳಿಸುವ ಪದ್ಯ

ಪದ್ಯ ೫೧: ಬ್ರಾಹ್ಮಣನು ಭೂಸುರನಾಗಲು ಕಾರಣವೇನು?

ದೈವದಾಧೀನದಲಿ ಜಗವಾ
ದೈವ ಮಂತ್ರಾಧೀನ ಮಂತ್ರವು
ಭೂವಿಬುಧರಾಧೀನವಾಗಿಹುದಾಗಿ ಲೋಕದಲಿ
ದೈವವೇ ಬ್ರಾಹ್ಮಣನದಲ್ಲದೆ
ಭಾವಿಸಲು ಬುಧರಿಂದಧಿಕವಹ
ದೈವವೆಂಬುವುದದಾವುದೈ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಜಗತ್ತು ದೈವದ ಇಚ್ಛೆಯಂತೆ ನಡೆಯುತ್ತದೆ, ಹಾಗಾಗಿ ಜಗತ್ತು ದೈವಕ್ಕೆ ಅಧೀನವಾಗಿದೆ. ಆ ದೈವವನ್ನು ಮಂತ್ರದ ಶಕ್ತಿಯಿಂದ ಪಡೆದುಕೊಳ್ಳಬಹುದು, ಆದ್ದರಿಂದ ದೈವವು ಮಂತ್ರಕ್ಕೆ ಅಧೀನ. ಬ್ರಾಹ್ಮಣರು ಆ ಮಂತ್ರವನ್ನು ತಮ್ಮ ಸಾಧನೆಯಿಂದ ವಶಪಡಿಸಿಕೊಂಡಿದ್ದು, ಮಂತ್ರವು ಬ್ರಾಹ್ಮಣರಿಗೆ ಅಧೀನವಾಗಿದೆ. ಆದ್ದರಿಂದ ಬ್ರಾಹ್ಮಣ ಭೂಮಿಯಲ್ಲಿ ದೈವ, ಅವನಿಗಿಂತ ಹೆಚ್ಚಿನ ದೈವವು ಯಾವುದಿದೆ ಹೇಳು ಎಂದು ಸನತ್ಸುಜಾತರು ಪ್ರಶ್ನಿಸಿದರು.

ಅರ್ಥ:
ದೈವ: ದೇವರು; ಅಧೀನ: ವಶ, ಕೈಕೆಳಗಿರುವವ; ಜಗ: ಜಗತ್ತು, ವಿಶ್ವ, ಲೋಕ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಭೂವಿ: ಭೂಮಿ, ಧರಿತ್ರಿ; ಬುಧ: ವಿದ್ವಾಂಸ; ಭೂವಿಬುಧ: ಬ್ರಾಹ್ಮಣ; ಬ್ರಾಹ್ಮಣ: ಭೂಸುರ, ವಿಪ್ರ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಧಿಕ: ಹೆಚ್ಚು; ಹೇಳು: ತಿಳಿಸು; ಮುನಿ: ಋಷಿ;

ಪದವಿಂಗಡಣೆ:
ದೈವದ+ಅಧೀನದಲಿ +ಜಗವ
ಆ ದೈವ+ ಮಂತ್ರಾಧೀನ+ ಮಂತ್ರವು
ಭೂವಿಬುಧರ್+ಅಧೀನವಾಗಿಹುದಾಗಿ +ಲೋಕದಲಿ
ದೈವವೇ +ಬ್ರಾಹ್ಮಣನದ್+ಅಲ್ಲದೆ
ಭಾವಿಸಲು +ಬುಧರಿಂದ್+ಅಧಿಕವಹ
ದೈವವೆಂಬುವುದದ್+ಆವುದೈ +ಹೇಳೆಂದನಾ +ಮುನಿಪ

ಅಚ್ಚರಿ:
(೧) ದೈವ – ೧, ೨ ೪, ೬ ಸಾಲಿನ ಮೊದಲ ಪದ
(೨) ಭೂವಿಬುಧ, ಬ್ರಾಹ್ಮಣ; ಜಗ, ಲೋಕ – ಸಮಾನಾರ್ಥಕ ಪದ